Wednesday, 18 April 2012

ಛಾಪು ಮೂಡಿಸಿದ ಯಕ್ಷಗಾನ ಸಮ್ಮೇಳನ
ಸಂದೇಶ ಶೆಟ್ಟಿ ಆರ್ಡಿ
ಧರಣಿಮಂಡಲ ಮಧ್ಯದೊಳಗೆ ಎನ್ನುವ ಪದ್ಯದ ಪರ್ಯಾಯವಾಗಿ ಗಾನಮಂಡಲದೊಳಗೆ ಎನ್ನುವ ಸಾಲುಗಳನ್ನು ನೆನಪು ಮಾಡುತ್ತಾ ಯಕ್ಷಗಾನದ ಪದ್ಯಗಳನ್ನು ರಾಗ, ತಾಳ, ಲಯದೊಂದಿಗೆ ಹಾಡುತ್ತಾ ಪ್ರೇಕ್ಷಕರನ್ನು ಯಕ್ಷಗಾನಲೋಕದಲ್ಲಿ ವಿಹರಿಸುವಂತಹ ಕಾರ್ಯಕ್ರಮವೊಂದು ಇತ್ತೀಚಿಗೆ ನಡೆಯಿತು. ಯಕ್ಷಗಾನದಲ್ಲಿರುವ ತೆಂಕು, ಬಡಗು ತಿಟ್ಟುಗಳ ಗಾನಸುಧೆಯೊಂದಿಗೆ ಕರ್ನಾಟಕ ಸಂಗೀತವನ್ನು ಕೂಡ ಪರಿಚಯಿಸುತ್ತಾ, ಯಕ್ಷಪ್ರೇಕ್ಷಕರನ್ನು ಪುರಭವನದಲ್ಲಿ ಸೇರುವಂತೆ ಮಾಡಿದ ಕೀರ್ತಿ ಯಕ್ಷಗಾನ ವೈವಿಧ್ಯದ ಸಾಹಿತ್ಯ ಸಮ್ಮೇಳನದ್ದು.
ಯಕ್ಷಗಾನ ಕಲೆಯೊಂದು ರಾಗ-ಲಯ-ತಾಳದೊಂದಿಗೆ ಹಿಮ್ಮೇಳ ಹಾಗೂ ಮುಮ್ಮೇಳದ ಭಾವನೆಗಳು ರಂಗದಲ್ಲಿ ಮೇಳೈಸಿದಾಗ ಪರಿಪೂರ್ಣತೆಯನ್ನು ಕಂಡುಕೊಳ್ಳುತ್ತದೆ. ಆದರೆ ಪುರಭವನಲ್ಲಿ ನಡೆದ ಯಕ್ಷ-ಗಾನ-ವೈವಿಧ್ಯ ಕಾರ್ಯಕ್ರಮ ಇದಕ್ಕೆ ತದ್ವಿರುದ್ದ. ಕೇವಲ ಹಿಮ್ಮೇಳದಲ್ಲಿ ಯಕ್ಷಪ್ರೇಕ್ಷಕರನ್ನು ಕದಲದಂತೆ ತಮ್ಮ ಪ್ರತಿಭೆಯನ್ನು ಧಾರೆ ಎರೆದು ಯಕ್ಷಗಾನದ ಸೊಬಗನ್ನು ಹೆಚ್ಚಿಸಿದ್ದಾರೆ ತೆಂಕು-ಬಡಗಿನ ಹಾಗೂ ಕರ್ನಾಟಕ ಸಂಗೀತದ ಖ್ಯಾತ ತಾರೆಗಳು.
ಯಕ್ಷಗಾನವು ಹಿಂದು ಸಂಸ್ಕೃತಿಯ ಪ್ರತೀಕವಾಗಿದೆ. ಪುರಾಣದ ಪಠ್ಯಗಳನ್ನು ಯಕ್ಷಗಾನದಲ್ಲಿ ಬಳಸುತ್ತಾ ಕಲೆಯ ಅನಾವರಣಗೊಳಿಸುವ ಶ್ರೇಷ್ಠ ಕಲೆಯಾಗಿದೆ. ಯಕ್ಷಗಾನದಲ್ಲಿರುವ ಹಳೆಗನ್ನಡದ ಹಾಡುಗಳಿಂದಲೇ ಪುರಾಣವನ್ನು ತಿಳಿದುಕೊಳ್ಳಬಹುದು. ಹಾಡಿನೊಂದಿಗೆ ಚೆಂಡೆ-ಮದ್ದಳೆಯ ನಾದವು ಸೇರಿದಾಗ ಯಕ್ಷಗಾನಕ್ಕೊಂದು ಮೆರುಗು. ಯಕ್ಷಗಾನ ಕೇವಲ ಹಿಮ್ಮೇಳದಿಂದ ಪೂರ್ಣಗೊಳ್ಳುವುದಿಲ್ಲ. ಮುಮ್ಮೇಳವೂ ಸೇರಿದಾಗ ಮನರಂಜನೆಯನ್ನು ಉಂಟುಮಾಡುತ್ತದೆ.
ಸೌರಾಷ್ಟ್ರ ರಾಗದಲ್ಲಿ ಗಜಮುಖದವಗೆ ಗಣಪಗೆ ಎಂದು ಬಲಿಪ ನಾರಾಯಣ ಭಾಗವತರು ಹಾಡಿದ ನಡೆಯೊಂದಿಗೆ ಪಟ್ಲ ಸತೀಶ ಶೆಟ್ಟಿ ನಾಟ ರಾಗದಲ್ಲಿ ತೆಂಕಿನ ಶೈಲಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಟ ರಾಗದಲ್ಲಿ ವಾರಾಣಾವದನ ತ್ರೈಲೋಕ್ಯ ಸುಮೋಹನ...ಎನ್ನುವ ಸೂರಾಲ್ ರವಿ ಅವರ ಬಡಗಿನ ಶೈಲಿಯಂತೂ ಆಹ್ಲಾದಕರವಾಗಿತ್ತು.
ತೆಂಕು-ಬಡಗು ತಿಟ್ಟುಗಳೊಂದಿಗೆ ಕರ್ನಾಟಕ ಸಂಗೀತ ಸುಧೆಯನ್ನು ಹರಿಸಿದವರು ಗಣೇಶ್‌ರಾಜ್. ಗೌಳರಾಗದಲ್ಲಿ ಪ್ರಣಾಮ್ಯಹಂ ಎಂದು ವಿಘ್ನರಾಜನನ್ನು ಸ್ಮರಿಸಿದರು.
ಯಕ್ಷಗಾನವು ಕರ್ನಾಟಕ ಸಂಗೀತದಿಂದ ಪ್ರಭಾವಿತವಾಗಿದೆ. ಅನೇಕ ರಾಗಗಳು ಯಕ್ಷಗಾನಕ್ಕೆ ಕರ್ನಾಟಕ ಸಂಗೀತದಿಂದ ಬಳುವಳಿಯಾಗಿ ಬಂದಿದೆ. ಸಂಗೀತವನ್ನು ಅಭ್ಯಾಸ ಮಾಡಿದವರು ಗೌಳರಾಗವನ್ನು ಯಕ್ಷಗಾನದಲ್ಲಿಯೂ ಕೂಡ ಬಳಸಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.
ಎಲ್ಲಾ ಭಾಗವತೋತ್ತಮರು ಕೃಷ್ಣ ಸಂಧಾನದ ನೋಡಿದಂ ಕಣ್ದಣಿಯೇ ಚಿನುಮಯ ಮೂರ್ತಿಯ...ಎನ್ನುವ ಪಧ್ಯವನ್ನು ಮಧ್ಯಮಾವತಿ, ಹಿಂದೋಳ, ಕಾನಡ, ಆರಭಿರಾಗದಲ್ಲಿ ಹೇಳಿದ ರೀತಿಯಂತೂ ಯಕ್ಷಗಾನ ಲೋಕದಲ್ಲಿಯ ಅನನ್ಯಲಾಗಿತ್ತು. ಯಕ್ಷಗಾನದ ಬಯಲಾಟದಲ್ಲಿ ಹೇಳುವ ಈ ಪದ್ಯವು ರಾಗದೊಂದಿಗೆ ಭಕ್ತಿಪ್ರಧಾನವಾಗಿರುವುದು ಮತ್ತೊಂದು ವಿಶೇಷವಾಗಿದೆ. ಹಿಂದೋಳ ರಾಗವು ಚಲನಚಿತ್ರದಲ್ಲಿಯೂ ಕೂಡ ಬಳಕೆಯಾಗಿರುವುದು ಯಕ್ಷಗಾನಕ್ಕೊಂದು ಮೆರುಗು ತಂದಿದೆ.
ನಂತರದ ಕಲ್ಯಾಣಿ ರಾಗವನ್ನು ಯಕ್ಷಗಾನದಲ್ಲಿ ಅಳವಡಿಸದಿದ್ದರೆ ಯಕ್ಷಗಾನವು ಸಪ್ಪೆಯೆನಿಸುವುದು ಸತ್ಯ. ಅದಕ್ಕಾಗಿಯೇ ಈ ಕಾರ್ಯಕ್ರಮದಲ್ಲಿ ಕಲ್ಯಾಣಿ ರಾಗದಲ್ಲಿ ಶೂರ್ಪನಖಿ ವೇಷವ ಬದಲಿಸಿ ರಾಮನಲ್ಲಿಗೆ ಬಂದು ಮದುವೆಯಾಗೆಂದು ಭಿನ್ನವಿಸಿಕೊಳ್ಳುವ ರಾಘವ ನರಪತೆ ಎನ್ನುವ ಪದ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಯಕ್ಷಗಾನ ವೈವಿಧ್ಯದಲ್ಲಿ ಗಾನದೊಂದಿಗೆ ಮೃದಂಗಗಳ ಸ್ವರನಾದ, ಚೆಂಡೆಯ ಅಬ್ಬರವು ಕೂಡ ಮನಸ್ಸಿಗೆ ಸಂತೋಷವನ್ನುಂಟು ಮಾಡಿದೆ.

No comments:

Post a Comment