Wednesday, 18 April 2012

ಮಧ್ಯಮ ವರ್ಗದ ಮೇಲಾಗುತ್ತಿರುವ ಪೊಲೀಸರ ದೌರ್ಜನ್ಯಕ್ಕೆ ಕೊನೆಯೆಂದು?
ಬೇಲಿಯೇ ಎದ್ದು ಹೊಲಮೇಯ್ದರೆ ಹೊಲದ ಗತಿಯೇನು ಎನ್ನುವುದು ಹಳೆಯ ನಾಣ್ಣುಡಿ. ನಮ್ಮನ್ನು ರಕ್ಷಿಸಬೇಕಾದ ವ್ಯಕ್ತ್ತಿ ಭಕ್ಷಕನಾಗಿ ವರ್ತಿಸಿದಾಗ ಈ ಮಾತನ್ನು ಆಡುವುದು ಸರ್ವೆ ಸಾಮಾನ್ಯ.ರೈತನೊಬ್ಬ ದಿನವೆಲ್ಲಾ ಬಿಸಿಲಿನ ಬೇಗೆಯಲ್ಲಿ ಬೆವರಿಳಿಸಿ ಉತ್ತಮ ಫಸಲನ್ನು ಪಡೆಯುವ ಉದ್ದೇಶದಿಂದ ಕಾಡುಪ್ರಾಣಿಗಳ ಹಾವಳಿಯನ್ನು ತಡೆಯಲು ಕೃಷಿಭೂಮಿಗೆ ಬೇಲಿಯನ್ನು ನಿರ್ಮಾಣ ಮಾಡುತ್ತಾನೆ. ಆದರೆ ಆತನ ದುರದೃಷ್ಟವೆಂಬಂತೆ ಬೇಲಿಯೇ ಎದ್ದು ಸುಂದರವಾಗಿದ್ದ ಫಸಲನ್ನು ಮೇಯ್ದರೇ ಹೊಲವನ್ನು ರಕ್ಷಿಸುವವರು ಯಾರು? ರೈತನಿಗೆ ರಕ್ಷಣೆಯನ್ನು ನೀಡುವವರು ಯಾರು? ಇದು ಕೇವಲ ರೈತನ ಶ್ರಮ ಮಾತ್ರವಲ್ಲ. ಆತನೊಂದಿಗೆ ದುಡಿದ ಆತನ ಕುಟುಂಬಿಕರು ಹಾಗೂ ಮೂಕಪ್ರಾಣಿಗಳ ದುಡಿಮೆಗೆ ಎಲ್ಲಿಂದ ಬರಬೇಕು ಫಲಶ್ರುತಿ...
ಕೇವಲ ರೈತನನ್ನು ಗುರಿಯಾಗಿರಿಸಿ ಹೇಳಿದ ಮಾತಂತು ಅಲ್ಲವೇ ಅಲ್ಲ. ನಮಗೆ ರಕ್ಷಣೆ ನೀಡಬೇಕಾದ ಪೊಲೀಸರ ಹಾಗೂ ವಕೀಲರ ದೌರ್ಜನ್ಯವನ್ನು ಕುರಿತು ಮಾತನಾಡಲೇ ಬೇಕು. ಅವರು ಸಾಮಾನ್ಯ ಜನತೆಯ ಪಾಲಿಗೆ ರಕ್ಷಕರಾಗಿರದೇ ಜೀವ ಹಿಂಡುವ ಭಕ್ಷಕರಾಗಿ ನಮ್ಮ ಕಣ್ಣ ಮುಂದಿದ್ದಾರೆ. ಎಲ್ಲರಿಗೂ ಕಾನೂನು ಅಂದ ಮೇಲೆ ಸಮಾನವಾಗಿ ನೋಡುವುದು ಅವರ ಧರ್ಮ ಅಲ್ಲದೇ ಅಂತಹ ಪವಿತ್ರವಾದ ವೃತ್ತಿಯನ್ನು ಸ್ವೀಕರಿಸುವಾಗ ಮಾಡಿದ ಪ್ರತಿಜ್ಞೆಯನ್ನು ಮರೆತು ವರ್ತಿಸುತ್ತಾರೆ. ಎಲ್ಲರಿಗೂ ಸಮಾನವಾದ ಸೇವೆಯನ್ನು ನೀಡುತ್ತೇವೆ ಎನ್ನುವುದು ಅವರ ಧ್ಯೇಯವಾದರೂ ಅವರು ಮಾಡುತ್ತಿರುವುದಾದರೂ ಏನು? ಹಲವಾರು ಘಟನೆಗಳನ್ನು ಆದರಿಸಿ ಈ ಲೇಖನವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಿದ್ದೇನೆ. ನಿಮಗೂ ಕೂಡ ಅನುಭವವಾಗಿರಬೇಕು. ಪ್ರಜಾಪ್ರಭುತ್ವ ಸಮಾಜದ ಶ್ರೇಷ್ಠ ಪ್ರಜೆಯಾಗಲು ನಾವು ಮಾಡಬೇಕಾದ ಕಾರ್ಯವೇನು? ಯಾವ ಕ್ರಮ ಕೈಗೊಳ್ಳಬಹುದು ಎನ್ನುವ ತೀರ್ಮಾನ ನಮ್ಮ ಪಾಲಿಗಿದೆ.
ಮಂಗಳೂರಿನಿಂದ ಉಡುಪಿಗೆ ಒಂದೂವರೆ ಘಂಟೆಯ ಪ್ರಯಾಣ. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಪ್ರಯಾಣಿಸುವಾಗ ಶ್ರೀ ಮಾರಿಕಾಂಬೆಯ ಕ್ಷೇತ್ರ ಕಾಪು ಸಿಗುತ್ತದೆ. ಅಲ್ಲಿಯ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮಹಿಳಾ ಅಧಿಕಾರಿಯೊಬ್ಬರೂ ಮಾ.೨೫(ಭಾನುವಾರ) ಇಬ್ಬರೂ ಪೇದೆಗಳೊಂದಿಗೆ ದಾರಿಯಲ್ಲಿ ಹೋಗುವಂತ ದ್ವಿಚಕ್ರ ವಾಹನವನ್ನು ತಡೆದು ಮೂಲದಾಖಲೆಗಳನ್ನು ಪರೀಕ್ಷಿಸುತ್ತಿದ್ದರು. ಮಹಿಳೆಯೊರ್ವಳು ಪೊಲೀಸ್ ಸಮವಸ್ತ್ರದಲ್ಲಿ ಕರ್ತವ್ಯ ಮಾಡುತ್ತಿರುವುದನ್ನು ನೋಡಿ ಸಂತೋಷವಾಗಿದ್ದರೂ ಅವರ ದೌರ್ಜನ್ಯವನ್ನು ನೋಡಿದಾಗ ಎಂತಹವನಿಗಾದರೂ ಪ್ರಶ್ನೆ ಮಾಡಲೇ ಬೇಕು ಎನ್ನುವ ಧೈರ್ಯ ಬಂದರೂ ಪೊಲೀಸರ ಮುಂದೆ ಅದು ಸಾಧ್ಯವಿಲ್ಲ ಎನ್ನುವ ತಿಳುವಳಿಕೆಯಿಂದ ಇಂತಹ ಪೊಲೀಸರ ದಾರ್ಷ್ಟ್ಯತನ ಮೀತಿಮಿರಿದೆ. ಅವರು ನಿಜವಾದ ವೃತ್ತಿಯನ್ನು ಪಾಲಿಸಿದ್ದರೆ ಅವರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಜನತೆಯಿಂದ ಸಿಗುತ್ತದೆ. ಆದರೆ ಇಂತಹ ನೀಚ ಕೆಲಸದಿಂದ ಜನತೆಯ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನತೆಯ ಮುಗ್ದತೆಯನ್ನು ಅವರು ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವುದು ಜಗಜ್ಜಾಹಿರವಾಗಿದೆ.
ಹಿಂದುಗಳಿಗೆ ದೇವಸ್ಥಾನ, ಮುಸ್ಲಿಂರಿಗೆ ಮಸೀದಿ, ಕ್ರಿಶ್ಚಿಯನ್ನರಿಗೆ ಚರ್ಚು, ಜೈನರಿಗೆ ಬಸದಿಗಳು ಹೀಗೆ ಪ್ರತಿಯೊಂದು ಧರ್ಮದವರಿಗೂ ಆಯಾ ಸ್ಥಳಗಳು ಪವಿತ್ರವಾದರೆ ಅದು ಅವರ ಧಾರ್ಮಿಕ ಭಾವನೆಯ ಮುಗ್ದತೆಯನ್ನು ಪ್ರಚುರಪಡಿಸುತ್ತದೆ. ಇಂತಹ ದೈವಭಕ್ತಿಯನ್ನು ಹೊಂದಿದ ಪ್ರತಿಯೊಂದು ಧರ್ಮದ ಜನತೆಯು ಪೊಲೀಸ್ ಠಾಣೆಗೆ ಹೋದಾಗ ಅಂತಹುದೆ ಭಕ್ತಿಭಾವವನ್ನು ಪ್ರದರ್ಶಿಸುತ್ತಾರೆ. ಪವಿತ್ರವಾದ ಸ್ಥಳವಿದು ಭಕ್ತಿಭಾವದಿಂದ ಪಾದರಕ್ಷೆಯನ್ನು ಹೊರಗೆ ಬಿಟ್ಟು ನ್ಯಾಯವನ್ನು ಪಡೆದುಕೊಳ್ಳಲು ಬಲಗಾಲಿಟ್ಟು ಬನ್ನಿ ಎನ್ನುವ ನಂಬಿಕೆಯಿಂದ ನಾಮಫಲಕ ಇಲ್ಲದಿದ್ದರೂ ಅಂತಹ ಕೆಲಸವನ್ನು ಮಾಡುತ್ತಾರೆ. ದೇವರ ಮೇಲಿನ ಭಯ, ಭಕ್ತಿಯಿಂದ ಮಾಡಿದ ಪಾಪ-ಪುಣ್ಯಗಳಿಗೆ ಹಂಸ-ಕ್ಷೀರನ್ಯಾಯವನ್ನು ಪಡೆಯಲು ಪುಣ್ಯಸ್ಥಳಗಳಿಗೆ ಬರುತ್ತಾರೆ. ಅಂತಹವರ ಪಾಲಿಗೆ ಅಲ್ಲಿ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆಯಿಂದ ವಿವಿಧ ಸೇವೆಯನ್ನು ನೀಡುತ್ತಾರೆ. ಅದೇ ರೀತಿ ದೇವಸ್ಥಾನ ಸ್ವರೂಪಿಯಾದ ಪೊಲೀಸ್ ಠಾಣೆಯಲ್ಲಿ ನ್ಯಾಯವನ್ನು ಪಡೆಯಬೇಕು ಎಂದು ಬರುವ ಬಡಜನತೆಯ ಪಾಲಿಗೆ ನ್ಯಾಯ ದೊರಕುತ್ತಿದೆಯೇ? ಅಲ್ಲಿರುವಂತ ವ್ಯಕ್ತಿಗಳಿಂದ ಅವರ ಮನಸ್ಸಿಗೆ ನೆಮ್ಮದಿ ತರುವಂತ ಕಾರ್ಯ ಆಗುತ್ತಿದೆಯೇ ಎಂದಾಗ ಉತ್ತರ ಮಾತ್ರ ಶೂನ್ಯ. ಕೆಲವೊಬ್ಬರೂ ನಿಷ್ಠಾವಂತ ಅಧಿಕಾರಿಗಳು ಅವರ ವೃತ್ತಿಯನ್ನು ದೇವರ ಕಾರ್ಯವೆಂದು ಭಾವಿಸಿ ಅವಧಿಗಿಂತ ಜಾಸ್ತಿಯೇ ದುಡಿಯುತ್ತಿದ್ದರೂ ತಿಳಿನೀರಿನಲ್ಲಿ ಹುಳುಕನ್ನು ಸೃಷ್ಠಿಸಲು ಕೆಲವೊಂದು ವ್ಯಕ್ತಿಗಳು ಮಾಡುವ ಭ್ರಷ್ಟಾಚಾರದಿಂದ ಎಲ್ಲಾ ಪೊಲೀಸ್ ವರ್ಗದವರನ್ನು ಶಪಿಸುವ ಸಂದರ್ಭ ಬಂದಿದೆ. ಇಂಥರಿಂದಾಗಿ ನಿಷ್ಠಾವಂತರು ಯಾವುದೇ ಉತ್ತಮ ಕಾರ್ಯವನ್ನು ಮಾಡಿದರೂ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಯಾವುದೇ ಸ್ಥಳದಲ್ಲಿ ನೋಡಿದರೂ ಸಾಮಾನ್ಯವಾಗಿ ಅರ್ಥವಾಗುವ ಅಂಶವಿದು. ಮಧ್ಯಮ ವರ್ಗದವರು ಪ್ರಯಾಣಿಸುವ ಅಂದರೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನವನ್ನು ಅಡ್ಡಗಟ್ಟುವುದು ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಅವರನ್ನು ಅಡ್ಡಗಟ್ಟಿ ಅವರಿಗೆ ಮನಃ ಬಂದಂತೆ ದಂಡವನ್ನು ಹಾಕುತ್ತಾರೆ. ಯಾವುದೇ ಕಾರುಗಳನ್ನು ತಡೆಯದೇ ಕೇವಲ ಸಣ್ಣವಾಹನಗಳನ್ನೆ ಗುರಿಯಾಗಿರಿಸಿಕೊಂಡು ಅವರ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಾರೆ.
ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಪ್ರಯಾಣಿಸುತ್ತಿದ್ದಾಗ ಕಾಪು ಪೊಲೀಸ್ ಠಾಣೆಯ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಎಲ್ಲಾ ಸಣ್ಣ ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಹೀಗೆ ನನ್ನ ದ್ವಿಚಕ್ರವಾಹನವನ್ನು ತಪಾಸಣೆ ಮಾಡಲು ನಿಲ್ಲಿಸಲಾಗುತ್ತದೆ. ಒಬ್ಬ ಪತ್ರಕರ್ತನಾಗಿ ಸಮಾಜದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯವನ್ನು ಗಮನವಿಟ್ಟು ನೋಡುವುದು ಹಾಗೂ ಪ್ರತಿಯೊಬ್ಬರನ್ನು ಸಂಶಯಾತೀತವಾಗಿ ನೋಡಿ ವಿಷಯವನ್ನು ಸಂಗ್ರಹಿಸುವುದು ನಮ್ಮ ವೃತ್ತಿ. ಉತ್ತಮವಾದ ಅಂಶವನ್ನು ಸಮಾಜದ ಜನತೆಗೆ ಮಾದರಿಯಾಗುವಂತೆ ಬಿಂಬಿಸುವುದು ನಮ್ಮ ಹಕ್ಕು. ಬೈಕನ್ನು ನಿಲ್ಲಿಸಿ ಎಲ್ಲಾ ದಾಖಲೆಗಳನ್ನು ತೋರಿಸಲೋಸುಗ ಹೋಗುವಾಗ ಇನ್ನೊರ್ವ ವ್ಯಕ್ತಿಯನ್ನು ತಪಾಸಣೆ ಮಾಡುತ್ತಿದ್ದರು. ದೇವರ ಸ್ಥಾನದಲ್ಲಿರುವ ಅಧಿಕಾರಿಯು ಇಲ್ಲಿಯೇ ದಂಡವನ್ನು ಕಟ್ಟುವುದಾದರೆ ಮುನ್ನೂರು ಇಲ್ಲಾ ಕೋರ್ಟ್‌ನಲ್ಲಿ ಕಟ್ಟುವುದಾದರೆ ಸಾವಿರದರೆಗೆ ಆಗುತ್ತದೆ ಹಾಗೂ ಬೈಕನ್ನು ಸೀಜ್ ಮಾಡಬೇಕಾಗುತ್ತದೆ ಎಂದು ಹೆದರಿಸುತ್ತಿದ್ದರು. ಅವರು ಮುನ್ನೂರು ಕೊಟ್ಟು ರಶೀಧಿಯನ್ನು ಪಡೆಯುವಾಗ ನಾನು ಗಮನಿಸಿದ ಅಂಶವೆಂದರೆ ಆ ರಶೀಧಿಯಲ್ಲಿ ನಮೂದಿಸಿದ ಮೊತ್ತ ಮಾತ್ರ ಕೇವಲ ನೂರು...!
ನಂತರದಲ್ಲಿ ನನ್ನ ಸರದಿ ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಯಾವುದೋ ದಾಖಲೆ ಇಲ್ಲ ಎನ್ನುವ ಉದ್ದೇಶದಿಂದ ರೂ.೧೦೦ ದಂಡ ಬರೆದಿದ್ದಾರೆ. ಇದೇ ಸಂದರ್ಭದಲ್ಲಿ ಯಾವುದೇ ದಾಖಲೆಗಳಿಲ್ಲದ ಕಾಲೇಜು ವಿದ್ಯಾರ್ಥಿ ಜೋಡಿ ಅದರಲ್ಲೂ ಬೇರೆ ರಾಜ್ಯದ ನೋಂದಾವಣೆ ಸಂಖ್ಯೆ ಹೊಂದಿರುವ ಬೈಕನ್ನು ಯಾವುದೇ ತಪಾಸಣೆ ಇಲ್ಲದೇ ದಂಡರಹಿತವಾಗಿ ಬಿಟ್ಟಿರುವುದನ್ನೆ ನಾನು ಪ್ರಶ್ನಿಸಿದಾಗ ಅವರು ಪೊಲೀಸ್ ದರ್ಪವನ್ನು ತೋರಿಸಿದ್ದಾರೆ. ನಿಮ್ಮ ದಾಖಲೆಗಳನ್ನು ಸರಿಯಾಗಿರಿಸಿಕೊಳ್ಳಿ ನಂತರ ನಮಗೆ ಹೇಳಲು ಬನ್ನಿ. ನಾವು ಕೆಲಸಕ್ಕೆ ಸೇರುವಾಗ ಸಾವಿರಾರು ರೂಪಾಯಿ ಕೊಟ್ಟು ಬಂದಿದ್ದೇವೆ. ನಮ್ಮ ಸಂಸಾರವನ್ನು ಸಾಗಿಸಬೇಕು ಎಂದು ಹಾರಿಕೆಯ ಮಾತುಗಳನ್ನಾಡುತ್ತಾರೆ. ಇದರರ್ಥ ಅವರ ಭ್ರಷ್ಟಾಚಾರಕ್ಕೆ ನಾವು ಸಮ್ಮತಿ ನೀಡಬೇಕು ಎನ್ನುವುದಲ್ಲವೇ? ನಮ್ಮ ಕಣ್ಣ ಮುಂದೆ ಏನೇ ನಡೆದರೂ ಅವರು ಮಾಡಿರುವುದು ಸರಿಯೆನ್ನುವ ಮೌನಮುದ್ರೆಯನ್ನು ತಾಳಬೇಕು ಎನ್ನುವ ಭಾವನೆಯಲ್ಲವೇ?
ಹೀಗೆ ದಿನವೊಂದಕ್ಕೆ ಹಲವಾರು ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿರುವಾಗ ನಮ್ಮನ್ನು ರಕ್ಷಿಸಬೇಕಾದ ಪೊಲೀಸರು ಭಕ್ಷಕರಾಗಿ ನಮ್ಮ ಮೇಲೆ ದೌರ್ಜನ್ಯ ಎಸಗುವ ಪರಿಯನ್ನು ನೋಡಿದರೆ ನಮಗೆ ರಕ್ಷಣೆ ನೀಡುವವರು ಯಾರು ಎನ್ನುವ ಅನುಮಾನ ಕಾಡುತ್ತದೆ. ನಾವು ಧೃಢ ನಿರ್ದಾರದಿಂದ ಸಮಾಜದಲ್ಲಿರುವ ಪ್ರತಿಯೊಂದು ದೌರ್ಜನ್ಯವನ್ನು ತಡೆಯುವ ಮನಮಾಡಿದರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾದ್ಯ.
ಭವಿಷ್ಯದಲ್ಲಿಯಾದರೂ ಪೊಲೀಸರು ಮಧ್ಯಮ ವರ್ಗದವರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡಿ ಸಾಮಾನ್ಯ ಜನತೆ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿಯಾಗದಂತೆ ಮಾಡಿ ಎನ್ನುವುದು ಎಲ್ಲರ ಅರಿಕೆ. ನಿಷ್ಟಾವಂತ ಸೇವಕರು ಸೇವೆಯನ್ನು ನೀಡಲು ನಮ್ಮ ನಡುವೆ ಹುಟ್ಟಿ ಭ್ರಷ್ಠಾಚಾರ ಮುಕ್ತ ಸಮಾಜ ನಿರ್ಮಾಣ ಮಾಡೋಣ.
ಕೆ.ಎಸ್.ಶೆಟ್ಟಿ

No comments:

Post a Comment