ಏಳಿ ಏಳಿ ಎಚ್ಚರಾಗಿ ಕನಸು ಕಂಗಳೇ-ಭವಿತವ್ಯದ ಭಾರತ ನಿರ್ಮಾಣ ನಮ್ಮ ಗುರಿಯಾಗಲಿ
ಕೆ.ಎಸ್.ಶೆಟ್ಟಿ
ಮಂಗಳೂರಿನ ಜನತೆಯ ಪಾಲಿಗೆ ದೇಶದ ವಿವಿಧ ಭಾಗದ ಯುವಜನತೆ ಹಾಗೂ ಮಕ್ಕಳು ಕಡಲತಡಿಯಲ್ಲಿ ಸಾಂಸ್ಕೃತಿಕ ಅಲೆಯನ್ನು ಸೃಷ್ಠಿಸಿ ಸಂತೋಷ ಪಡಿಸಿದ್ದಾರೆಂದು ಸಂತೋಷ ಪಡಲು ಸಾಧ್ಯವೇ? ಪ್ರತಿಯೊಬ್ಬನ ಮನವು ಕೂಡ ಸಾಂಸ್ಕೃತಿಕ ಅಲೆಯನ್ನು ಸೃಷ್ಠಿಸಿದ ಯುವಜನತೆ ಹಾಗೂ ಮಕ್ಕಳ ಕಲಾಪ್ರತಿಭೆಯನ್ನು ನೋಡಿ ಸಂತೋಷದ ಮೆಲುಕು ಹಾಕುತ್ತಿರುವಾಗಲೇ ಕೆಲವೊಂದು ಘಟನೆಗಳು ಮನಸ್ಸಿಗೆ ನೋವನ್ನು ತರುವಂಥ ಕೆಲಸ ಮಾಡಿರುವುದು ಸ್ಫಷ್ಠ. ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆ ಹಾಗೂ ಮಂಜೇಶ್ವರ ಸಮೀಪ ದೇವಸ್ಥಾನವನ್ನು ಕಿತ್ತೆಸೆಯುವ ಪ್ರಯತ್ನವನ್ನು ನೋಡಿದಾಗ ಸಾಂಸ್ಕೃತಿಕ ಅಲೆಯಲ್ಲಿ ಮಿಂದ ನಾಗರಿಕರು ದ್ವೇಷವನ್ನು ಸಾಧಿಸಲು ಮಾಡಿದ ಕಾರ್ಯವೇ ಎನ್ನುವುದು ಸಂಶಯಕ್ಕೆ ಎಡೆಮಾಡಿದೆ. ೧೭ನೇ ಯುವಜನೋತ್ಸವದಲ್ಲಿ ದೇಶದ ಎಲ್ಲಾ ರಾಜ್ಯದ ಯುವಜನತೆಯೊಂದಿಗೆ ಮಂಗಳೂರಿನ ಜನತೆ ಧರ್ಮ, ಭಾಷೆ, ಸಂಸ್ಕೃತಿಯನ್ನು ಮರೆತು ಪಾಲ್ಗೊಂಡಿದ್ದು ಕೇವಲ ಆಡಂಬರವೇ? ಅಥವಾ ಪ್ರಚಾರ ಪಡೆಯಬೇಕೆಂಬ ಉತ್ಕಟೇಚ್ಚೇಯೇ? ಎನ್ನುವುದು ಸ್ಪಷ್ಠವಾಗಿಲ್ಲ.
ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಬೃಹತ್ ಹಿಂದು ಸಮಾಜೋತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ಮುಗ್ದ ಹಿಂದುಗಳ ಮೇಲೆ ಅನೇಕ ದುಷ್ಟರು ಕಲ್ಲನ್ನೆಸೆದು ಘಾಸಿಗೊಳಿಸಿದ್ದಾರೆ. ಸಮಾಜೋತ್ಸವದಲ್ಲಿ ಭಾಗವಹಿಸಿದ ಮುಗ್ದಜೀವಿಗಳು ಅವರ ಧರ್ಮದ ಮೇಲೆ ಪೂಜ್ಯ ಭಾವನೆಯನ್ನು ಇಟ್ಟು ಭಾಗವಹಿಸಿದ್ದಾರೆಯೇ ಹೊರತು ಬೇರೆ ಯಾವ ಕಾರಣವೂ ಇಲ್ಲವೆನ್ನುವುದು ಸ್ಪಷ್ಠ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ರಿಗೂ ಕೂಡ ಅವರ ಭಾವನೆಗಳನ್ನು ಪ್ರಕಟ ಪಡಿಸುವುದಕ್ಕೆ ಸೂಕ್ತವೇದಿಕೆ ನಿರ್ಮಿಸಿಕೊಟ್ಟಿದೆ. ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಭಾಷೆ, ಆಚರಣೆಗಳನ್ನು ಧರ್ಮಕ್ಕನುಗುಣವಾಗಿ ಅಚರಿಸಿಕೊಂಡು ಹೋಗುವ ಸ್ವಾತಂತ್ರ್ಯವಿದೆ. ಹಿಂದು, ಮುಸ್ಲಿಂ,ಕ್ರೈಸ್ತ ಯಾವುದೇ ಮತ-ಧರ್ಮಗಳಿರಲಿ ಅವರಿಗೆ ಪ್ರಜಾಪ್ರಭುತ್ವ ರಾಷ್ಟ್ರ-ಭಾರತದಲ್ಲಿ ತಮ್ಮದೇ ಸ್ಥಾನ-ಮಾನವನ್ನು ನೀಡಿದ್ದರೂ ಎಲ್ಲಾ ಕಡೆಗಳಲ್ಲಿ ಅವರು ಬೇರೊಂದು ಧರ್ಮಗಳ ಮೇಲೆ ದ್ವೇಷ ಸಾಧಿಸುವುದು ತಪ್ಪಿಲ್ಲ.
ಉಪ್ಪಿನಂಗಡಿಯ ಘಟನೆಯನ್ನು ನೋಡಿದಾಗ ವೇದಿಕೆಯ ಮೇಲಿರುವ ವ್ಯಕ್ತಿಗಳು ಹಿಂದು ಧರ್ಮದ ಮೇಲಾಗುತ್ತಿರುವ ಕೆಡುಕುಗಳ ಕುರಿತು ಸಮಾಜ ಬಾಂಧವರಿಗೆ ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ. ಹಿಂದುಗಳು ದೇವರೆಂದು ಪೂಜಿಸುವ, ಮುಕ್ಕೋಟಿ ದೇವತೆಗಳು ನೆಲೆಯಾಗಿರುವ ಗೋಮಾತೆಯ ಹತ್ಯೆ, ಅಮಾಯಕ ಹೆಣ್ಣುಮಕ್ಕಳನ್ನು ಪ್ರೀತಿಯೆಂಬ ಮೋಹದ ಬಲೆಯಲ್ಲಿ ಸಿಲುಕುವಂತೆ ಮಾಡುವ ಲವ್‌ಜಿಹಾದ್ ಎನ್ನುವ ತಂತ್ರದ ಕುರಿತು, ಮಾನವ ಕಳ್ಳಸಾಗಣೆ, ಭ್ರಷ್ಠಾಚಾರದ ಕುರಿತು ಗ್ರಾಮೀಣ ಭಾಗದ ಜನತೆಯ ಪಾಲಿಗೆ ತಿಳಿಹೇಳುವ ಪ್ರಯತ್ನ ಮಾಡಿದ್ಧಾರೆ ಡಾ.ಕಲ್ಲಡ್ಕ ಪ್ರಭಾಕರ ಭಟ್.
ಹಿಂದು, ಮುಸ್ಲಿಂ, ಕ್ರೈಸ್ತರ ಯಾವುದೇ ಕಾರ್ಯಕ್ರಮದಲ್ಲಿ ಅವರ ಮತ-ಧರ್ಮದ ಮೇಲಾಗುತ್ತಿರುವ ತೊಂದರೆಗಳನ್ನು ಹೇಳುವುದು ಸಹಜವಾಗಿದೆ. ಯಾವ ವ್ಯಕ್ತಿ ತನ್ನ ಧರ್ಮವನ್ನು ಪ್ರೀತಿಸುತ್ತಾನೋ ಆತನಿಗೆ ಧರ್ಮದ ಮೇಲಾಗುತ್ತಿರುವ ನೋವನ್ನು ಸಹಿಸಿಕೊಂಡಿರುವುದಕ್ಕೆ ಸಾಧ್ಯವಾಗುವುದಿಲ್ಲ. ಅದು ಮಾನವನ ಸಹಜ ಸ್ವಭಾವ ಗುಣವಾಗಿದೆ. ಅವರು ಮಾಡಿದ ಭಾಷಣವನ್ನು ಕೋಮು ಪ್ರಚೋದಕವೆಂದು ಹೇಳಿ ಅಮಾಯಕ ಹಿಂದುಗಳ ಮೇಲೆ ಏಕಾಏಕಿ ಧಾಳಿ ಮಾಡಿರುವುದು ಖಂಡನೀಯವಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕೆ ಹೊರತು ಕಾರ್ಯಕ್ರಮವನ್ನು ನೋಡಲು ಬಂದ ಮಾತೆಯರ, ಮಕ್ಕಳ ಮೇಲೆ ಹಲ್ಲೆ ಮಾಡಿರುವುದು ನ್ಯಾಯಯುತವಾಗಿದೆಯೇ? ಹೀಗೆ ಹತ್ತು ಹಲವು ಘಟನೆಗಳನ್ನು ಅವಲೋಕಿಸಿದಾಗ ಕೆಲವೊಂದು ದುಷ್ಟಶಕ್ತಿಗಳ ಕೃತ್ಯವನ್ನು ನಾವು ಗಮನಿಸಬಹುದು.
ಅವರ ರಾಜಕೀಯ ಶಕ್ತಿಯನ್ನು ತೋರಿಸಲು ಅಮಾಯಕ ಜನರ ಮೇಲೆ ಧಾಳಿ ನಡೆಸಿ, ಇನ್ನೊಂದು ಪಕ್ಷದ ಮೇಲೆ ಗೂಬೆ ಕೂರಿಸುವುದು ಸರ್ವೇಸಾಮಾನ್ಯವೆಂದು ಗ್ರಹಿಸಬಹುದು. ರಾಜಕೀಯ ಕ್ಷೇತ್ರದಲ್ಲಿ ಮೇಲೆ ಬರಬೇಕೆಂದು ಈ ರೀತಿಯ ಕೃತ್ಯವನ್ನು ನಡೆಸುತ್ತಿದ್ದಾರೆ ಎನ್ನುವುದು ಸ್ಫಷ್ಟ.
ಕಾಸರಗೋಡಿನ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಹಿಂದುಗಳ ಭಾವನೆಯ ಪ್ರತೀಕವಾದ ವಿಷ್ಣುಮೂರ್ತಿ ದೇವಸ್ಥಾನವಿದ್ದು, ಹೆದ್ದಾರಿಯ ಅಗಲೀಕರಣ ನೀತಿಯನ್ನು ಗುರಿಯಾಗಿರಿಸಿ, ಆ ದೇವಾಲಯವನ್ನು ಕೆಡಹುವ ಹುನ್ನಾರ ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅಗಲಿಸುವ ನೆಪದಲ್ಲಿ ಅನೇಕ ಬಡಜನತೆಯ ಅಹಾರವನ್ನು ಕಸಿದುಕೊಂಡರೂ ಮಾತನಾಡದೇ ಇದ್ದ ಹಿಂದು ಸಮಾಜವು ದೇವಸ್ಥಾನವನ್ನು ಕೆಡಹುವ ವಿಷಯದಲ್ಲಿ ಮಾತ್ರ ರೊಚ್ಚಿಗೆದ್ದಿದ್ದಾರೆ.
ತೇಜಸ್ವಿನಿ ಕ್ಷಮೋಪೇತೇ ನಾತಿಕಾರ್ಕಶ್ಯಮಾಚರೇತ್|
ಅತಿನಿರ್ಮಥನಾದ್ವಹ್ನಿಶ್ಚಂದನಾದಪಿ ಜಾಯತೇ ||
ಸಹನೆಯುಳ್ಳ ತೇಜಸ್ವಿಗಳಲ್ಲಿ ತುಂಬ ಕಠಿನತೆಯನ್ನು ತೋರಬಾರದು. ಚಂದನವನ್ನು ತುಂಬ ಉಜ್ಜಿದರೆ ಅದರಿಂದಲೂ ಬೆಂಕಿ ಏಳುವುದಲ್ಲವೇ! ಯಾವುದೇ ಧರ್ಮ-ಮತಾನುಯಾಯಿಗಳೇ ಇರಲಿ ಅವರ ಭಾವನೆಗಳಿಗೆ ಧಕ್ಕೆಯಾದ ಕೂಡಲೇ ಅವರು ಒಟ್ಟಾಗಿ ಹೋರಾಟ ಮಾಡಿದ ಘಟನೆಗಳನ್ನು ನಾವು ಕೇಳಿದ್ದೇವೆ. ಅದರಲ್ಲೂ ಇತ್ತೀಚಿಗೆ ರಷ್ಯಾದಲ್ಲಿ ನಡೆದ ಹಿಂದುಗಳ ಪೂಜ್ಯ ಗ್ರಂಥ ಭಗವದ್ಗೀತೆ ನಿಷೇದಿಸಬೇಕು ಎನ್ನುವ ವಿಷಯವನ್ನು ಮಾದ್ಯಮದ ಮೂಲಕ ತಿಳಿದ ಹಿಂದುಗಳು ದೇಶದಲ್ಲೆಡೆ ಬಂದ್‌ಗೆ ಕರೆನೀಡಿದವು. ಅದನ್ನು ನೋಡಿದ ಸೈಬೀರಿಯಾ ಸರ್ಕಾರ ಕೂಡಲೇ ಅದನ್ನು ಹಿಂತೆಗೆದುಕೊಂಡಿತು. ಇದೇ ರೀತಿ ಮುಸ್ಲಿಂರಲ್ಲೂ ಕೂಡ ಮಹತ್ವದ ಹಜ್‌ಯಾತ್ರೆಗೆ ಸಂಬಂಧಿಸಿದಂತೆ ಅವರ ಭಾವನೆಗಳಿಗೆ ದಕ್ಕೆ ಉಂಟಾದಾಗ ಅವರು ಕೂಡ ಹೋರಾಡಿದ ಘಟನೆಗಳನ್ನು ನಾವು ಕೇಳಿದ್ದೇವೆ. ಮಂಗಳೂರಿನಲ್ಲಿ ಚರ್ಚುಗಳ ಮೇಲೆ ಧಾಳಿ ನಡೆದಾಗ ಅವರು ಕೂಡ ಬೀದಿಗಿಳಿದು ಹೋರಾಟ ಮಾಡಲಿಲ್ಲವೇ? ಹೀಗೆ ಎಲ್ಲಾ ಧರ್ಮದವರು ಅವರು ನಂಬಿಕೊಂಡ ಭಾವನಾತ್ಮಕ ಸಂಬಂದಗಳಿಗೆ ಧಕ್ಕೆ ಉಂಟಾದಾಗ ಹೋರಾಟ ಮಾಡಿದ್ದಾರೆ. ಹಿಂದುಗಳು ದೇವಸ್ಥಾನವನ್ನು ಕೆಡಹುವ ವಿಷಯದಲ್ಲೂ ಕೂಡ ಒಗ್ಗಟ್ಟಾಗಿ ಹೋರಾಟ ಮಾಡಿರುವುದು ಸ್ವಾಗತಾರ್ಹವಾಗಿದೆ.
ಪ್ರತಿಯೊಬ್ಬರ ಭಾವನೆಗಳಿಗೆ ದಕ್ಕೆಯಾದಾಗ ಅವರ ಧರ್ಮದ ನೇತಾರರು ಖಾರವಾಗಿ ಮಾತನಾಡುವುದು ಸಹಜ. ತಮ್ಮ ಧರ್ಮದ ಮೇಲಾಗುತ್ತಿರುವ ಕೆಡುಕುಗಳನ್ನು ಮನದಲ್ಲಿ ಹೆಪ್ಪುಗಟ್ಟಿರುವ ಭಾವನೆಯನ್ನು ಮಾತಿನ ಮೂಲಕ ಹೇಳುವುದು ತಮ್ಮ ಧರ್ಮದ ಬಗೆಗಿನ ಅತಿಯಾದ ಕಾಳಜಿಯನ್ನು ಬಿಂಬಿಸುತ್ತದೆ.
ಪ್ರತಿಯೊಂದು ಧರ್ಮದಲ್ಲೂ ಈ ರೀತಿಯ ಭಾವನೆಗಳು ವ್ಯಕ್ತವಾಗುವಾಗುವುದು ಸಹಜವಾಗಿರುವಾಗ ಕೇವಲ ರಾಜಕೀಯದ ಪ್ರಲೋಭನೆಯಿಂದ ಧರ್ಮ-ಧರ್ಮಗಳ ಮೇಲೆ ತಮ್ಮ ರಾಜಕೀಯ ಪ್ರಭಾವವನ್ನು ಬೀರುತ್ತಾ ಸ್ವಾರ್ಥವನ್ನು ಸಾಧಿಸುವಲ್ಲಿ ರಾಜಕೀಯ ನಾಯಕರು ಶ್ರಮಿಸುತ್ತಿದ್ದಾರೆ. ಅದಕ್ಕೆ ಸೂಕ್ತ ಬೆಂಬಲ ಕೂಡ ರಾಜಕೀಯ ನಾಯಕರುಗಳಿಗೆ ಧರ್ಮ ಮುಖಂಡರು ನೀಡುತ್ತಿರುವುದು ಖೇದನೀಯವಾಗಿದೆ. ಬುದ್ದಿವಂತರಾದ ಯುವಜನತೆಯು ಇದರ ಕುರಿತು ಅರಿವು ಮೂಡಿಸಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಶ್ರಮಿಸಬೇಕಾಗಿದೆ. ಯಾವುದೇ ಧರ್ಮದ ಬುದ್ದಿವಂತ ಯುವಜನತೆಯು ಧರ್ಮದ ಮರ್ಮವನ್ನು ತಿಳಿದುಕೊಂಡು ಸಮಾಜಮುಖಿ ಜೀವನವನ್ನು ನಡೆಸಬೇಕು. ವಿವೇಕಾನಂದರ ನುಡಿಗಳನ್ನು ಆದರ್ಶವಾಗಿಟ್ಟುಕೊಂಡು ಕೋಮುದ್ವೇಷವನ್ನು ಹೋಗಲಾಡಿಸಿ ಸ್ವಾಸ್ಥ್ಯ ಸಮಾಜದ ನಿರ್ಮಾಣ ನಮ್ಮ ಜೀವನದ ಗುರಿಯಾಗಲಿ...
ಹೂ ಹರೆಯದ ಹೊಂಗನಸುಗಳೇ
ಏಳಿ ಏಳಿ ಎಚ್ಚರಾಗಿ ಕನಸು ಕಂಗಳೇ,
ಕತ್ತಲೆಗಿದು ಸಾವು, ಸುತ್ತಲೂ ಮುಂಜಾವು
ಕರೆಯುತಿಹಳು ಉಷಾ ಮಂಗಳೇ-ಸುಮಂಗಳೇ...
No comments:
Post a Comment