Thursday, 19 April 2012

ಪಂಚಾಯತ್ ವಿಶೇಷ

ಗ್ರಾಮೀಣ ಪಂಚಾಯತ್‌ಗೆ ಕೇಂದ್ರ ಸರಕಾರದಿಂದ ಪ್ರೋತ್ಸಾಹಕ ಬಹುಮಾನ
ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ನಕ್ಸಲ್ ಪೀಡಿತ ಪ್ರದೇಶ ಮಡಾಮಕ್ಕಿ ಗ್ರಾಮ ಪಂಚಾಯತ್‌ಗೆ ಕೇಂದ್ರ ಸರಕಾರದ ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣ ಉತ್ತರದಾಯಿತ್ವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಗ್ರಾಮಪಂಚಾಯಿತಿಯ ಅಭಿವೃದ್ದಿಗೆ ಸಾಕ್ಷಿಯಾಗಿದೆ. ಉಡುಪಿ ಜಿಲ್ಲೆಯ ಒಟ್ಟು ೧೪೬ ಗ್ರಾಮ ಪಂಚಾಯತ್‌ಗಳಲ್ಲಿ ಮಡಾಮಕ್ಕಿಗೆ ಕೇಂದ್ರ ಸರ್ಕಾರದಿಂದ ಗ್ರಾಮಗಳ ಅಭಿವೃದ್ದಿಗೆ ಪ್ರೋತ್ಸಾಹಕ ಬಹುಮಾನ ಘೋಷಣೆಯಾಗಿದೆ.
ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಬಂದ ಸವಲತ್ತುಗಳನ್ನು ಗ್ರಾಮದ ಜನತೆಗೆ ನೀಡುವುದು, ಸರಿಯಾದ ಸಮಯಕ್ಕೆ ಗ್ರಾಮ ಸಭೆಯನ್ನು ನಡೆಸಿ ಗ್ರಾಮವಾಸಿಗಳ ಅಹವಾಲನ್ನು ಸ್ವೀಕರಿಸಿರುವುದು, ಗ್ರಾಮದ ಅಭಿವೃದ್ದಿಗೆ ಆಧ್ಯತೆ, ಗ್ರಾಮೀಣ ಶಿಕ್ಷಣಕ್ಕೆ ಪ್ರೋತ್ಸಾಹ, ಮಹಿಳೆಯರ ಹಕ್ಕುಗಳ ರಕ್ಷಣೆ, ಆರೋಗ್ಯ ಹಾಗೂ ಗ್ರಾಮ ನೈರ್ಮಲ್ಯಕ್ಕೆ ಪ್ರೋತ್ಸಾಹ, ಗ್ರಾಮದ ಅಭ್ಯುದಯಕ್ಕೆ ಹಾಗೂ ಅದರ ನಿರ್ವಹಣೆ, ಗ್ರಾಮ ಮಟ್ಟದಲ್ಲಿ ಪಕ್ಷಭೇದವನ್ನು ಮರೆತು ಆಡಳಿತದ ಪಾರದರ್ಶಕತೆ, ಸಾಮಾಜಿಕ ಹಾಗೂ ಸೇವಾ ಕಾರ್ಯವನ್ನು ಗುರುತಿಸಿ ಕೇಂದ್ರ ಸರಕಾರವು ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಅದರ ಫಲಶ್ರುತಿಯೇ ಮಡಾಮಕ್ಕಿ ಗ್ರಾಮ ಪಂಚಾಯತ್‌ಗೆ ದಕ್ಕಿದ ಬಹುಮಾನ.
ಆಯ್ಕೆ ಪ್ರಕ್ರಿಯೆ ನಡೆದ ರೀತಿ:
ಕೇಂದ್ರ ಸರಕಾರದಿಂದ ಪ್ರಥಮ ಹೆಜ್ಜೆಯಾಗಿ ಗ್ರಾಮ ಪಂಚಾಯತ್‌ಗಳನ್ನು ಸಬಲೀಕರಣ ಹಾಗೂ ಉತ್ತರದಾಯಿತ್ವಗೊಳಿಸಲು ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ತರಲಾಗಿದೆ. ಆ ಕುರಿತು ಕುಂದಾಪುರ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್‌ನ್ನು ಆಯ್ಕೆ ಮಾಡಿ ವರದಿಯನ್ನು ಕಳುಹಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ ರಾಜ್ಯಸರ್ಕಾರದಿಂದ ಇಬ್ಬರು ಸದಸ್ಯರನ್ನು ಒಳಗೊಂಡ ತಂಡವು ಗ್ರಾಮ ಪಂಚಾಯಿತಿ ಕಳುಹಿಸಿದ ಮಾಹಿತಿಯನ್ನು ಆಧರಿಸಿ ಸಮೀಕ್ಷೆಗೆ ಬಂದಿದ್ದು, ಅವರು ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ನೀಡಿದ್ದರು. ಎನ್‌ಜಿಒ ತಂಡ ಕೇಂದ್ರಕ್ಕೆ ನೀಡಿದ ಮಾಹಿತಿಯನ್ನು ಆಧರಿಸಿ ಕೇರಳದಿಂದ ಮೂರು ಜನರ ತಂಡ ರಾಜ್ಯದ ವರದಿಯನ್ನು ಆಧರಿಸಿ ಪ್ರಶ್ನಾವಳಿಯನ್ನು ನೀಡಲಾಗಿ ಕೇಂದ್ರದಿಂದ ರೂ. ೧೩ಲಕ್ಷ ಮೌಲ್ಯದ ಪ್ರಶಸ್ತಿಯನ್ನು ಪಂಚಾಯತಿಗೆ ನೀಡಲಾಗಿದೆ.
ಮಡಾಮಕ್ಕಿ ಗ್ರಾಮ ಪಂಚಾಯತ್‌ನ ವಿಶೇಷತೆ
ಭಯದಿಂದಲೇ ಜೀವನವನ್ನು ನಡೆಸುವ ಗ್ರಾಮೀಣ ಜನತೆಯ ಪಾಲಿಗೆ ಸಂತೋಷದ ವಿಚಾರವಾಗಿದ್ದರೂ ಅದರ ಹಿಂದಿರುವ ಶ್ರಮವನ್ನು ನೆನಪಿಸಲೇ ಬೇಕಾಗುತ್ತದೆ. ಪಕ್ಷಭೇದವನ್ನು ಮರೆತು ಕಾಂಗ್ರೆಸ್ ಹಾಗೂ ಬಿಜೆಪಿಗಳು ಪ್ರಭಾವಶಾಲಿಗಳಾಗಿರುವ ಪಂಚಾಯತ್‌ನಲ್ಲಿ ಸಮಬಲದೊಂದಿಗೆ ೫ವರ್ಷಗಳನ್ನು ಹಂಚಿಕೊಂಡು ಆಳುವ ಪರಿಸ್ಥಿತಿಯ ನಿರ್ಮಾಣವಾಗಿತ್ತು. ೧೦ ಸದಸ್ಯರನ್ನು ಹೊಂದಿರುವ ಪಂಚಾಯತ್‌ನಲ್ಲಿ ಕಾಂಗ್ರೆಸ್ ಅಧಿಕಾರವದಿಯನ್ನು ಮುಗಿಸಿ ಬಿಜೆಪಿ ಪಾಳಯ ಅಧಿಕಾರದಲ್ಲಿರುವಾಗ ಕೇಂದ್ರ ಸರಕಾರದ ಈ ಪ್ರಶಸ್ತಿಯ ಘೋಷಣೆಯಾಗಿದೆ. ಪಂಚಾಯತ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸರಿಯಾಗಿರಿಸಿ, ಸಾಮಾನ್ಯ ಸಭೆ ಹಾಗೂ ಉಪಸಮಿತಿ ಸಭೆಯನ್ನು ಚಾಚೂ ತಪ್ಪದೇ ನೆರವೇರಿಸಿದ್ದರು. ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್‌ನ ಅಪವ್ಯಯವನ್ನು ತಪ್ಪಿಸಲು ಸಾರ್ವಜನಿಕವಾದ ನಳ್ಳಿಗಳನ್ನು ಪ್ರತಿಯೊಂದು ಮನೆಗೆ ಜೋಡಿಸಲಾಗಿದೆ. ಅವುಗಳಿಗೆ ಪ್ರತ್ಯೇಕವಾದ ಮೀಟರ್ ವ್ಯವಸ್ಥೆಯನ್ನು ಮಾಡಿ, ಕಳಪೆ ಗುಣಮಟ್ಟದ ಮೀಟರ್ ಹಾವಳಿಯನ್ನು ತಡೆಗಟ್ಟಿ ಐಎಸ್‌ಐ ಮಾರ್ಕಿನ ಮೀಟರನ್ನು ಹಾಕಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಡಿ ೧೪ಲಕ್ಷದ ಸಭಾಂಗಣ ನಿರ್ಮಾಣವಾಗಿದೆ. ಹೆಚ್ಚಿನ ಆಧಾಯವಿಲ್ಲದ ಗ್ರಾಮ ಪಂಚಾಯತಿಗೆ ಗ್ರಾಮಸ್ಥರೇ ಒಟ್ಟು ಸೇರಿ ಮೂಲಭೂತ ಸವಲತ್ತುಗಳನ್ನು ಒದಗಿಸಿದ್ದಾರೆ. ಯುವಕ ಮಂಡಲ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸಾಮಾನ್ಯ ಜನತೆಗೆ ಕೈಗೆಟಕುವಂತೆ ಸಾಲಯೋಜನೆ ವ್ಯವಸ್ಥೆ ಮಾಡಲಾಗಿತ್ತು. ಉಚಿತ ರಕ್ತಪರೀಕ್ಷೆ, ನೇತ್ರಚಿಕಿತ್ಸಾ ಶಿಬಿರ ಹಾಗೂ ಶೈಕ್ಷಣಿಕ ಅಭಿವೃದ್ದಿಯ ಕಾರ್ಯಕ್ರಮವನ್ನು ಪಂಚಾಯಿತಿ ಮೂಲಕ ವ್ಯವಸ್ಥೆಗೊಳಿಸಲಾಗಿತ್ತು.
ಕೇಂದ್ರ ಸರಕಾರದ ಈ ಪ್ರಶಸ್ತಿಯು ರೂ.೧೩ಲಕ್ಷಗಳನ್ನು ಒಳಗೊಂಡಿದೆ. ಸರ್ಕಾರದ ಮಾರ್ಗದರ್ಶನದಂತೆ ಗ್ರಾಮದ ಅಭಿವೃದ್ದಿಗೆ ಹಣವನ್ನು ಮೀಸಲಿಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರದ ಸೇವೆಗಳನ್ನು ಶೀಘ್ರವಾಗಿ ಗ್ರಾಮೀಣ ಜನತೆಯ ಪಾಲಿಗೆ ನೀಡುವಲ್ಲಿ ಮುತುವರ್ಜಿ ವಹಿಸಲಾಗುವುದು ಎಂದು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಶ್ ಶೆಣೈ ಅವರ ಅಭಿಪ್ರಾಯ.
ಪ್ರಥಮವಾಗಿ ಕುಂದಾಪುರ ತಾಲೂಕಿನಲ್ಲಿ ಅಬಕಾರಿ ಅಧಿಕಾರಿಗಳು ಗ್ರಾಮದ ಜನತೆಯ ಅಹವಾಲನ್ನು ಸ್ವೀಕರಿಸಿದ ಹೆಗ್ಗಳಿಕೆ ನಮ್ಮ ಪಾಲಿಗಿದೆ. ನಕ್ಸಲರ ಹಾವಳಿಯಿದ್ದರೂ ಜನರಿಗೆ ಸರಕಾರದ ಸೇವೆಯನ್ನು ನೀಡುವಲ್ಲಿ ಗ್ರಾಮ ಪಂಚಾಯತ್ ಯಶಸ್ವಿಯಾಗಿದೆ ಎನ್ನುತ್ತಾರೆ ಪಂಚಾಯತ್ ಮಾಜಿ ಅಧ್ಯಕ್ಷ ಶೇಡಿಮನೆ ಉದಯ ಶೆಟ್ಟಿ.
- ಸಂದೇಶ ಶೆಟ್ಟಿ ಆರ್ಡಿ

No comments:

Post a Comment