Thursday, 3 May 2012

karmikaru



ನಮಗೂ ಒಂದು ಬದುಕಿದೆ ನಮ್ಮನ್ನೂ ಕೂಡ ಸಂತೋಷವಾಗಿ ಬದುಕಲು ಬಿಡಿ-
(ವಿಶ್ವದಲ್ಲೆಡೆ ಕಾರ್ಮಿಕರ ದಿನದಂದು ಧ್ವನಿಯಿಲ್ಲದ ಧ್ವನಿಯಿಂದ ಹಕ್ಕುಗಳಿಗಾಗಿ ಹೋರಾಟ ಮಾಡಿದ ಕಾರ್ಮಿಕರು)
ಕೆ.ಎಸ್.ಶೆಟ್ಟಿ
ಮೇ ೧ರಂದು ವಿಶ್ವದೆಲ್ಲೆಡೆ ಕಾರ್ಮಿಕರ ದಿನವನ್ನಾಗಿ ಆಚರಿಸುತ್ತಾ ಎಲ್ಲಾ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಒಕ್ಕೊರಲಿನಿಂದ ಧ್ವನಿಯಾಗಿದ್ದಾರೆ. ಇಂದು ನಿನ್ನೆಯ ಪಾಡಲ್ಲ ಹತ್ತಾರು ವರ್ಷಗಳಿಂದ ಧ್ವನಿಯಿಲ್ಲದ ಧ್ವನಿಯಿಂದ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇದು ಕೇವಲ ಹೋರಾಟಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಅವರಿಗೆ ನ್ಯಾಯ ಸಿಕ್ಕಿದೆಯೇ ಎಂದಾಗ ಉತ್ತರ ಮಾತ್ರ ಶೂನ್ಯ.
ಜೀವನ ನಡೆಸಲು ಹೊಟ್ಟೆಪಾಡಿಗಾಗಿ ತಮ್ಮ ಕುಟುಂಬ ನಿರ್ವಹಣೆಗಾಗಿ ಒಂದಲ್ಲ ಒಂದು ಉದ್ಯೋಗವನ್ನು ಅರಸಿಕೊಂಡು ಒಂದೂರಿನಿಂದ ಇನ್ನೊಂದು ಊರಿಗೆ ವಲಸೆ ಬಂದವರು ಎಲ್ಲರೂ ಕಾರ್ಮಿಕರೇ. ವಿವಿಧ ರೀತಿಯ ಕಾರ್ಮಿಕರು ಇದ್ದರೂ ಅವರಿಗೆ ಒಂದೇ ರೀತಿಯ ವೇತನ ದೊರೆಯುತ್ತಿದೆಯೇ? ಅವರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿದೆಯೇ? ಹೀಗೆ ನಾವು ಪ್ರಶ್ನೆ ಕೇಳುತ್ತಾ ಹೋದರೆ ಅದು ಪ್ರಶ್ನೆಯಾಗಿಯೇ ಉಳಿಯುತ್ತದೆ.
ಸರಕಾರಿ ನೌಕರರಲ್ಲದವರು ತಮ್ಮ ಜೀವನ ನಿರ್ವಹಣೆಗಾಗಿ ಉದ್ಯೋಗವನ್ನರಸಿ ವಿವಿಧ ಸ್ಥಳಗಳನ್ನು ಅರಸಿ ಹೋಗುವುದು ಅನಿವಾರ್ಯ. ಕೃಷಿ ಭೂಮಿಯನ್ನು ಹೊಂದಿರುವ ರೈತ ಕಷ್ಟಪಟ್ಟು ಮಕ್ಕಳನ್ನು ಓದಿ ಬುದ್ದಿವಂತರನ್ನಾಗಿಸುತ್ತಾನೆ. ರೈತನು ದೇಶದ ಬೆನ್ನೆಲುಬು ಎಂದು ಸಾರುವ ದೇಶದಲ್ಲಿಂದು ಕೃಷಿ ಭೂಮಿಯ ಕೊರತೆಯಿಂದ ಕೃಷಿ ವಸ್ತುಗಳನ್ನು ಬೇರೆಡೆಯಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯೆ ಕಲಿತ ರೈತನ ಮಗನಿಗೆ ವೈಟ್‌ಕಾಲರ್‌ನ ಕೆಲಸವೇ ಬೇಕೆಂದು ಸುಂದರ ಪರಿಸರ ಬಿಟ್ಟು ಮಾಯಾನಗರಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಸಾಧಾರಣ ಕೆಲಸ ಸಿಕ್ಕಿದರೂ ಅವನ ಸಂತೋಷಕ್ಕೆ ಪಾರವೇ ಇಲ್ಲಾ. ಇಂದು ಆತನಿಗೆ ಕೃಷಿ ಚಟುವಟಿಕೆಯ ಯಾವುದೇ ಕೆಲಸಗಳು ತಿಳಿಯದೆ ಪೇಟೆಯನ್ನೇ ಅವಲಂಬಿಸುವಂತಾಗಿದೆ. ವಯಸ್ಸಾದ ತಂದೆ-ತಾಯಿ ಮಕ್ಕಳ ಬರನಿರೀಕ್ಷೆಯಲ್ಲಿದ್ದು ಅದು ಕೈಗೂಡದೆ  ಕೃಷಿ ಕಾರ್ಯವನ್ನು ಮಾಡಲು ಸಾಧ್ಯವಾಗದೇ ಇದ್ದಾಗ ಜಮೀನನ್ನು ಮಾರಿ ಅನಾಥಶ್ರಮವನ್ನು ಸೇರುವ ಪರಿಸ್ಥಿತಿ ಉಂಟಾಗಿದೆ. ಹೀಗೆ ಜಮೀನನ್ನು ಕೊಂಡ ವ್ಯಕ್ತಿ ಅಲ್ಲೊಂದು ದೊಡ್ಡ ಕಟ್ಟಡವನ್ನೇ ನಿರ್ಮಾಣ ಮಾಡಿ ಕೃಷಿ ಭೂಮಿಯ ಗುರುತು ಇಲ್ಲದಂತೆ ಮಾಡುತ್ತಾನೆ. ಹೀಗೆ ಪ್ರತಿಯೊಂದು ಉಧ್ಯಮಕ್ಕೂ ಅವಿನಾಭಾವ ಸಂಬಂಧವಿರುವ ಹೊತ್ತಿನಲ್ಲಿ ಕಾರ್ಮಿಕರಾಗಿ ಬರುವಂಥವರ ಜೀವನಕ್ಕೆ ಎಷ್ಟು ಭದ್ರತೆ ಇದೆ ಎಂದು ನಾವು ತಿಳಿದುಕೊಳ್ಳಬೇಕು.
ಕೃಷಿ ಭೂಮಿ ಪಡೆದ ವ್ಯಕ್ತಿ ಪಡೆದ ಒಂದು ವರ್ಷದಲ್ಲಿ ಐದಾರು ಅಂತಸ್ತಿನ ಕಟ್ಟಡ ನಿರ್ಮಾಣಮಾಡುವ ಗುರಿಯನ್ನು ಹೊಂದಿ ಕೆಲಸಕ್ಕೆ ಬೇಕಾದ ಕಾರ್ಮಿಕರು ಅಭಾವದಿಂದ ಬೇರೆಡೆಯಿಂದ ಕಾರ್ಮಿಕರನ್ನು ಕರೆದು ತರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗೆ ಬಂದ ಕಾರ್ಮಿಕರು ಕೇವಲ ದಿನದ ಸಂಬಳಕ್ಕಾಗಿಯೋ ಅಥವಾ ಗುತ್ತಿಗೆ ಆಧಾರದಲ್ಲಿಯೋ ಕಾರ್ಯ ನಿರ್ವಹಿಸುತ್ತಾರೆ. ಹೀಗೆ ಆ ಕಟ್ಟಡದ ಕಾಮಗಾರಿ ಪೂರ್ಣಗೊಂಡ ನಂತರ ಅಲ್ಲಿಗೆ ಅವರ ಋಣ ತೀರಿದಂತೆ..ಅವರು ಬೇರೊಂದು ಕಡೆಗೆ ಹೋಗಲೇಬೇಕಾದ ಅನಿವಾರ್ಯ.
ಇಂತಹ ಪರಿಸ್ಥಿತಿಯಲ್ಲಿ ವಲಸೆ ಜೀವನವನ್ನು ನಡೆಸುವ ಕಾರ್ಮಿಕರ ಜೀವನಕ್ಕೆ ಬೇಕಾದ ನೆಲೆ ಅಥವಾ ಅವರ ಮೂಲಭೂತ ಹಕ್ಕುಗಳನ್ನು ನೀಡುವುದು ಸಾಧ್ಯವೇ? ಹತ್ತಾರು ವರ್ಷಗಳಿಂದ ನಿಗಧಿತ ಸ್ಥಳದಲ್ಲಿ ವಾಸಿಸುತ್ತಿದ್ದ ವ್ಯಕ್ತಿಗೆ ಸರಕಾರದಿಂದ ಬಂದ ಸವಲತ್ತುಗಳನ್ನು ಗ್ರಾಮ ಪಂಚಾಯತ್‌ಅಥವಾ ಮಹಾನಗರಪಾಲಿಕೆಯಿಂದ ಪಡೆಯಲು ಕಷ್ಟವಾಗಿರುವಾಗ ಇವರಿಗೆ ಆ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.
ಇತ್ತ ನಗರದಲ್ಲಿ ಕೃಷಿಭೂಮಿಯ ತೊರೆದು ಗುತ್ತಿಗೆ ಆಧಾರದಲ್ಲಿ ಬಿಳಿ ಕಾಲರಿನ ಕೆಲಸವನ್ನು ನಿರ್ವಹಿಸುತ್ತಿರುವ ವ್ಯಕ್ತಿಗೆ ಸರಿಯಾದ ಸ್ಥಾನಮಾನಗಳು ಸಿಗುತ್ತಿವೆಯೋ? ಇಲ್ಲಾ ಅಂತಲೇ ಹೇಳಬೇಕು. ಅಲ್ಲಿಯೂ ಕೂಡ ಗುತ್ತಿಗೆದಾರ ಹಾಗೂ ಮಾಲಕರ ನಡುವಿನ ಒಪ್ಪಂದದಿಂದ ನೌಕರನಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತನಾಗಿದ್ದಾನೆ. ದಿನನಿತ್ಯದ ಜೀವನ ನಿರ್ವಹಣೆಗಾಗಿ ದೇಶ ಕಟ್ಟುವ ಅಥವಾ ಒಂದು ಸಂಸ್ಥೆ ಮುನ್ನಡೆಸಲು ಸೂತ್ರದಾರನಾಗಿರುವ ಕಾರ್ಮಿಕ ತನ್ನ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಿದ್ದಾನೆ. ಇಎಸ್‌ಐ, ಪಿಎಫ್,ಬೋನಸ್ ಹೀಗೆ ಒಂದೇ ಎರಡೇ ಕಾರ್ಮಿಕನ ಸಮಸ್ಯೆ ಹೇಳತೀರದು.
ಪ್ರತಿಯೊಂದು ರಂಗದಲ್ಲೂ ಕೂಡ ಕಾರ್ಮಿಕನಿಗೆ ಹಲವಾರು ಸಮಸ್ಯೆಗಳು ಉಲ್ಬಣಿಸುತ್ತದೆ. ಪತ್ರಕರ್ತನಾದವನಿಗೆ ದಿನದ ೨೪ ಗಂಟೆಗಳಲ್ಲಿಯೂ ಕೂಡ ಸಮಾಜಕ್ಕೆ ಸತ್ಯಾಂಶವನ್ನು ಸಾರುವ ವರದಿಯನ್ನು ಬಿತ್ತರಿಸಬೇಕು. ವೈದ್ಯನಾದವನಿಗೆ  ಇನ್ನೊಂದು ಅಮೂಲ್ಯ ಜೀವದ ರಕ್ಷಣೆಯ ಘನತರವಾದ ಹೊಣೆಗಾರಿಕೆಯಿರುತ್ತದೆ. ಪೊಲೀಸ್ ಹಾಗೂ ವಕೀಲರು ಸಮಾಜದಲ್ಲಿ ಅನ್ಯಾಯವಾದಾಗ ಅವುಗಳನ್ನು ಹಂಸಕ್ಷೀರ ನ್ಯಾಯದಂತೆ ತುಲನೆ ಮಾಡಿ ಜನತೆಗೆ ನ್ಯಾಯ ಒದಗಿಸಬೇಕು. ಕಲಾವಿದನೊಬ್ಬ ಮನದಲ್ಲಿ ನೋವು ತುಂಬಿಕೊಂಡಿದ್ದರೂ ಅದನ್ನೂ ತೊರಗೊಡದೆ ರಂಗದಲ್ಲಿ ಬಂದಾಗ ತುಂಬಿದ ಪ್ರೇಕ್ಷಕರನ್ನು ರಂಜಿಸಲೇ ಬೇಕಾಗುತ್ತದೆ. ಹೀಗೆ ಯಾವುದೇ ಉಧ್ಯಮದಲ್ಲಿದ್ದರೂ ಆತನ ಮೂಲಭೂತ ಹೊಣೆಗಾರಿಕೆಯಿಂದ ಸಮಾಜದಲ್ಲಿ ಗುರುತಿಸಲ್ಪಡುತ್ತಾನೆ. ಮನದಲ್ಲಿ ದುಗುಡವನ್ನು ತುಂಬಿಕೊಂಡಿದ್ದರೂ ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಕಾರ್ಮಿಕರ ಬದುಕು ಮಾತ್ರ ಕತ್ತರಿಯಲ್ಲಿ ಸಿಲುಕಿದ ಅಡಕೆಯಂತಾಗಿದೆ.
ಪ್ರತಿಯೊಬ್ಬ ಕೂಲಿ ಕಾರ್ಮಿಕನ ಬದುಕು ಯಾವ ಮಟ್ಟದ್ದಾಗಿದೆ ಎಂದಾಗ ಕರುಳು ತಿವುಚಿದಂತಾಗುತ್ತದೆ. ವಲಸೆ ಕಾರ್ಮಿಕನಿಗೆ ಮೂಲಭೂತ ಸೌಕರ್ಯಗಳು ದೊರಕುತ್ತಿವೆಯೇ? ಆತನಿಗೆ ವಾಸಿಸಲು ಯೋಗ್ಯವಾದ ಸ್ಥಳವಿದೆಯೇ? ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ನೋಡುತ್ತಾ ಉಡುಪಿಯ ಸಂತೆಕಟ್ಟೆ ಹಾಗೂ ಬ್ರಹ್ಮಾವರ ಸಮೀಪ ವಲಸೆ ಕಾರ್ಮಿಕರು ಹತ್ತಾರು ವರ್ಷಗಳಿಂದ ವಾಸಿಸುತ್ತಿದ್ದು ಮಡದಿಯ ಸೀರೆಯನ್ನೋ ಅಥವಾ ಪಂಚೆಯನ್ನೋ ಹರಿದು ಪರದೆಯನ್ನಾಗಿ ಮಾಡಿಕೊಂಡಿದ್ದಾರೆ. ತೆಂಗಿನ ಗರಿಯ ಮಡಲನ್ನು ಗೂಡಿನ ಮೇಲ್ಚಾವಣಿಯನ್ನಾಗಿ ಮಾಡಿಕೊಂಡ ದೃಶ್ಯ ನಾವು ನೋಡಬಹುದಾಗಿದೆ. ಸಂಗ್ರಹ ಚಿತ್ರದಲ್ಲಿರುವ ಈ ದೃಶ್ಯ ಚರಂಡಿಯ ಕೊಳವೆಯನ್ನು ವಾಸಸ್ಥಾನವನ್ನಾಗಿ ಮಾಡಿಕೊಂಡ ಘಟನೆ ನಾವು ಕಾಣಬಹುದು. ಹೀಗೆ ಪ್ರಪಂಚದಲ್ಲಿ ಹತ್ತು ಹಲಾವಾರು ಘಟನೆಗಳು ನಮ್ಮ ಕಣ್ಣಮುಂದಿದೆ. ಆದರೆ ಇವರೆಲ್ಲಾ ಕೆಲಸ ಮಾಡಿ ಉದ್ಯೋಗ ದಾತರನ್ನು ಸಂತೋಷವಾಗಿಟ್ಟು ತಾವು ಮಾತ್ರ ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರ ದಿನಾಚರಣೆಯ ದಿನ ಹಲವಾರು ಹೋಟೆಲ್ ಅಂಗಡಿಗಳನ್ನು ನೋಡಿದಾಗ  ಮಕ್ಕಳು ಕೆಲಸ ಮಾಡುವ ಸನ್ನಿವೇಶವನ್ನು ನೋಡಿದ್ದೇವೆ. ಆದರೆ ಮಕ್ಕಳಿಗೆ ಕೆಲಸ ಮಾಡದೆ ಬೇರೆ ಗತಿಯಿಲ್ಲಾ. ತಮ್ಮ ಕಾಲಮೇಲೆ ತಾವು ನಿಲ್ಲಬೇಕು ಎನ್ನುವ ಮಹತ್ವಾಕಾಂಕ್ಷೆ ಒಂದೆಡೆಯಾದರೆ ಮನೆಯಲ್ಲಿರುವ ಬಡತನ. ತಂದೆ ತಾಯಿಯ ಕಷ್ಟವನ್ನು ನೋಡಿದ ಮಕ್ಕಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಂದೆ ತಾಯಿ ಆರ್ಥಿಕ ಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಸಹಾಯ ಮಾಡಿ ಪುಸ್ತಕವನ್ನು ಕೊಳ್ಳಲು ಅನೂಕೂಲವಾಗುವುದು ಎಂದು ಈ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರೆಲ್ಲಾ ಅರೆಕಾಲಿಕ ಕಾರ್ಮಿಕರಾದರೆ ಬಡತನದ ಜೀವನವನ್ನು ನಿರ್ವಹಿಸಲು ಶಾಲೆಯ ತೊರೆದು ಖಾಯಂ ಆಗಿ ದುಡಿಯುವ ವರ್ಗ ಅದೆಷ್ಟೊ ಮಂದಿ ದೈನಂದಿನ ಪ್ರಪಂಚದಲ್ಲಿ ನಮ್ಮ ಕಣ್ಣಮುಂದೆ ಸಾಕ್ಷಿಯಾಗಿ ಬರುತ್ತಾರೆ.
ಯಾವುದೇ ಒಂದು ಉದ್ಯಮ ಯಶಸ್ಸನ್ನು ಪಡೆಯಬೇಕಾದರೆ ನೌಕರರ ಹಾಗೂ ಮಾಲಕರ ನಡುವೆ ಪ್ರೀತಿ, ವಿಶ್ವಾಸ ಹಾಗೂ ಸ್ನೇಹಪರವಾದ ಅಂಶಗಳು ಒಳಗೊಂಡಿರಬೇಕು. ಸ್ನೇಹ ಪೂರಕವಾದ ಅಂಶಗಳಿಂದ ಮಾಲಕರು ಕಾರ್ಮಿಕರ ಕಂಡಾಗ ಅವರು ಮಾಡುವ ಕೆಲಸದಲ್ಲಿ ನಿಷ್ಠೆಯನ್ನು ತೊರುವುದರೊಂದಿಗೆ ಸಂಸ್ಥೆಯ ಅಭಿವೃದ್ದಿಗೆ ಅವಿರತ ಶ್ರಮಿಸುತ್ತಾರೆ. ಮಾಲಕನಾದವನು ಯಾವಾಗ ಕಾರ್ಮಿಕರಲ್ಲಿ ತಮ್ಮ ದರ್ಪ ತೋರುತ್ತಾರೋ ಆಗಲೇ ಕಾರ್ಮಿಕರು ಅನ್ಯಾಯವನ್ನು ಮಾಡುವ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಅವರಿಗೆ ಸಿಗಬೇಕಾದ ಸೌಲಭ್ಯ ಹಾಗೂ ಪ್ರೀತಿಯಿಂದ ನೋಡಿದಾಗ ಅವರಿಗೆ ಸಂಸ್ಥೆಯ ಹಾಗೂ ಮಾಲಕರ ಬಗ್ಗೆ ಗೌರವಗಳು ಮೂಡುತ್ತವೆ.
ಮೇ ೧ರಂದು ಮಂಗಳೂರಿನಲ್ಲಿ ಕಾರ್ಮಿಕ ದಿನಾಚರಣೆಯ ದಿನ ನಡೆದ ಸನ್ಮಾನ ಕಾರ್ಯಕ್ರಮ. ರೋಟರ್‍ಯಾಕ್ಟ್ ಸಂಸ್ಥೆಯು ಸಮಾಜದಲ್ಲಿ ದುಡಿದ ಹಿರಿಯ ನೌಕರ ಬಂದುಗಳನ್ನು ಗುರುತಿಸಿ ಕ್ರಮ ಮಾತ್ರ ಶ್ಲಾಘನೀಯ. ೨೫ ವರ್ಷಗಳಿಂದ ನಾವೆಲ್ಲಾ ನಿದ್ರಾದೇವಿಯ ಆಲಿಂಗನದಲ್ಲಿ ಮೈಮರೆತಿರುವ ಹೊತ್ತು ಸೂರ್ಯನ ಆಗಮನವಾಗುವುದಕ್ಕಿಂತ ಮುಂಚಿತವಾಗಿ ೪ ಗಂಟೆಗೆ ಎದ್ದು  ಪ್ರತಿಯೊಬ್ಬರ ಮನೆಗೆ ಪತ್ರಿಕೆಯನ್ನು ತಲುಪಿಸುವ ಕಾರ್ಯ ಮಾಡಿದ ಆನಂದ ಆಚಾರ್ಯ ಮತ್ತು ಒಂದೇ ಸಂಸ್ಥೆಯಲ್ಲಿ (ಹೋಟೆಲ್ ವುಡ್‌ಲ್ಯಾಂಡ್ಸ್) ಕಳೆದ ೨೦ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯ ನಿರ್ವಹಿಸಿದ ಪ್ರೇಮ್ ಕುಮಾರ್ ಶೆಟ್ಟಿ, ಅನಂತ ಪಡ್ಕೆ ಇವರುಗಳ ಸನ್ಮಾನ ಕಾರ್ಯಕ್ರಮ ಇದಕ್ಕೆ ಸಾಕ್ಷಿಯಾಗಿದೆ. ಇನ್ನೊಂದೆಡೆ ಅಖಿಲ ಭಾರತೀಯ ಕಾರ್ಮಿಕ ಸಂಘ ಕಾರ್ಮಿಕರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಯನ್ನು ಆಯೋಜಿಸಿತ್ತು. ವರ್ಷವಿಡೀ ದುಡಿಯುವ ಕಾರ್ಮಿಕ ಮನುಸ್ಸುಗಳು ಒಂದೆಡೇ ಸೇರಿ ಸಂತೋಷವನ್ನು ಹಂಚಿಕೊಳ್ಳುವುದರೊಂದಿಗೆ ಸಮಾಜದಲ್ಲಿ ದುಡಿಯುವ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಬಡವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ. ಹೀಗೆ ಕಾರ್ಮಿಕರು ಹಾಗೂ ಮಾಲಕರ ನಡುವೆ ಏಕಮನೋಭಾವನೆಯಿಂದ ಸಂಸ್ಥೆಯ ಯಶಸ್ಸು ಸಾಧ್ಯವೆನ್ನುವುದು ಎಲ್ಲರಿಗೂ ತಿಳಿದ ಅಂಶವೇ...ಕಾರ್ಮಿಕರಿಗೂ ಒಂದು ಮನಸ್ಸಿದೆ ಅವರ ಮನಸ್ಸಿನಲ್ಲಿರುವ ಅಂಶಗಳು ಯಾವುದು ಎಂದು ತಿಳಿದು ಕಾರ್ಯಪ್ರವೃತ್ತರಾಗೋಣ ಅಲ್ಲವೇ...





No comments:

Post a Comment