Wednesday 18 April 2012


ಕರಾವಳಿ ದರ್ಶನ....
ಪರಶುರಾಮ ಸೃಷ್ಠಿಯಲ್ಲಿ ಕುಂಜಾರುಗಿರಿಯ ಪರಶುರಾಮ ದೇವಾಲಯ
ಪರಿತ್ರಾಣಾಯ ಸಾಧುನಾಂ ವಿನಾಶಯಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಯಾ ಸಂಭವಾಮಿ ಯುಗೆ ಯುಗೇ...
ಕಷ್ಟಕಾಲದಲ್ಲಿ ವೆಂಕಟರಮಣ ನೀನೆ ರಕ್ಷಿಸು ಎಂದು ಮನಃಪೂರ್ವಕವಾಗಿ ಭಕ್ತರು ಬೇಡಿದಾಗ ದರ್ಶನವಿತ್ತು ಕಷ್ಟ ಕಾರ್ಪಣ್ಯಗಳನ್ನು ದೂರಮಾಡಿ, ಭಕ್ತರ ಮನದಲ್ಲಿ ನೆಲೆಯೂರಿದ ಭಗವಾನ್ ವಿಷ್ಣು ಆಡಿದಂತ ಮಾತುಗಳಿವು. ಭಕ್ತರು ಕಷ್ಟಗಳಿಂದ ದೂರವಾಗುವುದಕ್ಕೆ
ಪ್ರಪಂಚದಲ್ಲಿ ನಡೆಯುತ್ತಿರುವ ದುಷ್ಠಕೃತ್ಯಗಳಿಗೆ ಇತೀಶ್ರೀ ಹಾಡಲು ಯುಗಯುಗದಲ್ಲಿ ವಿವಿಧ ಅವತಾರವನ್ನೆತ್ತಿ ಬರುತ್ತೇನೆಂದು ಆಡಿದ ಮಾತಿನಂತೆ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬೌದ್ದ ಹಾಗೂ ಕಲ್ಕಿ ಅವತಾರವನ್ನೆತ್ತಿ ಬಂದು ದುಷ್ಠಶಕ್ತಿಯ ನಿರ್ನಾಮಗೈದು ಶಿಷ್ಠರನ್ನು ರಕ್ಷಿಸುತ್ತಾ ಭಕ್ತರ ಮನದಲ್ಲಿ ನೆಲೆಯಾಗಿದ್ದಾನೆ.
ಕ್ಷತ್ರಿಯರ ನಿಗ್ರಹಕ್ಕಾಗಿ ವಿಷ್ಣು ಪರಶುರಾಮನಾಗಿ ಅವತರಿಸಿ ಕಾರ್ತವೀರ್ಯಾರ್ಜುನಾದಿ ಸಮಸ್ತ ಕ್ಷತ್ರಿಯರನ್ನು ನಿರ್ನಾಮ ಮಾಡಿದಂತ ಕಥೆ ಸರ್ವವಿಧಿತ. ತಂದೆಯ ಮಾತಿನಂತೆ ತಾಯಿಯ ತಲೆಯನ್ನು ಕಡಿದ ಪರಶುರಾಮ ತಂದೆಯಿಂದಲೇ ಮಾತೆಯ ರಕ್ಷಣೆ ಮಾಡಿದ ದಿರೋದ್ದಾತ ಕುವರ. ತಂದೆಯನ್ನು ಕೊಂದು, ತನ್ನ ಆಶ್ರಮದಲ್ಲಿದ್ದ ಗೋವನ್ನು ಕಾರ್ತವೀರ್ಯ ಕದ್ದೊಯ್ದ ಸುದ್ದಿಯನ್ನು ತಿಳಿದ ರಾಮ ಕೈಲಾಸದಿಂದ ಭೂಮಿಗೆ ತಾಯಿಯಿಂದ ವಿಷಯವನ್ನು ತಿಳಿದುಕೊಳ್ಳುತ್ತಾನೆ. ದುಃಖದಿಂದ ಬೇಸತ್ತ ತಾಯಿಯು ಮಗನನ್ನು ಕರೆಯುವಾಗ ೨೧ಬಾರಿ ಹೊಟ್ಟೆಯನ್ನು ಹೊಡೆದಿದ್ದರಿಂದ ಪರಶುರಾಮ ಅಷ್ಟು ಭಾರಿ ಭೂ-ಪ್ರದಕ್ಷಿಣೆ ಹೊರಟು ದುಷ್ಟ ಕ್ಷತ್ರಿಯರ ನಾಶಮಾಡಿ, ಸಮಗ್ರ ಭಾರತವನ್ನು ಸ್ವಾಧೀನ ಮಾಡಿಕೊಂಡು ಅವತಾರವನ್ನು ಪೂರೈಸಿದನು. ಕ್ಷತ್ರಿಯ ವಧಾದೋಷ ಪರಿಹಾರಕ್ಕಾಗಿ ಕೈಗೊಂಡ ಯುಗಾಂತ್ಯದಲ್ಲಿ ಆಸೇತು ಹಿಮಾಚಲ ಪ್ರಥ್ವಿಯನ್ನು ಕಶ್ಯಪ ಬ್ರಾಹ್ಮಣನಿಗೆ ದಾನವಿತ್ತದ್ದರಿಂದ ಭೂಮಿಗೆ ಕಾಶ್ಯಪಿ ಎಂದು ಹೆಸರು ಬಂದಿದೆ.
ಚಿರಂಜೀವಿಯಾದ ಪರಶುರಾಮನು ದಾನಮಾಡಿದ ಸ್ಥಳದಲ್ಲಿ ತಾನಿರುವುದು ತರವಲ್ಲವೆಂದು ಬಗೆದು ತನಗೆ ಬೇಕಾದ ತಪೋಭೂಮಿಯನ್ನು ಸಮುದ್ರ ರಾಜನಿಂದ ಕೇಳಿ ಪಡೆಯಲು ನಿರ್ಧರಿಸಿದನು. ಸಮುದ್ರ ರಾಜನು ಸಹ್ಯಾದ್ರಿಯಿಂದ ಎಸೆದ ಕೊಡಲಿ ಬಿದ್ದಷ್ಟು ದೂರದ ಜಾಗವನ್ನು ಪರಶುರಾಮನಿಗೆ ಅರ್ಪಿಸಿ ಆತನ ಅನುಗ್ರಹ ಪಡೆದನು. ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಸೃಷ್ಠಿಸಿಕೊಂಡ ವಿಸ್ತಾರವಾದ ಪ್ರದೇಶವೇ ಭವ್ಯ ಪರಶುರಾಮ ಕ್ಷೇತ್ರ. ಆದರೆ ವರುಣದೇವನ ಆಜ್ಞೆಗೆ ತಲೆಬಾಗಿ ಕರಾವಳಿಯಿಂದ ಹಿಂದೆ ಸರಿದು ತನ್ನ ವಾಸಕ್ಕಾಗಿ ನಿರ್ಮಿಸಿಕೊಂಡ ಕ್ಷೇತ್ರವೇ ಪಾಜಕ ಕ್ಷೇತ್ರ..ವಾಯುದೇವರ ತೃತೀಯಾವತಾರ ಶ್ರೀ ಮಧ್ವಚಾರ್ಯರು ಅವತರಿಸಲು ಆರಿಸಿದ ಜಾಗವು ಪಾಜಕಕ್ಷೇತ್ರ. ದುರ್ಗಾ ಹಾಗೂ ಪರಶುರಾಮರ ಸಮೀಪದಲ್ಲಿರುವ ಪಾಜಕಕ್ಷೇತ್ರದಲ್ಲಿ ಅವತರಿಸಿ ತ್ರೈಲೋಕ್ಯಾಚಾರ್ಯ ಮಧ್ವರು ದ್ವೈತ ವೇದಾಂತ ಶಾಸ್ತ್ರ ರತ್ನವನ್ನು ವಿಶ್ವಕ್ಕೆ ನೀಡಿ ವಿಶ್ವಮಾನ್ಯರಾದರು.
ದಕ್ಷಿಣದ ಸಪ್ತಕ್ಷೇತ್ರಗಳು ಪಡುಕರಾವಳಿಯಲ್ಲಿವೆ. ಮೋಕ್ಷದಾಯಕವಾದ ಸಪ್ತಕ್ಷೇತ್ರಗಳಲ್ಲಿ ಉಡುಪಿ ಪ್ರಥಮ ಸ್ಥಾನ. ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಪರಶುರಾಮನ ಕ್ಷೇತ್ರ ಹರಡಿದ್ದರೂ, ಪರಶುರಾಮ ತನ್ನ ನಿವಾಸಕ್ಕಾಗಿ ಆರಿಸಿದ ಭಾಗ ಉಡುಪಿಯಿಂದ ಸುಮಾರು ೧೬ ಕಿ.ಮೀ.ದಕ್ಷಿಣಕ್ಕಿರುವ ಪಾಜಕ ಕ್ಷೇತ್ರ ಕುಂಜಾರುಗಿರಿಯಲ್ಲಿ ಎನ್ನುವುದು ಮಾತ್ರ ಸ್ಫಷ್ಟ.
ದುರ್ಗಾಬೆಟ್ಟದಲ್ಲಿ ತನ್ನ ಅಪರಾವತಾರ ಶ್ರೀ ಕೃಷ್ಣನ ತಂಗಿಯಾದ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ, ಬೆಟ್ಟದ ಸುತ್ತ ನಾಲ್ಕು ತೀರ್ಥಗಳನ್ನು ನಿರ್ಮಿಸಿದನು. ಗದಾತೀರ್ಥ, ಬಾಣತೀರ್ಥ, ಪರಶುತೀರ್ಥ, ಧನುಸ್ತೀರ್ಥಗಳಿಂದ ಸುತ್ತುವರಿದ ವಿಮಾನಗಿರಿ ಈಗ (ಕುಂಜಾರುಗಿರಿ ಎಂದು ಪ್ರಸಿದ್ದ) ಪರಶುರಾಮ ಕ್ಷೇತ್ರದ ವಿಶೇಷ ಆಕರ್ಷಣೆ. ದುರ್ಗಾಬೆಟ್ಟದ ಮೂಡುಬದಿಯಲ್ಲಿರುವ ಗಿರಿಗುಹೆಯಲ್ಲಿ ತಪೋನಿಷ್ಠ ಪರಶುರಾಮ ಇಂದಿಗೂ ತಪಸ್ಸು ಮಾಡುತ್ತಾ ಭಕ್ತ ಜನರನ್ನು ಅನುಗ್ರಹಿಸುತ್ತಿರುವನು ಎನ್ನುವ ನಂಬಿಕೆ ಈ ಭಾಗದ ಜನರದ್ದು. ದುರ್ಗಾದೇವಿಯ ಹಾಗೂ ಶ್ರೀ ಪರಶುರಾಮ ದೇವರ ದರ್ಶನಕ್ಕೆ ಸಾವಿರಾರು ಯಾತ್ರಿಕರು ಬರುತ್ತಿದ್ದಾರೆ. ದೇವಸ್ಥಾನದ ಪ್ರಗತಿ ಯಾತ್ರಿಕರ ಪ್ರೋತ್ಸಾಹದಿಂದ ನಡೆಯುತ್ತಿದೆ ಎನ್ನುವುದು ಜನರ ಅಭಿಪ್ರಾಯ.
ಸ್ಕಂದ ಪುರಾಣದ ಇತಿಹಾಸ ಸಂಹಿತೆಯ ಸಹ್ಯಾದ್ರಿ ಕಾಂಡದಲ್ಲಿ ವಿಸ್ತಾರವಾಗಿ ವರ್ಣಿಸಲ್ಪಟ್ಟಿದೆ. ಪರಮ ಪವಿತ್ರವಾದ ಪಾಜಕ ಕ್ಷೇತ್ರಾಂತರ್ಗತವಾದ ಪುರಾಣ ಪ್ರಸಿದ್ದವಾದ ವಿಮಾನಗಿರಿಯ ಪಡುಬದಿಯಲ್ಲಿ ಗದಾತೀರ್ಥದ ಮೇಲ್ಗಡೆ ದೊಡ್ಡ ಬೆಟ್ಟದ ಮೇಲೆ ಪರಶುರಾಮನ ದೇವಾಲಯವನ್ನು ನೋಡಬಹುದು.
ಅಶ್ವತ್ಥಾಮೋ ಬಲಿಃರ್ವ್ಯಾಸಃ ಹನುಮಾನಶ್ಚ ವಿಭೀಷಣಃ
ಕೃಪಾ ಪರಶುರಾಮಶ್ಚ ಸಪ್ತೈತೆ ಚಿರಂಜೀವಿನಃ
ಶ್ಲೋಕದಲ್ಲಿ ಹೇಳಿರುವಂತೆ ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಕೃಪಾ ಹಾಗೂ ಪರಶುರಾಮ ಈ ಏಳು ಮಂದಿ ಚಿರಂಜೀವಿಗಳು. ಕಲಿಯುಗದಲ್ಲಿ ಇವರುಗಳ ಸ್ಮರಣೆ ಮಾಡುತ್ತಿದ್ದರೆ ಸಕಲ ಕಷ್ಟಗಳು ದೂರವಾಗುತ್ತದೆ ಎನ್ನುವುದು ಹಿಂದುಗಳ ಭಾವನೆ.
ಇದು ಈ ಸಂಚಿಕೆಯ ಕರಾವಳಿಯ ವಿಶೇಷ. ಮುಂದಿನ ಸಂಚಿಕೆಯಲ್ಲಿ ಇನ್ನೊಂದು ವಿಶೇಷದೊಂದಿಗೆ....
ಸಂದೇಶ ಶೆಟ್ಟಿ, ಕೊಂಜಾಡಿ-೯೯೮೦೬೨೧೮೧೦

No comments:

Post a Comment