Wednesday, 18 April 2012

ಯುಗಾದಿಯ ಸಂಭ್ರಮದೊಂದಿಗೆ ಅನರ್ಘ್ಯರತ್ನಗಳನ್ನು ಕಳೆದುಕೊಂಡ ನೋವು:
ಚಳಿಗಾಲ ಕಳೆದು ಚೈತ್ರಮಾಸ ಬಂದಾಗ ಗಿಡಮರಗಳ ಚಿಗುರು, ಪೊಟರೆಯೊಳಗಿನ ಹಕ್ಕಿಗಳ ಕಲರವಗಳ ನೋಡಿದಾಗಲೇ ಯುಗದ ಆದಿ ಬಂತು ಎನ್ನುವ ಸಂಭ್ರಮ. ರೆಕ್ಕೆಪುಕ್ಕ ಬಲಿತ ಜೀವಗಳು ಒಂದೆಡೆಯಿಂದ ಮತ್ತೊಂದೆಡೆ ಸಾಗುವ, ದವಸ- ಧಾನ್ಯ , ಕಾಳು ಕಡ್ಡಿಯನ್ನು ಪುಟ್ಟ ಜೀವಗಳಿಗೆ ಹೊತ್ತು ತರುವ ತಾಯಿ ಹಕ್ಕಿಗಳ ಜೀವನ ಈ ಮಾಸದ ಸಂಭ್ರಮವೇ ಯುಗಾದಿ. ಹಿಂದುಗಳ ಹೊಸವರ್ಷ ಪ್ರಾರಂಭವಾಗುವುದೇ ಯುಗಾದಿಯಂದು.
ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಗಳೆರಡು ಬಗೆಗಳಿವೆ. ತುಳುವರಿಗೆ ಚಾಂದ್ರಮಾನ ಯುಗಾದಿ ಹೊಸಪರ್ವ. ಬೇವು-ಬೆಲ್ಲವನ್ನು ವಿನಿಮಯಿಸಿಕೊಂಡು ಹೊಸವರ್ಷ ಯುಗಾದಿ ಆಚರಿಸಿಕೊಳ್ಳುತ್ತೇವೆ. ಹೊಸತನವನ್ನು ಕಂಡುಕೊಳ್ಳುತ್ತೇವೆ. ಆದರೆ ಈ ಭಾರಿಯ ಯುಗಾದಿ ಸಂಭ್ರಮ ಸ್ವಲ್ಪ ಭಿನ್ನ. ದಾಸ್ಯದ ಶೃಂಖಲೆಯ ಕಿತ್ತೊಗೆಯುವುದಕ್ಕಾಗಿ ಉರುಳಿಗೆ ಕೊರಳೊಡ್ಡಿ ಹುತಾತ್ಮರಾದ ಮೂವರು ಅನರ್ಘ್ಯರತ್ನಗಳ ಬಲಿದಾನ ದಿನವೂ ಹೊಸವರ್ಷದ ಯುಗಾದಿಯಂದು ಬಂದಿದ್ದು ಹೊಸಸಂದೇಶವನ್ನು ನೀಡಿದೆ.
ಆಧುನೀಕರಣ ಜೀವನದ ನಾಗಲೋಟ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಗುರಿಯಿಲ್ಲದ ನಾಯಕತ್ವ, ರಾಜಕೀಯ ಅಸ್ಥಿರತೆ, ಭಯೋತ್ಪಾದನೆ, ಮತಾಂತರಗಳಂತಹ ಗಂಡಾಂತಕಾರಿ ವಿಪ್ಲವಗಳ ನಡುವೆ ದಿಕ್ಕುತಪ್ಪುತ್ತಿರುವ ಯುವಜನತೆ ಹೀಗೆ ... ಒಟ್ಟಾರೆ ಕಲುಷಿತ ವಾತಾವರಣದ ನಡುವೆ ದೇಶದ ಭವಿಷ್ಯದ ಸೆಲೆಯಾಗಿರಬೇಕಾದ ಯುವಜನತೆಗೆ ಆ ಮೂವರು ಹುತಾತ್ಮರ ಜೀವನಾದರ್ಶಗಳು ಯುವಜನತೆಗೇಕೆ ಪಥ್ಯವಾಗುವುದಿಲ್ಲ ?
ಮಾ.೨೩, ೧೯೩೧ರಂದು ಉರುಳಿಗೆ ಕೊರಳನ್ನು ನೀಡಿದ ಅರ್ಘ್ಯರತ್ನಗಳ ವಯಸ್ಸು ಮಾತ್ರ ಕೇವಲ ೨೩-೨೪ರ ಆಸುಪಾಸು ಎಂದಾಗ ನಾವು ಮಾಡಬೇಕಾಗಿರುವುದೇನು?
ಶಹೀದ್ ಭಗತ್‌ಸಿಂಗ್
ಶಹಿದ್ ಭಗತ್‌ಸಿಂಗ್ ಸಪ್ಟೆಂಬರ್ ೨೮, ೧೯೦೭ರಂದು ಪಂಜಾಬ್‌ನ ಲಾಯಲ್‌ಪುರಿ ಜಿಲ್ಲೆಯ ಬಂಗಾ ಗ್ರಾಮದಲ್ಲಿ ಜನಿಸಿದರು. ಭಗನವಾಲಾ ಎನ್ನುವ ಹೆಸರಿನಿಂದಲೇ ಪ್ರಸಿದ್ದಿಯನ್ನು ಪಡೆದ ಭಗತ್ ಶಾಲಾ ಜೀವನದಲ್ಲಿಯೇ ಮಾತೃಭೂಮಿಯ ಸ್ವಾತಂತ್ರ್ಯದ ಕನಸ್ಸನ್ನು ಕಂಡಿದ್ದರು. ಜಲಿಯನ್ ವಾಲಾಬಾಗ್ ಮತ್ತು ಕರ್ತಾರ್ ಸಿಂಗ್ ಸರಬಾರಿಂದ ಸ್ಫೂರ್ತಿ ಪಡೆದ ಭಗತ್ ಅಸಹಕಾರ ಚಳುವಳಿಯಲ್ಲಿ ಲಾಯಲ್‌ಪುರಿ ಜಿಲ್ಲೆಯಲ್ಲಿ ಯಶಸ್ವಿಯಾದರು. ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟದ ಇತಿಮಿತಿಯನ್ನು ಅರಿತುಕೊಂಡು ಸುಪ್ರಸಿದ್ದ ಕ್ರಾಂತಿಕಾರಿಯಾಗಿ ರೂಪುಗೊಂಡರು. ನೌವ್ ಜವಾನ್ ಭಾರತ್ ಸಭಾ ಕ್ರಾಂತಿ ಸಂಘಟನೆಯನ್ನು ಪ್ರಾರಂಭಿಸಿದ ಭಗತ್ ಮುಂದೆ ಹಿಂದೂಸ್ಥಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯಲ್ಲಿ ಸಂಕ್ರಿಯರಾಗಿದ್ದರು. ಶಾಸನ ಸಭೆಗೆ ಬಾಂಬ್‌ಹಾಕಿದರೆಂಬ ಕಾರಣಕ್ಕಾಗಿ ಅವರನ್ನು ಬಂದಿಸಲಾಯಿತು. ವಿವಿಧ ದೂರುಗಳನ್ನು ದಾಖಲಿಸಿ ಗಲ್ಲುಶಿಕ್ಷೆಯನ್ನು ವಿಧಿಸಿದರೂ, ಭಾರತೀಯರಲ್ಲಿ ಮಹತ್ಮಾಗಾಂಧಿಯವರಿಗಿದ್ದ ಸ್ಥಾನವನ್ನೇ ಸ್ವೀಕರಿಸಿದರು.
ಶಿವರಾಮ ಹರಿ ರಾಜ್‌ಗುರು
ಶಿವರಾಮ ಹರಿ ರಾಜ್‌ಗುರು ಮದ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ೧೯೦೬ರಲ್ಲಿ ಜನ್ಮತಾಳಿದರು. ಇವರು ಶಿವಾಜಿಯ ಗೆರಿಲ್ಲಾ ಯುದ್ದದಿಂದ ಪ್ರೇರಿತರಾಗಿದ್ದರು. ಹಿಂದುಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿಯ ಸಕ್ರೀಯ ಕಾರ್ಯಕರ್ತರಾಗಿದ್ದರು. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವ ಛಲ, ಚಂದ್ರಶೇಖರ್ ಅಜಾದ್‌ರ ಪ್ರೇರಣೆಯೂ ಇವರ ಮೇಲೆ ಇತ್ತು. ರಾಜ್‌ಗುರುವನ್ನು ೩೦ ಸೆಪ್ಟಂಬರ್ ೧೯೨೯ರಂದು ಬಂಧಿಸಲಾಯಿತು.
ಸುಖದೇವ್ ಥಾಪರ್
ಸುಖದೇವ್ ಥಾಪರ್ ಪಂಜಾಬ್‌ನ ಲುಧಿಯಾನಾದಲ್ಲಿ ಮೇ ೧೫, ೧೯೦೭ರಲ್ಲಿ ಜನ್ಮತಾಳಿದರು. ಡಿಸೆಂಬರ್ ೧೭, ೧೯೨೮ರಂದು ಪೋಲಿಸ್ ಅಧಿಕಾರಿ ಸ್ಯಾಂಡರ್‍ಸ್ ಅವರನ್ನು ಲಾಹೋರ್‌ನ ಪೊಲೀಸ್ ವಸತಿಗೃಹದ ಮುಂಭಾಗದಲ್ಲಿ ಹತ್ಯೆ ಮಾಡಲಾಯಿತು.ಲಾಲಾ ಲಜಪತ್‌ರಾಯ್ ಅವರನ್ನು ಹತ್ಯೆ ಮಾಡಿದ ಪರಿಣಾಮವೇ ಪೊಲೀಸ್ ಅಧಿಕಾರಿಯನ್ನು ಸಾಯಿಸಲಾಯಿತು. ಸುಖದೇವ ಅಧಿಕಾರಿಯನ್ನು ಕೊಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಜೈಲಿನಲ್ಲಿ ನಡೆದ ತಾರತಮ್ಯ, ಅನ್ಯಾಯದ ವಿರುದ್ದ ೫೮ದಿನಗಳ ಕಾಲ ಮೂವರು ಉಪವಾಸ ಮಾಡಿ ನ್ಯಾಯ ಒದಗಿಸಿಕೊಂಡಿದ್ದಾರೆ.
ಬ್ರಿಟಿಷ್ ಆಡಳಿತ ೧೬ ಜನರ ವಿರುದ್ದ ದೂರಿನ ವಿಚಾರಣೆ ನಡೆಸಿ, ಅಕ್ಟೋಬರ್ ೭, ೧೯೩೦ರಂದು ಶಹಿದ್ ಭಗತ್‌ಸಿಂಗ್, ಹರಿ ರಾಜ್‌ಗುರು, ಸುಖದೇವ್ ಥಾಪರ್ ಅವರನ್ನು ಗಲ್ಲಿಗೇರಿಸಬೇಕೆಂದು ತೀರ್ಪು ನೀಡಲಾಯಿತು. ಮೂವರನ್ನು ಮಾ.೨೩, ೧೯೩೧ರಂದು ಸಂಜೆ ೭.೩೩ಕ್ಕೆ ಗಲ್ಲಿಗೇರಿಸಿದರು. ಅವರ ಕಳೇಬರವನ್ನು ಜೈಲಿನ ಹಿಂದಿನ ಬಾಗಿಲಿನಿಂದ ಕೊಂಡು ಹೋಗಿ ಲಾಹೋರ್‌ನಿಂದ ೫೦ಮೈಲುಗಳ ದೂರದಲ್ಲಿರುವ ಸಟ್ಲೇಜ್ ನದಿ ದಂಡೆಯ ಹುಸೈನ್‌ವಾಲಾದಲ್ಲಿ ಗುಪ್ತವಾಗಿ ದಹಿಸಲಾಯಿತು. ಈ ರೀತಿಯಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮೂವರ ಆತ್ಮಗಳು ಕಾಲಗರ್ಭದಲ್ಲಿ ಲೀನವಾಗಿ ಇಂದು ನಮ್ಮಲ್ಲಿ ನೆನಪು ಮಾತ್ರ. ಹಿಂದುಗಳ ಹೊಸವರ್ಷದಂದು ಯುವನಾಯಕರ ಗುಣವನ್ನು ಅನುಕರಣೆ ಮಾಡುವ ಬದಲು ಜೀವನಕ್ಕೆ ಯಾವುದು ಅನಗತ್ಯವೋ ಅದರ ಅಂಧಾನುಕರಣೆಯಲ್ಲಿ ಯುವಜನತೆ ಮುಗಿಬೀಳುತ್ತಿದೆ.
ಏಕಸ್ಯ ಕರ್ಮ ಸಂವೀಕ್ಷ್ಯ ಕರೋತ್ಯನ್ಯೋಽಪಿ ಗರ್ಹಿತಮ್ |
ಗತಾನುಗತಿಕೋ ಲೋಕೋ ನ ಲೋಕಃ ಪಾರಮಾರ್ಥಿಕಃ ||
ಒಬ್ಬನು ಮಾಡುವ ಕೆಡುಕನ್ನು ಕಂಡು ಮತ್ತೊಬ್ಬನೂ ಅದನ್ನೆ ಮಾಡುತ್ತಾನೆ. ಈ ಲೋಕದ ಜನರು ಇತರರ ಚಾಳಿಯನ್ನೇ ಅನುಸರಿಸುತ್ತಿರುವರೇ ಹೊರತು ಒಳ್ಳೆಯದಾದ ಸ್ವಪ್ರೇರಣೆಯ ಕೆಲಸ ಮಾಡುತ್ತಿಲ್ಲ. ಮೇಲಿನ ಮಾತು ಯುವಜನತೆಯನ್ನು ನೋಡಿಯೇ ಹೇಳಿದ್ದಿರಬೇಕು. ಆದರೆ ಯುವಜನತೆಗೆ ಶಕ್ತಿಯ ಕುರಿತು ಜ್ಞಾನದ ಅರಿವಿಲ್ಲದೇ ವರ್ತಿಸುತ್ತಿದ್ದಾರೆಯೇ ಎನ್ನುವುದು ಸಂಶಯ!
ಜಗತ್ತಿನಲ್ಲಿರುವ ಯಾವುದೇ ಸವಾಲಿಗೂ ಎದೆಯೊಡ್ಡುವ ತಾಕತ್ತು ಇರುವುದು ಯುವಶಕ್ತಿಗೆ ಮಾತ್ರ. ಅಗಾದ ಪ್ರತಿಭೆ, ಕ್ರಿಯಾಶೀಲ ಇಚ್ಚಾಶಕ್ತಿ, ಸ್ಮರಣಶಕ್ತಿ, ಹೊಸದನ್ನು ಸಾಧಿಸುವ ಲವಲವಿಕೆ ನಿತ್ಯವೂ ಹೊಸದನ್ನು ಸೃಷ್ಠಿಸುವ ಗುಣ ಯುವ ಮನಸ್ಸುಗಳಲ್ಲಿರುವುದು ಸ್ಪಷ್ಟ. ಭಾರತದಲ್ಲಿರುವ ಸಂಘಟಿತ ಯುವಶಕ್ತಿಯ ಶ್ರಮ ಹಲವು ಕ್ಷೇತ್ರಗಳಲ್ಲಿ ನಾವು ಗಮನಿಸಬಹುದು. ವಿದೇಶಿಯರು ಭಾರತೀಯರ ಕುರಿತು ಶ್ಲಾಘನೆ ಮಾಡುತ್ತಿರುವುದು ಯುವಜನತೆಯ ಶಕ್ತಿ ಸಾಮರ್ಥ್ಯವನ್ನು ತೋರಿಸುತ್ತದೆ.
ಇತ್ತೀಚಿಗೆ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಅಮೇರಿಕಾದ ವಿದ್ಯಾರ್ಥಿಗಳಿಗೆ ಡ್ಯಾನ್ಸ್, ಕ್ಲಬ್, ಶಾಪಿಂಗ್ ಕಡಿಮೆಮಾಡಿ ಗಣಿತ, ವಿಜ್ಞಾನದ ಕುರಿತು ಆಸಕ್ತಿ ವಹಿಸಿ ಎಂದು ಸಾರುತ್ತಿದ್ದಾರೆ. ಮುಂದಿನ ದಿನದಲ್ಲಿ ಅಮೇರಿಕಾ ದೇಶಕ್ಕೆ ಭಾರತವೊಂದೆ ಸ್ಪರ್ಧೆಯನ್ನು ನೀಡುವ ದೇಶ ಎನ್ನುವ ಭಾವನೆಯಿಂದ ಈಗಲೇ ವಿದ್ಯಾರ್ಥಿಗಳಿಗೆ ಸೂಚನೆಯನ್ನು ನೀಡುತ್ತಿದ್ದಾರೆ.
ನಮ್ಮ ದೇಶದಲ್ಲಿರುವ ಯುವಶಕ್ತಿಯು ಯಾರಿಗೆ ಕಡಿಮೆಯಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದ ವೀರಯೋಧರು ಹಾಗೂ ವನಿತೆಯರು ಮಧ್ಯಮ ವಯಸ್ಸಿನವರೇ, ಬಾಕ್ಸಿಂಗ್‌ನಲ್ಲಿ ಮಹೇಂದ್ರ ಕುಮಾರನ್, ಆಕ್ಟಿಂಗ್‌ನಲ್ಲಿ ರಣಬೀರ್, ಸಚಿನ್‌ನ ಬ್ಯಾಟಿಂಗ್, ರೆಹಮಾನ್‌ನ ಸಂಗೀತ, ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ ಯುವಜನತೆಯ ಪ್ರತಿಭೆಯನ್ನು ಗುರುತಿಸಬಹುದು.
೨೪ನೇ ವಯಸ್ಸಿನಲ್ಲಿ ಸೈಬರ್ ರಕ್ಷಣಾ ತಜ್ಞನಾಗಿ ಅಂಕಿತ್ ಫಾಡಿಯಾ, ವಯಸ್ಸು ೧೬ರಲ್ಲಿ ವಿಕಲಚೇತನರ ಪಾಲಿಗೆ ವರದಾನವಾದ ಗ್ಲಾಬಿನೇಟರ್ ಉಪಕರಣವನ್ನು ನೀಡಿದ ಅಪೂರ್ವ ಮಿಶ್ರಾ, ೧೭ನೇ ವಯಸ್ಸಿನಲ್ಲಿ ಎಂಟೆಕ್ ಪದವೀಧರನಾದ ಜೀನಿಯಸ್ ಚಂದ್ರಶೇಖರ್, ಮಾಹಿತಿ ತಂತ್ರಜ್ಞಾನ ಕಂಪೆನಿ ಸ್ಥಾಪಿಸಿ ಕಿರಿಯ ಸಿಇಒ ಎನಿಸಿದ ಸುಹಾಸ್ ಗೋಪಿನಾಥ್, ೨೦ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ ಪಡೆದ ತತಾಗತ್ ಅವತಾರ್ ತುಳಸೀ, ವೀರಯೋದ ಸಂದೀಪ್ ಉನ್ನಿಕೃಷ್ಣನ್ ಹೀಗೆ ಅನೇಕರನ್ನು ಗುರುತಿಸಬಹುದು. ಅನೇಕ ಸಾಧನೆಯನ್ನು ಮಾಡಿ ದೇಶದ ಕೀರ್ತಿಯನ್ನು ಪ್ರಪಂಚದಲ್ಲೆಡೆ ಪಸರಿಸಿದ ಯುವಜನತೆಯಿಂದು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಆಲೋಚಿಸಬೇಕಾಗಿದೆ.
೨೦೨೦ರಲ್ಲಿ ಭಾರತ ಸೂಪರ್ ಪವರ್ ದೇಶವಾಗಲು ಯುವಜನತೆಯ ಪಾತ್ರ ಅಮೂಲ್ಯವೆಂದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹೇಳಿದ್ದಾರೆ. ಟ್ವೆಂಟಿ-೨೦ ಕ್ರಿಕೆಟ್‌ನಲ್ಲಿ ಭಾರತದ ಯುವಪಡೆ ವಿಶ್ವಕಪ್‌ನ್ನು ಗೆದ್ದು ಸಾಧನೆ ಮಾಡಿರುವುದನ್ನು ನೋಡಿದ ಮಹಿಳಾ ಪಡೆ ಕಬಡ್ಡಿಯಲ್ಲಿ ನಾವೇನು ಪುರುಷರಿಗೆ ಕಮ್ಮಿಯೆನ್ನುವ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಇದರಿಂದ ನಾವು ಸಂತೋಷ ಪಡಲು ಸಾಧ್ಯವೇ ಎಂದಾಗ ಮನದ ಮೂಲೆಯಲ್ಲಿ ಯಾವುದೋ ಒಂದು ರೀತಿಯ ದುಗುಡ ಮಡುಗಟ್ಟುತ್ತದೆ.
ಭಾರತ ಸೂಪರ್ ಪವರ್ ದೇಶವಾಗಲು ಬಡತನ, ನಿರಕ್ಷರತೆ, ಭ್ರಷ್ಠಾಚಾರಗಳೇ ತೊಡಕುಗಳಾಗಿವೆ. ಭಾರತ ಜ್ಞಾನಶಕ್ತಿಯಾಗಿ ಹೊರಹೊಮ್ಮಬೇಕು. ದೇಶದಲ್ಲಿ ವಾಸಿಸುವ ಜನತೆಯು ಸಮಾಜದ ಬದಲಾವಣೆಗಾಗಿ, ಸಾಕ್ಷರತೆ, ಪರಿಸರ ಸಂರಕ್ಷಣೆ, ಸಾಮಾಜಿಕ ನ್ಯಾಯ, ಗ್ರಾಮಗಳ ಅಭ್ಯುದಯವಾಗಬೇಕು. ಸೇವಾ ಮನೋಭಾವನೆ ಪ್ರತಿಯೊಬ್ಬರ ರಕ್ತದಲ್ಲೂ ಮಿಶ್ರಣವಾಗಬೇಕು. ಇತ್ತೀಚಿಗೆ ಫೇಸ್‌ಬುಕ್‌ನಲ್ಲಿ ಓದಿದ ಚೆನ್ನಬಸವಯ್ಯನ ಜೀವನಚಿತ್ರ ನಿಜವಾಗಲೂ ನಮ್ಮೆಲ್ಲರಿಗೂ ಮಾದರಿ. ಇನ್ನೊಬ್ಬರ ಜೀವ ರಕ್ಷಿಸಲು ಹೋಗಿ ತನ್ನ ಜೀವವನ್ನು ಬಲಿಕೊಟ್ಟ ಚೆನ್ನಬಸವಯ್ಯ ಸಾಯುವ ಮುಂಚೆ ತನ್ನ ದೇಹದ ಎಲ್ಲಾ ಭಾಗವನ್ನು ದಾನ ಮಾಡಿದ್ದಾನೆ. ಕಾಲೇಜು ಜೀವನದಲ್ಲಿ ರಕ್ತವನ್ನು ದಾನಮಾಡುತ್ತಾ ನೇತ್ರದಾನ ಮಾಡುವುದಾಗಿ ಸ್ನೇಹಿತರಲ್ಲಿ ಹೇಳಿಕೊಂಡು ಇಂದು ಅದನ್ನು ಕೂಡ ಸಾಧಿಸಿದ್ದಾನೆ. ಇಂತಹ ಅನೇಕ ಉತ್ತಮ ಘಟನೆಗಳು ನಡೆಯುತ್ತಿದ್ದರೂ, ಹಲವು ಘಟನೆಗಳಿಂದ ಇಂತವರು ಈ ಸಮಾಜದಲ್ಲಿ ಇದ್ದಾರೆಯೇ ಎನ್ನುವ ಪ್ರಶ್ನೆ ಕಾಡುತ್ತದೆ. ಹುಟ್ಟಿಸಿದ ತಂದೆಯನ್ನು ತಾಯಿ-ಮಗಳು ಸೇರಿ ಕೊಲೆಗೈದು ಪ್ರಕರಣವನ್ನು ಮುಚ್ಚಲು ಪ್ರಯತ್ನಿಸಿ ಪೊಲೀಸರ ಚಾಕಚಕ್ಯತೆಯಿಂದ ಸೆರೆಯಾದ ಘಟನೆಯನ್ನು ನಾವು ಕೇಳಿದ್ದೇವೆ. ಇಲ್ಲಿ ನಾವು ನೋಡಬೇಕಾಗಿರುವುದು ಪೊಲೀಸರ ಬುದ್ದಿವಂತಿಕೆಯನ್ನೇ ಹೊರತು ಕೊಲೆಗಾರರ ಬುದ್ದಿವಂತಿಕೆಯನ್ನಲ್ಲ.
ಹತ್ತಾರು ಘಟನೆಗಳು ಸಮಾಜದಲ್ಲಿ ನಡೆಯುತ್ತಿದ್ದರೂ ನಮ್ಮ ಜೀವನ ನಿರ್ವಹಣೆಗೆ ಯಾವುದು ಅವಶ್ಯಕವೋ ಅದನ್ನು ಸ್ವೀಕರಿಸಬೇಕು. ಭಗತ್ ಸಿಂಗ್, ಶಿವರಾಮ ಹರಿ ರಾಜ್‌ಗುರು, ಸುಖದೇವ್ ಅವರುಗಳನ್ನು ಗಲ್ಲಿಗೇರಿಸಿದ ದಿನ ಮತ್ತು ಯುಗಾದಿಯಂದು ಅವರು ಸಾಗಿದ ಜೀವನ ಪಥದಲ್ಲಿ ದೇಶಭಕ್ತಿಯ ಸಾರ, ಸೇವಾ ಮನೋಭಾವವನ್ನು ಅಳವಡಿಸಿಕೊಂಡು ಸಾಗಿದಾಗ ಅದುವೇ ಅವರಿಗೆ ಕೊಡುವ ಗೌರವ. ಅಂತಹ ಗುಣಗಳನ್ನು ಬೆಳೆಸಿಕೊಂಡು ಅವರು ಸಾಗಿದ ಮಾರ್ಗದಲ್ಲಿ ಜೀವನದ ಪಯಣವನ್ನು ಗೈಯ್ಯುತ್ತೇವೋ ಆಗಲೇ ಕಲಾಂ ಅವರು ಬಯಸಿದ ಸೂಪರ್ ಪವರ್-೨೦೨೦ ಆಗುವುದರಲ್ಲಿ ಸಂಶಯವಿಲ್ಲ.
ಸಂದೇಶ ಶೆಟ್ಟಿ ಆರ್ಡಿ

No comments:

Post a Comment