Wednesday, 18 April 2012

ಚಿತ್ರಕಲಾವಿದನ ಪ್ರಪಂಚವೇ ಸ್ವತಂತ್ರವಾಗಿರುತ್ತದೆ. ಕುಂಚವನ್ನು ಹಿಡಿದು ತನ್ನದೇ ಆದ ಸಾಮ್ರಾಜ್ಯದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಚಿತ್ರಕೃತಿ ರಚಿಸಿ ಸಾವಿರ ಶಬ್ದಗಳನ್ನು ಒಂದು ಕೃತಿಯಲ್ಲಿ ಬಿಂಬಿಸುತ್ತಾರೆ. ಚಿತ್ರಕಲಾವಿದರು ಒಂದೇ ಕ್ಷೇತ್ರದಲ್ಲಿ ಪ್ರಸಿದ್ದಿಯನ್ನು ಪಡೆಯುತ್ತಾರೆ ನಿಜ ಆದರೆ ಕಡಲ ತಡಿಯಲ್ಲಿ ಹುಟ್ಟಿ ಬೆಳೆದ ಮಧುಸೂದನ ಕುಮಾರ್ ಮಾತ್ರ ಚಿತ್ರಕಲಾವಿದನಾಗಿ, ಬರಹಗಾರ, ಸಿತಾರ ಹಾಗೂ ತಬಲ ವಾದಕ ಮತ್ತು ಸಿನಿಮಾ ನಿರ್ದೇಶಕನಾಗಿ ಸೇವೆ ಸಲ್ಲಿಸಿ ತುಳುನಾಡಿಗೆ ಕೀರ್ತಿಯನ್ನು ತಂದಿದ್ದಾರೆ. ಅವರ ಕನಸಿನ ಕೂಸು ಇಲ್ಲಿನ ಮಠದ ಕಣಿ ರಸ್ತೆ ಪ್ರಥಮ ತಿರುವಿನಲ್ಲಿರುವ ದೇವಕಿ ನಿಲಯದಲ್ಲಿ ಮೈದಳೆದಿರುವ ದೇವಕಿ ಜಾರಪ್ಪ ಅವರ ಸಂಸ್ಮರಣಾರ್ಥ ಶಾಶ್ವತ ಚಿತ್ರಕಲಾ ಪ್ರದರ್ಶನ.....
ಮಾನವನ ಮನೋಭೂಮಿಕೆಯನ್ನೇ ಆಧಾರವಾಗಿಟ್ಟುಕೊಂಡು ಪ್ರಕೃತಿ ಸೌಂದರ್ಯವನ್ನೆ ಕಲಾವಸ್ತುವನ್ನಾಗಿ ಆಯ್ದುಕೊಂಡಿದ್ದಾರೆ. ದೇಶದಲ್ಲಿಯೇ ಕುಳಿತು ಬೇರೆ ದೇಶದ ಜನರು ಶಾಂತಿಯನ್ನು ಕಂಡುಕೊಳ್ಳಲು ಇವರ ಕಲಾಕೃತಿಗಳು ಸಹಕಾರಿಯಾಗಿವೆ. ಹಿಂದು ಸಂಸ್ಕೃತಿಯನ್ನೇ ಸಂಗೀತ ಪರಿಕರಗಳನ್ನೆ ಆಧಾರವಾಗಿಟ್ಟುಕೊಂಡು ಗುರುಶಿಷ್ಯ ಪರಂಪರೆಯ ಚಿತ್ರಕೃತಿಯನ್ನು ರಚಿಸಿದ್ದಾರೆ. ೨೦೦೦ ಚದರ ಅಡಿ ವಿಸ್ತಾರವಿರುವ ಈ ಸ್ಥಳದಲ್ಲಿ ಚಿತ್ರಕಲೆ ಹಾಗೂ ಸಾಂಸ್ಕೃತಿಕ ಪ್ರಕಾರಗಳ ಅಭಿವ್ಯಕ್ತಿ ನೆಲೆಯಾಗಿ ರೂಪುಗೊಂಡಿದೆ. ಸಮಕಾಲೀನ ಹಾಗೂ ಸಾಂಪ್ರಾದಾಯಿಕ ಚಿತ್ರಕಲಾಕೃತಿಗಳು, ಶಿಲ್ಪಗಳು, ಸೆರಾಮಿಕ್ ಆಕೃತಿಗಳು, ಛಾಯಾಚಿತ್ರಗಳು, ಕುಸರಿಕಲಾ ವಸ್ತುಗಳ ಪ್ರದರ್ಶನ. ಅಂತರಾಷ್ಟ್ರೀಯ ಖ್ಯಾತಿಯ ಪ್ರೋಗ್ರೆಸಿವ್ ಆರ್ಟಿಸ್ಟ್ ಗುಂಪಿನ ಸ್ಥಾಪಕ ಫ್ರಾನ್ಸಿಸ್ ನ್ಯೂಟನ್ ಸೋಜಾ ಅವರ ಮೊಹೆಂಜೊದಾರದ ಮುಖ್ಯ ಪುರೋಹಿತರ ತೈಲವರ್ಣಚಿತ್ರ ಹಾಗೂ ೧೯೪೦ರ ಗುಂಪಿನ ಸದಸ್ಯರಾದ ಕೆ.ಹೆಚ್.ಅರಾ, ಎಸ್.ಹೆಚ್.ರಾಜಾ, ಹೆಚ್.ಎ.ಗಾಡೆ, ಎಸ್.ಬಾಕ್ರಿ ಅವರ ಕಲಾಕೃತಿಗಳು. ೧೯೭೦ರ ಖ್ಯಾತ ಚಿತ್ರಕಲಾವಿದರಾದ ಕೆ.ಕೆ.ಹೆಬ್ಬಾರ್, ಎ.ಎ.ರೈಬಾ, ಅಂಬಾದಾಸ್, ಕಿಶೋರಿ ಕೌಲ್, ರೇಖಾರಾವ್ ಇತರರ ಚಿತ್ರಕಲಾಕೃತಿಗಳು, ಕಾಷ್ಟಶಿಲ್ಪಗಳ ಪ್ರದರ್ಶನವು ಒಳಗೊಂಡಿದೆ. ೩೦ ಅಡಿಯ ಹಿಂದು ಸಂಸ್ಕೃತಿಯನ್ನು ಪ್ರಚುರಪಡಿಸುವ ಕಲಾಕೃತಿಯು ಬಾಲ್ಯಸ್ನೇಹಿತನಿಗಾಗಿ ರಚಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು.
ಬಾಲ್ಯಜೀವನ:
ಬೋಳೂರು ಮಠದ ಕಣಿ ರಸ್ತೆ ಯ ಪ್ರಥಮ ತಿರುವಿನಲ್ಲಿರುವ ದೇವಕಿ ನಿಲಯದಲ್ಲಿ ದೇವಕಿ ಮತ್ತು ಜಾರಪ್ಪ ದಂಪತಿಗಳಿಗೆ ೧೬ ಸೆಪ್ಟಂಬರ್ ೧೯೪೪ರಂದು ಜನಿಸಿದರು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣದ ನಂತರ ಮೈಸೂರಿನತ್ತ ಪ್ರಯಾಣ ಬೆಳೆಸಿ, ಉನ್ನತ ಶಿಕ್ಷಣವನ್ನು ಮುಗಿಸಿ ಉದ್ಯೋಗದ ಬೆನ್ನು ಹಿಡಿದು ಮುಂಬೈಯತ್ತ ಮುಖಮಾಡಿ ಆಸಕ್ತಿ ಕ್ಷೇತ್ರ ಚಿತ್ರಕಲಾ ಸಂಸ್ಥೆ ಜೆ.ಜೆ.ಆರ್ಟ್ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಸಿತಾರ್ ಕಲಿಯುವ ಆಸೆಯಿಂದ ಸಿಮ್ಲಾಕ್ಕೆ ಹೋಗಿ ತನ್ನ ಪ್ರಾವೀಣ್ಯತೆಯನ್ನು ತೋರಿದರು. ಚಿತ್ರಕಲೆಯ ಪ್ರಾಥಮಿಕ ಗುರುವಾಗಿ ಪೀಟರ್ ಡಿಸೋಜ ಸ್ವೀಕರಿಸಿ, ಎಲ್.ಕೆ. ಶೇವ್‌ಗೂರ್ ಅವರಿಂದ ಪರಿಪೂರ್ಣತೆಯನ್ನು ಸಾಧಿಸಿದರು. ಗುಲ್ವಾಡಿ ರತ್ನಾಕರ ಭಟ್ ಅವರಿಂದ ಪ್ರಾಥಮಿಕ ಸಿತಾರ್‌ನ್ನು ಕಲಿತು ವಿದ್ಯಾಭ್ಯಾಸದ ಹಂತದಲ್ಲಿ ಗುರುತಿಸಿಕೊಂಡಿದ್ದಾರೆ.
ಚಿತ್ರಕಲೆ:
ಸಿಮ್ಲಾದಲ್ಲಿ ವಿಲಾಯತ್ ಖಾನ್ ಅವರಿಂದ ಸಿತಾರ್ ಅಭ್ಯಾಸ ಮಾಡಿ ಗುರುಶಿಷ್ಯ ಪರಂಪರೆಯಿಂದ ಸ್ಫೂರ್ತಿ ಹೊಂದಿ ಚಿತ್ರಕಲೆಯತ್ತ ಆಸಕ್ತಿ ತಳೆದರು. ಭಾರತದಲ್ಲಿ ಹುಟ್ಟಿ ವಿದೇಶಿ ಸಂಸ್ಕೃತಿಯಿಂದ ಆಸಕ್ತರಾಗಿ ಕುಂಚದಿಂದ ವಿದೇಶಿ ಕಲಾಕೃತಿಗಳನ್ನು ರಚಿಸುವ ಕಲಾಕಾರರಿಗಿಂತ ಭಿನ್ನವಾಗಿ ಕಾಣಿಸಿಕೊಂಡರು. ಭಾರತೀಯ ಸಂಸ್ಕೃತಿ ಹಾಗೂ ಸಂಗೀತ ಪರಿಕರಗಳನ್ನೆ ಕಲಾಕೃತಿಗೆ ಮೂಲವಸ್ತುವನ್ನಾಗಿ ಆರಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಮಹಮ್ಮದ್ ರಫಿ, ಭೀಮಸೇನ್ ಜೋಶಿ ಇತರ ಖ್ಯಾತ ಕಲಾವಿದರ ಪ್ರತಿಕೃತಿಗಳನ್ನು ರಚಿಸಿ ಪ್ರದರ್ಶನ ಮೇಳವೊಂದನ್ನು ಏರ್ಪಡಿಸಿ ಪ್ರಾನ್ಸ್ ದೇಶದಿಂದ ಕಲಾಕೃತಿ ಪ್ರದರ್ಶನಕ್ಕೆ ವಿಶೇಷ ಮನ್ನಣೆಯನ್ನು ಗಿಟ್ಟಿಸಿಕೊಂಡರು.
ಸಿನಿಮಾ ಕ್ಷೇತ್ರ:
ಚಿತ್ರಕಲೆಯಲ್ಲಿ ಮಾತ್ರ ಪ್ರಾವೀಣ್ಯತೆಯನ್ನು ಪಡೆದದ್ದು ಮಾತ್ರವಲ್ಲ. ಸಿತಾರ್, ತಬಲಾ ಹಾಗೂ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರಿಂದ ಶಾಲಾ ದಿನಗಳಲ್ಲಿ ತಂದೆಯ ಪ್ರೋತ್ಸಾಹದಿಂದ ಸಿನಿಮಾ ಕ್ಷೇತ್ರದತ್ತ ಆಸಕ್ತಿ ಮೂಡಿಸಿಕೊಂಡಿದ್ದರು. ಅದರ ಪ್ರತಿರೂಪವೇ `ಕಾದಂಬರಿ' ಆರ್ಟ್ ಪಿಲ್ಮ್ ತೆರೆಕಂಡಿತು. ಸಿತಾರ್ ಗುರು ಉಸ್ತಾದ್ ವಿಲಾಯತ್ ಖಾನ್ ಸಂಗೀತ ನೀಡಿದ್ದರು. ಅಮೃತ ಪ್ರಿತಂ ನಿರ್ದೇಶನದ ಈ ಚಿತ್ರವು ಹೆಣ್ಣು ಪ್ರಮುಖಪಾತ್ರದಲ್ಲಿದ್ದ ಪ್ರೇಮಾಧಾರಿತ ಕಥೆಯಾಗಿದೆ. `ಸಿಂಫನಿ'ಹಾಗೂ ಪಿಖಾಸೋನ ದೃಷ್ಠಿಕೋನದಲ್ಲಿ ಕಾಲಗೋಡ, ಪ್ರೇಮ್‌ಜಿ ಅವರ ದುಶ್ಮನ್, ದರ್ತಿ ಸಾಗರ್ ಔರ ಸಿಫಿಯಾ ಹೀಗೆ ಹಲವಾರು ಚಿತ್ರಗಳಿಗೆ ನಿರ್ದೇಶಕರಾಗಿ ಸಿನಿಮಾ ರಂಗದಲ್ಲೂ ಸಾಧನೆಗೈದಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಜ್ಯೋತಿ ಸಿನಿಮಾ ಮಂದಿರದ ಪ್ರಾರಂಭದಲ್ಲಿ ಸ್ಟುಡಿಯೋ ಮಾಡುವ ಕಲ್ಪನೆಯಿದ್ದರೂ ಕಾರಣಾಂತರದಿಂದ ಪ್ರದರ್ಶನ ಮಂದಿರವಾಗಿ ರೂಪುಗೊಂಡಿದೆ ಎಂದು ಬಾಲ್ಯಾವಸ್ಥೆಯನ್ನು ನೆನಪಿಸಿಕೊಂಡರು.
ಬರಹಗಾರ:
ಹಿಂದಿ, ಕನ್ನಡ, ತುಳು ಆಂಗ್ಲ ಭಾಷೆಗಳಲ್ಲಿ ಸಣ್ಣಕಥೆ, ಅಂಕಣ, ಸಂದರ್ಶನ, ಆತ್ಮಚರಿತ್ರೆ, ನಾಟಕ ರಚನೆ ಯನ್ನು ಮಾಡಿದ್ದಾರೆ. ಅನೇಕ ಹಾಡು ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಸಿನಿಮಾ ಕಥೆಯಾದ ದಿ ಇಮ್ಮೊರ್ಟಲ್ ವಾರಿಯರ್‍ಸ್ ಎನ್ನುವ ತುಳುನಾಡಿನ ಸಂತರ ಕಥೆಯನ್ನಾಧರಿಸಿದೆ. ಸಿತಾರ್ ಸಾಮ್ರಾಟ್, ಬಾಣಬಟ್ಟನ ಗ್ರಂಥ ಮಹಾಶ್ವೇತಾ ಕಾದಂಬರಿಯನ್ನು ಆಧಾರವಾಗಿ ಸಂಶೋದನೆಯನ್ನು ಮಾಡಿದ್ದಾರೆ. ಹಮ್ಸೆ ಮೈಲ್‌ತುಮ್ ಸಾಜನ್, ಕಾನೂನು, ಬೋಲ್ಡ್ ಅಂಡ್ ಬ್ಯುಟಿಪುಲ್, ದಾರ, ವರದಕ್ಷಿಣ ಎನ್ನುವ ನಾಟಕವನ್ನು ರಚಿಸಿದ್ದಾರೆ.
ಪ್ರಶಸ್ತಿಗಳು:
೧೯೬೫ರಲ್ಲಿ ಉತ್ತಮ ಕಲಾವಿದ ಪ್ರಶಸ್ತಿ ಮೈಸೂರಿ ವಿಶ್ವವಿದ್ಯಾಲಯ, ಕೆ.ಎಂ.ಸಿ. ಇಂಟರ್ ಕಾಲೇಜ್ ಪ್ರಶಸ್ತಿ,೧೯೬೬ ಬಾಂಬೆ ಆರ್ಟ್ ಸೊಸೈಟಿಯು ಗುಲ್ಲಾಬಾಯಿ ಮೆಮೋರಿಯಲ್ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಸಂಶೋಧನೆ, ಏಕವ್ಯಕ್ತಿ ಹಾಗೂ ಸಮೂಹ ಚಿತ್ರಕಲಾ ಪ್ರದರ್ಶನ, ಕುಶಲ ಕಲೆ ತರಬೇತಿ, ಸೌಂದರ್ಯ ವರ್ಧಕ ಸಾಧನಗಳ ತಯಾರಿಕ ಕಮ್ಮಟ, ಮೊಸೈಕ್, ಪೋರ್ಸೆಲೀನ್, ಭಾವಚಿತ್ರ, ತೈಲವರ್ಣ, ಜಲವರ್ಣ ಪ್ರಾತ್ಯಕ್ಷಿಕೆಗಳು, ಸಿನಿಮಾ ಪ್ರದರ್ಶನ, ಸ್ಲೈಡ್ ಶೋ, ಪರಸ್ಪರ ಚರ್ಚಾಗೋಷ್ಠಿಗಳು, ಕವನ ಕಥಾ ಕಮ್ಮಟ, ಅಭಿನಯ, ನಾಟಕ, ಸಂಗೀತ, ನೃತ್ಯ ತರಬೇತಿ, ಕಲಾಪ್ರದರ್ಶನ ಏರ್ಪಡಿಸುವರೆ ಸೂಕ್ತ ಕೇಂದ್ರ ಹೌದು. ಶಾಲಾ ಮಕ್ಕಳ ಪಠ್ಯೇತರ ಹಾಗೂ ಚಿತ್ರಕಲೆ ಕುರಿತಾದ ವಿಶೇಷ ತರಬೇತಿಗೆ ತಂಗುದಾಣವಾಗಿ ಮೂಡಿಬರಲಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಲಾವಿದರು ಬಂದು ನೆಲೆಸಿ ತಮ್ಮ ಕಲೆಗಳನ್ನು ಪರಿಚಯಿಸಿ, ಪ್ರದರ್ಶಿಸುವರೆ ಸೂಕ್ತ ವೇದಿಕೆಯಾಗಲಿದೆ.
ಬಾಲ್ಯಾವಸ್ಥೆಯಲ್ಲಿ ತಬಲಾ ಶಿಕ್ಷಣದಲ್ಲಿ ಸಾಥ್ ಕೊಡುತ್ತಿದ್ದೇವೆ. ನಾವು ಮಾತ್ರವಲ್ಲ ನಮ್ಮ ತಂದೆ ತಾಯಿಯರು ಕೂಡ ಸಂಬಂಧವನ್ನು ಇರಿಸಿಕೊಂಡಿದ್ದರು.ಬೊಂಬಾಯಿ ಹೋದಾಗ ಮನೆಯ ಪರಿಸರದಿಂದ ಬೇರಾದರೂ ಭಾವನಾತ್ಮಕ ಸಂಬಂಧದ ಮನದಿಂದ ದೂರವಾಗಿಲ್ಲ. ಈಗಲೂ ಕೂಡ ಅದೇ ಸಂಬಂಧವನ್ನು ಇರಿಸಿಕೊಂಡಿದ್ದೇವೆ. ಕಲೆಯ ವಿಷಯದಲ್ಲಿ ನಮ್ಮ ಸಹಕಾರ ಮೊದಲಿನಂತೆಯೇ ಇದೆ. ೧೦ವರ್ಷಗಳ ಹಿಂದೆ ಪ್ರಾರಂಭವಾದ ಮಧುಸೂದನ್ ಎಜುಕೇಶನ್ ಪೌಂಡೇಶನ್‌ನಲ್ಲಿ ಸಹಭಾಗಿತ್ವವನ್ನು ಹೊಂದಿದ್ದೇವೆ. ಹಣದ ಅಭಿಲಾಷೆ ಇಲ್ಲದೆ ಅಲ್ಲಿರುವ ನ್ಯೂನತೆಯನ್ನು ತೆಗೆದು ಹೊಸತನವನ್ನು ತರಲು ಪ್ರಯತ್ನಿಸಿದ್ದಾರೆ. ಎಲ್ಲಾ ತರದ ಚಿತ್ರಗಳಲ್ಲೂ ಪ್ರಾವಿಣ್ಯತೆಯನ್ನು ಪಡೆದಿದ್ದಾರೆ. ಆಧುನಿಕ ಜಗತ್ತಿಗೆ ಪೂರಕವಾಗಿರುವಂಥ ಇತಿಹಾಸದ ಚಿತ್ರಣವನ್ನು ಬಿಂಬಿಸುವ ಕಲೆಗಾರಿಕೆ ಅವರಲ್ಲಿ ಕರಗತವಾಗಿದೆ ಎಂದು ಬಾಲ್ಯದ ಸ್ನೇಹಿತ ರಘುನಾಥ ಶೇಠ್ ಅನುಭವವನ್ನು ಹಂಚಿಕೊಂಡರು.

No comments:

Post a Comment