Wednesday 18 April 2012

ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.....
ಪ್ರಪಂಚದಲ್ಲಿ ದೇವನ ಸೃಷ್ಠಿಯೇ ಅದ್ಬುತವಾದುದು..ಕೆಲವರಿಗೆ ಹುಟ್ಟುವಾಗಲೇ ಕೆಲವೊಂದು ವಿಶೇಷತೆಯನ್ನು ಕೊಟ್ಟಿದ್ದರೆ ಕೆಲವರಿಗೆ ಹುಟ್ಟಿದ ನಂತರ ಪೂರ್ವಜರಿಂದ ಬಳುವಳಿಯಾಗಿಯೋ ಅಥವಾ ಸತತ ಪ್ರಯತ್ನದಿಂದ ವಿಚಿತ್ರವಾದ ಶಕ್ತಿಯಿಂದ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ವೈಜ್ಞಾನಿಕವಾಗಿ ಬಹಳ ವೇಗದಿಂದ ಮುನ್ನುಗ್ಗುತ್ತಿರುವ ದೇಶದಲ್ಲಿ ಮನರಂಜನೆಯನ್ನು ಜನ ಬಯಸುತ್ತಿದ್ದಾರೆ. ಅಂತೆಯೇ ರಂಜನೆಯನ್ನು ನೀಡುವ ಸಾಧನಗಳು ಹೆಚ್ಚಾಗುತ್ತಿವೆ. ದೃಶ್ಯಮಾಧ್ಯಮ,ಅಂತರ್ಜಾಲ,ಸಿನಿಮಾ,ನಾಟಕ, ಯಕ್ಷಗಾನ,ದಾರಾವಾಹಿ ಹೀಗೆ ಸಾಧನಗಳು ತುಂಬಾ ಇದೆ. ಇವೆಲ್ಲ ಕೇವಲ ಯಂತ್ರೋಪಕರಣಗಳೊಂದಿಗೆ ಮಾನವನ ಕೌಶಲ್ಯ ಹೊರಹೊಮ್ಮಿದರೆ, ನಮ್ಮೂರಿನಲ್ಲಿ ಜನರ ಮನಸ್ಸನ್ನು ಗೆದ್ದ ಸೈಕಲ್ ಬ್ಯಾಲೆನ್ಸ್ ಮಾತ್ರ ಇವೆಲ್ಲಕ್ಕೂ ತದ್ವಿರುದ್ದ...
ನೀರು ತುಂಬಿದ ೫ ಕೊಡಗಳನ್ನು ಹಿಡಿದು ಸೈಕಲ್‌ನ ಹ್ಯಾಂಡಲ್‌ನ್ನು ಬಳಸದೇ ವೃತ್ತಾಕಾರವಾಗಿ ತಿರುಗುವುದು, ಕಣ್ಣಿಗೆ ಸೂಜಿಯನ್ನು ಚುಚ್ಚಿಕೊಂಡು ಸೈಕಲ್ ತುಳಿಯುವುದು, ಸೈಕಲ್ ಟೈರ್‌ಗೆ ಬೆಂಕಿ ಹಚ್ಚಿ ದೊಡ್ಡ ಸೈಕಲ್‌ನ್ನು ನುಗ್ಗಿಸುವುದು...ಚೌಕಾಕಾರದಲ್ಲಿ ನಾಲ್ಕು ಮಕ್ಕಳನ್ನು ಮಲಗಿಸಿ ಒಂದು ಚಕ್ರವನ್ನು ಚೌಕದ ಒಳಗಡೆ ಹಾಗೂ ಇನ್ನೊಂದು ಚಕ್ರವನ್ನು ಚೌಕದ ಹೊರಗಡೆಯಿಂದ ತಿರುಗಿಸುವುದು... ಮೂರು ಸಬ್ಬಲ್‌ಗಳ ಮೇಲೆ ಸೈಕಲ್ ನಿಲ್ಲಿಸಿ ವಿವಿಧ ಆಸನಗಳನ್ನು ಮಾಡಿತೊರಿಸುವುದು... ೧೨ ಟ್ಯೂಬ್‌ಲೈಟ್‌ನ್ನು ಹಣೆ, ಎದೆಗಳಲ್ಲಿ ಒಡೆಯುವುದು ಅಬ್ಬಾ ಒಂದೇ ಎರಡೇ ಆತನ ಕಸರತ್ತು.....
ತನ್ನ ಜೀವದ ಹಂಗನ್ನೆ ತೊರೆದು ಜೀವನೋಪಾಯಕ್ಕಾಗಿ ಒಂದು ಊರಿನಲ್ಲಿ ಮೂರು ದಿನದಂತೆ ರಾತ್ರಿ ೭ರಿಂದ ೯ರವರೆಗೆ ವಿವಿಧ ಕಸರತ್ತಿನೊಂದಿಗೆ ಹಾಸ್ಯದ ಹೊನಲನ್ನು ಹರಿಸುತ್ತಾ, ಸಿನಿಮಾ ನೃತ್ಯದ ಮೂಲಕ ಅದ್ಬುತವಾದ ಲೋಕಕ್ಕೆ ಕರೆದೊಯ್ಯುವ ತಂಡದ ನಾಯಕ ಸುಂದರ್ ಕುಮಾರ್...
ಹಾಸನದ ಮಾರ್ನಳ್ಳಿಯ ಸುಂದರ್ ಕುಟುಂಬ ಕಡು ಬಡತನದ್ದು. ಕೃಷಿಭೂಮಿ ಇಲ್ಲದ ಇವರು ಜೀವನ ನಿರ್ವಹಣೆಗಾಗಿ ಆಯ್ದುಕೊಂಡದ್ದು ಸೈಕಲ್ ಬ್ಯಾಲೆನ್ಸ್ ಎನ್ನುವ ಸಾಹಸಮಯ ಕಸುಬು. ಸತತ ೭ವರ್ಷಗಳ ಕಾಲ ಆಂಧ್ರಪ್ರದೇಶದಲ್ಲಿ ಅಭ್ಯಾಸವನ್ನು ಮಾಡಿ ಈಗ ಪ್ರತಿ ಊರಿನಲ್ಲಿಯೂ ಮೂರುದಿನಗಳ ಕಾಲ ಕಾರ್ಯಕ್ರಮವನ್ನು ನೀಡಿ ಜನರನ್ನು ಸಂತೋಷಪಡಿಸಿ ಅವರು ಕೊಟ್ಟ ಹಣದಲ್ಲಿಯೇ ಜೀವನವನ್ನು ಸಾಗಿಸುತ್ತಾ ಸಂತೋಷವನ್ನು ಕಾಣುತ್ತಿದ್ದಾರೆ. ಶ್ರೀ ಚಾಮುಂಡೇಶ್ವರೀ ಕಲಾಮಂಡಳಿ ಎನ್ನುವ ನಾಮಾಂಕಿತದೊಂದಿಗೆ ಹೊರಟ ಇವರ ತಂಡದಲ್ಲಿ ರಾಜೇಶ್, ಮಂಜು, ರಾಣಿ ಹಾಗೂ ಲಕ್ಷ್ಮಣ ಸೇರಿ ಐದು ಮಂದಿಯಿದ್ದಾರೆ. ಊರಿನಿಂದ ಬಂದ ಎರಡು ತಂಡದಲ್ಲಿ ಒಟ್ಟು ೧೦ ಜನರಿದ್ದು, ಪ್ರತಿಯೊಂದು ತಂಡಕ್ಕೆ ಒಂದು ಊರಿನಲ್ಲಿ ಮೂರು ದಿನಗಳಲ್ಲಿ ೫ರಿಂದ ೬ ಸಾವಿರದ ತನಕ ಆದಾಯ ಬರುತ್ತದೆ.
ವಿದ್ಯಾಭ್ಯಾಸವನ್ನು ಪ್ರಾಥಮಿಕ ಹಂತದಲ್ಲಿ ಮೊಟಕುಗೊಳಿಸಿ ಜೀವನ ನಿರ್ವಗಣೆಗಾಗಿ ವರ್ಷದ ನಾಲ್ಕು ತಿಂಗಳಲ್ಲಿ ಈ ವೃತ್ತಿಯನ್ನು ಮಾಡಿ ಉಳಿದ ಸಮಯದಲ್ಲಿ ಕೂಲಿ ಮಾಡಿ ಬದುಕುವ ಇವರಿಗೆ ಸರ್ಕಾರದಿಂದ ಯಾವುದೇ ಸವಲತ್ತುಗಳು ದೊರಕಲಿಲ್ಲ. ಆದರೂ ಇವರು ಸರ್ಕಾರದ ಯಾವುದೇ ಸವಲತ್ತುಗಳನ್ನು ಆಶ್ರಯಿಸದೇ ಜನರನ್ನು ರಂಜಿಸುತ್ತಾ ತಮ್ಮ ಸಂಸಾರವನ್ನು ಸಾಗಿಸುವ ರೀತಿ ಮಾತ್ರ ಶ್ಲಾಘನೀಯ....
ಸಂದೇಶ ಶೆಟ್ಟಿ ಆರ್ಡಿ

No comments:

Post a Comment