Saturday, 21 April 2012




ಗಂಡ ಸತ್ತರೂ ಮಂಗಳಸೂತ್ರ ತೆಗೆಯೊಲ್ಲ ಎನ್ನುವ ಮಹಿಳಾಮಣಿಗಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಜನಾರ್ಧನ ಪೂಜಾರಿ
ಮಂಗಳೂರಿನ ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ಕರ್ನಾಟಕದಲ್ಲಿ ಪ್ರಸಿದ್ದಿಯನ್ನು ಪಡೆದು, ಮಿನಿ ಮೈಸೂರು ಎನ್ನುವ ಹೆಸರನ್ನು ಗಳಿಸಿದೆ. ದಾರಾವಾಹಿಗಳ ಪರಿಚಯ ಗೀತೆಯಲ್ಲಿ ಹಾಗೂ ಸಿನಿಮಾ ಚಿತ್ರಿಕರಣದಲ್ಲಿ ಈ ದೇವಳದ ಮುಖಮಂಟಪ ಕಾಣಿಸಿಕೊಂಡಿದೆ. ಗೋಕರ್ಣನಾಥ ಜನತೆಯ ಕಷ್ಟವನ್ನು ದೂರಗೊಳಿಸಿ, ಅನೇಕ ಭಕ್ತರ ಮನದಲ್ಲಿ ನೆಲೆಯಾಗಿದ್ದಾನೆ. ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಂತೆಯೇ ಸೇವಾ ಹಾಗೂ ಸಮಾಜಕಾರ್ಯಗಳಿಂದ ವಿದೇಶಿಯರು ಆಕರ್ಷಿತರಾಗಿದ್ದಾರೆ. ದೇಶದ ಮೂಲೆಯಲ್ಲಿಯೂ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಕೆಲವರು ಮನಸ್ಸಿನ ನೆಮ್ಮದಿಗಾಗಿ ಮದಿರೆಯ ಮತ್ತಿನಲ್ಲಿ ತೂರಾಡಿದರೆ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಬೃಹತ್ ಹಿಂದು ಸಮಾಜದಲ್ಲಿರುವ ಕೆಲವೊಂದು ಅನಿಷ್ಟಪದ್ದತಿಗಳ ಬದಲಾವಣೆ ಕಾರ್ಯ ನಡೆದಿದೆ. ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಕಲ್ಪಿಸುವಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಅವರ ಕಾರ್ಯ ಮಾತ್ರ ಶ್ಲಾಘನೀಯವಾದುದು.....
ಭಾರತದ ಜೀವವ್ಯವಸ್ಥೆಯ ಸಂಬಂಧ ಹಾಗೂ ಕುಟುಂಬ ನಿರ್ವಹಣೆ ವ್ಯವಸ್ಥೆಯಿಂದ ಪ್ರಪಂಚದಲ್ಲಿರುವ ಎಲ್ಲಾ ದೇಶಗಳಿಗೂ ಮಾದರಿಯಾಗಿದೆ. ಅಪ್ಪ-ಅಮ್ಮ ಎನ್ನುವ ಪ್ರಾಥಮಿಕ ಕುಟುಂಬ ವ್ಯವಸ್ಥೆ ದೇಶದ ಎಲ್ಲಾ ಭಾಷೆಗಳನ್ನು ಮಾತನಾಡುವ ಯಾವುದೇ ಧರ್ಮವನ್ನು ಅವಲಂಬಿಸಿದ ಜನರಲ್ಲೂ ಕೂಡ ಈ ಸಂಬಂಧವಿದೆ. ಮನುಷ್ಯನ ಭಾವನೆಗಳು ಭಾಷೆಯಲ್ಲಿ ಅಡಕವಾಗಿದೆ. ತಕ್ಷಣ ಅರಳುವ ಭಾವನೆಗಳು ಅದ್ಬುತವಾದ ಶಕ್ತಿಯನ್ನು ಹೊರಹಾಕುತ್ತದೆ. ಸಸ್ಯಸಂಪತ್ತಿಗೆ ಆದಾರಪ್ರಾಯವಾದ ಭೂಮಿಯಲ್ಲಿ ಪ್ರತಿಯೊಂದು ಪ್ರಾಣಿಗಳಿಗೂ ವಿಶಿಷ್ಟ ತೆರನಾದ ಸಂಬಂಧವಿದೆ. ಮನಸ್ಸುಗಳ ಆಚೆ ಒಂದು ಅವ್ಯಕ್ತವಾದ ಶಕ್ತಿಯಿದೆ ಅದನ್ನು ಗುರುತಿಸುವ ಕಾರ್ಯ ಸಮಾಜದಲ್ಲಿ ನಡೆಯಬೇಕಿದೆ.
ತಾಯಿ-ಮಗುವಿನ ಸಂಬಂಧ ಮಗು ಲೋಕದ ಬೆಳಕನ್ನು ಕಾಣುವುದಕ್ಕಿಂಥ ಮುಂಚೆನೇ ಅವ್ಯಕ್ತವಾಗಿರುತ್ತದೆ. ಪ್ರಪಂಚದಲ್ಲಿ ಹುಟ್ಟಿದ ಯಾವುದೇ ಜೀವಿಯಾದರೂ ಅವುಗಳ ಮದ್ಯೆ ವಿಶಿಷ್ಟ ತೆರನಾದ ಸಂಬಂಧಗಳು ನಿರ್ಮಿಸಲ್ಪಟ್ಟಿರುತ್ತದೆ. ಸಂಬಂಧಗಳು ಸಮಾಜದಲ್ಲಿ ವ್ಯಕ್ತಿಯನ್ನು ಗುರುತಿಸಲು ಸಹಕಾರಿಯಾಗುತ್ತದೆ. ಹುಟ್ಟಿನಿಂದ ಬರುವ ಸಂಬಂಧಗಳು ಹಾಗೂ ಹುಟ್ಟಿದ ನಂತರದ ಸಂಬಂಧಗಳು ಎನ್ನುವುದಾಗಿ ವಿಂಗಡಿಸಬಹುದು. ತಂದೆ-ತಾಯಿಯ, ಒಡಹುಟ್ಟಿದವರ ಸಂಬಂಧ ಹುಟ್ಟುವಾಗಲೇ ಬೆಸೆಯಲ್ಪಟ್ಟಿರುತ್ತದೆ ಹಾಗೂ ಗಂಡ-ಹೆಂಡತಿ, ಗುರುವಿನ ಸಂಬಂಧ ಜೀವತಳೆದ ನಂತರದವು. ಸಮಾಜದಲ್ಲಿ ಸಂಬಂಧಗಳು ಉಳಿಯಬೇಕಾದರೆ ಶಬ್ದಗಳು ಅರಳಬೇಕು. ಮಕ್ಕಳಿಗೆ ವಿವರಿಸುವಾಗ ಪುರಾಣ ಸ್ತ್ರೀ-ಪುರುಷರ ಉದಾಹರಣೆ ನೀಡುತ್ತೇವೆ. ಹೀಗೆ ಪ್ರತಿಯೊಂದು ವಸ್ತುವನ್ನು ಉದಾಹರಣೆ ನೀಡುವ ನಾವುಗಳು ಕೆಲವೊಮ್ಮೆ ಅಲ್ಪಜ್ಞಾನಿಗಳಂತೆ ವರ್ತಿಸುತ್ತಿದ್ದೇವೆ ಎನ್ನುವುದಂತೂ ಸ್ಪಷ್ಟ....
ಕುಕ್ಕೆ ಸುಬ್ರಹ್ಮಣ್ಯ ಮತ್ತು ನಾಡಿನ ಇತರ ಕೆಲವು ದೇವಳದಲ್ಲಿ ಪ್ರಚಲಿತವಿರುವ ಮಡೆಸ್ನಾನ ಪದ್ದತಿಯನ್ನು ಅನಾಗರಿಕ ಮತ್ತು ಜೀವವಿರೋಧಿ ಎಂದು ಕೆಲವರು ಹೇಳಿದ್ದಾರೆ. ಧಾರ್ಮಿಕ ಕ್ಷೇತ್ರಗಳಲ್ಲಿ ಪುರೋಹಿತ ಶಾಹಿಗಳು ಉಂಡು ಎದ್ದ ಎಲೆಗಳ ಮೇಲೆ ಉರುಳಾಡುವ ಮಡೆಸ್ನಾನವನ್ನು ಸರಕಾರ, ಪೇಜಾವರ ಶ್ರೀಗಳು, ವೀರೇಂದ್ರ ಹೆಗ್ಗಡೆಯವರಂಥ ಧಾರ್ಮಿಕ ಮುಖಂಡರು ಸಮರ್ಥಿಸಿಕೊಂಡಿದ್ದಾರೆ ಎಂದು ನೀಡುಮಾಮಿಡಿ ಮಾನವ ಧರ್ಮಪೀಠದ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ದಾವಣಗೆರೆಯಲ್ಲಿ ಇತ್ತೀಚಿಗೆ ಹೇಳಿಕೆಯನ್ನು ನೀಡಿದ್ದಾರೆ.
ಒಂದು ಧರ್ಮಪೀಠದಲ್ಲಿ ಕುಳಿತು ಸಮಾಜದಲ್ಲಿರುವ ಕಂಠಕಗಳನ್ನು ಸರಿಯಾಗಿ ತುಲನೆಮಾಡಿ, ನ್ಯಾಯಸಮ್ಮತವಾದ ತೀರ್ಮಾನ ಕೈಗೊಳ್ಳಬೇಕಾದ ಸ್ವಾಮಿಗಳು ಈ ತೆರನಾಗಿ ಮಾತನಾಡುವುದು ತೆರವೇ? ಅವರು ಸಣ್ಣ ಮಕ್ಕಳಂತೆ ವರ್ತಿಸುತ್ತಿರುವುದನ್ನು ನೋಡಿದರೆ ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆಯೇ ಎನ್ನುವ ಅನುಮಾನ ಸೃಷ್ಠಿಯಾಗುತ್ತದೆ.
ಬ್ರಾಹ್ಮಣರು ಎಂಜಲೆಲೆಯ ಮೇಲೆ ಯಾವತ್ತಾದರೂ ಉರುಳಾಡಿ ಎಂದು ಹೇಳಿಕೆ ನೀಡಿದ್ದಾರೆಯೇ? ಅಥವಾ ದೇವಳದ ಸಂಪ್ರದಾಯ ಈ ರೀತಿಯಾಗಿದೆ ಎಂದು ಮುಚ್ಚಳಿಕೆ ಬರೆದಿದ್ದೇಯೇ? ಸಾವಧಾನವಾಗಿ ಅಲೋಚನೆ ಮಾಡಿದಾಗ ಯಾರು ಮಡೆಸ್ನಾನವನ್ನು ಕೈಗೊಂಡಿದ್ದಾರೋ ಅವರೆಲ್ಲಾ ವಿದ್ಯಾವಂತರೇ? ಅನಕ್ಷರಸ್ಥನಾದರೂ ಅವನಿಗೆ ಅಲೋಚಿಸಿ, ಸ್ವಂತ ನಿರ್ಧಾರವನ್ನು ಕೈಗೊಳ್ಳುವಂಥ ಸ್ವಾತಂತ್ರ್ಯವಿದೆ. ದೇವರ ಮೇಲಿನ ಭಯ ಅಥವಾ ಭಕ್ತಿಯಿಂದ, ಜೀವಿತದಲ್ಲಿ ಮಾಡಿದ ಪಾಪದ ಪರಿಹಾರಕ್ಕಾಗಿಯೋ ಅಥವಾ ಮನಸ್ಸಿನ ನೆಮ್ಮದಿಗಾಗಿ ಹರಕೆಯನ್ನು ಹೊರುತ್ತಾರೆ. ಯಾವತ್ತು ಕೂಡ ಸರ್ವಾಧಿಕಾರತ್ವದಿಂದ ನೀವು ಈ ರೀತಿ ಮಾಡಬೇಕೆಂದು ಯಾವ ದೇವಳದ ಅಧಿಕಾರ ಮಂಡಳಿಯು ಹೇಳಿಲ್ಲ....
ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ವಿಷಯಗಳನ್ನು ನಾವು ಯಾವ ರೀತಿಯಾಗಿ ತೆಗೆದುಕೊಳ್ಳುತ್ತೇವೆ ಎನ್ನುವುದು ಅವರ ಮನಸ್ಸಿಗೆ ಬಿಟ್ಟದ್ದು. ಮನವೆನ್ನುವುದು ಒಂದು ದೊಡ್ಡ ಬುಟ್ಟಿ. ಆ ಬುಟ್ಟಿಯಲ್ಲಿ ಮಲ್ಲಿಗೆ ಹೂವನ್ನಾದರೂ ತುಂಬಿಸಿಕೊಳ್ಳಬಹುದು. ಮಾಲಿನ್ಯವನ್ನಾದರೂ ತುಂಬಿಸಿಕೊಳ್ಳಬಹುದು. ಮನದಲ್ಲಿ ಒಳ್ಳೆಯ ಗುಣಗಳು ಹುಟ್ಟುತ್ತವೆ. ಕೆಟ್ಟ ಗುಣಗಳು ಹುಟ್ಟುತ್ತವೆ. ಒಳ್ಳೆಯ ಗುಣಗಳನ್ನು ಬೆಳಿಸಿಕೊಂಡು ಅಂತೆಯೇ ಜೀವನಪಥದಲ್ಲಿ ಸಾಗಿದರೆ ಉತ್ತಮ ವ್ಯಕ್ತಿಯಾಗುತ್ತಾನೆ. ಕೆಟ್ಟಗುಣಗಳಿಂದ ಪ್ರಭಾವಿತನಾಗಿ ಅದನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಹೋದರೆ ಆತ ಅಧೋಗತಿ ಹೊಂದುತ್ತಾನೆ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಾದರೆ, ಸಮಾಜದಲ್ಲಿಯೂ ಕೂಡ ಯಾವ ವಿಷಯವನ್ನು ನಾವು ಹೇಗೆ ಅರ್ಥೈಸಿಕೊಳ್ಳುತ್ತೇವೆಯೋ ಅದರ ಮೇಲೆ ಸಮಾಜದ ಸ್ವಾಸ್ಥ್ಯ ಅಡಗಿರುತ್ತದೆ.
ಹಿಂದು ಧರ್ಮದಲ್ಲಿ ಅನಿಷ್ಟ ಪದ್ದತಿಗಳು ಸಾಕಷ್ಟು ಇದ್ದಾಗಲೂ ಯಾವುದೇ ತೊಂದರೆಯನ್ನು ಕಾಣದೇ ಪ್ರಗತಿಯನ್ನು ಸಾಧಿಸಿದೆ. ರಾಜರಾಮ್ ಮೋಹನ್ ರಾಯ್‌ರಂಥ ಸಮಾಜ ಸುಧಾರಕರು ಸತಿಪದ್ದತಿಯಂಥ ಘೋರಪದ್ದತಿಯನ್ನು ತೊಲಗಿಸಿದ್ದಾರೆ. ಇಂದು ಬಾಲ್ಯವಿವಾಹ, ಮಡೆಸ್ನಾನ, ವಿಧವೆಯರ ಸ್ಥಾನಮಾನ ಹೀಗೆ ಅನೇಕ ಪದ್ದತಿಗಳ ಪಟ್ಟಿ ನಮ್ಮ ಕಣ್ಣೆದುರಿಗೆ ಕಾಣುತ್ತಿವೆ. ಇದಕ್ಕೆಲ್ಲಾ ಕಾರಣ ನಮ್ಮ ಸಂಕುಚಿತ ಮನಸ್ಸೆ ಆಗಿದೆ. ನಾವು ಕೇವಲ ಸಣ್ಣ ಪರಿಧಿಯಲ್ಲಿ ಅವನ್ನೆಲ್ಲಾ ನೋಡುತ್ತಿದ್ದೇವೆಯೇ ವಿನಃ ವಿಶಾಲದೃಷ್ಠಿಯಿಂದ ನೋಡುತ್ತಿಲ್ಲ.
ವಿಧವೆಯರಿಗೆ ಉತ್ತಮ ಕಾರ್ಯಗಳಿಗೆ ಅವಕಾಶವಿಲ್ಲ ಎನ್ನುವುದನ್ನು ಹಿಂದು ಸಮಾಜ ಹೇಳುತ್ತಿದೆಯೇ? ಅಥವಾ ವಿಧವೆಯರೇ ಸಂಕುಚಿತ ಭಾವನೆಗಳಿಗೆ ಒಳಗಾಗಿ ಸಮಾಜದ ಶ್ರೇಷ್ಠ ಕಾರ್ಯಗಳಲ್ಲಿ ಭಾಗವಹಿಸುತ್ತಿಲ್ಲವೇ? ಎಂದು ಆಲೋಚಿಸಿ, ಅವರಿಗೆ ಒಂದು ಉತ್ತಮ ನೆಲೆಯನ್ನು ಕಲ್ಪಿಸಿದವರು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಜನಾರ್ಧನ ಪೂಜಾರಿ.
ಕಳೆದ ನವರಾತ್ರಿ ಸಂದರ್ಭದಲ್ಲಿ ೨,೫೦೦ ವಿಧವೆಯರಿಂದ ರಥವನ್ನು ಎಳೆಯಿಸಿ, ಅವರಿಗೂ ಕೂಡ ಬದುಕಿದೆ ಎಂದು ತೋರಿಸಿದ ಕೀರ್ತಿ ಅವರದ್ದಾಗಿದೆ. ದೀಪಾವಳಿಯ ಸಂಧರ್ಭದಲ್ಲಿಯೂ ಕೂಡ ಇಂತಹುದೇ ಕಾರ್ಯವನ್ನು ಮಾಡಿದ್ದಾರೆ. ಜನವರಿ ೧ರಂದು ಅವರು ಮತ್ತೊಮ್ಮೆ ಮಹಿಳೆಯರ ಪಾಲಿಗೆ ಸಮಾಜಸುಧಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಗಂಡ ಸತ್ತ ಬಳಿಕ ಮಹಿಳೆಗೆ ವಿಧವೆಯ ಪಟ್ಟ ಸಿಗುತ್ತದೆ. ನಂತರದ ದಿನದಲ್ಲಿ ಆಕೆ ಆಕರ್ಷಣೀಯ ಸೊತ್ತುಗಳನ್ನು ಬಳಸಿಕೊಳ್ಳುವ ಹಾಗಿಲ್ಲ ಇದು ಹಿಂದು ಧರ್ಮದಲ್ಲಿ ನಡೆದು ಬಂದ ಕ್ರಮವಾಗಿತ್ತು. ಆದರೆ ಪೂಜಾರಿಯವರು, ಮಹಿಳೆಯೂ ಗಂಡ ಸತ್ತಬಳಿಕವೂ ಮೊದಲಿನಂತೆಯೇ ಇರಬೇಕು ಹಾಗೂ ಅವರು ಸುಮಂಗಲೀಯರು ಎನ್ನುವ ನೆಲೆಯಲ್ಲಿ ಜನವರಿ ೧ರಂದು ೫,೦೦೦ಕ್ಕೂ ಹೆಚ್ಚು ಮಹಿಳೆಯರಿಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಸ್ವ-ಇಚ್ಚೆಯಿಂದ ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದಾರೆ.
``ನನ್ನ ಜೀವಿತ ಕಾಲದಲ್ಲಿ ಅಕಸ್ಮಾತ್ ನನ್ನ ಪತಿ ವಿಧಿವಶರಾದರೆ, ನನ್ನ ಪತಿ ನನಗೆ ಪ್ರೀತಿ ಹಾಗೂ ರಕ್ಷಣೆಯ ದ್ಯೋತಕವಾಗಿ ಶಾಶ್ವತವಾಗಿ ಕಟ್ಟಿದ ಮಾಂಗಲ್ಯದ ತಾಳಿಯನ್ನು ತೆಗೆಯುವುದಿಲ್ಲ. ಕಾಲುಂಗುರ, ಕುಂಕುಮ, ಬಳೆ ಹಾಗೂ ಹೂವು ಮುಂದೆಯೂ ಧರಿಸುತ್ತೇನೆ. ಧಾರ್ಮಿಕ, ಸಾಮಾಜಿಕ ಹಾಗೂ ಮನೆಮದುವೆ ಮುಂತಾದ ಶುಭಕಾರ್ಯದಲ್ಲಿ ಮುಂದೆ ನಿಂತು ಮಾತೃಸ್ವರೂಪಿಣಿ ಸ್ತ್ರೀ ಪರಂಪರೆಯ ಗೌರವವನ್ನು ಎತ್ತಿ ಹಿಡಿಯುತ್ತೇನೆ".ಎನ್ನುವ ಬೋಧನಾ ನುಡಿ.
ಗಂಡ ಸತ್ತ ನಂತರ ಪತ್ನಿ ಬಿಳಿಯ ಬಟ್ಟೆ ಧರಿಸಬೇಕು, ಹಣೆಗೆ ತಿಲಕವಿಡಬಾರದು, ಬಣ್ಣಬಣ್ಣದ ಸೀರೆ ಉಟ್ಟುಕೊಳ್ಳಬಾರದು, ಹೂ ಮುಡಿಯಬಾರದು, ಸಾಧ್ಯವಾದರೆ ಕೂದಲು ತೆಗೆಯಬೇಕು, ಗಾಜಿನ ಬಳೆ ತೊಡಬಾರದು ಇತ್ಯಾದಿ ನಿರ್ಬಂಧಗಳಿಂದ ವಿಧವೆಯರು ಹೊರಬರಬೇಕಿದ್ದರೆ ನಾವು ಮಂಗಳಸೂತ್ರ ತೆಗೆಯುವುದಿಲ್ಲ ಎನ್ನುವ ಪ್ರಮಾಣ ಮಾಡಬೇಕು. ವಿವಾಹದ ದಿನ ಕಟ್ಟಿದ ಮಂಗಳಸೂತ್ರ ಜೀವನ ಪರ್ಯಂತವಿರಬೇಕು. ಗಂಡ ಸತ್ತನೆಂದು ತೆಗೆಯುವುದು ಮೂರ್ಖತನವಾಗುತ್ತದೆ. ತಾವು ಕೂಡ ಇತರ ಮಹಿಳೆಯರಂತೆ ಸದಾ ಸುಮಂಗಲೀಯರು ಎನ್ನುವಂತ ದಿಟ್ಟತನ ತೋರಿಸಬೇಕು. ಪುರುಷ ಪ್ರಧಾನ ಸಮಾಜ ನಿಮ್ಮ ಮೇಲೆ ವಕ್ರದೃಷ್ಠಿಯನ್ನು ಹರಿಸುವುದು ತಪ್ಪುತ್ತದೆ. ಈ ರೀತಿಯಾಗಿ ಬದಲಾವಣೆ ಆಗುವುದರಿಂದ ಹೆಣ್ಣಿಗೆ ಸಮಾಜದಲ್ಲಿ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಹಾಗೂ ಗಂಡನ ಮೇಲಿನ ಪ್ರೀತಿಯನ್ನು ನಿರೂಪಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಸುಮಂಗಲೀಯರು ತಾವೂ ಗಂಡ ಸತ್ತ ಬಳಿಕ ಧಾರ್ಮಿಕ ಪೂಜೆ ಪುನಸ್ಕಾರ, ಮದುವೆ-ಮುಂಜಿಗಳಲ್ಲಿ ಭಾಗವಹಿಸಲು ಅರ್ಹರು ಎಂಬ ಸಂಕಲ್ಪ ಮಾಡಿದ್ದಾರೆ.
ಇಲ್ಲಿ ಸ್ವಾಮೀಜಿಯವರನ್ನು ದೂರುವಂಥ ಅಥವಾ ಪೂಜಾರಿಯವರನ್ನು ಹೊಗಳುವ ಕಾರ್ಯವಲ್ಲ. ಮುಖ್ಯವಾಗಿರುವುದು ಸಮಾಜ ಸುಧಾರಣೆಯಲ್ಲಿ ನಡೆದ ಮಹತ್ವದ ತಿರುವು. ಇಂಥ ಕೆಲಸವನ್ನು ಯಾರೇ ಕೈಗೊಂಡರೂ ಕೂಡ ಅವರಿಗೆ ಗೌರವ ಕೊಡಬೇಕಾದುದು ಕರ್ತವ್ಯ ಎನ್ನುವ ಮಾನವೀಯ ನೆಲೆಯಲ್ಲಿ ಈ ರೀತಿಯಾಗಿ ಹೇಳಬೇಕಾಯಿತು.
ಸಮಾಜದಲ್ಲಿರುವ ಅನಿಷ್ಟ ಪದ್ದತಿಗಳ ನಿರ್ಮೂಲನಕ್ಕೆ ಯಾವನೇ ರಾಜಕೀಯ ಅಥವಾ ಧಾರ್ಮಿಕ ಮುಖಂಡ ಪತ್ರಿಕಾ ಹೇಳಿಕೆ ನೀಡುವುದರಿಂದಲೋ ಅಥವಾ ಉಳಿದವರನ್ನು ಟೀಕೆ ಮಾಡುವುದರಿಂದಲೋ ದೂರಿಕರಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಮನದಲ್ಲಿಯೂ ಕೂಡ ಅಂತಹ ಪದ್ದತಿಯ ಒಳಿತು-ಕೆಡುಕುಗಳನ್ನು ತರ್ಕಿಸಿ ದೃಢನಿರ್ಧಾರವನ್ನು ಕೈಗೊಳ್ಳಬೇಕು. ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಬದಲಾವಣೆ ಆಗಬೇಕು. ಆಗುವಂಥ ಸಾಮರ್ಥ್ಯವಿದೆ. ಪರಿವರ್ತನೆ ಆಗದಿರುವುದು ಸಮುದ್ರದಲ್ಲಿರುವ ಬಂಡೆಮಾತ್ರ. ಮೇಲಿನ ಎರಡೂ ಘಟನೆಗಳಲ್ಲಿ ವೃಥಾ ಇನ್ನೊಬ್ಬರ ಮೇಲೆ ಗೂಬೆಕೂರಿಸುತ್ತಾ ವ್ಯವಹರಿಸುವುದಕ್ಕಿಂತ ಸುಖಿಸಮಾಜ ನಿರ್ಮಾಣಕ್ಕೆ ನಮ್ಮ ಪಾತ್ರವೇನು ಎನ್ನುವ ವಿಷಯವನ್ನು ನಾವು ಅರಿಯಬೇಕು. ನಮ್ಮ ಚಿಂತನೆ, ಆಲೋಚನೆಗಳು ಬದಲಾವಣೆಯಾದಾಗ ಅಮೂಲ್ಯಯುತವಾದ, ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ..ಈ ರೀತಿಯ ಕಾರ್ಯಗಳು ದೇಶದ ಮೂಲೆಗಳಿಗೂ ವ್ಯಾಪಿಸಲಿ...
ಕೆ.ಎಸ್.ಶೆಟ್ಟಿ

No comments:

Post a Comment