Friday, 20 April 2012
ಮಾತೃಭಾಷೆ, ಮಾತೃಭೂಮಿಯ ಮೇಲೆ ಅಭಿಮಾನಮೂಡಿಸಿಕೊಳ್ಳೋಣ....
ರಾಜ್ಯೋತ್ಸವದಂದು ಹಾಗೂ ಮುನ್ನಾದಿನ ನಡೆದ ಘಟನೆಯನ್ನಾಧರಿಸಿ ಭಾಷೆಯ ಕುರಿತು ಎರಡು ನುಡಿ...
ನವೆಂಬರ್ ೧ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಸಂಭ್ರಮ. ಕನ್ನಡಾಂಬೆಯು ಕೂಡ ಶೃಂಗಾರ ಭರಿತಳಾಗುತ್ತಾಳೆ. ಈ ತಿಂಗಳಲ್ಲಿ ಕನ್ನಡ ಪ್ರೇಮ ಚಿಗುರಿ, ಅಭಿವೃದ್ದಿಯ ಹೊಸತಾದ ಆಲೋಚನೆಗೆ ಎಡೆಮಾಡಿಕೊಟ್ಟು , ಅಡಿಪಾಯ ಹಾಕುವ ಸುವರ್ಣಾವಕಾಶವನ್ನು ನಾಡಿನ ಜನತೆಗೆ ಒದಗಿಸುತ್ತದೆ ರಾಜ್ಯದ ಮೂಲೆಯಲ್ಲಿಯೂ ಕನ್ನಡ ನಾಡು, ನುಡಿಯ ಬಗ್ಗೆ ಜನತೆ ಆನಂದದಿಂದ ಹರ್ಷೋದ್ಗಾರ ಮಾಡುತ್ತಾರೆ. ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ , ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಾರೆ. ಮೈಸೂರು ರಾಜ್ಯದ ಹೆಸರು ಕರ್ನಾಟಕ ಎಂದು ಮರುನಾಮಕರಣವಾಗಿ ಅನೇಕ ವರ್ಷಗಳೆ ಕಳೆದಿವೆ. ಹಳೆಯ ಕವಿಗಳಾದಿಯಾಗಿ ಈಗಿನ ನವಕವಿಗಳೆಲ್ಲಾ ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ಹೊಂದಿದವರೆ ಆಗಿದ್ದಾರೆ. ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.ತಮ್ಮ ದೇಹವನ್ನು ದಣಿಸಿ ಕನ್ನಡದ ಕಂಪನ್ನು ಸಾಗರದಾಚೆ ಪಸರಿಸುವುದಕ್ಕೆ ಪಟ್ಟ ಶ್ರಮ ಸಾಮಾನ್ಯವೇ?
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಬದುಕಿದು ಜಟಕಾ ಬಂಡಿ...ಎಂದು ಅಣ್ಣಾವ್ರು ಹಾಡಿದಾಗ ಕನ್ನಡ ಜನತೆ ಕನ್ನಡ ಭಾಷೆಯ ಬಗ್ಗೆ ಅಪಾರ ಅಸೆಯನ್ನು ಹೊತ್ತು, ಕುಣಿದು ಕುಪ್ಪಳಿಸುತ್ತಾರೆ.
ಕನ್ನಡದ ಕಂಪನ್ನು ಪಸರಿಸುವಲ್ಲಿ ನಮ್ಮ ಪ್ರಯತ್ನ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಅದರ ಮಹತ್ವ ತಿಳಿಯುವುದಿಲ್ಲ. ಕನ್ನಡದ ಮೇಲೆ ಅಭಿಮಾನವಿದ್ದರೆ ಸಾಲದು.ಅದನ್ನು ನಾವು ಎಷ್ಟರಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎನ್ನುವುದು ಮುಖ್ಯವಾಗಿರುತ್ತದೆ. ಪತ್ರಿಕಾ ಮಾದ್ಯಮ ಹಾಗೂ ವಿದ್ಯುನ್ಮಾನ ಮಾದ್ಯಮಗಳಿಂದ ಕನ್ನಡದ ಕಂಪನ್ನು ಮನೆಗಳಿಗೆ ತಲುಪಿಸಲು ಮಾತ್ರ ಸಾಧ್ಯ, ಅದರೆ ಅದನ್ನು ಮನೆಯಲ್ಲಿರುವ ಮನಗಳಿಗೆ ತಲುಪಿಸಿದಾಗ ಕನ್ನಡದ ಗರಿಮೆಯನ್ನು ಹೆಚ್ಚಿಸಬಹುದು.ಕನ್ನಡ ರಾಜ್ಯೋತ್ಸವವನ್ನು ಒಂದು ದಿನ ಆಚರಣೆ ಮಾಡಿದರೆ ಸಾಲದು, ಎಲ್ಲಾ ಕನ್ನಡ ಮನಸ್ಸುಗಳ ನಿತ್ಯಉತ್ಸವ ಆಗಬೇಕು.
ತಮ್ಮ . ಶ್ರೀರಾಮಚಂದ್ರ ಲಂಕಾಧೀಶ ರಾವಣನನ್ನು ಕೊಂದು, ಹಿಂತಿರುಗುವ ಸಂದರ್ಭ ತಮ್ಮನಾದ ಲಕ್ಷ್ಮಣ ಅಲ್ಲಿಯ ಸಂಪತ್ತನ್ನು ನೋಡಿ, ಅಣ್ಣಾ ಸುವರ್ಣಮಯವಾದ ಲಂಕೆಯಲ್ಲಿ ನಾವಿರೋಣ ಎಂದು ಹೇಳುತ್ತಾನೆ. ಆ ಸಂದರ್ಭದಲ್ಲಿ ರಾಮ ``ಹೇ ಲಕ್ಷ್ಮಣಾ, ಅಪೀ ಸ್ವರ್ಣಮಯಿ ಲಂಕಾ ನ ಮೇ ರೋಚತೇ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರಿಯಸಿ". ಲಂಕೆ ಎಷ್ಟು ಸುವರ್ಣಮಯವಾಗಿದ್ದರೂ, ಹೆತ್ತ ತಾಯಿ, ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು. ಅದೇ ರೀತಿ ನಮ್ಮ ಜೀವನದಲ್ಲಿಯೂ ಕೂಡ ನವಮಾಸ ಪರ್ಯಂತ ಹೊತ್ತು, ಹತ್ತನೇ ತಿಂಗಳಿಗೆ ಭೂಮಿಯ ಬೆಳಕನ್ನು ತೋರಿಸಿದ ತಾಯಿ, ಆಶ್ರಯ ನೀಡಿ ಸಲಹುತ್ತಿರುವ ಮಮತಾಮಯಿ, ಸಹನಶೀಲೆ ಭೂಮಿದೇವಿ ಹಾಗೂ ಉತ್ತಮ ಸಂಸ್ಕಾರದ ಜೊತೆಗೆ, ಸಂಬಂಧವನ್ನು ಬೆಸೆದು ಸಮಾಜದಲ್ಲಿ ವ್ಯಕ್ತಿಯನ್ನಾಗಿ ನಿರ್ಮಿಸಲು ಸಹಕಾರಿಯಾಗುವ ಮಾತೃಭಾಷೆಯ ಮೇಲೆ ಅಭಿಮಾನವಿರಬೇಕು.
ಕನ್ನಡ ರಾಜ್ಯೋತ್ಸವದಲ್ಲಿ ರಾಜಕಾರಣಿಗಳು, ಯುವಜನತೆ ಸುಂದರ ಕನ್ನಡವನ್ನು ಬಿಟ್ಟು, ಕಂಗ್ಲಿಷ್‌ನಲ್ಲಿ ಮಾತನಾಡುತ್ತಾರಲ್ಲ.ಅವರಿಗೆ ಭಾಷೆಯ ಬಗ್ಗೆ ಅಭಿಮಾನ ಇಲ್ಲವೇ? ಇಲ್ಲದಿದ್ದರೆ ಯಾಕೆ ಅಷ್ಟು ಆಡಂಬರವಾಗಿ ರಾಜ್ಯೋತ್ಸವ ಆಚರಿಸುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಅದು ತಪ್ಪಲ್ಲ ಸಂತೋಷದ ಸಂಭ್ರಮವನ್ನು ಆ ರೀತಿ ವ್ಯಕ್ತಪಡಿಸುತ್ತಾರೆ ಎಂದು ಸಂತೋಷ ಪಟ್ಟುಕೊಳ್ಳಲೇ? ಹೇಗೆ ಸಾಧ್ಯ ಸ್ವಾಮೀ..ಸಾವಿರಾರು ಬಡನೌಕರರು ನಾನಾ ಕಡೆ ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವ ಸ್ಥಿತಿಯನ್ನು ಕಲ್ಪನೆ ಮಾಡಿಕೊಂಡರೆ ಮೈ ಜುಂ ಎನ್ನುತ್ತದೆ ಹಾಗಿರುವಾಗ ನಾವೇ ಆ ಸ್ಥಿತಿಯಲ್ಲಿದ್ದರೆ ಕಲ್ಪನೆ ಮಾಡುವುದಕ್ಕೂ ಕಷ್ಟಸಾಧ್ಯ. ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಂತೋಷಕ್ಕಾಗಿ ಕುಣಿದು ಕುಪ್ಪಳಿಸುತ್ತಾರೆ ಎಂದು ಭಾವಿಸಿದರೆ,ಅದು ಶುದ್ದ ತಪ್ಪು. ಕೇವಲ ಆಡಂಬರಕ್ಕಾಗಿ ಎನ್ನುವುದು ಸ್ಪಷ್ಟ.
ರಾಜ್ಯೋತ್ಸವದ ರಾತ್ರಿ ಬೆಂಗಳೂರಿನಿಂದ ನನ್ನ ಮಿತ್ರನೊಬ್ಬ ಕರೆಮಾಡಿದ್ದ. ಅವನಲ್ಲಿ ಕ್ಷೇಮ ಸಮಚಾರದ ಬಗ್ಗೆ ವಿಚಾರಿಸಿ, ಹೇಗಿತ್ತಪ್ಪ ರಾಜ್ಯೋತ್ಸವ ಅಂತ ಕೇಳಿದರೆ.... ಹಗಲಿನಲ್ಲಿ ರಾಜ್ಯೋತ್ಸವ ಆಚರಿಸುತ್ತಾ, ಕುಣಿದು ಕುಪ್ಪಳಿಸುತ್ತಾರೆ. ಸಂಜೆ ನೋಡಿದರೆ ಅಮಲಾಸುರನ ಮನೆಯಲ್ಲಿ , ಕುಡಿದ ಮತ್ತಿನಲ್ಲಿ ತೇಲಾಡುತ್ತ ಆಂಗ್ಲಭಾಷೆಯ ಅಣಿಮುತ್ತುಗಳು ಅವರ ಬಾಯಿಂದ ಉದುರುತ್ತವೆ.ಕನ್ನಡ ಭಾಷೆ ಉಳಿಸಬೇಕು , ಅದಕ್ಕೆ ನಾವು ಹೋರಾಟ ಮಾಡುತ್ತೇವೆ ಎನ್ನುವ ಇವರು ಕೊನೆಯಲ್ಲಿ ನಾನು ಕನ್ನಡ ಲೈಕ್ ಮಾಡ್ತೆನೆ ಎನ್ನುವ ಅಚ್ಚ ಕನ್ನಡಿಗರು ಈಗ ಎಲ್ಲಾ ಕಡೆ ಬೆಳೆದಿದ್ದಾರೆ. ಇದನ್ನು ಸ್ವತಃ ನೋಡಿರುವ, ಹಳ್ಳಿಯಿಂದ ಹೊಟ್ಟೆಪಾಡಿಗಾಗಿ ಪಟ್ಟಣ ಸೇರಿ ಬಾರ್‌ನಲ್ಲಿ ನೌಕರಿ ಮಾಡುತ್ತಿರುವ ಸಣ್ಣ ಪ್ರಾಯದ ನನ್ನ ಗೆಳೆಯನ ಅಂತರಾಳದ ಮಾತು.
ಜಾಗತೀಕರಣದ ಪ್ರಭಾವದಿಂದ ಬೆಂಗಳೂರಿನಲ್ಲಿ ಅನ್ಯಭಾಷೆಯ ಜನರು ಸೇರಿ ತಮ್ಮ ಪ್ರಾಬಲ್ಯವನ್ನು ಮೆರೆಯುತ್ತಿದ್ದಾರೆ. ಅನೇಕ ಕಂಪೆನಿಗಳು ಕನ್ನಡ ನಾಡಿಗೆ ಲಗ್ಗೆ ಇಟ್ಟು ಕನ್ನಡ ಭಾಷೆಯ ಕಂಪನ್ನು ಹೊರಸೂಸಲು ಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಊಟದ ಜೊತೆ ಉಪ್ಪಿನ ಕಾಯಿ ಇದ್ದರೆ, ಅದರ ರುಚಿಯೇ ಬೇರೆ ಆದರೆ ಉಪ್ಪಿನಕಾಯಿಯೇ ಪ್ರಧಾನವಾದರೆ ಊಟದ ರುಚಿಯೇ ಕೆಡುತ್ತದೆ.
ರಾಜ್ಯೋತ್ಸವದಂದು ಉಡುಪಿಯಲ್ಲಿ ನಡೆದ ಘಟನೆಗಳು ಕನ್ನಡ ಯಾವ ಮಟ್ಟದಲ್ಲಿವೆ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ.
ಮದ್ಯಾಹ್ನದ ಉರಿಬಿಸಿಲು, ಗಂಟಲು ಒಣಗಿದ್ದರಿಂದ ಏನಾದರೂ ತಂಪು ಪಾನೀಯ ಕುಡಿಯೋಣವೆಂದು ಅಂಗಡಿಗೆ ಹೋಗಿ ನನಗೆ ಬೇಕಾದ ಪಾನೀಯ ಕೇಳಿ ಪಡೆದುಕೊಂಡು ಕುಡಿಯುತ್ತಾ ಕುಳಿತುಕೊಂಡೆ. ನನಗೆ ಪಾನೀಯ ತಂದುಕೊಟ್ಟ ಹುಡುಗ ನನಗಿಂತ ಐದಾರು ವರ್ಷ ಸಣ್ಣವನಿರಬಹುದು. ಬಡತನದ ಬೇಗೆಯಿಂದ ಬಳಲಿ ಬೆಂಡಾದ ತಂದೆ ತಾಯಿಯ ಜವಾಬ್ದಾರಿ ಹೊತ್ತು, ಕುಟುಂಬದ ಪರಿಸ್ಥಿತಿಯನ್ನು ನಿಭಾಯಿಸಲು ಅನ್ಯಮಾರ್ಗವಿಲ್ಲದೇ ಆ ಕಾಯಕದಲ್ಲಿ ತೊಡಗಿದ್ದಾನೆ ಎನ್ನುವುದು ನೋಡಿದಾಗಲೇ ತಿಳಿಯುತ್ತದೆ.
ಅದೇ ಸಮಯಕ್ಕೆ ಐದಾರು ಶಾಲೆಯ ವಿದ್ಯಾರ್ಥಿನೀಯರು ಮಾತೃಭಾಷೆ ತುಳು ಅಥವಾ ಕನ್ನಡ ಬಾರದವರ ರೀತಿ, ಆಂಗ್ಲಭಾಷೆಯಲ್ಲಿ ಐ ವಾಂಟ್ ಫಿಸ್ತಾ, ಕೋಲ್ಡ್ ಬಾದಾಮಿ, ಹಾರ್ಲೆಕ್ಸ್ ಹೀಗೆ ತಮಗೆ ಬೇಕಾದ ಪಟ್ಟಿಯನ್ನೆ ನೀಡುತ್ತಾರೆ. ಹುಡುಗ ಅನುಭವವಿರುವುದರಿಂದ ಅವರ ಪಟ್ಟಿಯಲ್ಲಿರುವ ವಸ್ತುವನ್ನು ಕೊಡುತ್ತಾನೆ. ಇಲ್ಲಿ ನನ್ನ ಸಂಶಯ ಅವನಿಗೆ ಆಂಗ್ಲಭಾಷೆ ಬರುತ್ತಿದ್ದರೆ ಆ ಅಂಗಡಿಯಲ್ಲಿ ಯಾಕೆ ಕೆಲಸ ಮಾಡುತ್ತಿದ್ದ? ತುಳು ಮಾತೃಭಾಷೆಯವರೆ ತುಳುಮಾತನಾಡದೇ ಪರಭಾಷೆಯ ವ್ಯಾಮೋಹದಿಂದ ಅದರ ದಾಸರಾಗುತ್ತಿದ್ದಾರೆ. ಆಂಗ್ಲಭಾಷೆಯೆ ನನ್ನ ಸರ್ವಸ್ವ ಎನ್ನುತ್ತಿರಬೇಕಾದರೆ ಕನ್ನಡ ಇಷ್ಟಾದರೂ ಉಳಿದಿದೆಯೆಂದು ಸಂತೋಷ ಪಡಬೇಕು.
ಸ್ವಲ್ಪ ದಿನದ ಹಿಂದೆ ಕುಂದಾಪುರದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಇಬ್ಬರು ಯುವಕರು ಯಾವುದೋ ಉತ್ತಮ ಸಂಸ್ಥೆಯಲ್ಲಿ ಕೆಲಸಮಾಡುತ್ತಿವವರಂತೆ ಕಂಡು ಬರುತ್ತಿದ್ದರು. ಪಕ್ಕದಲ್ಲಿಯೇ ನಿಂತು ಅವರ ಮಾತುಗಳನ್ನೇ ಆಲಿಸುತ್ತಿದ್ದೆ. ಸ್ವಚ್ಚ ಕನ್ನಡದಲ್ಲಿ ಯಾವುದೇ ಆಂಗ್ಲಪದಗಳ ಬಳಕೆಯಿಲ್ಲದೆ ನಿರರ್ಗಳವಾಗಿ ಮಾತನಾಡುತ್ತಿದ್ದರು.ಅದೇ ಸಂದರ್ಭದಲ್ಲಿ ಒಬ್ಬರ ಸ್ನೇಹಿತ ಬಂದಾಗ ಮಾತೃಭಾಷೆಯಲ್ಲಿ ಮಾತನಾಡಿದ್ದು ನೋಡಿ ಆಶ್ಚರ್ಯವಾಯಿತು. ಅಲ್ಲಿಯವರೆಗೆ ಕುಂದಾಪುರ ಕನ್ನಡ ಬಾರದ ಉತ್ತರ ಕರ್ನಾಟಕದ ಸ್ನೇಹಿತನಲ್ಲಿ ಶುದ್ದ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿ, ಊರಿನ ಮಿತ್ರ ಬಂದಾಗ ಮಾತೃಭಾಷೆಯ ಕಂಪನ್ನು ಹೋರಹಾಕಿದ್ದು, ಆಡಂಬರದ ರಾಜ್ಯೋತ್ಸವ ಆಚರಿಸಿ ಕುಣಿದು ಕುಪ್ಪಳಿಸುವ ಎಲ್ಲರಿಗೂ ಆದರ್ಶವಾಗುವಂತಿದೆ. ಅದನ್ನು ಕುಂದಗನ್ನಡದಲ್ಲಿಯೇ ಹೇಳಿದರೆ ಚೆನ್ನಾಗಿರುತ್ತದೆ. ಗಡೆ, ಎಲ್ಲ ಹೊಯಿದ್ಯಾ,ಉಂಡ ಆಯ್ತನಾ...ಇವತ್ ಆಟಕ್ ಹೋಪುವಾ...ನಿ ಹೋಪುದಾರೆ ನಮ್ಮನಿಗ್ ಬಾ.. ಇಲ್ದಿದ್ರೆ ಅಪ್ಪಯ್ಯ ಬಿಡುದಿಲ್ಲ ಮರಯಾ..ಆಟ ಒಳ್ಳೆಯಿತ್ತಂಬ್ರ..ಇದು ನಿಜವಾದ ಭಾಷಾಭಿಮಾನ.
ಅಕ್ಬರನ ಆಸ್ಥಾನದಲ್ಲಿ ಪಂಡಿತನೊಬ್ಬ ಬಂದು ನನ್ನ ಮಾತೃಭಾಷೆ ಯಾವುದು? ಎಂದು ಸವಾಲು ಹಾಕಿದ ಕಥೆಯನ್ನು ನಾವು ಕೇಳಿದ್ದೇವೆ. ಎಲ್ಲಾ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಅವನ ಮಾತೃಭಾಷೆಯನ್ನು ಕಂಡುಹಿಡಿಯುವುದು ಕೊಂಚ ಕಷ್ಟವೇ? ಆದರೆ ಬೀರಬಲ್ ಮಾತ್ರ ಬುದ್ದಿವಂತಿಕೆಯಿಂದ ಅವನು ಮಲಗಿರುವ ಹೊತ್ತಿನಲ್ಲಿ ಮೈಮೇಲೆ ನೀರನ್ನು ಸುರಿದು ಅವನ ಮಾತೃಭಾಷೆ ಕಂಡುಹಿಡಿಯುತ್ತಾನೆ. ಯಾವ ವ್ಯಕ್ತಿಯೇ ಆಗಲಿ ತನ್ನ ಮಾತೃಭಾಷೆಯನ್ನು ದೈನಂದಿನ ಜೀವನದಲ್ಲಿ ಬಳಸಿಕೊಂಡು, ಇತರ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸಿದಾಗಲೇ ಘನತೆ ಹೆಚ್ಚುತ್ತದೆ.ಮಾತೃಭಾಷೆ, ಮಾತೃಭೂಮಿಯ ಬಗ್ಗೆ ಅಭಿಮಾನ ಮೂಡಿದಾಗಲೇ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ.
ಕನ್ನಡ ರಾಜ್ಯೋತ್ಸವದಂದು ಮಾತ್ರವಲ್ಲದೇ ದಿನನಿತ್ಯ ಕನ್ನಡ ಮಾತನಾಡುವವರೆ ಕನ್ನಡಾಭಿಮಾನಿಗಳು. ಕನ್ನಡವೇ ಮಾತನಾಡಿದರೆ ಪ್ರಸ್ತುತ ಸಮಾಜದಲ್ಲಿ ವ್ಯವಹಾರ ಮಾಡುವುದು ಕಷ್ಟ. ಆಡಳಿತ ವ್ಯವಹಾರಕ್ಕೆ ಆಂಗ್ಲಭಾಷೆಯ ಮೊರೆಹೋದರೂ, ಸ್ಥಳ, ಸಮಯವನ್ನು ನೋಡಿ ಕನ್ನಡ ಮಾತನಾಡುವುದಕ್ಕೆ ಹಿಂಜರಿಕೆಯಾಕೆ? ನಮ್ಮ ಊರಿನಲ್ಲಿ ನಮ್ಮವರೊಂದಿಗೆ ನಮ್ಮ ಮಾತೃಭಾಷೆಯನ್ನು ಮಾತನಾಡುವುದಕ್ಕೆ ಸಂಕೋಚವೇಕೆ? ಹಿಂಜರಿಕೆ ಲಜ್ಜೆಯನ್ನು ಕಿತ್ತೊಗೆದು ಮಾತೃಭಾಷೆಯನ್ನು ಪ್ರೋತ್ಸಾಹಿಸಿದಾಗ ಕನ್ನಡವನ್ನು ಉಳಿಸಿ ಬೆಳೆಸಬಹುದು ಆಕಾಶದೆತ್ತರಕ್ಕೆ ಕನ್ನಡದ ಕಂಪನ್ನು ಪಸರಿಸಿಸೋಣ ಮತ್ತು ಮನಸ್ಸನ್ನು ಕನ್ನಡ ಭಾಷೆಗೆ ಸಂಕುಚಿತಗೊಳಿಸದೇ, ವಿಶಾಲ ದೃಷ್ಟಿಯಿಂದ ಆಲೋಚನೆ ಮಾಡೋಣ. ನಮ್ಮ ಸಂಸ್ಕೃತಿಯನ್ನು ಹಾಳುಮಾಡುವ ದುಷ್ಟಶಕ್ತಿಯನ್ನು ಹಿಮ್ಮೆಟ್ಟೊಣ....
ಸಂದೇಶ ಶೆಟ್ಟಿ ಆರ್ಡಿ
Subscribe to:
Post Comments (Atom)
No comments:
Post a Comment