Wednesday, 18 April 2012

ಮಂಗಳೂರಿನ ಜನತೆಯ ಪಾಲಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡುವ ಭಾಗ್ಯ ಒದಗಿಬರುತ್ತಿರುವುದು ಸಂತೋಷಕರ ವಿಷಯ ಅಂತೆಯೇ ಆ ಎಲ್ಲಾ ಕಲಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಷಯ...ಇತ್ತೀಚಿಗಷ್ಟೇ ಮಂಗಳೂರಿನ ಜನತೆಯನ್ನು ದೇಶದ ಎಲ್ಲಾ ಭಾಗಗಳ ವಿವಿಧ ಸಂಸ್ಕೃತಿಯನ್ನು ಪರಿಚಯಿಸಿ ಸಾಂಸ್ಕೃತಿಕ ಅಲೆಯಲ್ಲಿ ತೆಲಿಸಿ, ಅವುಗಳ ಸವಿ ನೆನಪು ಮನದಂಗಳದಿಂದ ಮರೆಯಾಗುವುದಕ್ಕಿಂತ ಮುಂಚೆಯೇ ಮತ್ತೊಂದು ಸಾಂಸ್ಕೃತಿಕ ಅಲೆ ಬಂದಿದೆ.
ರಾಷ್ಟ್ರೀಯ ೧೭ನೇ ಯುವಜನೋತ್ಸವದಲ್ಲಿ ದೇಶದ ಎಲ್ಲಾ ರಾಜ್ಯದ ಯುವಜನತೆ ೫ದಿನಗಳ ಕಾಲ ಮಂಗಳೂರಿನಲ್ಲಿ ನೆಲೆಯೂರಿ ತಮ್ಮ ರಾಜ್ಯದ ವಿಶಿಷ್ಟ ಸಂಸ್ಕೃತಿಯನ್ನು ಸುಂದರ ವೇದಿಕೆಯಲ್ಲಿ ಪ್ರದರ್ಶಿಸಿ, ಯುವಭಾರತವನ್ನು ನಿರ್ಮಿಸಿದ್ದಾರೆ. ಮಂಗಳೂರಿಗೆ ಈಗ ಮತ್ತೊಂದು ಗರಿ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯುತ್ತಿರುವ ಬಾಲ ಭಾರತ ಸೃಜನೋತ್ಸವದಲ್ಲಿ ಮಕ್ಕಳು ಸಂತೋಷದಿಂದ ಪಾಲ್ಗೊಂಡಿದ್ದಾರೆ. ಅವರ ಸುಪ್ತಮನಗಳಲ್ಲಿ ಅಡಗಿರುವ ಅಧಮ್ಯವಾದ ಕಲಾಪ್ರತಿಬೆಯನ್ನು ಹೊರಹೊಮ್ಮುತ್ತಾ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಹಾಡು, ಕುಣಿತ, ಕಲಾಕೃತಿಗಳ ರಚನೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಂಡಿದ್ದಾರೆ. ವಿವಿಧ ರಾಜ್ಯಗಳಿಂದ ಆಗಮಿಸಿರುವ ಮಕ್ಕಳಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮ ಹಾಗೂ ಪಣಂಬೂರು ಬೀಚಿನಲ್ಲಿ ಚಿಣ್ಣರ ರಾಜ್ಯವನ್ನೆ ಸೃಷ್ಠಿಸಿಬಿಟ್ಟಿದ್ದಾರೆ.
ಗುತ್ತಿನ ಮನೆಯಲ್ಲಿರುವುದೇನು....
ತುಳು ಸಂಸ್ಕೃತಿಯಲ್ಲಿ ಗುತ್ತಿನ ಮನೆಗೆ ಅದರದೇ ಆದ ಗತ್ತು ಇದೆ. ನಿಸರ್ಗಧಾಮದಲ್ಲಿದ್ದ ಗುತ್ತಿನ ಮನೆಯಲ್ಲಿ ಸಾಂಸ್ಕೃತಿಕ ಸೊಗಡು ಅಲ್ಲೂ ಕಂಡುಬಂದಿದೆ. ಆವೆ ಮಣ್ಣಿನ ಕಲಾಕೃತಿ, ಗೂಡುದೀಪ, ಉಬ್ಬುಶಿಲ್ಪ, ಚಿತ್ರರಚನೆ, ಸಾಂಜಿ ಆರ್ಟ್, ಧರ್ಮಾಫೋಮ್ ಮಾಸ್ಕ್, ಕೊಲಾಜ್ ಹೀಗೆ ವಿವಿಧ ರಚನೆಯಲ್ಲಿ ತೊಡಗಿದ್ದ ಮಕ್ಕಳು ಅವರದ್ದೇ ಆದ ಲೋಕದಲ್ಲಿದ್ದರು. ಕೊಳ್ಳೆಗಾಲ ದೊಡ್ಡಿನ್ ದುರಡಿಯಿಂದ ಆಗಮಿಸಿದ ೮ನೇ ತರಗತಿ ವಿದ್ಯಾರ್ಥಿ ಶರತ್ ಯಾರಲ್ಲೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆವೆ ಮಣ್ಣಿನಿಂದ ಗಣಪತಿ ಮೂರ್ತಿ ರಚನೆಯಲ್ಲಿ ತೊಡಗಿದ್ದ ಆತ ತನ್ನ ಕೃತಿರಚನೆಯಲ್ಲಿ ತಲ್ಲೀನನಾಗಿದ್ದ. ದೇಶದ ವಿವಿದೆಡೆಯ ಮಕ್ಕಳೊಂದಿಗೆ ಸ್ಪರ್ಧಿಸುತ್ತಿರುವುದೇ ಖುಷಿ ತಂದಿದೆ . ಕಲಾಕೃತಿ ಮೂಲಕ ಇನ್ನಷ್ಟು ಸಾಧನೆ ಮಾಡುವಾಸೆ ಎಂದು ಅಭಿಪ್ರಾಯ ಹಂಚಿಕೊಂಡರು.
ಕೃತಿಕಾ ಜಂಗಿನಮಠ್. ಆಕೆಯ ಕೊಳಲ ಇಂಪಿಗೆ ಎದುರಿರುವ ಸಾವಿರಾರು ಮಂದಿ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸುತ್ತಿದ್ದರೆ ಅದನ್ನು ಕಣ್ಣಾರೆ ನೋಡಿ ಸಂಭ್ರಮಿಸುವ ಭಾಗ್ಯ ಮಾತ್ರ ಆ ಬಾಲೆಗಿಲ್ಲ.. ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡಿರುವ ಅಂಧ ಕಲಾವಿದೆಯಾಕೆ...
ಜಾಹ್ನವಿ ಮುದ್ದು ಮುಖದ ಬಾಲೆ. ೨ನೇ ತರಗತಿಯಲ್ಲಿ ಕಲಿಯುತ್ತಿರುವ ಆಕೆಗೆ ಏಳೂವರೆ ವರ್ಷ. ಕೂಚಿಪುಡಿ ನೃತ್ಯಕ್ಕೆ ಹೆಜ್ಸೆ ಹಾಕಲು ದೂರದ ಆಂಧ್ರಪ್ರದೇಶದಿಂದ ಬಂದಿದ್ದಾಳೆ. ಇವಳು ಅಪ್ರತಿಮ ಪ್ರತಿಭೆ. ಈಕೆ ಪ್ರದರ್ಶಿಸಿದ ದಶಾವತಾರ ನೃತ್ಯವನ್ನು ಕಲಾಪ್ರೇಕ್ಷಕರು ಬೆರಗು ಕಣ್ಗಳಿಂದ ನೋಡಿ ಪ್ರಶಂಸಿಸಿದ್ದಾರೆ.
ಭುವನೇಶ್ವರದ ಸಂಬಲಂಪುರಿ ಜಾನಪದ ನೃತ್ಯ, ಔರಂಗಾಬಾದ್ ತಂಡದ ನೃತ್ಯ, ಗುಜರಾತ್ ವಡೋದರ ಬಾಲಭವನ ಸೊಸೈಟಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಆದಿವಾಸಿ ನೃತ್ಯ ಹೀಗೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಮಂಗಳೂರಿನ ಜನತೆಗೆ ಸಾಂಸ್ಕೃತಿಕ ಕಂಪನ್ನು ಪಿಲಿಕುಳ ನಿಸರ್ಗಧಾಮದಲ್ಲಿ ಸಾದರ ಪಡಿಸಿದರು.
ಕೇವಲ ೧೫ದಿನಗಳಲ್ಲಿ ಕನ್ನಡ ಕಲಿತು ಕನ್ನಡ ಹಾಡನ್ನು ಸುಶ್ರಾವ್ಯವಾಗಿ ಏನಾಗಲಿ..ಮುಂದೆ ಸಾಗು ನೀ...ಬಯಸಿದ್ದೆಲ್ಲಾ ಸಿಗದು ಬಾಳಲಿ..ನಿನ್ನಾಣೆ ನಿನ್ನ ಮಾತು ಸುಳ್ಳಲ್ಲ. ಎಂದು ಹಾಡುತ್ತಾನೆ ಜಾರ್ಖಂಡ್‌ನ ಮಹೇಂದರ್ ಕುಮಾರ್.
ಜಾರ್ಖಂಡ್‌ನ ಆಶಾಲತಾ ವಿಕಾಸ್ ಕೇಂದ್ರದ ವಿದ್ಯಾರ್ಥಿ ಲೀಲಾಜಾಲವಾಗಿ ಕಂಪ್ಯೂಟರ್ ಆಪರೇಟರ್ ಮಾಡಬಲ್ಲ. ಒಂದಕ್ಷರ ತಪ್ಪದೇ ಮೊಬೈಲ್ ಮೆಸೆಜ್ ಕಳುಹಿಸಬಲ್ಲ. ಯಾವುದೇ ಹಾಡನ್ನು ಇಂಪಾಗಿ ಹಾಡಬಲ್ಲ. ರವಿಶಾಸ್ತ್ರಿಯ ಸ್ವರವನ್ನು ಅನುಕರಿಸಿ ಕ್ರಿಕೆಟ್ ಕಾಮೆಂಟರಿ ಮಾಡಬಲ್ಲ. ಮೈಕ್ ಹಿಡಿದು ತಾಸುಗಟ್ಟಲೆ ಕಾರ್ಯಕ್ರಮವೊಂದನ್ನು ನಡೆಸಿಕೊಡಬಲ್ಲ. ಎಲ್ಲಾ ಕಾರ್ಯಕ್ಕೂ ಸಿದ್ದವಾಗಿದ್ದಾನೆ. ಅಬ್ಬ ಇದು ಎಲ್ಲರೂ ಮಾಡುವ ಕಾರ್ಯವೆಂದು ನೀವು ತಿಳಿದಿರಬಹುದು. ಆದರೆ ಆತ ಹುಟ್ಟು ಕುರುಡ.
ನಿಸರ್ಗಧಾಮದ ಬಯಲು ರಂಗ ಮಂದಿರದಲ್ಲಿ ಇವರ ತಂಡ ಪ್ರಸ್ತುತಪಡಿಸಿದ ಭಾವೈಕ್ಯತೆ ಸಾರುವ ಪ್ರಹಸನ ಗಮನ ಸೆಳೆಯಿತು. ಮಾತುಬಾರದ. ಕಿವಿ ಕೇಳದ ಇತರ ಐವರು ತಂಡದಲ್ಲಿದ್ದರು. ಗಾಂಧಿ ಪ್ರತಿಮೆಯನ್ನು ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ತಮಗೆ ಬೇಕಾದಂತೆ ಪರಿವರ್ತಿಸುವುದು, ಬಳಿಕ ಕಚ್ಚಾಡುವುದು, ಕೊನೆಯಲ್ಲಿ ಸಮಾಜ ಸೇವಕನೊಬ್ಬ ದೇಶದ ವೈವಿಧ್ಯತೆಯಲ್ಲಿನ ಏಕತೆಯನ್ನು ತಿಳಿಹೇಳುವುದು ಪ್ರಹಸನದ ತಾತ್ಪರ್ಯ. ಉಳಿದ ಮೂಕ ವಿದ್ಯಾರ್ಥಿಗಳು ಬಂದು ಆಂಗಿಕ ಅಭಿನಯ ಮಾಡುವಾಗ ಹಿಂದಿನಿಂದ ಅಂಧ ಮಹೇಂದರ್ ಕುಮಾರ್ ವಿವರಣೆ ಕೊಡುತ್ತಿದ್ದ. ಸಿನಿಮಾ ತಾರೆಯರ ಸ್ವರವನ್ನು ಅನುಕರಣೆ ಮಾಡಬಲ್ಲ ಈತ ವಿವಿಧ ಭಾಷೆಗಳ ಮೂಲಕ ತನ್ನ ಭಾಷಾ ಪ್ರಾವಿಣ್ಯತೆ ಮೆರೆಯುತ್ತಿರುವುದು ವಿಶೇಷ ಆಕರ್ಷಣೆಯಾಗುತ್ತಿತ್ತು. ತನಗೆ ದೃಷ್ಠಿ ಇಲ್ಲ ಎಂಬ ಕೊರಗು ಬಿಟ್ಟರೆ ಬೇರಾವ ಸಮಸ್ಯೆಯೂ ಇರಲಿಲ್ಲ. ಒಂದು ಸ್ಥಳದ ಪರಿಚಯವಾದರೆ ಲೀಲಾಜಾಲವಾಗಿ ಓಡಾಡಬಲ್ಲೆ. ಆ ಸ್ಥಳ ಪರಿಚಿತವಾಗಿ ಬಿಡುತ್ತದೆ ಎಂದು ನಸುನಗುತ್ತಾ ಹೇಳುತ್ತಾನೆ.
ಆಶಾಲತಾ ವಿಕಲಾಂಗ ವಿಕಾಸ ಕೇಂದ್ರದಲ್ಲಿ ಸುಮಾರು ೧೭೦ ಮಂದಿ ದೃಷ್ಠಿ ಕಳೆದುಕೊಂಡ ಬಾಯಿಬಾರದ ಮಕ್ಕಳಿದ್ದಾರೆ. ಇದರಲ್ಲಿ ೬೦ ಹೆಣ್ಣು ಮಕ್ಕಳು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದೆ ಎನ್ನುತ್ತಾರೆ ಹರಿದ್ವಾರ್ ರಾಯ್.
ಇದುವರೆಗೆ ಸಮುದ್ರವನ್ನೆ ಕಾಣದ ಮಕ್ಕಳು ಸಾಗರ ತಡಿಯ ಮರಳಿನ ರಾಶಿಯ ಮೇಲೆ ಹೊರಳಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವಿವಿಧ ಭಾಷೆಯ , ವಿವಿಧ ಸಂಸ್ಕೃತಿಯ ಮಕ್ಕಳು ಸಾಗರದ ತಡಿಯಲ್ಲಿ ಬಾಲಸೃಜನೋತ್ಸವದ ಅಂಗವಾಗಿ ಪಣಂಬೂರು ಬೀಚ್‌ನಲ್ಲಿ ಕುಣಿದು ಕುಪ್ಪಳಿಸಿದರು. ಮರಳಿನಲ್ಲಿ ತಾಜಮಹಲ್, ಶಿವಲಿಂಗ, ಮನುಷ್ಯನ ಆಕೃತಿ, ಕಟ್ಟಡಗಳನ್ನು ರಚಿಸಿದರು.
ಅತ್ತ ಸೂರ್ಯ ಪಶ್ಚಿಮಾಂಬುದಿಯಲ್ಲಿ ಅಸ್ತಂಗತನಾಗುತ್ತಿದ್ದರೆ, ಕುಣಿದು ಕುಪ್ಪಳಿಸುತ್ತಿದ್ದ ಮಕ್ಕಳಲ್ಲಿ ಮುಖದಲ್ಲಿ ನಿರಾಶೆಯ ಭಾವ.. ಯಾಕಾದರೋ ಇಷ್ಟು ಬೇಗ ಮುಸ್ಸಂಜೆ ಕಳೆಯಿತೋ ಎನ್ನುವ ಭಾವ ಮುದ್ದು ಮುಖದ ಮಕ್ಕಳಲ್ಲಿ...

No comments:

Post a Comment