Saturday 21 April 2012

ವಿಚ್ಚೇದನ ಎನ್ನುವ ವೈರಸ್




ದಾಂಪತ್ಯ ಜೀವನಕ್ಕೆ ಆವರಿಸಿಕೊಂಡಿರುವ ವಿಚ್ಛೇದನವೆಂಬ ವೈರಸ್‌ಗೆ ಕೊನೆ ಎಂದು....?
( ನ್ಯಾಯಾಲಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿಚ್ಛೇದನ ದೂರುಗಳು ಹಾಗೂ ಹಿಂದು ಧರ್ಮದಲ್ಲಿ ಉಲ್ಲೇಖವಾಗಿರುವ ದಾಂಪತ್ಯ ಜೀವನದ ಸವಿಯನ್ನು ಆದರಿಸಿ...)
ಹಿಂದು ಧರ್ಮ ಯಾವ ವ್ಯಕ್ತಿಯೂ ಸ್ಥಾಪನೆ ಮಾಡಿರುವಂಥದ್ದಲ್ಲ. ಜೀವನ ಮೌಲ್ಯಗಳನ್ನು ಒಳಗೊಂಡ ಜೀವನಕಲೆಯನ್ನು ಸಾರುವ ಬರವಣಿಗೆರಹಿತ ಮನುಕುಲದ ಧರ್ಮವೇ ಹಿಂದುಧರ್ಮ. ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಸಾರುವುದಕ್ಕೆ ಯಾವ ಗುಣಗಳು ಪೂರಕ ವಾಗಿರಬೇಕು ಹಾಗೂ ಸಂಸ್ಕಾರ, ಸಂಸ್ಕೃತಿಗಳಿಂದ ಜನರು ಯಾವ ರೀತಿ ಬದುಕಬೇಕೆನ್ನುವುದೇ ಹಿಂದುಧರ್ಮದ ಸಾರ. ಹಿಂದುಸ್ಥಾನದಲ್ಲಿರುವ ಪ್ರತಿಯೊಂದು ಜೀವಿಯು ಕೂಡ ತನ್ನದೇ ಆದ ವ್ಯಕ್ತಿತ್ವವನ್ನು ಸಾರುತ್ತಾ ಸಮಾಜದಲ್ಲಿ ಗುರುತಿಸಿಕೊಳ್ಳುತ್ತದೆ. ಆದರೆ ಜೀವಿಗಳಲ್ಲಿ ಬುದ್ದಿಜೀವಿಯೆನಿಸಿದ ಮಾನವ ಮಾತ್ರ ಪ್ರಾಣಿಗಳಿಗಿಂತ ಕಡೆಯಾದ ಮೌಲ್ಯಗಳನ್ನು ಬೆಳೆಸಿಕೊಂಡು, ಕೀಳುಮಟ್ಟಕ್ಕೆ ಇಳಿದಿದ್ದಾನೆ. ಶಿಕ್ಷಣ, ಕೃಷಿ, ಸಂಸ್ಕಾರ, ಸಂಸ್ಕೃತಿಯ ಮೇಲೆ ಹೊಡೆತ ಬಿದ್ದಿರುವುದಲ್ಲದೇ ಮದುವೆಯಲ್ಲಿಯೂ ಕೂಡ ವಿಚ್ಛೇದನ ಎನ್ನುವ ವೈರಸ್ ಆಕ್ರಮಿಸಿ ಹಿಂದುಧರ್ಮದಲ್ಲಿರುವ ಮದುವೆಯ ಸುಂದರ ಬಾಂದವ್ಯಕ್ಕೆ ಹುಳಿ ಹಿಂಡಿದಂತಾಗಿದೆ.
ಹಿಂದು ಧರ್ಮದಲ್ಲಿ ಸಾರಿರುವ ೧೬ಸಂಸ್ಕಾರಗಳಲ್ಲಿ ಮದುವೆ ವ್ಯಕ್ತಿಯೊಬ್ಬನ ಜೀವನಶ್ರೇಷ್ಟ ಅಂಗ. ಹಿಂದು ಸಂಪ್ರದಾಯದಂತೆ ಮದುವೆಯಲ್ಲಿ ನಾಂದಿಯಿಡುವುದು, ಅರಸಿನ ಎಣ್ಣೆ ಸವರುವುದು, ಎದುರುಗೊಳ್ಳುವುದು, ಮಾಲಾರ್ಪಣೆ, ಧಾರೆ, ಮಾಂಗಲ್ಯಕಟ್ಟುವುದು, ಕಾಲುಂಗುರತೊಡಿಸುವುದು, ಹಣೆಗೆ ಬೊಟ್ಟು, ಸಪ್ತಪದಿ, ಹೆಣ್ಣೊಪ್ಪಿಸುವುದು, ಆರತಾಕ್ಷತೆ, ವಧುಗೃಹ ಪ್ರವೇಶ, ಜಲಕೇಳಿ ಪ್ರಮುಖವಾದ ಅಂಶಗಳು.
ದಾಂಪತ್ಯ ಎನ್ನುವುದು ಎರಡು ವ್ಯಕ್ತಿಗಳ ಮಿಲನ ಅಲ್ಲ, ಯಾರನ್ನು ಪತಿಯಾಗಿ ಸ್ವೀಕಾರ ಮಾಡಬೇಕು ಎನ್ನುವುದು ನಿಶ್ಚಿತವಾಗಬೇಕು. ಪ್ರತಿಯೊಬ್ಬ ಹೆಣ್ಣುಮಗಳು ಯೌವನದಲ್ಲಿ ಪ್ರಣಯದ ಸಾರಥಿಯಾಗಿ, ನಡುವಿನಲ್ಲಿ ಹೆಗಲಿಗೆ ಹೆಗಲಾಗಿ, ಇಳಿವಯಸ್ಸಿನಲ್ಲಿ ಕೈಹಿಡಿದು ಸಲಹಬೇಕು ಎಂದು ಬಯಸುತ್ತಾಳೆ.ಹಿಂದು ಧರ್ಮದಲ್ಲಿರುವ ನಂಬಿಕೆಯಂತೆ ಜನ್ಮತಳೆಯುವುದಕ್ಕಿಂತ ಮುಂಚೆ ಗಂಡು-ಹೆಣ್ಣಿನ ಸಂಬಂಧ ಏರ್ಪಟ್ಟಿರುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಸಂಸ್ಕೃತ ಶ್ಲೋಕವೊಂದು ಮನುಷ್ಯ ಸಂಬಂಧದ ಬಗ್ಗೆ ಈ ರೀತಿಯಾಗಿ ತಿಳಿಸುತ್ತದೆ.
``ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ
ಋಣ ಗಶ್ಚಂತೇ ಗಶ್ಚಂತೇ ಕಾಕತ್ರ ಪರಿಬೇದನಃ"
ಹೆಂಡತಿ ಮಕ್ಕಳು ಬಾಹ್ಯಪ್ರಪಂಚದಲ್ಲಿ ಋಣ ಇರುವವರೆಗೆ ಒಟ್ಟಿಗೆ ಇರುತ್ತಾರೆ. ಋಣದ ಅಂಶ ಯಾವಾಗ ಮುಗಿಯುತ್ತದೋ ಆಗ ಪ್ರಪಂಚವನ್ನೇ ಬಿಟ್ಟು ಹೋಗುತ್ತಾರೆ ಎನ್ನುವುದು ಸಾರಾಂಶವಾಗಿದೆ. ಪ್ರಸ್ತುತ ಸಮಾಜದಲ್ಲಿ ದಿನ ಬೆಳಗಾದರೆ ವಿಚ್ಚೇಧನಕ್ಕಾಗಿ ಹತ್ತಾರು ವ್ಯಾಜ್ಯಗಳು ನ್ಯಾಯಾಯಲದ ಮುಂದಿರುತ್ತದೆ. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಹೇಳುವ ಪ್ರಕಾರ ಈ ವರ್ಷ ನ.೨೪ರವರೆಗೆ ೫೫,೦೦೦ ಜೋಡಿಗಳು ವಿಚ್ಛೇಧನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಮುಂಬೈಯಲ್ಲಿ ೭,೫೦೦, ದೆಹಲಿಯಲ್ಲಿ ೯,೦೦೦ ಹಾಗೂ ಬೆಂಗಳೂರಿನಲ್ಲಿ ೩,೦೦೦ ಜೋಡಿ ವಿಚ್ಛೇದನಕ್ಕೆ ಮನಃ ಮಾಡಿರುವುದು ವರದಿಯಾಗಿದೆ. ಅವರೆಲ್ಲಾ ಸಂಸಾರ ಜೀವನವನ್ನು ನಡೆಸಿ ಅನುಭವವನ್ನು ಪಡೆದ ವ್ಯಕ್ತಿಗಳೆಂದು ಭಾವಿಸಿದರೆ ಅದು ತಪ್ಪು. ಸಂಸಾರ ನೌಕೆಯನ್ನು ಸಾಗಿಸಲಾರದೆ, ಬೇಸತ್ತು ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸುವ ನವವಿವಾಹಿತರು ನಮ್ಮ ಕಣ್ಣಮುಂದಿದ್ದಾರೆ. ಇಂದಿನ ಶಿಕ್ಷಣ ಪದ್ದತಿ ಅವರಲ್ಲಿರುವ ಸಹನೆ, ತಾಳ್ಮೆ, ಹೊಂದಿಕೊಂಡು ಬಾಳುವ ಗುಣ, ಸಮಾಜದ ಬಗ್ಗೆ ಕಾಳಜಿ ಹಾಗೂ ಮಾನವನಿಗೆ ಅವಶ್ಯಕವಾಗಿ ಯಾವ ಗುಣಗಳು ಬೇಕೊ ಅದನ್ನೆಲ್ಲಾ ಕಬಂಧ ಬಾಹುಗಳಿಂದ ಆಕ್ರಮಿಸಿಕೊಂಡಿದೆ. ಕೇವಲ ಸ್ವಾರ್ಥ, ಸ್ವ-ಹಿತ ಚಿಂತನೆಯೇ ಹೆಮ್ಮರವಾಗಿ ಬೆಳೆದಿದೆ. ನಾಲ್ಕು ಗೋಡೆಗಳ ಮದ್ಯೆ ಕುಳಿತು ನಾವು ಪಾಶ್ಚತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ.
ಕವಿ ಮಹಾಶಯರು ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳಿದ ಮಾತುಗಳು ಕೇವಲ ಹಿಂದಿನವರಿಗೆ ಮಾತ್ರ ಅನ್ವಯವಾಗುತ್ತಿತ್ತೆ ಎನ್ನುವ ಸಂಶಯ ಮೂಡುತ್ತದೆ. ನಗುಮೊಗದೊಂದಿಗೆ ಕಾಫಿ-ಟೀಯನ್ನು ಮಾಡಿಕೊಡುವ ಹಿರಿಯರ ಸಂಸಾರದ ಗುಟ್ಟೇನು? ಮಾತೆತ್ತಿದರೆ ಡೈವೋರ್‍ಸ್‌ಗೆ ಮನಮಾಡುವ ನವವಧುಗಳ ಪಾಡೇನು? ಯಾಕೆ ಹೀಗಾಡುತ್ತಿದ್ದೇವೆ...ನಾವು ಎಲ್ಲಿ ಎಡವುತ್ತಿರುವುದು... ಅದರ ಎಳೆಯನ್ನು ಹಿಡಿದು ಹೊರಟಾಗ ಸಿಗುವುದೇ ನಮ್ಮ ಗುರುಕುಲ ಶಿಕ್ಷಣ ಪದ್ದತಿಯ ಮೇಲೆ ಪೆಟ್ಟುಕೊಟ್ಟು, ಇಂಗ್ಲೀಷ್ ಶಿಕ್ಷಣ ಪದ್ದತಿಯನ್ನು ಅಳವಡಿಸಿದ್ದರಿಂದಾಗಿ ಇಂದು ನಾವು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ಸ್ಫಷ್ಟ.
ಭಾರತ ಎನ್ನುವ ಹೆಸರು ಕೇಳಿದಾಕ್ಷಣ ದೇಹದಲ್ಲಿ ಒಂದು ರೀತಿಯ ರೋಮಾಂಚನ. ಆ ಹೆಸರಿನಲ್ಲಿ ಅಂಥ ಮಹತ್ವವಿದೆ. ಹಸಿದು ಬಂದವರಿಗೆ ಹಸಿವೆಯನ್ನು ತಣಿಸುವ ಅಮೃತಧಾರೆ.ಆಶ್ರಯವನ್ನು ಬೇಡಿಬಂದವರ ಪಾಲಿಗೆ ಆಶ್ರಯದಾತೆ. ಅನೇಕ ಪುಣ್ಯ ಪುರುಷರಿಗೆ ಜನ್ಮನೀಡಿ ಸಲಹುತ್ತಿರುವ ಜನ್ಮದಾತೆ,ಮಾತೃಸ್ವರೂಪಿಣಿ, ರಾಮಾಯಣ, ಮಹಾಭಾರತವೆನ್ನುವ ಮಹದೃಂತಗಳು ಸಾಕ್ಷಾತ್ಕಾರವಾದಂತ ಭವ್ಯಭೂಮಿ, ದೀರ ಶೂರರನ್ನು ಸಲಹಿದ ವಾತ್ಸಲ್ಯಮಯಿ, ದುಷ್ಟ-ಶಿಷ್ಟರನ್ನು ಸಮಾನವಾಗಿ ಕಂಡು ಸಲಹುತ್ತಿರುವ ತ್ಯಾಗಮಯಿ ನಮ್ಮ ದೇಶ.
ಭಾ-ಜ್ಞಾನ,ಪ್ರಕಾಶ: ರತ-ನಾಲ್ಕು ಕಡೆ ಬೆಳಕು ಪಸರಿಸುವುದು. ಮೂರು ಕಡೆ ನೀರಿನಿಂದ, ಒಂದು ಕಡೆ ನೆಲದಿಂದ ಕಂಗೊಳಿಸಿ, ತನ್ನದೇ ಆದ ವಿಶಿಷ್ಟತೆಯನ್ನು ಮೆರೆಯುತ್ತಿರುವ ದೇಶ. ಉತ್ತರದಲ್ಲಿ ಭಾರತಾಂಬೆಯ ಭವ್ಯವಾದ ಕಿರೀಟದಂತೆ ಶೋಭಿಸುವ ಹಿಮರಾಜ ನಗುತ್ತಿದ್ದರೆ, ದಕ್ಷಿಣದಲ್ಲಿ ಯಾವಾಗಲೂ ಮಾತೆಯ ಪಾದವನ್ನು ತೊಳೆಯುತ್ತಿರುವ ಸಮುದ್ರರಾಜನಿಂದ ಭಾರತಾಂಬೆ ನಿತ್ಯನೂತನವೂ ಶೃಂಗಾರ ಭರಿತಳಾಗಿದ್ದಾಳೆ.
ಭಾರತಭೂಮಿಯಲ್ಲಿ ಅದರಲ್ಲೂ ಹಿಂದು ಧರ್ಮದಲ್ಲಿ ಹುಟ್ಟಿ, ನಮ್ಮ ಸಂಸ್ಕೃತಿಯನ್ನು ಮೈದಳೆದು ಜೀವಸುವ ಭಾಗ್ಯ ಪುಣ್ಯವಂತರಿಗೆ ಮಾತ್ರ ಸಲ್ಲುತ್ತದೆ. ಅವಿಭಕ್ತ ಕುಟುಂಬದ ರಚನೆ, ಗುರು-ಶಿಷ್ಯರ, ತಂದೆ ತಾಯಿಯ ಸಂಬಂಧ, ಮದುವೆಯ ಬಂಧನ ಎಲ್ಲವೂ ಕೂಡ ಮಾದರಿಯಾಗಿತ್ತು. ನಮ್ಮ ಸಂಸ್ಕೃತಿಯನ್ನು ನಾಶಮಾಡುವುದಕ್ಕಾಗಿ ಮೆಕಾಲೆ ಇಂಗ್ಲೀಷ್ ಶಿಕ್ಷಣವನ್ನು ಜಾರಿಮಾಡಿದಾಗ ನಮ್ಮಲ್ಲಿ ವಿರೋಧವಾದರೂ ಹೊಸದನ್ನು ಕಲಿಯುತ್ತೇವೆ ಎನ್ನುವ ಕಿಂಚಿತ್ ಆಸೆ, ನಮ್ಮ ಸಂಸ್ಕೃತಿಯ ನಾಶವಾಗುತ್ತದೆ ಎಂದು ಯಾರು ಕೂಡ ಲೆಕ್ಕಿಸಿರಲಿಲ್ಲ.
ಭಾರತೀಯರು ಗುರುಕುಲ ಶಿಕ್ಷಣ ಪದ್ದತಿಯಿಂದ ಇಂಗ್ಲೀಷ್ ಶಿಕ್ಷಣಪದ್ದತಿಗೆ ಮಾರುಹೋದಾಗಲೇ ನಮ್ಮ ಸಂಸ್ಕೃತಿಯ ನಾಶಮಾಡುವಂಥ ಒಂದೊಂದೇ ಅಂಶಗಳು ಗೋಚರವಾಗ ತೊಡಗಿದವು. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘೋರ ದುರಂತಗಳಿಂದ ಹಿಂದುಸಮಾಜ ಸಂಕಟದ ಸ್ಥಿತಿಯಲ್ಲಿದೆ. ತಂದೆ-ತಾಯಿಯ ಮೇಲಿದ್ದ ಗೌರವಗಳು , ಗುರು-ಹಿರಿಯರ ಮೇಲಿದ್ದ ಪೂಜ್ಯಭಾವನೆಗಳು ಮಾಯವಾಗುತ್ತ ಬಂದವು. ಹಿಂದಿನ ಕಾಲದಲ್ಲಿ ಅನಕ್ಷರಸ್ಥರಾಗಿದ್ದರೂ ಕೂಡ ತಂದೆ ತಾಯಿ, ಗುರು-ಹಿರಿಯರ ಮೇಲೆ ಗೌರವವನ್ನು ತಾಳಿದ್ದ ಹಿರಿಯರು ಈ ದುರಂತವನ್ನು ನೋಡಿ ಸಹಿಸಿಯಾರೆ? ಎನ್ನುವ ಅಂಜಿಕೆ ಎಲ್ಲರನ್ನು ಕಾಡುತ್ತದೆ. ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಮತ್ತು ಅತಿಥಿದೇವೋಭವ ಎಂದು ಸಾರಿ, ಹಿಂದು ಧರ್ಮದಲ್ಲಿ ಮಹನೀಯ ಪೂಜ್ಯಭಾವನೆಗಳ ಸಾಕಾರಮೂರ್ತಿಗಳ ನಾಡಿನಲ್ಲಿ ಮದುವೆಯ ಬಗ್ಗೆ ಯೋಚಿಸುವಾಗ ನಾವು ಯಾವ ಸ್ಥಿತಿಗೆ ತಲುಪಿದ್ದೇವೆ. ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಮ್ಮ ಸಂಸ್ಕೃತಿಯನ್ನು ಮರೆತು ಅವರ ಸಂಸ್ಕೃತಿಗೆ ದಾಸರಾಗುತ್ತಿದ್ದೇವೆ.
ಹಿಂದು ಸಂಸ್ಕೃತಿ ಹಾಗೂ ಹಿಂದು ಮನೆಯ ಬಗ್ಗೆ ದೇಶದ ನಾನಾ ಕಡೆ ಪಸರಿಸುತ್ತಾ ಆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಕ್ಷೇತ್ರಿಯ ಪ್ರಚಾರಕರಾದ ನ.ಕೃಷ್ಣಪ್ಪನವರು ಹೇಳಿದ ಎರಡು ಘಟನೆಗಳನ್ನು ಕೇಳಿದಾಗ ನಮ್ಮ ಸಂಸ್ಕೃತಿಯ ಮೌಲ್ಯ ತಿಳಿಯುತ್ತದೆ. ನಮ್ಮ ದೇಶದ ಹಿರಿಯರು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಅಲ್ಲಿರುವ ಪ್ರಸಿದ್ದ ಸ್ಥಳಗಳನ್ನು ತೋರಿಸಿ, ಕೊನೆಯಲ್ಲಿ ಸ್ಮಶಾನವನ್ನು ತೋರಿಸಲು ಕರೆದೊಯ್ಯುತ್ತಾರೆ. ಅಲ್ಲಿರುವಂಥ ಗೋರಿಯನ್ನೆಲ್ಲಾ ನೋಡುತ್ತಾ ಬರುವಾಗ ೨೫ವರ್ಷದ ತರುಣಿ ಸಮಾಧಿಯ ಮುಂದೆ ಕುಳಿತು ಬೀಸಣಿಗೆಯಿಂದ ಗಾಳಿ ಹಾಕುತ್ತಿದ್ದಳು. ಹಿರಿಯ ಅಧಿಕಾರಿಗೆ ಕೂತುಹಲ ತಾಳಲಾರದೆ ಅವಳಲ್ಲಿ ಪ್ರಶ್ನಿಸಿದಾಗ ಈ ಸಮಾಧಿ ನನ್ನ ಗಂಡನದು ಎನ್ನುವ ಉತ್ತರ ಕೇಳಿ ಸಂತೋಷವಾಗುತ್ತದೆ. ಹಿಂದು ಧರ್ಮದಲ್ಲಿರುವ ಗಂಡ ಹೆಂಡತಿಯ ಮಧುರವಾದ ಸಂಬಂಧ ಸಾವಿರಾರು ಮೈಲಿದೂರದವರೆಗೆ ಹರಡಿದೆ ಎಂದು ಸಂತೋಷ ಪಡುತ್ತಿರುವಾಗ ಆ ತರುಣಿಯೇ ಮಾತನ್ನು ಪ್ರಾರಂಬಿಸುತ್ತಾಳೆ. ನಾವಿಬ್ಬರೂ ಮದುವೆಗೆ ಮುಂಚೆ ಒಂದು ಒಪ್ಪಂದ ಮಾಡಿಕೊಂಡಿದ್ದೇವು. ನಮ್ಮಲ್ಲಿ ಯಾರೂ ಮುಂಚೆ ಸತ್ತರೂ ಸಮಾಧಿಗೆ ಬಳಿದ ಬಣ್ಣ ಒಣಗುವ ಮುಂಚೆ ಬೇರೆ ಮದುವೆ ಆಗುವ ಹಾಗಿಲ್ಲ.... ಅದಕ್ಕಾಗಿಯೇ ಬೀಸಣಿಗೆಯಿಂದ ಗಾಳಿ ಹಾಕಿ, ಒಣಗಿದ ನಂತರ ಇನ್ನೋದು ಗಂಡಿನ ಬೇಟೆಗೆ ಸಿದ್ದಳಾಗಿದ್ದಾಳೆ..ಈ ಸತಿ ಶಿರೋಮಣಿಗೆ ಎಂತಹ ಆತುರ ನೋಡಿ.
ಬೆಂಗಳೂರಿನ ಘಟನೆಗೆ ಇದಕ್ಕೆ ತದ್ವಿರುದ್ದ :
ಹಳ್ಳಿಯ ವಯಸ್ಸಾದ ಗಂಡ ಹೆಂಡತಿ ತಮ್ಮ ಆಪ್ತರ ಮಗಳಿಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಮದುವೆಗೆ ಹೋದಾಗ ಅಲ್ಲಿ ಪುರುಷರಿಗೆ ಒಂದು ಕಡೆ ಹಾಗೂ ಮಹಿಳೆಗೆ ಇನ್ನೊಂದು ಕಡೆ ವ್ಯವಸ್ಥೆ ಮಾಡಿದ್ದರು.ಇಲ್ಲಿಯವರೆಗೆ ಒಬ್ಬರನ್ನು ಬಿಟ್ಟು ಊಟಮಾಡದ ಆ ದಂಪತಿಗಳು ಅನಿವಾರ್ಯವಾಗಿ ಬೇರೆ ತೆರಳಬೇಕಾಯಿತು. ಅಲ್ಲಿಯೂ ಕೂಡ ಅವರು ಸರಿಯಾಗಿ ಊಟಮಾಡದೇ, ಹೆಂಡತಿಯು ಯಜಮಾನರ ಚಿಂತೆಯಲ್ಲಿ, ಯಜಮಾನರು ಹೆಂಡತಿಯ ಚಿಂತೆಯಲ್ಲಿ ಹೇಗೋ ಊಟಮುಗಿಸಿದರೆನ್ನಿ.... ಇದು ನಮ್ಮ ಹಿಂದು ಸಂಸ್ಕೃತಿಯ ಅನ್ಯೋನ್ಯಭಾವ.
ಈ ಘಟನೆಗಳಲ್ಲಿ ಎರಡನೇಯದು ಹಳ್ಳಿಗಳಲ್ಲಿ ಕಂಡುಬಂದರೂ, ಯುವಜನತೆ ಮಾತ್ರ ಮೊದಲಿನ ಘಟನೆಯನ್ನು ಅನುಸರಿಸುತ್ತಿದ್ದಾರೆ. ಮುಸ್ಲಿಂ ಸಮಾಜದಲ್ಲಿ ಮೂರು ಬಾರಿ ತಲಾಖ್ ಹೇಳಿದರೆ ಗಂಡ-ಹೆಂಡತಿಯ ಮಧ್ಯೆ ಯಾವುದೇ ಸಂಬಂಧವಿರುವುದಿಲ್ಲ. ಹೆಂಗಸರೆಂದರೆ ಕೇವಲ ಹೆರಿಗೆಯ ಯಂತ್ರಗಳು ಎಂದು ಸಾರುವ ಶಿಲಾಯುಗದ ಮೂಢನಂಬಿಕೆಗಳನ್ನು ಇಂದು ಕೂಡ ಆಚರಿಸುತ್ತಾ, ಮಹಿಳೆಯರನ್ನು ಕೇವಲ ಭೋಗದ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಮದುವೆಯಾದ ಹೊಸತರಲ್ಲೆ ಅನ್ಯೋನ್ಯವಾಗಿರುವ ನವಜೋಡಿ, ಕ್ಷುಲ್ಲಕ ಕಾರಣಕ್ಕೆ ಕಟಕಟೆಯನ್ನು ಏರಿ ವಿಚ್ಚೇದನಕ್ಕೆ ಮನಃ ಮಾಡುತ್ತಿದ್ದಾರೆ. ಸಪ್ತಪದಿ ತುಳಿದು, ಜೀವನ ಪರ್ಯಂತ ಒಟ್ಟಿಗೆ ಇರುತ್ತೆವೆಂದು ಗುರುಹಿರಿಯರ ಸಮ್ಮುಖದಲ್ಲಿ ಮಾಂಗಲ್ಯವನ್ನು ಕಟ್ಟಿಸಿಕೊಂಡು ದಾಂಪತ್ಯಜೀವನಕ್ಕೆ ಕಾಲಿರಿಸಿ ಅದರಂತೆ ಯಾರು ಬದುಕುತ್ತಾರೋ ಅದುವೇ ಶ್ರೇಷ್ಟ ಹಿಂದುಸಮಾಜದ ಲಕ್ಷಣ. ಜೀವನದಲ್ಲಿ ವಿಚ್ಛೇದನ ಪಡೆದ ವ್ಯಕ್ತಿಗೆ ಸಮಾಜದಲ್ಲಿ ಸಿಗುವ ಮನ್ನಣೆಯಾದರೂ ಏನು? ದಾಂಪತ್ಯ ಜೀವನದಲ್ಲಿ ಸಾಧ್ವಿ-ಶಿರೋಮಣಿಯಂತೆ ಬದುಕಿ ಮಕ್ಕಳಿಗೆ ಪ್ರೇರಣೆಯಾಗಿ ಬದುಕಬೇಕು. ಯುವಜನತೆ ಸೀತೆ, ಸಾವಿತ್ರಿ,ದ್ರೌಪದಿ,ಅನುಸೂಯ,ಅರುಂದತಿಯರ ಗುಣಗಳನ್ನು ಬೆಳೆಸಿಕೊಂಡು ತಾಳ್ಮೆ, ಸಹನೆಯಿಂದ ಜೀವನ ನಡೆಸಿದ್ದೆ ಆದರೆ ಹಿಂದು ಸಮಾಜದ ಮೇಲೆ ನಡೆಯಬಹುದಾದ ಘನಘೋರ ದುರಂತವನ್ನು ತಡೆಯಬಹುದು.ಒಮ್ಮೆ ನಮ್ಮೆಲ್ಲರ ಅಂತರಂಗವನ್ನು ಕೆದಕಿನೊಡೋಣ......
-ಕೆ.ಎಸ್.ಶೆಟ್ಟಿ

No comments:

Post a Comment