Saturday 12 May 2012

ಯುವವಿಜ್ಞಾನಿಗಳ ಕೌಶಲ್ಯ ಪ್ರದರ್ಶನ ಹಾಗೂ ಸ್ಪರ್ಧೆಗೆ  ಕ್ಷಣಗಣನೆ:
ಸಂದೇಶ ಶೆಟ್ಟಿ ಆರ್ಡಿ
ವಿಜ್ಞಾನ ತಂತ್ರಜ್ಞಾನ ಕ್ಷೇತ್ರವು ನಾಗರೀಕತೆ ಹಾಗೂ ಸಂಸ್ಕೃತಿ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿ ವೈಜ್ಞಾನಿಕ ವೇಗ ಪಡೆಯಲು ಕಾರಣವಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳು ಅಂಕಗಳಿಗಾಗಿ ಮಾಡುವ ಪ್ರಾಜೆಕ್ಟ್‌ಗಳು ಹಾಗೇ ಉಳಿಯದೆ ಅವರ ಪ್ರತಿಭೆ ಸಮಾಜಕ್ಕೆ ತೋರ್ಪಡಿಸಬೇಕು. ಅವು ಪ್ರಾಜೆಕ್ಟ್‌ಗಳಾಗಿ ಉಳಿಯದೆ ವಸ್ತುರೂಪದಲ್ಲಿ ಸಮಾಜದಲ್ಲಿ ಗುರುತಿಸುವಂತಾಗಬೇಕು ಎನ್ನುವ ಪರಿಕಲ್ಪನೆಯಿಟ್ಟು  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ೨೦೦೨ರಲ್ಲಿ ಸೃಷ್ಟಿಯನ್ನು ಪ್ರಾರಂಬಿಸಿದೆ. ಪ್ರತಿವರ್ಷ ತಾಂತ್ರಿಕ ವಿದ್ಯಾರ್ಥಿಗಳಿಂದ ೧೦ ಕೋ.ರೂ.ವೆಚ್ಚದಲ್ಲಿ ೧೫ ಸಾವಿರ ಪ್ರಾಜೆಕ್ಟ್ ರೂಪುಗೊಳ್ಳುತ್ತಿದೆ. ಅಂತಿಮ ವರ್ಷವಲ್ಲದ ವಿದ್ಯಾರ್ಥಿಗಳು ತಮ್ಮಲ್ಲಿರುವಂಥ ಪ್ರತಿಭಾಪ್ರದರ್ಶನ ಮಾಡಲು ಹವ್ಯಾಸಿಯಾಗಿಯೂ ಸಂಶೋಧನೆಯಲ್ಲಿ ತೊಡಗುತ್ತಾರೆ. ಕವಿಯೊಬ್ಬ ಕವಿತೆ ರಚಿಸಿದ್ದರೂ ಮಹತ್ವ ಪಡೆಯದೆ ಅದಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗಿ ತುಂಬಿದ ಸಭೆಯಲ್ಲಿ ವಾಚಿಸಿದಾಗ ಕೃತಿಗೆ ಮಹತ್ವದೊರೆಯುತ್ತದೆ. ವಿದ್ಯಾರ್ಥಿಗಳಲ್ಲಿರುವ ಸುಪ್ತಪ್ರತಿಭೆಯನ್ನು ಪ್ರದರ್ಶಿಸುವುದಕ್ಕಾಗಿ ಸೂಕ್ತ ವೇದಿಕೆಯ ನಿರ್ಮಾಣ ಎಬಿವಿಪಿಯಿಂದಾಗಿದೆ.
ಸೃಷ್ಟಿಯ ಮೂಲ ಎಬಿವಿಪಿ:
ಜಾಗತಿಕರಣದ ಸಂದರ್ಭದಲ್ಲಿ ವೃತ್ತಿಶಿಕ್ಷಣದ ಮೇಲೆ ಕವಿದಿರುವ ಕರಿನೆರಳಿನ ಪ್ರಸ್ತುತತೆಯನ್ನು ವಿಶ್ಲೇಷಿಸುವ ಚರ್ಚೆ ಅವಶ್ಯಕವೆನ್ನುವ ಅಂಶ ಹಾಗೂ ಉದ್ದಿಮೆ ಮತ್ತು ವೃತ್ತಿಪರ ಶಿಕ್ಷಣದ ನಡುವೆ ಪರಸ್ಪರ ಚರ್ಚೆಯ ಸೇತು ಸಂಬಂಧಕ್ಕೆ ಅನುಗುಣವಾದ ಬೇಡಿಕೆ ಮತ್ತು ಜವಾಬ್ದಾರಿ ನಿರ್ವಹಣೆಯ ಅಗತ್ಯತೆಯನ್ನು ಮನಗಂಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೈಗೊಂಡ ಕಾರ್ಯವೇ ಸೃಷ್ಟಿಯ ಹುಟ್ಟು. ಯುವ ವಿಜ್ಞಾನಿಗಳ ಮನೋಸ್ಥೈರ್ಯ ಹೆಚ್ಚಿಸಿ ವಿದ್ಯಾರ್ಥಿ ಮತ್ತು ಕೈಗಾರಿಕೆಗಳ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ರಿಸರ್ಚ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಮಾಡಬೇಕಾಗಿದ್ದ ಕಾರ್ಯವನ್ನು ವಿದ್ಯಾರ್ಥಿ ಪರಿಷತ್ ಮಾಡುತ್ತಿದೆ. ಸೃಷ್ಟಿಯಲ್ಲಿ ಪ್ರತಿವರ್ಷ ಪ್ರದರ್ಶನಗೊಂಡ ಪ್ರಾಜೆಕ್ಟ್‌ಗಳು ದಾಖಲೆಗೊಂಡಿರುವುದರಿಂದ ನಕಲು ಮಾಡಲು ಅವಕಾಶವಿಲ್ಲ. ಕರ್ನಾಟಕ ಸರ್ಕಾರ, ತಾಂತ್ರಿಕ ಶಿಕ್ಷಣ ಇಲಾಖೆಯು ಇವರ ಕಾರ್ಯವನ್ನು ಶ್ಲಾಘಿಸಿ ಸಹ ಪ್ರಾಯೋಜಕರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಾರತೀಯ ಸೈನ್ಯದಲ್ಲಿ ಉಪಯೋಗಿಸುವ ಎಕ್ಸ್‌ಪ್ಲೋಸಿವ್ ಡಿಟೆಕ್ಟರ್, ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಉಪಯೋಗಿಸುವ ಟಿಕೆಟ್ ವೆಂಡಿಂಗ್ ಮಶೀನ್ ಇಂಥ ಹಲವಾರು ಪ್ರಾಜೆಕ್ಟ್‌ಗಳು ದಾಖಲೆಯಾಗಿವೆ.
ಸೃಷ್ಟಿಯ ಬೆಳೆದು ಬಂದ ಹಾದಿ:
೨೦೦೨ರಲ್ಲಿ ಬೆಳಗಾವಿಯ ಕರ್ನಾಟಕ ಲಿಂಗಾಯಿತ ಎಜುಕೇಶನ್ ಸೊಸೈಟಿಯಲ್ಲಿ ಪ್ರಾರಂಭವಾದ ಸೃಷ್ಟಿ ನಂತರದಲ್ಲಿ  ಪಿಇಎಸ್ ಇಂಜಿನಿಯರಿಂಗ್ ಬೆಂಗಳೂರು, ಶ್ರೀ ಜಯಚಾಮರಾಜೇಂದ್ರ ಕಾಲೇಜು ಮೈಸೂರು, ಬಿವಿಬಿ ಇಂಜಿನಿಯರಿಂಗ್ ಕಾಲೇಜು ಹುಬ್ಬಳ್ಳಿ, ಜಿ.ಎಂ.ಐ.ಟಿ. ದಾವಣಗೆರೆ, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಬಾಗಲಕೋಟೆ, ಮಲ್ನಾಡ್ ಇಂಜಿನಿಯರಿಂಗ್ ಹಾಸನ, ಎಸ್‌ಎಸ್‌ಐಟಿ ತುಮಕೂರು ಹೀಗೆ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಗೊಂಡಿದೆ. ಇಂದು ನಗರದ ಹೊರವಲಯದ ಅಡ್ಯಾರಿನ ಇಂಜಿನಿರಿಂಗ್ ಕಾಲೇಜಿನಲ್ಲಿ ೩ ದಿನಗಳ ಸೃಷ್ಟಿಯ ೯ನೇ ಸರಣಿ ಕ್ಷಣಗಣನೆಯಲ್ಲಿದೆ.
ಮಹತ್ವದ ಸಾಧನೆ:
ವಿದ್ಯಾರ್ಥಿಗಳ ಮಹತ್ವದ ಸಂಶೋಧನೆಗಳು ಹಣಕಾಸಿನ ನೆರವಿಲ್ಲದೆ ಅಭಿವೃದ್ಧಿಯಾಗದೆ ಉಳಿಯುವುದನ್ನು ತಪ್ಪಿಸಲು ಎ.ಬಿ.ವಿ.ಪಿ.ನೇತೃತ್ವದಲ್ಲಿ ಭಾರತ ಸರಕಾರ ಮತ್ತು ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಸರ್ವಿಸ್ ಇನ್‌ಸ್ಟಿಟ್ಯೂಟ್ (ಎಸ್‌ಐಎಸ್‌ಐ), ನ್ಯಾಶನಲ್ ರಿಸರ್ಚ್ ಡೆವಲಪ್‌ಮೆಂಟ್ ಕೌನ್ಸಿಲ್ (ಎನ್‌ಆರ್‌ಡಿಸಿ), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಬಿಲ್ಡಿಂಗ್ ಮೆಟಿರಿಯಲ್ಸ್ ಆಂಡ್ ಟೆಕ್ನಾಲಜಿ ಪ್ರೊಮೋಷನ್ ಕೌನ್ಸಿಲ್(ಬಿಎಂಟಿಸಿ) ಸಹಭಾಗಿತ್ವದಲ್ಲಿ ಸೃಷ್ಟಿ ಪ್ರೊಡಕ್ಟ್ ಡೆವಲಪ್‌ಮೆಂಟ್ ನೆಟ್‌ವರ್ಕ್ ಸಂಪರ್ಕ ಜಾಲ ರಚಿಸಲಾಗಿ ಈಗಾಗಲೇ ಕಾರ್ಯ ಪ್ರಾರಂಬಿಸಿದೆ. ಸೃಷ್ಟಿ ೨೦೦೫ರಲ್ಲಿ ಭಾಗವಹಿಸಿದ ಅತ್ಯುತ್ತಮ ೩೦ ಪ್ರಾಜೆಕ್ಟ್‌ಗಳನ್ನು ಎಸ್‌ಐಎಸ್‌ಐ ಹಾಗೂ ಡಿಎಸ್‌ಟಿ ಇಲಾಖೆಗಳು ಪರಿಗಣಿದ್ದು, ಅವರಿಗೆ ಮೂರು ತಿಂಗಳ ಮೌಲ್ಯವರ್ಧಿತ ತರಬೆತಿಗಾಗಿ ಆಹ್ವಾನಿಸಲಾಗಿದ್ದು, ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ  ವ್ಯವಸ್ಥೆ ಮಾಡಲಾಗಿದೆ. ಜಾಲಕ್ಕೆ ಹೆಚ್ಚಿನ ಧೃಡತೆ ನೀಡಲು ೨೦೦೫ ಡಿ.೫ರಂದು ರಾಜ್ಯದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಹಾಗೂ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಒಂದು ಒಪ್ಪಂದಕ್ಕೆ ಸಹಿ ಹಾಕಿ ಇದಕ್ಕೆ ಅವಶ್ಯಕವಾದ ಹಣಕಾಸಿನ ನೆರವನ್ನು ಒದಗಿಸಿವೆ.
ಸೃಷ್ಟಿ-೨೦೧೨ರ ವಿಶೇಷ:
೨೩ ಇಂಜಿನಿಯರಿಂಗ್ ಕಾಲೇಜ್‌ಗಳಿರುವ ಕರಾವಳಿಯಲ್ಲಿ ಪ್ರಥಮ ಬಾರಿಗೆ ಸೃಷ್ಟಿ-೨೦೧೨ ನಗರದ ಹೊರವಲಯದಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ರಾಜ್ಯದ ೧೦೦ಕ್ಕೂ ಹೆಚ್ಚಿನ ಕಾಲೇಜಿನಿಂದ ೭೦೦ಕ್ಕೂ ಹೆಚ್ಚಿನ ಪ್ರಾಜೆಕ್ಟ್‌ಗಳು ಬಂದಿದ್ದು, ೨೫೦ ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಾಗುವುದು. ೧೦೦ ಹವ್ಯಾಸಿಯಾಗಿಯೂ ಹಾಗು ೨೦೦ ಟೆಕ್ನಿಕಲ್ ಪೇಪರ್ ಪ್ರೆಸೆಂಟೆಶನ್ ೭ಗುಂಪುಗಳಲ್ಲಿ ವಿಂಗಡಿಸಲಾಗಿದೆ. ೩ಲಕ್ಷದ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕದೊಂದಿಗೆ ೯೦ಕ್ಕೂ ಹೆಚ್ಚು ಬಹುಮಾನವನ್ನು ನೀಡಲಾಗುವುದು. ಸಾಮಾಜಿಕ ಬದಲಾವಣೆ, ಕೃಷಿ ಸುಧಾರಣೆ, ಮೂಲವಿಜ್ಞಾನಕ್ಕೆ ಒತ್ತು ನೀಡುವ ದೃಷ್ಟಿಯಿಂದ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಲಾಗಿದೆ. ಅಂಡರ್ ಸ್ಟ್ಯಾಂಡಿಂಗ್ ಇಂಡಿಯಾ ಎನ್ನುವ ವಿಷಯದಲ್ಲಿ ಶ್ರದ್ದಾಳು ರಾನಡೆ ಮೇ ೧೪ರಂದು ಹಾಗೂ ಔಷಧ ಮತ್ತು ವೈದ್ಯಕೀಯ ವಿಜ್ಞಾನದ ಸಬಲೀಕರಣ-ಅಭಿವೃದ್ಧಿಯ ದೃಷ್ಠಿ ಕುರಿತು ಪ್ರವೀಣ್ ಭಟ್ ಮೇ ೧೩ರಂದು ಉಪನ್ಯಾಸ ನೀಡಲಿದ್ದಾರೆ.
ಸೃಷ್ಟಿಯಿಂದಾಗಿ ಪ್ರತಿಭಾನ್ವಿತ ಯುವ ಮಸ್ತಿಷ್ಕದಿಂದ ಹೊಮ್ಮುವ ಪ್ರತಿಯೊಂದು ಪ್ರಕಲ್ಪಗಳ ಮಾದರಿಗೂ ಮಾನ್ಯತೆ ಸಿಗಲಿದೆ. ದೇಶದ ಜನಸಾಮಾನ್ಯನ ಅವಶ್ಯಕತೆಗಳಿಗೆ ಸ್ಪಂದಿಸುವ ಕೆಲಸವನ್ನು ತಾಂತ್ರಿಕ ವಿದ್ಯಾರ್ಥಿಗಳು ಮಾಡಬೇಕಾಗಿದೆ. ಹೊಸ ಆವಿಷ್ಕಾರವನ್ನು ತರುವುದರ ಜೊತೆಯಲ್ಲಿಯೇ ರಾಷ್ಟ್ರಭಕ್ತಿ, ಸಮಾಜಸೇವೆಯ ಚಿಂತನೆಗಳನ್ನು ಅಳವಡಿಕೊಳ್ಳುವ ಗುಣವನ್ನು ಯುವವಿಜ್ಞಾನಿಗಳು ಬೆಳೆಸಿಕೊಳ್ಳಬೇಕಾದ ಅವಶ್ಯಕತೆಯಿದೆ.


೬ ವರ್ಷಗಳಿಂದ ಸೃಷ್ಟಿಯ ಕಾರ್ಯದಲ್ಲಿ ಪಾಲ್ಗೊಂಡಿದ್ದೇನೆ. ವಿದ್ಯಾರ್ಥಿ ಸಂಘಟನೆಗಾಗಿ ವಿದ್ಯಾರ್ಥಿಗಳ ಕೌಶಲ್ಯ ಗುರುತಿಸುವ ಜೊತೆಗೆ ಸಮಾಜದ ಅವಶ್ಯಕತೆಗಳ ಪೂರೈಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಪರಿಷತ್‌ನ ಈ ಕಾರ್ಯ ಉತ್ಕೃಷ್ಟವಾಗಿದೆ. ವಿದ್ಯಾರ್ಥಿಗಳು ಕೇವಲ ಅಂಕಗಳಿಸುವ ಯಂತ್ರಗಳಾಗದೇ ಸಮಾಜವನ್ನು ಮುನ್ನಡೆಸುವ ನಿಟ್ಟಿನಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಕ್ರಿಯಾಶೀಲರಾದಾಗ, ಇವತ್ತಿನ ನಿರುದ್ಯೋಗ, ಭ್ರಷ್ಟಾಚಾರದಂತ ಸಾಮಾಜಿಕ ಸಮಸ್ಯೆಗಳ ನಿವಾರಣೆ ಜೊತೆಯಲ್ಲಿ ಹಲವಾರು
ಶಿಕ್ಷಣದೊಂದಿಗೆ  ಕೈಗಳಿಗೆ ಕೆಲಸ ನೀಡಬಹುದಾದ ಮಹತ್ ಸಾಧನೆ ಮಾಡಬಹುದು.
ವಿನಯ್ ಬಿದರೆ- ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ

ಅಭಾವಿಪ ಕಾರ್ಯಕರ್ತರಲ್ಲಿರುವ ಉತ್ಸಾಹ, ಕಾರ್ಯತತ್ಪರತೆ, ದೇಶಭಕ್ತಿ, ಉತ್ತಮ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಮನಸ್ಸನ್ನು ಪ್ರಚೋದಿಸಿದಾಗ ಫಲಿತಾಂಶ ಹೊರಹೊಮ್ಮುತ್ತದೆ ಎನ್ನುವುದಕ್ಕೆ ಸೃಷ್ಟಿಯೇ ಸಾಕ್ಷಿಯಾಗಿದೆ. ಕ್ರಿಯಾತ್ಮಕ ಹಾಗೂ ಸಂಶೋಧನಾತ್ಮಕ ಗುಣವುಳ್ಳ ವಿದ್ಯಾರ್ಥಿಗೆ ಇದು ತಳಪಾಯವಾಗಿದೆ. ದೇಶದ ವಿಜ್ಞಾನಿಗಳು ವಿದೇಶದಲ್ಲಿ ಸಾಧನೆ ಮಾಡಿದ್ದಾರೆ. ದೇಶದಲ್ಲಿ ಅಂತಹ ವಾತಾವರಣ ಸೃಷ್ಟಿಗಾಗಿ ಅವರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿ ಧನಾತ್ಮಕ ಚಿಂತನೆಯತ್ತ ಮುನ್ನುಗ್ಗಲು ಸಹಕಾರಿಯಾಗಲಿದೆ.
ಸುಧೀರ್ ಪಿ.ಘಾಟೆ- ಮ್ಯಾಗ್ನಮ್ ಇಂಟರ್‌ಗ್ರಾಫಿಕ್ಸ್‌ನ ಅಧ್ಯಕ್ಷ

ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮವಿದು.ಹಲವಾರು ವಿದ್ಯಾರ್ಥಿಗಳು ಒಂದು ತಿಂಗಳಿನಿಂದ ಪೂರ್ವಭಾವಿ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಮತ್ತು ಕೈಗಾರಿಕೋಧ್ಯಮಿಗಳು ಯುವ ವಿಜ್ಞಾನಿಗಳನ್ನು ಆಯ್ಕೆ ಮಾಡಿ ಪ್ರೋತ್ಸಾಹ ನೀಡುವ ಕಾರ್ಯಕ್ರಮವಾಗಿದೆ. ಪತ್ರಿಕೆಗಳಲ್ಲಿ ಹೋರಾಟ ಮಾಡಲು ಮಾತ್ರ ಎಂದು ಬಿಂಬಿತವಾದ ಎಬಿವಿಪಿಯ ಈ ಕಾರ್ಯಕ್ರಮ ಹುಸಿಗೊಳಿಸಿದೆ. ಜಗತ್ತಿನ ಭೂಪಟದಲ್ಲಿ ಭಾರತದ ವಿದ್ಯಾರ್ಥಿ ಸಮೂಹವನ್ನು  ಗುರುತಿಸಬೇಕೆನ್ನುವ ಆಸೆ ಎಬಿವಿಪಿಯದಾಗಿದೆ.
ರಮೇಶ ಕೆ- ಎಬಿವಿಪಿ ರಾಜ್ಯ ಕಾರ್ಯದರ್ಶಿ




No comments:

Post a Comment