ಎಂಥಾ ಲೋಕವಯ್ಯ......ಇದು
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ...ದಾಸರ ಪದಗಳ ಸಾಲು ಗುಣುಗುತ್ತಾ ಬರುತ್ತಿರಬೇಕಾದರೆ ಬೀದಿಯ ಬದಿಯಲ್ಲಿ ಮಾರುತ್ತಿದ್ದ ತರಕಾರಿ ಅಂಗಡಿಯನ್ನು ನೋಡಿ ಒಮ್ಮೆ ನಿಂತುಬಿಟ್ಟೆ. ಆ ತರಕಾರಿಯನ್ನು ಒಪ್ಪವಾಗಿ ಜೋಡಿಸಿಟ್ಟು, ಸೊಪ್ಪು ತರಕಾರಿಗಳು ಬಾಡಿಹೊಗಬಾರದು ಎನ್ನುವ ಕಾರಣಕ್ಕಾಗಿ ನೀರನ್ನು ಚಿಮುಕಿಸುವ ದೃಶ್ಯ ನೋಡುವುದಕ್ಕೆ ಆನಂದ.ಎಂತಹ ಮಳೆ, ಗಾಳಿ ಚಳಿ ಎನ್ನದೇ ತನ್ನ ಕರ್ತವ್ಯವನ್ನು ಮಾಡುವ ಆ ವ್ಯಾಪಾರಿಗಳನ್ನು ನೋಡಿದಾಗ ಮೇಲಿನ ದಾಸರ ಸಾಲುಗಳು ಸಾರ್ಥಕತೆಯನ್ನು ಪಡೆದವು ಎನ್ನುವುದು ನನ್ನ ಭಾವನೆ.
ಜೀವಿಗಳಲ್ಲಿ ಮಾತನಾಡುವ ಕಲೆ ಬಂದದ್ದು ಮಾನವನಿಗೆ ಮಾತ್ರ. ಮಗುವೊಂದು ಬೆಳೆದಂತೆ ಪಕ್ವವಾಗಿ, ಮನಸ್ಸು ಕೂಡ ವೇಗವಾಗಿ ಬೆಳೆಯುತ್ತಿರುತ್ತದೆ. ಇಷ್ಟೆಲ್ಲಾ ಹೊಗಳಿಸಿಕೊಳ್ಳುವ ಮನುಜನ ಬುದ್ದಿಗೆ ಶಹಬ್ಬಾಸ್ ಎನ್ನಲೆ ಬೇಕು.
ಅದೇ ಸಮಯದಲ್ಲಿ ವಿದ್ಯಾವಂತನಂತೆ ಕಾಣುವ ನಡುವಯಸ್ಸಿನ ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ಬಂದು ತರಕಾರಿಯ ಬಗ್ಗೆ ವಿಚಾರಿಸುತ್ತಾನೆ. ಬದನೆ, ಆಲೂಗಡ್ಡೆ, ಬಸಳೆ ಹಾಗೂ ಕೊತ್ತಂಬರಿ ಸೊಪ್ಪನ್ನು ಖರೀದಿಸಿದ ವ್ಯಕ್ತಿ ಹಣ ಕೊಡುವಾಗ ಏನೂ ಇಲ್ಲದ ಬಡಜೀವಿಯಂತೆ ಕಂಜೂಸುತನ ಮಾಡಿದ ರೀತಿಯನ್ನು ನೋಡಿದಾಗ ಪ್ರಪಂಚದಲ್ಲಿರುವ ಜನ ಯಾಕೆ ಹೀಗೆ ಮಾಡುತ್ತಾರೆ ಎಂದು ಅರ್ಥವಾಗದೇ ಒದ್ದಾಡುವ ಪರಿಸ್ಥಿತಿ ನನ್ನದಾಗಿತ್ತು.
ನಡೆದ ಘಟನೆಯಿಂದ ನನ್ನ ಮನ ಬೇರೊಂದು ವಿಷಯದ ಸುತ್ತ ಸುಳಿಯುವುದಕ್ಕೆ ಪ್ರಾರಂಭವಾಯಿತು.ವೈಜ್ಞಾನಿಕವಾಗಿ ಪ್ರಗತಿಪಥದತ್ತ ಸಾಗುತ್ತಿರುವ ಪ್ರಸ್ತುತ ಸಮಾಜದಲ್ಲಿ ಮನುಷ್ಯನ ಮಾನಸಿಕತೆ ಎಷ್ಟರಮಟ್ಟಿಗೆ ಸಮತೊಲನ ಸ್ಥಿತಿಯನ್ನು ಕಾಯ್ದುಲೊಳ್ಳುತ್ತಿದೆ, ಆತನ ವಿಚಾರದಾರೆಗಳು ಯಾವ ಮಟ್ಟಕ್ಕೆ ಇಳಿಯುತ್ತಿದೆ ಎನ್ನುವುದು ಆತಂಕಕ್ಕೆ ಎಡೆಮಾಡಿದೆ. ಸಮಾಜದಲ್ಲಿ ಅವನ ಚಟುವಟಿಕೆಯನ್ನು ನೋಡಿದರೆ ಅದು ಅವನ ಬುದ್ದಿವಂತಿಕೆ ಎನ್ನಲೊ ಅಥವಾ ಬುದ್ದಿಹೀನತೆ ಎಂದು ಕರೆಯಲೊ...
ಬಾಲ್ಯದಲ್ಲಿ ಮಾನವೀಯ ಮೌಲ್ಯದ ಜೊತೆಗೆ ಉತ್ತಮ ಶಿಕ್ಷಣವನ್ನು ನೀಡುವುದರ ಜೊತೆಯಲ್ಲಿ ಸಮಾಜದಲ್ಲಿ ಬದುಕಲು ಬೇಕಾದ ಜೀವನ ಮೌಲ್ಯವನ್ನು ಕಲಿತ ಬುದ್ದಿಜೀವಿ ಎನಿಸಿದ ಮಾನವ ಇಂದು ಮಾಡುತ್ತಿರುವುದಾದರೂ ಏನು ಮಿತ್ರರೆ...
ಉದರ ಪೋಷಣಂ ಬಹುಕೃತ ವೇಷಂಎನ್ನುವುದು ನಮ್ಮ ದಿನಚರಿಯನ್ನು ನೋಡಿ ಅಲ್ಲವೇ? ದಿನ ಬೆಳಗಾದರೆ ಸಾಕು ಮೊದಲು ಓಡಾಡುವುದೇ ಆಹಾರಕ್ಕಾಗಿ. ಬದುಕಬೇಕೆಂಬ ಆಸೆಯಿಂದ ಯಾವ ಕೆಲಸವನ್ನಾದರೂ ಮಾಡಲು ರೆಡಿಯಿರುತ್ತೇವೆ. ವೈಜ್ಞಾನಿಕವಾಗಿ ಎಷ್ಟು ಮುಂದುವರಿದರೂ ಹೊಟ್ಟೆಗೆ ಆಹಾರವನ್ನು ಬಿಟ್ಟು ಹಣವನ್ನೊ, ಆಭರಣವನ್ನು ಅಥವಾ ಇತರ ವಸ್ತುಗಳನ್ನು ತಿನ್ನುವ ಮಾನವ ಜೀವಿಯನ್ನು ನಾವು ನೋಡಿಲ್ಲ, ನೋಡುವುದುಕ್ಕೂ ಸಾಧ್ಯವಿಲ್ಲ.
ಹೊಟ್ಟೆಗೆ ತಿನ್ನುವ ಆಹಾರವನ್ನು ನಾವು ಧೂಳಿನಿಂದ ಆವೃತವಾಗಿ, ಬಿಸಿಲಿನಿಂದ ಅರ್ಧ ಬೆಂದಿರುವುದನ್ನೇ ಖರೀದಿಸುತ್ತೇವೆ. ಕಲ್ಲು, ಮಣ್ಣಿನಿಂದ ರಕ್ಷಣೆ ಪಡೆಯುವುದಕ್ಕೆ ಬಳಸುವ, ಮನೆಯೊಳಗೆ ಪ್ರವೇಶ ಪಡೆಯದ ಪಾದರಕ್ಷೆಯನ್ನು ನಾವು ಹವಾನಿಯಂತ್ರಿತ ಕೊಠಡಿಯಲ್ಲಿ ಖರೀದಿಸುತ್ತೇವೆ. ಇದು ತಪ್ಪು ಎನ್ನುವುದು ನನ್ನ ಭಾವನೆಯಲ್ಲ ಆದರೆ ಖರೀದಿ ಮಾಡುವ ಪರಿ ಮಾತ್ರ ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಹವಾನಿಯಂತ್ರಿತ ಕೊಠಡಿಯಲ್ಲಿಯ ಸಾವಿರಾರು ರೂಪಾಯಿ ಮೌಲ್ಯದ ಪಾದರಕ್ಷೆ ಕೊಳ್ಳುವಾಗ ಮಾಡದ ಅಲ್ಪತನ, ತರಕಾರಿ, ಹಣ್ಣು ಹಂಪಲನ್ನು ಕೊಳ್ಳುವಾಗ ಯಾಕೆ...?ಇದು ಯಾವ ತೆರನಾದ ಬುದ್ದಿವಂತಿಕೆಯೋ ನಾ ಕಾಣೆ!
ರೈತನ ಆತ್ಮಹತ್ಯೆ ದಿನಂಪ್ರತಿ ಕೇಳುತ್ತೆವೆ. ಅದನ್ನು ಕೇಳಿ ನಮ್ಮ ಮನ ಮರುಗುವುದಿಲ್ಲ, ನಮಗೆ ಆತ ಪಡುತ್ತಿರುವ ಬವಣೆ ಗೊತ್ತಿಲ್ಲ. ಕೃಷಿಯೇ ತನ್ನ ಮೂಲ ಗುರಿ,ಅದುವೇ ನನ್ನ ಆಸ್ತಿ ಎಂದು ನಂಬಿ ಆ ಕೈಂಕರ್ಯದಲ್ಲಿ ತೊಡಗಿದ ರೈತರು ಅದೆಷ್ಟೊ? ಸುಂದರವಾದ ಕೃಷಿಭೂಮಿಯಲ್ಲಿ ಬೆವರಿಳಿಸಿ ದುಡಿದು ಬಂದ ವಸ್ತುವನ್ನು ರೈತ ಮಾರುತ್ತಾನೆ, ಇಂದು ಅದಕ್ಕೆ ಪೂರಕವಾದ ಬೆಂಬಲ ಬೆಲೆ ಕೂಡ ಸಿಗುತ್ತಿಲ್ಲ. ಕೃಷಿತೊ ನಾಸ್ತಿ ದುರ್ಭಿಕ್ಷಂ ಎಂದಿದೆ ನಿಜ ಆದರೆ ಇಂದು ಯಾರು ಕೃಷಿಯನ್ನು ಅವಲಂಬಿಸಿದ್ದಾರೊ ಅವರ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಯಾಕೆ ಹೀಗೆ?
ತನ್ನ ಜಮೀನು ಪತ್ರವನ್ನೆಲ್ಲಾ ಒತ್ತೆಯಿಟ್ಟು ಸಾಲಮಾಡಿ ಕೃಷಿಮಾಡುತ್ತಿದ್ದ ರೈತ, ತಕ್ಕ ಬೆಲೆ ಸಿಗದೆ, ಪಡೆದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳತೊಡಗಿದ. ಇದಕ್ಕೆಲ್ಲಾ ಕಾರಣ ಏನು?
ಕೇವಲ ಸರ್ಕಾರವನ್ನು ದೂರಿದರೆ ಸಾಲದು, ಸುಂದರ ಸಮಾಜ ನಿರ್ಮಾಣಕ್ಕೆ ಕಿಂಚಿತ್ತ್ ನಮ್ಮ ಪ್ರಯತ್ನ ಬೇಡವೆ? ಸ್ವಲ್ಪ ನಮ್ಮ ಬುದ್ದಿಶಕ್ತಿಗೆ ಕೆಲಸವನ್ನು ಕೊಡಬಾರದೆ? ಆ ವ್ಯಕ್ತಿ ತರಕಾರಿ ಕೊಳ್ಳುವಾಗ ಮಾಡಿದ ಅಲ್ಪತನ ಹವಾನಿಯಂತ್ರಿತ ಕೊಠಡಿಯಲ್ಲಿ ನಿಗದಿತ ಬೆಲೆಯಾಧಾರಿತ ಪಾದರಕ್ಷೆಯನ್ನು ಕೊಂಡುಕೊಳ್ಳುವಾಗ ಮಾಡುತ್ತಾನೆಯೋ? ಎಂದು ಆಲೋಚಿಸಬೇಕಾಗುತ್ತದೆ. ಒಬ್ಬರಂತಲ್ಲ ಹೆಚ್ಚಿನ ಜನತೆ ಹೀಗೆಯೆ ಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಹವಾನಿಯಂತ್ರಿತ ಕೊಠಡಿಯಲ್ಲಿ ಕೊಳ್ಳುವಾಗ ಇರುವ ತಮ್ಮ ಪ್ರತಿಷ್ಟೆ, ಘನತೆ ಸಾಮಾನ್ಯ ಬೀದಿಯ ಬದಿಯಲ್ಲಿರುವ ತರಕಾರಿಯನ್ನು ಕೊಳ್ಳುವಾಗ ಯಾಕೆ ಇರುವುದಿಲ್ಲ ಎನ್ನುವುದು ನನ್ನ ಪ್ರಶ್ನೆ.ಇದನ್ನೆಲ್ಲಾ ನೋಡಿದರೆ ನನ್ನ ಮನಸ್ಸಿನ ಮೂಲೆಯಲ್ಲಿ ಇದು ಅತಿಯಾದ ಹೊಗಳಿಕೆಯೊ ಅನ್ನಿಸುತ್ತಿದೆ....
No comments:
Post a Comment