Thursday 10 May 2012

ಮಧ್ಯವರ್ತಿಗಳ ಶೋಷಣೆ: ಬಡವಾಯಿತೆ ಬೀಡಿ ಕಾರ್ಮಿಕರ ಜೀವ...!
-ಸಂದೇಶ ಶೆಟ್ಟಿ ಆರ್ಡಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಸ್ಥಿತಿ ನಿಯಂತ್ರಣ ಮಾಡುತ್ತಿದ್ದ ಬೀಡಿಚಟುವಟಿಕೆಗಳು ಇಂದು ಕಾರ್ಮಿಕರಿಲ್ಲದೆ ಸೊರಗಿಹೋಗಿದೆ. ಇರುವಂಥ  ಕಾರ್ಮಿಕರಿಗೆ ಸಿಗಬೇಕಾಗಿದ್ದ  ಮೂಲಭೂತ ಸೌಲಭ್ಯಗಳು ದೊರಕದೆ ಬೀಡಿ ಚಟುವಟಿಕೆಗಳು ಕುಸಿತಗೊಂಡಿದೆ. ದೈನಂದಿನ ಜೀವನ ನಿರ್ವಹಣೆಗಾಗಿ ಕಾಯಕ ಆರಂಬಿಸಿದ್ದರೂ  ಮಧ್ಯವರ್ತಿಯ ದೌರ್ಜನ್ಯದಿಂದ ಕಾರ್ಮಿಕ ಮಾತ್ರ ಬಳಲಿ ಬೆಂಡಾಗಿ ದಿನನಿತ್ಯ ಹೈರಣಾಗುತ್ತಿದ್ದಾನೆ.
ರಾಜ್ಯದಲ್ಲಿ ೮ ಲಕ್ಷ ಬೀಡಿ ಕಾರ್ಮಿಕರಿದ್ದು, ಅವಿಭಜಿತ ದಕ್ಷಿಣ ಕನ್ನಡದಲ್ಲಿ ೪ ಲಕ್ಷ ಬೀಡಿ ಕಾರ್ಮಿಕರಿದ್ದಾರೆ. ತಮ್ಮ ಜೀವನ ನಿರ್ವಹಣೆಗಾಗಿ ಬೀಡಿ ಕಟ್ಟುವುದನ್ನೆ ವೃತ್ತಿಯನ್ನಾಗಿಸಿಕೊಂಡ ಇವರಿಗೆ ೧೦೦೦ಕ್ಕೆ ಸಿಗುತ್ತಿರುವುದು ಕೇವಲ ೯೩.೨೩ ರೂ. ಹಾಗೂ ತುಟ್ಟಿ ಭತ್ಯೆ ೧ ಪಾಯಿಂಟ್‌ಗೆ ೨.೫೦ ಪೈಸೆ ನೀಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರಕಾರ ಈ ಹಿಂದೆಯೇ ಯಡಿಯೂರಪ್ಪ  ಸಿಎಂ ಆಗಿದ್ದಾಗ ಸಾವಿರ ಬೀಡಿಗೆ ೧೦೩ ಹಾಗೂ ತುಟ್ಟಿಭತ್ಯೆ ಪಾಯಿಂಟ್‌ಗೆ ೪ ಪೈಸೆಯಂತೆ ನೀಡಬೇಕು ಎಂದು ಘೋಷಣೆ ಮಾಡಿದ್ದರು. ಇದಕ್ಕೆ ಕಾರ್ಮಿಕ ಸಂಘಟನೆಗಳಿಂದ ಸಲಹೆ ಸೂಚನೆ ನೀಡುವುದಕ್ಕೆ ಮೂರು ತಿಂಗಳ ಅವಧಿ ನಿಗದಿಯಾಗಿತ್ತು. ಮುಂದಿನ ದಿನದಲ್ಲಿ ಕನಿಷ್ಟ ವೇತನ ಮಂಡಳಿ ಆಯೋಗವು ಬರ್ಖಾಸ್ತು ಆಗಿತ್ತು. ಹೀಗೆ ಕಮಿಟಿ ರಚನೆಯಾಗಿ ಸಮಿತಿಯು ಕರಡು ಪ್ರತಿ ರಚನೆಯಾಗಿ ಸೂಚನೆ ಜಾರಿಯಾಗದೆ  ಹಿಂದಿನ ವೇತನವನ್ನೆ ಕಾರ್ಮಿಕರಿಗೆ ನೀಡುವ ಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಸರಕಾರದಿಂದ ೧೯೭೮ರಲ್ಲಿ ಕಾರ್ಮಿಕ ಕಲ್ಯಾಣ ಸಂಸ್ಥೆ ಪ್ರಾರಂಭವಾಗಿ ಬೀಡಿ ಮಾಲಕರಿಂದ  ಸಾವಿರಕ್ಕೆ ರೂ.೫ ತೆರಿಗೆ ವಸೂಲಿ ಮಾಡಿ ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ದಿಗಾಗಿ ಆರೋಗ್ಯ, ವಸತಿ ಹಾಗೂ ಶಿಕ್ಷಣ ಸೌಲಭ್ಯಗಳನ್ನು ನೀಡಲಾಗುತ್ತಿತ್ತು.
ಕ್ಯಾನ್ಸರ್, ಹೃದ್ರೋಗ, ಮೂತ್ರಪಿಂಡ ಚಿಕಿತ್ಸೆ, ಹೆರಿಗೆ ಸೌಲಭ್ಯ, ಕುಟುಂಬ ಯೋಜನೆ, ಕ್ಷಯ ರೋಗ, ಕುಷ್ಠರೋಗ, ಮಾನಸಿಕ ರೋಗ ಇತರ ಸಮಸ್ಯೆಗಳಿಗೆ  ಕ್ಲಿನಿಕ್ ಮತ್ತು ಸಂಚಾರಿ ಆಸ್ಪತ್ರೆಗಳಲ್ಲಿ ಗುರುತು ಕಾರ್ಡ್ ನೀಡಿ ಚಿಕಿತ್ಸೆಯನ್ನು ಪಡೆಯಬಹುದಾಗಿತ್ತು. ಕಾರ್ಮಿಕ ಭವಿಷ್ಯ ನಿಧಿಗೆ ಸದಸ್ಯರಲ್ಲದವರು ಹಾಗೂ ೧೮ರಿಂದ ೬೦ರ ವಯೋಮಿತಿಯವರು  ಗುರುತಿನ ಚೀಟಿ ಹೊಂದಿರುವ ಕಾರ್ಮಿಕರು ಸಾಮೂಹಿಕ ವಿಮಾ ಯೋಜನೆ ಫಲವನ್ನು ಪಡೆಯಬಹುದಾಗಿತ್ತು.
ವಿದ್ಯಾರ್ಥಿವೇತನ  ಕನಿಷ್ಟ ರೂ ೨೫೦ರಿಂದ ಪ್ರಾರಂಭವಾಗಿ ಗರಿಷ್ಠ ರೂ. ೩ಸಾವಿರ ನೀಡಲಾಗುತ್ತಿತ್ತು. ವಿದ್ಯಾರ್ಥಿ ವೇತನ ವಿಲೇವಾರಿ ಮಾಡುವ ಖಾಸಗಿ ಬ್ಯಾಂಕ್‌ನಲ್ಲಿ ೧ ಲಕ್ಷದ ೩೦೦ಅರ್ಜಿ ಬಂದಿದ್ದು, ೬ ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ವಿಲೆವಾರಿಯಾದ ಪಟ್ಟಿಯಲ್ಲಿ ದಾಖಲಿಸಿದ ಖಾತೆ ಸಂಖ್ಯೆ ವ್ಯತ್ಯಾಸದಿಂದ ಎರಡು ವರ್ಷಗಳಿಂದ ಅದಕ್ಕೂ ಕಲ್ಲು ಬಿದ್ದಿರುವಲ್ಲಿ ಮಧ್ಯವರ್ತಿಗಳ ಹಾಗೂ ಕಾರ್ಮಿಕರ ಅನಕ್ಷರತೆಯೆ ಕಾರಣವಾಗಿದೆ. ದೊಡ್ಡದಾದ ಖಾತೆ ಸಂಖ್ಯೆಯು ಬದಲಾಗಿ ಸಮಸ್ಯೆಯಾಗಿರುವುದು ಒಂದೆಡೆಯಾದರೆ ಹಿಂದೆ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿ ವೇತನವನ್ನು ಶಾಲೆಯ ಅಭಿವೃದ್ಧಿಗಾಗಿ ಬಳಸಲಾಗಿದೆ ಎಂದು ಕೆಲವೆಡೆ ಆಡಳಿತ ಮಂಡಳಿ ಸುಳ್ಳು ಮಾಹಿತಿ ನೀಡಿ ವಂಚಿಸುತ್ತಿದ್ದ ಆರೋಪವು ಕೇಳಿಬಂದಿದೆ.
ಬೀಡಿ ಕಾರ್ಮಿಕನಿಗೆ ಹಕ್ಕು ಪತ್ರವಿದ್ದು, ಮನೆ ಇಲ್ಲದಿದ್ದರೆ ೪೦ ಸಾವಿರ ಸಬ್ಸಿಡಿ ದೊರೆಯುತ್ತಿತ್ತು. ಅವರದು ಒಂದು ಲಕ್ಷದ ಒಳಗಿನ ಯೋಜನೆಯಾಗಿರಬೇಕು. ತಂಬಾಕು ಎಲೆ, ಹೊಗೆಸೊಪ್ಪು, ನೂಲು ನೀಡುವಲ್ಲಿ ಗುತ್ತಿಗೆದಾರರು ನಷ್ಟವಾಗಿದೆ ಎಂದು ನಷ್ಟವಸೂಲಿ ಮಾಡುವ ಪರಿಪಾಠವನ್ನು ಹಮ್ಮಿಕೊಂಡಿದ್ದಾರೆ. ೧ ಕೆ.ಜಿ ಎಲೆಗೆ ಕಂಪೆನಿಯವರು ೧೮೦೦ರಿಂದ ೧೯೦೦ ಕೇಳಿದರೆ  ಮಧ್ಯವರ್ತಿ ಮಾತ್ರ ೨೨೦೦ ಕೇಳುತ್ತಾನೆ. ಕಡಿಮೆ ಬಂದರೆ ದಂಡವನ್ನು ಹೇರಿ ಕೊನೆಗೆ ನೂಲು ಕೂಡ ಇವರು ಹಣಕೊಟ್ಟು ಪಡೆಯುವ ಸ್ಥಿತಿ ನಿರ್ಮಾಣ ಮಾಡುತ್ತಾನೆ. ಸಾವಿರ ಬೀಡಿಯಲ್ಲಿ ಒಂದೆರಡು ಕಟ್ಟನ್ನು  ಮುರಿದು ಹಾಕಿ ದಂಡವನ್ನು ವಸೂಲಿ ಮಾಡಿದ್ದರೂ ತಂಬಾಕನ್ನು ತಾನೆ ಇಟ್ಟುಕೊಳ್ಳುವುದು, ವರ್ಷಕ್ಕೊಮ್ಮೆ ನೀಡುವ ಬೋನಸ್‌ನಲ್ಲಿಯೂ ಕೂಡ ಅವಿದ್ಯಾವಂತ ಬೀಡಿ ಕಾರ್ಮಿಕರಿಂದ ಸಹಿ ಹಾಕಿಸಿಕೊಂಡು ಅನ್ಯಾಯವೆಸಗುತ್ತಿರುವ ಆರೋಪಗಳಿವೆ.
ವರ್ಷದಲ್ಲಿ ೧ಲಕ್ಷ ಬೀಡಿಯಾಗಿದ್ದರೂ ಕೇವಲ ೮೫ ಸಾವಿರಕ್ಕೆ ಮಾತ್ರ ಲೆಕ್ಕ ಕೊಡುವುದು. ಸಾವಿರ ಬೀಡಿಗೆ ೯೩.೨೩ರಂತೆ ನೀಡಿದರೂ ಲಕ್ಷಕ್ಕೆ ೧,೫೩೧ರೂ. ಬೋನಸ್  ನೀಡಬೇಕಾಗುತ್ತದೆ. ಆತ ನೀಡುತ್ತಿರುವುದು ಮಾತ್ರ ೮೦೦ರಿಂದ ೯೦೦ ಮಾತ್ರಎಂದು ದೂರಲಾಗಿದೆ.  ಸಾಮಾನ್ಯವಾಗಿ ಪ್ರತಿಯೊಬ್ಬ  ಕಾರ್ಮಿಕನಿಗೂ ಬೋನಸ್-೮.೩೩%, ರಜಾ ಸಂಬಳ-೫%, ರಾಷ್ಟ್ರೀಯ ಮತ್ತು ಹಬ್ಬದ ರಜೆ-೩.೧೦% ಒಟ್ಟಾಗಿ ೧೬.೪೩% ಕಾರ್ಮಿಕರಿಗೆ ಸಿಗಬೇಕಾಗುತ್ತದೆ. ವ್ಯಕ್ತಿಯೊಬ್ಬ  ವರ್ಷದಲ್ಲಿ ಕನಿಷ್ಟ ೨೪೦ ದಿನ ಕೆಲಸ ಮಾಡಿದರೆ ಮಾತ್ರ ಗ್ರ್ಯಾಚುವಿಟಿ ಪಡೆಯಲು ಅರ್ಹನಾಗಿರುತ್ತಾನೆ. ಆದರೆ ಇವರಿಗೆ  ವಾರದಲ್ಲಿ ೩ ಅಥವಾ ೪ ಹಾಜರಾತಿ ನೀಡಿರುವುದು ಹಾಗೂ ಹಬ್ಬ ಹರಿದಿನಗಳ ವೈಯಕ್ತಿಕ ರಜೆ ಸೇರಿದರೆ  ವರ್ಷದಲ್ಲಿ ೨೪೦ದಿನ ತಲುಪಲು ಸಾಧ್ಯವೇ?
ಬೀಡಿ ಕಾರ್ಮಿಕರಿಂದ ೧೦ ವರ್ಷಕ್ಕಿಂತ ಹೆಚ್ಚಾಗಿ ಕೆಲಸ ಮಾಡಲು ಅವಕಾಶ ನೀಡದೆ ವಂಚಿಸುತ್ತಿದ್ದಾರೆ. ಕೆಲವೊಂದು ಅಂಶಗಳು ಕಾರ್ಮಿಕರಿಗೆ ತಿಳಿಯದೆ ಇರುವುದರಿಂದ ಗುಣಮಟ್ಟದ ಸಂಸ್ಥೆಯೆಂದು ಖ್ಯಾತಿವೆತ್ತ ಹಾಗೂ ಸಣ್ಣ ಬೀಡಿ ಮಾಲಕರಿಂದ ನಿರಂತರ ಶೋಷಣೆಯಾಗುತ್ತಿದೆ. ಇವರ ಅನ್ಯಾಯ ಒಂದೆಡೆಯಾದರೆ  ಹೊಗೆಸೊಪ್ಪಿನ ವಾಸನೆಯಿಂದಾಗಿ ಅಸ್ತಮಾ, ಟಿಬಿ, ಕೆಮ್ಮು, ಮೊಣಕಾಲು, ಹೊಟ್ಟೆಉರಿ, ದೃಷ್ಟಿಮಂದ, ಬೆನ್ನು ನೋವುಗಳಂಥ ದಿನದಿಂದ ದಿನಕ್ಕೆ ಕುಗ್ಗಿಸುವ ಕಾಯಿಲೆಗಳಿಂದ ತತ್ತರಿಸುತ್ತಿದ್ದಾರೆ.  ಬೀಡಿಗಾಗಿ ಓಡಾಟ ಮಾಡುವ ಬೀಡಿ ಕಾರ್ಮಿಕರ ಬದುಕಿನ ಬಂಡಿ ಮಾತ್ರ ಸೌಲಭ್ಯಗಳಿಂದ ವಂಚಿತವಾಗಿದೆ. ಕಾರ್ಮಿಕರಿಗೆ ಇನ್ನಾದರೂ ನ್ಯಾಯ ಸಿಕ್ಕಿತೆ ಎಂದು ಕಾದುನೋಡಬೇಕಾಗಿದೆ.

ರಾಜ್ಯ ಸರಕಾರ ಜಾರಿಗೊಳಿಸಿದ ಕನಿಷ್ಟ ವೇತನ ಮತ್ತು ಕಾಲಕಾಲಕ್ಕೆ ಏರಿಕೆಯಾದ ತುಟ್ಟಿಭತ್ಯೆ, ಬೋನಸ್ ಇತ್ಯಾದಿ ಸೌಲಭ್ಯಗಳನ್ನು  ಬೀಡಿ ಕಾರ್ಮಿಕರ ಕೈಗಳಿಗೆ ನೀಡುತ್ತಿದ್ದರೆ ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಕಂಪೆನಿಯ ಮಾಲಕರಿಗೆ ಮಧ್ಯವರ್ತಿಗಳ ಮೇಲಿನ ಹಿಡಿತವಿಲ್ಲದೆ ಇರುವುದರಿಂದ ಬೀಡಿ ಕಾರ್ಮಿಕರ ಸೌಲಭ್ಯ ಕಸಿದು ಸುಲಭವಾಗಿ ನುಣುಚಿಕೊಳ್ಳುತ್ತಿದ್ದಾರೆ. ಕಾರ್ಮಿಕರಿಗೆ  ಉತ್ತಮ ಎಲೆ  ಹಾಗೂ ಹೊಗೆಸೊಪ್ಪು ನೀಡಿದಾಗ ಗುಣಮಟ್ಟದ ಪ್ರತಿಫಲ ಸಿಗಲು ಸಾಧ್ಯ. -ವಿಶ್ವನಾಥ ಶೆಟ್ಟಿ-ಜಿಲ್ಲಾಧ್ಯಕ್ಷ ಬಾರತೀಯ ಮಜ್ದೂರ್ ಸಭಾ

ಬಡತನದ ಕಾರಣದಿಂದ ೫ನೇ ತರಗತಿಗೆ ಶಾಲಾಜೀವನಕ್ಕೆ ತಿಲಾಂಜಲಿ ಇಟ್ಟು ಜೀವನ ನಿರ್ವಹಣೆಗಾಗಿ ಬೀಡಿ ಕಾಯಕವನ್ನು ಆರಿಸಿಕೊಂಡು ಇಂದಿಗೆ ೩೦ ವರ್ಷಗಳಾಗಿವೆ. ಇತ್ತೀಚಿಗೆ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ದಿನವೊಂದಕ್ಕೆ ೫೦೦ರಿಂದ ೬೦೦ ಬೀಡಿ ಕಟ್ಟಿ, ಮನೆಯ ಕೆಲಸ ಮಾಡಿಕೊಂಡು ಸಂಸಾರ ನಿಭಾಯಿಸಬೇಕಾಗಿದೆ. ಇತ್ತೀಚಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ. -ಬಂಟ್ವಾಳ ಅಬ್ಬಿಗುಡ್ಡೆಯ ರೇವತಿ

೧೩ ವರ್ಷದಿಂದ ಬೀಡಿಕಟ್ಟಿ ಜೀವನ ನಿರ್ವಹಿಸುತ್ತಿದ್ದೇನೆ. ಇದರಿಂದಲೇ ಸಂಸಾರ ನಡೆಯಬೇಕಿದೆ. ಮೊದಲು ಮಕ್ಕಳಿಗೆ ವಿದ್ಯಾರ್ಥಿವೇತನ ದೊರೆಯುತ್ತಿತ್ತು. ಈಗ ಅದನ್ನು ನಿಲ್ಲಿಸಿದ್ದಾರೆ. ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದೇವೆ ಎಂದು ಕಣ್ಣಿರಿಡುತ್ತಾರೆ -ಶಕ್ತಿನಗರದ ದೇವಕಿ.


No comments:

Post a Comment