ರಾಜ್ಯದಲ್ಲಿ ಗುಟ್ಕಾ ನಿಷೇಧ...ಉತ್ತಮ ಆರೋಗ್ಯಕ್ಕಾಗಿ ಈ ಕಾನೂನು
ಕ್ಯಾನ್ಸರ್‌ಕಾರಕ ಗುಟ್ಕಾಕ್ಕೆ ``ಅಡಿಕೆ "ಬಲಿ-ರೈತರಿಗಿಲ್ಲ ಪರ್ಯಾಯ ವ್ಯವಸ್ಥೆ.
ಸುಪ್ರಿಂ ಕೋರ್ಟ್‌ನ ಆದೇಶಕ್ಕೆ ಮಣಿದು ದೇಶದಲ್ಲಿರುವ ೨೨ ರಾಜ್ಯಗಳು ಗುಟ್ಕಾ ನಿಷೇಧಕ್ಕೆ ಮನಮಾಡಿದ್ದು, ೨೩ ನೇ ರಾಜ್ಯವಾಗಿ ಕರ್ನಾಟಕ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವ ತಂಬಾಕು ರಹಿತ ದಿನವಾದ ಮೇ ೩೧ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಟ್ಕಾ ನಿಷೇಧ ಕಾನೂನು ಜಾರಿಗೊಳಿಸಿರುವ ಆದೇಶ ಹೊರಡಿಸಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನಲೆ ಹಾಗೂ ಕೇಂದ್ರ ಸರ್ಕಾರದ ಕಾಯ್ದೆ ಮೇರೆಗೆ ರಾಜ್ಯಾದ್ಯಂತ ಗುಟ್ಕಾ ನಿಷೇಧ ಜಾರಿಯಾಗಲಿವುದರಿಂದ ಅನೇಕ ಕುಟುಂಬಗಳು ಸಂತೋಷಕ್ಕೆ ಒಳಗಾಗಿದ್ದು, ರಾಜ್ಯದಲ್ಲಿರುವ ಅಡಿಕೆ ಬೆಳೆಗಾರರು ಸರಕಾರದ ಈ ನಿರ್ಧಾರದಿಂದ ಆತಂಕಕ್ಕೆ ಒಳಗಾಗಿದ್ದಾರೆ.
ಗುಟ್ಕಾ ಹಾಗೂ ಪಾನ್ ಮಸಾಲ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಯಾವುದೇ ಆಹಾರ ಪದಾರ್ಥಗಳ ಉತ್ಪಾದನೆ, ಸಂಗ್ರಹ, ಮಾರಾಟ ಹಾಗೂ ವಿತರಣೆಯನ್ನು ಮೇ ೩೧ರ ಮಧ್ಯ ರಾತ್ರಿಯಿಂದಲೇ ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಗುಟ್ಕಾ ಪಾನ್ ಮಸಾಲ ನಿಷೇಧ ಕಂಡ ೨೩ ನೇ ರಾಜ್ಯ ಕರ್ನಾಟಕವಾಗಿದೆ. ಗುಟ್ಕಾ ಹಾಗೂ ಪಾನ್ ಮಸಾಲದಲ್ಲಿರುವ ಅಂಶಗಳನ್ನು ಗಮನಿಸಿದರೆ ಸಣ್ಣ ಪ್ರಮಾಣದಲ್ಲಿ ಅಡಿಕೆ ಇರುತ್ತದೆ. ಉಳಿದಂತೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ರಾಸಾಯನಿಕ ಪದಾರ್ಥಗಳೇ ಹೆಚ್ಚಿರುತ್ತದೆ. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ಯಾವ ತೊಂದರೆಯು ಆಗುವುದಿಲ್ಲ ಎನ್ನುವುದು ಆರೋಗ್ಯ ಸಚಿವರ ಅಭಿಪ್ರಾಯವಾಗಿದೆ.
೨೦೦೯ ರಲ್ಲಿ ಗುಟ್ಕಾ ನಿಷೇಧದ ಪ್ರಸ್ತಾಪ ಬಂದಾಗ ದೆಹಲಿಗೆ ಅಡಿಕೆ ಬೆಳೆಗಾರರ ನಿಯೋಗ ಕೊಂಡೊಯ್ಯಲಾಗಿತ್ತು. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕೂಡ ನಿಯೋಗದ ಜೊತೆಯಲ್ಲಿದ್ದು, ಅಡಿಕೆ ಹಾಗೂ ಗುಟ್ಕಾ ನಡುವಿನ ಸಂಬಂಧದ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರ ಬಳಿ ಹೇಳಿ ಕೇಂದ್ರ ಸರ್ಕಾರದ ಮನವೊಲಿಕೆ ಮಾಡಲಾಗಿತ್ತು. ಅಂದು ಅಡಿಕೆ ಬೆಳೆಗಾರರ ಪರವಾಗಿ ಮಾತನಾಡಿದ ಸಿದ್ದರಾಮಯ್ಯ ಇಂದು ಗುಟ್ಕಾ ನಿಷೇಧ ಮಾಡಿ ಅಡಿಕೆ ಬೆಳೆಗಾರರ ಬದುಕು ಕಿತ್ತುಕೊಂಡಂತಾಗಿದೆ ಎನ್ನುವ ಮಾತುಗಳು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಕೇಳಿಬರುತ್ತಿವೆ. ಗುಟ್ಕಾ ನಿಷೇಧದಿಂದ ನೇರವಾಗಿ ಅಡಿಕೆ ಬೆಳೆಗಾರರು ತೊಂದರೆ ಗೀಡಾಗುತ್ತಾರೆ. ಗುಟ್ಕಾದಿಂದಲೇ ಆರೋಗ್ಯ ಕೆಡುತ್ತದೆ ಎನ್ನುವುದು ತಪ್ಪು. ಆದರೆ ಅದುವೇ ನಿಜವಾದರೆ ಅದಕ್ಕಿಂತಲೂ ಮಾರಕವಾದ ಮದ್ಯ, ಸಿಗರೇಟ್ ಮುಂತಾದವುಗಳು ಕೂಡ ಅರೋಗ್ಯಕ್ಕೆ ಹಾನಿಯುಂಟು ಮಾಡುವ ಅಂಶಗಳಲ್ಲವೇ? ಅದನ್ನು ಕೂಡ ನಿಷೇಧಿಸಬೇಕಿತ್ತು. ಆದರೆ ಸರಕಾರ ಮದ್ಯ ಹಾಗೂ ಸಿಗರೇಟ್‌ಗಳನ್ನು ನಿಷೇಧಿಸಲು ಯಾಕೆ ಮುಂದಾಗುತ್ತಿಲ್ಲ? ಇಲ್ಲ ಇಂತಹ ಕಂಪೆನಿಗಳ ಮಾಫಿಯಾಕ್ಕೆ ಬಲಿಯಾಗಿದೆಯೇ ಎನ್ನುವ ಸಂಶಯ ಮೂಡುವುದು ಸಹಜವಲ್ಲವೇ?
ಆರೋಗ್ಯವೇ ಭಾಗ್ಯ ಎನ್ನುವುದು ನಾಣ್ಣುಡಿಯಾದರೂ ಆರೋಗ್ಯವಾಗಿದ್ದಾಗ ಜೀವನದಲ್ಲಿ ಎದುರಿಸುವ ಎಲ್ಲಾ ಸವಾಲುಗಳನ್ನು ಧೈರ್ಯವಾಗಿ ಎದುರಿಸಬಹುದು. ಆದರೆ ಆರೋಗ್ಯವೇ ಕೆಟ್ಟಾಗ ನಾವು ಯಾವ ಕಾರ್ಯ ಮಾಡಲು ಸಾಧ್ಯವಿದೆ. ಸುಪ್ರಿಂ ಕೋರ್ಟ್‌ನ ತೀರ್ಪಿಗೆ ರಾಜ್ಯಸರಕಾರ ಮನ್ನಣೆ ನೀಡದೆ ಹೋದರೆ ಕಾನೂನು ಉಲ್ಲಂಘನೆ ಮಾಡಿದಂತಾಗುತ್ತಿತ್ತಲ್ಲವೇ? ಕಾನೂನು ಪಾಲನೆ ಮಾಡಿದರೆ ರೈತ ವಿರೋದಿ ಸರಕಾರ ಎನ್ನುವ ಹೆಗ್ಗೆಳಿಕೆಗೆ ಪಾತ್ರವಾಗುತ್ತದೆ. ಅದು ಏನೇ ಇದ್ದರೂ, ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಗುಟ್ಕಾವನ್ನು ನಿಷೇಧ ಮಾಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ವ್ಯಾಪಕ ಚರ್ಚೆಗಳು ರಾಜ್ಯಾದ್ಯಂತ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅಡಿಕೆಯ ಉತ್ಪನ್ನಗಳನ್ನು ನಿಷೇಧಿಸುವುದು ಸರಿಯಲ್ಲ. ಆರೋಗ್ಯಕ್ಕೆ ಹಾನಿಯಾಗುವ ತಂಬಾಕಿನ ಅಂಶವನ್ನು ನಿಷೇಧ ಮಾಡಬೇಕು. ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿಗೆ ಮಾನ್ಯತೆ ನೀಡಿ ರಾಜ್ಯ ಸರಕಾರ ಕೈಗೊಂಡ ನಿರ್ಧಾರ ಯೋಗ್ಯವಾದರೂ, ಅಡಿಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಅಳವಡಿಸದೆ ನಿಷೇಧ ಮಾಡಿರುವುದು ನ್ಯಾಯವಲ್ಲ. ಸುಪ್ರಿಂ ಕೋರ್ಟ್ ಮತ್ತು ರಾಜ್ಯ ಸರಕಾರದ ನಿರ್ಧಾರದಿಂದ ಹಲವಾರು ವರ್ಷಗಳಿಂದ ಅಡಿಕೆ ಬೆಳೆಗಾರರು ತಮ್ಮ ಜೀವನ ನಿರ್ವಹಣೆಗೆ ಅಡಿಕೆ ಕೃಷಿಯನ್ನು ನಂಬಿಕೊಂಡಿದ್ದು, ಅಡಿಕೆಯ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಂತಾಗಿ ಅವರನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ ಎಂದು ಅವರು ಟೈಮ್ಸ್ ಆಫ್ ದೀನಬಂದು ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆಯನ್ನು ತೋಡಿಕೊಂಡರು.
ಪ್ರ:ಅಡಿಕೆ ಬೆಳೆಗಾರರ ಸಂಘದ ಹುಟ್ಟು ಹೇಗೆ ಮತ್ತು ಯಾಕಾಗಿ?
ಉ:ಅಡಿಕೆ ಬೆಳೆಗಾರರ ಸವಾಲು-ಸಂಕಷ್ಟಗಳಿಗೆ ಪರಿಹಾರ ಒದಗಿಸುವ ಗುರಿಯನ್ನಿರಿಸಿಕೊಂಡು, ಸರಕಾರ ಮತ್ತು ಸರಕಾರಿ ಅಧೀನದಲ್ಲಿರುವ ಸಂಶೋಧನಾ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲು ಮತ್ತು ಅಡಿಕೆ ಬೆಳೆಯ ದರ ಕುಸಿತವಾದಾಗ ಬೆಂಬಲ ಬೆಲೆ ಹಾಗೂ ಮಾರುಕಟ್ಟೆಯನ್ನು ವ್ಯವಸ್ಥೆಗೊಳಿಸಲು ಸಂಘ ಸ್ಥಾಪನೆಯಾಗಿತ್ತು. ಅಡಿಕೆ ಪತ್ರಿಕೆಯನ್ನು ಹುಟ್ಟುಹಾಕಿ ಅಡಿಕೆ ಬೆಳೆಗಾರರ ಸಮಸ್ಯೆ ಹಾಗೂ ಸವಾಲುಗಳ ಲೇಖನದ ಮೂಲಕ ರೈತರನ್ನು ಜಾಗೃತಗೊಳಿಸುವಲ್ಲಿ ಶ್ರಮಿಸಿದ್ದೇವು. ಕೃಷಿ ಭೂಮಿ ಇದ್ದರೆ ಸಾಲುವುದಿಲ್ಲ. ಕೃಷಿಯಾಳುಗಳ ಸಮಸ್ಯೆಯಿದ್ದಾಗಲೂ ಅದನ್ನು ವ್ಯವಸ್ಥಿತವಾಗಿ ಮುಂದುವರಿಸಿಕೊಂಡು ಹೋಗುವ ರೈತರ ಪಾಲಿಗೆ ಗುಟ್ಕಾ ನಿಷೇಧದಿಂದ ದಿಕ್ಕು ತೋಚದಂತಾಗಿದೆ.
ಪ್ರ: ರಾಜ್ಯದಲ್ಲಿ ಅಡಿಕೆ ಬೆಳೆಗಾರರು ಎಷ್ಟಿದ್ದಾರೆ? ಉತ್ಪಾದನೆ ಹೇಗಿದೆ?
ಉ: ರಾಜ್ಯದಲ್ಲಿ ಅಂದಾಜು ೩೦ಲಕ್ಷ ಕುಟುಂಬಗಳು ಅಡಿಕೆ ಕೃಷಿಯನ್ನು ಅವಲಂಬಿಸಿದ್ದು, ಅವರಲ್ಲಿ ಶೇ.೯೦ರಷ್ಟು ಚಿಕ್ಕ ಕೃಷಿಕರಾಗಿದ್ದಾರೆ. ದೇಶದಲ್ಲಿನ ೬ ಲಕ್ಷ ಟನ್ ಅಡಿಕೆ ಉತ್ಪಾದನೆಯಲ್ಲಿ ೩ ಲಕ್ಷ ಟನ್ ರಾಜ್ಯದಲ್ಲಿಯೇ ಬೆಳೆಯುತ್ತಿದ್ದಾರೆ. ಬೆಲೆ ಏರಿಕೆಯ ಕಾಲಘಟ್ಟದಲ್ಲಿ ಲಾಭವಿಲ್ಲದಿದ್ದರೂ, ಜೀವನ ನಿರ್ವಹಣೆಗಾಗಿ ಹೆಣಗಾಡುತ್ತಿದ್ದಾರೆ. ಕೂಲಿ ಕಾರ್ಮಿಕರ ಅಭಾವ, ಗೊಬ್ಬರ, ಕೀಟನಾಶಕ ಸಿಂಪಡನೆ, ಯಂತ್ರೋಪಕರಣಗಳ ಬೆಲೆ ಹೆಚ್ಚಳದಿಂದ ಲಾಭಾಂಶವಿಲ್ಲದಿದ್ದರೂ ಅದರಲ್ಲಿಯೇ ರೈತರು ತೃಪ್ತರಾಗಿದ್ದಾರೆ. ಬೆಳೆದ ಬೆಳೆಗೆ ಬೇಡಿಕೆ ಕಡಿಮೆಯಾದಾಗ ಮಾರಾಟಗಾರರು ಕೃತಕ ಸಮಸ್ಯೆಯನ್ನು ಸೃಷ್ಠಿಸಿ, ಲಾಭ ಗಳಿಸಿಕೊಳ್ಳುತ್ತಾರೆ.
ಪ್ರ: ಆರೋಗ್ಯಯುತ ಜೀವನ ನಡೆಸಲು ಗುಟ್ಕಾ ನಿಷೇಧ ನ್ಯಾಯವಲ್ಲವೇ?
ಉ: ದೇಶದಲ್ಲಿನ ಒಟ್ಟು ಅಡಿಕೆ ಉತ್ಪಾದನೆಯಲ್ಲಿ ಶೇ.೫೦ರಷ್ಟನ್ನು ರಾಜ್ಯದಲ್ಲಿಯೇ ಬೆಳೆಯುತ್ತಿದ್ದಾರೆ. ಗುಟ್ಕಾ ನಿಷೇಧದಿಂದ ಅಡಿಕೆಯ ಬೇಡಿಕೆ ಕುಸಿತಗೊಂಡು ಮಧ್ಯವರ್ತಿಗಳು ಇದರಿಂದ ಸಾಕಷ್ಟು ಲಾಭಗಳಿಸುತ್ತಾರೆ. ಆರೋಗ್ಯ ದೃಷ್ಟಿಯಿಂದ ಗುಟ್ಕಾ ಉತ್ಪನ್ನ ನಿಷೇಧಿಸಿದ್ದೇವೆ ಎನ್ನುವಾಗ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಕ್ಕರೆ, ಮೈದಾದಲ್ಲಿಯೂ ಹಾನಿಯಿದೆ ಎನ್ನುವ ಅಂಶ ಮನಗಾಣಬೇಕಿದೆ. ಮದ್ಯ, ಸಿಗರೇಟ್ ನಿಷೇಧಿಸದೆ ದೇಹದ ಆರೋಗ್ಯ ರಕ್ಷಣೆ ಮಾಡುತ್ತೇವೆ ಎನ್ನುವ ನೆಲೆಯಲ್ಲಿ ಗುಟ್ಕಾ ನಿಷೇಧ ಮಾಡುವುದು ನ್ಯಾಯವೇ?
ಪ್ರ: ಗುಟ್ಕಾ ಕ್ಯಾನ್ಸರ್‌ಕಾರಕ ಎನ್ನುವ ಮಾತು ಸುಳ್ಳೆ?
ಉ: ಗುಟ್ಕಾ ಉತ್ಪನ್ನದಲ್ಲಿ ಶೇ.೮೦ರಷ್ಟು ಅಡಿಕೆಯಾಗಿದ್ದು, ಶೇ.೫ ರಷ್ಟು ತಂಬಾಕಿನ ಅಂಶಗಳಿದ್ದು ಉಳಿದಂತೆ ಇತರ ಅಂಶಗಳನ್ನು ಮಿಶ್ರಣ ಮಾಡಿರುತ್ತಾರೆ. ಒಂದು ಪ್ಯಾಕ್ ಗುಟ್ಕಾದಲ್ಲಿ ಶೇ.೫ ರಷ್ಟಿರುವ ತಂಬಾಕು ಮನುಷ್ಯನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುತ್ತದೆ. ಕಡಿಮೆ ಅಂಶವಿರುವ ತಂಬಾಕು ಕ್ಯಾನ್ಸರ್‌ಗೆ ಕಾರಣವಾಗುತ್ತದೆಯೇ ಹೊರತು ಅಡಿಕೆಯಲ್ಲ. ಆದ್ದರಿಂದ ಗುಟ್ಕಾವನ್ನು ನಿಷೇಧಿಸುವುದು ಸರಿಯಲ್ಲ. ತಂಬಾಕು ಬೆಳೆಸದಿದ್ದರೆ ಬೇರೆ ಬೇರೆ ವಿಧಾನಗಳಲ್ಲಿ ಅವರಿಗೆ ೫ ಲಕ್ಷ ರೂ.ವರೆಗೆ ಪರಿಹಾರ ನೀಡುವಂತೆ, ಸರಕಾರವು ಗುಟ್ಕಾ ನಿಷೇಧದಲ್ಲಿಯೂ ಅಡಿಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು.
ಪ್ರ: ಅಡಿಕೆಯಿಂದ ಕ್ಯಾನ್ಸರ್ ಸಂಭವಿಸಿದ ಘಟನೆಗಳು ಎಲ್ಲಿಯಾದರೂ ವರದಿಯಾಗಿವೆಯೇ?
ಉ: ಅಡಿಕೆಯ ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎನ್ನುವುದನ್ನು ಯಾವ ಸಂಶೋಧನಕಾರನು ತಿಳಿಸಿಲ್ಲ. ದೇಶದಲ್ಲಿ ಶೇ.೬೦ರಷ್ಟು ಕೆಂಪು ಹಾಗೂ ಶೇ.೪೦ರಷ್ಟು ಬಿಳಿ ಅಡಿಕೆ ಉತ್ಪಾದನೆಯಾಗುತ್ತದೆ. ರಾಜ್ಯದಲ್ಲಿ ಸಿಗುವ ಕೆಂಪುಅಡಿಕೆಯು ಬೆಲೆ ಜಾಸ್ತಿಯಾಗಿರುವುದರಿಂದ ಗುಟ್ಕಾ ಉತ್ಪನ್ನಗಳಿಗೆ ಬಳಕೆ ಮಾಡುವುದು ಕಡಿಮೆ. ಗುಟ್ಕಾ ಉತ್ಪನ್ನಗಳಿಗೆ ತಂಬಾಕು ಬಳಕೆ ಮಾಡಿದಾಗ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಬದನಾಜೆ ಶಂಕರ ಭಟ್ ಅಡಿಕೆಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿದ್ದು, ಕೇವಲ ಅಡಿಕೆಯನ್ನು ಮಾತ್ರ ತಿನ್ನಬಾರದು. ಸುಗಂಧ ದ್ರವ್ಯಗಳೊಂದಿಗೆ ಅಡಿಕೆಯನ್ನು ಸೇವಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಅಂಶವನ್ನು ತಿಳಿಯಪಡಿಸಿದ್ದರು.
ಪ್ರ: ಗುಟ್ಕಾ ನಿಷೇಧ ಕುರಿತ ಸರಕಾರದ ನಿರ್ಧಾರಕ್ಕೆ ನಿಮ್ಮ ನಿಲುವು?
ಉ: ಅಡಿಕೆಯೇ ಮೂಲಧಾರವಾಗಿರುವ ಗುಟ್ಕಾದಲ್ಲಿ ತಂಬಾಕಿನ ಅಂಶವನ್ನು ನಿಷೇಧಿಸಬೇಕೆ ಹೊರತು ಗುಟ್ಕಾಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ. ೮-೧೦ ವರ್ಷದ ಮಕ್ಕಳಿಗೆ ಅವ್ಯಾಹತವಾಗಿ ಗುಟ್ಕಾ ಉತ್ಪನ್ನಗಳು ಸಿಗುತ್ತಿದೆ ಎನ್ನುವ ಕಾರಣ ನೀಡುತ್ತಿರುವುದು ಬಾಲಿಶತನ. ಮಂಗಳೂರಿನಂತಹ ನಗರ ಪ್ರದೇಶದಲ್ಲಿ ಡ್ರಗ್ಸ್-ಗಾಂಜಾಗಳು, ಶಾಲಾ-ಕಾಲೇಜು ಮಕ್ಕಳು ಬಯಸಿದಾಗ ಸಿಗುತ್ತದೆ. ೧೬ ವರ್ಷದೊಳಗಿನ ಮಕ್ಕಳಿಗೆ ಮದ್ಯ ನೀಡಬಾರದು ಎನ್ನುವ ಕಾನೂನು ಇದ್ದರೂ ಅದನ್ನು ಪಾಲಿಸುತ್ತಿಲ್ಲ. ಮೊದಲು ತಂಬಾಕು ವಸ್ತುಗಳು ಡಬ್ಬದಲ್ಲಿ ಸಿಗಲು ಪ್ರಾರಂಭವಾದಾಗ ಗುಟ್ಕಾದ ಬೇಡಿಕೆ ಕಡಿಮೆಯಾಗಿತ್ತು. ೧೯೮೫ ರ ಸುಮಾರಿಗೆ ಪ್ಯಾಕೆಟ್‌ಗಳಲ್ಲಿ ಗುಟ್ಕಾ ಸಿಗಲು ಪ್ರಾರಂಭಿಸಿದಾಗ ಅದರ ಬೇಡಿಕೆ ಒಮ್ಮೆಲೆ ಜಾಸ್ತಿಯಾಯಿತು. ಮಕ್ಕಳಿಗೆ ಗುಟ್ಕಾ ಸಿಗುತ್ತದೆ ಎನ್ನುವಲ್ಲಿ ಪೋಷಕರ ನಿರ್ಲಕ್ಷ್ಯವೂ ಇದೆಯಲ್ಲವೇ? ವ್ಯಕ್ತಿಯು ಅಮಲು ಪದಾರ್ಥ ಸೇವಿಸಿದಾಗ ನಂತರದ ದಿನದಲ್ಲಿ ಮನಸ್ಸು ಹಾಗೂ ದೇಹ ಕೇಳುವುದಿಲ್ಲ. ಹವ್ಯಾಸಕ್ಕೆಂದು ಮಾಡಿದ ಅಭ್ಯಾಸವೇ ಮುಂದುವರಿದಾಗ ಅದು ಚಟವಾಗಿ ಮಾರ್ಪಡುತ್ತದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ. ಹಾಗಿರುವಾಗ ಗುಟ್ಕಾದಲ್ಲಿರುವ ತಂಬಾಕಿನ ಅಂಶ ಜಾಸ್ತಿಯಾದಾಗ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರ: ನಿಮ್ಮ ಪ್ರಕಾರ ಇದಕ್ಕೆ ಪರ್ಯಾಯ ವ್ಯವಸ್ಥೆ ಯಾವ ರೀತಿ?
ಉ: ಅಡಿಕೆಯನ್ನು ಉಪಯೋಗಿಸಿ, ಸುಗಂಧ ವಸ್ತುಗಳನ್ನು ತಯಾರಿಸುವುದಕ್ಕೆ ಅವಕಾಶ ಕಲ್ಪಿಸಬೇಕು. ಗುಟ್ಕಾ ನಿಷೇಧಿಸುವುದರ ಹೊರತಾಗಿ ಯಾವುದೇ ದುಷ್ಪರಿಣಾಮ ಇಲ್ಲದ ಉತ್ಪನ್ನಗಳ ತಯಾರಿಕೆಗೆ ಪ್ರೇರಣೆ ನೀಡಬೇಕು. ಉದಾ: ಸಿರಸಿಯ ತೋಟಗಾರ ಸರ್ವಿಸ್ ಸೊಸೈಟಿಯಲ್ಲಿ ೧೩ ಲಕ್ಷ ಟನ್ ಅಡಿಕೆಯಿಂದ ೪೦ಲಕ್ಷದಷ್ಟು ರಾಸಾಯನಿಕ ಮತ್ತು ತಂಬಾಕಿನ ಅಂಶಗಳನ್ನು ಬಳಸದೆ ಪಾನ್ ಸುಪಾರಿ, ಸಿಹಿ ಪೊಟ್ಟಣಗಳಂತಹ ೯ ಬಗೆಯ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಅಡಿಕೆಯ ಉತ್ಪನ್ನಗಳಿಗೆ ಬೇಡಿಕೆಯಿದ್ದು, ಆರೋಗ್ಯಕ್ಕೆ ಹಾನಿಯಾಗುವ ಅಂಶಗಳನ್ನು ಇವುಗಳಿಂದ ಬೇರ್ಪಡಿಸಿ, ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಅಡಿಕೆಯಿಂದ ಹೊಸ ಹೊಸ ಉತ್ಪನ್ನಗಳನ್ನು ಕಂಡು ಹಿಡಿಯಲು ಸರಕಾರ ಹಾಗೂ ಸಂಶೋಧನಾ ಕೇಂದ್ರಗಳು ಕಾರ್ಯ ತತ್ಪರರಾಗಬೇಕು.
ಒಟ್ಟಿನಲ್ಲಿ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿರುವುದಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿವೆ. ಗುಟ್ಕಾ ವಿರೋಧಿಸುವವರ ಗುಂಪು ಈ ತೀರ್ಪಿನಿಂದ ಸಂತೋಷಗೊಂಡಿದ್ದು, ಗುಟ್ಕಾ ಅಭಿಮಾನಿಗಳು ಮಾತ್ರ ಇದಕ್ಕೆ ಪರ್ಯಾಯವಾಗಿ ಯಾವ ಉತ್ಪನ್ನಗಳು ಮಾರುಕಟ್ಟೆಗೆ ಬರಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಗುಟ್ಕಾ ನಿಷೇಧದಿಂದ ಹಲವಾರು ಗೋಡೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಶುಭ್ರತೆಯನ್ನು ಕಾಪಾಡಲು ಸಹಕಾರಿಯಾಗಿದ್ದು, ಅನೇಕ ಯುವಮನಸ್ಸುಗಳು ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಯಲು ಸಹಾಯಕವಾಗಲಿದೆ. ಆದರೆ ಗುಟ್ಕಾ ನಿಷೇಧ ನ್ಯಾಯವಾದುದಾದರೂ ಅಡಿಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರಕಾರದ ಜವಾಬ್ದಾರಿಯಾಗಿದೆ.
ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರ ರೈತರ ಅಭಿಪ್ರಾಯಗಳು ಹೀಗಿವೆ ನೋಡಿ:
ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ, ಗೋಹತ್ಯಾ ನಿಷೇಧ ದಂತಹ ಕಾಯ್ದೆಯನ್ನು ಜಾರಿಗೊಳಿಸುವ ಬದಲು ಏಕಾಏಕಿ ಗುಟ್ಕಾ ನಿಷೇಧ ಜಾರಿಗೆ ತಂದಿರುವುದು ಸರಿಯಲ್ಲ. ಇದರಿಂದ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಆಗತ್ತೆ. ಅಡಿಕೆ ಬೆಳೆಗಾರರ ಬಗ್ಗೆ ಸರ್ಕಾರ ಮೊದಲು ಚಿಂತನೆ ನಡೆಸಬೇಕಿತ್ತು. ಗುಟ್ಕಾ ನಿಷೇಧದ ಬಗ್ಗೆ ಅಡಿಕೆ ಬೆಳೆಗಾರರ ಅಭಿಪ್ರಾಯವನ್ನು ಒಮ್ಮೆಯಾದರೂ ಕೇಳಬೆಕಿತ್ತು. ಹೀಗೆ ಇದ್ದಕ್ಕಿದ್ದಂತೆ ಕಾಯ್ದೆ ಜಾರಿ ಮಾಡುವ ಬದಲು ಕೆಲದಿನ ಕಾದು ನೋಡಿ, ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿತ್ತು. ಗುಟ್ಕಾ ನಿಷೇಧ ಜಾರಿ ಮಾಡಿ ಸರ್ಕಾರ ಒಮ್ಮೆಲೆ ಅಡಿಕೆ ಬೆಳೆಗಾರರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಅಡಿಕೆಯನ್ನೇ ನಂಬಿರುವ ನಮ್ಮಂತಹ ಬೆಳೆಗಾರರು ಮುಂದೇನು ಮಾಡ್ಬೇಕು?
ರಘು ಶೆಟ್ಟಿ ಕೊಪ್ಪ - ಅಡಿಕೆ ಬೆಳೆಗಾರರು.
ಮೊದಲೇ ರಾಜ್ಯದಲ್ಲಿ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಈಗಾಗಲೇ ಅಡಿಕೆಗೆ ಬೆಲೆ ಕಡಿಮೆಯಾಗಿದೆ. ಈಗ ಗುಟ್ಕಾ ನಿಷೇಧ ಮಾಡುವುದರಿಂದ ಪರೋಕ್ಷವಾಗಿ ಪರಿಣಾಮ ಬಿರುತ್ತದೆ. ಇದರಿಂದ ಅಡಿಕೆ ಬೆಳೆಯನ್ನೇ ವಾಣಿಜ್ಯ ಬೆಳೆಯಾಗಿ ನಂಬಿರುವ ಕರಾವಳಿ ಭಾಗದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.
ಬಾಲಕೃಷ್ಣ - ಕೃಷಿಕ ಅಮವಾಸೆಬೈಲು
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಗುಟ್ಕಾ ನಿಷೇಧ ಒಳ್ಳೆಯದೇ. ಆದರೆ ಪ್ರಸ್ತುತ ರಾಜ್ಯದಲ್ಲಿ ಕೆಲ ವರ್ಷಗಳ ಹಿಂದೆ ಇದ್ದಷ್ಟು ಗುಟ್ಕಾ ಸೇವನೆ ಮಾಡುವವರು ಇಲ್ಲಾ. ಬಹಳಷ್ಟು ಕಡಿಮೆಯಾಗಿದ್ದಾರೆ. ಬಹುತೇಕ ಭಾಗಗಳಲ್ಲಿ ಅಡಿಕೆಯನ್ನೇ ಪ್ರಮುಖ ಬೆಳೆ, ಜೀವನಾಧಾರವನ್ನಾಗಿ ಅವಲಂಭಿಸಿದ್ದಾರೆ. ಯುವಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಗುಟ್ಕಾ ನಿಷೇಧ ಜಾರಿಗೆ ತಂದಿರುವುದಾಗಿ ಹೇಳುತ್ತಿರುವ ಸರ್ಕಾರ, ಅಡಿಕೆ ಬೆಳೆಗಾರರ ಬಗ್ಗೆಯೂ ಯೋಚಿಸ ಬೇಕಿತ್ತು. ರೈತರ ಸಮಸ್ಯೆ ನಿವಾರಣೆಗೆ ಮೊದಲು ಪರ್ಯಾಯ ವ್ಯವಸ್ಥೆ ಕೈಗೊಂಡು ಬಳಿಕ ಗುಟ್ಕಾ ನಿಷೇಧ ಮಾಡಬೇಕಿತ್ತು.
ಸುಭಾಷ್ ಪುತ್ತೂರು.
ಗುಟ್ಕಾ ನಿಷೇಧದ ಉದ್ದೇಶ ಒಳ್ಳೆಯದಾದರೂ ಇದರಿಂದ ಅಡಿಕೆ ಬೆಳೆ ಮೇಲೆ ಪರಿಣಾಮ ಬೀರುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರ ಗುಟ್ಕಾ ನಿಷೇಧ ಜಾರಿ ಮಾಡಬೆಕಿತ್ತು. ರಾಜ್ಯದಲ್ಲಿ ಗುಟ್ಕಾ ತಿನ್ನುವವರ ಸಂಖ್ಯೆಗಿಂತ ಮಧ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಗುಟ್ಕಾ ನಿಷೇಧ ಮಾಡುವುದಕ್ಕೂ ಮುನ್ನ ಮದ್ಯ ಮಾರಾಟ ಮತ್ತು ಸೇವನೆಗೆ ನಿಷೇಧ ಹೇರಬೇಕಿತ್ತು. ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗದು. ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಸ್ಪಂದಿಸುತ್ತೇವೆ ಎಂದು ಈಗ ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಕೆಲ ದಿನದ ಬಳಿಕ ತಾವು ಹೇಳಿದ ಭರವಸೆಯನ್ನೇ ಮರೆತು ಬಿಡುತ್ತಾರೆ. ರಾಜ್ಯದಲ್ಲಿ ರೈತರ ಸ್ಥಿತಿಯೇ ಸಂಕಷ್ಟದಲ್ಲಿದೆ ಹೀಗಿರುವಾಗ ಈ ಬಗ್ಗೆ ಯೋಚಿಸದ ಸರ್ಕಾರ ಅಡಿಕೆ ಬೆಳೆ ರೈತರ ಬಗ್ಗೆ ಯೊಚಿಸುತ್ತದೆ ಎಂಬ ವಿಶ್ವಾಸ ನಮಗಿಲ್ಲ.
ರಾಮಕೃಷ್ಣ - ಶಿವಮೊಗ್ಗ
No comments:
Post a Comment