Thursday 1 November 2012

ಮನೆ-ಮನೆಯಲ್ಲೂ ಪ್ರತಿಕ್ಷಣ ಕನ್ನಡದ ಕಂಪನ್ನು ಪಸರಿಸಿ...
ಮಾತೃಭಾಷೆಯ ಅಭಿಮಾನವೇ ನಮ್ಮ ನಾಡು, ನುಡಿಯ ರಕ್ಷಣೆಗೆ ಪ್ರೇರಕ ಶಕ್ತಿ:

೧೯೫೬ ನವೆಂಬರ್ ೧ರಂದು ಕರ್ನಾಟಕ ಏಕೀಕರಣವಾಯಿತು. ಕನ್ನಡ  ಮಾತನಾಡುವವರಿಗೆಂದೆ ಪ್ರತ್ಯೇಕ ರಾಜ್ಯ ರಚನೆಯಾಗಿ ಕರ್ನಾಟಕ ಎನ್ನುವ ಹೆಸರು ಇಟ್ಟಾಯಿತು. ಐದೂವರೆ ದಶಕಗಳೇ ಕಳೆದರೂ ಇಂದಿಗೂ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ ಎಂದು ಬೊಬ್ಬೆ ಇಡುತ್ತಿದ್ದೇವೆ. ಯಾಕೆ ಸಿಕ್ಕಿಲ್ಲ ಎನ್ನುವ ಕುರಿತಂತೆ ಯಾರು ಕೂಡ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಈ ಸಂದರ್ಭ ಮಾತೃಭಾಷಾ ದಿನವನ್ನು ನೆನಪು ಮಾಡಿಕೊಳ್ಳುವುದಕ್ಕೂ ಕಾರಣವಿದೆ. ನವೆಂಬರ್‌ನ್ನು ಕನ್ನಡ ಮಾಸವೆಂದು ಆಚರಣೆ ಮಾಡಲಾಗುತ್ತದೆ. ಮಾತೃಭಾಷೆಗಾಗಿ ಹುತಾತ್ಮರಾದವರನ್ನು ಇದೇ ಸಂದರ್ಭದಲ್ಲಿ ನೆನಪಿಸಿ ಕೊಳ್ಳುತ್ತಿದ್ದೇವೆ. ಮಾತೃಭಾಷೆಗಾಗಿ ಹುತಾತ್ಮರಾದವರನ್ನು ನೆನಪಿಸಿಕೊಂಡು ನಮ್ಮ ಮಾತೃಭಾಷೆಯ ಉಳಿವಿಗಾಗಿ ನಾವೇನು ಮಾಡುತ್ತಿದ್ದೇವೆ ಎನ್ನುವ ಚಿಂತನೆಗೆ ಸಾರಣೆ ಹಚ್ಚುವುದಕ್ಕೆ ಇದು ಸಕಾಲವೆನ್ನುವುದು ನನ್ನ ಭಾವನೆ.
ಭಾಷೆ ಒಂದು ಸಂವಹನ ಮಾಧ್ಯಮವಾಗಿರದೆ ಭಾವಾಭಿವ್ಯಕ್ತಿಯ ಸಾಧನವು ಹೌದು. ಪ್ರತಿಯೊರ್ವರ ಬದುಕಿನಲ್ಲಿಯೂ ಭಾಷೆಯ ಪಾತ್ರ ಅಪಾರವಾಗಿದೆ. ಅದಿಲ್ಲವಾಗಿದ್ದರೆ ಒಂದು ಭಾಷೆಗಾಗಿ ಜೀವ ನೀಡುವ ಬಾಂಧವ್ಯ ಬೆಳೆಯುತ್ತಿರಲಿಲ್ಲ. ಕನ್ನಡ ಬಗ್ಗೆ ನಮ್ಮಲ್ಲಿ ಅಂಥ ಬಾಂಧವ್ಯ ಬೆಳೆಯುವುದು ಯಾವಾಗ? ಎನ್ನುವುದು ಪ್ರಶ್ನೆಯಾಗಿ ಉಳಿದಿದೆ ಅಲ್ಲವೇ?
ಅದು ಏನೆ ಇರಲಿ..ಈ ವರ್ಷ ನಿಘಂಟು ತಜ್ಞ ಹಿರಿಯ ಸಾಹಿತಿ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಜನ್ಮಶತಾಮಾನೋತ್ಸವ ಆಚರಿಸಿಕೊಂಡರು. ಶತಾಯುಷಿ ಸುಬ್ಬಯ್ಯ ಮಾತನಾಡುತ್ತಾ ಕರ್ನಾಟಕದಲ್ಲಿ ಕನ್ನಡ ಉಳಿಯಬೇಕಾದರೆ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ನಿಷೇದಿಸಬೇಕು ಎನ್ನುವ ಹೇಳಿಕೆ ನೀಡಿದ್ದರು. ಯಾರೋ ತಥಾಕಥಿತ ಸಾಹಿತಿಗಳೋ, ಕನ್ನಡ ಪರ ಹೋರಾಟಗಾರರೋ ಹೇಳಿದ್ದರೆ ಅದೊಂದು ಗಂಭೀರ ಸಮಸ್ಯೆಯೇ ಆಗುತ್ತಿರಲಿಲ್ಲ. ಆದರೆ ಇಂಥ ಆತಂಕ ವ್ಯಕ್ತಪಡಿಸಿದ್ದು ಕನ್ನಡದ ಬಗ್ಗೆ ಪ್ರಾಮಾಣಿಕ ಕಳಕಳಿ ಇರುವ ಹಾಗೂ ಕನ್ನಡಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿರುವ ಶತಮಾನಗಳಿಂದ ಕನ್ನಡದ ಆಗು ಹೋಗುಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಒಬ್ಬ ಪಕ್ಕಾ ಕನ್ನಡಿಗ ವೆಂಕಟಸುಬ್ಬಯ್ಯ.
ಇತ್ತೀಚಿಗೆ ರಾಜ್ಯ ಸಚಿವರಿಬ್ಬರು ಕನ್ನಡ ನಾಡಿನ ಕುರಿತು ಯಾರು ಕೂಡ ಅರಗಿಸಿಕೊಳ್ಳಲಾಗದ ಹೇಳಿಕೆ ನೀಡಿದ್ದಾರೆ. ಉಮೇಶ ಕತ್ತಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಣೆ ಮಾಡಬೇಕು ಎನ್ನುವ ಉದಾರವಾದ ಹೇಳಿಕೆ ನೀಡಿದರೆ ಆನಂದ ಅಸ್ನೋಟಿಕರ್ ಕಾರವಾರವನ್ನು ಗೋವಾಕ್ಕೆ ಸೇರಿಸಬೇಕು ಎನ್ನುವುದಾಗಿ ಹೇಳಿದ್ದರು. ಮಂತ್ರಿಗಳಾದವರೆ ಈ ರೀತಿಯಾಗಿ ಕರ್ನಾಟಕವನ್ನು ಒಡೆಯುವ ರಾಜಕೀಯ ಮಾಡುತ್ತಿರುವುದನ್ನು ನೋಡಿದಾಗ ನಮ್ಮ ರಾಜಧಾನಿಯ ಪರಿಸ್ಥಿತಿ ಹೇಗಿರಬೇಕು ಅಲ್ಲವೇ? ಕರುನಾಡಿನ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವನ್ನೇ ಆಡುಭಾಷೆಯನ್ನಾಗಿ ಮಾತನಾಡುವವರ ಸಂಖ್ಯೆ ಶೇ.೩೦ ಮಾತ್ರ ಎನ್ನುವುದನ್ನು ವೆಂಕಟಸುಬ್ಬಯ್ಯ ಹೇಳಿದ್ದರು. ಒಂದು ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಕೇಂದ್ರಸ್ಥಳವಾದ ರಾಜಧಾನಿಯಲ್ಲೆ ಮಾತೃಭಾಷೆ ಮೂಲೆಗುಂಪಾಗುತ್ತಿರುವುದು ತೀರಾ ಗಂಬೀರ ವಿಷಯ ಎನ್ನುವುದು ಅವರ ಆತಂಕವಾಗಿತ್ತು.
ಇಷ್ಟೆಲ್ಲಾ ಆತಂಕದ ನಡುವೆಯೂ ನ. ೧ ಕರ್ನಾಟಕದ ಜನತೆಗೆ ಎಲ್ಲಿಲ್ಲದ ಸಂಭ್ರಮ. ಕನ್ನಡಾಂಬೆಯು ಕೂಡ ಶೃಂಗಾರ ಭರಿತಳಾಗಿದ್ದಾಳೆ. ಈ ತಿಂಗಳಲ್ಲಿ ಕನ್ನಡ ಪ್ರೇಮ ಚಿಗುರಿ, ಅಭಿವೃದ್ದಿಯ ಹೊಸತಾದ ಆಲೋಚನೆಗೆ ಎಡೆಮಾಡಿಕೊಟ್ಟು , ಅಡಿಪಾಯ ಹಾಕುವ ಸುವರ್ಣಾವಕಾಶವನ್ನು ನಾಡಿನ ಜನತೆಗೆ ಒದಗಿಸುತ್ತದೆ. ರಾಜ್ಯದ ಮೂಲೆಯಲ್ಲಿಯೂ ಕನ್ನಡ ನಾಡು, ನುಡಿಯ ಬಗ್ಗೆ ಜನತೆ ಆನಂದದಿಂದ ಹರ್ಷೋದ್ಗಾರ ಮಾಡುತ್ತಾರೆ. ಮೈಸೂರು ರಾಜ್ಯದ ಹೆಸರು ಕರ್ನಾಟಕ ಎಂದು ಮರು ನಾಮಕರಣವಾಗಿ ೫೬ ವರ್ಷಗಳು ಸಂದಿವೆ. ಹಳೆಯ ಕವಿಗಳಾದಿಯಾಗಿ ನವಕವಿಗಳೆಲ್ಲಾ ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ಹೊಂದಿದವರೆ ಆಗಿದ್ದಾರೆ. ಕನ್ನಡಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ತಮ್ಮ ದೇಹವನ್ನು ದಣಿಸಿ ಕನ್ನಡದ ಕಂಪನ್ನು ಸಾಗರದಾಚೆ ಪಸರಿಸುವುದಕ್ಕೆ ಪಟ್ಟ ಶ್ರಮ ಸಾಮಾನ್ಯವೇ?
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು ಬದುಕಿದು ಜಟಕಾ ಬಂಡಿ...ಎಂದು ಅಣ್ಣಾವ್ರು ಹಾಡಿದಾಗ ಕನ್ನಡ ಜನತೆ ನಾಡಿನಾದ್ಯಂತ ಕುಣಿದು ಕುಪ್ಪಳಿಸಿದ್ದಾರೆ. ಕನ್ನಡದ ಕಂಪನ್ನು ಪಸರಿಸುವಲ್ಲಿ ನಮ್ಮ ಪ್ರಯತ್ನ ಮುಖ್ಯವಾಗಿರುತ್ತದೆ. ಇಲ್ಲದಿದ್ದರೆ ಅದರ ಮಹತ್ವವೂ ನಮಗೆ ತಿಳಿಯುವುದಿಲ್ಲ. ಕನ್ನಡದ ಮೇಲೆ ಅಭಿಮಾನವಿದ್ದರೆ ಸಾಲದು. ಅದನ್ನು ನಾವು ಎಷ್ಟರಮಟ್ಟಿಗೆ ಜೀವನದಲ್ಲಿ ಅಳವಡಿಸಿ ಕೊಂಡಿದ್ದೇವೆ ಎನ್ನುವುದು ಮುಖ್ಯ. ಕನ್ನಡ ಪತ್ರಿಕಾ ಮಾದ್ಯಮದಿಂದ ಕನ್ನಡದ ಕಂಪನ್ನು ಮನೆಗಳಿಗೆ ತಲುಪಿಸಲು ಮಾತ್ರ ಸಾಧ್ಯ, ಅದರೆ ಅದು ಮನೆಯಲ್ಲಿರುವ ಮನಗಳಿಗೆ ತಲುಪಿಸಿದಾಗ ಕನ್ನಡದ ಗರಿಮೆ ಹೆಚ್ಚಿಸ ಬಹುದು. ಕನ್ನಡ ರಾಜ್ಯೋತ್ಸವ ಒಂದು ದಿನ ಆಚರಣೆ ಮಾಡಿದರೆ ಸಾಲದು, ಎಲ್ಲಾ ಕನ್ನಡ ಮನಸ್ಸುಗಳ ನಿತ್ಯ ಉತ್ಸವ ಆಗಬೇಕು.
ರಾಮಾಯಣದಲ್ಲಿ  ಶ್ರೀರಾಮನು ಲಂಕಾಧೀಶ ರಾವಣನನ್ನು ಕೊಂದು, ಹಿಂತಿರುಗುವ ಸಂದರ್ಭ ತಮ್ಮನಾದ ಲಕ್ಷ್ಮಣ ಅಲ್ಲಿಯ ಸಂಪತ್ತನ್ನು ನೋಡಿ, ಅಣ್ಣಾ ಸುವರ್ಣಮಯವಾದ ಲಂಕೆಯಲ್ಲಿ ನಾವಿರೋಣ ಎಂದು ಬಿನ್ನವಿಸಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ರಾಮ 
“ಹೇ ಲಕ್ಷ್ಮಣಾ, ಅಪೀ ಸ್ವರ್ಣಮಯಿ ಲಂಕಾ ನ ಮೇ ರೋಚತೇ |
                     ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರಿಯಸಿ || 
ಲಂಕೆ ಎಷ್ಟು ಸುವರ್ಣಮಯವಾಗಿದ್ದರೂ, ಹೆತ್ತ ತಾಯಿ, ಹೊತ್ತ ನೆಲ ಸ್ವರ್ಗಕ್ಕಿಂತಲೂ ಮಿಗಿಲು. ಅದೇ ರೀತಿ ನಮ್ಮ ಜೀವನದಲ್ಲಿಯೂ ಕೂಡ ನವಮಾಸ ಪರ್ಯಂತ ಹೊತ್ತು, ಹತ್ತನೇ ತಿಂಗಳಿಗೆ ಭೂಮಿಯ ಬೆಳಕನ್ನು ತೋರಿಸಿದ ತಾಯಿ, ಆಶ್ರಯ ನೀಡಿ ಸಲಹುತ್ತಿರುವ ಮಮತಾಮಯಿ, ಸಹನಶೀಲೆ ಭೂಮಿದೇವಿ ಹಾಗೂ ಉತ್ತಮ ಸಂಸ್ಕಾರದ ಜೊತೆಗೆ, ಸಂಬಂಧವನ್ನು ಬೆಸೆದು ಸಮಾಜದಲ್ಲಿ ವ್ಯಕ್ತಿಯನ್ನಾಗಿ ನಿರ್ಮಿಸಲು ಸಹಕಾರಿಯಾಗುವ ಮಾತೃಭಾಷೆಯ ಮೇಲೆ ಅಭಿಮಾನವಿರಬೇಕಲ್ಲವೇ?
ಆದರೆ ಕನ್ನಡ ರಾಜ್ಯೋತ್ಸವದಲ್ಲಿ ರಾಜಕಾರಣಿಗಳು, ಯುವಜನತೆ ಸುಂದರ ಕನ್ನಡವನ್ನು ಬಿಟ್ಟು, ಕಂಗ್ಲಿಷ್‌ನಲ್ಲಿ ಮಾತನಾಡುತ್ತಾರಲ್ಲ.ಅವರಿಗೆ ಭಾಷೆಯ ಬಗ್ಗೆ ಅಭಿಮಾನ ಇಲ್ಲವೇ? ಇಲ್ಲದಿದ್ದರೆ ಯಾಕೆ ಅಷ್ಟು ಆಡಂಬರವಾಗಿ ರಾಜ್ಯೋತ್ಸವ ಆಚರಿಸುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಅದು ತಪ್ಪಲ್ಲ ಸಂತೋಷದ ಸಂಭ್ರಮ ಆ ರೀತಿ ವ್ಯಕ್ತಪಡಿಸುತ್ತಾರೆ ಎಂದು ಸಂತೋಷ ಪಟ್ಟುಕೊಳ್ಳಲೇ? ಹೇಗೆ ಸಾಧ್ಯ ಸ್ವಾಮೀ..ಸಾವಿರಾರು ಬಡನೌಕರರು ನಾನಾ ಕಡೆ ಸುಡುವ ಬಿಸಿಲಿನಲ್ಲಿ ಕೆಲಸ ಮಾಡುವ ಸ್ಥಿತಿಯನ್ನು ಕಲ್ಪಸಿಕೊಳ್ಳಲು ಸಾದ್ಯವಿಲ್ಲ. ದಿನನಿತ್ಯ ಹವಾನಿಯಂತ್ರಿತ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುವ ನಾವು ಆ ಸ್ಥಿತಿಯಲ್ಲಿದ್ದರೆ ಅಬ್ಬಾ  ಕಲ್ಪನೆ ಮಾಡುವುದಕ್ಕೂ ಅಸಾಧ್ಯ? ಮನಸ್ಸಿನ ಭಾವನೆ ಅಭಿವ್ಯಕ್ತಗೊಳಿಸಲು ಕುಣಿದು ಕುಪ್ಪಳಿಸುತ್ತಾರೆ ಎಂದು ಭಾವಿಸಿದರೆ, ಅದು ನಮ್ಮ ತಪ್ಪು ಕಲ್ಪನೆ. ಇದು ಕೇವಲ ಆಡಂಬರಕ್ಕಾಗಿ ಎನ್ನುವುದು ಸ್ಪಷ್ಟ.
ನ.೧ರಂದು ನನ್ನ ಆಪ್ತಮಿತ್ರ ಬೆಂಗಳೂರಿನಿಂದ ಕರೆ ಮಾಡಿದ್ದ. ಅವನಲ್ಲಿ ಕ್ಷೇಮ ಸಮಚಾರದ ಬಗ್ಗೆ ವಿಚಾರಿಸಿ, ಹೇಗಿತ್ತಪ್ಪ ರಾಜ್ಯೋತ್ಸವ ಅಂತ ಕೇಳಿದರೆ.... ಹಗಲಿನಲ್ಲಿ ರಾಜ್ಯೋತ್ಸವ ಆಚರಿಸುತ್ತಾ, ಕುಣಿದು ಕುಪ್ಪಳಿಸುತ್ತಾರೆ. ಸಂಜೆ ನೋಡಿದರೆ ಅಮಲಾಸುರನ ಮನೆಯಲ್ಲಿ , ಕುಡಿದ ಮತ್ತಿನಲ್ಲಿ ತೇಲಾಡುತ್ತ ಆಂಗ್ಲಭಾಷೆಯ ಅಣಿಮುತ್ತುಗಳು ಅವರ ಬಾಯಿಂದ ಉದುರುತ್ತವೆ. ಕನ್ನಡ ಭಾಷೆ ಉಳಿಸಬೇಕು, ಅದಕ್ಕೆ ನಾವು ಹೋರಾಟ ಮಾಡುತ್ತೇವೆ ಎನ್ನುವ ಇವರು ಕೊನೆಯಲ್ಲಿ ನಾನು ಕನ್ನಡ ಲೈಕ್ ಮಾಡ್ತೆನೆ ಎನ್ನುವ ಕಂಗ್ಲೀಷ್‌ಕನ್ನಡಿಗರು ಈಗ ಎಲ್ಲೆಡೆಯಿದ್ದಾರೆ. ರಾಜ್ಯೋತ್ಸವ ಸಂಭ್ರಮವನ್ನು ಕಣ್ಣಾರೆ ನೋಡಿದ ಹಳ್ಳಿಯಿಂದ ಹೊಟ್ಟೆಪಾಡಿಗಾಗಿ ಪಟ್ಟಣ ಸೇರಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿರುವ ಸಣ್ಣ ಪ್ರಾಯದ ನನ್ನ ಮಿತ್ರನ ಅಂತರಾಳದ ಮಾತಿವು. 
ಜಾಗತೀಕರಣದ ಪ್ರಭಾವವಾದ್ದರಿಂದ ರಾಜಧಾನಿಯಲ್ಲಿ ಅನ್ಯಭಾಷಿಗರು ತಮ್ಮ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಅನೇಕ ಕಂಪೆನಿಗಳು ಕನ್ನಡ ನಾಡಿಗೆ ಲಗ್ಗೆ ಇಟ್ಟ ಪರಿಣಾಮ ಕನ್ನಡಿಗರಿಗೆ ಕನ್ನಡ ಭಾಷೆಯ ಕಂಪನ್ನು ಹೊರಸೂಸಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಊಟದ ಜೊತೆ ಉಪ್ಪಿನ ಕಾಯಿ ಇದ್ದರೆ, ಅದರ ರುಚಿಯೇ ಬೇರೆ ಆದರೆ ಉಪ್ಪಿನಕಾಯಿಯೇ ಪ್ರಧಾನವಾದರೆ ಊಟದ ರುಚಿಯೇ ಕೆಡುತ್ತದೆ. ರಾಜಧಾನಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈಗ ಕನ್ನಡ ಮಾತನಾಡುವವರೆ ವಿರಳ ಎಂಬಂತಾಗಿದೆ. ಬೆಂಗಳೂರಿನಲ್ಲಿ ತಮಿಳು, ತೆಲುಗು, ಮಲೆಯಾಳಂ, ಇಂಗ್ಲೀಷ್, ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಬೆಂಗಳೂರನ್ನೊಮ್ಮೆ ಸುತ್ತು ಹೊಡೆದರೆ ಮಾತೃಭಾಷೆ ಯಾವುದೆಂದು ಕನ್ನಡಿಗರಿಗೆ ಗೊಂದಲವಾಗುತ್ತದೆ. ಅತ್ತ ಬೆಳಗಾವಿಗೆ ಹೋದರೆ ಮರಾಠಿ, ಕಾರವಾರಕ್ಕೆ ಹೋದರೆ ಕೊಂಕಣಿ, ಕಾಸರಗೋಡಿನಲ್ಲಂತೂ ಮಲೆಯಾಳಂ, ಗುಲ್ಬರ್ಗಾ ಕಡೆ ಹೋದರೆ ಉರ್ದು ಹಿಂದಿ...ಕರ್ನಾಟಕದಲ್ಲಿ ಬದುಕಬೇಕೆಂದರೆ ಕನ್ನಡವೇ ಬೇಕೆನ್ನುವ ಅಗತ್ಯವೇನಿಲ್ಲ. ಕನ್ನಡಿಗರು ಅಷ್ಟರ ಮಟ್ಟಿಗೆ ಉದಾರಿಗಳು.
ರಾಜ್ಯೋತ್ಸವದಂದು ನಡೆದ ಘಟನೆ ನಮ್ಮ ರಾಜ್ಯದಲ್ಲಿ ಕನ್ನಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ.
ಘಟನೆ-೧: ಮದ್ಯಾಹ್ನದ ಉರಿಬಿಸಿಲು, ಗಂಟಲು ಒಣಗಿದ್ದರಿಂದ ಏನಾದರೂ ತಂಪು ಪಾನೀಯ ಕುಡಿಯೋಣವೆಂದು ಅಂಗಡಿಗೆ ಹೋಗಿ ನನಗೆ ಬೇಕಾದ ಪಾನೀಯ ಕೇಳಿ ಪಡೆದುಕೊಂಡು ಕುಡಿಯುತ್ತಾ ಕುಳಿತುಕೊಂಡಿದ್ದೆ. ನನಗೆ ಪಾನೀಯ ತಂದುಕೊಟ್ಟ ಹುಡುಗನನ್ನು ನೋಡಿದರೆ ಬಡತನದ ಬೇಗೆಯಿಂದ ಬಳಲಿ ಬೆಂಡಾದ ತಂದೆ ತಾಯಿಯ ಜವಾಬ್ದಾರಿ ಹೊತ್ತು, ಕುಟುಂಬದ ಪರಿಸ್ಥಿತಿ ನಿಭಾಯಿಸಲು ಅನ್ಯಮಾರ್ಗವಿಲ್ಲದೇ ಆ ಕಾಯಕದಲ್ಲಿ ತೊಡಗಿದ್ದಾನೆ ಎನ್ನುವುದು ಆತನನ್ನು ನೋಡಿದಾಗಲೆ ತಿಳಿಯುತ್ತದೆ.
ಅದೇ ಸಮಯಕ್ಕೆ ಐದಾರು ವಿದ್ಯಾರ್ಥಿನಿಯರು ಮಾತೃಭಾಷೆ ತುಳು ಅಥವಾ ಕನ್ನಡವಾದರೂ ಆ ಬಾಷೆಯೇ ಬಾರದವರ ತೆರದಲ್ಲಿ ಆಂಗ್ಲಭಾಷೆಯಲ್ಲಿ ಐ ವಾಂಟ್ ಫಿಸ್ತಾ, ಕೋಲ್ಡ್ ಬಾದಾಮಿ, ಹಾರ್ಲೆಕ್ಸ್ ಹೀಗೆ ತಮಗೆ ಬೇಕಾದ ಪಟ್ಟಿಯನ್ನೆ ನೀಡುತ್ತಾರೆ. ಹುಡುಗ ಅನುಭವವಿರುವುದರಿಂದ ಅವರು ಹೇಳಿರುವ ವಸ್ತುವನ್ನು ನೀಡುತ್ತಾನೆ. ಇಲ್ಲಿ ನನ್ನ ಸಂದೇಹ ಬೇರೆನಲ್ಲ..ಆ ಹುಡುಗನಿಗೆ ಆಂಗ್ಲಭಾಷೆ ಬರುತ್ತಿದ್ದರೆ ಈ ಅಂಗಡಿಯಲ್ಲಿ ಯಾಕೆ ಕೆಲಸ ಮಾಡುತ್ತಿದ್ದ? ತುಳು ಮಾತೃಭಾಷೆಯವರೆ ತುಳು ಮಾತನಾಡದೆ ಪರಭಾಷೆಯ ವ್ಯಾಮೋಹದಿಂದ ಅದರ ದಾಸರಾಗುತ್ತಿದ್ದಾರೆ. ಆಂಗ್ಲಭಾಷೆಯೆ ನನ್ನ ಸರ್ವಸ್ವ ಎನ್ನುತ್ತಿರಬೇಕಾದರೆ ಕನ್ನಡ ಇಷ್ಟಾದರೂ ಉಳಿದಿದೆಯೆಂದು ಸಂತೋಷ ಪಡಬೇಕು.
ಘಟನೆ:೨-ಸ್ವಲ್ಪ ದಿನದ ಹಿಂದೆ ಕುಂದಾಪುರದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಇಬ್ಬರು ಯುವಕರು ಯಾವುದೋ ಉತ್ತಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವರಂತೆ ಕಂಡು ಬರುತ್ತಿದ್ದರು. ಪಕ್ಕದಲ್ಲಿಯೆ ನಿಂತು ಅವರ ಮಾತುಗಳನ್ನೆ ಆಲಿಸುತ್ತಿದ್ದೆ. ಸ್ವಚ್ಚ ಕನ್ನಡದಲ್ಲಿ ಯಾವುದೇ ಆಂಗ್ಲಪದಗಳ ಬಳಕೆಯಿಲ್ಲದೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅದೇ ಸಂದರ್ಭ ಅವರೊಲ್ಲಬ್ಬನ ಸ್ನೇಹಿತ ಬಂದಾಗ ಮಾತೃಭಾಷೆಯಲ್ಲಿ ಮಾತನಾಡಿದ್ದು ನೋಡಿ ಆಶ್ಚರ್ಯವಾಯಿತು. ಅಲ್ಲಿಯವರೆಗೆ ಕುಂದಾಪುರ ಕನ್ನಡ ಬಾರದ ಉತ್ತರ ಕರ್ನಾಟಕದ ಸ್ನೇಹಿತನಲ್ಲಿ ಶುದ್ದ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿ, ಊರಿನ ಮಿತ್ರ ಬಂದಾಗ ಮಾತೃಭಾಷೆಯ ಕಂಪನ್ನು ಹೊರ ಹಾಕಿದ್ದು, ಆಡಂಬರದ ರಾಜ್ಯೋತ್ಸವ ಆಚರಿಸಿ ಕುಣಿದು ಕುಪ್ಪಳಿಸುವ ಎಲ್ಲರಿಗೂ ಆದರ್ಶವಾಗುವಂತಿದೆ. ಅದನ್ನು ಕುಂದಗನ್ನಡದಲ್ಲಿಯೇ ಹೇಳಿದರೆ ಚೆನ್ನಾಗಿರುತ್ತದೆ. ನೀವೂ ಸ್ಪಲ್ಪ ಕೇಳಿ..“ಗಡೆ, ಎಲ್ಲ ಹೊಯಿದ್ಯಾ,ಉಂಡ ಆಯ್ತನಾ...ಇವತ್ ಹಾಲಾಡಿ ಹೊಲ್ಂಗ್ ಆಟ್ ಅಂಬ್ರಲ್ಲಾ...ಆಟಕ್ ಹೋಪ್ವಾ...ನಿ ಹೋಪುದಾರೆ ನಮ್ಮನಿಗ್ ಬಾ.. ಇಲ್ದಿದ್ರೆ ಅಪ್ಪಯ್ಯ ಬಿಡುದಿಲ್ಲ ಮರಯಾ..ಆಟ ಒಳ್ಳೆಯಿತ್ತಂಬ್ರ..ಇದು ನಿಜವಾದ ಭಾಷಾಭಿಮಾನ.
ಅಕ್ಬರನ ಆಸ್ಥಾನದಲ್ಲಿ ಪಂಡಿತನೊಬ್ಬ ಬಂದು ನನ್ನ ಮಾತೃಭಾಷೆ ಯಾವುದು? ಎಂದು ಸವಾಲು ಹಾಕಿದ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಎಲ್ಲಾ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಅವನ ಮಾತೃಭಾಷೆಯನ್ನು ಕಂಡು ಹಿಡಿಯುವುದು ಕೊಂಚ ಕಷ್ಟವೇ? ಆದರೆ ಬೀರಬಲ್ ಮಾತ್ರ ಬುದ್ದಿವಂತಿಕೆಯಿಂದ ಅವನು ಮಲಗಿರುವ ಹೊತ್ತಿನಲ್ಲಿ ಮೈಮೇಲೆ ನೀರನ್ನು ಸುರಿದು ಅವನ ಮಾತೃಭಾಷೆ ಕಂಡುಹಿಡಿಯುತ್ತಾನೆ. ಯಾವ ವ್ಯಕ್ತಿಯೇ ಆಗಲಿ ತನ್ನ ಮಾತೃಭಾಷೆಯನ್ನು ದೈನಂದಿನ ಜೀವನದಲ್ಲಿ ಬಳಸಿಕೊಂಡು, ಇತರ ಭಾಷೆಯನ್ನು ವ್ಯಾವಹಾರಿಕವಾಗಿ ಬಳಸಿದಾಗಲೇ ಘನತೆ ಹೆಚ್ಚುತ್ತದೆ. ಮಾತೃಭಾಷೆ, ಮಾತೃಭೂಮಿಯ ಬಗ್ಗೆ ಅಭಿಮಾನ ಮೂಡಿದಾಗಲೇ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ. ತಮಿಳು ನಾಡಿಗೆ ಕಾಲಿಟ್ಟರೆ ಅಲ್ಲಿ ತಮಿಳಲ್ಲದೆ ಬೇರೆ ಭಾಷೆಯನ್ನು ಮಾತನಾಡುವ ವ್ಯಕ್ತಿ ಸಿಗಲಾರ. ಅಕಸ್ಮಾತ್ ಇದ್ದರೂ ಕೆಲವೆ ದಿನದಲ್ಲಿ ಆತ ತಮಿಳು ಕಲಿಯುತ್ತಾನೆ. ಅಲ್ಲಿ ಬದುಕಬೇಕೆಂದರೆ ತಮಿಳು ಅನಿವಾರ್ಯ ಎನ್ನುವ ಸ್ಥಿತಿಯನ್ನು ಅಲ್ಲಿಯ ಜನತೆ ನಿರ್ಮಾಣ ಮಾಡಿದ್ದಾರೆ. ಆದರೆ ನಮಗಿನ್ನೂ ಸಾಧ್ಯವಾಗಿಲ್ಲ. ನಮ್ಮಲ್ಲಿ ಅಂಥ ಒಗ್ಗಟ್ಟು ಇಲ್ಲ. ಮಾತೃಭಾಷೆಯ ಮಹತ್ವದ ಬಗ್ಗೆ ಅಂಥದೊಂದು ಗಂಭೀರತೆ ಮೂಡಿಯೂ ಇಲ್ಲ.
ಕನ್ನಡ ರಾಜ್ಯೋತ್ಸವದಂದು ಮಾತ್ರವಲ್ಲದೇ ದಿನನಿತ್ಯ ಕನ್ನಡ ಮಾತನಾಡುವವರೆ ಕನ್ನಡಾಭಿಮಾನಿಗಳು. ಕನ್ನಡ ಮಾತನಾಡಿದರೆ ಪ್ರಸ್ತುತ ಸಮಾಜದಲ್ಲಿ ವ್ಯವಹಾರ ಮಾಡುವುದು ಕಷ್ಟ. ಆಡಳಿತ ವ್ಯವಹಾರಕ್ಕೆ ಆಂಗ್ಲಭಾಷೆಯ ಮೊರೆಹೋದರೂ, ಸ್ಥಳ, ಸಮಯ ನೋಡಿ ಕನ್ನಡ ಮಾತನಾಡುವುದಕ್ಕೆ ಹಿಂಜರಿಕೆ ಯಾಕೆ? ನಮ್ಮ ಊರಿನಲ್ಲಿ ನಮ್ಮವರೊಂದಿಗೆ ನಮ್ಮ ಮಾತೃಭಾಷೆಯನ್ನು ಮಾತನಾಡುವುದಕ್ಕೆ ಸಂಕೋಚವೇಕೆ? ಹಿಂಜರಿಕೆ ಲಜ್ಜೆಯನ್ನು ಕಿತ್ತೊಗೆದು ಮಾತೃಭಾಷೆಯನ್ನು ಪ್ರೋತ್ಸಾಹಿಸಿದಾಗ ಕನ್ನಡ ಉಳಿಸಿ ಬೆಳೆಸಬಹುದು. ಗಗನದೆತ್ತರಕ್ಕೆ ಕನ್ನಡದ ಕಂಪನ್ನು ಪಸರಿಸಬಹುದು. ಮನಸ್ಸನ್ನು ಕನ್ನಡ ಭಾಷೆಗೆ ಸಂಕುಚಿತಗೊಳಿಸದೆ, ವಿಶಾಲ ದೃಷ್ಟಿಯಿಂದ ಯೋಚಿಸಿ, ನಮ್ಮ ಸಂಸ್ಕೃತಿ ಹಾಳುಮಾಡುವ ದುಷ್ಟಶಕ್ತಿಯನ್ನು ಹಿಮ್ಮೆಟ್ಟಿಸಬೇಕಿದೆ. ಮನೆ-ಮನೆಯಲ್ಲೂ ಕನ್ನಡ ವಾತಾವರಣ ಮೂಡಿಸುವ ಅಗತ್ಯವಿದೆ. ಮಗು ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಎನ್ನುವ ಮೊದಲು ಸಾಮಾನ್ಯ ಕನ್ನಡ ಹಾಡು “ಗುಂಡಾಡಿ ಗುಂಡ ಮನೆ ಮನೆಗೆ ಹೋದ....ಎನ್ನುವ ಸಾಮಾನ್ಯ ಹಾಡನ್ನು ಕಲಿಯುವಂತಾಗಬೇಕು. ಆಗಲೇ ಕನ್ನಡವನ್ನು ಉಳಿಸಿ ಬೆಳೆಸಬಹುದು...ಏನಂತಿರಾ.