Friday, 21 June 2013


ಸೋರುತಿಹುದು ಗ್ರಂಥಾಲಯದ ಮಾಳಿಗೆ-ವಿಶ್ವವಿದ್ಯಾನಿಲಯ ಕಾಲೇಜಿನ ಅವ್ಯವಸ್ಥೆ.
ಮಂಗಳೂರು: ಪ್ರಾಥಮಿಕ-ಪ್ರೌಡಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕು ಗೊಳಿಸುತ್ತಿರುವುದನ್ನು ಮನಗಂಡು, ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಡೆಸುತ್ತಿದೆ. ಇನ್ನೊಂದೆಡೆ ವಿದ್ಯಾರ್ಜನೆ ಮಾಡಬೇಕೆನ್ನುವ ನೆಲೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದರೂ, ಉನ್ನತ ಶಿಕ್ಷಣ ನೀಡುವ ಕಾಲೇಜುಗಳು ಅವ್ಯವಸ್ಥೆಯ ಆಗರಗಳಾಗುತ್ತಿರುವುದಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಎಂದಾಗ ಆಶ್ಚರ್ಯ ಪಡಲೇ ಬೇಕು. 
ಮಂಗಳೂರು ನಗರದ ಹೃದಯ ಭಾಗದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಆಡಳಿತವಿದ್ದಾಗ ಕಾರ್ಯಾರಂಭಗೊಳಿಸಿತ್ತು. ೧೮೬೮ ರಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಪ್ರಾರಂಭಗೊಂಡಾಗ ಗ್ರಂಥಾಲಯ ರಚಿಸಲಾಗಿದ್ದು, ಅತ್ಯಂತ ಪುರಾತನವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ೨೦೦೦ದಲ್ಲಿ ವಿವಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದ ಅಪತ್ಯಕ್ಕೆ ವಹಿಸಿದ ನಂತರ ನೂತನ ಗ್ರಂಥಾಲಯವನ್ನು ಕಾಲೇಜಿನ ಹಿಂಬಾಗದಲ್ಲಿ ನಿರ್ಮಾಣ ಮಾಡಲಾಗಿದೆ.
ತರ್ಕಶಾಸ್ತ್ರ, ಇತಿಹಾಸ, ಆಡಳಿತಾತ್ಮಕ, ಕಾನೂನು, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯಕ್ಕೆ ಸಂಬಂಸಿದ ಪುಸ್ತಕಗಳು ಸೇರಿದಂತೆ ಕಲೆ, ಸಾಹಿತ್ಯ, ಕಾದಂಬರಿ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭ್ಯವಿದೆ. ಅತ್ಯಂತ ಹಳೆಯದಾದ ನಿಘಂಟುಗಳ ಸಂಗ್ರಹವು ಕೂಡ ಈ ಗ್ರಂಥಾಲಯದಲ್ಲಿದ್ದು, ವಿದ್ಯಾರ್ಥಿಗಳ ಜ್ಞಾನದ ವೃದ್ಧಿಗೆ ಸಹಕಾರಿಯಾಗಿದೆ. ಕೇರಳದ ಗೋವಿಂದ ಕೃಷ್ಣ ಚೆಟ್ಟೂರ್ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪೂರೈಸಿ, ಈ ಕಾಲೇಜಿನ ಪ್ರಾಂಶುಪಾಲರಾದ ಸಂದರ್ಭ ಅಲ್ಲಿ ಪ್ರಕಟಗೊಂಡ ಅನೇಕ ಪುಸ್ತಕಗಳನ್ನು ಇಲ್ಲಿಗೆ ತರಿಸಿಕೊಂಡಿದ್ದರು. ಈಗಲೂ ಅವರ ಸಂಗ್ರಹಗಳು ಕಾಲೇಜಿನ ಗ್ರಂಥಾಲಯದಲ್ಲಿರುವುದು ವಿದ್ಯಾರ್ಥಿಗಳ ಸೌಭಾಗ್ಯ. ವಿದ್ಯಾರ್ಥಿಗಳಿಗೆ ಕಾಲೇಜು ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಯಲ್ಲಿಯೂ, ಪ್ರಸ್ತುತ ರಾಜಕೀಯ, ಕ್ರೀಡೆ, ಸಾಹಿತ್ಯ ಇತ್ಯಾದಿ ವಿಷಯಗಳನ್ನು ತಿಳಿಯಲು ಕನ್ನಡ, ಇಂಗ್ಲೀಷ್, ಹಿಂದಿ, ಮಲೆಯಾಳಂ ಭಾಷೆಯ ಪತ್ರಿಕೆಗಳು ಇಲ್ಲಿ ಲಭ್ಯವಿದೆ.
ಸೋರುತಿಹುದು ಗ್ರಂಥಾಲಯದ ಮಾಳಿಗೆ:
ಸಂತ ಶಿಶುನಾಳ ಷರೀಪರ ಸೋರುತಿಹುದು ಮನೆಯ ಮಾಳಿಗೆ...ಎನ್ನುವ ಪದ್ಯವನ್ನು ಯಥಾವತ್ತಾಗಿ ಕಾಲೇಜಿನ ಆಡಳಿತ ಮಂಡಳಿ ಪಾಲನೆ ಮಾಡಿದಂತಿದೆ. ದೂರದ ಊರುಗಳಿಂದ ಹಾಗೂ ಅನ್ಯರಾಜ್ಯಗಳಿಂದ ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ದಕ್ಷಿಣ ಕನ್ನಡ ಮಾತ್ರವಲ್ಲದೇ ಇತರ ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದುಕೊಂಡು ಈ ಕಾಲೇಜ್‌ನಲ್ಲಿ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಗ್ರಂಥಾಲಯ ವಿಶಾಲವಾಗಿದ್ದು, ಪುಸ್ತಕಗಳನ್ನಿಡಲು ಮರದಿಂದ ರಚಿಸಿ ಕಪಾಟು, ವಾಚನಾಲಯ ಎಲ್ಲವನ್ನು ಆಧುನಿಕತೆಗೆ ತಕ್ಕಂತೆ ಅಳವಡಿಸಿ ಕೊಂಡಿದ್ದಾರೆ. ಗ್ರಂಥಾಲಯ ನಿರ್ಮಾಣವಾಗಿ ಹಲವು ವರ್ಷಗಳು ಕಳೆದು, ಪ್ರತಿ ಬಾರಿ ರಿಪೇರಿಯಾಗುತ್ತಿದೆಯಾದರೂ, ಗ್ರಂಥಾಲಯದೊಳಗೆ ಮಾತ್ರ ನೀರು ನಿಂತುಕೊಂಡಿರುತ್ತದೆ. ಜನಾರ್ದನ ಎನ್ನುವ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಅಲ್ಲಲ್ಲಿ ಸೋರುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ, ಪುಸ್ತಕಗಳನ್ನು ಒದಗಿಸುತ್ತೇವೆ ಎನ್ನುವ ಕಾಲೇಜ್ ಗ್ರಂಥಾಲಯದ ಅವಸ್ಥೆ ಹೀಗಿದೆ.
ಸಾವಿರಾರು ರೂಪಾಯಿ ಮೌಲ್ಯದ ಯಾವುದೇ ಗ್ರಂಥಾಲಯದಲ್ಲಿಯೂ ಕಾಣಸಿಗದ ಸುಮಾರು ೬೩,೦೦೦ಕ್ಕೂ ಅಕ ಅತಿ ಪುರಾತನ ಕೃತಿಗಳು, ಗ್ರಂಥಗಳು ಇಲ್ಲಿ ದೊರಕುತ್ತಿದ್ದರೂ, ಅವುಗಳ ರಕ್ಷಣೆಗೆ ಸರಿಯಾದ ಸೂರು ಮಾತ್ರ ಇಲ್ಲಿಲ್ಲಾ. ಎಷ್ಟೆ ಅತ್ಯಾಧುನಿಕ, ಅತಿ ಹೆಚ್ಚಿನ ಮೌಲ್ಯದ ಪುಸ್ತಕವಾದರೂ ಕೂಡ, ಅದಕ್ಕೆ ನೀರಿನಂಶ ತಾಗಿದರೆ ಅವುಗಳ ಬಾಳಿಕೆ ಕಡಿಮೆಯಾಗುತ್ತದೆ. ಹೀಗಿರುವಾಗ ಕೊಠಡಿಯೊಳಗೆ ಪುಸ್ತಕಗಳನ್ನು ಜೋಡಿಸಿರುವ ಕಪಾಟಿನ ಮೇಲೆ ನೀರು ಸೋರುತ್ತಿದ್ದು, ತಗಡಿನ ಸೀಟನ್ನು ಅಡ್ಡಲಾಗಿ ನಿಲ್ಲಿಸಲಾಗಿದೆ. ಎಡಬಿಡದೆ ಮಳೆ ಸುರಿದರೆ ಹೊರಗಡೆ ಇರುವಷ್ಟೆ ನೀರು ಕೊಠಡಿಯೊಳಗೆ ತುಂಬಿಕೊಳ್ಳುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೊಠಡಿಯೊಳಗೂ ಕೊಡೆಯನ್ನು ಹಿಡಿದುಕೊಂಡು ಅಧ್ಯಯನ ಮಾಡುವ ಪರಿಸ್ಥಿತಿ ವಿದ್ಯಾರ್ಥಿಗಳ ಮುಂದಿದೆ.
ಕೇರಳದಿಂದ ಇಲ್ಲಿಗೆ ಬಂದು ಇದೀಗ ದ್ವಿತೀಯ ವರ್ಷದಲ್ಲಿ  ಅಭ್ಯಾಸ ಮಾಡುತ್ತಿದ್ದೇವೆ. ಕಳೆದ ವರ್ಷವೂ ಕೂಡ ಇದೇ ಪರಿಸ್ಥಿತಿ ಇತ್ತು. ಕಾಲೇಜಿನ ಹಲವಾರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಥಿ ಸಂಘಟನೆಗಳ ಮೂಲಕ ಹೋರಾಟ ನಡೆಸಿದ್ದೆವು. ಆದರೆ ಕೆಲವೊಂದು ಸಮಸ್ಯೆ ಪರಿಹಾರವಾಗಿದ್ದರೂ, ಗ್ರಂಥಾಲಯದ ಸಮಸ್ಯೆ ಹಾಗೆಯೇ ಇದೆ ಎನ್ನುವುದು ವಿದ್ಯಾರ್ಥಿಗಳ ಅಳಲು.
ತಾರಸಿಯ ಒಳಪದರ ಕಳಪೆ ಕಾಮಗಾರಿಯಿಂದ  ಕಿತ್ತು ಬರುತ್ತಿದ್ದು, ಮಳೆಗಾಲದಲ್ಲಿ ನೀರು ಸೋರುತ್ತದೆ. ಕಳೆದ ಐದಾರು ವರ್ಷಗಳಿಂದ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಮಸ್ಯೆ ಈಗಲೂ ಹಾಗೆ ಇದೆ ಎನ್ನುವುದು ಸಿಬ್ಬಂದಿಗಳ ಉತ್ತರ.
ಕಾಲೇಜಿನ ಆಡಳಿತ ಮಂಡಳಿಯಿಂದ ಇಲ್ಲಿಯವರೆಗೆ ಮಾದ್ಯಮಗಳಿಗೆ ಒಳಪ್ರವೇಶಕ್ಕೆ ಅನುಮತಿ ನೀಡಿಲ್ಲ. ಒಳಪ್ರವೇಶಕ್ಕೆ ಪ್ರಾಂಶುಪಾಲರ ಅನುಮತಿ ಪಡೆದುಕೊಂಡು ಹೋಗಬೇಕು. ಯಾವುದೇ ಮಾಹಿತಿಯನ್ನಾದರೂ ಅಲ್ಲಿಯೇ ನೀಡುತ್ತಾರೆ ವಿನಃ ಪ್ರವೇಶಕ್ಕೆ ಅವರಿಂದ ಅನುಮತಿ ಸಿಗುವುದಿಲ್ಲ. ಪ್ರತಿವರ್ಷವೂ ರಿಪೇರಿಗೆಂದು ಹಣ ಕಾದಿರಿಸಿ, ರಿಪೇರಿ ಮಾಡಲಾಗುತ್ತದೆ ಎನ್ನುವುದು ಲೈಬ್ರಿರಿಯನ್‌ರ ಅಭಿಪ್ರಾಯ.
ಸಂಬಂಸಿದ ಇಂಜಿನಿಯರಿಂಗ್ ವಿಭಾಗ ಸಂಪರ್ಕಿಸಿದರೆ ಕಾಲೇಜಿನಿಂದ ಮನವಿ ಬಂದಿದೆ. ಇಲ್ಲಿಯವರೆಗೆ ಗ್ರಂಥಾಲಯ ರಿಪೇರಿಗೆಂದು ಪ್ರತ್ಯೇಕ ಟೆಂಡರ್ ಕರೆದಿಲ್ಲ. ಕಳೆದ ಬಾರಿ ಮನವಿ ಮಾಡಿದ್ದರೂ, ಅದರ ಕುರಿತು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಅವರ ಪ್ರತ್ಯುತ್ತರ.
ವಿಶ್ವವಿದ್ಯಾನಿಲಯ ಸ್ವಾಮ್ಯಕ್ಕೆ ಒಳಪಟ್ಟ ವಿಶ್ವವಿದ್ಯಾನಿಲಯ ಕಾಲೇಜು ಅಭಿವೃದ್ಧಿ ಕಾಣುತ್ತಿದೆ. ನೂತನ ಕಟ್ಟಡಗಳ ಕಾಮಗಾರಿ ಪ್ರಾರಂಭವಾಗಿದೆ. ಹಳೆಯ ಕಟ್ಟಡ ಸುಂದರಗೊಳಿಸಲು ಕೆಲವೊಂದು ಕೊಠಡಿಯನ್ನು ಪುನರ್ರಚಿಸಲಾಗುತ್ತಿದೆ. ಆದರೆ ಸಾವಿರಾರು ರೂಪಾಯಿ ವೆಚ್ಚದ ಪುಸ್ತಕಗಳಿಗೆ ರಕ್ಷಣೆಯಿಲ್ಲ. ಕೇಂದ್ರ ಸಚಿವ ಎಂ.ವೀರಪ್ಪ ಮೊಲಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿದ್ಯಾಭ್ಯಾಸ ಮಾಡಿದ ಕಾಲೇಜಿಗೆ ಇಂತಹ ಪರಿಸ್ಥಿತಿ. ವಿದ್ಯಾರ್ಜನೆಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಹಾಗೂ ಗ್ರಂಥಾಲಯದಲ್ಲಿರುವ ಪುಸ್ತಕಗಳ ರಕ್ಷಣೆಗೆ ವಿಶ್ವವಿದ್ಯಾನಿಲಯ ಕಾಲೇಜು ಆಡಳಿತ ಮಂಡಳಿ ಶ್ರಮಿಸಬೇಕಿದೆ. ಇನ್ನಾದರೂ ಗ್ರಂಥಾಲಯದ ಸೋರುವಿಕೆಗೆ ಮುಕ್ತಿ ದೊರಕಿತೇ ಎನ್ನುವ ನಿರೀಕ್ಷೆ ವಿದ್ಯಾರ್ಥಿಗಳದು.


No comments:

Post a Comment