Saturday 21 April 2012

ಕರಾವಳಿ ಕನ್ನಡ


ಕಾಸರಗೋಡಿನಿಂದ ಕಾರವಾರ ವರೆಗಿನ ಕರಾವಳಿ ಕನ್ನಡದ ಸೊಗಸು
ಪ್ರಪಂಚದಲ್ಲಿ ೪,೦೦೦ಕ್ಕೂ ಹೆಚ್ಚು ಭಾಷೆಗಳ ವರದಿಯಾಗಿದೆ.ದೇಶದಲ್ಲಿ ೧,೦೦೦ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಮಾನವ ಜನಾಂಗ ಬೇರೆ ಬೇರೆ ಮೂಲಗಳಿಂದ ಬಂದು ವಿವಿಧ ಭಾಷೆಗಳನ್ನು ನೆಲೆಗೊಳಿಸಿದ್ದಾರೆ. ಭಾಷಾಧಾರಿತವಾಗಿ ಜಗತ್ತನ್ನು ೧೦ಕುಟುಂಬಗಳಾಗಿ ವಿಂಗಡಿಸಿದ್ದರೂ, ಭಾರತದಲ್ಲಿ ಮುಖ್ಯವಾಗಿ ನಾಲ್ಕು ಕುಟುಂಬಗಳಿವೆ. ದ್ರಾವಿಡ ಭಾಷಾ ವಿಂಗಟನೆಯೂ ದಕ್ಷಿಣ ಭಾರತದ ಕನ್ನಡ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ. ಕನ್ನಡದ ಭಾಷೆಗೆ ಅನುಗುಣವಾಗಿ ಉತ್ತರಮಾರ್ಗ,ದಕ್ಷಿಣಮಾರ್ಗವೆಂದು ಪ್ರಾಥಮಿಕವಾಗಿ ವಿಂಗಡಿಸಿದ್ದರೂ, ಮೈಸೂರು,ದಾರವಾಡ,ಗುಲ್ಬರ್ಗ ಹಾಗೂ ಕರಾವಳಿ ಕನ್ನಡವೆಂಬ ನಾಲ್ಕು ಪ್ರಬೇದಗಳನ್ನು ಗುರುತಿಸಲಾಗುತ್ತದೆ. ಒಂದು ಪ್ರದೇಶದ ಸಾಮ್ಯತೆ, ಶಬ್ದಗಳನ್ನು ಗುರುತಿಸಿ ಅಸ್ತಿತ್ವವನ್ನು ನೀಡುತ್ತೇವೆ. ಕರಾವಳಿ ಕನ್ನಡವನ್ನು ಕೇವಲ ಮಂಗಳೂರು ಕನ್ನಡವೆಂದು ಮಾತ್ರ ವಿಭಾಗಿಸಬೇಕೆ ಎನ್ನುವ ಜಿಜ್ಞಾಸೆ ಮೂಡಿದೆ. ಕಾಸರಗೋಡಿನಿಂದ ಕಾರವಾರದವರೆಗೆ ಕರಾವಳಿ ವ್ಯಾಪಿಸಿದ್ದರೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಬೇರೆ ಬೇರೆ ಆಡಳಿತಕ್ಕೆ ಒಳಪಟ್ಟು ಕನ್ನಡವು ಜನರ ಜೀವನ ದೃಷ್ಠಿ, ಭಾಷಾದೃಷ್ಠಿಯಿಂದ ನೋಡಿದಾಗ ಆಡುಭಾಷೆಯ ಬಳಕೆ ತಿಳಿಯುತ್ತದೆ.
ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡವನ್ನು ಬೈಂದೂರು, ಶಿರೂರು ಸ್ಥಳವು ಬೇರ್ಪಡಿಸುತ್ತದೆ. ಉ.ಕ ವನ್ನು ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎನ್ನುವುದಾಗಿ ಭಾಷೆಯನ್ನು ದೃಷ್ಠಿಯಲ್ಲಿರಿಸಿ ವಿಂಗಡಿಸಲಾಗಿದೆ. ದಕ್ಷಿಣಕನ್ನಡದಲ್ಲಿ ಆ ರೀತಿಯ ಬೇದಗಳು ಇಲ್ಲಾ. ಆಡುಭಾಷೆ ಹಾಗೂ ಹವಾಮಾನದ ದೃಷ್ಠಿಯಿಂದ ಉ.ಕವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಅಂಗಡಿಯಲ್ಲಿ ಹೋಗಿ ಬೆಲೆಯ ಕುರಿತು ಚರ್ಚೆಮಾಡುವ ವ್ಯಕ್ತಿಯನ್ನು ಉತ್ತರ ಕರ್ನಾಟಕದವ ಎಂದು ಕೂಡಲೇ ಗುರುತಿಸಬಹುದು. ಭಾಷೆಯ ಸ್ವರೂಪವನ್ನು ಗಮನಿಸಿದಾಗ ಅವರು ಯಾವ ತೆರನಾದ ಭಾಷೆಯನ್ನು ಮಾತನಾಡುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ. ನಮ್ಮ ದೇಶದ ಜನತೆ ಮಾತನಾಡುವ ಆಂಗ್ಲಭಾಷೆ ಗ್ರಾಂಥಿಕ ಭಾಷೆಯಾಗಿದೆ. ಇಲ್ಲಿ ಆಂಗ್ಲಭಾಷೆ ಆಡುಭಾಷೆಯಾಗಿರದೇ ಎರಡನೇ ಸ್ಥಾನದಲ್ಲಿದೆ. ಮಾತೃಭಾಷೆಯ ತುಲನೆ ಮಾಡುವಾಗ ಸಾಮ್ಯತೆಯ ವೈಶಮ್ಯತೆಯನ್ನು ಗುರುತಿಸುವ ವೇದಿಕೆ ಸಿದ್ದವಾಗಬೇಕು.
ಕರಾವಳಿಯಲ್ಲಿ ಮಾತನಾಡುವ ಹವ್ಯಕ ಭಾಷೆಯಲ್ಲಿಯೂ ವ್ಯತ್ಯಾಸ ಕಾಣುತ್ತದೆ. ಉ.ಕನ್ನಡದಲ್ಲಿ ವೇಗವನ್ನು ಕಂಡರೆ, ದ.ಕನ್ನಡದಲ್ಲಿ ನಿಧಾನಗತಿಯನ್ನು ಕಾಣಬಹುದು. ಕರಾವಳಿಯಲ್ಲಿ ತುಳು, ಕುಂದಗನ್ನಡ, ಬ್ಯಾರಿ, ಕೊಂಕಣಿ, ಮರಾಠಿ ಹೀಗೆ ಅನೇಕ ಮಾತೃಭಾಷೆಗಳು ಅವರ ಜನಾಂಗಕ್ಕೆ ಅನುಗುಣವಾಗಿ ಸೃಷ್ಠಿಯಾಗಿದೆ. ವ್ಯಕ್ತಿಗತ ಸಾಮಾಜಿಕವಾಗಿ ಭಾಷೆ ಬರುವುದು. ಭಾಷಾ ವ್ಯವಸ್ಥೆ ಬೇರೆಯವರಲ್ಲಿ ಇದ್ದಾಗ ಸಂವಹನ ಸಾಧ್ಯ. ಮಾತೃಭಾಷೆಯಲ್ಲಿ ಸಾಹಿತ್ಯಗಳು ಕಂಗೊಳಿಸಿದಾಗ ಮಾನ್ಯತೆ ಸಿಗುತ್ತದೆ. ಪ್ರತಿಯೊಬ್ಬನ ಭಾಷೆಯಲ್ಲಿಯೂ ಕೂಡ ವ್ಯಾಕರಣವಿದೆ. ಹುಚ್ಚನ ಭಾಷೆ, ಮಗುವಿನ ಭಾಷೆ ಹಾಗೂ ಆಡುಭಾಷೆಯಲ್ಲಿಯೂ ವ್ಯಾಕರಣವಿದೆ. ವ್ಯಾಕರಣ ಎಂದರೆ ಸಂಕ್ಷಿಪ್ತವಾಗಿ ಬಳಸುವ ಕ್ರಮಬದ್ದವಾದ ಯೋಜನೆ. ನಾವಿನ್ಯತೆ ಎನ್ನುವುದು ಭಾಷೆಯ ಪ್ರಮುಖಾಂಶವಾಗಿದೆ. ಭಾಷೆ ಯಾವುದಿದ್ದರೂ ಸಾಮಾಜಿಕವಾಗಿ ವಿಂಗಟನೆ ಮಾಡುವಾಗ ನಾವು ಕರಾವಳಿ ಕನ್ನಡಿಗರು ಎನ್ನುವುದು ಸ್ಪಷ್ಟವಾಗಿದೆ.
ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಗಳು:
ರಾಜ್ಯವಿಭಜನೆಯಲ್ಲಿ ಕಾಸರಗೋಡ್ ಕೇರಳ ರಾಜ್ಯಕ್ಕೆ ಸೇರಲ್ಪಟ್ಟರೂ ಭಾಷೆಯ ಆದಾರದ ಮೇಲೆ ಗುರುತಿಸುವುದಾದರೆ ಕಾಸರಗೋಡ್ ಕರ್ನಾಟಕ ಎಂದೇ ಉಲ್ಲೇಖಿಸಲಾಗುತ್ತದೆ. ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಗಳ ಕೊಡುಗೆ ಮಹತ್ತರವಾದುದು. ಮಹಾಲಿಂಗ ಭಟ್ ಅವರ ಕಾಸರಗೋಡ್ ಸಮಾಚಾರ ಎನ್ನುವ ಪ್ರಥಮ ಪತ್ರಿಕೆ ಕನ್ನಡದ ಬಗ್ಗೆ ತಿಳಿಸುವಲ್ಲಿ ಸಹಕಾರಿಯಾಗಿದೆ. ಕನ್ನಡ ಪತ್ರಿಕೆಗಳು ಕಾಸರಗೋಡು ಕನ್ನಡಿಗರ ಕಣ್ಣು ತೆರೆಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಮಾನಸಿಕ ಖಿನ್ನತೆಯನ್ನು ಹೋಗಲಾಡಿಸುವ ಕನ್ನಡ ಪತ್ರಿಕೆಗಳು ಮಲೆಯಾಳ ಪತ್ರಿಕೆಗಳ ಪ್ರಭಾವದಿಂದ ತೆರೆಮರೆಗೆ ಸರಿಯುವ ಸ್ಥಿತಿಯಲ್ಲಿವೆ. ಪ್ರಸ್ತುತ ಸಮಾಜದಲ್ಲಿ ಕೇರಳ ಸರ್ಕಾರದ ದೋರಣೆಯನ್ನು ಸರಿಪಡಿಸುವಲ್ಲಿ ಕನ್ನಡ ಪತ್ರಿಕೆಗಳ ಹೊಣೆಗಾರಿಕೆ ಮುಖ್ಯವಾಗಿದೆ. ಸಾಮಾಜಿಕ ಭದ್ರತೆ ಹಾಗೂ ಜನಜೀವನ ನಿರ್ಧರಿಸುವ ವಿಷಯಗಳನ್ನು ಸರ್ಕಾರ ಕೈಗೊಂಡಿದ್ದರೂ ಜನರಿಗೆ ತಲುಪುತ್ತಿಲ್ಲ. ಕನ್ನಡ ಪತ್ರಿಕೆಗಳು ತ್ರಿಶಂಕು ಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ನಿಂತಿವೆ.
ಕಾಸರಗೋಡಿನಲ್ಲಿ ಕನ್ನಡದ ಕಂಪನ್ನು ಜನಸಾಮಾನ್ಯರಿಗೆ ತಲುಪಿಸಿದ ಪ್ರಥಮ ಪತ್ರಕರ್ತ ಕಯ್ಯಾರ ಕಿಂಞಣ್ಣ ರೈ ಅವರ ನೆನಪು ಮಾಡಬೇಕಾದದು ಪ್ರತಿಯೊಬ್ಬ ಕಾಸರಗೋಡು ಕನ್ನಡಿಗನ ಕರ್ತವ್ಯ. ಕೊನೆಯ ಪುಟದಿಂದ ಪಾಠಮಾಡುವ ಕೆ.ಟಿ.ಶ್ರೀಧರ ಅವರ ಗುಣಗಾನ ಈ ಸಂಧರ್ಭದಲ್ಲಿ ಔಚಿತ್ಯಪೂರ್ಣವಾಗಿದೆ. ಕನ್ನಡದ ಉಳಿವಿಗಾಗಿ ಅಹರ್ನಿಶಿ ದುಡಿದವರ ಮೇಲೆ ಅನುಕಂಪ ವ್ಯಕ್ತಪಡಿಸಬೇಕಾಗುತ್ತದೆ ಕಾರಣ ಸದ್ಯದ ಕಾಸರಗೋಡಿನ ಕನ್ನಡ ಸ್ಥಿತಿ...
ಪ್ರಸ್ತುತ ಕಾಸರಗೋಡಿನ ಕನ್ನಡ ಬೆಳವಣಿಗೆ ನೋಡಿದರೆ ಬೇಸರವಾಗುತ್ತದೆ. ಶುದ್ದ ಕನ್ನಡ ಮರೆಯಾಗುತ್ತಿದೆ. ಪ್ರತಿಯೊಂದು ಪತ್ರಿಕೆಗಳಲ್ಲಿ ಹೊಸ ಹೊಸ ಪದಗಳ ಬಳಕೆಯಾದಾಗ ಭಾಷೆಯ ಅಭಿವೃದ್ದಿ ಸಾಧ್ಯ ಆದರೆ ಕಾಸರಗೋಡಿನ ಕನ್ನಡ ಪತ್ರಿಕೆಗಳಲ್ಲಿ ಮಲೆಯಾಳದ ಶಬ್ದಗಳು ಎಲ್ಲೆಂದರಲ್ಲಿ ನುಸುಳುತ್ತಿವೆ. ಇತ್ತೀಚಿಗೆ ಕಾಸರಗೋಡಿನ ಸಂಜೆಯ ಪತ್ರಿಕೆಯೊಂದನ್ನು ನೋಡಿದಾಗ ಕನ್ನಡವೋ ಅಥವಾ ಮಲೆಯಾಳ ಪತ್ರಿಕೆಯೋ ಎನ್ನುವ ಆತಂಕ ಪ್ರತಿಯೊಬ್ಬ ಕನ್ನಡ ಅಭಿಮಾನಿಯದ್ದು. ಎಲ್ಲಿ ಹೊಸ ಹೊಸ ಪದಗಳು ಧಾವಂತಿಸುತ್ತದೋ ಅಲ್ಲಿ ಭಾಷೆಯ ಅಳಿವು ಸಂಭವನೀಯ.
ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಯ ಓದುಗರು ಹೆಚ್ಚಿದ್ದಾರೆ ಎನ್ನುವುದೇನೋ ನಿಜವಾದರೂ ಯುವಜನತೆ, ವಿದ್ಯಾರ್ಥಿಗಳು ಕನ್ನಡ ಪತ್ರಿಕೆ ಓದುವ ಅಭ್ಯಾಸ ಮಾಡಿದಾಗ ಕನ್ನಡ ಪತ್ರಿಕೆಯ ಉಳಿವು ಸಾಧ್ಯ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳು ಉಳಿಯಬೇಕು. ದೊಡ್ಡ ಪತ್ರಿಕೆಗಳು ಮಾರುಕಟ್ಟೆಗೆ ಬಂದಾಗ ಸಣ್ಣ ಪತ್ರಿಕೆಗಳು ಬಾಗಿಲು ಮುಚ್ಚಿದ ಘಟನೆ ಸಾಕಷ್ಟಿವೆ. ಕನ್ನಡದ ಅಭಿವೃದ್ದಿಗಾಗಿ, ಕನ್ನಡ ಭಾಷೆಯ ಉಳಿವಿಗಾಗಿ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಮುಂದಾದರೂ ಕಾಸರಗೋಡಿನಲ್ಲಿ ಕನ್ನಡ ಪತ್ರಿಕೆಗಳು ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಪೂರ್ಣ ಶ್ರಮವಹಿಸಬೇಕು.
ಕೆ.ಎಸ್.ಶೆಟ್ಟಿ

No comments:

Post a Comment