Wednesday 18 April 2012




ತೆಂಕುತಿಟ್ಟಿನ ಖ್ಯಾತ ಪುಂಡುವೇಷಧಾರಿ, ನಾಟ್ಯವಿಶಾರಧ ಪುತ್ತೂರು ಶ್ರೀಧರ ಭಂಡಾರಿ ಅವರೊಂದಿಗೆ ಸಂದರ್ಶನ:
ಕರಾವಳಿಯು ಅನೇಕ ಕಲೆಗಳ ಬೀಡು. ಯಕ್ಷಗಾನ, ಭೂತಕೋಲ, ಭಜನೆ, ಪಾಡ್ದನ ಹೀಗೆ ಅನೇಕ ತರದವು...ಪುರಾಣದ ಬಗ್ಗೆ ತಿಳಿಯುತ್ತಾ ಅದರ ಸಾರವನ್ನು ಸಮಾಜದ ಜನತೆಗೆ ಸಾರುವ ಚಲಿಸುವ ವಿಶ್ವವಿದ್ಯಾಲಯ ಯಕ್ಷಗಾನ. ಯಕ್ಷಗಾನದಲ್ಲಿ ಬಯಲಾಟ, ಡೇರೆ ಮೇಳ. ಹಾಗೂ ತಾಳಮದ್ದಳೆ ಎಂದು ವಿಧಗಳಿವೆ. ಯಕ್ಷಗಾನ ಬಯಲಾಟದ ವೇಷಗಾರಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಯಕ್ಷಗಾನ ಕಲಾರಸಿಕರಲ್ಲಿ ತನ್ನ ಛಾಪನ್ನು ಒತ್ತಿದ ತೆಂಕುತಿಟ್ಟಿನ ಮೇರು ಕಲಾವಿದ ಪುತ್ತೂರು ಶ್ರೀಧರ ಭಂಡಾರಿ. ತೆಂಕುತಿಟ್ಟಿನ ಖ್ಯಾತ ಪುಂಡುವೇಷದಾರಿಯೆಂದೇ ಗುರುತಿಸಲ್ಪಟ್ಟ ಭಂಡಾರಿಯವರಿಗೆ ಯಕ್ಷಗಾನ ಕಲಾಕೇಂದ್ರವು ನೀಡಿದ ಬಿ.ಬಿ.ಶೆಟ್ಟಿ ಪ್ರಶಸ್ತಿ ಫಲಕಗಳನ್ನು ಸ್ವೀಕರಿಸಿ ಅವರು ಯಕ್ಷಗಾನ ಕ್ಷೇತ್ರದ ಸಾಧನೆಯನ್ನು ಮನಬಿಚ್ಚಿ ಮಾತನಾಡಿದರು. ಅವರೊಂದಿಗೆ ಮಾಡಿದ ಸಂದರ್ಶನದ ತುಣುಕು:
ಪ್ರ:ಹಿರಿಯರೆ ನಮಸ್ಕಾರ...ಯಕ್ಷಗಾನದಲ್ಲಿ ಎಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಇದ್ದಿರಿ ಹಾಗೂ ನಿಮ್ಮ ಪ್ರಥಮ ಮೇಳ, ಗುರುಗಳು ಯಾರು?
ನಮಸ್ಕಾರ...೫೩ವರ್ಷಗಳ ತಿರುಗಾಟ ಮುಗಿಸಿ ೫೪ನೇ ವರ್ಷದ ತಿರುಗಾಟ ಮಾಡುತ್ತಿದ್ದೇನೆ. ೧೯೫೯-೬೦ನೇ ವರ್ಷದಲ್ಲಿ ನಮ್ಮ ತಂದೆಯಿಂದಲೇ ಹೆಜ್ಜೆ ಕಲಿತು, ಕೇರಳದ ಬೆಳ್ಳಂಬೆಟ್ಟು ಶಾಸ್ತಾರ ಮೇಳದಲ್ಲಿ ಪ್ರಥಮ ತಿರುಗಾಟ ಪ್ರಾರಂಬ. ನಂತರ ಹೆಚ್ಚಿನ ನಾಟ್ಯಾಭ್ಯಾಸವನ್ನು ದಿ.ಕುರಿಯ ವಿಠಲ ಶಾಸ್ತ್ರಿ, ದಿ. ಹೊಸಹಿತ್ಲು ಮಹಾಲಿಂಗ ಭಟ್ ಮತ್ತು ಭರತನಾಟ್ಯವನ್ನು ಕುರ್ಕಾಟಿ ವಿಶ್ವನಾಥ ರೈ ಅವರುಗಳಲ್ಲಿ ಕಲಿತಿದ್ದೇನೆ. ಗುರುಗಳ ಪೂರ್ಣ ಆಶೀರ್ವಾದದಿಂದ ನನ್ನನ್ನು ಸಮಾಜದಲ್ಲಿ ಗುರುತಿಸುವಂತಾಗಿದೆ.
ಪ್ರ: ೫೩ವರ್ಷಗಳ ತಿರುಗಾಟ ಯಾವ ರೀತಿ ನಡೆದಿದೆ ಹಾಗೂ ಯಾವ ಕಲಾವಿದರ ಸಂಪರ್ಕ ನಿಮ್ಮ ಪಾಲಿಗೆ ದೊರಕಿದೆ?
ಪ್ರಥಮ ನಾಲ್ಕು ವರ್ಷ ತಂದೆಯ ಮೇಳದಲ್ಲಿ ವೃತ್ತಿಜೀವನವನ್ನು ಸಾಗಿಸಿ, ೧೯೬೪ರಿಂದ ಧರ್ಮಸ್ಥಳ ಮೇಳದಲ್ಲಿ ಸೇರ್ಪಡೆಗೊಂಡು ೧೯೮೦ರವರೆಗೆ ತಿರುಗಾಟವನ್ನು ಮಾಡಿದೆ. ಮತ್ತೆ ೧೦ವರ್ಷಗಳು ಸ್ವಂತ ಮೇಳವನ್ನು ಮಾಡಿ ಅದರಲ್ಲಿ ಕಲಾಮಾತೆಯ ಸೇವೆಯನ್ನು ಸಲ್ಲಿಸಿದ್ದೇನೆ. ೮ವರ್ಷ ಪುತ್ತೂರು ಮಹಾಲಿಂಗೇಶ್ವರ ಮೇಳ ಹಾಗೂ ಉಳಿದ ೨ವರ್ಷ ಕಾಂತಾವಳ ಮೇಳವನ್ನು ನಡೆಸಿದ್ದೇನೆ. ೧೯೯೧ರಿಂದ ಪುನಃ ಧರ್ಮಸ್ಥಳ ಮೇಳಕ್ಕೆ ಬಂದು ಪ್ರಸ್ತುತ ಇದೇ ಮೇಳದಲ್ಲಿ ಮಂಜುನಾಥನ ಸೇವೆ ಮಾಡುತ್ತಿದ್ದೇನೆ. ನನ್ನ ಯಕ್ಷಗಾನದ ತಿರುಗಾಟದಲ್ಲಿ ವಾಗ್ಮಿ ದಿ.ಶ್ರೇಣಿ ಗೋಪಾಲಕೃಷ್ಣ ಭಟ್, ಪುತ್ತೂರು ನಾರಾಯಣ ಹೆಗ್ಡೆ, ಪಾತಾಳ ವೆಂಕಟರಮಣ ಭಟ್, ದಿ. ಕಡತೋಕ ಮಂಜುನಾಥ ಭಾಗವತ, ಕುದುರೆಕೊಡ್ಲು ರಾಮಭಟ್, ದಿ.ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಗೋವಿಂದ ಭಟ್, ಪುತ್ತಿಗೆ ರಘುರಾಮ ಹೊಳ್ಳ ಹೀಗೆ ಅನೇಕ ಕಲಾವಿದರ ಸಹಕಾರ ನನ್ನ ಪಾಲಿಗೆ ದೊರಕಿದೆ.
ಪ್ರ:ಎಲ್ಲಾ ಕ್ಷೇತ್ರಗಳಲ್ಲಿಯೂ ದಾಖಲೆ ಎನ್ನುವುದು ಸರ್ವೇ ಸಾಮಾನ್ಯ. ಬಡಗುತಿಟ್ಟಿನಲ್ಲಿ ದಿ.ದುರ್ಗಪ್ಪ ಗುಡಿಗಾರ ೭ ಮದ್ದಳೆವಾದನ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಆ ರೀತಿ ನಿಮ್ಮಿಂದ ಯಾವುದಾದರೂ ದಾಖಲೆ?
ಹೌದು... ಝೀ ಕನ್ನಡ ವಾಹಿನಿಯವರು ನಡೆಸಿದ ಶಹಬ್ಬಾಸ್ ಇಂಡಿಯಾ ಕಾರ್ಯಕ್ರಮದಲ್ಲಿ ೩ನಿಮಿಷದಲ್ಲಿ ೧೦೦ದಿಗಣ(ಗಿರಕಿ) ಹೊಡೆಯಬೇಕು ಎನ್ನುವುದಾಗಿ ಆದರೆ ನಾನು ೩ನಿಮಿಷದಲ್ಲಿ ೧೪೨ ಗಿರಕಿ ಹೊಡೆದು ದಾಖಲೆ ನಿರ್ಮಿಸಿದ್ದೇನೆ.(ಸಂತೋಷದ ನಗು)
ಪ್ರ: ಅರ್ಧ ಶತಮಾನಗಳ ಅವದಿಯ ತಿರುಗಾಟದಲ್ಲಿ ನೀವು ಮೆಚ್ಚಿದ ಪಾತ್ರಗಳು?
ಚಕ್ರವ್ಯೂಹದ ಅಭಿಮನ್ಯು, ಬಬ್ರುವಾಹನ, ಕೃಷ್ಣ, ಪರಶುರಾಮ, ಲಕ್ಷ್ಮಣ, ಇಂದ್ರಜೀತು ಹಿರಣ್ಯಾಕ್ಷ ಹಾಗೂ ಸ್ತ್ರೀವೇಷದಲ್ಲಿ ಮಾಲತಿ, ತುಲಸಿ ಜಲಂದರದ ಲಕ್ಷ್ಮೀ ತೆಂಕುತಿಟ್ಟಿನಲ್ಲಿಯಾದರೆ, ಬಡಗುತಿಟ್ಟಿನಲ್ಲೂ ವೇಷವನ್ನು ಮಾಡಿದ್ದೇನೆ. ವೃಷಸೇನ, ಕೃಷ್ಣ ಹೀಗೆ ಅನೇಕ ವೇಷವನ್ನು ಮಾಡಿದ್ದೇನೆ.
ಪ್ರ:ಪ್ರತಿದಿನ ಬೇರೆ ಬೇರೆ ಕಡೆ ಪ್ರದರ್ಶನವಿರುವುದರಿಂದ ಯಾವ ರೀತಿ ಮನೆಯವರೊಂದಿಗೆ ಸಂಪರ್ಕದಲ್ಲಿರುತ್ತಿರಿ?
ಮೊಬೈಲು ಬರುವುದಕ್ಕಿಂತ ಮೊದಲು ಯಕ್ಷಗಾನ ಕಲಾವಿದರಿಗೆ ಮನೆಯವರ ಸಂಪರ್ಕ ತುಂಬಾ ಕಡಿಮೆ ಇತ್ತು. ಆಗ ನಾವು ಮೂರ್‍ನಾಲ್ಕು ದಿನ ರಜೆ ಹಾಕಿ ಮನೆಗೆ ಹೋಗುತ್ತಿದ್ದೇವು. ಕರಾವಳಿ ಪ್ರದೇಶದಲ್ಲಿ ಯಕ್ಷಗಾನವಾದರೆ ಸಮಸ್ಯೆ ಇರುವುದಿಲ್ಲ. ಹೆಚ್ಚಿನ ಕಲಾವಿದರು ಉಡುಪಿ-ದಕ್ಷಿಣಕನ್ನಡ ಜಿಲ್ಲೆಯವರಾದ್ದರಿಂದ, ಬಸ್ಸಿನ ಸೌಕರ್ಯವಿರುವುದರಿಂದ ಮನೆಗೆ ಹೋಗಬಹುದು. ಮಲೆನಾಡು ಪ್ರದೇಶದಲ್ಲಿ ಪ್ರದರ್ಶನವಿದ್ದರೆ ಮನೆಗೆ ಬರುವುದಕ್ಕೆ ಸಾಧ್ಯವಿಲ್ಲ.
ಪ್ರ: ಬಡಗುತಿಟ್ಟಿನಲ್ಲಿ ಯಾವ ಕಲಾವಿದರೊಂದಿಗೆ ವೇಷವನ್ನು ಮಾಡಿದ್ದಿರಿ?
ತೀರ್ಥಹಳ್ಳಿ ಗೋಪಾಲ ಆಚಾರಿ, ಬಳ್ಕೂರು ಕೃಷ್ಣಯಾಜಿಯವರೊಂದಿಗೆ ಪಾತ್ರವನ್ನು ಮಾಡಿದ್ದೇನೆ. ದಿ.ಗುಂಡ್ಮಿ ಕಾಳಿಂಗ ನಾವುಡ, ಕಡತೋಕ ಮಂಜುನಾಥ ಭಾಗವತರ ದ್ವಂದ್ವ ಹಾಡುಗಾರಿಕೆಗೆ ಹೆಜ್ಜೆಯನ್ನು ಕೂಡ ಹಾಕಿದ್ದೇನೆ. ಶಿರಿಯಾರ ಮಂಜುನಾಯ್ಕ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕುಂಜಾಲು ರಾಮಕೃಷ್ಣ ಅವರುಗಳ ಸಾಧನೆಯನ್ನು ನಾನು ಮೆಚ್ಚುತ್ತೇನೆ.
ಪ್ರ:ಯಕ್ಷಗಾನದಲ್ಲಿ ತೆಂಕುತಿಟ್ಟಿನ ಅಭಿಮನ್ಯು ಭಂಡಾರಿಯವರದು ಹಾಗೂ ಬಡಗು ತಿಟ್ಟಿನಲ್ಲಿ ತೀರ್ಥಳ್ಳಿ ಅವರದು ಎಂದು ಯಕ್ಷರಸಿಕರು ಆಡಿಕೊಳ್ಳುತ್ತಾರೆ. ಬಡಗುತಿಟ್ಟಿನ ಕಲಾವಿದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅದು ಯಕ್ಷರಸಿಕರಿಗೆ ಬಿಟ್ಟದ್ದು. ಅವರ ಮನದಲ್ಲಿ ನಮ್ಮ ಪಾಲಿಗೆ ಅಂಥ ಸ್ಥಾನವನ್ನು ನೀಡಿ ಗೌರವಿಸುತ್ತಿರುವುದಕ್ಕೆ ನಾನು ಚಿರಋಣಿ. ಗೋಪಾಲ ಆಚಾರಿ ಅವರ ಪಾತ್ರವನ್ನು ನಾನು ಮೆಚ್ಚುತ್ತೇನೆ. ಅವರ ಅಭಿನಯ, ಮಾತಿನ ಶೈಲಿ,ಲಯಭರಿತ ಹೆಜ್ಜೆ ಸಾಮಾನ್ಯನ ಮನವನ್ನು ಸೂರೆಗೊಳ್ಳಬಲ್ಲ ಗುಣವಿರುವುದರಿಂದ ಅದ್ಬುತವಾದುದನ್ನೆ ಸಾಧಿಸಿದ್ದಾರೆ.ಸಣ್ಣ ಕಲಾವಿಧರಲ್ಲಿ ತೊಂಬುಟ್ಟು ವಿಶ್ವನಾಥ ಆಚಾರಿ ಚುರುಕಿನ ಹೆಜ್ಜೆಗಾರಿಕೆಯಿಂದ ಕಲಾರಸಿಕರ ಮನಸೂರೆಗೊಂಡಿದ್ದಾರೆ.
ಪ್ರ:ತೆಂಕುತಿಟ್ಟಿನಲ್ಲಿ ನಾಟ್ಯ ತುಂಬಾ ಕಡಿಮೆ, ಇಲ್ಲಿ ಮಾತುಗಾರಿಕೆಗೆ ಪ್ರಾಶಸ್ತ್ಯ ಕೊಡುತ್ತಾರೆ.ಇದು ನಿಜವೇ?
ಖಂಡಿತ, ಮೊದಲು ಮಾತುಗಾರಿಕೆಗೆ ಪ್ರಾಶಸ್ತ್ಯವನ್ನು ನೀಡುತ್ತಿದ್ದರು. ಆದರೆ ಈಗ ಹುಡಿನಾಟ್ಯಕ್ಕೆ ಪ್ರಾಶಸ್ತ್ಯ ನೀಡುತ್ತಾರೆ. ಹಿಂದೆ ಮುಮ್ಮೇಳದ ಸಂಪೂರ್ಣ ಹಿಡಿತ ಹಿಮ್ಮೇಳದವರ ಕೈಯಲ್ಲಿದ್ದು, ಕಲಾವಿದರಿಗೆ ಸ್ವಾತಂತ್ರ್ಯ ನೀಡುತ್ತಿರಲಿಲ್ಲ. ಈಗ ಕಲಾವಿದರಿಗೆ ಉತ್ತಮ ಅವಕಾಶವನ್ನು ಹಿಮ್ಮೇಳವರ್ಗದವರು ನೀಡುತ್ತಾ, ರಂಗದಲ್ಲಿ ಪರಿಪೂರ್ಣತೆಯ ಕಲಾಪ್ರದರ್ಶನಕ್ಕೆ ಬುನಾದಿಯನ್ನು ಹಾಕುತ್ತಿದ್ದಾರೆ.
ಪ್ರ: ಯಕ್ಷಗಾನದ ನಿಮ್ಮ ತಿರುಗಾಟದ ಅವದಿಯಲ್ಲಿ ನಿಮಗೆ ದಕ್ಕಿದ ಪ್ರಶಸ್ತಿ ಹಾಗೂ ಯಾವ ಪ್ರದೇಶದಲ್ಲಿ ಪ್ರದರ್ಶನವನ್ನು ನೀಡಿದ್ದೀರಾ?
ಜಪಾನ್, ಲಂಡನ್, ಕುವೈತ್, ಅಬುದಾಬಿ, ಕತಾರ್, ಬೆಲರಿಸ್ ಅನೇಕ ದೇಶಗಳಲ್ಲಿ ಪ್ರದರ್ಶನವನ್ನು ನೀಡಿದ್ದೇನೆ. ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲು ಪ್ರದರ್ಶನವನ್ನು ನೀಡಿ, ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇನೆ. ಪೇಜಾವರ ಮಠ ಪ್ರಶಸ್ತಿ, ವೀರೇಂದ್ರ ಹೆಗ್ಗಡೆ ಪ್ರಶಸ್ತಿ, ಪರ್ಯಾಯ ಶ್ರೀ ಶೀರೂರು ಪ್ರಶಸ್ತಿ, ಶಂಕರ್ ದಯಾಳ್ ಶರ್ಮಾ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಅನೇಕ ಸಂಘಸಂಸ್ಥೆಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಭಂಟರ ಸಂಘದಿಂದ ಅನೇಕ ಕಡೆಗಳಲ್ಲಿ ಸನ್ಮಾನಿತಗೊಂಡಿದ್ದೇನೆ.
ಪ್ರ:ಯಕ್ಷಗಾನ ಕಲಾವಿದರಿಗೆ ಸರ್ಕಾರದಿಂದ ಯಾವುದಾದರೂ ಸೌಲಭ್ಯಗಳು ದೊರೆಯುತ್ತಿದೆಯೇ?
ಯಕ್ಷಗಾನ ಕಲಾರಂಗದ ವತಿಯಿಂದ ಕಲಾವಿದರಿಗೆ ಕೆಲವೊಂದು ಬಸ್ಸುಗಳಲ್ಲಿ ರಿಯಾಯಿತಿ ದರದ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ೬೦ವರ್ಷ ಮೇಲ್ಪಟ್ಟ ಕಲಾವಿಧರಿಗೆ ಮಾಸಾಶನ ಕೊಡುವ ವ್ಯವಸ್ಥೆಯಿದೆ.
ಪ್ರ: ಯಕ್ಷಮಾತೆಯ ಸೇವೆ ಮಾಡುತ್ತಿರುವ ನಿಮ್ಮ ಸಾಂಸಾರಿಕ ಜೀವನದ ಬಗ್ಗೆ....
ನಾನು ಶೀನಪ್ಪ ಭಂಡಾರಿ ಹಾಗೂ ಸುಂದರಿಯವರಿಗೆ ಅಕ್ಟೋಬರ್ ೧, ೧೯೪೫ರಂದು ಜನಿಸಿದೆ. ನಮ್ಮ ತಂದೆಗೆ ೩ ಗಂಡು, ೩ಹೆಣ್ಣು ಮಕ್ಕಳು. ನಾನು ಕಲಾಮಾತೆಯ ಸೇವೆ ಮಾಡುತ್ತಾ ಉಷಾ ಎನ್ನುವವಳನ್ನು ಮದುವೆಯಾದೆ. ನಮ್ಮಿಬ್ಬರ ದಾಂಪತ್ಯದ ಫಲವೇ ಕೋಕಿಲ, ಶಾಂತಲಾ, ಅನಿಲಾ ಹಾಗೂ ಮಗ ದೇವಿಪ್ರಕಾಶ ಎನ್ನುವ ನಾಲ್ಕು ಮಕ್ಕಳು. ಹೆಣ್ಣು ಮಕ್ಕಳೆಲ್ಲಾ ಮದುವೆಯಾಗಿ ಗಂಡರೊಡನೆ ಸುಃಖವಾಗಿದ್ದಾರೆ.
ಪ್ರ: ದೂರದರ್ಶನದ ಪ್ರಭಾವ ಜಾಸ್ತಿ ಇರುವಂಥ ಕಾಲದಲ್ಲಿ ಯಕ್ಷಗಾನವನ್ನು ಉಳಿಸುವಲ್ಲಿ ಕಿರಿಯ ಕಲಾವಿದರಿಗೆ ನಿಮ್ಮ ಕಿವಿಮಾತು...
ಎಲ್ಲಾ ರಂಗದಲ್ಲೂ ಆಧುನಿಕತೆ ಬರುತ್ತಿದೆ. ಪ್ರೇಕ್ಷಕ ವರ್ಗದವರನ್ನು ಆಕರ್ಷಿಸಲು ಅನೇಕ ತೆರನಾದ ಕಸರತ್ತುಗಳನ್ನು ಮಾಡಿ ಯಕ್ಷಗಾನವನ್ನು ಉಳಿಸಿಕೊಂಡು ಹೋಗಬೇಕಾಗುತ್ತದೆ. ಕಲಾವಿದರ ಸಾಮರ್ಥ್ಯವನ್ನು ರಂಗದಲ್ಲಿ ಪ್ರದರ್ಶಿಸಬೇಕಾಗುತ್ತದೆ. ಆದರೆ ಯಕ್ಷಗಾನಕ್ಕೆ ಅದರದೆ ಆದ ರಂಗ ಪರಿಧಿ, ಪರಂಪರೆ ಇದೆ ಅದನ್ನು ಬಿಟ್ಟು ಆಧುನಿಕತೆಗೆ ಕಟ್ಟುಬಿದ್ದು ಅಸಂಗತವಾದ ವಿಷಯಗಳನ್ನು ರಂಗದಲ್ಲಿ ತಂದಾಗ ಯಕ್ಷಗಾನದ ಪ್ರಾಶಸ್ತ್ಯ ಕೆಡುತ್ತದೆ. ಅದಕ್ಕಾಗಿ ಸಂಗತವಾದ ವಿಷಯಗಳನ್ನು ರಂಗದಲ್ಲಿ ತಂದು ಯಕ್ಷಗಾನವನ್ನು ಉಳಿಸುವಲ್ಲಿ ಕಲಾವಿದರ ಪಾತ್ರ ಮುಖ್ಯವಾಗಿದೆ.
ಯಕ್ಷಗಾನಂ ಗೆಲ್ಗೆ
ಸಂದೇಶ ಶೆಟ್ಟಿ ಕೊಂಜಾಡಿ

2 comments: