Wednesday 18 April 2012

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೋದ ಡಾ.ಆಚಾರ್ಯರ ಕುರಿತು...
ಕೆ.ಎಸ್.ಶೆಟ್ಟಿ
ಈ ಮಾತುಗಳು ಬೇರೆ ಯಾರಿಗೂ ಅನ್ವಯವಾಗುವಂತದ್ದಲ್ಲ. ಇತ್ತೀಚಿಗಷ್ಟೆ ನಮ್ಮನ್ನಗಲಿದ ಉನ್ನತ ಶಿಕ್ಷಣ ಸಚಿವ ಡಾ.ವೇದವ್ಯಾಸ ಶ್ರೀನಿವಾಸ ಆಚಾರ್ಯ. ನಾನು ಪ್ರಥಮವಾಗಿ ಪತ್ರಿಕಾ ರಂಗಕ್ಕೆ ಬಂದಾಗ ಮೊದಲಿಗೆ ವರದಿಮಾಡಲು ಅವಕಾಶ ಸಿಕ್ಕಿದ್ದು ಅವರು ಭಾಗವಹಿಸಿದ ಮಕ್ಕಳ ಯಕ್ಷಗಾನ ಕಾರ್ಯಕ್ರಮ. ಸರಳ, ಸಜ್ಜನ ಧೀಮಂತ ವ್ಯಕ್ತಿತ್ವ ಅವರದು. ಎಲ್ಲಾ ಸಂದರ್ಭದಲ್ಲಿಯೂ ಎಲ್ಲರೂ ಇಷ್ಟವಾಗುವುದಿಲ್ಲ. ಅವರಲ್ಲಿರುವ ವಿಶೇಷವಾದ ವ್ಯಕ್ತಿತದಿಂದ ನಾವು ಆಕರ್ಷಿತರಾಗಿ ಅವರನ್ನು ನಾವು ಪೂಜ್ಯಭಾವನೆಯಿಂದ ನೋಡುತ್ತೇವೆ. ಪ್ರತಿಯೊಬ್ಬರು ಜೀವನದಲ್ಲಿ ಯಾರಾನ್ನಾದರೂ ಆರಾಧಿಸುತ್ತಿರುತ್ತಾರೆ. ಆದರಂತೆ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳು ಅದರಲ್ಲೂ ಮದ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ದೇವಸ್ವರೂಪಿಯಾಗಿದ್ದವರು ಆಚಾರ್ಯರು. ಇದು ಅತಿಶಯೋಕ್ತಿಯಲ್ಲ. ಅವರು ಉನ್ನತ ಶಿಕ್ಷಣ ಮಂತ್ರಿಯಾಗಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಮಾಡಿದಂತ ಸೇವೆಯಿಂದಲೇ ಅನೇಕ ವಿದ್ಯಾರ್ಥಿಗಳು ಇಂದು ಬಹುಆಯ್ಕೆಯ ವಿಜ್ಞಾನ ಕ್ಷೇತ್ರವನ್ನು ಆರಿಸಿಕೊಳ್ಳುವಂತಾಗಿದೆ. ಅವರು ಆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆಡಿದ ಮಾತುಗಳು ಎಲ್ಲಾ ಯುವಜನತೆಯ ಪಾಲಿಗೆ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಸಾಕ್ಷಾತ್ಕರಿಸಿಕೊಂಡು ಉತ್ತಮ ಪಥದತ್ತ ಸಾಗಲು ಅನೂಕೂಲವಾಗುವಂಥದ್ದು.
ನಾವು ಸಮಯ ಸಂದರ್ಭಕ್ಕೆ ತಕ್ಕಂತೆ ಪರಿಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆಯಿಂದ ಜೀವನ ನಡೆಸಿದ್ದೆ ಆದರೆ ಉನ್ನತ ಪದವಿಯನ್ನು ತಲುಪಲು ಸಾಧ್ಯ. ಹೀಗೆ ಪ್ರತಿಯೊಂದು ಸಂದರ್ಭದಲ್ಲಿಯೂ ವಿದ್ಯಾರ್ಥಿಗಳಿಗೆ ನೀತಿಯ ಪಾಠವನ್ನು ಹೇಳುತ್ತಾ ಇಹಲೋಕವನ್ನು ಬಿಟ್ಟು ಹೋಗಿದ್ದಾರೆ.
ಲೋಕವನ್ನೆ ಬೆಳಗುವ ಸೂರ್ಯ ಉದಯಿಸುವಾಗ ಯಾವುದೇ ಸದ್ದು ಗದ್ದಲವಿಲ್ಲ. ಇರುಳಿನ ಒಡೆಯ ಚಂದ್ರಮನು ಸೂರ್ಯನ ಸ್ಥಾನವನ್ನು ಅಲಂಕರಿಸುವಾಗ ಯಾವುದೇ ಅಹಂಕಾರವನ್ನು ತೋರ್ಪಡಿಸುವುದಿಲ್ಲ. ಗಿಡವೊಂದು ಬೆಳೆದು ಮರವಾಗಿ, ಹೂವು ಕಾಯಿಯಾಗಿ ಮಾಗಿ ಹಣ್ಣಾಗುವಾಗ ಯಾವುದೇ ಸದ್ದು ಗದ್ದಲವಿಲ್ಲದೇ ಲೋಕದ ಜನತೆಯ ಪಾಲಿಗೆ ಅದ್ಬುತ ರುಚಿಯ ಫಲವನ್ನು ನೀಡುವಾಗ ಯಾವುದೇ ಅಹಂಕಾರದ ಧ್ವನಿಯಿಲ್ಲದೇ ಲೋಕವನ್ನೆ ಬೆಳಗುತ್ತಿದ್ದಾರೆ. ಅಂತೆಯೇ ರಾಜಕೀಯ ಕ್ಷೇತ್ರದಲ್ಲಿ ಭೀಷ್ಮನೆಂದು ಗುರುತಿಸಿಕೊಂಡು ಯಾವುದೇ ಕಳಂಕವಿಲ್ಲದೆ ಸಾಮಾಜಿಕ ಸೇವೆಯ ಮೌಲ್ಯಗಳನ್ನು ಯುವಜನತೆಯ ಪಾಲಿಗೆ ಬಿಟ್ಟು ಅಗಲಿದ ದಿವ್ಯಚೇತನ ಡಾ.ವಿ.ಎಸ್.ಆಚಾರ್ಯ ಅವರ ಕುರಿತು ರಾಜ್ಯದ ಜನತೆಯ ನೋವು ತಳಮಳಗಳೆ ಅವರ ಪ್ರಸಿದ್ದಿಗೆ ಮೂಕ ಸಾಕ್ಷಿಯಾಗಿದೆ.
ವ್ಯಕ್ತಿಯು ಜೀವನದಲ್ಲಿ ವಿದ್ಯೆಯನ್ನು ಕಲಿಯಲು ಶಿಕ್ಷಣ ಸಂಸ್ಥೆಗಳು ಸಾವಿರಾರು ಇದ್ದರೂ ಜೀವನಮೌಲ್ಯ ಹಾಗೂ ಸೇವಾ ಚಟುವಟಿಕೆಯ ಗುಣವನ್ನು ಕಲಿಯಲು ನಿಗಧಿತ ಶಿಕ್ಷಣ ಸಂಸ್ಥೆ ಇಲ್ಲಾ. ಆದರೆ ಆಚಾರ್ಯರಂಥ ರಾಜಕೀಯ ಮುತ್ಸದ್ದಿಗಳಿಂದ ಯುವಜನತೆಯು ವಿದ್ಯೆಯೊಂದಿಗೆ ಎಲ್ಲಾ ಗುಣಗಳನ್ನು ಕಲಿಯುತ್ತಿದ್ದರು.
ರಾಜಕೀಯ ಕ್ಷೇತ್ರವೆಂದರೆ ಹೊಲಸು ಎಂದು ಎಲ್ಲಾ ಬುದ್ದಿಜೀವಿಗಳು ಹೊಗಳುತ್ತಿರುವ ಸಂಧರ್ಭದಲ್ಲಿ ತಾನು ವೈದ್ಯವೃತ್ತಿಯನ್ನು ಅಲಂಕರಿಸಿದ್ದರೂ ರಾಜಕೀಯ ಕ್ಷೇತ್ರಕ್ಕೆ ದುಮುಕಿದರು. ೧೯೬೮ರಲ್ಲಿ ಉಡುಪಿ ಪುರಸಭಾ ವ್ಯಾಪ್ತಿಯ ಕಾಂಗ್ರೆಸ್‌ನ ಭದ್ರಕೋಟೆಯನ್ನು ಭೇದಿಸಿ ಬಿಜೆಪಿಯ ಸ್ಥಾನವನ್ನು ಧೀಮಂತವಾಗಿರಿಸಿದರು.೧೯೬೯ರಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ದಿ.ಇಂದಿರಾ ಗಾಂಧಿಯವರು ಉಡುಪಿಗೆ ಆಗಮಿಸಿದಾಗ ಅವರನ್ನು ಸ್ವಾಗತ ಮಾಡುವ ಕಾರ್ಯವನ್ನು ಡಾ.ಆಚಾರ್ಯರೇ ನೆರವೇರಿಸಿರುವುದು ವಿಶೇಷವಾಗಿದೆ. ಹೀಗೆ ಶ್ರೀಕೃಷ್ಣನ ನಾಡಿನಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಬಿಜೆಪಿಯ ಸ್ಥಾನಕ್ಕೆ ಅಡಿಪಾಯವನ್ನು ಹಾಕಿದ ಕೀರ್ತಿ ಅವರ ಪಾಲಿಗಿದೆ. ೧೯೮೩ರಲ್ಲಿ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆಯಾಗಿ ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಿದೆ. ೨೦೦೬-೦೭ರಲ್ಲಿ ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆ ಹಾಗೂ ಉನ್ನತ ಶಿಕ್ಷಣ ಸಚಿವರಾಗಿ ಅನೇಕ ಕಾರ್ಯವನ್ನು ಮಾಡಿದ್ದಾರೆ. ಶಿಕ್ಷನ ಸಚಿವರಾಗಿ ಅನೇಕ ಉನ್ನತ ಕಾರ್ಯವನ್ನು ಮಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೂಡ ಕಾರ್ಯನಿರ್ವಹಿಸುತ್ತಿದ್ದರು. ಕತ್ತಲೆಯಿಂದ ನರಳುತ್ತಿದ್ದ ಅನೇಕ ಕುಟುಂಬಗಳ ಪಾಲಿಗೆ ಬೆಳಕಾಗಿ ವಿದ್ಯುತ್ ಪೂರೈಕೆಯಾಗುವಲ್ಲಿ ಅವಿರತ ಶ್ರಮಿಸಿದ್ದಾರೆ. ಬಡವರ ಪಾಲಿಗೆ ಬೆಳಕಾಗಿ ರಾಜ್ಯಾದಾದ್ಯಂತ ಮನೆಮಾತಾಗಿದ್ದಾರೆ. ಕೇವಲ ಬಿಜೆಪಿ ಪಕ್ಷದವರ ಪಾಲಿಗೆ ಮಾತ್ರವಲ್ಲ ವಿರೋಧಿ ನೆಲೆಯಲ್ಲಿಯೂ ಕೂಡ ಸಜ್ಜನವ್ಯಕ್ತಿಯೆಂದು ಕರೆಸಿಕೊಂಡು ಗೌರವವನ್ನು ಸ್ವೀಕರಿಸಿದ ಕೀರ್ತಿ ಡಾ.ಆಚಾರ್ಯರದ್ದು. ಕಾಂಗ್ರೆಸ್ ಕಾರ್ಯಾಲಯದಲ್ಲಿ ಒಬ್ಬ ವಿರೋಧಿ ಪಕ್ಷದ ನಾಯಕನ ಭಾವಚಿತ್ರವನ್ನು ಇಟ್ಟು ಸಂತಾಪ ಸೂಚಿಸುತ್ತಾರೆ ಅಂದರೆ ನಾವೇ ಅವರ ಘನತೆಯನ್ನು ತಿಳಿಯಬೇಕು. ಭ್ರಷ್ಟಾಚಾರ ತುಂಬಿರುವ ರಾಜಕೀಯದಲ್ಲಿ ಇಂತಹ ವ್ಯಕ್ತಿಗಳಿಂದ ಆ ಕ್ಷೇತ್ರಕ್ಕೆ ಘನತೆ ಹೆಚ್ಚುವುದು.
ಹುಟ್ಟುವಾಗ ಮನುಜನಿಗೆ ಹೆಸರೆನ್ನುವುದಿಲ್ಲ. ಕೇವಲ ಉಸಿರಿನಿಂದ ಗುರುತಿಸುತ್ತೇವೆ. ವಿಚಿತ್ರವೆಂದರೆ ಸಾಯುವಾಗ ಉಸಿರು ನಿಂತಿರುತ್ತದೆ. ಆದರೆ ನಾವು ಜೀವಿತದಲ್ಲಿ ಮಾಡಿದ ಕೆಲಸಗಳಿಂದ ಹೆಸರು(ಒಳ್ಳೆಯದು ಅಥವಾ ಕೆಟ್ಟದ್ದು)ಶಾಶ್ವತವಾಗಿರುತ್ತದೆ. ಆದರೆ ಡಾ.ಆಚಾರ್ಯ ಅವರು ಜೀವಿತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಾಡಿದ ಅಗಾಧ ಸೇವೆಯಿಂದ ಜೀವಂತವಾಗಿದ್ದಾರೆ.
ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರರಾಯರು ಒಂದೆಡೆ ವಿಶಾಲ ಹೃದಯದ ಹಾಗೂ ಬುದ್ದಿಶಕ್ತಿಯುಳ್ಳ ನಾಯಕನಿಲ್ಲದೆ ದೇಶಕ್ಕೆ ನಷ್ಟವಾಗಿದೆ. ಎಲ್ಲಾ ಪಕ್ಷದವರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಮಂತ್ರಿ ಸ್ಥಾನದಲ್ಲಿದ್ದರೂ ಯಾವುದೇ ಅಹಂಕಾರವಿಲ್ಲದೇ ಎಲ್ಲರ ದೂರವಾಣಿ ಕರೆಗೂ ನೇರವಾಗಿ ದೊರೆಯುತ್ತಿದ್ದ ಧೀಮಂತ ವ್ಯಕ್ತಿತ್ವ ಅವರದು. ಯಾರು ಕರೆ ಮಾಡಿದರು ``ಹಲೋ ಆಚಾರ್ಯ ಸ್ಪೀಕಿಂಗ್"ಎಂದು ಹೇಳುತ್ತಿದ್ದರು ಎಂದು ಶ್ಲಾಘಿಸಿದರು.
ಮಂಗಳೂರು ವಿ.ವಿ.ಉಪಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಆಚಾರ್ಯರ ಕುರಿತು ಅವರು ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲಾ ಜನರ ಪಾಲಿಗೆ ಚಲಿಸುವ ನಿಘಂಟು ಎಂದು ಕರೆಸಿಕೊಂಡಿದ್ದರು. ಆಚಾರ್ಯರ ಆಸೆಯಂತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನೂಕೂಲವಾಗುವಂತೆ ಉಡುಪಿ ಹಾಗೂ ಕೊಡಗಿನಲ್ಲಿ ಸ್ನಾತಕೋತ್ತರ ವಿಭಾಗಗಳನ್ನು ತೆರೆಯಲಾಗುವುದು. ಅವರು ಭ್ರಷ್ಟಾಚಾರದ ಸೋಂಕು ಇಲ್ಲದೆ, ಉತ್ತಮ ದೂರದರ್ಶಿತ್ವದಿಂದ ಹಾಗೂ ಸುಲಭವಾಗಿ ಎಲ್ಲರಿಗೂ ದೊರೆಯುವ ಗುಣಗಳಿಂದ ಪ್ರಸಿದ್ದಿಯನ್ನು ಪಡೆದಿದ್ದಾರೆ ಎಂದು ಹೇಳಿದರು.
ಹುಟ್ಟಿದ ವ್ಯಕ್ತಿ ಸಾಯಲೇ ಬೇಕು. ಇದು ಜಗದ್‌ನಿಯಮ. ಆದರೆ ಕಾಲಮಾತ್ರ ವ್ಯತ್ಯಾಸವಾಗಬಹುದು. ಡಾ.ಆಚಾರ್ಯರ ಅಕಾಲಿಕ ಮರಣದಿಂದ ಶಿಕ್ಷಣಕ್ಷೇತ್ರಕ್ಕೆ ಹಾಗೂ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ತಮ್ಮ ದೂರದರ್ಶಿತ್ವ, ಪ್ರಗತಿಪರ ಚಿಂತನೆ ಮತ್ತು ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ಒದಗಿಸಬೇಕೆಂಬ ಸಂಕಲ್ಪ ಹೊಂದಿದ್ದ ಅವರು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿ ಅಮರರಾಗಿದ್ದಾರೆ.

ರಾಜಕೀಯ ಕ್ಷೇತ್ರದ ಸೈದ್ದಾಂತಿಕ ನೆಲೆಯಲ್ಲಿ ಅವರ ವಿಚಾರಧಾರೆಗಳು ಬೇರೆಯಾಗಿದ್ದರೂ ಸೇವಾ ಕಾರ್ಯ, ಸಮಯ ನಿಷ್ಟೆಯಿಂದ ಜೀವನದಲ್ಲಿ ಕೀರ್ತಿಯನ್ನು ಗಳಿಸಿದವರು ಡಾ.ವಿ.ಎಸ್.ಆಚಾರ್ಯ.
ಶಾಸಕ ಬಿ.ರಮಾನಾಥ ರೈ

ಅಕಾಲಿಕವಾಗಿ ಮರಣ ಹೊಂದಿದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ದಿವ್ಯಾತ್ಮಕ್ಕೆ ಸುಖ ಶಾಂತಿ ಹಾಗೂ ಅವರ ಕುಟುಂಬ ಹಾಗೂ ಸಮಸ್ತ ಕರ್ನಾಟಕದ ಜನತೆಗೆ ನೋವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ.
ಟೈಮ್ಸ್ ಆಫ್ ಧೀನಬಂಧು ಬಳಗ ಶಿವಮೊಗ್ಗ

No comments:

Post a Comment