Monday, 23 April 2012
೧೬ ವರ್ಷಗಳ ನಂತರ ತವರಿಗೆ ಸೇರಿದ ಸವಿತಾ
೧೬ ವರ್ಷಗಳ ಬಳಿಕ ಸವಿತಾ ಮರಳಿ ಸೇರಿದಳು ತವರಿಗೆ...
-ಸಂದೇಶ ಶೆಟ್ಟಿ ಆರ್ಡಿ
ಚಿಕ್ಕಮಗಳೂರು ತರಿಕೆರೆ ಕಲ್ಲೆತ್ತಿಪುರದ ಸವಿತಾ ೧೬ ವರ್ಷಗಳ ನಂತರ ತವರಿಗೆ ಸೇರಿದ ವಿನೂತನ ಘಟನೆ ಶನಿವಾರ ನಡೆದಿದೆ. ಹಲವು ತರದ ಕಷ್ಟಗಳನ್ನು ಎದುರಿಸಿ ಕಳೆದ ಒಂದೂವರೆ ವರ್ಷಗಳಿಂದ ನಗರದ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನಲ್ಲಿ ವಾಸವಾಗಿದ್ದ ಸವಿತಾಗೆ ಒಂದು ವಾರದ ಸತತ ಪ್ರಯತ್ನದಿಂದ ತವರುಮನೆಗೆ ಸೇರುವ ಭಾಗ್ಯ ದೊರೆತಿದೆ.
ಸವಿತಾಳ ಪಾಲಿಗೆ ಖಳನಾಯಕನಾಗಿ ಬಂದ ಕರುಣಾಕರ:
ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ ವಾಟರ್ ಫಾಲ್ ಎಸ್ಟೇಟ್‌ನಲ್ಲಿ ರೈಟರ್ ಆಗಿ ಬಂದವನು ಕರುಣಾಕರ. ಸವಿತಾಳ ತಂದೆ ಸಗಾಯ್ ಅವರಲ್ಲಿ ಉಡುಪಿಯಲ್ಲಿ ಮನೆಕೆಲಸದೊಂದಿಗೆ ಶಾಲೆಗೆ ಕಳುಹಿಸುವ ವ್ಯವಸ್ಥೆ ಇದೆ ಎಂದು ೭ ವರ್ಷದ ಬಾಲೆ ಸವಿತಾಳನ್ನು ಉಡುಪಿಯ ಹೆಜಮಾಡಿ ಕೋಡಿಯ ಅಂಚೆ ಅಧಿಕಾರಿ ಕೆ.ಶ್ರೀಧರ ಅವರ ಮನೆಯಲ್ಲಿ ಬಿಡುತ್ತಾನೆ. ಮನೆಕೆಲಸಕ್ಕೆಂದು ಬಂದ ಸವಿತಾ ಶಾಲೆಯ ಮೆಟ್ಟಿಲನ್ನು ನೋಡದೇ ಮನೆ ಕೆಲಸದಲ್ಲಿ ಜೀವನವನ್ನು ಕಾಣುತ್ತಾಳೆ. ಹೀಗೆ ಮನೆಯ ಸಂಪರ್ಕವನ್ನೆ ಕಳೆದುಕೊಂಡ ಅವಳ ನೋವಿನ ದುರಂತ ಕಥೆ ಇಲ್ಲಿದೆ ನೋಡಿ:
ಸವಿತಾಳ ದುರಂತ ಬದುಕು:
ಸವಿತಾ ಏಳು ವರ್ಷವಾಗಿದ್ದಾಗ ಮೂರನೇ ತರಗತಿಗೆ ಸೇರಿದ ಸಂದರ್ಭ ಉಡುಪಿಯ ಸಮೀಪದ ಹೆಜಮಾಡಿ ಕೋಡಿಯಲ್ಲಿ ಮನೆಕೆಲಸಕ್ಕೆಂದು ರೈಟರ್ ಕರುಣಾಕರ ಅವಳ ಚಿಕ್ಕಪ್ಪನೊಂದಿಗೆ ಬಂದು ಬಿಟ್ಟು ಹೋಗಿದ್ದಾರೆ. ಅಲ್ಲಿಂದ ಮನೆಯವರ ಸಂಪರ್ಕವನ್ನು ಕಳೆದುಕೊಂಡು ಕೆಲಸದ ಮನೆಯಲ್ಲಿ ಜೀತದಾಳಿನಂತೆ ದುಡಿಯುತ್ತಾಳೆ. ಮನೆಯವರು ಹೇಳಿದ ಕಾರ್ಯವನ್ನು ಮಾಡಿಕೊಂಡಿದ್ದರೂ ಮನೆಯವರ ದೌರ್ಜನ್ಯ ಸಾಮಾನ್ಯ ಬಾಲೆಗೆ ಎದುರಿಸುವ ದೈರ್ಯವಿಲ್ಲದೇ ಹೋಯಿತು. ಹೀಗೆ ಸತತ ಏಳೂವರೆ ವರ್ಷಗಳವರೆಗೆ ಬಾಲ್ಯದ ಜೀವನ ಸಂತೋಷದಿಂದ ಕಳೆಯಬೇಕಾಗಿದ್ದ ಬಾಲೆ ಅಂಚೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಕೆ.ಶ್ರೀಧರ ಅವರ ಮನೆಯಲ್ಲಿ ಕತ್ತಲಿನಲ್ಲಿ ಕಳೆಯಬೇಕಾಗಿ ಬಂತು. ಸರಿಯಾಗಿ ತಿಂಗಳಾದ ಕೂಡಲೇ ಚಿಕ್ಕಪ್ಪನ ಸ್ನೇಹಿತ ಕರುಣಾಕರ ಬಂದು ಸಂಬಳವನ್ನು ಈಕೆಯ ಪಾಲಿಗಿಲ್ಲದಂತೆ ಮಾಡುತ್ತಿದ್ದ. ನಂತರ ಅವಳು ಅಲ್ಲಿಂದ ಮನೆಯವರ ಕಣ್ತಪ್ಪಿಸಿ ಮಂಗಳೂರಿನ ಫಳ್ಳೀರ್‌ನಲ್ಲಿರುವ ಪ್ರವೀಣ್ ಕುಮಾರ್ ಅವರ ಮನೆಯಲ್ಲಿ ಮೂರುವರೆ ವರ್ಷ ಮತ್ತೆ ಅದೇ ಕಷ್ಟನಷ್ಟಗಳ ಜೀವನ. ಹೀಗೆ ಅವಳ ಕಷ್ಟವೆಂದು ಮನೆಯವರ ಮುಂದೆ ತೋಡಿಕೊಂಡಾಗ ಅವರು ಪೊಲೀಸರ ವಶಕ್ಕೆ ಕೊಟ್ಟು ತಮ್ಮ ಕೈತೊಳೆದುಕೊಳ್ಳುತ್ತಾರೆ. ಪೊಲೀಸರು ಈಕೆಯನ್ನು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ವಶಕ್ಕೆ ಒಂದೂವರೆ ಹಿಂದೆ ಒಪ್ಪಿಸಿದ್ದರು. ಹೀಗೆ ಜೀವನಕ್ಕೆ ಆಧಾರವಾಗಿ ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಅವಳ ಬಾಳಿಗೆ ಬೆಳಕಾಗಿ ಬಂದಿದೆ.
ಆಪದ್ಬಾಂಧವನಂತೆ ಬಂದ ವಿಲಿಯಮ್ಸ್:
೧೫ ನಂಬರ್ ಬಸ್‌ನಲ್ಲಿ ಕಂಡೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಈತ ಹಿಂದೊಮ್ಮೆ ಮೋರ್ಗನ್ಸ್‌ಗೇಟ್ ಬಳಿ ನಿಂತಿದ್ದಾಗ ಈಕೆಯನ್ನು ನೋಡಿ ಈಕೆ ಸವಿತಾಳೆ ಇರಬೇಕೆಂದು ಮನಸ್ಸಿನಲ್ಲಿ ಆಲೋಚಿಸಿದ್ದ. ಧನಾತ್ಮಕ ಚಿಂತನೆಗೆ ಧನಾತ್ಮಕವಾಗಿಯೇ ಪ್ರತಿಕ್ರಿಯೆ ದೊರೆಯುತ್ತದೆ ಎನ್ನುವಂತೆ ಇವಳು ಎ.೧೧ರಂದು ಲಾಲ್‌ಬಾಗ್‌ನಲ್ಲಿ ಬಸ್ ಹತ್ತಿ ಕಂಕನಾಡಿ ಟಿಕೆಟ್ ಪಡೆಯುತ್ತಾಳೆ. ವಿಲಿಯಮ್ಸ್ ಈಕೆಯನ್ನು ಮಾತನಾಡಿಸಿದಾಗ ೧೬ ವರ್ಷಗಳ ಹಿಂದೆ ಕಾಣೆಯಾದ ತನ್ನೂರಿನ ಸವಿತ ಈಕೆ ಎನ್ನುವುದನ್ನು ಖಚಿತಪಡಿಸಿಕೊಂಡು ತಾಯಿಯೊಂದಿಗೆ ಸೇರಿ ಅವರ ಮನೆಯ ವಿಳಾಸ ಪತ್ತೆಹಚ್ಚಿ ಅವರ ಕುಟುಂಬಿಕರೊಂದಿಗೆ ಸೇರುವಂತೆ ಮಾಡಿದ್ದಾನೆ.
ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್‌ನ ಪಾತ್ರ:
ಕಳೆದೊಂದು ವರ್ಷದಿಂದ ಸಂಸ್ಥೆಯಲ್ಲಿರುವ ೨೨ ವರ್ಷದ ಸವಿತಾಳಿಗೆ ಮದುವೆ ಮಾಡಿಸಬೇಕೆಂಬ ಆಸೆಯಿಂದ ಹಲವಾರು ಹುಡುಗರನ್ನು ತೋರಿಸಿದಾಗ ಅವಳ ತಲೆಯಲ್ಲಿ ಕಡಿಮೆ ಕೂದಲು ಇರುವುದರಿಂದ ಹುಡುಗರು ಅವಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದರು. ಹೀಗೆ ವಿಲಿಯಮ್ಸ್ ಬಂದು ಆಕೆಗೆ ತಂದೆ ಇದ್ದಾರೆ. ಅವಳು ನಮ್ಮ ಊರಿನವಳು ಎಂದು ಹೇಳಿದಾಗ ಅವಳನ್ನು ತಲುಪಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಿದರು. ಸಾಕ್ಷಿಗೆ ಬೇಕಾಗಿ ಶಾಲೆಯ ಸರ್ಟಿಫಿಕೇಟ್, ಸಣ್ಣ ಪೋಟೊ, ರೇಶನ್ ಕಾರ್ಡ್‌ನಲ್ಲಿದ್ದ ಹೆಸರನ್ನು ಸಂಗ್ರಹಿಸಿದ್ದಾರೆ. ತರಿಕೆರೆ ಸಾಂತ್ವಾನ ಕೇಂದ್ರದಿಂದ ಕುಟುಂಬಿಕರ ಕುರಿತು ವಿಚಾರಣೆ, ಜಿಲ್ಲೆಯಲ್ಲಿರುವ ಡಿಡಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ವಿಷಯ ತಿಳಿಸಿ ತಂದೆಯೊಂದಿಗೆ ಕಳುಹಿಕೊಡಲು ತೀರ್ಮಾನ ಮಾಡಿದ್ದಾರೆ.
೧೬ ವರ್ಷಗಳ ಬಳಿಕ ತಂದೆಯನ್ನು ಕಾಣುವ ಭಾಗ್ಯ ನನ್ನ ಪಾಲಿಗೆ ದೊರಕಿದೆ. ತಂದೆಯೊಂದಿಗೆ ತೋಟದ ಕೆಲಸವನ್ನು ಮಾಡಿ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಮನೆಯ ವಾತಾವರಣವನ್ನು ನಿರ್ಮಿಸಿಕೊಟ್ಟಿದ್ದು ಮಾತ್ರವಲ್ಲ. ಜೀವಿತದಲ್ಲಿ ತಂದೆಯನ್ನು ನೋಡುವ ಅವರೊಂದಿಗೆ ಬಾಳುವ ಅವಕಾಶವನ್ನು ಮಾಡಿಕೊಟ್ಟಿದೆ.
-ನತದೃಷ್ಠೆ ಸವಿತಾ
ಎಲ್ಲಾ ಮಕ್ಕಳಂತೆ ಅವಳು ಕೂಡ ಸಂತೋಷದಿಂದ ನಮ್ಮಲ್ಲಿ ಬೆರೆತಳು. ಇಲ್ಲಿಗೆ ಬಂದ ಸ್ವಲ್ಪ ಸಮಯ ಮಂಕು ಕವಿದಂತೆ ಯಾರೊಂದಿಗೂ ಸೇರುತ್ತಿರಲಿಲ್ಲ. ಕಾಲಕ್ಕೆ ತಕ್ಕಂತೆ ಎಲ್ಲರೊಂದಿಗೆ ಹೊಂದಾಣಿಕೆಯಿಂದ ಜೀವನ ನಡೆಸಲು ಕಲಿತಳು. ಅವಳ ಮದುವೆಗೆ ಸಹಾಯ ಮಾಡುವ ಆಸೆಯಿದೆ.
ಪ್ರೊ. ಹಿಲ್ಡಾ ರಾಯಪ್ಪನ್- ಪ್ರಜ್ಞಾ ಸಂಸ್ಥೆಯ ಅಧ್ಯಕ್ಷೆ
Subscribe to:
Post Comments (Atom)
No comments:
Post a Comment