Wednesday, 18 April 2012

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಪರೂಪದ ಕಾರ್ಯಕ್ರಮ: ಜನರ ಬಳಿಗೆ ಜನಪ್ರತಿನಿಧಿ
ರಾಜ್ಯ ಸರ್ಕಾರದ ವತಿಯಿಂದ ಹೋಬಳಿ ಮಟ್ಟದಲ್ಲಿ ಜನರ ಸಮಸ್ಯೆಗಳನ್ನು, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಣಾಮಕಾರಿಯಾಗಿ ಅಭಿವೃದ್ದಿಯನ್ನು ಸಾಧಿಸುವ ನಿಟ್ಟಿನಲ್ಲಿ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರದ ಮತದಾರ ಬಂಧುಗಳ, ಸಾರ್ವಜನಿಕ ಜ್ವಲಂತ ಸಮಸ್ಯೆ, ಪ್ರಮುಖ ಮೂಲಭೂತ ಬೇಡಿಕೆಗಳಿಗೆ ಸ್ಫಂದಿಸಲು ಮಲ್ಪೆ ಹಾಗೂ ಮೂಡುಸಗ್ರಿ ವಾರ್ಡ್‌ಗಳಲ್ಲಿ ಜನರ ಬಳಿಗೆ ಜನಪ್ರತಿನಿಧಿ ಜನಸ್ಪಂದನಾ ಕಾರ್ಯಕ್ರಮ ಎಲ್ಲಾ ನಾಯಕರಿಗೂ ಮಾದರಿಯಾಗಿದೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳೇ ರಾಜರು. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರ ನಡೆಯುವ ಸರ್ಕಾರ. ಇತ್ತೀಚಿನ ದಿನಗಳಲ್ಲಿ ನಾವು ಯಾರನ್ನು ಉತ್ತಮರೆಂದು ನಂಬಿ ಅವರಿಗೆ ಅಧಿಕಾರದ ಚುಕ್ಕಾಣಿಯನ್ನು ಕೊಟ್ಟಿದ್ದೇವೋ ಅವರೆಲ್ಲಾ ನಮ್ಮನ್ನು ಬಲಿಷ್ಟವಾದ ಸಂಕೋಲೆಗಳಿಂದ ಬಂಧಿಸಿ, ಉಸಿರನ್ನು ಬಿಡದ ಸ್ಥಿತಿಯಲ್ಲಿ ಕೆಡವಿದ್ದಾರೆ. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಕೆಲವೊಂದು ನಾಯಕರು ತಮ್ಮ ಕುಟುಂಬ ಹಾಗೂ ಸ್ವಹಿತವನ್ನು ಬಯಸುತ್ತಿದ್ದಾರೆಯೇ ಹೊರತು ಜನಹಿತವನ್ನು ಬಯಸುತ್ತಿಲ್ಲ ಎನ್ನುವುದು ಅನಕ್ಷರಸ್ಥನಿಗೂ ತಿಳಿದಿದೆ. ಭ್ರಷ್ಟಾಚಾರ, ಲಂಚಾವತಾರ ಹಾಗೂ ಜಾತಿವಾದೀಯ ತತ್ವಗಳೇ ತುಂಬಿರುವ ಸಮಾಜದಲ್ಲಿ ಕೇವಲ ಸರ್ಕಾರದ ಕೆಲಸ ದೇವರ ಕೆಲಸವೆಂದೂ ಭಾವಿಸಿ ನಿಷ್ಠೆಯಿಂದ ಬಡವರ ಏಳ್ಗೆಗಾಗಿ ಶ್ರಮಿಸುವ ಜನನಾಯಕ ಉಡುಪಿಯ ಶಾಸಕ ಕೆ. ರಘುಪತಿ ಭಟ್. ಇವರ ಜನಹಿತ ಸೇವೆ ಮಾತ್ರ ಅಪಾರ. ಇತ್ತೀಚಿಗೆ ನಾ ಕಂಡ ಎರಡು ಕಾರ್ಯಕ್ರಮ ಜನರ ಬಳಿಗೆ ಜನಪ್ರತಿನಿಧಿ.
ಉಡುಪಿಯನ್ನು ರಾಜರು ಆಳುತ್ತಿದ್ದ ಸಮಯ ಜನರಿಗೆ ವಿಶೇಷವಾದ ಮನ್ನಣೆ, ಗೌರವಗಳು ಸಿಗುತ್ತಿದ್ದವು. ಬಾರ್ಕೂರಿನ ಅರಸು ಮನೆತನದವರು ಜನರಿಗೆ ಸ್ವಾತಂತ್ರ್ಯವನ್ನು ನೀಡಿ ಉತ್ತಮವಾದ ಆಡಳಿತವನ್ನು ನೀಡಿದ್ದರು ಎನ್ನುವುದಕ್ಕೆ ಇಲ್ಲಿಯ ಪರಂಪರೆಯೇ ಸಾಕ್ಷಿಯಾಗಿದೆ. ರಾಜರ ನಂತರ ಬಂದ ರಾಜಕೀಯ ನಾಯಕರುಗಳಲ್ಲಿ ಕೆಲವೇ ಮಂದಿ ಉತ್ತಮ ಆಡಳಿತವನ್ನು ನೀಡಿದವರಲ್ಲಿ ಇವರು ಒಬ್ಬರು ಎನ್ನುವುದರಲ್ಲಿ ಸಂಶಯವಿಲ್ಲಾ. ಕುಂದಾಪುರ ತಾಲೂಕಿನ ಜನಪ್ರತಿನಿಧಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಂತೆ ಉಡುಪಿಯ ಶಾಸಕ ಕೆ.ರಘುಪತಿ ಭಟ್ ಜನರ ಪಾಲಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಸ್ಪರ್ಧಿಸಿದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿಯ ಕಾರ್ಯಗಳಿಂದ ಅವರ ಸಾಧನೆಯನ್ನು ಗುರುತಿಸುವುದಕ್ಕೆ ಸಾಧ್ಯ. ಯಾವುದೇ ಕೆಲಸವನ್ನು ಸಾಧ್ಯವಿಲ್ಲಾ ಎನ್ನುವ ಜಾಯಮಾನ ಅವರದಾಗಿರದೇ ಎಲ್ಲಾ ಕೆಲಸವನ್ನು ಹಿರಿಯರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎನ್ನುವ ಉದಾರಗುಣ ಕೆಲವೊಂದು ಕಾರ್ಯಕ್ರಮದಲ್ಲಿ ಕಣ್ಣಾರೆ ನೋಡಿ ಕೇಳಿದ ಅನುಭವ ನನಗಿದೆ. ಈ ರೀತಿಯಾಗಿ ಹೇಳುತ್ತಾ ಹೋದರೆ ಅತೀಶಯೋಕ್ತಿ ಎನಿಸಬಹುದು. ನಿಜವಾದ ಕರ್ತವ್ಯವನ್ನು ಮಾಡುವಂಥವರ ಗುಣಗಾನ ಮಾಡುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಭಾವನೆ. ಸಮಾಜದಲ್ಲಿ ಉತ್ತಮ ಕೆಲಸ ಮಾಡಿದಾಗ ಕೆಲಸ ಚೆನ್ನಾಗಿದೆ ಎಂದು ಪ್ರೋತ್ಸಾಹ ನೀಡಿ ಅವರನ್ನು ಹುರಿದುಂಬಿಸಬೇಕು. ಅಂತೆಯೇ ರಘುಪತಿ ಭಟ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ಶ್ಲಾಘನೀಯವಾದುದು.
೨೦೦೪ರಲ್ಲಿ ಮಲ್ಪೆಯಲ್ಲಿ ಜನರು ಸಂಕಷ್ಟದ ಸ್ಥಿತಿಯಲ್ಲಿ ವಾಸಮಾಡುತ್ತಿದ್ದರು. ತುಂಬಾ ಮಳೆ ಬಂದಾಗ ಸಮುದ್ರದ ನೀರು ಮೇಲೆ ಬಂದು ಮನೆಯೆಲ್ಲಾ ದ್ವಂಸವಾದ ಘಟನೆ ತುಂಬಾ ನಡೆದಿತ್ತು. ಇದು ಪ್ರಕೃತಿ ವಿಕೋಪವೆಂದು ತಿಳಿಯಬಹುದಾದರೂ, ಕಷ್ಟಕ್ಕೆ ಪರಿಹಾರ ನೀಡುವವರು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು. ಇಲ್ಲಿಯ ಜನರು ನಾವು ತುಂಬಾ ವರ್ಷದಿಂದ ವಾಸ ಮಾಡುತ್ತಿದ್ದರೂ ಹಕ್ಕು ಪತ್ರ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಯಾರು ಪರಿಹಾರ ಮಾಡಿರಲಿಲ್ಲ. ಅಂದಿನಿಂದ ಇಲ್ಲಿಯವರೆಗೆ ಜನರಿಗೆ ಸಹಾಯ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಅವಿರತ ಪರಿಶ್ರಮದಿಂದ ಈಗ ನೀರಿನ ಸಮಸ್ಯೆ ಪೂರ್ಣಗೊಂಡಿದೆ. ಆದರೆ ಹಕ್ಕುಪತ್ರದ ವಿತರಣೆಯಲ್ಲಿ ತಾಂತ್ರಿಕ ದೋಷ ಮತ್ತು ಕೆಲವು ಆಕ್ಷೇಪಗಳಿದ್ದರಿಂದ ನಿಧಾನವಾಗಿದೆ. ೧೦ ಎಕರೆ ಜಮೀನಿಗೆ ಸರ್ವೆ ನಂಬರ್ ಇಲ್ಲದೆ ಸಮುದ್ರಭಾಗದಲ್ಲಿದ್ದ ಭೂಮಿಯು ಗೆಜೆಟ್ ನೋಟಿಫಿಕೇಶನ್ ಆಗಿ ಹಕ್ಕುಪತ್ರ ಆಗಿತ್ತು. ಅದು ಈಗ ಭೂಮಿಯನ್ನು ಹೊಂದಿದವರ ಹೆಸರಿಗೆ ಆಗಿದೆ. ಕೆಲವರ ಜಾಗದ ವಿಸ್ತೀರ್ಣ ಹೆಚ್ಚು ಕಡಿಮೆ ಇದ್ದು ಹಾಗೂ ಬೇರೆಯವರು ವಾಸ್ತವ್ಯ ಇರುವುದರಿಂದ ಸಿಗಲಿಲ್ಲ ಎನ್ನುವುದು ಎಲ್ಲಾ ಜನರಿಗೂ ತಿಳಿಯಪಡಿಸಿ, ಎಲ್ಲಾ ಕೆಲಸ ಆಗುತ್ತದೆ ಎನ್ನುವ ನಂಬಿಕೆ ಇಲ್ಲಾ ಆದರೆ ಪ್ರಯತ್ನಪಡುತ್ತೇನೆ ಎನ್ನುವ ಗುಣವಿರಬೇಕು. ವಾರ್ಡ್‌ನಲ್ಲಿರುವ ಜನರ ಸಮಸ್ಯೆಗಳು ನೇರವಾಗಿ ತಹಶೀಲ್ದಾರ್ ಅವರಿಗೆ ತಲುಪುವುದಿಲ್ಲ. ಈ ರೀತಿಯ ಕಾರ್ಯಕ್ರಮ ಮಾಡುವುದರಿಂದ ಜನರ ಸಮಸ್ಯೆಗಳ ಪಟ್ಟಿಯು ತಹಶೀಲ್ದಾರ್ ಅವರ ಸಮಕ್ಷಮದಲ್ಲಿ , ನೆಮ್ಮದಿ ಕೇಂದ್ರವನ್ನು ತಲುಪಿದಾಗ ಪರಿಣಾಮಕಾರಿಯಾಗಿ ಫಲವನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ.
ಈ ರೀತಿಯ ಕಾರ್ಯಕ್ರಮದಿಂದ ಹಿಂದಿನ ಕಾಲದ ಕಟ್ಟೆ ಪಂಚಾಯಿತಿಕೆಯು ಮರುಕಳಿಸಿತು ಎನ್ನುವುದು ಸ್ಪಷ್ಟ. ತಾಲೂಕಿನ ಎಲ್ಲಾ ಅಧಿಕಾರಿಗಳು, ಜನನಾಯಕರು ನಿಗದಿಮಾಡಿದ ಸ್ಥಳದಲ್ಲಿ ಕುಳಿತು ನಡೆದ ಕಾರ್ಯಕ್ರಮ ಹಾಗೂ ನಡೆಯಬೇಕಾಗಿರುವ ಕಾರ್ಯಕ್ರಮದ ವಿರುದ್ದ ಚರ್ಚಿಸಲು ಸುಂದರ ವೇದಿಕೆಯಾಯಿತು. ಜನರ ಸಮಸ್ಯೆಗಳನ್ನು ತಿಳಿಯಲು ಅಧಿಕಾರಿಗಳೊಂದಿಗೆ ಸಂವಾದ ಮಾಡುವ ಜನಸ್ಪಂದನಾ ಕಾರ್ಯಕ್ರಮ ಉತ್ತಮ ಫಲವನ್ನು ಕಾಣುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಪ್ರಾರಂಭದ ಸ್ಥಿತಿಯಲ್ಲಿ ಅಧಿಕಾರಿಗಳ ಗಮನಕ್ಕೆ ತರದೇ, ಸಮಸ್ಯೆ ಉಲ್ಬಣವಾದಾಗ ಸಮಸ್ಯೆಯನ್ನು ಹೇಳಿದಾಗ ಅನೇಕ ಗೊಂದಲ, ಬಿನ್ನಾಭಿಪ್ರಾಯಗಳು ಸೃಷ್ಠಿಯಾಗುತ್ತದೆ. ಯಾವುದೇ ತೊಂದರೆಯನ್ನು ಪ್ರಾರಂಭದಲ್ಲಿ ಗುರುತಿಸಿ, ಸೂಕ್ತ ಮಾರ್ಗದರ್ಶನದಿಂದ ಕಾರ್ಯತತ್ಪರರಾಗಿದ್ದೆ ಆದರೆ ಶೀಘ್ರದಲ್ಲಿ ಚೇತರಿಸಿಕೊಳ್ಳಬಹುದು. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ಜಾಗ, ಗೇರು ಗುತ್ತಿಗೆಯಲ್ಲಿರುವ ಭೂಮಿಯನ್ನು ಸರ್ಕಾರಿ ದರದಲ್ಲಿ ಬಡವರಿಗೆ ನೀಡುವ ಬಗ್ಗೆ ಶಾಸಕರೆಲ್ಲರೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ ವಿಷಯವಂತೂ ಬಡವರ ಪಾಲಿಗೆ ಅಮೃತದ ಸವಿಬಿಂದುವಿನಂತಾಗಿತ್ತು. ಅನೇಕ ಸಮಸ್ಯೆಗಳಿಗೆ ಸೂಕ್ತ ಅಧಿಕಾರಿಗಳಿಂದ ಅಸಮರ್ಪಕವಾದ ಉತ್ತರವನ್ನು ಪಡೆದರೂ ಜನಪ್ರತಿನಿಧಿಗಳ ಒತ್ತಡದಿಂದ ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುವುದಾಗಿ ಭರವಸೆ ನೀಡಿರುವುದು ಸಂತೋಷಕರ ವಿಷಯವಾಗಿದೆ. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಗ್ರಾಮದ ಹಿತವನ್ನು ಕಾಯ್ದು, ಗ್ರಾಮಸ್ಥರಿಗೆ ಸಂತೋಷಕರ ವಾತಾವರಣವನ್ನು ನಿರ್ಮಿಸಬೇಕು. ಗ್ರಾಮಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿ ಎಲ್ಲಾ ರೀತಿಯಲ್ಲೂ ಕೂಡ ಜನರೊಂದಿಗೆ ಸ್ಪಂದಿಸಿದಾಗಲೇ ಸೌಹಾರ್ಧಯುತವಾದ ಉತ್ತಮ ಆಡಳಿತವನ್ನು ನೀಡಿ ಸಮಾಜದಲ್ಲಿ ಮನ್ನಣೆ ಪಡೆಯಲು ಸಾಧ್ಯ ಎನ್ನುವುದು ಸ್ಪಷ್ಟ. ವಾಸ್ತವ್ಯ ದೃಢೀಕರಣ ಪತ್ರ, ಗ್ಯಾಸ್ ಸಂಪರ್ಕ, ವಿಧವಾ ವೇತನ ವಿತರಣೆಯಲ್ಲಿ ಮಹತ್ವದ ಪಾತ್ರ ಗ್ರಾಮ ಮಟ್ಟದ ಅಧಿಕಾರಿಗಳ ಕೈಯಲ್ಲಿರುತ್ತದೆ. ಅವರು ಹಳ್ಳಿಯಲ್ಲಿರುವ ವ್ಯವಹಾರ ಜ್ಞಾನವಿಲ್ಲದೇ ಕೃಷಿಚಟುವಟಿಕೆಯಲ್ಲಿ ತೊಡಗಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಗ್ರಾಮದ ಜನರು ತತ್ತರಿಸುವುದರಲ್ಲಿ ಸಂಶಯವಿಲ್ಲಾ. ಆ ನಿಟ್ಟಿನಲ್ಲಿ ತಹಶೀಲ್ದಾರರು ಎಲ್ಲಾ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಜನರೊಂದಿಗೆ ಸ್ನೇಹಪರವಾಗಿ ವ್ಯವಹರಿಸುವಂತೆ ಸೂಚಿಸಿದ ವಿಷಯವಂತೂ ಜನರ ಪ್ರಶಂಸೆಗೆ ಪಾತ್ರವಾಯಿತು.ಈ ಸಂದರ್ಭದಲ್ಲಿ ಜಾತಿ ಪ್ರಮಾಣಪತ್ರಕ್ಕೆ ಬೇರೆ ಊರುಗಳಿಂದ ವಲಸೆ ಬಂದವರು ದಾಖಲೆ ನೀಡಬೇಕು. ಇಲ್ಲಿಯೇ ವಾಸ್ತವ್ಯ ಹೊಂದಿರುವವರು ದಾಖಲೆ ನೀಡುವ ಅವಶ್ಯಕತೆಯಿಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.
ನೇರನುಡಿ:ಇದು ಯಾವ ಪಕ್ಷದ ಪರವಾಗಿ ಅಲ್ಲಾ. ಯಾವುದೇ ಪಕ್ಷದ ರಾಜಕೀಯ ನಾಯಕರು ಈ ರೀತಿಯಾಗಿ ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮ ಕೈಗೊಂಡಾಗ ಗಾಂಧೀಜಿ ಕಂಡ ರಾಮರಾಜ್ಯದ ಕನಸ್ಸು ನನಸ್ಸಾಗುವುದರಲ್ಲಿ ಎರಡು ಮಾತಿಲ್ಲ. ನಮ್ಮ ನಾಯಕರ ಮೇಲಿನ ನಂಬಿಕೆ, ಗೌರವಗಳು ವೃದ್ದಿಯಾಗುತ್ತವೆ. ಸಾಮಾನ್ಯವಾಗಿ ಜರ ಹೇಳುವ ಮಾತು ಚುನಾವಣೆಯ ಸಂದರ್ಭದಲ್ಲಿ ನೋಡಿದ ರಾಜಕೀಯ ನಾಯಕರನ್ನು ನೋಡಲು ಇನ್ನೊಮ್ಮೆ ಚುನಾವಣೆ ಬರಬೇಕು. ಜನರ ಬಳಿಗೆ ಜನಪ್ರತಿನಿಧಿ ಕಾರ್ಯಕ್ರಮ ರಾಜ್ಯದ ಎಲ್ಲಾ ನಾಯಕರು ಆಚರಿಸುವುದರಿಂದ ಸರ್ಕಾರಕ್ಕೆ ಹಾಗೂ ಅವರುಗಳ ಪಕ್ಷಕ್ಕೆ ಲಾಭವಾಗುವುದರಲ್ಲಿ ಸಂಶಯವಿಲ್ಲಾ.
ಸಂದೇಶ್ ಶೆಟ್ಟಿ ಕೊಂಜಾಡಿ-೯೯೮೦೬೨೧೮೧೦

No comments:

Post a Comment