Friday 20 April 2012

ಆರ್ಡಿಯಲ್ಲಿ ವಿಶೇಷ ಶಿಬಿರ



ಗ್ರಾಮೀಣ ಭಾಗದಲ್ಲಿ ದಲಿತಯುವತಿಯರಿಗೆ ಸ್ವಾಭಿಮಾನದ ಬದುಕು ನಿರ್ಮಿಸುವಲ್ಲಿ ದಿಟ್ಟ ಹೆಜ್ಜೆ-ಕೈಮಗ್ಗದ ಶಿಬಿರ:
ಗ್ರಾಮೀಣ ಕೈಗಾರಿಕೆಗಳು ಕಣ್ಮರೆಯಾಗುತ್ತಿರುವ ಸಮಾಜದಲ್ಲಿ ಯುವಜನತೆಗೆ ಗ್ರಾಮೀಣ ಕುಲಕಸುಬುಗಳ ಕುರಿತು ಸಂಪೂರ್ಣವಾದ ಮಾಹಿತಿಯೊಂದಿಗೆ ತರಬೇತಿಯನ್ನು ಕೊಟ್ಟು ಸ್ವ-ಉದ್ಯೋಗವನ್ನು ಕಲ್ಪಿಸಿಕೊಡುವಲ್ಲಿ ಮಾದರಿಯಾದ ಘಟನೆ ಕುಂದಾಪುರ ತಾಲೂಕಿನ ಆರ್ಡಿಯ ಪರಿಸರದಲ್ಲಿ ನಡೆಯುತ್ತಿದೆ.
ಕಳೆದ ಐದಾರು ತಿಂಗಳಿನಿಂದ ಸದ್ದಿಲ್ಲದೇ, ಪ್ರಚಾರವನ್ನು ಬಯಸದೇ ಸಮಾಜದ ಹಿಂದುಳಿದ ವರ್ಗವೆಂದು ಗುರುತಿಸಲ್ಪಟ್ಟ ಕೊರಗ ಸಮುದಾಯದ ಅರೆವಿದ್ಯಾವಂತ ಯುವಕ- ಯುವತಿಯರಿಗೆ ಕೈಮಗ್ಗದ ಕುರಿತು ತರಬೇತಿಯನ್ನು ನೀಡುತ್ತಾ ಸ್ವಾವಲಂಬಿ ಜೀವನ ನಿರ್ಮಿಸುವಲ್ಲಿ ಜಿಲ್ಲೆಯ ಖಾದಿ ಮತ್ತು ಕೈಮಗ್ಗ ಇಲಾಖೆ, ಐಟಿಡಿಪಿ ಹಾಗೂ ಕೊರಗ ಅಭಿವೃಧ್ದಿ ಸಂಘಗಳ ಒಕ್ಕೂಟಗಳು ಕಾರ್ಯನಿರತವಾಗಿವೆ.
ಕೊರಗ ಜನಾಂಗ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯವಾಗಿದೆ. ಸಮಾಜದಲ್ಲಿ ಇವರಿಗೆ ವಿಶೇಷವಾದ ಸ್ಥಾನಮಾನವನ್ನು ಕಲ್ಪಿಸಿಕೊಟ್ಟರೂ ಅವರು ಇತರ ಜನರೊಂದಿಗೆ ಬೆರೆಯದೇ ತಮ್ಮದೇ ಆದ ಕಟ್ಟುಪಾಡು, ರೀತಿ-ನೀತಿಯ ಜಾತಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದವರು. ಇವರುಗಳು ವಿದ್ಯಾಭ್ಯಾಸದತ್ತ ಆಸಕ್ತಿ ತಾಳದೇ ತಮ್ಮದೇ ಕುಲಕಸುಬು ಬುಟ್ಟಿನೇಯುವುದು, ತಲೆಯ ಹಾಳೆ(ಮಂಡಾಳೆ) ವಿಶೇಷ ಸಂದರ್ಭದಲ್ಲಿ ಡೋಲು ಬಾರಿಸುವ ಪದ್ದತಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಕಾಲಚಕ್ರ ಉರುಳಿದಂತೆ ಸರ್ಕಾರದ ಸವಲತ್ತುಗಳು ದೊರಕಿದಾಗ ಕೆಲವು ಮಕ್ಕಳು ವಿದ್ಯಾಭ್ಯಾಸದತ್ತ ಆಸಕ್ತಿ ತಳೆದು, ತಮ್ಮದೇ ನೆಲೆಯಲ್ಲಿ ಜೀವನ ನಡೆಸುವ ಕನಸ್ಸನ್ನು ಹೊತ್ತು ಜೀವನ ಸಾರ್ಥಕ ಪಡಿಸಿಕೊಂಡಿದ್ದಾರೆ. ಅವರದೇ ಆದ ಕೆಲವೊಂದು ಸಂಘಟನೆಗಳನ್ನು ಹುಟ್ಟುಹಾಕಿದ್ದರೂ ಕೆಲವೊಂದು ಹಳ್ಳಿಯಲ್ಲಿ ಈಗಲೂ ಕೂಡ ಕೆಲಸವನ್ನು ಮಾಡದೇ ಅಲೆಮಾರಿ ಜೀವನವನ್ನು ನಡೆಸುತ್ತಿದ್ದಾರೆ. ವಿದ್ಯಾಭ್ಯಾಸ ಕಲಿಯದ ತಂದೆ ತಾಯಿಯಂತೆ ಮಕ್ಕಳೂ ಕೂಡ ಅವರ ಹಾದಿಯನ್ನು ಅನುಸರಿಸುತ್ತಾ ಸೋಮಾರಿಗಳಾಗಿ ಬದುಕುತ್ತಿದ್ದರು. ಕೆಲವು ಮಕ್ಕಳು ಶಾಲೆಗೆ ಹೋದರೂ ಅರ್ಧದಲ್ಲಿಯೇ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಸರಿಯಾಗಿ ಕೆಲಸವನ್ನು ಮಾಡದೇ, ವಾರದಲ್ಲಿ ಒಂದೆರಡು ದಿನ ಕೆಲಸ ಮಾಡಿ ಉಳಿದ ದಿನದಲ್ಲಿ ಆನಂದವನ್ನು ಕಾಣುವ ಕೊರಗ ಸಮುದಾಯದ ಮಕ್ಕಳಿಗೆ ಘನತೆ ಮತ್ತು ಅಸ್ತಿತ್ವವನ್ನು ಏರ್ಪಡಿಸುವಲ್ಲಿ ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಂಡು ಅವರಿಗೆ ಅವರದೆ ಆದ ನೆಲೆಯಲ್ಲಿ ತಮ್ಮ ಜೀವನ ಸಂತೋಷ ಕಾಣುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಖಾದಿ ಮತ್ತು ಕೈಮಗ್ಗ ಇಲಾಖೆ, ಐಟಿಡಿಪಿ ಹಾಗೂ ಕೊರಗ ಅಭಿವೃಧ್ದಿ ಸಂಘಗಳ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕು ಅಲ್ಬಾಡಿ ಗ್ರಾಮದ ಆರ್ಡಿಯ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ವರ್ಗ ಆಶ್ರಮ ಶಾಲೆಯಲ್ಲಿ ತಾಲೂಕಿನ ಒಟ್ಟು ೧೫ ಕೊರಗ ಯುವತಿಯರಿಗೆ ಕೈಮಗ್ಗ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಯುವತಿಯರಿಗೆ ಉಚಿತ ತರಬೇತಿಯೊಂದಿಗೆ ೨,೦೦೦ರೂ. ಶಿಷ್ಯವೇತನವನ್ನು ನೀಡಲಾಗುತ್ತಿದ್ದು, ತರಬೇತಿ ಪೂರ್ಣಗೊಂಡ ನಂತರ ಖಾದಿ ಮತ್ತು ಕೈಮಗ್ಗ ಇಲಾಖೆಯ ವತಿಯಿಂದ ಉಚಿತ ಉಪಕರಣವನ್ನು ನೀಡಲಾಗುತ್ತಿದೆ. ಆರ್ಡಿಯಲ್ಲಿ ಪ್ರಥಮ ತರಬೇತಿ ಶಿಬಿರ.ಎಂಟು ತಿಂಗಳುಗಳ ಶಿಬಿರದಲ್ಲಿ ಈಗಾಗಲೇ ೬ತಿಂಗಳ ಶಿಕ್ಷಣವನ್ನು ಪೂರೈಸಿದ್ದಾರೆ. ಶಿರ್ವ ಮಂಚಕಲ್‌ನ ಪೆರ್ನಾಲು ಆದಿವಾಸಿ ಜೀವನ ಶಿಕ್ಷಣ ಕೇಂದ್ರದಲ್ಲಿ ಕೊರಗ ಯುವತಿಯರಿಗೆ ಪ್ರಥಮ ಶಿಬಿರವನ್ನು ನಡೆಸಲಾಗಿದೆ. ಯುವತಿಯರು ತರಬೇತಿ ಅವದಿಯಲ್ಲಿ ಬೆಡ್‌ಶೀಟ್, ಲುಂಗಿ, ಟವಲ್‌ನ್ನು ತಯಾರಿಸುತ್ತಿದ್ದಾರೆ. ಇವರಿಗೆ ಕಚ್ಚಾವಸ್ತುವನ್ನು ನೀಡಿ ತರಬೇತಿ ಅವಧಿಯಲ್ಲಿ ತಯಾರಿಸಿದ ಕೈಮಗ್ಗಧಾರಿತ ವಸ್ತ್ರವನ್ನು ಮಂಗಳೂರಿನ ಜವುಳಿ ಇಲಾಖೆಯವರು ಖರೀದಿಸುತ್ತಾರೆ. ಹೆಚ್ಚಿನ ಜನತೆ ಬಾಳಿಕೆ ಹಾಗೂ ಗುಣಮಟ್ಟದ ದೃಷ್ಠಿಯಿಂದ ಕೈಮಗ್ಗದ ವಸ್ತ್ರಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ತರಬೇತಿಯ ನಂತರ ಅವರಿಗೆ ಅನೂಕೂಲವಾಗುವಂತೆ ಅವರ ಊರಿನಲ್ಲಿ ನಾಲ್ಕೈದು ಜನ ಒಟ್ಟಾಗಿ ಶೆಡ್‌ನ್ನು ನಿರ್ಮಿಸಿ ಅವರಿಗೆ ಬೇಕಾದ ಪೂರ್ಣ-ಸಹಕಾರವನ್ನು ನೀಡಿ ಸ್ವಾಭಿಮಾನದ ಜೀವನ ನಿರ್ಮಿಸುವಲ್ಲಿ ಸಹಕಾರಿಯಾಗಿದ್ದಾರೆ. ಪ್ರಾರಂಭದಲ್ಲಿ ೨೦ ಯುವತಿಯರು ಸೇರಿದ್ದರೂ ಮನೆಯವರ ಸಮಸ್ಯೆಯಿಂದ ಹಾಗೂ ವಿವಿದ ಕಾರಣಗಳಿಂದ ಐವರು ಶಿಬಿರವನ್ನು ತೊರೆದಿದ್ದಾರೆ. ಹುಬ್ಬಳ್ಳಿಯ ಶಂಕರಪ್ಪ ಹಾಗೂ ಬೆಳ್ತಂಗಡಿಯ ಸುರೇಖಾ ಯುವತಿಯರಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ.
ಶಿಕ್ಷಕಿ ಬೆಳ್ತಂಗಡಿಯ ಸುರೇಖಾ ಸಂತೋಷದಿಂದ ನಾನು ೧೦ನೇ ತರಗತಿ ಓದಿ ಮನೆಯಲ್ಲಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಾ ಕೈ-ಮಗ್ಗ ಇಲಾಖೆಗೆ ಅರ್ಜಿಯನ್ನು ಹಾಕಿ, ಮುಡಿಪು ನವಚೇತನ ನವಜೀವನ ಶಿಕ್ಷಣ ಕೇಂದ್ರದಲ್ಲಿ ಶಿಕ್ಷಣವನ್ನು ಮುಗಿಸಿದ್ದೇನೆ. ತಂದೆ ನಮ್ಮನ್ನು ತೊರೆದ ನಂತರ ತಾಯಿ, ಅಕ್ಕ, ತಮ್ಮ ನ ಜವಾಬ್ದಾರಿ ನಾನು ನೋಡಿಕೊಳ್ಳಬೇಕಾಯಿತು. ತರಬೇತಿಯ ನಂತರ ತರಬೇತಿ ಹೊಂದಿದ ಊರಿನ ೪ ಜನ ಒಂದಾಗಿ ಶೆಡ್‌ನ್ನು ನಿರ್ಮಿಸಿ ಬಟ್ಟೆಯನ್ನು ತಯಾರಿಸಿ ಕೊಡುತ್ತಿದ್ದೇವು. ಬೀಡಿ ಕಟ್ಟುವಾಗ ೧,೦೦೦ಕ್ಕೆ ರೂ.೮೨ ಮಾತ್ರ ಸಿಕ್ಕುತ್ತಿತ್ತು. ಆ ದಿನದಲ್ಲಿ ದಿನಕ್ಕೆ ೨ ಬೆಡ್‌ಶೀಟ್ ಮಾಡಿ ೧೧೬ ರೂ ಸಂಪಾದನೆ ಮಾಡತೊಡಗಿದೆವು. ಈಗ ನಾನು ಇಲ್ಲಿ ತರಬೇತಿ ನೀಡುತ್ತಿದ್ದೇನೆ.
ನಾವು ಶಿಬಿರಕ್ಕೆ ಬರುವ ಮುಂಚೆ ಗೇರುಬೀಜದ ಕೆಲಸಮಾಡುತ್ತಿದ್ದೆವು. ೨ದಿನಕ್ಕೆ ೧೦ಕೆ.ಜಿ ಮಾಡಿ ಕೆ.ಜಿ.ಗೆ ೧೧ರೂನಂತೆ ೧೧೦ನ್ನು ಪಡೆಯುತ್ತಿದ್ದೆವು. ತರಬೇತಿಯ ನಂತರ ಊರಿನಲ್ಲಿ ಶೆಡ್‌ನ್ನು ನಿರ್ಮಿಸಿ ಸ್ವ-ಉದ್ಯೋಗವನ್ನು ಕಲ್ಪಿಸಿಕೊಂಡು ಹೆಚ್ಚಿನ ದುಡಿಮೆಯಿಂದ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗುತ್ತೇವೆ ಎನ್ನುವುದು ಸಿದ್ದಾಪುರದ ದೇವಕಿ ಹಾಗೂ ಕೊಲ್ಲೂರು ಮೂರೂರಿನ ಸುಶೀಲ ಅವರದು.
ಕಾರ್ಯವೈಖರಿ:
ಬೇರೆ ಬೇರೆ ಬಣ್ಣದ ಅಟ್ಟೆಯ ನೂಲನ್ನು ಚರಕದಿಂದ ಬಾಬಿನ್‌ಗೆ ಸುತ್ತಲಾಗುತ್ತದೆ. ಈ ರೀತಿಯಾಗಿ ಸುತ್ತಿದ ನೂಲನ್ನು ವಾರ್ಫ್ ಮೂಲಕ ಬಣ್ಣವನ್ನು ಸಿದ್ದಗೊಳಿಸಲಾಗುತ್ತದೆ. ಬಣ್ಣ ಸಿದ್ದಗೊಳಿಸಿದ ನಂತರ ಮಗ್ಗದ ಮೂಲಕ ಹೊಡೆಯುವುದರಿಂದ ನಮಗೆ ಬೇಕಾದ ಬಣ್ಣದ ವಸ್ತ್ರವನ್ನು ತಯಾರಿಸಲಾಗುತ್ತದೆ. ತುಂಬಾ ಸೂಕ್ಷ್ಮವಾದ ಕೆಲಸದಲ್ಲಿ ನೂಲು ತುಂಡಾಗದ ಹಾಗೆ ನೋಡಿಕೊಳ್ಳಬೇಕು.ಅಕಸ್ಮಾತ್ ತುಂಡಾದರೆ ಗಂಟು ಹಾಕಲಾಗುತ್ತದೆ.ಮಗ್ಗದಲ್ಲಿ ರೆಕ್ಕೆ, ರೀಡ್, ಬಡ್ಡಿ ಎನ್ನುವ ಸಾಧನಗಳಿವೆ.
ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯಲ್ಲಿ ಹಿಂದೆ ಉತ್ತರ ಕರ್ನಾಟಕದ ೨೫ ಮಕ್ಕಳನ್ನು ತಂದು ಅವರಿಗೆ ವಿದ್ಯೆಯನ್ನು ಕಲಿಸಲಾಗುತ್ತಿತ್ತು. ವಿದ್ಯಾರ್ಥಿಗಳ ಕೊರತೆಯಿಂದ ಅದನ್ನು ಮುಚ್ಚಿದ್ದರು. ಕಳೆದ ಜುಲೈನಿಂದ ತಾಲೂಕಿನ ಕೊರಗ ಸಮುದಾಯದ ಯುವತಿಯರಿಗೆ ಸ್ವ-ಉದ್ಯೋಗವನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈ-ಮಗ್ಗ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ ಎನ್ನುವುದು ತಾಲೂಕು ಪಂಚಾಯತ್ ಸದಸ್ಯೆ ದೀಪಿಕಾ ಶೆಟ್ಟಿ ಅವರ ಅಭಿಪ್ರಾಯ.
ಆರ್ಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕರು ವಾರದಲ್ಲಿ ಬಂದು ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಯುವಕ ಮಂಡಲ ಹಾಗೂ ಯುವತಿ ಮಂಡಲಗಳು ಬೇಕಾದ ಸಹಾಯವನ್ನು ನೀಡುತ್ತಿದ್ದಾರೆ.ಬಿ.ಜೆ.ಪಿ ತಾಲೂಕ್ ಪಂಚಾಯತ್ ಸದಸ್ಯೆ ದೀಪಿಕಾ ಶೆಟ್ಟಿ ವಾರಕ್ಕೊಮ್ಮೆ ಬಂದು ವಿಚಾರಿಸಿಕೊಂಡು ಹೋಗುತ್ತಾರೆ ಎಂದು ಸಮಾಜ ಸೇವಕ ಕುಮಾರ್‌ದಾಸ ಸಂತೋಷದಿಂದ ಹೇಳುತ್ತಾರೆ.
ಶಿಕ್ಷಣದ ಅವದಿಯಲ್ಲಿ ವಿದ್ಯಾರ್ಥಿನಿಯರು ೫೦ಮೀಟರ್ ಉದ್ದದ ಬಂಡಲ್‌ನಿಂದ ಎರಡೂಕಾಲು ಮೀಟರ್‌ನ ೨೧ ಬೆಡ್‌ಶೀಟ್‌ನ್ನು, ೨೫ ಲುಂಗಿ ಹಾಗೂ ೩೦ ಟವಲ್‌ನ್ನು ತಯಾರಿಸಲಾಗುತ್ತದೆ. ಪ್ರಥಮವಾಗಿ ಕಲಿಸುವಾಗ ವಿದ್ಯಾರ್ಥಿನೀಯರು ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಸಮಾಜದ ಜನರೊಂದಿಗೆ ಬೆರೆಯುವುದಕ್ಕೆ ಸಂಕೋಚಪಡುತ್ತಿದ್ದರು. ಈಗ ದೈರ್ಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ಹುಬ್ಬಳ್ಳಿಯ ಶಿಕ್ಷಕ ಶಂಕರಪ್ಪ ಅವರ ಸಂತೋಷದ ನುಡಿ.
ಸಂದೇಶ ಶೆಟ್ಟಿ ಆರ್ಡಿ

No comments:

Post a Comment