Saturday, 21 April 2012




ದೇಶೀ ವಸ್ತುಗಳ ಸೊಗಡು, ನಮ್ಮ ಅಂಗಡಿಯಲ್ಲೊಂದು ಸುತ್ತು
ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ತೆರೆದುಕೊಂಡಿರುವ ನಮ್ಮ ಅಂಗಡಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನೊಮ್ಮೆ ಸಂದರ್ಶಿಸಿದರೆ ಅಲ್ಲಿ ಗ್ರಾಮೀಣ ಸೊಗಡಿನ ಅಲ್ಲೇ ತಯಾರಾದ ವಸ್ತುಗಳು ಕಾಣಸಿಗುತ್ತವೆ. ಅಲ್ಲಿ ಏನುಂಟು ಏನಿಲ್ಲ.... ಎಂದು ಹುಡುಕುವುದೇ ಕಷ್ಟ! ಗ್ರಾಮೀಣ ಸೊಗಡಿನ ನಿತ್ಯೋಪಯೋಗಿ ಹಾಗೂ ಕಲಾವಸ್ತುಗಳು ಗ್ರಾಹಕರನ್ನು ಸೆಳೆಯುತ್ತಿವೆ.
ನಾವು ಬೇಡವೆಂದು ಬಿಸಾಡುವ ಚಿಕ್ಕ ಚಿಕ್ಕ ಬಟ್ಟೆಯಚೂರುಗಳು ನಮ್ಮ ಭೂಮಿ ಸಂಸ್ಥೆಯಲ್ಲಿ ಆಶ್ರಯ ಪಡೆದಿರುವ ಮಕ್ಕಳ ಕೈಗೆ ಸಿಕ್ಕಾಗ ಸುಂದರ ವಸ್ತುವಾಗಿ ಮಾರ್ಪಾಡಾಗುತ್ತದೆ. ಕಸದಿಂದ ರಸ ಎನ್ನುವ ಮಾತನ್ನು ನಿಜ ಮಾಡಿದ ನಮ್ಮಭೂಮಿಯ ಕನಸು ಕಂಗಳ ಅದ್ಭುತ ಕೈಚಳಕ ನಮ್ಮ ಅಂಗಡಿಯಲ್ಲಿ ಅನಾವರಣಗೊಳ್ಳುತ್ತದೆ.
ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿರುವ ನಮ್ಮಭೂಮಿಯಲ್ಲಿ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವೇ ನಮ್ಮ ಅಂಗಡಿ. ಇದರ ಒಳಗೆ ಪ್ರವೇಶ ಮಾಡುವಾಗಲೇ ಸೆಣಬಿನಿಂದ ತಯಾರಿಸಿದ ಪುರುಷರ ಮತ್ತು ಮಹಿಳೆಯರ ದೇಶೀಯ ಶೈಲಿಯ ಬಟ್ಟೆ, ಗ್ರಾಹಕರ ಮನಸ್ಸನ್ನು ತಮ್ಮೆಡೆಗೆ ಬರಮಾಡಿಕೊಳ್ಳುತ್ತವೆ. ಮುಂದೆ ಸಾಗಿದರೆ ಟೆರ್ರಕೊಟ ವಸ್ತುಗಳು, ಬಿದಿರಿನಿಂದ ಮಾಡಿದ ಸುಂದರ ಕಲಾಕೃತಿಗಳು, ಎರಕ ಶಿಲ್ಪಗಳು ಕಲಾಸಕ್ತರನ್ನು ಸೆಳೆಯುತ್ತವೆ.
ಕುಚ್ಚಿಗೆ ಅಕ್ಕಿಯನ್ನು ಅಂಗಡಿಯಲ್ಲಿ ಖರೀದಿಸುವುದು ಪಾಲೀಶ್ ಆಗಿರುವುದಾದರೂ ನಮ್ಮ ಅಂಗಡಿಯಲ್ಲಿ ಒರಳಲ್ಲಿ ಕುಟ್ಟಿ ತಯಾರಿಸಿದ ಕೆಂಪಕ್ಕಿ ಇದೆ. ಬೆಟ್ಟದ ನೆಲ್ಲಿಯ ಉತ್ಪನ್ನಗಳು, ಶುದ್ದಜೇನು, ಗೆಣಸಿನಿಂದ ತಯಾರಿಸಿದ ಹಪ್ಪಳ, ಬಾಳೆಕಾಯಿ ಸಂಡಿಗೆಗಳು, ಚಕ್ಕುಲಿ, ಬಡವರ ಬಾದಾಮಿ ಕಡಲೆಕಾಯಿ ಇನ್ನೂ ಅನೇಕ ಆಹಾರೋತ್ಪನ್ನಗಳು ಇಲ್ಲಿವೆ. ಪ್ಲಾಸ್ಟಿಕ್‌ನ ಅಟ್ಟಹಾಸದ ಮುಂದೆ ಎಡೆಯಲ್ಲಿ ನಾನೂ ಕೂಡ ಇದ್ದೇನೆ ಎಂದು ತನ್ನ ಇರುವಿಕೆಯನ್ನು ಸಾರುವ ಬೆತ್ತದ ಬುಟ್ಟಿಗಳು, ಬಹಳ ದಿನದವರೆಗೆ ಅಕ್ಕಿಯನ್ನು ಸುರಕ್ಷಿತವಾಗಿಡುವ ತಿರಿಗಳು, ಅಕ್ಕಿಮುಡಿಗಳು, ಮಹಿಳೆಯರಿಗಾಗಿ ಜ್ಯುವೆಲ್ಲರಿಗಳು, ಮನೆಯ ಸೊಬಗನ್ನು ಹೆಚ್ಚಿಸುವ ಈಚಲು ಓಲೆಯಿಂದ ಮಾಡಿದ ಅಲಂಕಾರಿಕ ವಸ್ತುಗಳು, ಹಣೆಹಾಳೆಯ ಬೀಸಣಿಗೆ, ಲಾವಂಚದಿಂದ ತಯಾರಿಸಿದ ವಿವಿಧ ವಸ್ತುಗಳು, ಪಾದರಕ್ಷೆಗಳು ಇಲ್ಲಿ ಸ್ಥಾನ ಪಡೆದಿವೆ. ತೋಟದಲ್ಲಿ ಕೊಳೆತು ಮಣ್ಣಾಗುವ ಅಡಿಕೆ ಹಾಲೆಗಳು ಕುಶಲಕರ್ಮಿಗಳ ಕೈಗೆ ಸಿಕ್ಕಿ ಸುಂದರ ದಿನಬಳಕೆಯ ವಸ್ತುಗಳಾಗಿದ್ದು, ಹಾಲೆಯ ವಿವಿಧ ವಸ್ತುಗಳನ್ನು ಇಲ್ಲಿ ಕಾಣಬಹುದು. ಸೀಗೆ ಕಾಯಿ ಉತ್ಪನ್ನ, ಚಂದನ ಹೀಗೆ ಹಲವಾರು ದೇಸೀ ವಸ್ತುಗಳು ನಮ್ಮ ಅಂಗಡಿಯಲ್ಲಿ ಕಾಣಸಿಗುತ್ತವೆ.
ಹೊರಗಡೆ ಯಾವ ವಸ್ತು ಖರೀದಿ ಮಾಡಿದರೂ ತೃಪ್ತಿಯಿಲ್ಲ. ಇಲ್ಲಿ ಮಾತ್ರ ಹಾಗಲ್ಲ, ಕರಕುಶಲ ವಸ್ತುಗಳು ಮನಸ್ಸಿಗೆ ಖುಷಿ ಕೊಡುತ್ತದೆ. ಇನ್ನು ಹೆಚ್ಚು ಯುವಜನತೆ ಮುಂದೆ ಬಂದಾಗ, ಅಷ್ಟಲ್ಲದೇ ಗುಡಿಕೈಗಾರಿಕೆಯ ಬಗ್ಗೆ ಒಲವು ಮೂಡಿಸಿಕೊಂಡು ಅದನ್ನು ಕಲಿತಾಗ ನಮ್ಮ ಸಂಸ್ಕೃತಿ ಉಳಿಯುತ್ತದೆ ಎನ್ನುವುದು ಚಿತ್ರಕಲಾ ವಿದ್ಯಾರ್ಥಿಗಳಾದ ಚಿತ್ರ ಮತ್ತು ಶ್ವೇತಾರ ಅಭಿಪ್ರಾಯ.
ಕಾಲಕ್ಕೆ ತಕ್ಕ ಬದಲಾವಣೆ ಆಗಿದೆ ನಿಜ ಆದರೆ ಇಲ್ಲಿ ಮಾತ್ರ ಹಾಗೆ ಇಲ್ಲ. ಇಲ್ಲಿರುವ ವಸ್ತುಗಳು ಮಕ್ಕಳೇ ತಯಾರಿಸಿದ್ದು. ಇವರೆಲ್ಲಾ ಕಡುಬಡತನದಿಂದ ಬಂದವರು. ಅವರಿಗೆ ಉತ್ತಮ ನೆಲೆಯನ್ನು ಕೊಡುವ ನಿಟ್ಟಿನಲ್ಲಿ ನಮ್ಮ ಭೂಮಿ ಸಂಸ್ಥೆ ಅನೇಕ ವರ್ಷದಿಂದ ಕೆಲಸ ಮಾಡುತ್ತಿದೆ. ಅವರಿಗೆ ಸ್ವ-ಉದ್ಯೋಗದ ಜೊತೆಗೆ ಸ್ವಂತಿಕೆಯನ್ನು ಕಲಿಸಿ ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಛತ್ತೀಸ್‌ಗಢದಿಂದ ನುರಿತ ಕಲಾಕಾರರನ್ನು ಕರೆಸಿ, ಮಕ್ಕಳಿಗೆ ೧೨ದಿನಗಳ ತರಬೇತಿ ಶಿಬಿರ ಆಯೋಜಿಸಿ ಅವರಿಗೆ ಕುಶಲ ವಸ್ತುಗಳನ್ನು ತಯಾರಿಸಿವ ಕಲೆಯನ್ನು ಹೇಳಿಕೊಡಲಾಗಿದೆ. ಇಲ್ಲಿ ತಂದೆ ತಾಯಿಯ ಮುಖವನ್ನೆ ನೋಡದ ಮಕ್ಕಳು, ಕಡುಬಡತನವೆಂದು ಪಂಚಾಯಿತಿಯ ಮೂಲಕ ಬಂದವರು, ಪೋಲಿಸ್‌ರಿಂದ ಪಡೆದ ಅನಾಥ ಮಕ್ಕಳು ಇವರೆಲ್ಲರಿಗೆ ಆಶ್ರಯ ಪಡೆದಿದ್ದಾರೆ. ಎರೆಹುಳ ಗೊಬ್ಬರದ ಮಾಹಿತಿಯನ್ನು ರೈತರಿಗೆ ನೀಡುತ್ತಿದ್ದೇವೆ. ಕುಂದಾಪುರ, ವಂಡ್ಸೆ, ಬಾಂಡ್ಯ ಹಾಗೂ ವಕ್ವಾಡಿ ಬೀಜಾಡಿಯಲ್ಲಿ ಸಾವಯವ ಗೊಬ್ಬರ ತಯಾರಿಸಿ ನಮಗೆ ಕೊಡುವ ರೈತರಿದ್ದಾರೆ ಎನ್ನುತ್ತಾರೆ ನಮ್ಮ ಅಂಗಡಿಯ ನಿರ್ದೇಶಕ ಶೇಡಿಮನೆ ಅನಂತ ನಾಯ್ಕ. ಅದರಂತೆ ಬೇಬಿ ಕನ್ಯಾನ, ಆಲೂರು ರಘುರಾಮ ಹೀಗೆ ಅನೇಕರು ಸ್ವ-ಉದ್ಯೋಗದ ಜೊತೆ, ಅನೇಕರ ಪಾಲಿಗೆ ಉದ್ಯೋಗದಾತರಾಗಿದ್ದಾರೆ.
ನಮ್ಮಭೂಮಿಯಲ್ಲಿ ಬದುಕು
ನಮ್ಮ ಭೂಮಿಯಲ್ಲಿ ೯೦ ಮಂದಿಗೆ ಉಳಿಯುವ ವ್ಯವಸ್ಥೆಯಿದ್ದು, ಈಗ ೮೦ ಜನ ಉಳಿದುಕೊಂಡಿದ್ದಾರೆ. ಅದರಲ್ಲಿ ೪೦ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ವೃತ್ತಿ ತರಬೇತಿಯನ್ನು ಪಡೆಯುತ್ತಿದ್ದಾರೆ ಎನ್ನುತ್ತಾರೆ ದಿನೇಶ್.
ತಂದೆ ತಾಯಿಯ ಮುಖವನ್ನು ನೋಡದ ನಾನು ಮತ್ತು ನನ್ನ ಒಡಹುಟ್ಟಿದ ತಮ್ಮ ಮತ್ತು ತಂಗಿಯರು ಈ ಸಂಸ್ಥೆಯಲ್ಲಿ ಆಶ್ರಯ ಪಡೆದು , ಉತ್ತಮ ನೆಲೆಯನ್ನು ಕಂಡುಕೊಂಡಿದ್ದೇವೆ. ಮೊದಲು ಹಿರಿಯರಲ್ಲಿ ಹೇಗೆ ಮಾತನಾಡಬೇಕು ಎಂದು ಗೊತ್ತಿರದ ನಾನು ಈಗ ಚೆನ್ನಾಗಿ ಮಾತನಾಡುವ ಕಲೆ ಹಾಗೂ ಸ್ವ-ಉದ್ಯೋಗ ಮಾಡಿ ಒಡಹುಟ್ಟಿದ ತಮ್ಮ, ತಂಗಿಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ಮಾಡುವ ಭರವಸೆ ನನಗಿದೆ ಎನ್ನುವುದು ನಮ್ಮ ಭೂಮಿಯಲ್ಲಿ ಆಶ್ರಯ ಪಡೆದ ಅರಸಮ್ಮಕಾನಿನ ಆರತಿ ಅವರ ಆಂಬೋಣ.
-ಸಂದೇಶ್ ಶೆಟ್ಟಿ ಆರ್ಡಿ

No comments:

Post a Comment