Wednesday, 18 April 2012

ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಮಾಧ್ಯಮರಂಗದ ಪಾತ್ರ
ಕೆ.ಎಸ್.ಶೆಟ್ಟಿ
ಪ್ರಜಾಪ್ರಭುತ್ವ ರಾಷ್ಟ್ರವೆಂದು ಎದೆಯುಬ್ಬಿಸಿ ಹೆಮ್ಮೆಯಿಂದ ಹೇಳುತ್ತಿದ್ದ ಕಾಲ ಈಗ ಬದಲಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ನಡೆಯುವ ಪ್ರಜಾಜನರ ಸರ್ಕಾರ. ಪ್ರಜಾಪ್ರಭುತ್ವದಲ್ಲಿ ಶಾಂತಿಯನ್ನು ಕಾಪಾಡಲು ಸಂವಿದಾನ ರಚನೆಯಾಗಿದ್ದರೂ ಅದರಲ್ಲಿ ಮುಖ್ಯವಾಗಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಇವುಗಳು ಮೂರು ಮುಖಗಳಾದರೆ ನಾಲ್ಕನೇ ಮುಖವೇ ಮಾಧ್ಯಮರಂಗ. ಇವು ಒಂದೇ ಬಂಡಿಯ ಎರಡು ಗಾಲಿಯಿದ್ದ ಹಾಗೆ. ಬಂಡಿ ವ್ಯವಸ್ಥಿತವಾಗಿ ಚಲಿಸಲು ಎರಡು ಗಾಲಿ ಸರಿಯಾಗಿರಲೇ ಬೇಕು. ಯಾವಾಗ ಒಂದು ಗಾಲಿ ಅಸ್ತಿತ್ವವನ್ನು ಕಳೆದುಕೊಂಡರೂ ಬಂಡಿ ಸಂಚಾರ ಸ್ಥಗಿತಗೊಳ್ಳುತ್ತದೆ ಎನ್ನುವುದು ಸಾಮಾನ್ಯನಿಗೂ ತಿಳಿದ ಅಂಶ.
ಸಮಾಜದಲ್ಲಿ ನ್ಯಾಯವ್ಯವಸ್ಥೆಯನ್ನು ಕಾಪಾಡುವ ನಾಲ್ಕು ಮುಖಗಳು ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ವೈಯಕ್ತಿಕ ನೆಲೆಯಲ್ಲಿ ಕರ್ತವ್ಯ ಮಾಡುತ್ತಾ ಹಕ್ಕುಗಳಿಗಾಗಿ ತಮ್ಮ ಪಟ್ಟು ಬಿಗಿಗೊಳಿಸಬೇಕು. ಆದರೆ ದ್ವೇಷ ಸಾಧನೆಗಾಗಿ ಶಾಂತಿಯನ್ನು ಕಾಪಾಡಬೇಕಾದ ವ್ಯವಸ್ಥೆಗಳು ದಾರಿ ತಪ್ಪುವುದು ತರವೇ?
ನ್ಯಾಯವನ್ನು ಕಾಪಾಡಿ ಅನ್ಯಾಯ ನಡೆದಾಗ ಮುಗ್ದ ಜನತೆಗೆ ನ್ಯಾಯವನ್ನು ಒದಗಿಸಬೇಕಾದ ವಕೀಲರ ವರ್ತನೆ, ಶಾಸಕಾಂಗದಲ್ಲಿ ಜನತೆಯ ಅಹವಾಲನ್ನು ಸ್ವೀಕರಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಜನನಾಯಕರ ವರ್ತನೆ, ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಸತ್ಯಾಸತ್ಯತೆಯನ್ನು ಸಮಾಜದ ಕಟ್ಟಕಡೆಯ ಜನತೆಗೆ ಮುಟ್ಟಿಸಬೇಕಾದ ಮಾಧ್ಯಮರಂಗ ಇಂದು ಮಾಡುತ್ತಿರುವ ಕಾರ್ಯವಾದರೂ ಏನು?
ಮಾಧ್ಯಮರಂಗ ನಿಜಾಂಶವನ್ನು ಜನತೆಗೆ ಪ್ರಚುರಪಡಿಸುವ ವಲಯವಾಗಿರದೆ ದೊಡ್ಡ ಮಾಧಮ ಸಂಸ್ಥೆಗಳು ಪ್ರಜಾಪ್ರಭುತ್ವವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹವಣಿಸುತ್ತಿದೆ ಎನ್ನುವ ವಿಚಾರ ಜನಸಾಮಾನ್ಯರ ವಲಯದಲ್ಲಿ ಕೇಳಿಬರುತ್ತಿದೆ. ಮುದ್ರಣ ಹಾಗೂ ವಿದ್ಯುನ್ಮಾನ ಮಾಧಮದ ಪೈಪೋಟಿಯಿಂದ ಹೇ ಮೀಡಿಯಾದವರಾ! ಎಂದು ಕರೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸುದ್ದಿಯನ್ನು ಬಿತ್ತರಿಸುವಾಗ ತಮ್ಮ ಜವಾಬ್ದಾರಿಯನ್ನು ಮರೆಯದೆ ಯಾವುದೇ ವ್ಯಕ್ತಿಯ ಗೌರವಕ್ಕೆ ಚ್ಯುತಿಬಾರದಂತೆ ವರ್ತಿಸಬೇಕಾದುದು ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿಯ ಕರ್ತವ್ಯವಾಗಿದೆ. ಆದರೆ ಒಬ್ಬ ವ್ಯಕ್ತಿ ಉತ್ತಮವಾದ ಸ್ಥಾನದಲ್ಲಿದ್ದರೂ ಅದನ್ನು ಮಾಧ್ಯಮ ಮಂದಿ ಮರೆತು ವರ್ತಿಸುವುದು ತರವೇ? ಪತ್ರಕರ್ತರಾಗಿದ್ದ ಮಾತ್ರಕ್ಕೆ ಅವರು ಇನ್ನೋರ್ವರಿಗೆ ಮರ್ಯಾದೆ ಕೊಡಬೇಕು ಎನ್ನುವ ಸಾಮಾನ್ಯ ಪ್ರಜ್ಞೆ ಇರಬೇಕಲ್ಲವೆ? ಪತ್ರಕರ್ತನಾಗಿ ವೃತ್ತಿಜೀವನವನ್ನು ಪ್ರಾರಂಭ ಮಾಡಿದ ಮೇಲೆ ವಿನಯದ ಮಾತು ಮಾಯವಾಗುತ್ತದೆಯೇ? ಹುಂಬತನದ ಪ್ರಶ್ನಾವಳಿ, ಸರ್ವರಲ್ಲಿ ನಾನೇ ಶ್ರೇಷ್ಠ ಎನ್ನುವ ಜಂಭ, ನಾನು ಬರೆದದ್ದೆ ಸತ್ಯ, ನಾನು ಮಾಡಿದ್ದೆ ಸರಿ ಎನ್ನುವ ವಿತಂಡವಾದ ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಸೃಷ್ಠಿಯಾಗುತ್ತದೆ.
ಸಮಾಜದ ಸುಸ್ಥಿತಿಯನ್ನು ಕಾಪಾಡಬೇಕಾದ ಮಾಧ್ಯಮವು ಸಮಾಜದಲ್ಲಿ ಒಬ್ಬ ವ್ಯಕ್ತಿಯ ಗೌರವಕ್ಕೆ ಚ್ಯುತಿಬರುವಂತ ವರದಿಯನ್ನು ಪ್ರಕಟಿಸುವುದರಿಂದ ಶಾಂತಿ ಕಾಪಾಡಲು ಸಾಧ್ಯವೇ? ರಾಷ್ಟ್ರ ಪತಿಯವರ ದಂತವೈದ್ಯೆಯಾಗಿರುವ ಡಾ.ಮಿತ್ರಾ ಹೆಗ್ಡೆ ಅವರ ವಿವರವನ್ನು ಮಾಹಿತಿ ಹಕ್ಕು ಕಾಯ್ದೆಯಡಿ ವರದಿಯನ್ನು ತೆಗೆದು ಅವರು ಆ ಹುದ್ದೆ ಹೊಂದಿಲ್ಲ ಎಂದು ಬಹಿರಂಗಗೊಳಿಸಿರುವುದು ಸ್ವಾಗತಾರ್ಹವೇ. ಆದರೆ ಡಾ.ಹೆಗ್ಡೆ ಅದಕ್ಕೆ ಬೇಕಾದ ಪುರಾವೆಯನ್ನು ನೀಡುತ್ತೇನೆ ಎಂದು ಹೇಳಿದರೂ ಕೇಳುವಂತ ಸ್ಥಿತಿಯಲ್ಲಿ ಮಾಧಮವಲಯ ಸಿದ್ದವಿಲ್ಲ ಎಂದಾದರೆ ಶಾಂತಿಯನ್ನು ಕಾಪಾಡಬೇಕಾದ ಮಾಧಮ ಯಾವ ಸ್ಥಿತಿಗೆ ತಲುಪಿದೆ ಎನ್ನುವುದನ್ನು ನಾವು ಅರ್ಥೈಸಬೇಕು.
ಮಾಧ್ಯಮಗಳ ನಡುವೆ ಪೈಪೋಟಿಯ ವರದಿ ಮಾಡುವ ಉದ್ದೇಶದಿಂದ ಅವರ ಗೌರವಕ್ಕೆ ಚ್ಯುತಿ ಬರುವಂತ ಪದಗಳನ್ನು ಬಳಸುವುದು ನ್ಯಾಯವೇ? ಅವರ ಅಪರಾಧ ಸಾಬೀತಾಗುವವರೆಗೆ ಪ್ರಶ್ನೆ ಇರಲಿ. ಅದನ್ನು ಬಿಟ್ಟು ೨೦ ವರ್ಷಗಳಿಂದ ವೈದ್ಯೆಯಾಗಿರುವ ಡಾ.ಮಿತ್ರಾ ಹೆಗ್ಡೆಯವರನ್ನು ನಕಲಿ ವೈದ್ಯೆ ಎನ್ನುವುದು ಯಾವ ನ್ಯಾಯ? ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಅವರಿಗೆ ತನ್ನ ಸ್ಥಿತಿಯನ್ನು ಅರ್ಥಮಾಡಿಸುವುದಕ್ಕೆ ಸಾಧ್ಯವಾಗದೇ ಇರಬಹುದು. ಇಂತಹ ಘಟನೆ ನಡೆಯುವುದು ಮೊದಲನೆಯದಲ್ಲ. ಇತ್ತೀಚಿಗೆ ಇದೇ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಜೆ.ಪಾಲೆಮಾರ್ ಅವರ ಸದನದಲ್ಲಿ ನೀಲಿ ಚಿತ್ರ ನೋಡಿದ್ದಾರೆ ಎಂದು ಅಪರಾಧಿ ಸ್ಥಾನದಲ್ಲಿ ಬಿಂಬಿಸಲಾಗಿತ್ತು. ಆದರೆ ತನಿಖೆಯಿಂದ ಅವರು ನಿರಪರಾದಿ ಎಂದು ಸಾಬೀತಾಗಿದ್ದರೂ ಅವರ ತೇಜೋವಧೆಯಾಗಿರುವುದು ಸುಳ್ಳಲ್ಲ. ಅಂತಹುದೇ ಪ್ರಕರಣ ಡಾ.ಮಿತ್ರ ಹೆಗ್ಡೆ ಅವರಿಗೆ ಆಗಿದೆ.
ಕಣ್ಣಾರೆ ಕಂಡರೂ ಪರಾಮರ್ಶಿಸಿ ನೋಡಬೇಕು ಎಂದು ಶಾಸ್ತ್ರವೇ ಹೇಳಿದೆ. ಆದರೆ ಕೇವಲ ಗಾಳಿ ಸುದ್ದಿಯನ್ನು ದೊಡ್ಡದಾಗಿ ವರದಿಮಾಡುವ ದಡ್ಡತನ ಯಾಕೆ? ಆಂಗ್ಲ ಪತ್ರಿಕೆಯಲ್ಲಿ ಎ.ಬಿ.ಶೆಟ್ಟಿ ಆಸ್ಪತ್ರೆಯ ಆಡಳಿತ ಮಂಡಳಿ ಮಿತ್ರಾ ಹೆಗ್ಡೆಯವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ದೊಡ್ಡದಾಗಿ ಪ್ರಕಟಿಸಿತ್ತು. ಅದಕ್ಕೆ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಸಮರ್ಥನೆ ನೀಡಿದ ನಂತರ ಪತ್ರಿಕೆಯಲ್ಲಿ ಸಣ್ಣ ಸುದ್ದಿಯಾಗಿ ಪ್ರಕಟಗೊಂಡಿತ್ತು. ನಂತರ ಅದು ಗಾಳಿ ಸುದ್ದಿ ಎಂದು ಸ್ಪಷ್ಟವಾಗಿದೆ.
ನಸ್ತ್ರೀ ಸ್ವಾತಂತ್ರ್ಯಂ ನರ್ಹತೇ
ಸ್ತ್ರೀಯರಿಗೆ ಸ್ವಾತಂತ್ರ್ಯವಿಲ್ಲದ ಸ್ಥಿತಿಯಲ್ಲಿಯೂ ಕೂಡ ಹೆಣ್ಣೊಬ್ಬಳೂ ಸ್ವ-ಪರಿಶ್ರಮದಿಂದ ಏರಿದ ಎತ್ತರವನ್ನು ನಾವು ಗಮನಿಸಬೇಕು. ವೈಯಕ್ತಿಕ ದ್ವೇಷವಿದ್ದಂತೆ ವರದಿ ಮಾಡುವಾಗ ಅವರ ಕುರಿತ ತಪ್ಪು ಮಾಹಿತಿಯನ್ನು ಸಾಮಾನ್ಯ ಜನತೆಗೆ ಬಿತ್ತರಿಸಬಾರದು. ಹನುಮಂತ ಕಾಮತ್ ಹಾಗೂ ಡಾ.ಶಿವಶರಣ್ ಅವರು ಡಾ.ಹೆಗ್ಡೆಯವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿರುವ ವಿಷಯ ಅವರ ಮನಸ್ಸಿಗೆ ಆಘಾತಕಾರಿಯಾದ ವರದಿಯನ್ನು ಬಿತ್ತರಿಸುವಾಗಲೂ ನಾವು ಜಾಗರೂಕರಾಗಿರಬೇಕು. ಬಳಸುವ ಪದ-ಲಹರಿಯನ್ನು ನಾವು ಆ ಪರಿಸ್ಥಿತಿಯಲ್ಲಿದ್ದರೆ ಎನ್ನುವ ಸಾಮಾನ್ಯ ಅಂಶವನ್ನು ತಿಳಿದು ವರದಿ ಮಾಡಬೇಕು. ನಕಲಿ ವೈದ್ಯೆ ಎನ್ನುವ ಸಂದರ್ಭದಲ್ಲಿ ನಕಲಿ ಪತ್ರಕರ್ತ ಎಂದಾಗ ನಿಷ್ಠಾವಂತ ಪತ್ರಕರ್ತರ ಮನಸ್ಸಿಗೆ ಹೇಗಾಗಬೇಡ ಹೇಳಿ. ಸೂಕ್ಷ್ಮ ಮನಸ್ಸಿನ ವ್ಯಕ್ತಿಗೆ ಆಘಾತವಾಗುವುದಂತೂ ನಿಜ. ಇಂತಹ ಪ್ರಕರಣ ಉಡುಪಿಯ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಪ್ರಕರಣದಲ್ಲೂ ಗಮನಿಸಬಹುದು. ಸಣ್ಣ ವಿಷಯವನ್ನು ಪ್ರಚೋದನಾಕಾರಿ ವರದಿ ಬಿತ್ತರಿಸಿ ಪರೋಕ್ಷವಾಗಿ ಅವರ ಆತ್ಮಹತ್ಯೆಗೆ ಮಾಧ್ಯಮ ಕಾರಣವಾಗಿದೆ. ವಿದ್ಯುನ್ಮಾನ ಮಾಧ್ಯಮದಲ್ಲಿ ನಕಲಿ ವೈದ್ಯೆ ಎನ್ನುವ ವರದಿಗೆ ಸಾಮಾನ್ಯ ಪ್ರಜೆಯಾಗಿ ನಾನು ನೀಡುತ್ತಿರುವ ಉತ್ತರವಾಗಿದೆ.
ವರದಿಗಾರಿಕೆ ಎನ್ನುವುದು ಉದಾತ್ತವಾದ ವೃತ್ತಿಯಾಗಿದ್ದರೂ ಈಗ ಅದರ ಪರಿಶುದ್ದತೆಯನ್ನು ಕಳೆದುಕೊಳ್ಳುತ್ತಿದೆ. ಜಗತ್ತಿನಲ್ಲಿರುವ ಸತ್ಯಾಸತ್ಯತೆಯನ್ನು ಪ್ರಪಂಚದ ಸ್ವಾಸ್ಥ್ಯವನ್ನು ಕಾಪಾಡಲು ಜನತೆಗೆ ಬಿಂಬಿಸಬೇಕೆ ಹೊರತು ಸತ್ಯಾಂಶವನ್ನು ಅರಿಯದೇ ವರದಿಯನ್ನು ಬಿತ್ತರಿಸುವುದು ಯಾವ ನ್ಯಾಯ? ಡಾ.ಮಿತ್ರಾ ಹೆಗ್ಡೆ ಮೇಲಿನ ಪ್ರಾಯೋಜಿತ ಆರೋಪಗಳು ಬಂದಾಗ ಮಾಧ್ಯಮ ಬಂಧುಗಳು ಅದರ ಸತ್ಯಾಸತ್ಯತೆಯನ್ನು ಅರಿಯಲು ಪ್ರಯತ್ನಿಸದೇ ಹನುಮಂತ ಕಾಮತ್ ಹಾಗೂ ಡಾ.ಶಿವಶರಣ್ ಶೆಟ್ಟಿ ನೀಡಿದ ವರದಿಯನ್ನು ಬಿತ್ತರಿಸಿದ್ದು ಮಾಧ್ಯಮ ಮಂದಿಯ ವೃತ್ತಿಯಲ್ಲಿನ ನಿಷ್ಠೆಯನ್ನು ತೋರಿಸುತ್ತದೆ. ಯಾವುದೇ ವ್ಯಕ್ತಿಯ ಮೇಲೆ ಆರೋಪವಿದೆ ಎಂದಾಕ್ಷಣ ಆರೋಪವನ್ನು ಹೊತ್ತಿರುವ ವ್ಯಕ್ತಿಯ ಪ್ರತಿಕ್ರಿಯೆಯನ್ನು ತಿಳಿಯದೇ ಏಕಮುಖ ವರದಿಯನ್ನು ಪ್ರಕಟಿಸುವ ಅತಿಯಾದ ಅವಸರ ಯಾಕೆ ಎನ್ನುವುದು ಸ್ಪಷ್ಟವಾಗಿಲ್ಲ. ಕೇವಲ ಅಪರಾಧವಾಗಿದೆ ಎನ್ನುವುದನ್ನು ಮಾತ್ರ ಪ್ರದರ್ಶಿಸುವುದಲ್ಲದೇ ಮಾಧ್ಯಮದ ಪ್ರಾಥಮಿಕ ಜವಾಬ್ದಾರಿಯನ್ನು ಮರೆತು ಅವರ ಗೌರವಕ್ಕೆ ಚ್ಯುತಿ ಬರುವಂಥ ಪದಬಳಕೆಯಿಂದ ಮಾಧ್ಯಮ ಮಂದಿಯ ಮೇಲೆ ಜನತೆ ಕೀಳು ಮನೋಭೂಮಿಕೆ ಸೃಷ್ಠಿಯಾಗುತ್ತದೆ ಎನ್ನುವ ಅಂಶವನ್ನು ಯಾಕೆ ಮನಗಾಣುತ್ತಿಲ್ಲ. ನಕಲಿ ವೈದ್ಯೆ ಎನ್ನುವ ಒಂದು ಪದಬಳಕೆಯಿಂದ ಅವರನ್ನು ವೈದ್ಯೆಯೇ ಅಲ್ಲ ಎಂದು ಹೇಳುವ ಅಧಿಕಾರವನ್ನು ಮಾಧ್ಯಮದವರ ಪಾಲಿಗೆ ಕೊಟ್ಟವರಾರು? ಅವರ ಬಗ್ಗೆ ಆ ರೀತಿ ವರದಿ ಬಿತ್ತರಿಸಿದ ಮಾಧ್ಯಮ ಪ್ರತಿನಿಧಿಗಳ ಅವಗಾಹನೆಗೆ:
ಡಾ.ಮಿತ್ರಾ ಹೆಗ್ಡೆ ಅವರ ಕಿರು ಪರಿಚಯ:
೧೯೮೯ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ, ೧೯೯೨ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ೧೯ ವರ್ಷಗಳಿಂದ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ನಲ್ಲಿ ಅಧ್ಯಾಪನ ವೃತ್ತಿಯನ್ನು ನಡೆಸುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಸಮಾಜಮುಖಿಯಾಗಿ ಬೆಳೆಸಿದ ಕೀರ್ತಿ. ರಾಜೀವ ಗಾಂಧಿ ವಿವಿಯ ಹೆಲ್ತ್ ಸೈನ್ಸ್ ಹಾಗೂ ನಿಟ್ಟೆ ವಿವಿಯ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ. ೭ ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಡಾ.ಮಿತ್ರಾರವರು ಎಂಡೋಡಾಂಟಿಕ್ಸ್ ಎನ್ನುವ ಕೃತಿಯನ್ನು ರಚಿಸಿದ್ದು, ದಂತ ಚಿಕಿತ್ಸೆಯ ಕುರಿತಾದ ೧೮ ಪುಸ್ತಕಗಳನ್ನು ರಚಿಸಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್‌ನಲ್ಲಿ ಈಗಾಗಲೇ ೯ ರಿಸರ್ಚ್ ಪ್ರಾಜೆಕ್ಟ್‌ನ್ನು ಪೂರ್ಣಗೊಳಿಸಿದ್ದು ೩ ಸಂಶೋಧನಾ ಪ್ರಾಜೆಕ್ಟ್ ಕಾರ್ಯರೂಪದಲ್ಲಿದೆ. ೫೨-ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪುಸ್ತಕಗಳ ನಿರ್ದೇಶಿಸಿದ ಕೀರ್ತಿ ಹಾಗೂ ಕೇಂದ್ರ ಸರಕಾರದಿಂದ ೩ ಪದವಿಯನ್ನು ಪಡೆದ ಕೀರ್ತಿ ಇವರದಾಗಿದೆ, ಸ್ವ-ಸಂಶೋಧನೆಯ ಪ್ರತಿಯಿಂದ ಇವರು ೭ ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ೩೦ ರಾಷ್ಟ್ರೀಯ ಸಮ್ಮೇಳನವನ್ನು ಪ್ರತಿನಿಧಿಸಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮೀಷನ್(ಯುಪಿಎಸ್‌ಸಿ)ನ ಉತ್ತಮ ಸಲಹೆಗಾರರಾಗಿದ್ದಾರೆ. ಆರು ವರ್ಷಗಳಿಂದ ಗ್ರಾಮೀಣ ಆರೋಗ್ಯ ಸಮೀಕ್ಷೆಯಲ್ಲಿ ೧೪ಸಾವಿರ ರೋಗಿಗಳ ಆರೈಕೆ ಮಾಡಿದ್ದಾರೆ. ೧೦ಸಾವಿರ ಶಾಲಾ ವಿದ್ಯಾರ್ಥಿಗಳಿಗೆ ಮೌಖಿಕ ಆರೋಗ್ಯ ಜಾಗೃತಿ ಕುರಿತಾದ ಮಾಹಿತಿಯನ್ನು ನೀಡಿದ್ದಾರೆ. ಹೀಗೆ ಹಲವಾರು ಕ್ಷೇತ್ರದಲ್ಲಿ ಗುರುತಿಸಿಕೊಂಡು ಹಲವಾರು ಪ್ರಶಸ್ತಿಗೆ ಭಾಜನರಾಗಿ, ಪ್ರತಿಷ್ಠಿತೆ ವೈದ್ಯೆಯಾಗಿರುವ ಡಾ.ಮಿತ್ರಾ ಹೆಗ್ಡೆಯವರನ್ನು ನಕಲಿ ವೈದ್ಯೆ ಎನ್ನುವವರು ಅವರ ಪ್ರತಿಭೆಯನ್ನು ಗುರುತಿಸಬೇಕು. ರಾಷ್ಟ್ರಪತಿಯವರ ಡೆಂಟಿಸ್ಟ್ ಎನ್ನುವ ಕ್ಲೈಮ್‌ನ್ನು ಕ್ರಾಸ್ ವೆರಿಫೈ ಮಾಡದೇ ಅವರನ್ನು ಅಪರಾಧಿ ಎನ್ನುವಂತೆ ಬಿಂಬಿಸಲಾಗಿದೆ. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅಂಶ ಅವರು ಕೇವಲ ಆರೋಪವನ್ನು ಹೊತ್ತಿದ್ದಾರೆ. ಆರೋಪವನ್ನು ಹೊರಿಸಿದ ಮಾತ್ರಕ್ಕೆ ಅವರು ಅಪರಾಧಿಯಾಗಲು ಸಾಧ್ಯವಿಲ್ಲ ತಾನೇ?
ಒಂದು ಪದ ಬಳಕೆಯನ್ನು ನಾವು ನಗಣ್ಯವೆಂದು ಭಾವಿಸಲೇ ಬಾರದು. ೧ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವವನ್ನು ಕಾಣಲು ಸಾಧ್ಯವಿದೆ. ಒಂದು ಚಪ್ಪಾಳೆಯಿಂದ ಕಾರ್ಯಕ್ರಮ ನೀಡುವ ವ್ಯಕ್ತಿಗೆ ಪ್ರೇರಣೆಯಾಗಬಹುದು, ಸಾಯುವ ಸ್ಥಿತಿಯಲ್ಲಿರುವ ವ್ಯಕ್ತಿಗೆ ಒಂದು ಹನಿ ನೀರು ಅಮೃತವಾಗಬಲ್ಲುದು, ಒಂದು ಸೂರ್ಯನ ರಶ್ಮಿಯು ಲೋಕಕ್ಕೆ ಬೆಳಕಾಗಬಲ್ಲುದು, ಒಂದು ನಕ್ಷತ್ರ ನೌಕಾಯಾನಕ್ಕೆ ಆಕಾಶದೀಪವಾಗಬಲ್ಲುದು, ರೂ.೯೯ಕ್ಕೆ ೧ಸೇರಿದರೆ ಮಾತ್ರ ನೂರಾಗಬಲ್ಲುದು. ಹೀಗೆ ಅನೇಕ ಅಂಶಗಳು ಜೀವನದಲ್ಲಿ ಘಟಿಸಬಹುದು. ನಕಲಿ ವೈದ್ಯೆ ಎನ್ನುವ ಒಂದು ಪದಪ್ರಯೋಗ ಅವರ ವ್ಯಕ್ತಿತ್ವದ ತೇಜೋವಧೆಯಾಗಿರುವುದರಲ್ಲಿ ಎರಡು ಮಾತಿಲ್ಲ.
ಶತ್ರೋರಫಿ ಗುಣಾ ವಾಚ್ಯಾಃ ದೋಷಾ ವಾಚ್ಯಾ ಗುರೋರಫಿ|
ಗುಣದೋಷ ವಿವೇಕೇ ತು ಸೌಜನ್ಯಂ ನ ತ್ಯಜೇದ್ಬುಧಃ||
ಶತ್ರುವಿನದಾದರೂ ಸದ್ಗುಣಗಳನ್ನು ಹೇಳಬೇಕು, ಗುರುವಿನದಾದರೂ ದುರ್ಗುಣಗಳನ್ನು ಹೇಳಬೇಕು. ಆದರೆ ಈ ಗುಣ-ದೋಷಗಳನ್ನು ಹೇಳುವ ಭರದಲ್ಲಿ ಜಾಣರು ತಮ್ಮ ಸೌಜನ್ಯ-ನಯಗಳನ್ನು ಮಾತ್ರ ಬಿಡಬಾರದು. ಇದು ಪ್ರತಿಯೊಬ್ಬ ಮಾಧ್ಯಮ ಪ್ರತಿನಿಧಿಗಳಿಗೂ ಅನ್ವಯವಾಗುತ್ತದೆ. ಮಾಧ್ಯಮರಂಗ ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವಂತ ವೃತ್ತಿಯಾಗಿರದೇ ಸತ್ಯಾಸತ್ಯತೆಯನ್ನು ಬಿತ್ತರಿಸುವ ವಲಯವಾಗಲಿ ಎನ್ನುವುದು ನಮ್ಮ ಪತ್ರಿಕೆಯ ಹಾರೈಕೆ.
ಇಬ್ಬರಿಗೂ ಕೂಡ ಸಾಕಷ್ಟು ಸಮಯಾವಕಾಶವಿದೆ. ಹನುಮಂತ ಕಾಮತ್ ಹಾಗೂ ಡಾ.ಶಿವಶರಣ ಶೆಟ್ಟಿ ಅವರು ಡಾ.ಮಿತ್ರಾ ಹೆಗ್ಡೆ ಅವರ ಮೇಲೆ ಆರೋಪವನ್ನು ಮಾಡಿದ್ದಾರೆ. ಈಗ ಡಾ.ಮಿತ್ರಾ ಹೆಗ್ಡೆಯವರಿಗೆ ಆರೋಪ ಸುಳ್ಳು ಎಂದು ಸಾಬೀತು ಮಾಡಿ ತೋರಿಸುವ ಹೊಣೆಗಾರಿಕೆಯಿದೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಬೇಕಾಗಿದೆ.


ಬಾಕ್ಸ್ ಮಾಡಿ:
ನಾನು ರಾಷ್ಟ್ರಪತಿ ದಂತವೈದ್ಯೆಯಾಗಿರುವುದು ಸತ್ಯ. ನನ್ನಲ್ಲಿ ಬೇಕಾದ ಸಾಕ್ಷಿಗಳಿವೆ. ನನ್ನ ಬಂಧು ಬಳಗ ಹಾಗೂ ಪರಿಚಿತ ವರ್ಗದವರಿಗೆ ನನ್ನ ಸಾಮರ್ಥ್ಯವೆಲ್ಲಾ ತಿಳಿದಿದೆ. ಈ ಸಂದರ್ಭದಲ್ಲಿ ನಾನು ಯಾವುದೇ ಅಂಶವನ್ನು ಹೇಳಿದರೂ ಕೇಳುವಂಥ ತಾಳ್ಮೆ ಅವರಿಗಿಲ್ಲ. ಸಮಯ ಬಂದಾಗ ಸತ್ಯವೇನು ಎಂದು ನಾಡಿನ ಜನತೆಗೆ ತಿಳಿಯುತ್ತದೆ. ನನ್ನ ವಿರುದ್ದದ ಪಿತೂರಿಗೆ ಸದ್ಯದಲ್ಲಿ ಪೂರ್ಣವಿರಾಮ ದೊರೆಯುತ್ತದೆ.
ಡಾ.ಮಿತ್ರಾ ಹೆಗ್ಡೆ

No comments:

Post a Comment