Saturday, 21 April 2012
ಮಂದಾರ್ತಿ ದುರ್ಗೆ
ಕಾರ್ತಿಕ ಮಾಸದ ಶುಭಮೂಹೂರ್ತದಲ್ಲಿ ಆರಂಭಗೊಂಡ ಐದು ಮೇಳಗಳ ಸೇವೆ:
ತುಳುನಾಡಿನ ಗಂಡುಕಲೆ ಯಕ್ಷಗಾನ. ಈಗಾಗಲೇ ಕೆಲವು ಮೇಳಗಳು ತಿರುಗಾಟವನ್ನು ಪ್ರಾರಂಭಮಾಡಿವೆ. ಅಂತೆಯೇ ತುಳುನಾಡು ಹಾಗೂ ಮಲೆನಾಡಿನಲ್ಲಿ ತನ್ನ ಮಹಿಮೆಯನ್ನು ಸಾರಿ, ಭಕ್ತರ ಕೈಯಿಂದ ಸೇವಾರೂಪದಲ್ಲಿ ಹರಕೆಯನ್ನು ಪಡೆಯುತ್ತಿರುವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಕೂಡ ಒಂದು. ಕಳೆದ ಮಳೆಗಾಲದಲ್ಲಿ ತಮ್ಮ ಗೂಡನ್ನು ಸೇರಿದ ಮೇಳದ ಗಣಪತಿ ಶುಕ್ರವಾರ ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಐದು ಮೇಳಗಳ ಗಣಪತಿ ಮೂರ್ತಿಗಳು ಗಣಹೋಮದೊಂದಿಗೆ ವಿಶೇಷ ಪೂಜೆಯನ್ನು ಪಡೆದು ರಾತ್ರಿ ಚೌಕಿಯಲ್ಲಿ ಪೂಜೆಯನ್ನು ಸ್ವೀಕರಿಸಿ ಬೆಳಕಿನ ಸೇವೆಯನ್ನು ಪಡೆದು ಸತತ ಆರು ತಿಂಗಳುಗಳ ಕಾಲ ಭಕ್ತರ ಸೇವೆಯನ್ನು ತೀರಿಸಲು ಅಣಿಯಿಟ್ಟವು.
ದೇವಳದ ರಥಬೀದಿಯಲ್ಲಿ ನಿರ್ಮಿಸಿದ ರಂಗಸ್ಥಳಗಳು ವಿದ್ಯುತ್‌ನಿಂದ ಹಾಗೂ ಪುಷ್ಪಗಳಿಂದ ಅಲಂಕೃತಗೊಂಡಿದ್ದವು. ಕರ್ನಾಟಕ ದತ್ತುನಿಧಿ ಪ್ರಾಧಿಕಾರ ಮಂದಾರ್ತಿ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಎನ್ನುವ ನಾಮಾಂಕಿತದೊಂದಿಗೆ ಮೇಳದ ಐದು ಬಸ್ಸುಗಳು ಸಿದ್ದವಾಗಿ, ಅವುಗಳು ಕೂಡ ಪೂಜೆಯನ್ನು ಪಡೆದವು.ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿ , ಊರಿನ ಗಣ್ಯರು ಮತ್ತು ದೇವಸ್ಥಾನದ ಸಿಬ್ಬಂದಿಗಳು, ಕರಾವಳಿ ಹಾಗೂ ಮಲೆನಾಡಿನ ವಿವಿಧ ಭಕ್ತರು ದೇವಿಯ ಸಾನಿಧ್ಯದಲ್ಲಿ ನಡೆದ ಪ್ರಥಮ ದೇವರ ಸೇವೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಂದು ಮೇಳದಲ್ಲಿ ೨೦ ಕಲಾವಿದರು, ಹಿಮ್ಮೇಳ ಮತ್ತು ಕೆಲಸಗಾರರು ಸೇರಿ ೪೦ ಮಂದಿಯಂತೆ ೫ಮೇಳಗಳ ೨೦೦ ಜನ ತಮ್ಮ ಸೇವಾ ಕೈಂಕರ್ಯದಲ್ಲಿ ಪಾಲ್ಗೊಂಡರು.
ಚಾರಿತ್ರಿಕ ಹಿನ್ನೆಲೆ:
ನಾಗಲೋಕವನ್ನು ಆಳುತ್ತಿದ್ದ ಶಂಖಚೂಡನಿಗೆ ಹಲವು ವರ್ಷಗಳಿಂದ ಮಕ್ಕಳಾಗದೇ ಶಿವನ ಮೊರೆಹೋದಾಗ,ಅವನ ಅನುಗ್ರಹದಿಂದ ಐವರು ಮಕ್ಕಳು ಜನಿಸುತ್ತಾರೆ. ದೇವರ ಅನುಗ್ರಹದಿಂದ ಜನಿಸಿದ ಕಾರಣ ಬಹಳ ಮುದ್ದಿನಿಂದ ಸಾಕಿ ಬೆಳೆಸಿ, ದೇವರತಿ, ನಾಗರತಿ, ಚಾರುರತಿ, ಮಂದರತಿ ಹಾಗೂ ನೀಲರತಿ ಎಂದು ಅವರ ರೂಪಕ್ಕನುಗುಣವಾಗಿ ಹೆಸರಿಟ್ಟನು. ಶಂಖಚೂಡನು ಮಕ್ಕಳ ಮದುವೆಯನ್ನು ಶಿವನಕುಮಾರ ಷಣ್ಮುಕನೊಂದಿಗೆ ಮಾಡುವ ಇಚ್ಚೆಯನ್ನು ಮಕ್ಕಳಲ್ಲಿ ವ್ಯಕ್ತಪಡಿಸಿ, ಸಂತೋಷ ಪಡುತ್ತಿರುವಾಗ ಹೃದಯಾಘಾತದಿಂದ ಮರಣಹೊಂದುತ್ತಾನೆ. ಹೆಣ್ಣುಮಕ್ಕಳೇ ಮುಂದೆ ನಿಂತು ತಂದೆಯ ಅಂತ್ಯಸಂಸ್ಕಾರವನ್ನು ಮಾಡಿ ಹಿರಿಯವಳಾದ ದೇವರತಿಯೇ ನಾಡಿನ ಅಧಿಕಾರವನ್ನು ಸ್ವೀಕರಿಸಿ ತಂಗಿಯರನ್ನು ನೋಡಿಕೊಳ್ಳುತ್ತಾಳೆ. ತಂದೆಯ ಆಸೆಯನ್ನು ನೆರವೇರಿಸುವುದಕ್ಕಾಗಿ ಕೈಲಾಸಗಿರಿಯನ್ನು ಸೇರಿ ಷಣ್ಮುಕನೊಂದಿಗೆ ಮದುವೆ ಆಗಬೇಕು ಎಂದು ಬರುತ್ತಿರುವಾಗ ಗಿರಿಯ ಬುಡದಲ್ಲಿ ನಂದಿ ತಡೆದು, ಅಕಾಲದಲ್ಲಿ ಶಿವನನ್ನು ಸಂಧಿಸುವ ಅವಕಾಶ ನೀಡದೇ ವಾದ-ವಿವಾಧಗಳಾಗಿ ಕ್ರೋಧಗೊಂಡ ನಾಗಕನ್ಯೆಯರು ಇಂಥ ಪವಿತ್ರವಾದ ಕೈಲಾಸಬೆಟ್ಟದಲ್ಲಿ ನೀವಿರಲು ಯೋಗ್ಯನಲ್ಲವೆಂಬ ತೀರ್ಮಾನದಿಂದ ಅಸುರಗುಣಗಳು ತಾಂಡವವಾಡುತ್ತಿರುವುದರಿಂದ ನೀನು ಭೂಲೋಕದಲ್ಲಿ ನರಭಕ್ಷಕನಾಗಿ ಜನಿಸು ಎಂದು ಶಾಪವನ್ನು ನೀಡುತ್ತಾರೆ. ಅಂತೆಯೇ ನಂದಿಯು ಕ್ರೋಧಗೊಂಡು ನೀವು ಯಾವ ಇಚ್ಚೆಯನ್ನು ಇರಿಸಿಕೊಂಡು ಇಲ್ಲಿಯವರೆಗೆ ಬಂದಿದ್ದಿರೋ ಅದು ಫಲಿಸದೇ ಹೋಗಲಿ ಮತ್ತು ಭೂಲೋಕದಲ್ಲಿ ಬೇರೆ ಬೇರೆಯಾಗಿ ಬಿದ್ದಿರಿ ಎನ್ನುವ ಶಾಪದಿಂದ ಭೂಲೋಕಕ್ಕೆ ಬರುತ್ತಾರೆ. ಧರೆಯಲ್ಲಿ ಮುನಿಯಿಂದ ಮತ್ತೆ ಶಾಪವನ್ನು ಪಡೆದು ದೇವವರ್ಮ ಎನ್ನುವ ರಾಜನಿಂದ ರಕ್ಷಣೆ ಪಡೆಯುತ್ತಾರೆ. ಅವನ ಉತ್ತರೀಯದಲ್ಲಿ ಕಟ್ಟಿ ಕಾಡಿನ ಮಾರ್ಗದಲ್ಲಿ ಸಾಗುತ್ತಿರುವಾಗ ಹಿರಿಯವಳಾದ ದೇವರತಿ ನೆಲೆನಿಂತ ಸ್ಥಳವನ್ನು ಅರಸನಕಾನು ಈಗ ಅರಸಮ್ಮಕಾನು ಎಂದು ಪ್ರಸಿದ್ದಿ ಪಡೆದಿದೆ. ನಾಗರತಿಯು ನಾಗೇರ್‍ತಿಯಲ್ಲಿ, ಚಾರುರತಿ ಚೋರಾಡಿಯಲ್ಲಿ , ಮಂದಗಮನೆ ಮಂದರತಿಯು ಮಂದಾರ್ತಿಯಲ್ಲಿ ಮತ್ತು ನೀಲರತಿಯು ನೀಲಾವರದಲ್ಲಿ ನೆಲೆಗೊಳ್ಳುತ್ತಾರೆ. ದೇವವರ್ಮನು ವಾರಾಹಿ ನದಿಯಲ್ಲಿರುವ ದೇವಿಯ ಮೂರ್ತಿಯನ್ನು ತಂದು ಸುಂದರ ಗುಡಿಯನ್ನು ನಿರ್ಮಿಸುತ್ತಾನೆ. ನಾಗನನ್ನು ಕೊಂದ ಪಾಪದಿಂದ ಕುಷ್ಠರೋಗದಿಂದ ನರಳುತ್ತಿದ್ದ ಸುಶರ್ಮ ಮಂದಾರ್ತಿಗೆ ಬಂದು ಪವಿತ್ರ ಕೆರೆಯಲ್ಲಿ ಸ್ಥಾನ ಮಾಡಿದಾಗ ರೋಗವೆಲ್ಲಾ ವಾಸಿಯಾಗಿ ಅಲ್ಲಿಯೇ ನೆಲೆನಿಂತು ಪೂಜೆಯನ್ನು ಕೈಗೊಳ್ಳುತ್ತಾನೆ. ಅನೇಕ ರಕ್ಕಸರ ಮರ್ಧನ ಮಾಡಿ, ಭಕ್ತರನ್ನು ರಕ್ಷಿಸಿ ಶ್ರೀದೇವಿಯು ಪ್ರಸಿದ್ದಿಯನ್ನು ಪಡೆಯುತ್ತಾಳೆ.
ಸೂರ್ಗೋಳಿ ಅಂತು ಎನ್ನುವ ಕಳ್ಳ ಶ್ರೀಮಂತರ ಹಾಗೂ ದೇವಸ್ಥಾನದ ಕಳ್ಳತನವನ್ನು ಮಾಡಲು ತಂಡವನ್ನು ನಿರ್ಮಿಸಿಕೊಂಡಿದ್ದ. ಆನೆಗುಡ್ಡೆಯ ವಿನಾಯಕ ದೇವಸ್ಥಾನಕ್ಕೆ ಹೊದಾಗ ಯಾವ ರೀತಿ ಪ್ರಯತ್ನ ಮಾಡಿದರೂ ಒಳಗಡೆ ಪ್ರವೇಶ ಮಾಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಪ್ರಯತ್ನ ಪಟ್ಟಾಗ ಅಶರೀರವಾಣಿಯಂತೆ ಒಳಗಡೆ ಪ್ರವೇಶ ಮಾಡಿದಾಗ ಯಾವ ವಸ್ತು ಕಣ್ಣಿಗೆ ಕಾಣುತ್ತದೋ ಅದನ್ನು ತೆಗೆದುಕೊಂಡು ಹೋಗು ಎನ್ನುವ ನುಡಿಯನ್ನು ಕೇಳಿ, ಕೈಗೆ ಸಿಕ್ಕಿದ ಬೆತ್ತದ ಬುಟ್ಟಿಯನ್ನು ಹೊತ್ತು ತರುತ್ತಾರೆ. ನಡೆದುಕೊಂಡು ಬರುವಾಗ ಪೆಟ್ಟಿಗೆ ಭಾರವಾಗುವುದಕ್ಕೆ ಪ್ರಾರಂಭವಾಗಿ ಬಂಡೆಕಲ್ಲಿನ ಮೇಲೆ ಇಟ್ಟು ವಿಶ್ರಾಂತಿ ಪಡೆದು, ಪುನಃ ಅಲ್ಲಿಂದ ತೆಗೆಯಲು ಸಾಧ್ಯವಾಗದೇ ಪೆಟ್ಟಿಗೆ ಬಿಚ್ಚಿನೋಡುತ್ತಾರೆ. ಅಲ್ಲಿದ್ದ ಗಣಪತಿ ಮೂರ್ತಿಯನ್ನು ಅಲ್ಲಿಯೇ ಪ್ರತಿಷ್ಠಾಪಿಸಿ, ಭಾರವಾಗಿ ಇಳಿಸಿದ ಕಾರಣ ಭಾರಾಳಿ ಎನ್ನುವ ಹೆಸರಿಟ್ಟು ಖ್ಯಾತಿ ಪಡೆಯಿತು. ಉಳಿದ ಬೆಳ್ಳಿಯ ಗೆಜ್ಜೆಯನ್ನು ಹಿಡಿದು ಮಂದಾರ್ತಿ ಸ್ಥಳಕ್ಕೆ ಬಂದಾಗ ಗೆಜ್ಜೆ ಹಿಡಿದವರು ನರ್ತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಆಗ ದೇವರ ನುಡಿಯಂತೆ, ಸೂರ್ಗೋಳಿ ಅಂತುವಿನಿಂದ ಪ್ರಾರಂಭವಾದ ಗೆಜ್ಜೆ ಸೇವೆ ಅಥವಾ ಬೆಳಕಿನ ಸೇವೆ ಇಂದು ಭಕ್ತರ ಹರಕೆಯನ್ನು ತೀರಿಸುತ್ತ ಬಂದಿದೆ. ಕಳ್ಳನಿಂದ ಪ್ರಾರಂಭವಾದ ಯಕ್ಷಗಾನ ಮೇಳಗಳು ಇಂದು ಕರಾವಳಿ ಹಾಗೂ ಮಲೆನಾಡ ಪ್ರದೇಶಗಳಲ್ಲಿ ಅಪಾರ ಜನಮನ್ನಣೆಯನ್ನು ಪಡೆದು ೫ ಮೇಳಗಳಾಗಿ ಶುಕ್ರವಾರದ ಶುಭಮೂಹೂರ್ತದಲ್ಲಿ ಕಲಾಮಾತೆಯ ಸೇವೆಗಾಗಿ, ಭಕ್ತರ ಬೆಳಕಿನ ಸೇವೆಯನ್ನು ಪೂರೈಸಲು ಸಿದ್ದವಾಗಿದ್ದವು.
ಮಂದರತಿಯನ್ನು ನಂಬಿದ ಭಕ್ತರು, ಮನದ ಬೇಗುದಿಯನ್ನು ಪರಿಹರಿಸಲು, ಮಕ್ಕಳಾಗದೇ ಜೀವನದಲ್ಲಿ ಪರಿತಪಿಸುತ್ತಿವವರು, ಆಪತ್ಕಾಲದಲ್ಲಿ ಹೇಳಿಕೊಂಡ ಹರಕೆಯೇ ಬೆಳಕಿನ ಸೇವೆ. ಅವರ ಕಷ್ಠಗಳೆಲ್ಲಾ ಪರಿಹಾರವಾದ ನಂತರ, ಸೇವಾರೂಪದಲ್ಲಿ ಬೆಳಕಿನ ಸೇವೆಯನ್ನು ಭಕ್ತರು ನೀಡುತ್ತಾರೆ. ಈಗಾಗಲೇ ೨೦೨೦ರವರೆಗೆ ಮುಂಗಡ ಸೇವೆಯ ಬುಕ್ಕಿಂಗ್ ಆಗಿದ್ದು, ಐದು ಮೇಳಗಳಿಂದ ಸೇವೆಯನ್ನು ಪೂರೈಸಲು ಕಷ್ಠವಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಕಾಲಕ್ಕೆ ತಕ್ಕ ಬದಲಾವಣೆ:
೧೯೭೫ರಲ್ಲಿ ಮೇಳಕ್ಕೆ ಬಸ್ಸುಗಳಿರಲಿಲ್ಲ. ಮೇಳದ ಪೆಟ್ಟಿಗೆಯನ್ನು ತಲೆಯ ಮೇಲಿಟ್ಟುಕೊಂಡು ನಡೆದೆ ಹೋಗಬೇಕಾಗಿತ್ತು. ಎತ್ತರದ ಸ್ಥಳದಲ್ಲಿ ಅಥವಾ ಮರದ ಕೊಂಬೆಯಿರುವಲ್ಲಿ ಇಟ್ಟು, ದೇಹದ ದಣಿವನ್ನು ನಿವಾರಿಸುತ್ತಿದ್ದೇವು. ಜೊತೆಗಾರರಿಗೆ ದಾರಿ ತಿಳಿಯುವುದಕ್ಕಾಗಿ ಮರದ ಸೊಪ್ಪುಗಳನ್ನು ರಸ್ತೆಯಲ್ಲಿ ಹಾಕುತ್ತಿದ್ದೆವು. ಈಗಿನಂತೆ ಜನರೇಟರ್‌ನ ವ್ಯವಸ್ಥೆ ಇರಲಿಲ್ಲ. ರಾತ್ರಿಯಿಂದ ಬೆಳಗಿನವರೆಗೆ ದೀವಟಿಗೆ ಬೆಳಕಿನಲ್ಲಿ ಯಕ್ಷಗಾನ ಮಾಡುತ್ತಿದ್ದೆವು. ಈಗ ಹಿಂದಿನ ಕಲಾವಿದರಿಗೆ ಹೋಲಿಸಿದರೆ, ತುಂಬಾ ಬದಲಾವಣೆಯಾಗಿದೆ ಎಂದು ಔಪಚಾರಿಕವಾಗಿ ಹುಣ್ಸೆಮಕ್ಕಿ ಬಸವ ಹೇಳಿದರು.
-ಸಂದೇಶ ಶೆಟ್ಟಿ ಆರ್ಡಿ
Subscribe to:
Post Comments (Atom)
No comments:
Post a Comment