Thursday 19 April 2012

ಚಿತ್ರಕಲೆಯ ಹರಿಕಾರ

ಸೃಜನಶೀಲ ಚಿತ್ರಕಲೆಯ ಹರಿಕಾರ ಪುಂಡಲಿಕ ಶೆಣೈ ಅವರ ಕಲಾಕೃತಿ ಪ್ರದರ್ಶನ ಮೇಳ
ಗುರುವಿನ ಆಶ್ರಯ ಪಡೆಯದೆ ದೊರೆಯದಣ್ಣ ಮುಕುತಿ ಎಂದು ಬಸವಣ್ಣ ಹೇಳಿದ್ದರೂ ಚಿತ್ರಕಲಾವಿದ ಪುಂಡಲಿಕ ಶೆಣೈ ಮಾತ್ರ ತದ್ವಿರುದ್ದ. ಗುರುವಿನ ಆಶ್ರಯವನ್ನು ಪಡೆಯದೆ ಸ್ವಯಂ ಪ್ರೇರಣೆಯಿಂದ ಕಲೆಯ ಒಳಗುಟ್ಟು ಅರಿತು ಕಲಾಕೃತಿಗಳ ರಚನೆ ಮಾಡಿರುವುದು ಗಮನಿಸಬೇಕಾದ ಅಂಶವಾಗಿದೆ. ಆಧ್ಯಾತ್ಮದ ದಟ್ಟ ಪ್ರಭಾವಕ್ಕೆ ಒಳಗಾಗದಿದ್ದರೂ ಶೆಣೈ ಅವರ ಚಿತ್ರಗಳ ಬಣ್ಣ, ತಂತ್ರ ಹಾಗೂ ವಸ್ತುಗಳಲ್ಲಿ ಕೂಡ ಆಧ್ಯಾತ್ಮದ ದರ್ಶನವನ್ನೇ ಕಾಣಬಹುದಾಗಿದೆ. ತಮ್ಮದೇ ಆದ ಬಣ್ಣಗಳಲ್ಲಿ ಅನನ್ಯ ಪರಿಣಾಮಗಳನ್ನು ಉಂಟುಮಾಡುವ ತೈಲಚಿತ್ರಗಳನ್ನು ರೂಪಿಸುವುದು ಇವರ ವೈಶಿಷ್ಟ್ಯವಾಗಿದೆ.
ಖ್ಯಾತ ಚಿತ್ರಕಲಾವಿದ ಕೆ.ಪುಂಡಲಿಕ ಶೆಣೈಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಬಿಜೈ ನ್ಯೂ ರಸ್ತೆಯಲ್ಲಿರುವ ಪ್ರಿದೀವ್ ಆರ್ಟ್ ಗ್ಯಾಲರಿಯಲ್ಲಿ ಒಂದು ತಿಂಗಳ ಕಾಲ ಪ್ರದರ್ಶನಗೊಳುತ್ತಿದೆ. ಇನ್ನರ್ ಆಸ್ತೇಟಿಕ್ ಔಟರ್ ಮೆಟಾಫಿಸಿಕ್‌ಎನ್ನುವ ಶೀರ್ಷಿಕೆಯಡಿ ಕಲಾವಿದನ ೨೦೦ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.
ಕಲಾವಿದನ ಮನ ಪ್ರತಿಯೊಂದು ವಸ್ತುವಿನಲ್ಲೂ ಹೊಸರೂಪವನ್ನು ಗ್ರಹಿಸುತ್ತದೆ. ಇವರ ಚಿತ್ರಕಲಾಕೃತಿಗಳು ಯಾರಿಗೂ ಉಪಯೋಗಕ್ಕೆ ಬಾರದ ಕಲ್ಲು, ಮರದ ಕೊಂಬೆ, ರೆಂಬೆ, ಬೇರುಗಳಿಂದ ಕಲಾಕೃತಿಗಳ ಶಿಲ್ಪಕಲೆ, ಚಿತ್ರಕಲೆ, ಉಬ್ಬುಕಲೆಗಳನ್ನು ಒಳಗೊಂಡ ಮೂರ್ತರೂಪ ಕಾಣಿಸಿದರೆ ಅದರ ಕಲಾಕೃತಿ ರಚಿಸುವುದು ಅವರ ವೈಶಿಷ್ಟ್ಯವಾಗಿದೆ.
ವ್ಯಕ್ತಿಗೆ ಕಲೆಯನ್ನು ಗೌರವಿಸುವ ಗುಣವಿದ್ದಾಗ ನಿರ್ಜೀವಕ್ಕೂ ಜೀವವನ್ನು ತುಂಬುವ ಗುಣ ಅವನಲ್ಲಿ ಅಡಕವಾಗುತ್ತದೆ. ಕಲಾತ್ಮಕವಾಗಿ ವಸ್ತುವಿಗೆ ಆಕಾರವನ್ನು ನೀಡುವಲ್ಲಿ ಕಲಾವಿದ ಶ್ರಮಿಸುತ್ತಾನೆ. ಇವರ ಕಲಾಕೃತಿಗಳು ಶೋವರ್ ಆಫ್ ದಿ ಡಿವೈನ್ ಲೈಟ್ ಎನ್ನುವ ಕಲಾಕೃತಿ ಅಂದಕಾರದಲ್ಲಿ ತೊಳಲಾಡುವ ವ್ಯಕ್ತಿಗೆ ಸಾಕ್ಷಾತ್ಕಾರವನ್ನು ಕಾಣಲು ಸೂರ್ಯನ ಬೆಳಕು ಸಾಥ್ ನೀಡುವಂತೆ ತೋರ್ಪಡಿಸಿದರೆ , ಸೂರ್ಯನ ರಶ್ಮಿಗಳು ಭೂದೇವಿಯ ಮಡಿಲನ್ನು ಸ್ಪರ್ಶಿಸುವ ಚಿತ್ರ, ಮಳೆಗಾಲದ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸುವಾಗ ಮರಗಿಡಗಳ ಚಲನೆಯನ್ನು ತನ್ನ ಕಲ್ಪನೆಯಲ್ಲಿ ಸೆರೆಹಿಡಿದ ಗಿಡಮರಗಳ ನೃತ್ಯ, ಗೌಪ್ಯತೆಯನ್ನು ಕಾಪಾಡಿ ಯಾವುದೋ ಕಾರ್ಯವಾಗುವಂತೆ ಗುಟ್ಟಾಗಿ ಐದಾರು ಜನ ಸೇರಿ ಮಾತನಾಡುವ ಕಲಾಕೃತಿ ಇವರ ವಿಶೇಷ ಆಕರ್ಷಣೆಯಾಗಿದೆ.
ಧರ್ಮಬೇದವಿಲ್ಲದೇ ಕಲೆಯಲ್ಲಿ ಎಲ್ಲಾ ದೇವರಿಗೂ ವಿಶಿಷ್ಟಸ್ಥಾನವನ್ನು ನೀಡಿ ಧರ್ಮದ ಔಚಿತ್ಯವನ್ನು ಕೆಡಿಸದೇ ಶಿವ, ಜೀಸಸ್, ಪೈಗಂಬರ್‌ರ ಚಿತ್ರಗಳಿಗೆ ಮೆರುಗನ್ನು ನೀಡಿದ್ದಾರೆ. ಹಿಂದು ಸಂಸ್ಕೃತಿಯಲ್ಲಿ ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಾಣುತ್ತೇವೆ. ಇವರು ಸಸ್ಯದಲ್ಲಿ ವೃಕ್ಷದೇವನನ್ನು, ಚಂದ್ರನ ನಿರೀಕ್ಷೆಯಲ್ಲಿರುವ ಚಂದ್ರಮುಖಿ, ವಿರಹ ವೇದನೆ ಅನುಭವಿಸುತ್ತಿರುವ ಕಾಮಿನಿ, ವಿಶ್ವರೂಪಿ ವಿನಾಯಕ, ಹಾವಾಡಿಗನ ಚಾಕಚಕ್ಯತೆಯನ್ನು ಪ್ರಚುರ ಪಡಿಸುವ ಕೃತಿ ಹೀಗೆ ಒಂದೇ ಎರಡೆ ಅನೇಕ ಕಲಾಕೃತಿಗಳು ಅವರ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಕಾಲೇಜು ಜೀವನದಲ್ಲಿ ನಿರ್ಮಿಸಿದ ಸ್ವಂತ ಹಳ್ಳಿಯ ಚಿತ್ರದಿಂದ ಆಕರ್ಷಿತರಾಗಿ ಕಲಾಪ್ರಪಂಚಕ್ಕೆ ಮುಖಮಾಡಿದ ನಂತರದಲ್ಲಿ ಹಿಂದಿರುಗಲೇ ಇಲ್ಲಾ.
ತೆಂಗಿನ ಕಾಯಿಯಿಂದ ಮಾಡಿದ ತಲೆಬುರುಡೆಯಂತೂ ಭಯವನ್ನು ಹುಟ್ಟಿಸಿದರೂ ಮಕ್ಕಳ ಆಕರ್ಷಣೆಯಾಗಿದೆ. ಬಟ್ಟೆಯಿಂದ ರಚಿಸಿದ ಕೃತಿಗಳು ಕೂಡ ಸುಂದರವಾಗಿ ಮೂಡಿಬಂದಿದೆ. ಸಮುದ್ರದಲ್ಲಿ ಅಲೆಗಳು ಸೃಷ್ಠಿಯಾದಾಗ ಇನ್ನರ್ ಸ್ಟೋರ್ಮ್ ಆಗುವಂತೆ ಮನುಷ್ಯನ ದೇಹದಲ್ಲಿಯೂ ಕೂಡ ನಡೆಯುತ್ತದೆ ಎನ್ನುವುದನ್ನು ಕಲಾಕೃತಿಯ ಮೂಲಕ ತೋರ್ಪಡಿಸಿದ ಕೀರ್ತಿ ಇವರದಾಗಿದೆ.
ಲೈಟ್ ಆಫ್ ಏಷ್ಯಾ, ಬುದ್ದ, ಶಿವ, ಕೇರಳದ ತೈಯಮ್, ಅರ್ಧ ಶಿಲ್ಪಗಳು, ರುದ್ರಶಕ್ತಿ, ಊರ್ಧ್ವಮುಖಿ ಶಕ್ತಿ, ಈಜಿಪ್ಟನ ಶೈಲಿಯಲ್ಲಿ ನಾಗದೇವನ ರೂಪ ಹೀಗೆ ಮುನ್ನೂರಕ್ಕೂ ಹೆಚ್ಚಿನ ಕಲಾಕೃತಿಗಳನ್ನು ರಚಿಸಿದ್ದಾರೆ. ಮಾರಾಟವನ್ನು ಬಯಸದೇ ಕೇವಲ ಹವ್ಯಾಸಕ್ಕಾಗಿ ರಚಿಸಿದ ಇವರ ಕಲಾಕೃತಿಗಳು ಹಲವಾರು ಕಡೆ ಪ್ರದರ್ಶನಗೊಂಡಿದೆ.
ಪುಂಡಲಿಕ ಶೆಣೈ:
ಪುಂಡಲಿಕ ಶೆಣೈ ಮಡದಿ ಹಾಗೂ ಮೂವರು ಮಕ್ಕಳ ಚಿಕ್ಕ ಕುಟುಂಬದ ಎಲ್ಲಾ ಸದಸ್ಯರು ಚಿತ್ರಕಲಾವಿದರಾಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಚಿತ್ರಕಲಾವಿದನಾಗಿ ಕಲಾವಿಮರ್ಶಕನಾಗಿ ವಿಮರ್ಶಾ ಲೇಖನಗಳು ಪ್ರಕಟಿಸಿದ್ದಾರೆ. ಪಾಶ್ಚಾತ್ಯ-ಪೌರಾತ್ಯ ಕಲಾವಿದರ ಮಹಾನ್ ಕೃತಿಗಳ ಪರಿಚಯ ಮಾಡುವ ಲೇಖನ ಆಂಗ್ಲಭಾಷೆಯಲ್ಲಿ ಪ್ರಕಟಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲಾಸಕ್ತಿಯನ್ನು ವೃದ್ದಿಸುವ ನಿಟ್ಟಿನಲ್ಲಿ ಕೊಲಾಜ್ ರಚನಾಕಮ್ಮಟವನ್ನು ನಗರದ ಹೆಚ್ಚಿನ ಕಾಲೇಜುಗಳಲ್ಲಿ ನಡೆಸಿಕೊಟ್ಟಿದ್ದಾರೆ. ಕೇರಳ ಲಲಿತಾಕಲಾ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹೀಗೆ ಅವರ ಕುರಿತು ಹಾಗೂ ಅವರ ಕಲಾಕೃತಿಯನ್ನು ಕಣ್ಣಾರೆ ನೋಡುವ ಅವಕಾಶ ಇದೀಗ ನಗರದಲ್ಲಿ ನಮ್ಮ ಪಾಲಿಗಿದೆ. ಒಮ್ಮೆ ಬೇಟಿ ನೀಡಿ...ಕಲಾಕೃತಿಗಳ ಸೌಂದರ್ಯವನ್ನು ನೋಡಿ ಅನುಭವಿಸಿ...
ಸಂದೇಶ ಶೆಟ್ಟಿ ಆರ್ಡಿ
ಕಲೆಯನ್ನು ಪ್ರೋತ್ಸಾಹಿಸಲು ನನ್ನ ಹೆಸರಿನಲ್ಲಿ ಶಾಶ್ವತ ಪ್ರದರ್ಶನದೊಂದಿಗೆ ರಕ್ಷಿಸಲು ಮನಸ್ಸಿರುವ ಯುವಮನಸ್ಸುಗಳಿಗೆ ಎಲ್ಲಾ ಕಲಾಕೃತಿಗಳನ್ನು ಉಚಿತವಾಗಿ ನೀಡುವ ಆಸೆ.
ಕಲಾಕಾರ ಪುಂಡಲಿಕ ಶೆಣೈ


No comments:

Post a Comment