Wednesday, 18 April 2012

ಉಡುಪಿ ರಾಜಕೀಯದಲ್ಲಿ ಕಣದಲ್ಲಿ ಬಂಟ ಸಮಾಜದ ಹ್ಯಾಟ್ರಿಕ್ ಹೀರೋ -ಜಯಪ್ರಕಾಶ ಹೆಗ್ಡೆ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬ್ರಹ್ಮಾವರದ ಜಯಪ್ರಕಾಶ ಹೆಗ್ಡೆ ಎನ್ನುವ ಧೀಮಂತ ವ್ಯಕ್ತಿತ್ವದ ಸಜ್ಜನ ರಾಜಕಾರಣಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವುದು ತುಳುನಾಡಿನ ಬಂಟ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ವೃತ್ತಿಯಲ್ಲಿ ವಕೀಲರಾಗಿರುವ ಜಯಪ್ರಕಾಶ ಹೆಗ್ಡೆಯವರನ್ನು ಆತ್ಮೀಯವಾಗಿ ಜೆಪಿಎಚ್ ಎಂದು ಕರೆಯುತ್ತಾರೆ. ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಹಾಗೂ ನಿವೃತ್ತ ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಷ್ಟ್ರಾರ್ ಕೆ.ಚಂದ್ರಶೇಖರ ಹೆಗ್ಡೆಯವರ ಸುಪುತ್ರನಾಗಿ ಜನಿಸಿದರು. ಜಯಪ್ರಕಾಶ ಹೆಗ್ಡೆ ಅವರ ಕುಟುಂಬದಲ್ಲಿ ಪತ್ನಿ ಶೋಭಾ ಹೆಗ್ಡೆ, ಪುತ್ರ ನಿಶಾಂತ್ ಹಾಗೂ ಪುತ್ರಿ ದಿವ್ಯಾರನ್ನು ಒಳಗೊಂಡ ಚಿಕ್ಕ ಕುಟುಂಬವಾಗಿದೆ. ಜೆಪಿಎಚ್ ೧೯೯೪ರಿಂದ ೨೦೦೮ರವರೆಗೆ ಬ್ರಹ್ಮಾವರ ಚುನಾವಣಾ ಕ್ಷೇತ್ರದಲ್ಲಿ ಪ್ರತಿನಿಧಿಸಿದ್ದಾರೆ.
೨೦೦೯ರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೀಯ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಎದುರು ಕಡಿಮೆ ಅಂತರದಲ್ಲಿ ಸೋತು ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ.
೨೫ ವರ್ಷಗಳಿಂದ ರಾಜಕೀಯದಲ್ಲಿ ಜನರ ಒಳಿತಿಗಾಗಿ ಜೆಪಿಎಚ್ ದಣಿವಿಲ್ಲದೇ ಶ್ರಮಿಸಿದ್ದಾರೆ. ರಾಜಕಾರಣಿಗಳು ಸಾಮಾನ್ಯವಾಗಿ ಕೈಗೆಟಕುವುದಿಲ್ಲ.ಅವರ ಕುರಿತು ಇರುವ ಭಯ, ಅಂಜಿಕೆಗಳನ್ನು ಜೆಪಿಎಚ್ ಹುಸಿಯಾಗಿಸಿದ್ದಾರೆ. ಸಾಮಾನ್ಯ ಜನರು ನಿರ್ಭಯರಾಗಿ ಅವರನ್ನು ಮಾತನಾಡಿಸಬಹುದು. ಅವರ ಸರಳ ಸಜ್ಜನಿಕೆಯು ಇತರ ರಾಜಕಾರಣಿಗಳಿಗೆ ಮಾದರಿಯಾಗಿದೆ. ಜಾತ್ಯಾತೀತ ನಂಬಿಕೆ ಮತ್ತು ಪ್ರಗತಿಪರ ನಂಬಿಕೆಗಳು ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಗಳಿಸಿಕೊಟ್ಟಿದೆ. ಸರಳತೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿರುವ ಬದ್ದತೆಯು ಅವರ ಪ್ರಾಮಾಣಿಕತೆಯನ್ನು ಬಿಂಬಿಸುತ್ತದೆ. ಇಂತಹ ಗುಣಗಳಿಂದಲೇ ಅವರು ತತ್ವಧಾರಿತ ರಾಜಕಾರಣಿ ಎನ್ನುವ ಖ್ಯಾತಿಯನ್ನು ಗಳಿಸಿಕೊಟ್ಟಿದೆ.
ಬಿಜೆಪಿಯ ಯುವ ನೇತಾರ ಕಾರ್ಕಳದ ವಿ.ಸುನೀಲ್ ಕುಮಾರ್‌ಗೆ ಸಮಬಲದ ಸ್ಪರ್ಧೆ ಒಡ್ಡಬಲ್ಲ ಸಾಮರ್ಥ್ಯವುಳ್ಳ ಯುವ ಮನಸ್ಸಿನ ನೇತಾರ ಜಯಪ್ರಕಾಶ್ ಹೆಗ್ಡೆ.
ಯುವನಾಯಕರಾಗಿ ಬೆಳೆದ ಹೆಗ್ಡೆ, ಚಿಕ್ಕ ವಯಸ್ಸಿನಲ್ಲಿ ರಾಜಕೀಯದತ್ತ ಆಕರ್ಷಿತರಾಗಿದ್ದರು.
ಸಾಗಿ ಬಂದ ದಾರಿ:
೧೯೭೨-೭೮ರ ಅವದಿಯಲ್ಲಿ ವಿಜಯ ಬ್ಯಾಂಕ್ ನೌಕರರ ಯೂನಿಯನ್ ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ದುಡಿದರು. ಅಖಿಲ ಭಾರತ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಪ್ರವೇಶಿಸಿದರು. ೧೯೮೭ರಲ್ಲಿ ಸ್ಪೈನ್‌ನ ವೆಲೆನ್ಸಿಯಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಯೂನಿಯನ್ ಆಫ್ ಸೋಷಿಯಲಿಷ್ಟ್ ಯೂತ್‌ನ ಯುವಜನೋತ್ಸವದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದರು.
ಯುವ ರಾಜಕೀಯ ನೇತಾರರ ಅಮೆರಿಕನ್ ಕೌನ್ಸಿಲ್ ಏರ್ಪಡಿಸಿದ ಪ್ರಜಾಪ್ರಭುತ್ವ ಸಮ್ಮೇಳನದಲ್ಲಿ ಹೆಗ್ಡೆ ೨ ಬಾರಿ (೧೯೮೬,೮೯) ಭಾರತವನ್ನು ಪ್ರತಿನಿಧಿಸಿದ್ದರು.
೧೯೯೧ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾಮನ್ವೆಲ್ತ್ ಯುವಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿಯಾಗಿದ್ದರು. ಜನತಾದಳದ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಪ್ರವೇಶ ಪಡೆದು ೧೯೮೫ರ ಮೊದಲ ಪ್ರಯತ್ನದಲ್ಲಿ ಸೋಲುಂಡಿದ್ದರು. ೧೯೯೪ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲಿ ಮೊದಲ ಬಾರಿ ಅದೇ ಕ್ಷೇತ್ರದಲ್ಲಿ ಮೊದಲ ಬಾರಿ ಜಯಗಳಿಸುವ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ನಂತರ ಬ್ರಹ್ಮಾವರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವವರೆಗೆ ಸತತ ೧೧ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
೧೯೯೪-೯೯ರ ಅವದಿಯಲ್ಲಿ ಅವರು ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಬಂದರು ಮತ್ತು ಮೀನುಗಾರಿಕಾ ಸಚಿವರಾಗಿ ಜನಮೆಚ್ಚುಗೆ ಕಾರ್ಯಗಳನ್ನು ಮಾಡಿದರು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಳನಾಡಿನ ಮತ್ತು ಮೀನುಗಾರಿಕಾ ಯೋಜನೆಯನ್ನು ಅನುಷ್ಠಾನಕ್ಕೆ ತಂದರು. ಕರಾವಳಿಯಲ್ಲಿ ಮೀನುಗಾರಿಕಾ ಉದ್ದಿಮೆಗಳಿಗೆ ಸಣ್ಣ ಸಾಲದ ಯೋಜನೆಯನ್ನು ಜಾರಿಗೆ ತಂದಿದ್ದರು. ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರುವುದಕ್ಕಿಂತ ೫ ವರ್ಷ ಮುಂಚಿತವಾಗಿ ಅನುಷ್ಠಾನಕ್ಕೆ ತಂದು ಮೀನುಗಾರ ಕುಟುಂಬಗಳ ಪಾಲಿಗೆ ಆಶ್ರಯದಾತರಾಗಿದ್ದಾರೆ..
೧೯೯೯ರಲ್ಲಿ ಇದೇ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದರು. ೨೦೦೪ರಲ್ಲಿ ನಡೆದ ೧೨ನೇ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧಿಸಿದರು.
೨೦೦೮ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಂದಾಪುರ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸಿ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದ ಸೋಲನ್ನು ಕಂಡರು.
ಕ್ರೀಡಾಪ್ರೇಮಿಯಾಗಿ ಹೆಗ್ಡೆ ಹಲವಾರು ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ. ಕ್ರಿಕೆಟ್ ಪ್ರೇಮಿಯಾಗಿ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಶಿವಮೊಗ್ಗ ತಂಡ(ಮಲ್ನಾಡ್ ಗ್ಲ್ಯಾಡಿಯೇಟರ್ಸ್)ದ ಮಾಲೀಕರಾಗಿದ್ದಾರೆ.
ಜಯಪ್ರಕಾಶ ಹೆಗ್ಡೆ ಬಿಡುವಿಲ್ಲದ ರಾಜಕೀಯ ಕ್ಷೇತ್ರದಲ್ಲಿ ನಜಸೇವೆಯನ್ನು ಮಾಡುತ್ತಾ ಕ್ರೀಡಾಕ್ಷೇತ್ರ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಕ್ಕೂ ಅಪಾರವಾದ ಸೇವೆಯನ್ನು ಸಲ್ಲಿಸಿದ ಕೀರ್ತಿ ಇವರದಾಗಿದೆ. ಧರ್ಮರಾಯನ ನಡೆಯನ್ನು ಅನುಸರಿಸುವ ಇವರು ಸಾಮಾನ್ಯ ಜನತೆಯ ಪಾಲಿನ ಆಶಾಕಿರಣವಾಗಿದ್ದಾರೆ.
ಜನತೆಯ ಪಾಲಿಗೆ ಜಯಪ್ರಕಾಶ ಹೆಗ್ಡೆ:
ಕೊನೆಯ ಬಾರಿ ಕೆಲವೇ ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಈ ಬಾರಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾದಾಗಲೇ ಜಯಗಳಿಸಿದ್ದಾರೆ. ಸಂಭ್ರಮದ ಆಚರಣೆ ಮಾತ್ರ ಬಾಕಿ ಇದೆ ಎನ್ನುತ್ತಾರೆ ಬನ್ನಾಡಿ ಅರುಣ ಶೆಟ್ಟಿ.
ರಾಜಕೀಯಕ್ಕೆ ಬೇಕಾದ ಎಲ್ಲಾ ಲಕ್ಷಣಗಳು ಜೆಪಿಯವರಲ್ಲಿದೆ. ಈ ಬಾರಿ ಉಪಚುನಾವಣೆಯಲ್ಲಿ ಬಿಜೆಪಿಯ ಭ್ರಷ್ಟತೆ, ಯಡಿಯೂರಪ್ಪನವರ ಅಧಿಕಾರದಾಹ, ಬ್ಲೂಬಾಯ್ಸ್ ಪ್ರಕರಣ ಹೀಗೆ ಹಲವು ಹಗರಣಗಳಿಂದ ನೊಂದ ಜನತೆಯು ಕಾಂಗ್ರೆಸ್‌ನ ಶ್ರೇಷ್ಟ ನಾಯಕನನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆಯಿದೆ ಎನ್ನುತ್ತಾರೆ ಆಟೋ ಚಾಲಕ ಶೇಡಿಮನೆ ದಿನೇಶ್ ಹೆಗ್ಡೆ .
ಈ ರೀತಿಯಾಗಿ ಜನ ಅಭಿಮತವನ್ನು ಕೇಳಲಾಗಿ ಜಯಪ್ರಕಾಶ ಹೆಗ್ಡೆ ಗೆಲ್ಲುವುದರಲ್ಲಿ ಸಂಶಯವಿಲ್ಲಾ. ಸ್ಥಳದ ಅಭಾವದಿಂದ ಜನತೆಯ ಸ್ಫಂದನವನ್ನು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.
ಕೆ.ಎಸ್.ಶೆಟ್ಟಿ

No comments:

Post a Comment