Wednesday, 18 April 2012

ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಬಾಲಪ್ರತಿಭೆಗಳಿಂದ ಯಕ್ಷಗಾನ ಧೀಂಕಿಟ ನಾದ....
ಕರ್ನಾಟಕ ರಾಜ್ಯದಲ್ಲಿ ೪೮,೪೦೦ ಪ್ರೌಢ ಮತ್ತು ಪ್ರಾಥಮಿಕ ಶಾಲೆ, ೧೩,೦೦೦ಕ್ಕೂ ಹೆಚ್ಚು ಅನುದಾನಿತ ಶಾಲೆಗಳಿವೆ. ೨೨೪ ವಿಧಾನಸಭಾ ಕ್ಷೇತ್ರದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರ ಕಾರ್ಯ ಶ್ಲಾಘನೀಯವಾದದ್ದು. ತುಳುನಾಡ ಸಂಸ್ಕೃತಿಯ ಪರಿಚಯ ಮಾಡುತ್ತಾ ಪುರಾಣದ ಹೂರಣವನ್ನು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರುವಂತೆ ಮಾಡುತ್ತಾ, ಸಭಾಕಂಪನವನ್ನು ಹೋಗಲಾಡಿಸುವುದಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟ ಕೀರ್ತಿ ಉಡುಪಿಯ ಶಾಸಕ ಕೆ.ರಘುಪತಿಭಟ್ ಅವರ ಪಾಲಿಗೆ ಸಲ್ಲುತ್ತದೆ. ಅವರು ಯಕ್ಷ ಶಿಕ್ಷಣ ಟ್ರಸ್ಟ್(ರಿ)ನ್ನು ಹುಟ್ಟುಹಾಕಿ ವಿಧಾನ ಸಭಾವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲೂ ಯಕ್ಷಗಾನವನ್ನು ಪರಿಚಯಿಸಿ ವಿದ್ಯಾರ್ಥಿಗಳ ಕಿಶೋರ ಯಕ್ಷಸಂಭ್ರಮ ಎನ್ನುವ ಉತ್ತಮವಾದ ಪ್ರದರ್ಶನವನ್ನು ಉಡುಪಿಯ ರಾಜಾಂಗಣ ಹಾಗೂ ಬ್ರಹ್ಮಾವರ ಪರಿಸರದಲ್ಲಿ ಆಯೋಜಿಸಿದ್ದಾರೆ. ಈ ಪ್ರದರ್ಶನದಲ್ಲಿ ನಗರ, ಹಳ್ಳಿ ಮತ್ತು ಕನ್ನಡ,ಆಂಗ್ಲಮಾದ್ಯಮ ಎನ್ನುವ ಬೇದವಿಲ್ಲದೇ ಎಲ್ಲಾ ಮಕ್ಕಳಿಗೂ ಯಕ್ಷಗಾನದಲ್ಲಿ ಅಭಿರುಚಿಯನ್ನು ಹತ್ತಿಸಿ ಅವರಲ್ಲಿರುವ ಸುಪ್ತವಾದ ಪ್ರತಿಭೆಯನ್ನು ಪ್ರಕಟಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಚ್ಛನ್ ಪಿಪೀಲಿಕಾ ಯಾತಿ ಯೋಜನಾನಿ ಶತಾನ್ಯಪಿ|
ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ||
ಎಂತಹ ಸುಂದರವಾದ ಸುಭಾಷಿತ ಅಲ್ವೇ ಇದು. ನಾವು ಸಣ್ಣಜೀವಿಯೆಂದು ಭಾವಿಸಿದ ಇರುವೆಯೊಂದು ನಡೆಯುತ್ತಾ ಸಾವಿರ ಹೆಜ್ಜೆಯನ್ನು ಕ್ರಮಿಸಬಲ್ಲದು. ಬಲಿಷ್ಟವಾದ ಗರುಡ ಹೆಜ್ಜೆ ಇಡದಿದ್ದರೆ ಮುಂದೆ ಸಾಗುವುದಕ್ಕೆ ಸಾಧ್ಯವಿಲ್ಲ. ಬಲಿಷ್ಢತೆಯೂ ಕೇವಲ ದೇಹದಲ್ಲಿದ್ದರೆ ಸಾಕಾಗುವುದಿಲ್ಲ.ಅದನ್ನು ಸಮರ್ಥವಾಗಿ ಮುಂದುವರಿಸುವ ಬುದ್ದಿಯ ಸಾಮರ್ಥ್ಯ ಎಲ್ಲರಲ್ಲೂ ಇರಬೇಕಾಗುತ್ತದೆ. ಮಗುವಿನ ದೇಹದಲ್ಲಿ ಬುದ್ದಿಶಕ್ತಿ ಮಾತ್ರ ಇದ್ದರೆ ಸಾಲದು..ಅದನ್ನು ಪ್ರಚುರ ಪಡಿಸುವಂತ ಸೂಕ್ತವೇದಿಕೆ ಸಿದ್ದವಾಗಬೇಕು. ಇಲ್ಲಿ ಮಗುವಿನ ಸಾಮರ್ಥ್ಯವೆನ್ನುವುದು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ಅವಲಂಬಿಸಿದೆ. ಮಗುವಿನ ಮನಸ್ಸಿನ ಮೇಲೆ ನಾನು ಕಲಿಯಬೇಕು ಎನ್ನುವ ಛಲವೇ ಅಸಾಧ್ಯವಾದುದನ್ನು ಸಾಧಿಸುವಲ್ಲಿ ಸಹಕರಿಸುತ್ತದೆ. ಅಸಾಧ್ಯವೆನ್ನುವ ಸಂಶಯಾತ್ಮಕ ಹುಳವನ್ನು ಮನಸ್ಸಿನಾಳದಿಂದ ಕಿತ್ತೊಗೆದು ಅದನ್ನು ಸಾಧ್ಯವೆನ್ನುವಂತೆ ಮಾಡುವ ಗುಣ ರಾಮಬಾಣದಂತೆ ಮನಸ್ಸಿಗೆ ನಾಟಿದಾಗ ಸಾಧಾರಣವೆಂದು ಭಾವಿಸಿದ ಮಗುವೊಂದು ಅದ್ಬುತವಾದುದನ್ನು ಸಾಧಿಸುವುದಕ್ಕೆ ಸಾಧ್ಯ. ಸಾಧನೆಯಿಂದ ಗಮನಸೆಳೆಯುವ ಮಕ್ಕಳನ್ನು ನೋಡಿ ತಂದೆ-ತಾಯಿ ಮೂಗಿನ ಮೇಲೆ ಬೆರಳನ್ನಿಟ್ಟು ಇವರು ನಮ್ಮ ಮಕ್ಕಳೇ! ಎಂದು ಆಶ್ಚರ್ಯ ಪಡುವಂತೆ ಮಾಡಿದ ಮಕ್ಕಳ ಈ ಚಮತ್ಕೃತಿಗೆ ದೊಡ್ಡವರಾದ ನಾವುಗಳು ನಾಚಲೇ ಬೇಕು. ಆಟದ ಅಂಗಳದಲ್ಲಿ ಚೀಣಿಕೋಲು, ಚೆಂಡುಗಳನ್ನು ಆಡುವುದಕ್ಕೆ ಮಾತ್ರವಲ್ಲ ನಮ್ಮಲ್ಲಿಯೂ ಕೂಡ ಅದ್ಬುತವಾದ ಪ್ರತಿಭೆ ಇದೆ ಎಂದು ತೋರಿಸಿಕೊಟ್ಟವರು ನಮ್ಮೂರಿನ ಭಾವೀ ಭಾರತದ ಕನಸುಕಂಗಳು....
ಯಕ್ಷಗಾನ, ನಾಟಕ, ಭರತನಾಟ್ಯ ಹಾಗೂ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ವಿದ್ಯಾರ್ಥಿಯು ಮಾನಸಿಕ ಸ್ಥ್ಯೆರ್ಯವನ್ನು ಹೊಂದಿ, ವಿದ್ಯಾಭ್ಯಾಸದಲ್ಲೂ ಮುಂಚುಣಿಯಲ್ಲಿರುತ್ತಾರೆ. ರಾಮಾಯಣದ ಏಕಪತ್ನಿ ವೃತಸ್ಥ ರಾಮ, ಮಹಾಪತಿವೃತೆ ಸೀತೆ, ಲಕ್ಷ್ಮಣನಾಗಿಯೋ ಅಥವಾ ಮಹಾಭಾರತದ ಕೃಷ್ಣ,ಧನುರ್ಧಾರಿ ಅರ್ಜುನ ಹಾಗೂ ದಾನಶೂರ ಕರ್ಣನಾಗಿ ರಂಗದಲ್ಲಿ ಮಿಂಚುವ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ದೈನಂದಿನ ಜೀವನದಲ್ಲಿ ಉದಾತ್ತವಾದ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುವುದರಲ್ಲಿ ಸಂಶಯವಿಲ್ಲಾ. ಪುರಾಣದ ಪಾತ್ರಗಳಲ್ಲಿ ಮಿಂಚುವ ವಿದ್ಯಾರ್ಥಿಗಳ ಮಾನಸಿಕ ಸ್ಥ್ಯೆರ್ಯವೇ ನಿಜಜೀವನದಲ್ಲಿ ಕೆಲವೊಮ್ಮೆ ಸಹಾಯವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಪುಸ್ತಕದಲ್ಲಿದ್ದಂತ ಪಠ್ಯವೇನಿದೆಯೊ ಅದನ್ನು ಕಲಿಯುವುದಕ್ಕ್ಕೂ, ಪಠ್ಯೇತರ ಚಟುವಟಿಕೆಯಿಂದ ಕಲಿತ ವಿದ್ಯೆಗೂ ಅಜಗಜಾಂತರ. ತುಳುನಾಡಿನ ಕಲೆಯಾದ ಯಕ್ಷಗಾನ ಕಲಿಸುವ ಪಾಠವೇ ಜೀವನ ಮೌಲ್ಯಧಾರಿತವಾದದ್ದು. ಕಾರಣವಿಷ್ಟೆ ಯಕ್ಷಗಾನದಲ್ಲಿ ಆಯ್ದುಕೊಳ್ಳುವ ಪ್ರಸಂಗಗಳಲ್ಲಿ ಕಲಾವಿದನೊಬ್ಬ ತಾನು ತಾನಾಗಿರದೇ ಆ ಪಾತ್ರಕ್ಕೆ ಜೀವತುಂಬಲು ಪರಾಕಾಯ ಪ್ರವೇಶ ಮಾಡಿ ಪ್ರೇಕ್ಷಕವರ್ಗದವರಿಂದ ಪ್ರಶಂಸೆಗೆ ಒಳಗಾಗುತ್ತಾನೆ. ಸಮಾಜದಲ್ಲಿರುವ ಒರೆಕೊರೆಗಳನ್ನು ನಮ್ಮ ಮಾತಿನ ಮೋಡಿಯಿಂದಲೋ, ಹಾಸ್ಯದ ಚುಚ್ಚುಮಾತುಗಳಿಂದ ಸರಿಪಡಿಸಲು ಪ್ರಯತ್ನಿಸುವ ಕಲಾವಿದ ಒಬ್ಬ ಶ್ರೇಷ್ಠಸಮಾಜ ಸುಧಾರಕ ಎನಿಸಿಕೊಳ್ಳುತ್ತಾನೆ.
ಹಸಿ ಮಡಕೆಯ ಮೇಲೆ ರಚಿಸಿದ ಚಿತ್ರವಿಚಿತ್ರರೇಖೆಗಳು ಮಡಕೆಯನ್ನು ಸುಟ್ಟಾಗಲೂ ಹೇಗೆ ಅಚ್ಚಳಿಯದೇ ಉಳಿಯುತ್ತದೋ, ಅಂತೆಯೇ ಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಕಲಿಸಿದ ವಿದ್ಯೆಗಳು ಬೆಳೆದು ದೊಡ್ಡವರಾದಾಗ ಅದನ್ನು ಪಾಲನೆ ಮಾಡುವಲ್ಲಿ ಸಹಕಾರಿಯಾಗುತ್ತದೆ. ಮಕ್ಕಳು ಯಕ್ಷಗಾನದಿಂದ ಕಲಿಯುವ ಪುರಾಣ, ಇತಿಹಾಸದ ನೈಜವಾದ ಪಾಠಗಳಿಂದ ಜೀವನ ಸಾಫಲ್ಯಹೊಂದುವುದಕ್ಕೆ ಇಂತಹ ವೇದಿಕೆ ಅಡಿಗಲ್ಲು. ಬಾಲ್ಯದಲ್ಲಿ ಮೂಡುವ ದೇಶದ ಬಗೆಗಿನ ಸಂಸ್ಕೃತಿ ಮುಂದಿನ ದಿನದಲ್ಲಿ ಪ್ರಜ್ವಲಿಸಿ ಸಮಾಜಮುಖಿಯಾಗುವುದಕ್ಕೆ ಸಾಧ್ಯವಾಗುತ್ತದೆ.
ವಿದ್ಯಾರ್ಥಿ ಜೀವನದಲ್ಲಿ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯ ಮೂಲಕ ಭಾರತೀಯ ಭವ್ಯಪರಂಪರೆಯ ಸ್ಥಾನಮಾನವನ್ನು ಕಲ್ಪಿಸುವಲ್ಲಿ ಇಂತಹ ವೇದಿಕೆ ಸಹಕಾರಿಯಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಆಕ್ರಮಣವನ್ನು ಕಡೆಗಣಿಸಿ ಇಲ್ಲಿಯ ಪರಂಪರೆ, ಸಂಸ್ಕೃತಿ ಉಳಿಸಲು ಕಟಿಬದ್ದರಾಗಿರುವ ಮಕ್ಕಳಿಗೆ ಉಚಿತವೇದಿಕೆಯನ್ನು ಶ್ರೀಕೃಷ್ಣನ ನಾಡಿನಲ್ಲಿ ನಾವು ಕಾಣಬಹುದು. ವಿದ್ಯಾರ್ಥಿಗಳ ಸುಪ್ತವಾಗಿರುವ ತಪ್ತಮನಗಳಲ್ಲಿ ಕಲೆಯೊಂದು ಅಡಗಿರುತ್ತದೆ. ಸಮಾಜದಲ್ಲಿ ಅದನ್ನು ಜಾಗೃತಗೊಳಿಸುವಂತ ಕಾರ್ಯವಾಗಬೇಕು. ಅದು ತಂದೆ, ತಾಯಿ, ಗುರು ಹಾಗೂ ಊರಿನ ಕೆಲವೇ ಹಿರಿಯರಿಂದ ಸೂಕ್ತವೇದಿಕೆ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಕವಿಯೊಬ್ಬರು ಆಡಿದ ಮಾತುಗಳನ್ನು ಉಲ್ಲೇಖಮಾಡಬೇಕಾಗುತ್ತದೆ. ಕವಿಯೊಬ್ಬನ ಸ್ವ-ಪ್ರತಿಭೆಯಿಂದ, ವಿದ್ವತ್ತಿನಿಂದ ಸುಂದರವಾದ ಕಾವ್ಯ ಹೊರಹೊಮ್ಮಿದರೂ ಅದಕ್ಕೆ ಬೆಲೆಯಿರುವುದಿಲ್ಲ. ಅದು ಯಾವಾಗ ಗಣ್ಯರು, ವಿಧ್ವನ್‌ಮಣಿಗಳು ಸೇರಿದ ಸಭೆಯಲ್ಲಿ ವಾಚಿಸಲ್ಪಟ್ಟಾಗ ಆ ಕವಿತೆಗೆ ಬೆಲೆಬರುವುದು ಹಾಗೂ ಸಮಾಜದಲ್ಲಿ ಗುರುತಿಸಲ್ಪಡುವುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಸೂಕ್ತವಾದ ವೇದಿಕೆ ಅಗತ್ಯಎನ್ನುವುದು ಹಲವರ ಭಾವನೆ ಅದು ನಿಜವೂ ಕೂಡ..
ಹಿರಿಯರು, ನನ್ನ ಮಾರ್ಗದರ್ಶಕರು ಹಾಗೂ ಕೆನರಾ ಬಸ್‌ಮಾಲಕರ ಸಂಘದ ಮ್ಯಾನೆಜರ್ ಆಗಿರುವ ಸದಾನಂದ ಶೆಟ್ಟಿ ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ಅವರು ಹೇಳಿದ ಮಾತುಗಳು ನನ್ನ ಹೃದಯಾಂತರಾಳದಲ್ಲಿ ಅಚ್ಚೊತ್ತಿದೆ. ಅಂದು ಅವರಾಡಿದ ಮಾತುಗಳನ್ನು ಕೇಳಿದಾಗ, ಈ ಕಾರ್ಯಕ್ರಮವನ್ನು ನೋಡಿದಾಗ ಮನದ ಮೂಲೆಯಲ್ಲಿ ಜಿಜ್ಞಾಸೆ ಪ್ರಾರಂಭವಾಗಿದೆ. ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಹಣವಿರಬೇಕು. ಅದರೊಂದಿಗೆ ಗುಣವಿರಬೇಕು. ಎಂ.ವಿ.ಕಾರಂತ್, ಕೋಟ ಶಿವರಾಮ ಕಾರಂತ್, ಯು.ಆರ್.ಅನಂತಮೂರ್ತಿರಂತಾಗಲೂ ಬುದ್ದಿಶಕ್ತಿಯಿದ್ದರೆ ಸಾಕು. ನಾವು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಗಮನಿಸಿದರೆ ತಿಳಿಯುತ್ತದೆ.ಅವರಲ್ಲಿ ಹಣವಿಲ್ಲದೆ ದಲಿತವರ್ಗದಲ್ಲಿ ಹುಟ್ಟಿದ ಮಾತ್ರಕ್ಕೆ ಅವರನ್ನು ಕೇವಲವಾಗಿ ಕಾಣಲಾಯಿತು.ಅವರು ಕೂಡ ನಮ್ಮಂತೆ ಮನುಷ್ಯರು ಎನ್ನುವ ಭಾವನೆ ಯಾಕೆ ಅರ್ಥಮಾಡಿಕೊಂಡಿಲ್ಲ. ಸಮಾಜದಲ್ಲಿ ವಿದ್ಯಾಧಿದೇವತೆ ಸರಸ್ವತಿ ಹಾಗೂ ಲಕ್ಷ್ಮೀಯರು ಒಟ್ಟಿಗೆ ನೆಲೆನಿಲ್ಲುವುದು ಕಷ್ಟಸಾಧ್ಯ. ಬುದ್ದಿವಂತಿಕೆಯಿರುವ ವ್ಯಕ್ತಿಗೆ ಹಣಕಾಸಿನ ತೊಂದರೆ ಕಂಡುಬರುತ್ತದೆ. ಆತನಿಗೆ ಬೇಕಾದಂತ ಅಧ್ಯಯನ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಅಡಚಣೆಯಾಗುತ್ತದೆ. ಇದರಿಂದ ಅವನಲ್ಲಿರುವ ಬುದ್ದಿಶಕ್ತಿಯ ಪ್ರದರ್ಶನವಾಗದೇ ಅದು ಕುಂಠಿತಗೊಳ್ಳುತ್ತದೆ. ಹಣಕಾಸಿನ ವ್ಯವಸ್ಥೆ ಇರುವವರ ಯೋಚನಾಲಹರಿ ವಿಚಿತ್ರವಾಗಿರುತ್ತದೆ. ಅವರಲ್ಲಿರುವ ಹಣವನ್ನು ದುಪ್ಪಟ್ಟು ಮಾಡುವುದರಲ್ಲಿ ಮಗ್ನರಾಗಿರುತ್ತಾರೆ.
ಅವರು ಹೇಳಿದ ವಿಷಯವನ್ನು ಪ್ರಸ್ತಾಪ ಮಾಡುವುದಕ್ಕೂ ಕಾರಣವಿದೆ. ವೃತ್ತಿರಂಗದಲ್ಲಿ ಅವರು ಹೇಳಿದ ಮಾತುಗಳು ನಿಜವಾಗಿದೆ. ಆದರೆ ನಾನು ಮಕ್ಕಳ ಯಕ್ಷಗಾನವನ್ನು ನೋಡಿದಾಗ ಮೇಲಿನ ವಿಷಯ ಚರ್ಚಿಸುವ ಹಾಗೆ ಮಾಡಿತು. ಯಕ್ಷಗಾನ ಮಾಡಿದ ವಿದ್ಯಾರ್ಥಿಗಳಲ್ಲಿ ಬಡವರು ಹಾಗೂ ಶ್ರೀಮಂತರು ಕೂಡ ಇದ್ದರು. ವಿದ್ಯಾರ್ಥಿ ಜೀವನದಲ್ಲಿ ಪ್ರತಿಭೆಯ ಮುಂದೆ ಹಣವು ಕೂಡ ನಗಣ್ಯವೆಂದು ಸಾಬಿತುಪಡಿಸಿದ್ದಾರೆ. ಇಲ್ಲಿ ಮುಖ್ಯವಾಗಿರುವುದು ಗುರುಗಳ ಪರಿಶ್ರಮ. ವಿದ್ಯಾರ್ಥಿಗಳಿಗೆ ಬೇದವನ್ನು ಮಾಡದೇ ಏಕದೃಷ್ಠಿಯಿಂದ ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡಿಸಿ ಸೂಕ್ತ ರಂಗಭೂಮಿಕೆಯನ್ನು ನಿರ್ಮಾಣಮಾಡಿ ಮಕ್ಕಳಲ್ಲಿರುವ ಅದಮ್ಯವಾದ ಕಲಾಚೇತನವನ್ನು ಹೊರಹೊಮ್ಮಿಸಿದ್ದಾರೆ.
ವಿದ್ಯಾರ್ಥಿಜೀವನದಲ್ಲಿ ಹಣವೇ ಮುಖ್ಯವೆಂದು ಭಾವಿಸಿ ಅದರ ಬೆಂಬತ್ತಿ ಹೋದರೆ ಕಲಿಯುವ ಉತ್ಸಾಹ ಕಡಿಮೆಯಾಗಿ, ದುಶ್ಚಟಗಳಿಗೆ ಬಲಿಯಾಗುವಂತ ಸಾಧ್ಯತೆಗಳು ಹೆಚ್ಚು. ಸರಸ್ವತಿಯ ಆರಾಧಕರಾಗಿ ವಿದ್ಯೆಯನ್ನು ಕಲಿಯುತ್ತಾ, ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಆಗಲೇ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾಜ ಗುರುತಿಸುತ್ತದೆ. ಯಾವಾಗ ಸಮಾಜ ಒಬ್ಬ ವ್ಯಕ್ತಿಯನ್ನು ಗುರುತಿಸಲ್ಪಡುತ್ತದೋ, ಆಗ ಅವರಿಗೆ ಉತ್ತಮವಾದ ಸ್ಥಾನಮಾನಗಳು ಸಿಗಲಾರಂಬಿಸುತ್ತದೆ.
ಯಕ್ಷಗಾನದ ಗಂಧಗಾಳಿಯೇ ತಿಳಿಯದ ಮಕ್ಕಳಿಗೆ ಯಕ್ಷಗಾನದ ಹೆಜ್ಜೆಯನ್ನು ಕಲಿಸಿ, ಅದರಲ್ಲಿ ಅಭಿರುಚಿಯನ್ನು ಬೆಳೆಸಿ, ಪುರಾಣದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವಂತೆ ಶ್ರಮಿಸಿದ ಗುರುವೃಂದದವರಿಗೆ ಯಾವ ರೀತಿಯಾದ ಅಭಿನಂದನೆಯನ್ನು ಸಲ್ಲಿಸಿದರೂ ಸಾಲುವುದಿಲ್ಲ. ಯಕ್ಷಗಾನದ ಲಯಬದ್ದವಾದ ಹೆಜ್ಜೆಗಾರಿಕೆ, ಶುತಿಭರಿತವಾದ ಮಾತಿನಿಂದ ವಿಶಿಷ್ಟವಾದ ರಂಗಭೂಮಿಕೆಯನ್ನು ಸೃಷ್ಠಿಸಿ ವೃತ್ತಿಕಲಾವಿದರಿಗೆ ಸರಿಸಮಾನವೆಂದು ತೋರಿಸಿದ ಉಡುಪಿಯ ಮಕ್ಕಳ ಸಾಧನೆ ಶ್ಲಾಘನೀಯವಾದುದು. ಮನುಷ್ಯನ ಭಾವನೆಗಳು ಅರಳುವುದು ಭಾಷೆಗಳಲ್ಲಿ . ಮನದಲ್ಲಿ ತಕ್ಷಣ ಅರಳುವ ಭಾವನೆಗಳು ಅದ್ಬುತವಾದ ಶಕ್ತಿಯನ್ನು ಹುಟ್ಟುಹಾಕುತ್ತವೆ. ಮಗುವು ತನ್ನ ತೊದಲು ನುಡಿಗಳಿಂದ ಪುರಾಣದ ಶ್ಲೋಕಗಳನ್ನು ಕಂಠಪಾಠ ಮಾಡಿ ನಿರರ್ಗಳವಾಗಿ ವಿದ್ವಾಂಸರು ಸೇರಿರುವಂತ ಸಭೆಯಲ್ಲಿ ಆಡುತ್ತಾರೆ ಎಂದರೆ ಗುರುವಿನ ಸಾಮರ್ಥ್ಯವನ್ನು ನಾವು ತಿಳಿಯಬಹುದು. ಚಿಕ್ಕಮಕ್ಕಳು ಯಾವುದೇ ವಿದ್ಯೆಯನ್ನು ಕೂಡಲೇ ಕರಗತ ಮಾಡಿಕೊಳ್ಳುತ್ತಾರೆ ಎನ್ನುವುದಕ್ಕೆ ಇದೊಂದು ನಿದರ್ಶನವಲ್ಲವೇ.. ಬಾಹ್ಯ ಪ್ರಪಂಚದಲ್ಲಿ ಅನೇಕ ಆಕರ್ಷಣೆಗಳು ಸಹಜವಾಗಿರುತ್ತದೆ. ಸಾಗರೋಪಾದಿಯ ಆಕರ್ಷಣೆಗಳನ್ನು ಮೆಟ್ಟಿನಿಲ್ಲಬಲ್ಲಂತ ದಿಟ್ಟಮನಸ್ಸಿನ, ದೃಢಸಂಕಲ್ಪದ ಗುಣ ಅವರಲ್ಲಿ ಸುಪ್ತವಾಗುವಂತೆ ಮಾಡಿ, ಅವರಲ್ಲಿಯೂ ಕೂಡ ರಾಮ, ಕೃಷ್ಣನ ಗುಣಗಳನ್ನು ಕಾಣುವಂತೆ ಮಾಡಿ ದೇಶದ ಭಾವೀ ಪ್ರಜೆಗಳನ್ನು ಸೃಷ್ಠಿಸಿದಂತ ಗುರುಹಿರಿಯರಿಗೆ ಸಹಸೃ ನಮನಗಳು.....
ಕೆ.ಎಸ್.ಶೆಟ್ಟಿ

No comments:

Post a Comment