Monday, 23 April 2012
ಯಕ್ಷಗಾನ
ಕರಾವಳಿ ದರ್ಶನ:
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯ ಯಕ್ಷಗಾನದಲ್ಲಿ ನೋಡಬನ್ನಿ....
(ಓದು,ಬರೆಯಲು ಬಾರದ ಕಲಾವಿದರ ನೈಪುಣ್ಯತೆ... ನಿರರ್ಗಳವಾಗಿ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳ ಅವಿರತ ಸಾಧನೆ.....
ತುಳುನಾಡಿನ ಗಂಡುಕಲೆ ಯಕ್ಷಗಾನ. ಹಿಂದೆ ಕೇವಲ ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಸಾಗರತೀರದ ಈ ಕಲೆಯನ್ನು ಮಕ್ಕಳು, ಹೆಂಗಸರು ನಮ್ಮಲ್ಲಿಯೂ ಕೂಡ ಸಾಮರ್ಥ್ಯವಿದೆ ಎಂದು ಸಾಧಿಸಿತೋರಿಸುತ್ತಿದ್ದಾರೆ. ಯಕ್ಷಗಾನ ಕನ್ನಡ ಸಂಸ್ಕೃತಿಯನ್ನು ದೇಶದ ಮೂಲೆಗಳಿಗೂ ಪಸರಿಸಿ, ವಿದೇಶದಲ್ಲೂ ಕನ್ನಡ ಕಂಪನ್ನು ಪಸರಿಸಿದ ಕೀರ್ತಿ ಯಕ್ಷಗಾನಕ್ಕಿದೆ. ಮಳೆಗಾಲ ಪ್ರಾರಂಭವಾಗುವುದಕ್ಕಿಂತ ಮುಂಚೆ ತಮ್ಮ ಬೆಚ್ಚನೆಯ ಗೂಡಿನೊಳಗೆ ಸೇರಿದ ಸಾಗರ ತೀರದ ಸಮೃದ್ದ ಕಲೆಯಾದ ಯಕ್ಷಗಾನ ಮೇಳಗಳು ಈಗ ಗೂಡುಬಿಟ್ಟು ಹೊರಟು ಕರಾವಳಿಯಾಧ್ಯಂತ ಸಂಚರಿಸುತ್ತಾ ಕಲಾರಸಿಕರ ಮನ ತಣಿಸುತ್ತಿವೆ. ವೃತ್ತಿ ಯಕ್ಷಗಾನ ಮೇಳಗಳು ಪುರುಷರಿಗೆ ಸೀಮಿತವಾಗಿದೆ. ವಿದ್ವನ್‌ಮಣಿಗಳ ಪ್ರಕಾರ ಯಕ್ಷಗಾನವೆನ್ನುವುದು ಜಾಗೃತ ಕಲೆ; ಅರಿವಿನ ನೆಲೆ; ಆನಂದದ ಅಲೆ; ಸಾಂಸ್ಕೃತಿಕ ,ಧಾರ್ಮಿಕ, ಸಾಮಾಜಿಕ, ಸಾಂಪ್ರದಾಯಿಕ ಜೀವನಮೌಲ್ಯಗಳ ಆಧಾರ ಸೆಲೆ; ರವರಸಗಳನ್ನು ಬಿತ್ತುವ ಹೊಳೆ; ಇದುವೇ ಹಿಂದೂ ಸಂಸ್ಕೃತಿಯ ಸಂಜೀವಿನಿ. ಇದು ಕೇವಲ ಕರಾವಳಿಗೆ ಸೀಮಿತವಾಗಿರದೆ, ಮಲೆನಾಡಿನ ಉದ್ದಗಲಕ್ಕೂ ತನ್ನ ಬಾಹುಳ್ಯವನ್ನು ಪ್ರದರ್ಶಿಸುತ್ತಾ, ದೇಶ ವಿದೇಶಗಳಲ್ಲೂ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುತ್ತಿದೆ.
ಯಕ್ಷಗಾನ ಮೇಳಗಳ ವೈಶಿಷ್ಟ್ಯವೇ ಹಾಗೇ...ಎಲ್ಲಾ ಮೇಳಗಳು ದೇವರ ಗುಡಿಯಿಂದಲೇ ಹೊರಟು, ಕೊನೆಗೆ ಬಂದು ಸೇರುವುದು ಅದೇ ಸುಂದರವಾದ ಭೂರಮೆಯ ಮಡಿಲಿಗೆ....ಸಾಗರದ ನೀರಿನಂತೆ.... ಆವಿಯಾಗಿ, ಮಂಜು ಕವಿದು, ಮೋಡ ಮಳೆಯಾಗಿ ಸುರಿದು ಕೊನೆಯಲ್ಲಿ ಸೇರುವುದು ಸಾಗರದ ಒಡಲಿಗೆ.
ತೆಂಕುತಿಟ್ಟು ಅಥವಾ ಬಡಗುತಿಟ್ಟು ಯಾವುದೇ ಮೇಳವಾದರೂ, ತಿರುಗಾಟ ಹೊರಡುವುದು ಮಾತ್ರ ದೇವರ ಹೆಸರಿನಲ್ಲಿಯೇ? ಕಲೆ ಕಾಸಿಗಾಗಿ, ಕಾಲಯಾಪನೆಗಾಗಿ ಎನ್ನುವ ಜನರಿಗೆ ಮುದ ನೀಡುವುದಕ್ಕಾಗಿ ಮುಂದಾದ ಡೇರೆ ಮೇಳಗಳಾದರೂ, ತಿರುಗಾಟ ನಡೆಸುವುದು ದೇವರ ಹೆಸರಿನಿಂದ ಮತ್ತು ದೇವಸ್ಥಾನದ ನಾಮಮುದ್ರೆಯಿಂದ.
ಪ್ರತಿಯೊಬ್ಬ ಕಲಾವಿದನ ಬಾಳಭೂಮಿಯಲ್ಲಿ ನೀಳವಾಗಿ ಬಿಳಲುಗಳನ್ನು ಇಳಿಬಿಟ್ಟು, ಬಲವಾಗಿ ಬೇರುಬಿಟ್ಟ ಆಲದ ಮರವೇ ಯಕ್ಷಗಾನ. ಇದೊಂದು ಅದ್ಬುತವಾದ ಕಲೆ. ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ಯಕ್ಷಗಾನಕ್ಕೆ ಮಾತ್ರ ಸಲ್ಲುತ್ತದೆ. ಮನಸ್ಸಿಗೆ ಮುದ ನೀಡುವ,ನೆಮ್ಮದಿಯನ್ನು, ಜೀವನಮೌಲ್ಯವನ್ನು ಸಾರುವ ಯಕ್ಷಗಾನ, ಜನಮನ ರಂಜನೆಗೊಳಪಡಿಸುತ್ತಾ ರಂಜನೆ ನೀಡುತ್ತಿರುವ ದೃಶ್ಯ ಮಾತ್ರ ಮನಮೋಹಕವಾಗಿರುತ್ತದೆ.
ಎಷ್ಟೇ ಹಠಮಾರಿ ಗಂಡನಾದರೂ, ಹೆಂಡತಿಯ ಮಮತೆಯ ಮುಂದೆ ಮುಗುಳುನಗುವಿನ ಮುಗ್ದ ಮಗುವಿನಂತಾಗುತ್ತಾನೆ. ಯಕ್ಷಗಾನದ ಅಭಿರುಚಿಯೇ ಅಂತದ್ದು, ಮನಸ್ಸಿನಲ್ಲಿ ಎಂತಹ ದುಗುಡ,ದುಮ್ಮಾನಗಳಿದ್ದರೂ ಕ್ಷಣಮಾತ್ರದಲ್ಲಿ ಪರಿಹರಿಸುವ ಸಾಧನ.
ಗೆಜ್ಜೆ ಕಟ್ಟುವ ಸೇವೆಯನ್ನು ಹರಕೆಯಾಗಿ, ಕರಾವಳಿ ಮತ್ತು ಮಲೆನಾಡಿನ ಜನತೆ ಆಚರಿಸಿಕೊಂಡು ಬಂದಿದ್ದಾರೆ. ಎದೆಯ ಕುದಿ ಕಳೆಯಲು, ಒಡಲು ತಂಪಾಗಿಸಲು, ಬಗೆಯ ಬಯಕೆ ಹಣ್ಣಾಗಲು ಹರಕೆ ಹೊತ್ತು ಅದೃಷ್ಟದ ಫಲ ದೊರೆತಾಗ ಸೇವೆಯನ್ನು ಮಾಡುತ್ತಾರೆ. ಪ್ರತಿಯೊಂದು ದೇವಾಸ್ಥಾನದಲ್ಲೂ ಅದರದೇ ಆದ ವೈಶಿಷ್ಟವಿರುತ್ತದೆ. ಮಂದಾರ್ತಿ ದೇಗುಲದಲ್ಲಿ ರಚಿಸಿದ ಹಾಡನ್ನು ಕೇಳಿದಾಗ, ಮಗದೊಮ್ಮೆ ಕೇಳಬೇಕು ಎನಿಸುವಂಥದ್ದು...
`ಯಕ್ಷಗಾನ ಸೇವೆ ನೀಡಿ, ಮಂದಾರ್ತಿ ದುರ್ಗೆ
ಮನ ಒಲಿಸಿ ಧನ್ಯರಾಗಿ.....`
ಹೀಗೆ ಮುಂದೆ ಸಾಗುವ ಹಾಡು ಅನೇಕ ಯಕ್ಷಪ್ರೇಮಿಗಳ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುವಂಥದ್ದು. ಯಾವುದೇ ಮೇಳವಿರಲಿ ಅವರು ಸಾರುವ ಸಂಸ್ಕೃತಿಯೊಂದೆ. ಜನರಲ್ಲಿ ತಮ್ಮ ಧರ್ಮದ ಬೀಜವನ್ನು ಬಿತ್ತುವ, ಪ್ರಪಂಚಾನುಭವವನ್ನು ಹರಹುವ, ಚಲಿಸುವ ವಿಶ್ವವಿದ್ಯಾಲಯ. ಸಂಸ್ಕೃತಿಯನ್ನು ಪಸರಿಸುವ ಈಗಿನ ಯಾವುದೇ ಮಾದ್ಯಮಗಳಿಗಿಂತ ಮಿಗಿಲಾದ ಸಾಧನವೇ ಯಕ್ಷಗಾನ.
ಕನ್ನಡದ ಕಂಪನ್ನು, ಸಂಸ್ಕೃತದ ಇಂಪನ್ನು , ಹಳೆಗನ್ನಡದ ಮಹಿಮೆಯನ್ನು ಓದುಬಾರದ, ನಿರರ್ಗಳವಾಗಿ ಭಾಷೆಯ ಸಾರವನ್ನು ಮನಸ್ಸಿಗೆ ನಾಟುವಂತೆ ಮಾಡುವ ಕಲಾಮಾತೆಯ ಕುಸುಮಗಳು ತಮ್ಮ ತಿರುಗಾಟ ಮಾಡಿ, ಜಗತ್ತು ಮಲಗಿರುವಾಗ ಇವರ ಕಾಯಕ ಪ್ರಾರಂಭ, ಜನರೊಂದಿಗೆ ಬೆರೆಯುವ ಹಗಲಿನಲ್ಲಿ ನಿದ್ರಾದೇವಿಯ ಮಡಿಲಲ್ಲಿ ಪವಡಿಸುವ, ಕಲಾಮಾತೆಯ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟು, ಅದರಲ್ಲೇ ತಮ್ಮ ಜೀವನದ ಗೋಪುರವನ್ನು ಕಟ್ಟುವಲ್ಲಿ ಯಶಸ್ಸು ಕಂಡವರು. ಅನೇಕ ಜೀವನಮೌಲ್ಯ,ನವರಸಾದಿಗಳನ್ನು ಮೇಳವಿಸಿ ಮಹಾನ್ ಪುರುಷರ ಪುಣ್ಯತಮವಾದ ಜೀವನದೊಳಗೆ ಪರಾಕಾಯ ಪ್ರವೇಶ ಮಾಡಿ, ತಾನು ತಾನಾಗಿರದೇ, ಕಥಾವಸ್ತುವಿನ ಪ್ರಮುಖ ಪಾತ್ರವಾಗಿ, ಮನರಂಜನೆ ನೀಡುವಲ್ಲಿ ಸತತ ಪ್ರಯತ್ನ ಮಾಡುತ್ತಾನೆ.
ಯಕ್ಷಗಾನದಲ್ಲಿ ಯಾರು ವೇಷವನ್ನು ಮಾಡುತ್ತಾರೋ ಅವರನ್ನು ಮುಮ್ಮೇಳವೆಂದೂ, ಅವರುಗಳಿಗೆ ಪೂರಕವಾಗಿ ಹಾಡು, ಮದ್ದಳೆ, ಚೆಂಡೆ ಹಾಗೂ ಶ್ರುತಿಗಳನ್ನೊಳಗೊಂಡ ತಂಡವೇ ಹಿಮ್ಮೇಳ. ಮುಮ್ಮೇಳದವರು ವೇಷವನ್ನು ಧರಿಸಿ ಹಿಮ್ಮೇಳಕ್ಕೆ ಸರಿಹೊಂದುವಂತೆ ನವರಸಗಳಗಳನ್ನೊಳಗೊಂಡ ಅಭಿನಯ, ಹಾವ, ಭಾವ ಹಾಗೂ ಶ್ರುತಿಬದ್ದವಾದ ಮಾತುಗಾರಿಕೆಯಿಂದ ಕಲಾವಿಧನ ಕಲಾಪ್ರೌಢಿಮೆ ಗುರುತಿಸಲ್ಪಡುತ್ತದೆ. ಕಾಲಿನ ಗೆಜ್ಜೆ, ಭಾಗವತನ ತಾಳ/ ಜಾಗಟೆ, ಶ್ರುತಿ, ಮದ್ದಳೆ, ಚೆಂಡೆಗಳ ಹದಬರಿತ ಮೇಳವೇ ಹಿಮ್ಮೇಳ. ಈ ವಿಭಾಗ ನೃತ್ಯ ಮತ್ತು ಅಭಿನಯಕ್ಕೆ ತಳಪಾಯ.
`ಅ' ಎನ್ನುವ ಒಂದು ಅಕ್ಷರವನ್ನು ಉಚ್ಚರಿಸುವ ಕಾಲಕ್ಕೆ ಒಂದು ಮಾತ್ರಾಕಾಲ ಎಂದು ಹೆಸರು. ಈ ಮಾತ್ರಾಕಾಲದ ಸಮೂಹವನ್ನೆ ತಾಳ ಎನ್ನುತ್ತೇವೆ. ನಿಯತವಾದ ತಾಳದ ಗತಿಯನ್ನೆ ಲಯ ಎನ್ನುತ್ತೇವೆ. ಉದಾಹರಣೆಯಾಗಿ ಗಡಿಯಾರದ ಮುಳ್ಳು ತಿರುಗಿದ ಹಾಗೆ.
ಯಕ್ಷಗಾನ ನಾಟ್ಯಾಭ್ಯಾಸಿಯು ನೃತ್ಯ ಮಾಡಲು ಅನೂಕೂಲ ವಾಗುವಂತೆ ಕೈಕಾಲು, ಕಣ್ಣುಗಳನ್ನು ಬೇಕಾದಂತೆ ಹೊಂದಿಸಿಕೊಳ್ಳಲು ಅಂಗಸಾಧನೆಯನ್ನು ಮೊದಲಿಗೆ ಅಭ್ಯಾಸ ಮಾಡಬೇಕು. ಹಸ್ತ, ಕಣ್ಣು, ಮನಸ್ಸುಗಳ ಸಂಯೋಗದಿಂದ ಭಾವನೆಗಳೂ ಮೇಳೈಸಿ ಮಾಡುವ ನಾಟ್ಯ ನಯನ ಮನೋಹರವಾಗಿ ಚಿತ್ತ ಆಕರ್ಷಿತವಾಗಿರುತ್ತದೆ.`` ಯಥಾ ಹಸ್ತಾ, ತಥಾ ದೃಷ್ಠಿ"- ಕೈ ಎಲ್ಲಿ ಹೋಗುವುದೋ ಅಲ್ಲಿ ಕಣ್ಣು ಹೋಗುವುದು. ಈ ವಿಷಯ ಎಲ್ಲಾ ನಾಟ್ಯಾಭ್ಯಾಸಿಯು ಗಮನದಲ್ಲಿಡಬೇಕಾದ ಅಂಶವಾಗಿರುತ್ತದೆ.
ಯಕ್ಷಗಾನದಲ್ಲಿ ಎರಡು ವಿಧ: ೧.ತೆಂಕು ತಿಟ್ಟು
೨.ಬಡಗು ತಿಟ್ಟು
ಬಡಗು ತಿಟ್ಟಿನಲ್ಲಿ ಬಡಾಬಡಗು ಹಾಗೂ ಬಡಗು ಎನ್ನುವ ಎರಡು ವಿಧಗಳಿವೆ. ದಕ್ಷಿಣ ಕನ್ನಡದಲ್ಲಿರುವ ಯಕ್ಷಗಾನವನ್ನು ತೆಂಕುತಿಟ್ಟು ಎಂತಲೂ, ಉಡುಪಿ ಮತ್ತು ಉತ್ತರಕನ್ನಡದಲ್ಲಿಯ ಯಕ್ಷಗಾನವನ್ನು ಬಡಗು ಮತ್ತು ಬಡಾಬಡಗು ಎಂದು ಗುರುತಿಸಲಾಗುತ್ತದೆ.
ತೆಂಕು ತಿಟ್ಟು ಹಾಗೂ ಬಡಗು ತಿಟ್ಟು ಯಕ್ಷಗಾನ ಮೇಳವಾದರೂ ವೇಷಭೂಷಣದಲ್ಲಿ ವ್ಯತ್ಯಾಸವಿದೆ. ಮುಖವರ್ಣಿಕೆ ಆಯಾ ವೇಷಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ತೆಂಕು ತಿಟ್ಟಿನಲ್ಲಿ ಹೇಳುವ ಪಗಡಿ ವೇಷವನ್ನು ಬಡಗು ತಿಟ್ಟಿನಲ್ಲಿ ಕ್ಯಾದಿಗೆ ಮುಂದಲೆ ಎಂದು ಕರೆಯುತ್ತಾರೆ. ಈ ವೇಷಗಳಿಗೆ ಅನುಗುಣವಾಗಿ ಅವರು ಮುಖವರ್ಣಿಕೆಯನ್ನು ಮಾಡಬೇಕಾಗುತ್ತದೆ. ತೆಂಕು ತಿಟ್ಟಿನಲ್ಲಿ ದಿಗಣ(ಗಿರಕಿ) ಹೊಡೆಯುವುದಕ್ಕೆ ಅನುಕೂಲವಾಗುವಂತೆ ಬಾಲ್‌ಮುಂಡ್ ಕಟ್ಟುತ್ತಾರೆ. ಆದರೆ ಬಡಗುವಿನಲ್ಲಿ ಮಂಡಿ ಹಾಕಲು ಅನುಕೂಲವಾಗುವುದಕ್ಕೆ ಹಾಗೂ ಇಲ್ಲಿಯ ಕ್ಯಾದಿಗೆ ಮುಂದಲೆಗೆ ಹೊಂದಿಕೆಯಾಗುವ ಕಸೆಯನ್ನು ಕಟ್ಟುತ್ತಾರೆ. ತೆಂಕುವಿನಲ್ಲಿ ಮಾತುಗಾರಿಕೆಗೆ ಮಹತ್ವ ನೀಡಿದರೆ ಬಡಗುವಿನಲ್ಲಿ ಅಭಿನಯಕ್ಕೆ ಮಹತ್ವವನ್ನು ನೀಡುತ್ತಾರೆ. ಈ ರೀತಿಯ ವ್ಯತ್ಯಾಸವನ್ನು ಯಕ್ಷಗಾನದ ಅಭಿರುಚಿ ಇದ್ದವರೂ ಬಹಳ ಬೇಗನೆ ಗುರುತಿಸುತ್ತಾರೆ. ಆದರೆ ಸಾಮಾನ್ಯನಿಗೂ ಗುರುತಿಸುವುದಕ್ಕೆ ಅನೂಕೂಲವಾಗುವಂಥ ವ್ಯತ್ಯಾಸವೆಂದರೆ ತೆಂಕುವಿನಲ್ಲಿ ನಿಂತು ಎಡಗಡೆಯಲ್ಲಿ ಚೆಂಡೆಯನ್ನು ಹೊಡೆದರೆ, ಬಡಗುವಿನಲ್ಲಿ ಬಲಗಡೆ ಕುಳಿತು ಬಾರಿಸುತ್ತಾರೆ.
ಸಾಮಾನ್ಯವಾಗಿ ಎರಡು ತಿಟ್ಟುಗಳಲ್ಲಿ ತಾಳಗಳು ಒಂದೆಯಾಗಿರುತ್ತವೆ. ಆದರೆ ಕುಣಿತದ ಶೈಲಿ ಬದಲಾಗಿರುತ್ತದೆ. ಯಕ್ಷಗಾನದಲ್ಲಿ ತಾಳಗಳು ಒಟ್ಟು ೧೩. ಅವುಗಳು ೧.ಆದಿತಾಳ, ೨.ಮಟ್ಟೆತಾಳ, ೩.ರೂಪಕತಾಳ, ೪.ಝಂಪೆತಾಳ, ೫.ತ್ರಿವುಡೆ ತಾಳ, ೬.ಏಕತಾಳ, ೭.ಏಕತಾಳ, ೮.ಉಡಾಪೆತಾಳ, ೯.ಕೋರೆತಾಳ, ೧೦. ಚೌತಾಳ, ೧೧.ತ್ವರಿತ ಝಂಪೆ, ೧೨.ತ್ವರಿತ ತ್ರಿವುಡೆ, ೧೩.ತ್ವರಿತ ಅಷ್ಟ..
ತೆಂಕು ತಿಟ್ಟಿನಲ್ಲಿ ಪಧ್ಯದ ಪ್ರಾರಂಭದಲ್ಲಿ ಆಲಾಪನೆಯೊಂದಿಗೆ ಬಿಡ್ತಿಗೆಗೆ ಬಂದು ಮುಕ್ತಾಯವಾಗುತ್ತದೆ. ಬಡಗುವಿನಲ್ಲಿ ಪದ್ಯದೊಂದಿಗೆ ಚಾಲು ಪ್ರಾರಂಭವಾಗಿ ನಂತರ ಪದ್ಯದಲ್ಲಿ ಕೊನೆಗೊಳ್ಳುತ್ತದೆ. ಯಕ್ಷಗಾನದಲ್ಲಿ ಭಾಗವತರನ್ನು ಒಂದನೇ ವೇಷಧಾರಿಗಳೆಂದು ಅಥವಾ ಸೂತ್ರದಾರಿಯೆಂದೂ ಕರೆಯುತ್ತಾರೆ. ಎರಡನೆ ವೇಷಧಾರಿಯು ಖಳನಾಯಕ ಹಾಗೂ ಕಥಾನಾಯಕನ ಪಾತ್ರವನ್ನು ಮಾಡುತ್ತಾರೆ. ಸೌಮ್ಯ ಸ್ವಭಾವದ ಪಾತ್ರಗಳನ್ನು ಮಾಡುವವರೆ ಪುರುಷವೇಷಧಾರಿಗಳು. ಬಡಗಿನ ಮೂರನೇ ವೇಷಧಾರಿಯನ್ನು ತೆಂಕಿನಲ್ಲಿ ಪುಂಡುವೇಷವೆಂದು ಕರೆಯುತ್ತಾರೆ. ಅಭಿಮನ್ಯು, ಬಬ್ರುವಾಹನ ಇತ್ಯಾದಿ ಚುರುಕಿನ ವೇಷಗಳನ್ನು ಮಾಡುವವರು. ಸ್ತ್ರೀವೇಷದಲ್ಲಿ ನೆರಿವೇಷ ಹಾಗೂ ಕಸೆವೇಷಗಳೆಂಬ ಎರಡು ವಿಧಗಳಿವೆ. ಮುಖ್ಯವಾಗಿ ಎಲ್ಲಾ ಕಥಾನಕಗಳಲ್ಲಿ ಬರುವಂಥಾ ರಾಣಿ ಹಾಗೂ ಸಖಿವೇಷವೇಷ ಯಕ್ಷಗಾನಕ್ಕೆ ಆಧಾರ. ಯುದ್ದಕ್ಕೆ ಸಿದ್ದಗೊಂಡು, ವೀರವನಿತೆಯಂತೆ ನಿಂತ ಪ್ರಮೀಳೆ, ಮೀನಾಕ್ಷಿ ಇಂತಹ ವೇಷಗಳನ್ನು ಕಸೆಸ್ತ್ರೀವೇಷವೆಂದೂ ಗುರುತಿಸಲಾಗುತ್ತದೆ. ರಾಕ್ಷಸ ವೇಷ ಯಕ್ಷಗಾನಕ್ಕೊಂದು ಮೆರುಗು. ಇಲ್ಲಿ ಗಂಡು ರಕ್ಕಸಿ ಹಾಗೂ ಹೆಣ್ಣು ರಕ್ಕಸಿ ಎನ್ನುವ ಎರಡು ವಿಧಗಳಿವೆ. ಎಲ್ಲಾ ವಿಧದ ವೇಷಗಳ ಮುಖವರ್ಣಿಕೆಗಾಗಿ ಸಫೇತು ಬಿಳಿ ಬಣ್ಣದ ಪುಡಿ, ಹಳದಿ, ಕೆಂಪು ಬಣ್ಣವನ್ನು ತೆಂಗಿನ ಎಣ್ಣೆಯೊಂದಿಗೆ ಹದವರಿತು ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಲಾಗುತ್ತದೆ. ನಂತರ ಪೌಡರ್‌ನ್ನು ಉಪಯೋಗಿಸಲಾಗುತ್ತದೆ. ಕಪ್ಪು ಅಥವಾ ಎಣ್ಣೆ ಮಸಿಯನ್ನು ಹುಬ್ಬು ಹಾಗೂ ಮುದ್ರೆಯನ್ನು ಬರೆಯಲು ಉಪಯೊಗಿಸುತ್ತಾರೆ. ಹಸುರು ಬಣ್ಣವನ್ನು ಬಿಳಿಬಣ್ಣದೊಂದಿಗೆ ಬೆರೆಸಿದಾಗ ಎಳೆಹಸುರು, ಕಡುಹಸುರು ಮೊದಲಾದ ಬಣ್ಣಗಳನ್ನು ರಾಮ ಕೃಷ್ಣನ ಮುಖವರ್ಣಿಕೆಯಲ್ಲಿ ಬಳಸುತ್ತಾರೆ. ಬೆಳ್ತಿಗೆ ಅಕ್ಕಿಯನ್ನು ಅರೆದು ಒಂದು ಪ್ರಮಾಣದಲ್ಲಿ ಸುಣ್ಣ ಸೇರಿಸಿ ಚಿಟ್ಟೆಹಿಟ್ಟನ್ನು ಸಿದ್ದಪಡಿಸುತ್ತಾರೆ. ರಾಕ್ಷಸ ಭೂಮಿಕೆಗಳ ಮುಖಾಲಂಕಾರಕ್ಕೆ ಈ ಚಿಟ್ಟೆ ಹಿಟ್ಟನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ರಂಗಸ್ಥಳ ೧೫ ಅಡಿ ಉದ್ದ ಹಾಗೂ ೧೨ ಅಡಿ ಅಗಲವಿರುತ್ತದೆ.
ಯಾವುದೇ ಹರಕೆ ಮೇಳ ಅಥವಾ ಡೇರೆಮೇಳಗಳಾದರೂ ಕೂಡ, ತಾವು ಮಾಡುತ್ತಿರುವುದು ಕಲಾಮಾತೆಯ ಸೇವೆಯೆನ್ನುವುದನ್ನು ಮನಗಾಣಬೇಕು. ಕಾಲಕ್ಕೆ ತಕ್ಕ ಬದಲಾವಣೆ ಸಹಜವಾಗಿರಬೇಕು.ಆದರೆ ಬದಲಾವಣೆಯೊಂದಿಗೆ ಆಧುನಿಕ ಜೀವನಮೌಲ್ಯಗಳು ಪ್ರಸಂಗದಲ್ಲಿ ಬಂದಾಗ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಅಲ್ಲಿಯೂ ಕೂಡ ಎಚ್ಚರಿಕೆಯಿಂದಿರಬೇಕಾಗುತ್ತದೆ. ಯಕ್ಷಗಾನಕ್ಕೆ ಅದರದೇ ಆದ ವೇಷಭೂಷಣ, ಸಂಪ್ರದಾಯ. ಕಟ್ಟುಪಾಡುಗಳಿವೆ. ಅದನ್ನು ಬಿಟ್ಟು ಆಧುನಿಕತೆಯಂತೆ ವೇಷಭೂಷಣಗಳನ್ನು ತಂದರೆ ಅಪಹಾಸ್ಯ ಮಾಡಿದಂತಾಗುತ್ತದೆ. ವಾತಾವರಣವನ್ನು ಕೆಡಿಸುವ ಮತ್ತು ಪ್ರೇಕ್ಷಕನನ್ನು ತಪ್ಪು ದಾರಿಗೆಳೆಯುವ ಸಾದ್ಯತೆಗಳು ಹೆಚ್ಚು. ಎಂತಹ ಬದಲಾವಣೆಗಳಾದರೂ ಸಹ ಸಿದ್ದ ಶೈಲಿಗೆ ಹಾಗೂ ಅದರ ನಿಯಮಿತವಾದ ಚೌಕಟ್ಟಿಗೆ ಬದ್ದವಾಗಿರಬೇಕೆ ಹೊರತು ಅವುಗಳನ್ನು ಅತಿಕ್ರಮಿಸಿ ಅಲ್ಲ.ಯಕ್ಷಗಾನದ ಸಂಪ್ರದಾಯ, ರೀತಿ ನೀತಿ ನಿಯಮಗಳನ್ನು ಪಾಲಿಸಿ, ಬಾನಿನೆತ್ತರಕ್ಕೆ ಏರಿಸುವ ಗುರಿ ಪ್ರಸಂಗಕರ್ತರ ಮತ್ತು ಕಲಾವಿದರ ಧ್ಯೇಯವಾಗಲಿ. ಸಂಗತವಲ್ಲದ ಮೌಲ್ಯಗಳನ್ನು ಕೈಬಿಟ್ಟು, ಸಂಗತವಾದ ಜೀವನಮೌಲ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಯಕ್ಷಗಾನದ ಕಂಪನ್ನು ದಿಗಂತದೆಡೆಗೆ ಸಾಗಿಸುವ ........ ಯಕ್ಷಗಾನಂ ಗೆಲ್ಗೆ
Subscribe to:
Post Comments (Atom)
No comments:
Post a Comment