Monday, 23 April 2012

ರಾಜಕೀಯ ತಂತ್ರ



ಸತ್ತಸಮಾಧಿಯ ಮೇಲೆ ಸೌಧವನ್ನು ನಿರ್ಮಿಸಲು ಹೊರಟ ನಾಯಕರುಗಳು....
ಪ್ರಥ್ವಿಯ ಆತ್ಮಹತ್ಯೆಯ ಎಳೆಯನ್ನು ಬಿಡಿಸುತ್ತಾ ಹೋದಂತೆ ಕಂಡ ನೈಜ ಘಟನೆಗಳು
ಪ್ರತಿಯೊಬ್ಬರ ಮನಸ್ಸು ಅವರ ಭಾವನೆಗಳಿಗೆ ತಕ್ಕಂತೆ ವರ್ತಿಸುತ್ತವೆ. ನೋಡುವ ದೃಷ್ಟಿಗೆ ತೆರನಾಗಿ ಪ್ರಪಂಚದಲ್ಲಿರುವ ವಸ್ತುಗಳು ಗೋಚರವಾಗುತ್ತದೆ. ಒಬ್ಬನಿಗೆ ಸುಂದರವಾಗಿ ಕಂಡ ವಸ್ತು ಮತ್ತೊಬ್ಬನಿಗೆ ಬೇಡವಾಗಬಹುದು. ಯಾರಿಗೂ ಬೇಡವೆಂದು ಬಿಸಾಡಿದ ವಸ್ತುಗಳು ಸಂಧರ್ಭಕ್ಕೆ ಅನುಸಾರವಾಗಿ ಮಹತ್ವವನ್ನು ಪಡೆಯುತ್ತದೆ. ಮಲ್ಲಿಗೆ ಹೂವು ಎಲ್ಲರಿಗೂ ಇಷ್ಟ ಹಾಗಂತ ಮಲ್ಲಿಗೆಗೆ ಬೆಲೆ ಬರುವುದು ಯಾವಾಗ ಎನ್ನುವ ವಿಷಯ ಮುಖ್ಯವಾಗಿರುತ್ತದೆ. ದಾರದೊಂದಿಗೆ ಸರಿಯಾಗಿ ಪೋಣಿಸಿದಾಗ ದೇವರ ಕಂಠವನ್ನೊ ಅಥವಾ ಹೆಣ್ಮಕ್ಕಳ ಮುಡಿಯನ್ನು ಅಲಂಕರಿಸುತ್ತದೆ. ಇಲ್ಲಿ ಗಮನಿಸಬೇಕಾದದು ದಾರದ ಮಹಿಮೆ, ಎನ್ನುವ ವಿಷಯವನ್ನು ಮರೆಯಬಾರದು.
ಪ್ರಸ್ತುತ ಸಮಾಜದಲ್ಲಿ ಯಾಕೆ ಈ ರೀತಿ ಉಪಮೆ ಎನ್ನುವ ಕುತೂಹಲ ಸಾಮಾನ್ಯ ಜನರಿಗಿರುತ್ತದೆ. ರಾಷ್ಟ್ರೀಯ ಕ್ರೀಡಾಪಟುವೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ ಸಮಾಜದಲ್ಲಿ ನಡೆದ ವಿದ್ಯಮಾನವನ್ನು ಗಮನಿಸಿದಾಗ ಇದೆಲ್ಲಾ ಕೇವಲ ಪ್ರಚಾರದ ದೃಷ್ಟಿಯಿಂದಲೋ ಅಥವಾ ಸ್ವಾರ್ಥ ಸಾಧನೆಗಾಗಿಯೋ ಎನ್ನುವ ಸಂಶಯ ಮೂಡುವುದು ಸಹಜ.ಪ್ರಥ್ವಿ ಬದುಕಿರುವಾಗ ಸಹಾಯಕ್ಕಾಗಿ, ಕಣ್ಣೆತ್ತಿಯೂ ನೋಡದ ಗಣ್ಯವ್ಯಕ್ತಿಗಳು ಸತ್ತಮೇಲೆ ಅನುಕಂಪ ಬೀರುವುದನ್ನು ಕಂಡಾಗ ಸಂಶಯದ ಅಲೆ ಮನದ ಮೂಲೆಯಲ್ಲಿ ಮೂಡಲಾರಂಬಿಸುತ್ತದೆ.
ಪ್ರತಿಯೊಂದು ಧರ್ಮದಲ್ಲಿಯೂ ಅನೇಕ ಜಾತಿಗಳಿವೆ. ಜಾತಿಯನ್ನು ಒಳಗೆ ತೂರಿಸಿ ಹೊರನೋಟಕ್ಕೆ ನಾವೆಲ್ಲಾ ಒಂದೇ ಎಂದು ಸಾರುವ ಧರ್ಮಗಳು ಅನೇಕ. ಎಲ್ಲಾ ಧರ್ಮಕ್ಕೂ ಆಧಾರವಾಗಿರುವ ಹಿಂದೂ ಧರ್ಮದಲ್ಲಿ ಮಾತ್ರ ಯಾಕೆ ಜಾತಿಯನ್ನು ಮುಂದಿಟ್ಟು, ಅವರ ಸ್ವಾರ್ಥವನ್ನು ಸಾಧಿಸುವುದಕ್ಕೆ ನೋಡುತ್ತಾರೆ. ರಾಜಕೀಯ ನಾಯಕರು, ಜಾತಿ ಮುಖಂಡರು ಜಾತಿಯನ್ನು ಮೂಲವಾಗಿರಿಸಿ ಸಮಾಧಿಯ ಮೇಲೆ ಸೌಧವನ್ನು ನಿರ್ಮಿಸಲು ತೊಡಗಿದಂತಿದೆ. ಅವರ ಆಶ್ವಾಸನೆಗಳು, ಬರಿದೆ ಆಡುವ ಪೊಳ್ಳು ಭರವಸೆಗಳಿಂದ, ಅವರಲ್ಲಿಟ್ಟಿರುವ ಘನತರವಾದ ನಂಬಿಕೆಗಳಿಗೆ ಹುಳಿಹಿಂಡಿಸಿಕೊಳ್ಳುತ್ತಿದ್ದಾರೆ.
ಪಕ್ಷದ ನಾಯಕರು ಹಾಗೂ ಜಾತಿಮುಖಂಡರು ರಾಷ್ಟ್ರೀಯ ಕ್ರೀಡಾಪಟುವೊಬ್ಬಳು ಆತ್ಮಹತ್ಯೆ ಮಾಡಿಕೊಂಡಾಗ, ಅದರ ರಹಸ್ಯವನ್ನು ಭೇದಿಸಲು ಆಡಿದ ನಾಟಕವೇ? ದಾಸರೆ ಹೇಳಿರುವ ಹಾಗೆ ಜಗವೇ ಒಂದು ನಾಟಕರಂಗ...ಅದರಲ್ಲಿ ನಾವೆಲ್ಲಾ ಪಾತ್ರಧಾರಿಗಳು, ಪರಮಾತ್ಮ ಸೂತ್ರಧಾರಿ ಎನ್ನುವುದು ಜನಗಣಿತವಾಗಿದೆ. ಇಂದಿನ ಚಟುವಟಿಕೆ ಗಮನಿಸಿದರೆ ದೇವನ ಸೂತ್ರಧಾರಿಕೆ ನಮ್ಮ ನಾಯಕರುಗಳ ಮುಂದೆ ಏನು ಅಲ್ಲ ಎನ್ನುವುದು ಸಾಮಾನ್ಯನಿಗೂ ಅರ್ಥವಾಗುತ್ತದೆ.
ದಸರಾ ಕ್ರೀಡಾಕೂಟದಲ್ಲಿ ವಿಜಯಮಾಲಿಕೆಯನ್ನು ಧರಿಸಿಬಂದ ಪ್ರಥ್ವಿ, ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ವಿಷಯ ಎಲ್ಲರಿಗೂ ಗೊತ್ತು. ಆ ಬಗ್ಗೆ ಪ್ರಸ್ತಾಪಿಸುವುದಕ್ಕೆ ವಿಷಾದವಾಗುತ್ತದೆ. ಆದರೂ ನಡೆಯುತ್ತಿರುವ ಬೆಳವಣಿಗೆ ಹಾಗೂ ಜನರು ಆಡಿಕೊಳ್ಳುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸಿಕ್ಕಿ ಹಾಕಿಕೊಳ್ಳುತ್ತಾನೆ ಎಂದು ಸಂತೋಷ ಪಡುವ ಹಾಗೆ ಇಲ್ಲ, ತಿಂಗಳಾದರೂ ಅದಕ್ಕೆ ಸಂಬಂದಪಟ್ಟ ಯಾವುದೇ ಮಾಹಿತಿಗಳು ಲಭ್ಯವಾಗದೇ ಪೋಲಿಸ್ ಸ್ಟೇಷನ್‌ನಲ್ಲಿ ಈಗಾಗಲೇ ಇದ್ದ ಹಳೆ ಪೈಲುಗಳ ಜಾಗಕ್ಕೆ ಸೇರಿರಬೇಕು ಎನ್ನುವ ತರ್ಕ ಎಲ್ಲರ ಮನಸ್ಸಿನಲ್ಲಿಯಾದರೆ ನನ್ನ ಪ್ರಶ್ನೆ ಅದಲ್ಲ....
ಜಿಲ್ಲಾ ಉಸ್ತುವಾರಿ ಸಚಿವರು ಆ ನಿಟ್ಟಿನಲ್ಲಿ ಸಮಗ್ರ ತನಿಖೆಗೆ ಆದೇಶ ನೀಡಿದ್ದರೂ, ಸಮಸ್ಯೆಯ ಎಳೆಯನ್ನು ಭೇದಿಸಲಾಗದಿರುವುದು ಪೋಲಿಸರ ವೈಫಲ್ಯವೇ? ಒಂದು ತಿಂಗಳಲ್ಲಿ ಗಣ್ಯವ್ಯಕ್ತಿಗಳು ಮಾಡಿದ ಸಾಹಸವಾದರೂ ಸಾಮಾನ್ಯವೇ? ರಾಜಕೀಯ ನಾಯಕರು, ಜಾತಿ ಮುಖಂಡರು ಹಾಗೂ ವಿದ್ಯಾರ್ಥಿ ಸಂಘಟನೆ ಆತ್ಮಹತ್ಯೆಯನ್ನು ಖಂಡಿಸಿ, ಸಮಗ್ರ ತನಿಖೆ ಹಾಗೂ ಸಿಓಡಿ ತನಿಖೆಗೆ ಒತ್ತಾಯ ಮಾಡಿದ್ದಾರೆ ಎನ್ನುವಾಗ ಸಂತೋಷ ಪಡಲೇ? ಅದು ಹೇಗೆ ಸಾಧ್ಯ. ಸಾವಿನಲ್ಲಿಯೂ ಕೂಡ ರಾಜಕೀಯದ ಸ್ವಾರ್ಥ, ಪ್ರಚಾರವನ್ನು ಬಯಸಿ ಖಂಡನೆ ಮಾಡಿರುವುದು ಹಾಗೂ ಜಾತಿಯ ಪ್ರಭುತ್ವವನ್ನು ಸಾಧಿಸುವುದಕ್ಕೆ ಮಾಡಿರುವ ಕಾರ್ಯ ಎನ್ನುವುದು ಸ್ಪಷ್ಟವಾಗುತ್ತದೆ.
ಜಾತೀಯತೆಯ ನಾಡು, ನಾವೆಲ್ಲರೂ ಒಂದು ಎಂದು ಸಾರುವ ದೇಶದಲ್ಲಿ ಪ್ರಥ್ವಿಯ ಆತ್ಮಹತ್ಯೆಯಲ್ಲಿ ಜಾತಿ ಮುಖ್ಯವಾಗಿರುತ್ತದೆಯೇ? ಕ್ರೀಡಾಪಟುವು ದೇಶದ ಸ್ವತ್ತು ಎನ್ನುವ ನಾಯಕರು, ನಮ್ಮ ಸಮಾಜದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅದನ್ನು ನಾವು ಖಂಡಿಸಬೇಕೆನ್ನುವ ಜಾತಿವಾತ್ಸಲ್ಯ....ಜಿಲ್ಲೆಯಲ್ಲಿ ಅವರದೇ ಸಮಾಜದ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಾಗ ಖಂಡಿಸಿದಿದ್ದರೆ ಪ್ರಜಾಪ್ರಭುತ್ವದಲ್ಲಿ ಜಾತೀಯತೆಯ ಮಹತ್ವ ಪಡೆಯುತ್ತಿತ್ತು. ಇಲ್ಲಿ ಇನ್ನೊಂದು ಪ್ರಶ್ನೆಯು ಕೂಡ ಉದ್ಬವವಾಗುತ್ತದೆ. ಪ್ರಥ್ವಿ ಸಮಾಜದಲ್ಲಿ ಹೆಸರು ಮಾಡಿದ್ದಾಳೆ ಎನ್ನುವ ಕಾರಣಕ್ಕಾಗಿಯೋ? ಉಳಿದವರು ತೆರೆಮರೆಯಲ್ಲಿ ಇದ್ದರು ಎನ್ನುವ ಕಾರಣವೋ? ಪ್ರಥ್ವಿ ಅಂತರಾಷ್ಟ್ರೀಯ ಕ್ರೀಡಾಪಟುವೆನ್ನುವ ಕಾರಣಕ್ಕೆ ಅವಳನ್ನು ಪ್ರೋತ್ಸಾಹಿಸಬೇಕು ಎನ್ನುವ ಮನೋಭಿಲಾಷೆ ಇದ್ದದ್ದೆ ಆದರೆ ಸತ್ತಮೇಲೆ ಅಂತ ಪ್ರೀತಿ ಯಾಕಾಗಿ? ಪೋಷಕರು ಹೇಳುವ ಹಾಗೆ ಕ್ರೀಡಾಇಲಾಖೆಯವರು ದತ್ತು ಪಡೆದಿದ್ದಾರೆ ಎಂದ ಮೇಲೆ ಅವಳ ಪೂರ್ಣ ಜವಾಬ್ದಾರಿ ಅವರ ಮೇಲಿರಲಿಲ್ಲವೇ? ಆದರೂ ಕೂಡ ಅವಳು ಹಣಕ್ಕಾಗಿ ಮನೆಯನ್ನೇ ಅವಲಂಬಿಸಿದ್ದಾಳೆಂದರೆ ದತ್ತು ಪಡೆದದ್ದಾದರೂ ಕೇವಲ ಪ್ರಚಾರಕ್ಕಾಗಿಯೇ? ಎನ್ನುವ ಪ್ರಶ್ನೆಗಳು ಮೂಡುತ್ತವೆ.
ಬದುಕಿರುವಾಗಅವಳ ಖರ್ಚಿಗೆ ಹಣ ಬೇಕೆ ಎಂದು ಕೇಳದ ನಾಯಕರು ಸತ್ತ ನಂತರ ಸಂತಾಪ ವ್ಯಕ್ತಪಡಿಸುವುದು ಮಾನವೀಯತೆಯಿಂದ ಎಂದು ಕರೆದರೂ ರಾಜಕೀಯ ಷಡ್ಯಂತ್ರ ಇಲ್ಲದೇ ಇಲ್ಲಾ. ಯಾವುದೇ ಕ್ರೀಡಾಪಟುವಿನ ಪ್ರತಿಭೆ ಗುರುತಿಸದೇ, ಜಾತಿಯೇ ಪ್ರಭಾವವನ್ನು ಬೀರುವುದಾದರೆ ಎಲ್ಲಾ ಜಾತಿಯವರಿಗೂ ಅವರ ಜಾತಿಯೇ ಮುಖ್ಯವಾಗುತ್ತದೆ. ಕ್ರೀಡೆಯನ್ನು ನಿಷ್ಪಕ್ಷಪಾತವಾಗಿ ಒಂದೇ ತಕ್ಕಡಿಯಲ್ಲಿಟ್ಟು ತುಲನೆ ಮಾಡಬೇಕು ಅದನ್ನು ಬಿಟ್ಟು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆಯನ್ನು ಸವರಿ ಸಾಚಾಗಳಂತೆ ವರ್ತಿಸುವುದು ಯಾವ ತೆರನಾದ ಮಾನವೀಯತೆ ಸ್ವಾಮೀ...!
ನಾನು ಶಾಲೆಗೆ ಹೋಗುವಾಗ ನಡೆದ ಸುಚೇತಾ ಶೆಟ್ಟಿಯ ಬಲಾತ್ಕಾರ ಮತ್ತು ಕೊಲೆಯನ್ನು ರಾಜಕೀಯದ ಚದುರಂಗದಾಟಕ್ಕೆ ದಾಳವನ್ನಾಗಿ ಬಳಸಿ, ಶಾಸಕರಾದದ್ದು ಹಾಗೆ ಮುಂದಿನ ಅವಧಿಯಲ್ಲಿ ವಿರೋಧ ಪಕ್ಷಗಳು ಅದೇ ವಿಷಯವನ್ನು ಪ್ರಸ್ತಾಪ ಮಾಡಿ ವಿಧಾನಸಭೆಗೆ ಆಯ್ಕೆ ಆದದ್ದು ಜನರು ಇನ್ನು ಮರೆತಿಲ್ಲ.
ಹಿಂದು ಸಮಾಜದಲ್ಲಿ ಹುಟ್ಟಿದ ಹುಡುಗಿ, ಸಂಪ್ರದಾಯಸ್ಥ ಮನೆತನದ ದೈವಭಕ್ತ ತಂದೆತಾಯಿಯ ಮಗಳ ಕೊರಳಲ್ಲಿ ಶಿಲುಬೆಯನ್ನು ಹೊಂದಿದ್ದ ಸರವಿತ್ತಂತೆ? ಅವಳ ಮೊಬೈಲಿಗೆ ಕರೆ ಮಾಡುತ್ತಿದ್ದ ಅನ್ಯಮತೀಯನ ಜೊತೆ ಪ್ರೇಮವಿತ್ತಂತೆ? ಅವನನ್ನು ಬಂದಿಸಿ ನಂತರದ ಎರಡೆ ದಿನದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ರಾಜಾರೋಷವಾಗಿ ತಿರುಗಾಡುತ್ತಿದ್ದಾನಂತೆ? ಚರ್ಚಿನ ಧರ್ಮಗುರುಗಳು ತಡರಾತ್ರಿಯಲ್ಲೂ ಲೇಡಿಸ್ ಹಾಸ್ಟೆಲ್‌ಗೆ ಬರುತ್ತಿದ್ದರಂತೆ? ಇಲ್ಲಿ ಕಾಲೇಜ್ ಹಾಗೂ ಹಾಸ್ಟೆಲ್ ವಾರ್ಡನ್ ಕೈವಾಡ ಇದೆಯಂತೆ? ಹೀಗೆ ಅನೇಕ ಅಂತೆ ಕಂತೆಗಳ ವಿಚಾರಗಳನ್ನು ಹಿಡಿದು ರಾಜಕೀಯ ನಾಯಕರು, ಜಾತಿ ಮುಖಂಡರು ಹಾಗೂ ವಿದ್ಯಾರ್ಥಿ ಸಂಘಟನೆ ಹೊರಾಡುತ್ತಿದ್ದರೆ, ಮಹಿಳಾ ಹಕ್ಕುಗಳಿಗಾಗಿ ಹೋರಾಟ ಮಾಡಿ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುವ ಮಹಿಳಾ ಸಂಘಟನೆ ಪ್ರಗತಿಪರ ಹಣೆಪಟ್ಟಿ ಹೊತ್ತಿರುವ ಸಂಘಟನೆಗಳು ಮತ್ತು ಬುದ್ದಿಜೀವಿಗಳು ಪ್ರಥ್ವಿಯ ಆತ್ಮಹತ್ಯೆಯ ವಿಚಾರದಲ್ಲಿ ನಿರಾಶಭಾವನೆ ತಾಳಿ ತಟಸ್ಥರಾಗಿರುವುದಾದರೂ ಯಾಕೆ? ಮಹಿಳೆಯ ಧ್ವನಿಯಿಲ್ಲದ ಧ್ವನಿಯಿಂದ ಸಮಾಜದಲ್ಲಿ ತನ್ನ ಹಕ್ಕುಗಳಿಗಾಗಿ ಹೋರಾಡಿದ ಮಹಿಳೆ ಎಷ್ಟು ಹೋರಾಡಿದರೂ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತಿಲ್ಲ ಎನ್ನುವ ಅಸಹಾಯಕತೆಯಂದಲೋ? ಅಥವಾ ರಾಜಕೀಯದ ಚದುರಂಗದಾಟದಲ್ಲಿ ತನ್ನ ಧ್ವನಿಪೆಟ್ಟಿಗೆಯಿಂದ ಧ್ವನಿ ಹೊರಬಂದರೂ, ಅದು ಪಸರಿಸದಂತೆ ತಡೆಗೋಡೆ ಒಡ್ಡುತ್ತಾರೆ ಎನ್ನುವ ನೈಜತೆಯಿಂದಲೋ? ಯಾವುದು ಸ್ಪಷ್ಟವಾಗಿಲ್ಲ.
ಆತ್ಮಹತ್ಯೆ ಎನ್ನುವುದು ಮಹಾಪಾಪ ಎನ್ನುವುದು ಗೊತ್ತಿದ್ದರೂ, ಯಾವುದೋ ಒತ್ತಡಕ್ಕೆ ಸಿಲುಕಿ, ಸಂಕುಚಿತ ಭಾವನೆಗೆ ಒಳಗಾಗಿ, ಇನ್ನು ಮುಂದೆ ತನಗೆ ಉಳಿಗಾಲವಿಲ್ಲವೆನ್ನುವ ಮನಸ್ಥಿತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂಥವರಿಗೆ ಸಮಾಜದಲ್ಲಿ ಸ್ಥಾನಮಾನ ಸಿಗುತ್ತದೆಯೇ ಎಂದಾಗ ಉತ್ತರ ಮಾತ್ರ ಶೂನ್ಯ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಲಿಗಳು ಹಾಗೂ ಗಡಿಗಳಲ್ಲಿ ಹೋರಾಡಿದ ವೀರಯೋಧರನ್ನೆ ನೆನಪು ಮಾಡಿಕೊಳ್ಳದ ಜನತೆ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸ್ಮರಿಸುತ್ತಾ ಕಾಲಹರಣ ಮಾಡುವ ಔದಾರ್ಯವನ್ನು ತೋರಿಯಾರೆ? ಸತ್ತು ಉತ್ತರ ಕ್ರಿಯೆಗಳು ಮುಗಿಯುವ ಮುನ್ನವೇ ಘಟನೆಯನ್ನು ಮರೆಯುವ ಒತ್ತಡದ ಸಮಾಜದಲ್ಲಿದ್ದೇವೆ.
ಜೇಡರ ಬಲೆ, ಧೂಳುಗಳಿಂದ ಆವೃತವಾದ ಸತ್ತ ತಂದೆ ತಾಯಿಯ ಭಾವಚಿತ್ರವನ್ನು ಸ್ವಚ್ಚಮಾಡದ ಮಕ್ಕಳು, ಚುನಾವಣೆ ಸಂದರ್ಭ ರಾಜಕೀಯ ನಾಯಕರ(ಇಂದಿರಾಗಾಂಧಿ,ರಾಜೀವಗಾಂಧಿ) ಭಾವಚಿತ್ರವನ್ನು ಸ್ವಚ್ಚತೆ ಮಾಡುವ ನಾಯಕರೆ ಸಮಾಜದಲ್ಲಿ ತುಂಬಿರುವಾಗ, ಪ್ರಥ್ವಿಯ ವಿಚಾರದಲ್ಲಿ ಪೋಷಕರಿಗೆ ನ್ಯಾಯ ಒದಗಿಸುತ್ತೇನೆ ಎಂದು ಹೋರಾಡಲು ಸಾಧ್ಯವೇ?ನಂಬಿಕೆಯನ್ನು ಕಳೆದುಕೊಂಡ ನಾಯಕರು ಸಾಂತ್ವಾನ ಮಾಡುವುದು ಮರುಚುನಾವಣೆ ಬಂತೆನ್ನುವ ಸೂಚನೆಯಲ್ಲವೆ?
ಎಲ್ಲಾ ಪಕ್ಷದವರು ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುತ್ತಾ ತಮ್ಮ ರಾಜಕೀಯದ ಸೌಧ ನಿರ್ಮಾಣಕ್ಕೆ ಬಡಪಾಯಿಗಳ ಸಮಾಧಿಯೇ ಆಗಬೇಕೆ? ನಾಯಕರೇ ನಿಜವಾಗಿ ನೀವು ಮಾನವೀಯತೆಯಿಂದ ಈ ಕಾರ್ಯ ಮಾಡಿದ್ದೆ ಆದರೆ ಜಿಲ್ಲೆಯಲ್ಲಿ ಅನೇಕ ಬಡಪ್ರತಿಭೆಗಳು ಪ್ರಯಾಣದ ಭತ್ಯೆಯನ್ನು ಭರಿಸಲಾಗದೆ ಹಾಗೂ ಉತ್ತಮ ತರಭೇತಿಯನ್ನು ಪಡೆಯಲಾಗದೆ ಕರಟಿ ಕಮರಿ ಹೋಗುವ ಸ್ಥಿತಿಯಲ್ಲಿದ್ದಾರೆ. ಅನೇಕ ಅರಳುವ ಪ್ರತಿಭೆಗಳು, ವಿಶೇಷ ಮಕ್ಕಳು ಹಳ್ಳಿಯಲ್ಲಿದ್ದಾರೆ ಅವರಿಗೆ ಸಹಾಯಹಸ್ತ ನೀಡಿದರೆ ಒಂದು ಮಹತ್ಕಾರ್ಯ ಮಾಡಿದಂತಾಗುತ್ತದೆ. ಹಸಿ ಮಡಕೆಯ ಮೇಲೆ ರಚಿಸಿದ ಚಿತ್ರವಿಚಿತ್ರ ರೇಖೆಗಳು ಮಡಕೆಯನ್ನು ಸುಟ್ಟಾಗಲು ಹೇಗೆ ಅಚ್ಚಳಿಯದೇ ಉಳಿಯುತ್ತದೋ..ಚಿಕ್ಕ ವಯಸ್ಸಿನಲ್ಲಿ ಮಾಡಿದ ಸಹಾಯ ನೆನಪಿಟ್ಟುಕೊಳ್ಳುತ್ತಾರೆ ಅವರಿಗೆ ಸಹಾಯ ಮಾಡಿ, ಅವರ ಬಾಳಿನಲ್ಲಿ ಬೆಳಕಾಗಿ....ಇನ್ನಾದರೂ ಅನೇಕ ಕಂದಮ್ಮಗಳ ಆತ್ಮಹತ್ಯೆ ಹಾಗೂ ಕೊಲೆಯ ಚಿದಂಬರ ರಹಸ್ಯ ಹೊರಬಿಳುವುದೇ?
ಕೊನೆಯ ಮಾತು:ಏಳಿ ಏಳಿ ಎಚ್ಚರಾಗಿ ಕನಸು ಕಂಗಳೆ... ಸಮಾಜ ಘಾತಕರನ್ನು ಮಟ್ಟಹಾಕಲು ಸಮಾಜಘಾತುಕ ವಿಷಯಗಳನ್ನು ಬಹಿರಂಗಪಡಿಸೋಣ...

No comments:

Post a Comment