Wednesday 18 April 2012



ಕರಾವಳಿ ದರ್ಶನ:
ಮೋಣಕಾಲೂರಿ ನೇರದೃಷ್ಠಿಯಿಂದ ಭಕ್ತರನ್ನು ನೋಡದೆ ಅನುಗ್ರಹಿಸುತ್ತಿರುವ ವೀರಭದ್ರಸ್ವಾಮಿ...
ಪಶ್ಚಿಮಘಟ್ಟಗಳ ಸಾಲಿನ ಸುಂದರ ವಾತಾವರಣದ ರಮಣೀಯವಾದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ತಮ್ಮ ಜೀವನದ ದುಃಖವನ್ನು ಕಳೆಯುತ್ತಾ ಮುಂದೆ ಸಾಗಿದರೆ ಮೊದಲಿಗೆ ಕಾಣಸಿಗುವುದೇ ಶ್ರೀಕ್ಷೇತ್ರ ಮಡಾಮಕ್ಕಿ. ಭಕ್ತರನ್ನು ಸದಾಕಾಲ ರಕ್ಷಣೆ ಮಾಡುವ ದೇವರ ದರ್ಶನ ಪಡೆದು, ಮನದ ಬೇಗುದಿಯನ್ನು ಇಷ್ಟದೇವರ ಎದುರಿನಲ್ಲಿ ಅರುಹಿ ಮನಸ್ಸಿನ ಭಾರವನ್ನು ಕಳೆಯುವ ಭಕ್ತರು ಅದೆಷ್ಟೋ? ಭಾರತವೆಂದಾಕ್ಷಣ ದೇಗುಲಗಳ ನಾಡು ಎಂದು ಇತಿಹಾಸವೇ ಸಾರುತ್ತದೆ . ಅದರಲ್ಲೂ ಪರಶುರಾಮ ಸೃಷ್ಠಿಯಾದ ಕರಾವಳಿ ಅನೇಕ ದೇಗುಲಗಳ ಬೀಡು.ಕರಾವಳಿಯ ಗುಣಗಾನ ಮಾಡುತ್ತಾ ಹೋದರೆ ಒಂದೇ ಎರಡೇ ಇಲ್ಲಿಯ ಪದ್ದತಿ, ವೈಶಿಷ್ಠ್ಯತೆ..ದೇಶದಲ್ಲಿ ದ್ವಿತೀಯ ಸ್ಥಾನದಲ್ಲಿರುವ ಮಳೆಯ ತಾಣ ಆಗುಂಬೆಯನ್ನು ನೋಡಲು ಹಾಗೂ ಇಲ್ಲಿಯ ಪ್ರಕೃತಿ ರಮಣೀಯ ಸೌಂದರ್ಯವನ್ನು ನೋಡಲು ಸಕುಟುಂಬಿಕರು ಇಲ್ಲಿಯವರೆಗಾಗಿ ಬರುತ್ತಾರೆ. ಅನೇಕ ಭಕ್ತರು ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು, ಶೃಂಗೇರಿ ಶಾರದಾಂಬೆಯ ಅನುಗ್ರಹ ಪಡೆಯಲು ಹೋಗುವ ಮಾರ್ಗದ ಮದ್ಯದಲ್ಲಿ ಶ್ರೀಕ್ಷೇತ್ರ ಮಡಾಮಕ್ಕಿಯ ದರ್ಶನವಾಗುತ್ತದೆ.
ಪಶ್ಚಿಮ ಘಟ್ಟಗಳ ತಪ್ಪಲಿನಿಂದ ಸುಮಾರು ೫ಕಿ.ಮಿ ಅಂತರದಲ್ಲಿ ವೀರಭದ್ರನ ಕ್ಷೇತ್ರವಿದೆ.
ಪರಶುರಾಮ ಕ್ಷೇತ್ರ ಕುಂದಗನ್ನಡದ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸ್ವಾಮಿಯ ಕ್ಷೇತ್ರ ಕಂಡುಬರುತ್ತದೆ. ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳನ್ನು ಜೋಡಿಸುವ ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಮೂರು ನದಿಗಳ ಸಂಗಮ ಕ್ಷೇತ್ರದ ದಂಡೆಯಲ್ಲಿ ಕಾಣಸಿಗುವುದೇ ಮಡಾಮಕ್ಕಿಯ ಕ್ಷೇತ್ರ. ಗರ್ಭಗುಡಿಯನ್ನು ಬಯಸದೇ ಕಷ್ಟವೆಂದು ಬಂದಾಗ ಅವರನ್ನು ನಿರಾಸೆಗೊಳಿಸದೆ ಭಕ್ತರ ಇಷ್ಟಾರ್ಥವನ್ನು ಪೂರೈಸಿ, ಭಕ್ತರ ಹೃದಯಸಾಗರದಲ್ಲಿ ನೆಲೆನಿಂತ ದೇವನೇ ವೀರಭದ್ರ. ಈ ಕ್ಷೇತ್ರ ಕಾರಣೀಕ, ಪವಿತ್ರ ಹಾಗೂ ಪುರಾತನವಾಗಿದೆ.
ಭಾಗವತ ಪುರಾಣದಲ್ಲಿ ಉಲ್ಲೇಖಿಸಿರುವಂತೆ ದಕ್ಷಪ್ರಜಾಪತಿಯು ನಡೆಸುವ ಯಜ್ಞವನ್ನು ನೋಡುವುದಕ್ಕೆ ದೇವಾನು ದೇವತೆಗಳಿಗೆಲ್ಲಾ ಕರೆಕೊಟ್ಟಿದ್ದರೂ, ಶಿವದಂಪತಿಗಳಿಗೆ ಆಹ್ವಾನವಲ್ಲದೇ ನಿರೀಶ್ವರ ಯಾಗವನ್ನು ಮಾಡುತ್ತಾನೆ. ತವರು ಮನೆಯಲ್ಲಿ ವಿಜೃಂಭಣೆಯಿಂದ ನಡೆಸುತ್ತಿರುವ ಯಾಗವನ್ನು ನೋಡುವುದಕ್ಕೆ ಶಿವನ ಮಡದಿ ಸತಿದೇವಿ (ದಕ್ಷಪ್ರಜಾಪತಿಯ ಮಗಳಾದ್ದರಿಂದ ದಾಕ್ಷಾಯಿಣಿ) ಗಂಡ ಬೇಡವೆಂದರೂ, ಹಠಕ್ಕೆ ಪಟ್ಟುಬಿದ್ದು ಯಾಗಶಾಲೆಗೆ ಬರುತ್ತಾಳೆ.ಯಾಗಶಾಲೆಯಲ್ಲಿ ಸರಿಯಾದ ಮರ್ಯಾದೆಗಳು ಸಿಗದೆ, ನಿರೀಶ್ವರ ಯಾಗಕೈಗೊಂಡ ತಂದೆಯ ಮೇಲೆ ತುಚ್ಚಭಾವನೆ ತಳೆದು, ಅಲ್ಲಿಯೇ ಅಗ್ನಿಕುಂಡವನ್ನು ರಚಿಸಿ ಬೆಂಕಿಗಾಹುತಿಯಾಗುತ್ತಾಳೆ. ವಿಷಯವನ್ನು ತಿಳಿದು ಕುಪಿತನಾದ ಶಿವ ತಲೆಯ ಕೂದಲನ್ನು ನೆಲಕ್ಕೆ ಅಪ್ಪಳಿಸಿದಾಗ ಉದ್ಬವಿಸಿ, ದಕ್ಷನ ಸಂಹಾರಮಾಡಿದವನೇ ವೀರಭದ್ರ. ಯುಗಾಂತರದಲ್ಲಿ ಭಕ್ತರ ಭಕ್ತಿಗೆ ಮಣಿದು ಮೊಣಕಾಲೂರಿ ಭಕ್ತರನ್ನು ಉದ್ದರಿಸಿದ ದೇವರೇ ಮಡಾಮಕ್ಕಿಯ ಶ್ರೀ ವೀರಭದ್ರಸ್ವಾಮಿ.
ಸ್ಥಳದ ಹಿನ್ನೆಲೆ:
೨,೦೦೦ ವರ್ಷಗಳ ಹಿಂದೆ ಈ ಪ್ರದೇಶವನ್ನು ಬಾರ್ಕೂರ ಸಂಸ್ಥಾನದವರು ಆಡಳಿತ ನಡೆಸಿದ ಪರ್ವಕಾಲವಾಗಿತ್ತು. ಅನೇಕ ಸುಂದರ ಭವನಗಳು, ಗಜಶಾಲೆ, ಅಶ್ವಶಾಲೆ, ಗೋಶಾಲೆಗಳ ಸಂಪತ್ತಿನಿಂದ ತುಂಬಿ ತುಳುಕುತ್ತಿತ್ತು. ಆನಂದ ವರ್ಮ ಎನ್ನುವ ಕ್ಷೇತ್ರ ಸಂಸ್ಥಾನದ ರಾಜನು ಕೂಡ ಇಲ್ಲಿ ಆಳ್ವಿಕೆ ನಡೆಸಿದನೆಂದು ಪ್ರತೀತಿ ಇದೆ. ಕಾರ್ಕಳ ಸಮೀಪದ ಮುಂಡೋಳ್ಳಿ ಸಂಸ್ಥಾನದಿಂದ ಕಪ್ಪಕಾಣಿಕೆಗಳು ಹೇರಳವಾಗಿ ಬರುತ್ತಿದ್ದವೆಂದು ಹೇಳಲಾಗುತ್ತದೆ. ಎಲ್ಲಾ ರೀತಿಯಿಂದ ಗಮನಿಸಿದರೆ ಇಲ್ಲಿಯ ಪ್ರದೇಶಗಳು ಸಂಪದ್ಬರಿತವಾಗಿದ್ದವು ಎಂದು ತಿಳಿದುಬರುತ್ತದೆ.
ಮಡಾಮಕ್ಕಿ ಕ್ಷೇತ್ರವು ಋಷಿಗಳಿಂದ ಸ್ಥಾಪನೆಯಾದುದು ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ನೋಡಿದಾಗ ತಿಳಿದುಬರುತ್ತದೆ. ೧,೦೫೦ ವರ್ಷಗಳ ಹಿಂದೆ ಈ ಪ್ರದೇಶವನ್ನು ಕೋಟೆರಾಯ ಎನ್ನುವ ರಾಜ ಆಳುತ್ತಿದ್ದನು. ಇವನ ಆಳ್ವಿಕೆಯಲ್ಲಿ ಬಡವರಿಗೆ ಹೇರಳವಾಗಿ ದಾನಧರ್ಮವನ್ನು ಮಾಡಿ, ಅನೇಕ ಪುಣ್ಯತಮವಾದ ಕಾರ್ಯಗಳನ್ನು ಮಾಡಿದ್ದನು. ಒಳ್ಳೆಯವರು ಭೂಮಿಯಲ್ಲಿ ಹೆಚ್ಚುಕಾಲ ಉಳಿಯಲಾರರು ಎನ್ನುವುದು ಸತ್ಯ. ಸಂತೋಷದಿಂದ ರಾಜ್ಯಭಾರ ಮಾಡುತ್ತಿದ್ದ ಕಾಲದಲ್ಲಿ ರಕ್ಕಸರಿಂದ ಮರಣಹೊಂದಿ, ಜೀವಿತ ಕಾಲದಲ್ಲಿ ಮಾಡಿದ ದಾನಧರ್ಮ ಹಾಗೂ ರುದ್ರನ ಅನುಗ್ರಹದಿಂದ ದೈವತ್ವವನ್ನು ಪಡೆದು ಕೋಟೆರಾಯ ಆದನೆಂದು, ಅವನೇ ಮುಂದೆ ದೇವರ ಕಟ್ಟೆಯಲ್ಲಿರುವ ನಿಧಿಯನ್ನು ರಕ್ಷಣೆ ಮಾಡುತ್ತಿರುವನೆಂದು ತಿಳಿದುಬಂದಿದೆ.
ರಾಜ ಕೋಟೆರಾಯ ಸತ್ತನಂತರ ಈ ಪ್ರದೇಶದಲ್ಲಿ ರಕ್ಕಸರ ಉಪಟಳ ಮಿತಿಮೀರಿತು. ಗೋಹತ್ಯೆ, ಸ್ತ್ರೀಯರ ಮಾನಾಪಹರಣ ಮುಂತಾದ ದುಷ್ಕೃತ್ಯಗಳು ಸಮಾಜದಲ್ಲಿ ವಿಪರೀತವಾದವು. ಲೋಕಕಲ್ಯಾಣಾರ್ಥವಾಗಿ ಯಜ್ಞಯಾಗಾದಿಗಳನ್ನು ಮಾಡುವಂಥ ಋಷಿಮುನಿಗಳ ತಪಸ್ಸಿಗೆ ಭಂಗತರುವಂಥ ಕೆಲಸಕ್ಕೆ ರಾಕ್ಷಸರು ಮನಮಾಡುತ್ತಾರೆ. ಋಷಿಕೋಣೆ ಪರ್ವತದಲ್ಲಿ ಋಷಭ ಯೋಗೀಶ್ವರ ಎನ್ನುವ ಮುನಿ ತಪಸ್ಸನ್ನಾಚರಿಸುತ್ತಿದ್ದ. ಈ ರಾಕ್ಷಸರ ಉಪಟಳ ಸಹಿಸದೇ ಇಂದ್ರನನ್ನು ಒಲಿಸಿ, ಈಶಾನ್ಯ ದಿಕ್ಕಿನ ಬೆಟ್ಟದಲ್ಲಿ ಮುನೀಂದ್ರರೊಡಗೂಡಿ ಶಿವಸ್ತುತಿಯನ್ನು ಮಾಡುತ್ತಾರೆ. ಆಗ ಪ್ರತ್ಯಕ್ಷನಾದ ವೀರಭದ್ರ ಮುನೀಂದ್ರರಿಗೆ ಅಭಯವನಿತ್ತು ಸಿಟ್ಟಿನಿಂದ ತಲೆಯನ್ನು ಅರೆಕಲ್ಲಿಗೆ ಅಪ್ಪಳಿಸಿದಾಗ ಅರೆಕಲ್ಲು ಸಿಡಿದು ಚೂರಾಗುತ್ತದೆ. ತುಂಡಾದ ಶಿಲೆಯ ಚೂರೊಂದು ವೀರಭದ್ರನ ತಲೆಯ ಕೂದಲಿನ ಸ್ಪರ್ಶದಿಂದ ಅವನ ತಲೆಯ ಆಕೃತಿ ತಳೆದು ಮಾರ್ಮಣ್ಣು- ಮಡಾಮಕ್ಕಿ ಹೊಳೆಯಲ್ಲಿ ಬಂದು ಬೀಳುತ್ತದೆ. ಮುಂದೆ ನಿಧಿಯನ್ನು ರಕ್ಷಣೆ ಮಾಡುತ್ತಿರುವ ಕೋಟೆರಾಯ ಗ್ರಹಣ ಮತ್ತು ಅಸೀತ ಎನ್ನುವ ರಾಕ್ಷಸರನ್ನು ಕೊಲ್ಲುತ್ತಾನೆ. ವೀರಭದ್ರ ವಯಾಸುರ, ಪ್ಲವಘಾಸುರನನ್ನು ಕೊಲ್ಲುತ್ತಾನೆ. ಫ್ಲವಘಾಸುರನ ಶಿರಚ್ಛೇದನ ಮಾಡಿದ ಸ್ಥಳವೇ ಮುಂದೆ ಶಿರಂಗೂರು ಎಂದು ಕರೆಯಲ್ಪಡುತ್ತದೆ. ತಾಯಿ ಬನಶಂಕರಿಯು ದಿವಟಿಗೆ ಹಿಡಿದು ವನದಮನ ಎನ್ನುವ ರಕ್ಕಸರ ನಿರ್ನಾಮ ಮಾಡಿ ಅಲ್ಲಿಯೇ ನೆಲೆಗೊಳ್ಳುತ್ತಾಳೆ. ಮುಂದೆ ವೀರಭದ್ರನು ರಾಕ್ಷಸರನ್ನು ಕೊಂದು, ಭಕ್ತರನ್ನು ಸಲಹುತ್ತಾ ಇಲ್ಲಿಯೇ ನೆಲೆಗೊಳ್ಳುತ್ತಾನೆ.
ನಿಧಿಯ ಹಿನ್ನೆಲೆ:
ಈ ಸ್ಥಳದಲ್ಲಿ ಆನಂದ ವರ್ಮನ ಮನೆಯಿದ್ದು ಅಲ್ಲಿರುವಂಥ ಸಂಪತ್ತನ್ನೆಲ್ಲಾ ದೊಡ್ಡ ದೊಡ್ಡ ಕೊಪ್ಪರಿಗೆಯಲ್ಲಿ ತುಂಬಿ ಭಾವಿಗಳಲ್ಲಿ ಹಾಕಿ ಮುಚ್ಚಿಹಾಕಲು ಸೇವಕರಿಗೆ ತಿಳಿಸಿದನು. ವೀರಭದ್ರನು ರಾಕ್ಷಸರನ್ನು ಕೊಂದು ತಿರುಗಾಡಿದ ಸ್ಥಳದ ಮಣ್ಣನ್ನು ತೆಗೆದು ನಿಧಿಯನ್ನು ಮುಚ್ಚಿದ ಸ್ಥಳದಲ್ಲಿ ಹಾಕಲು ಹೇಳಿ, ನದಿಯಲ್ಲಿರುವ ತಲೆಯ ಆಕೃತಿಯ ಕಲ್ಲನ್ನು ತಂದು ಪ್ರತಿಷ್ಠೆ ಮಾಡಲು ಮುನೀಂದ್ರರಿಗೆ ತಿಳಿಸುತ್ತಾನೆ. ವೀರಭದ್ರನು ರಕ್ಕಸರನ್ನು ಕೊಂದು ವಿಶ್ರಾಂತಿ ಪಡೆಯಲು ತನ್ನ ವಿಶಾಲವಾದ ಬಲತೋಳನ್ನು ಬಲಮಲೆಯಲ್ಲೂ, ಎಡತೋಳನ್ನು ಎಡಮಲೆಯಲ್ಲೂ ಇಡುತ್ತಾನೆ. ಅದುವೇ ಮುಂದೆ ಬೊಳ್ಮನೆ ಹಾಗೂ ಎಳ್ಮಲೆ ಎಂದು ಹೆಸರು ಪಡೆಯುತ್ತದೆ. ನಿಧಿಯ ರಕ್ಷಣೆಗಾಗಿ ಕೋಟೆರಾಯ ನಿಂತು, ಮೊಣಕಾಲೂರಿ ಭಕ್ತರನ್ನು ಸಲುಹುವ ವೀರಭದ್ರನ ಪೂಜಾಕೈಂಕರ್ಯವನ್ನು ದಾಸಭಟ್ಟ ಹೊಳೆಯ ಪಕ್ಕದ ಓದೂರಿಂದ ಬಂದು ಮಾಡುತ್ತಿದ್ದನು. ಒಮ್ಮೆ ನಿಧಿಯನ್ನು ಕಳ್ಳತನ ಮಾಡಲು ಬಂದ ದರೋಡೆಕೊರರನ್ನು ದುಂಬಿಯೊಂದು ಬಂದು ಕಚ್ಚಿದಾಗ ಅವರೆಲ್ಲಾ ಸ್ಥಂಬಿಭೂತರಾದರೆಂದು ಕೂಡ ಪ್ರತೀತಿ ಇದೆ. ತಂತ್ರಿಗಳ ವಂಶದವರು ತುಂಬಾ ವರ್ಷಗಳಿಂದ ಪೂಜೆಯನ್ನು ಮಾಡುತ್ತಾ ಬಂದಿದ್ದು,ಈಗ ಮಂಜರ ವಂಶಸ್ಥರು ನಿರ್ವಹಿಸುತ್ತಿದ್ದಾರೆ. ಕೆ.ಅನಂತಯ್ಯ ತಂತ್ರಿಗಳ ತಾಯಿ ನಿಧಿಕೊಪ್ಪರಿಗೆಯ ಹಿಡಿಗೆ ದನವನ್ನು ಮೇಯಲು ಕಟ್ಟುತ್ತಿದ್ದ ದೃಶ್ಯವನ್ನು ಕೂಡ ನೋಡಿದ್ದರು.
ಮಡಾಮಕ್ಕಿಯ ವಿಶೇಷ:
ಮಾಡು ಇಲ್ಲದ ವೀರಭದ್ರಸ್ವಾಮಿ ಮೊಣಕಾಲೂರಿ(ಮಡವೂರಿದ ಸ್ಥಳವೇ ಮಡಾಮಕ್ಕಿ) ಭಕ್ತಸಮೂಹವನ್ನು ನೇರದೃಷ್ಠಿಯಿಂದ ನೋಡದೆ ದಿನನಿತ್ಯ ಅನುಗ್ರಹಿಸುತ್ತಿರುವನು. ನೋಡಲು ವೀರಭದ್ರನ ಮುಖವಾಡವಿದ್ದರೂ ವೀರಭದ್ರನ ನಿಜರೂಪ ಕಲ್ಲು ಆಗಿರುವುದು. ಮೃತ್ಯುಕೆಯೇ(ಕಟ್ಟೆಯ ಮಣ್ಣು) ಇಲ್ಲಿನ ಗಂಧಪ್ರಸಾದ.ಒಳಗಡೆ ನಿಧಿ ಇರುವುದರಿಂದ ಶಾಸ್ತ್ರಕ್ಕೆ ಅನುಸಾರವಾಗಿ ಕಲೆಕೊಟ್ಟಿದ್ದಾರೆ. ತಾಯಿ ಬನಶಂಕರಿ, ಪಡಿಕಂತಾಯ ಪಂಚಮುಖನಂದಿ, ಚಿಕ್ಕು,ಯಕ್ಷಿ,ಹ್ಯಾಗುಳಿ, ಬೊಬ್ಬರ್ಯ, ಮಹಿಷಂತಾಯ, ನಾಗ, ಪಂಚಬೊಬ್ಬರ್ಯ, ಹುಲಿದೇವರು, ಕಲ್ಲುಕುಟಿಕ, ಖಡ್ಗರಾವಣ ಒಳಆವರಣದಲ್ಲಿ ರಾರಾಜಿಸುತ್ತಿದ್ದರೆ, ಕಲ್ಲುಕುಟಿಕ, ಪಡಿಘಂತಾಯ, ಪಂಜುರ್ಲಿ, ವರ್ತೆ, ಜುಮಾದಿ ದೈವಗಳು ಹೊರಾಂಗಣದಲ್ಲಿ ನಿಂತು ಭಕ್ತರ ರಕ್ಷಣೆ ಮಾಡುತ್ತಿವೆ. ಮಕರಮಾಸ ೨೫(ಫೆಬ್ರವರಿ ೭ಅಥವಾ ೮) ರಂದು ಊರಿನ ಜಾತ್ರೆ ನಡೆಯಲಿದೆ. ಗಂಡುಕತ್ರಿಯನ್ನು ಕುತ್ತಿಗೆಗೆ ಹಾಕಿಕೊಂಡು, ಕಬ್ಬಿಣದ ಮುಳ್ಳುಗಳಿರುವ ಪಾದುಕೆಯ ಪ್ರದಕ್ಷಿಣೆ ಸೇವೆ ಇಲ್ಲಿಯ ವಿಶೇಷತೆ. ಪರಿವಾರ ದೈವಗಳ ಕೋಲ, ನಾಗನಿಗೆ ಹಾಲಿಟ್ಟು ಸೇವೆ, ತುಲಾಭಾರ, ಕೆಂಡಸೇವೆ, ಅನ್ನದಾನ, ರಂಗಪೂಜೆ, ಡಮರುಸೇವೆ, ಹುಲಿದೇವರ ದರ್ಶನ ಸೇವೆಗಳು ಜಾತ್ರಾ ಸಂದರ್ಭದಲ್ಲಿ ನಡೆಯುತ್ತದೆ. ದೇವಳದಲ್ಲಿ ನಡೆಯುವ ದರ್ಶನ ಸೇವೆ ವಿಶಿಷ್ಟವಾದುದು. ವೀರಭದ್ರ ದರ್ಶನ ಪಾತ್ರಿ ಚೂಪಾದ ಕಬ್ಬಿಣದ ಪಾದುಕೆ ಧರಿಸಿ, ದೇವರ ಸುತ್ತು ಬರುವುದು ಆಕರ್ಷಣೆಯಾಗಿದೆ.
ಮಡಾಮಕ್ಕಿಯ ಇತರ ಧಾರ್ಮಿಕ ಚಟುವಟಿಕೆಗಳು:
೧೯೮೯ರಲ್ಲಿ ಮಡಾಮಕ್ಕಿ ಮೇಳ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ದಿ.ಕೆ.ಬೋಜ ಶೆಟ್ಟಿಯವರ ಯಜಮಾನಿಕೆಯಲ್ಲಿ ಹೆಬ್ರಿ ಚಂದ್ರಶೇಖರ ಹೆಗ್ಡೆ ಮತ್ತು ಮಧುಕರ ಶೆಟ್ಟಿ ಇವರುಗಳ ಮಾರ್ಗದರ್ಶನಲ್ಲಿ ಯಕ್ಷಗಾನ ಮೇಳ ಆರಂಭಗೊಂಡು ೨೨ನೇ ವರ್ಷದ ತಿರುಗಾಟ ನಡೆಸುತ್ತಿದೆ. ಬಡಗುತಿಟ್ಟಿನ ಯಕ್ಷಗಾನ ಬಯಲಾಟ ಮೇಳಗಳಲ್ಲಿ ತನ್ನದೇ ಆದ ಛಾಪು ಹೊಂದಿರುವ ದೇವಳದ ಮೇಳವು ಯಕ್ಷರಂಗದಲ್ಲಿ ಕ್ರಾಂತಿ ಮೂಡಿಸಿದ ಪಳ್ಳಿ ಕಿಶನ್ ಹೆಗ್ಡೆ ಅವರ ವ್ಯವಸ್ಥಾಪಕತ್ವದಲ್ಲಿ ತಿರುಗಾಟ ಮಾಡುತ್ತಿದೆ. ಕಳೆದ ವರ್ಷದಿಂದ ಮಡಾಮಕ್ಕಿ ಕ್ಷೇತ್ರದ ಮಹಿಮೆಯನ್ನು ಸಾರುವ ಕ್ಷೇತ್ರಮಹಾತ್ಮೆಯನ್ನು ಪರಿಚಯಿಸಿದೆ. ಸತತ ೨೯ವರ್ಷಗಳಿಂದ ಕ್ಷೇತ್ರದ ಭಜನಾಮಂಡಳಿಯು ಕೂಡ ಭಜನಾಸೇವೆಯನ್ನು ಮಾಡುತ್ತಿದೆ. ೫೦ವರ್ಷಗಳಿಂದ ಅನಂತಯ್ಯ ಮಂಜ ಕುಟುಂಬಿಕರು ವೀರಭದ್ರನ ಪೂಜಾಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಅನಂತಯ್ಯ ಮಂಜ ಖರೀದಿ ಮಾಡಿದಂತ ಜಾಗದಲ್ಲಿ ದೇವಸ್ಥಾನವಿದ್ದರೂ ಯಾವತ್ತು ಕೂಡ ಆ ಭಾವನೆಯಿಂದ ವ್ಯವಹರಿಸದಿರುವುದು ವೀರಭದ್ರನ ಅನುಗ್ರಹವೇ ಸರಿ. ಅರ್ಚಕ ವರ್ಗದವರ ಆಡಳಿತವಿರುವುದು ಕರಾವಳಿಯ ಕೆಲವೇ ದೇಗುಲಗಳಲ್ಲಿ ಇದು ಕೂಡ ಒಂದು. ಎಮ್.ಶಶಿಧರ ಶೆಟ್ಟಿ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಹಾಗೂ ದೇವಸ್ಥಾನದ ಮೋಕ್ತೆಸರರಾಗಿ ಕಾರ್ಯನಿರ್ವಹಿಸುತ್ತಾ, ಅರ್ಚಕ ವರ್ಗ ಹಾಗೂ ಜೀರ್ಣೋದ್ಧಾರ ಸಮಿತಿಯ ಹೊಂದಾಣಿಕೆಯೇ ದೇವಳದ ಪ್ರಗತಿಗೆ ಕೈಗನ್ನಡಿಯಾಗಿದೆ
ಶ್ರೀಕೃಷ್ಣಮಠ ಉಡುಪಿ ಹಿಂದಿನ ಪರ್ಯಾಯ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜಿಯ ತವರೂರು ಮಡಾಮಕ್ಕಿಯಾಗಿರುವುದು ವಿಶೇಷ. ಹುಟ್ಟಿ ತನ್ನ ೬ನೇ ವಯಸ್ಸಿನವರೆಗೆ ಮಡಾಮಕ್ಕಿಯಲ್ಲಿ ಬೆಳೆದು ೭ನೇವರ್ಷದಲ್ಲಿ ದೀಕ್ಷೆಯನ್ನು ಪಡೆದ ಶ್ರೀಗಳ ಆಶೀರ್ವಾದ ಮಡಾಮಕ್ಕಿಯ ಜನತೆಯ ಮೇಲಿದೆ. ತನಗೆ ಗುಡಿಯನ್ನು ಕಟ್ಟಿಸಿಕೊಳ್ಳದೇ ಸಮಾಜದಲ್ಲಿ ಆಡಂಬರತೆಯನ್ನು ತೊಲಗಿಸುವಲ್ಲಿ ವೀರಭದ್ರನ ಗುಣಗಾನ ಸಂತೋಷಕರವೇ......
ಮೇಲ್ಮೈ ಛಾವಣಿ ಇಲ್ಲದೆ ಭಕ್ತರನ್ನು ಸಲಹುತ್ತಿರುವ ದೇಗುಲವಿದು. ಇಲ್ಲಿಯವರೆಗೆ ದೇವರಿಂದ ಒಪ್ಪಿಗೆ ಸಿಗದೆ, ದೇವರಿಗೆ ಅಗತ್ಯವೆನಿಸಿದಾಗ ತಿಳಿಸುತ್ತೇನೆ ಹಾಗೂ ಛಾವಣಿಯನ್ನು ನಿರ್ಮಿಸುವುದಾದರೆ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಬೇಕೆಂದು ತಿಳಿಸಿದೆ ಎಂದು ಹೇಳಲಾಗುತ್ತದೆ. ನಾನು ಶಾಲೆಗೆ ಹೋಗುವಾಗ ಭಜನಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದು, ಈಗ ಪ್ರತಿ ಸಂಕ್ರಮಣದಂದು ಊರಿನ ಒಂದು ಮನೆಯವರಿಂದ ಭಜನಾಸೇವೆಯನ್ನು ಪಡೆದುಕೊಳ್ಳುತ್ತಿದ್ದು, ಜಾತ್ರೆ ನಡೆದ ೧೨ನೇ ದಿನದಲ್ಲಿ ಮಂಗಳೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ ಎನ್ನುವುದು ಶಿರಂಗೂರು ದಯಾನಂದ ಶೆಟ್ಟಿಯ ಅಭಿಪ್ರಾಯ.
ನಿರೂಪಣೆ:ಸಂದೇಶ ಶೆಟ್ಟಿ ಕೊಂಜಾಡಿ
ಸಹಕಾರ: ಕೆ.ಅನಂತಯ್ಯ ತಂತ್ರಿ, ವಿಜಯ್, ಗಣೇಶ್ ಅರಸಮ್ಮಕಾನ್
ಕೆಳಗಿನ ವಿಷಯವನ್ನು ಬಾಕ್ಸ್ ಮಾಡಿ:
ದೇವಳದ ವೈಶಿಷ್ಟ್ಯತೆ:
ಮಕರ ಮಾಸ ೨೫ರಂದು(ಪೆ.೭,೮) ದೇವಳದ ಜಾತ್ರೆ ನಡೆಯಲಿದೆ.ದೇವಳದಲ್ಲಿ ನಡೆಯುವ ಕೆಂಡೋತ್ಸವ ದಕ್ಷಯಜ್ಞದ ಪ್ರಾತ್ಯಕ್ಷಿಕೆ, ಮದನಾವನರನ್ನು ದೀವಟಿಗೆ ಹಿಡಿದು ಕೊಂದ ಪ್ರಾತ್ಯಕ್ಷಿಕೆ, ವನದಮನರ ಮೈಗೆ ಅಗ್ನಿಸ್ಪರ್ಶಮಾಡಿ ಅಮ್ಮನವರಿಗೆ ತುಳಿಯಲು ಹೇಳಿ ತುಳಿದ ಘಟನೆಯ ಸ್ಮೃತಿಗಾಗಿ ಅಮ್ಮನವರ ಕೆಂಡೋತ್ಸವ, ಶಬ್ದದ ಸಂಬಂದದ ಗಂಟೆ ಸೇವೆ ಹಾಗೂ ವೀರಭದ್ರನಿಗೆ ಜಾನುವಾರುಗಳ ಪ್ರೀತಿಯಿರುವುದರಿಂದ ಅವುಗಳ ಸೇವೆ ವರ್ಷಂಪ್ರತಿ ಜಾತ್ರಾಸಂದರ್ಭದಲ್ಲಿ ನಡೆಯುತ್ತದೆ.

No comments:

Post a Comment