Wednesday 18 April 2012

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ವಿಜಯಿಯಾಗಿ ಜಯಪ್ರಕಾಶರಾಗಿರುವ ಜೆಪಿಎಚ್
ಸರ್ವೇ ಯತ್ರ ವಿನೇತಾರಃ ಸರ್ವೇ ಯತ್ರಾಭಿಮಾನಿನಃ |
ಸರ್ವೇ ಮಹತ್ತ್ವಮಿಚ್ಚಂತಿ ಸರ್ವಂ ತತ್ರಾವಸೀದತಿ ||
ಎಲ್ಲಿ ಎಲ್ಲರೂ ನಾಯಕರೋ ಎಲ್ಲಿ ಎಲ್ಲರೂ ಅತಿ ಮಾನಿಷ್ಠರೋ ಎಲ್ಲಿ ಎಲ್ಲರೂ ಕೀರ್ತಿ-ಗೌರವಗಳನ್ನು ಬಯಸುತ್ತಾರೋ ಅಲ್ಲಿ ಎಲ್ಲವೂ ಹಾಳಾಗುತ್ತದೆ. ಇದು ಲೋಕಮಾನ್ಯವಾದ ವಾಕ್ಯೋಕ್ತಿ. ಇದು ಉಡುಪಿ-ಚಿಕ್ಕಮಗಳೂರು ಲೋಕಸಭೆಯ ಉಪಚುನಾವಣೆಯಲ್ಲಿ ಜನತೆಯು ಕಂಡ ನೈಜ ಘಟನೆಯಾಗಿದೆ.
ಕರ್ನಾಟಕದ ರಾಜಕೀಯ ಕ್ಷೇತ್ರದ ಬಿಜೆಪಿ ವಲಯದ ದಿನನಿತ್ಯದ ಘಟನೆ, ಅವರು ಯಕಶ್ಚಿತ್ ಕುರ್ಚಿಗಾಗಿ ಕಿತ್ತಾಟ ಮಾಡಿರುವುದು ಹಾಗೂ ಅವರ ಅವ್ಯವಹಾರಗಳಿಂದ ಬೇಸತ್ತ ಬುದ್ದಿವಂತ ನಾಡಿನ ಜನ ಬಿಜೆಪಿಯ ನಾಯಕರಿಗೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ ಎನ್ನುವುದು ಸ್ಪಷ್ಟ. ಕುತೂಹಲ ಮತ್ತು ಪ್ರತಿಷ್ಠೆಯ ಕಣವಾಗಿದ್ದ ಉಡುಪಿ-ಲೋಕಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಾಗ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಬಿಜೆಪಿಯ ಸುನೀಲ್ ಕುಮಾರ್ ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದರು. ಬಿಜೆಪಿಯ ಭದ್ರ ಕೋಟೆಯಾಗಿದ್ದ ಉಡುಪಿ-ಚಿಕ್ಕಮಗಳೂರು ಮತದಾರರು ಅಚ್ಚರಿಯ ಫಲಿತಾಂಶ ನೀಡುವ ಮೂಲಕ ಹೆಗ್ಡೆಯವರ ಕೈ ಹಿಡಿದಿದ್ದಾರೆ.
ರಾಜ್ಯದಲ್ಲಿ ಬದಲಾದ ದಿಡೀರ್ ರಾಜಕೀಯ ಸನ್ನಿವೇಶದಲ್ಲಿ ಹೈಕಮಾಂಡ್ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡರು ಅಚ್ಚರಿಯನ್ನು ಮೂಡಿಸಿದ್ದರು. ಡಿ.ವಿ.ಅವರ ರಾಜ್ಯ ರಾಜಕಾರಣ ಪ್ರವೇಶವಾದ್ದರಿಂದ ಉಡುಪಿ ಲೋಕಸಭಾ ಕ್ಷೇತ್ರದ ಸ್ಥಾನ ತೆರವಾಗಿತ್ತು. ರಾಜ್ಯದ ಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರವೆಂಬ ವಿಚಾರದಲ್ಲಿ ಬಿ.ಜೆ.ಪಿ ಈ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು.ಕಳೆದ ಬಾರಿ ಗೌಡರ ಎದುರು ಅಲ್ಪ ಮತಗಳ ಅಂತರದಲ್ಲಿ ಸೋಲನ್ನು ಕಂಡ ಜಯಪ್ರಕಾಶ ಹೆಗ್ಡೆ ಈ ಬಾರಿ ಮಾತ್ರ ಗೆಲುವು ದಾಖಲಿಸಬೇಕು ಎನ್ನುವ ಛಲದಿಂದ ಅವಿರತ ಶ್ರಮಿಸಿ ಕೊನೆಗೂ ಭರ್ಜರಿಯಾಗಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಭದ್ರ ಕೋಟೆಯಲ್ಲಿ ಹೋರಾಡಿ ವಿಜಯಮಾಲೆಯನ್ನು ಕೊರಳಿಗೆ ಧರಿಸಿಕೊಂಡಿದ್ದಾರೆ. ಅವರ ಹೆಸರಿನಂತೆ ಪ್ರಕಾಶ ಮಾನರಾಗಿ ಜಯಬೇರಿಯನ್ನು ಭಾರಿಸಿದ್ದಾರೆ. ಪ್ರಕಾಶ ಮಾನವರಾಗಿ ಜಯದ ಮಾಲೆ ಧರಿಸಿ ಜಯಪ್ರಕಾಶರಾಗಿದ್ದಾರೆ ಎನ್ನುವುದು ಜನಸಾಮಾನ್ಯರ ನಂಬಿಕೆ.
ಬಿಜೆಪಿ ಪಾಳಯದಲ್ಲಿರುವ ಒಳಜಗಳದಿಂದ ರಾಜ್ಯದ ಜನತೆ ಅವರ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎನ್ನುವುದು ಗೋಚರವಾಗಿದೆ. ಕೇವಲ ಅಧಿಕಾರಕ್ಕಾಗಿ ಹಪಹಪಿಸುವ ನಾಯಕರಿಗಿಂತ ಸಜ್ಜನ ಸರಳ ವ್ಯಕ್ತಿತ್ವದ ನಾಯಕನೇ ಆಗಬಹುದು ಎನ್ನುವ ನಿರ್ಧಾರವನ್ನು ಜನತಳೆದಿದ್ದಾರೆ. ರಾಜಕೀಯ ಕ್ಷೇತ್ರದ ಚಿತ್ರಣವನ್ನು ಕಣ್ಣಮುಂದಿರಿಸಿ ರಾಜ್ಯದ ಸ್ಥಿತಿಗತಿಯನ್ನು ನೋಡಿದರೆ ವಿದ್ಯಾವಂತರಿಗೆ ಚುನಾವಣೆ ಬಂದಾಗ ಇರಿಸುಮುರಿಸಾಗುತ್ತದೆ. ಯಾಕೆ ಬಂತು ಈ ಚುನಾವಣೆ ಎನ್ನುವ ಬೇಸರ ಒಂದೆಡೆಯಾದರೆ ಜಯಪ್ರಕಾಶ ಹೆಗ್ಡೆಯವರಂತ ಜನನಾಯಕರು ಚುನಾವಣೆಗೆ ನಿಂತಾಗ ಸಂತೋಷವಾಗುತ್ತದೆ. ಹೀಗೆ ವಿದ್ಯಾವಂತ-ಅವಿದ್ಯಾವಂತರೆನ್ನದೆ ಏಕಮನಸ್ಸಿನಿಂದ ಜಯಪ್ರಕಾಶ ಹೆಗ್ಡೆಯವರನ್ನು ಹರಸಿದ್ದಾರೆ.
ಉಡುಪಿಯಲ್ಲಿನ ಕೆಲವೊಂದು ಅಹಿತಕರ ಘಟನೆಗಳು ಸುನೀಲ್‌ಕುಮಾರ್ ಭವಿಷ್ಯಕ್ಕೆ ಮುಳುವಾಯಿತು ಎನ್ನುವುದು ಜನಗಳ ಅಭಿಪ್ರಾಯ. ಕೆಲವೊಂದು ಸಂಧರ್ಭದಲ್ಲಿ ವೈಯಕ್ತಿಕವಾಗಿ ಪರಿಣಾಮ ಬೀರುತ್ತದೆ ಎನ್ನುವ ಅಂಶವನ್ನು ಕಡೆಗಣಿಸಲಾಗದು. ರಾಜ್ಯಮಟ್ಟದ ಎಲ್ಲಾ ನಾಯಕರು ಹಾಗೂ ಸಿನಿಮಾ ತಾರೆಗಳು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಿದರೂ ಜನತೆ ಮಾತ್ರ ನಿಷ್ಠಾವಂತರನ್ನೆ ಆಯ್ಕೆ ಮಾಡಿರುವುದು ಗಮನಿಸಬೇಕಾದ ಅಂಶ.
ಉಡುಪಿಯಲ್ಲಿ ಪ್ರವಾಸೋಧ್ಯಮ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ರೇವ್ ಪಾರ್ಟಿಗೆ ಬೆಂಬಲ ನೀಡಿದ್ದಾರೆ ಎನ್ನುವ ಆಕ್ರೋಷ ಒಂದೆಡೆಯಾದರೆ, ಹಲವಾರು ಕೊಲೆಗಳು ನಡೆದರೂ ಅದರ ಪೂರ್ಣ ತನಿಖೆಯಾಗದೇ ಫೈಲುಗಳು ಹಳೆಯ ಕಡತಗಳ ಸಾಲಿಗೆ ಸೇರಿರುವುದನ್ನು ಗಮನಿಸಿರುವುದು ಜನತೆಯ ಸೂಕ್ಷ್ಮಗ್ರಾಹಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
೧೯೯೯ರಿಂದ ಉಡುಪಿ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಲ್ಲಿದ್ದು, ಜಯಪ್ರಕಾಶ ಹೆಗ್ಡೆ ಎನ್ನುವ ಬಂಟ ಸಮುದಾಯದ ಹುಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜಯೋತ್ಸವವನ್ನು ಆಚರಿಸಿದ್ದಾರೆ. ಮೀನುಗಾರಿಕಾ ಸಚಿವರಾಗಿದ್ದ ಜಯಪ್ರಕಾಶ ಹೆಗ್ಡೆ ಅನೇಕ ಜನಪರ ಕಾರ್ಯಗಳನ್ನು ಮಾಡಿ ಪ್ರತಿಯೊಬ್ಬರ ಮನವನ್ನು ಗೆದ್ದಿದ್ದರು. ಹಾಗೂ ಕರಾವಳಿಯಲ್ಲಿರುವ ಬಂಟ ಸಮುದಾಯದ ಆಶೀರ್ವಾದದಿಂದ ಲೋಕಸಭಾ ಅಭ್ಯರ್ಥಿಯಾಗಿದ್ದಾರೆ. ನನ್ನಂತ ಯುವಜನಾಂಗ ಹಾಗೂ ಜನತೆ ಜಯಪ್ರಕಾಶ ಹೆಗ್ಡೆಯವರ ಸಚಿವ ಸ್ಥಾನದ ಜನಪರ ಕಾರ್ಯಗಳನ್ನು ಆಶಿಸುತ್ತಿದ್ದಾರೆ. ಜಯಪ್ರಕಾಶ ಹೆಗ್ಡೆಯವರಿಗೆ ಅವಕಾಶವನ್ನು ಕೊಟ್ಟು ಸ್ವಚ್ಚ ರಾಜಕೀಯ ವಾತಾವರಣವನ್ನು ಆಶಿಸುತ್ತಿದ್ದಾರೆ...ಯುಗಾದಿಯ ಮುನ್ನಾದಿನ ಹೊಸತನವನ್ನು ಕಂಡುಕೊಳ್ಳುವುದರೊಂದಿಗೆ ಉತ್ತಮ ನಾಯಕನನ್ನು ಆರಿಸಿದ ಹೆಮ್ಮೆ ಜನತೆಯ ಮೊಗದಲ್ಲಿ....
ಕೆ.ಎಸ್.ಶೆಟ್ಟಿ

No comments:

Post a Comment