Wednesday 18 April 2012

ಹಿಂದು ಸಂಸ್ಕೃತಿಯಲ್ಲಿ ಗೋವಿನ ಧಾರ್ಮಿಕ ಮಹತ್ವ:
ಹಿಂದು ಸಂಸ್ಕೃತಿಯಲ್ಲಿ ಗೋಮಾತೆಗೆ ತಾಯಿಯ ಸ್ಥಾನವನ್ನು ನೀಡಿದ್ದಾರೆ. ನಮ್ಮ ಜೀವನದಲ್ಲಿ ಬೇರೆ ಬೇರೆ ರೂಪದಲ್ಲಿ ನಮಗೆ ಸಹಕಾರಿಯಾಗುವ ಗೋವು ಅಳಿವಿನಂಚಿನಲ್ಲಿರುವುದು ದುಃಖಕರವಾಗಿದೆ. ಮುಂದಿನ ದಿನಗಳಲ್ಲಿ ಗೋವುಗಳನ್ನು ಮೃಗಾಲಯದಲ್ಲಿ ನೋಡುವ ದಿನಗಳು ನಮ್ಮ ಕಣ್ಣಮುಂದಿದೆ. ಅವುಗಳ ಸಾಕಣೆ-ಉಳಿವು ನಮ್ಮ ಸಂಸ್ಕೃತಿಯನ್ನು ಪ್ರಚುರ ಪಡಿಸಲು ಉತ್ತಮ ವೇದಿಕೆಯನ್ನು ನಾವು ನಿರ್ಮಾಣ ಮಾಡಬೇಕಾಗಿದೆ.
ಪುರಾಣಕಾಲದಲ್ಲಿ ಶ್ರೀ ಕೃಷ್ಣ ಗೋವುಗಳ ಮಹತ್ತಿಕೆಯನ್ನು ಜಗತ್ತಿಗೆ ಸಾರಿ ಗೋ-ಸಂರಕ್ಷಕ ಎನ್ನುವ ಬಿರುದನ್ನು ಪಡೆದಿದ್ದಾನೆ. ಹಿಂದು ಸಂಸ್ಕೃತಿಯಲ್ಲಿ ಗಾ, ಗೀ, ಗೋ ಎನ್ನುವ ಮೂರು ಅಕ್ಷರಗಳಿಗೆ ಮಹತ್ವವನ್ನು ನೀಡಲಾಗಿದೆ. ಗಾ-ಗಾಯತ್ರಿ ಮಂತ್ರ, ಗೀ-ಭಗವದ್ಗೀತೆ, ಗೋ-ಗೋವುಗಳಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಸವಿತ್ರನಾರಾಯಣನನ್ನು ಸ್ಮರಿಸುವ ಗಾಯತ್ರಿ ಮಂತ್ರ, ಜೀವನದ ಏರು-ಪೇರುಗಳನ್ನು ಸರಿದೂಗಿಸುವ ಭಗವಂತನ ನುಡಿಯಾದಾರಿತ ಭಗವದ್ಗೀತೆ ಹಾಗೂ ಮನಸ್ಸು ಹಾಗೂ ಶರೀರಕ್ಕೆ ಬೇಕಾದ ಆಹಾರವನ್ನು ನೀಡುವ ಗೋಮಾತೆಗೆ ಮಹತ್ವವನ್ನು ನೀಡಲಾಗಿದೆ. ಗೋಮೂತ್ರದಿಂದ ಕ್ಯಾನ್ಸರ್‌ನಂತ ಕಾಯಿಲೆಯನ್ನು ದೂರಗೊಳಿಸಬಹುದು ಎಂದು ವೈಜ್ಞಾನಿಕವಾಗಿ ರುಜುವಾತುಗೊಳಿಸಲಾಗಿದೆ. ಗೋವಿನ ಉತ್ಪನ್ನಗಳಿಂದ ಜೀವಕೋಶಗಳು ಹೊಸಹುಮ್ಮಸ್ಸನ್ನು ಪಡೆಯಲು ಸಹಕಾರಿಯಾಗಿವೆ. ಆಯುರ್ವೇದದಲ್ಲಿ ಪಂಚಗವ್ಯಘೃತವು ಮಾನಸಿಕ ಔಷದವೆಂದು ಹೇಳಿದ್ದಾರೆ.
ಹಿಂದೆ ಗೋವಿಲ್ಲದ ಮನೆಯಿಲ್ಲಾ ಎನ್ನುವ ನುಡಿಯಿದ್ದರೂ ಈಗ ಗೋವಿರುವ ಮನೆ ವಿರಳ ಎನ್ನುವ ಮಾತನ್ನು ಬಹಳ ವಿಷಾಧದಿಂದ ಹೇಳಬೇಕಾಗಿದೆ. ಗೋವುಗಳು ಮೂರು ಮುಖ್ಯ ಅಂಶಗಳಿಂದ ಹಿಂದು ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿದೆ. ದೇವಸ್ಥಾನದ ಆಗಮ ಕಾರ್ಯ, ಮಾನುಷ ಕಾರ್ಯ ಮತ್ತು ಗೃಹಗಳ ಚಲನೆಯಿಂದ ಜೀವನದಲ್ಲಾಗುವ ಬದಲಾವಣೆಗಳಲ್ಲಿ ಗೋವಿನ ಪಾತ್ರ.
ಗೋವುಗಳು ಸಹಜವಾಗಿ ವಾಸಿಸುವ, ಫಲಪುಷ್ಪಗಳಿಂದ ಆವೃತವಾದ ಜಾಗದಲ್ಲಿ ದೇವಸ್ಥಾನ ಕಟ್ಟಬಹುದು ಎಂದು ಶಾಸ್ತ್ರಸಮ್ಮತವಾಗಿದೆ. ಗೋವಿನ ನಡೆಯಿಂದ ವಿಷಯುಕ್ತವಾದ ಅಂಶಗಳು ನಾಶವಾಗಿರುತ್ತವೆ. ಗೋವು ನಿವಾಸದಲ್ಲಿ ದೇವರಿಗೆ ನೇತ್ರೋನ್ಮಿಲನ ಆಗಬೇಕಾದದ್ದು ಗೋವುಗಳದು.ಉತ್ಸವದ ಸಮಯದಲ್ಲಿ ಬಾಗಿಲು ತೆರೆಯುವುದು ಹಾಗೂ ಯಾವುದೇ ಧಾರ್ಮಿಕ ಕೆಲಸ ಆಗುವಲ್ಲಿ ಹಾಗೂ ಅವಗಾಹ ಬಿಂಬಶುದ್ದಿಯಲ್ಲಿ ಪಂಚಗವ್ಯವಿಲ್ಲದಿರೆ ಕಾರ್ಯವಾಗುವುದಿಲ್ಲ. ಸ್ಥಳ ಶುದ್ದಿ ಹಾಗೂ ಸಪ್ತಶುದ್ದಿಯಲ್ಲಿ ಗೋವಿನ ಮಹತ್ವವನ್ನು ಮತ್ತು ಮನೆಕಟ್ಟಿದ ಸಂಧರ್ಭದಲ್ಲಿ ಗೋಮಾತೆಯ ಪ್ರವೇಶದೊಂದಿಗೆ ಎಲ್ಲಾ ಅನಿಷ್ಟಗಳ ತೊಲಗಿಸಿ ಮಾನವರ ಪ್ರವೇಶವನ್ನು ವ್ಯವಸ್ಥೆಮಾಡಲಾಗುತ್ತದೆ. ಉತ್ಸವಗಳ ಸಂದರ್ಭದಲ್ಲಿ ಗೋದಾನ ಮಾಡಿದಾಗ ಎಲ್ಲಾ ದೋಷಗಳ ನಿವಾರಣೆ ಸಾಧ್ಯವೆಂದು ಶಾಸ್ತ್ರಸಮ್ಮುಖವಾಗಿ ಬ್ರಾಹ್ಮಣರು ತಿಳಿಸಿದ್ದಾರೆ.
ಉಪನಯನ, ಗೃಹಪ್ರವೇಶ, ವಿವಾಹದ ಸಂಧರ್ಭದಲ್ಲಿ ಗೃಹಗಳ ಸ್ಥಿತಿಯನ್ನು ನೋಡಿ ಮೂಹೂರ್ತದ ನಿರ್ದಾರ ಮಾಡಲಾಗುತ್ತದೆ. ಶಾಸ್ತ್ರಜ್ಞರ ಪ್ರಖಾರ ನೂರು ಪ್ರತಿಶತ ಮೂಹೂರ್ತ ಸಿದ್ದಮಾಡುವುದು ಕಷ್ಟಸಾಧ್ಯ. ಅಧಿಕಾಂಶ, ಪ್ರಮುಖಾಂಶಗಳನ್ನು ಮುಂದಿರಿಸಿಕೊಂಡು ಮೂಹೂರ್ತ ನಿರ್ಧಾರ ಮಾಡಲಾಗುತ್ತದೆ. ಗೋವಿನ ಸಂಕಲ್ಪ ಸ್ಮರಣೆಯಿಂದ ಫಲಧಾನವನ್ನು ಕೂಡ ಮಾಡಬಹುದು. ಗೋವಿನ ಸೇವೆಗೆ ಒಂದಷ್ಟು ನಿಧಿಯನ್ನು ಸಮರ್ಪಿಸಬಹುದು.
ಗೋವಿನ ಧೂಳು ಆವರಿಸಿರುವ ಗೋಧೂಳಿ ಮೂಹೂರ್ತದಲ್ಲಿ ಎಲ್ಲಾ ಅನಿಷ್ಟಗಳು ದೂರಾಗುತ್ತವೆ ಎನ್ನುವುದು ಹಿಂದುಗಳ ನಂಬಿಕೆ. ಆದರೆ ಇಂದು ಗೋವಿನ ದೂಳುಗಳಿಲ್ಲದೆ ವಾಹನಗಳ ದೂಳು ಹೆಚ್ಚಾಗಿವೆ. ಹಿಂದೆ ಶಾಸ್ತ್ರಕ್ಕೆ ಅನುಗುಣವಾಗಿ ಗೋದಾನವಿತ್ತು. ಗೋವುಗಳನ್ನು ಸಾಕುತ್ತಾರೆ ಎನ್ನುವ ನಂಬಿಕೆಯಿತ್ತು. ಪ್ರಸ್ತುತ ಸಮಾಜದಲ್ಲಿ ಗೋವುಗಳನ್ನು ರಕ್ಷಣೆಮಾಡುತ್ತಾರೆ ಎನ್ನುವ ನಂಬಿಕೆ ಕಡಿಮೆಯಾಗಿದೆ. ಅಮವಾಸ್ಯೆ ಹಾಗೂ ಮುನ್ನಾದಿನ, ಗೃಹಣ, ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಗೋಪ್ರಸವ ಶಾಂತಿ ಮಾಡಿದ ಜಾತಕದಿಂದ ಜನ್ಮಾಂತರದ ಕರ್ಮಫಲಗಳನ್ನು ತಡೆಯುವ ಶಕ್ತಿ ಗೋಮಾತೆಗೆ ಇದೆ. ಮನೆಯಲ್ಲಿಯ ವಾಸ್ತುದೋಷವನ್ನು ದಿನನಿತ್ಯ ತುಪ್ಪದ ದೀಪವನ್ನು ಹಚ್ಚುವುದರಿಂದ ದೂರಿಕರಿಸಬಹುದು. ದೇವತೆಗಳ ಆಹಾರ ತುಪ್ಪವಾದ್ದರಿಂದ ಎಲ್ಲಾ ಧಾರ್ಮಿಕ ಕಾರ್ಯಗಳು ತುಪ್ಪದಿಂದಲೇ ನಡೆಯುತ್ತದೆ.
ಹಿಂದಿನ ಕಾಲದಲ್ಲಿ ಊಟಮಾಡುವುದಕ್ಕಿಂತ ಮುಂಚೆ ಗೋಘ್ರಾಸ ನೀಡುತ್ತಿದ್ದರು. ಗೋವುಗಳಲ್ಲಿ ವೃಷಭಗಳಿಗೂ ಕೂಡ ಪೂಜನೀಯ ಸ್ಥಾನವಿದೆ. ದೇವಸ್ಥಾನದ ಶಿಖರ ಚಲನೆಯಲ್ಲಿ ಗೋವೃಷಭವನ್ನು ಬಳಸುತ್ತಾರೆ. ಬಿಂಬದ ಚಲನೆಯಲ್ಲಿ ಗೋಮಾತೆಯನ್ನು ಬಳಸುತ್ತಾರೆ. ನೇರವಾಗಿ ಮನುಷ್ಯರೇ ದೇವರ ಮೂರ್ತಿಯನ್ನು ಹೊರತರುವ ಸಾಮರ್ಥ್ಯವಿಲ್ಲ. ಗೋವಿಗೆ ಮಾತ್ರ ಎಲ್ಲಾ ದೋಷವನ್ನು ತಡೆದುಕೊಳ್ಳುವ ಶಕ್ತಿ ಇರುವುದರಿಂದ ಗೋವನ್ನು ಬಳಸುತ್ತಾರೆ. ಗೋವಿನ ಪರೋಪಕಾರ ಗುಣವೇ ದೋಷಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ನಿರ್ಮಾಣವಾಗಿದೆ. ಆದ್ದರಿಂದಲೇ ಗೋವಿನ ಕಾರ್ಯವನ್ನು ನೋಡಿ ಕಾರ್ಯತೆಯನ್ನು ಗುರುತಿಸುವುದರಿಂದ ಪರೋಪಕಾರಾರ್ಥಾಯ ಇದಂ ಶರೀರಂ ಎನ್ನುವ ಮಾತು ಸಮಂಜಸವೆನ್ನುವುದಾಗಿ ತೋರುತ್ತದೆ.
ಸಮಾಜದಲ್ಲಿ ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ದೇಶದ ಜನತೆ ಮುಂದುವರಿದ್ದಾರೆ. ದೃಶ್ಯಮಾಧ್ಯಮ, ಅಂತರ್ಜಾಲ,ಮೊಬೈಲ್,ಕಂಪ್ಯೂಟರ್‌ಗಳಲ್ಲಿ ಕಾರ್ಯಮಗ್ನರಾಗಿ ಗೋಸಂರಕ್ಷಣೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಲಂಕೆಗೆ ಸೇತುವೆ ನಿರ್ಮಾಣ ಕಾರ್ಯದಲ್ಲಿ ಅಳಿಲಿನ ಸೇವೆಯನ್ನು ನಾವು ಗಮನದಲ್ಲಿರಿಸಿ ಗೋಮಾತೆಯ ರಕ್ಷಣೆಗಾಗಿ ಅಳಿಲುಸೇವೆಯನ್ನು ಮಾಡಲು ಕಟಿಬದ್ದರಾಗೋಣ....
ಕೆ.ಎಸ್.ಶೆಟ್ಟಿ

No comments:

Post a Comment