ಸಿದ್ದರಾಮಯ್ಯನವರ ಸಂಪುಟದಲ್ಲಿ ಕರಾವಳಿಗೆ ದಕ್ಕಿದ ಸೌಭಾಗ್ಯ-ನಾಲ್ಕು ಸಚಿವ ಸ್ಥಾನ
ಬಯಲು ಸೀಮೆಗೆ ಬಂದರು ಖಾತೆ-ಮೀನು ಮುಟ್ಟದವರ ಕೈಗೆ ಮೀನುಗಾರಿಕೆ.
ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶವೆನ್ನುವ ಹೆಗ್ಗಳಿಕೆ ಒಂದೆಡೆ ಇನ್ನೊಂದೆಡೆ ಅರಬ್ಬಿ ಸಮುದ್ರ ಆವರಿಸಿಕೊಂಡಿದೆ ಎನ್ನುವ ಹೆಮ್ಮೆ ಕರಾವಳಿ ಜನತೆಗೆ. ಇದು ಭೌಗೋಳಿಕವಾದ ವಿಷಯವಾದರೆ ರಾಜಕೀಯವಾಗಿಯೂ ೨೦೧೩ರ ವಿಧಾನ ಸಭೆ ಚುನಾವಣೆಯಲ್ಲಿ ಇಲ್ಲಿಯವರಿಗೆ ಸಿಗದ ಸಂತೋಷ ಸಿಕ್ಕಿದೆ. ಕರ್ನಾಟಕದಲ್ಲಿ ಆಡಳಿತ ವಹಿಸಿಕೊಂಡ ಕಾಂಗ್ರೆಸ್‌ಪಕ್ಷದಿಂದ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಅತಿಶಯೋಕ್ತಿಯಲ್ಲ. ೨೦ ವರ್ಷಗಳಿಂದಿಚೆಗೆ ಕರಾವಳಿಯ ನಾಯಕರುಗಳಿಗೆ ಒಮ್ಮೆಲೆ ಕ್ಯಾಬಿನೆಟ್ ಅಥವಾ ರಾಜ್ಯ ಸಚಿವರಾಗಿ ಆಯ್ಕೆಗೊಂಡ ಉದಾಹರಣೆಗಳಿಲ್ಲ. ಪ್ರಥಮ ಬಾರಿಗೆ ಎನ್ನುವಂತೆ ಕರಾವಳಿ ಭಾಗದ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯವರ ಚಾಕಚಕ್ಯತೆಯೆನ್ನಲೇ? ಅಥವಾ ಅವರು ಕರಾವಳಿ ಭಾಗಕ್ಕೆ ಒಮ್ಮೆಲೆ ನಾಲ್ಕು ಸಚಿವ ಸ್ಥಾನ ನೀಡಿರುವುದರಲ್ಲಿಯೂ ಸ್ವಾರ್ಥವಿದೆಯೇ? ಸಾಮಾನ್ಯವಾಗಿ ತರ್ಕಿಸಿದರೆ ಜನ ಸಾಮಾನ್ಯರ ಅಬಿಪ್ರಾಯವೂ ಕೂಡ ಹೌದೆನ್ನುತ್ತದೆ. ಇನ್ನು ಒಂದು ವರ್ಷದೊಳಗೆ ಎಂಪಿ ಚುನಾವಣೆಯು ನಡೆಯಲಿರುವ ಮುನ್ಸೂಚನೆಯಾಗಿದೆ.
ಕರಾವಳಿಯ ಜನತೆ ಬುದ್ದಿವಂತರೆನ್ನುವುದಕ್ಕೆ ಈ ಬಾರಿಯ ವಿಧಾನ ಸಭಾ ಚುನಾವಣೆಯನ್ನು ಗಮನಿಸಿದರೆ ತಿಳಿಯುತ್ತದೆ. ಬಿಜೆಪಿಯ ಭದ್ರಕೋಟೆಯೆನಿಸಿಕೊಂಡ ಪ್ರದೇಶಗಳಲ್ಲಿಯೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರಣವಾಗಿರುವುದು. ಪಕ್ಷದಲ್ಲಿ ಕಚ್ಚಾಟ ನಡೆಯುತ್ತಿರುವಾಗ ಏನು ಮಾತನಾಡದೆ ಸುಮ್ಮನಿದ್ದು ತಮ್ಮ ಅಮೂಲ್ಯವಾದ ಮತ ಚಲಾವಣೆಯ ಮೂಲಕ ಬಿಜೆಪಿ ಕಚ್ಚಾಟ, ಗೊಂದಲಗಳಿಗೆ ಪೂರ್ಣವಿರಾಮ ಹಾಕಿದ್ದಾರೆ. ಬಿಜೆಪಿಯ ಆಡಳಿತವನ್ನು ಕೊನೆಗಾಣಿಸಬೇಕೆನ್ನುವ ನಿಟ್ಟಿನಲ್ಲಿ ಅವರ ಆಡಳಿತದಲ್ಲಾದ ಅಭಿವೃದ್ಧಿಯನ್ನು ಕಡೆಗಣಿಸಿ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಅವಿಭಜಿತ ದಕ್ಷಿಣ ಕನ್ನಡದಲ್ಲಿರುವ ಎಂಟು ವಿಧಾನ ಸಭಾ ಕ್ಷೇತ್ರದಲ್ಲಿ ೭ ಸ್ಥಾನವನ್ನು ಕಾಂಗ್ರೆಸ್‌ನ ಮಡಿಲಿಗೆ ಸೇರಿಸಿದ್ದರು. ಮೀಸಲು ಕ್ಷೇತ್ರ ಸುಳ್ಯದಲ್ಲಿ ಮಾತ್ರ ಸಾವಿರಕ್ಕೂ ಚಿಲ್ಲರೆ ಮತಗಳಿಂದ ಬಿಜೆಪಿ ಒಂದು ಸ್ಥಾನ ಗಳಿಸಿಕೊಂಡಿರುವುದನ್ನು ಹೊರತು ಪಡಿಸಿ ಬೇರಾವ ಕಡೆಯೂ ಬಿಜೆಪಿಗೆ ಸ್ಥಾನ ದಕ್ಕಿಲ್ಲ. ಉಡುಪಿ ಜಿಲ್ಲೆಯಲ್ಲಿಯೂ ಕೂಡ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗಳಿಸಿಕೊಂಡಿದ್ದು, ಅಲ್ಲಿಯೂ ಕೂಡ ಬಿಜೆಪಿ ಒಂದು ಸ್ಥಾನ ಮಾತ್ರ ಗಳಿಸಿಕೊಂಡಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಯಿಂದಾದ ಅವಮಾನಕ್ಕೆ ಸೆಡ್ಡು ಹೊಡೆದು ಬಿಜೆಪಿಯನ್ನು ಧೂಳಿಪಟ ಮಾಡಿರುವ ಘಟನೆ ಕುಂದಾಪುರದ ಜನತೆಯು ಸಜ್ಜನ ವ್ಯಕ್ತಿಯ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ರಾಜಕೀಯದಲ್ಲಿ ಸ್ವಾರ್ಥ ತುಂಬಿರುವಾಗ ಹಾಲಾಡಿಯಂತ ನಿಷ್ಠಾವಂತರಿಗೆ ಅನ್ಯಾಯ ಮಾಡುತ್ತಾರೆಂದರೆ, ಯಾರಿಗಾದರೂ ಬೇಸರವಾಗದಿರಲು ಸಾಧ್ಯವೇ?
ಅದರ ಪರಿಣಾಮವೇ ಕರಾವಳಿಯ ಈ ಚುನಾವಣೆಯ ಫಲಿತಾಂಶ. ಬಿಜೆಪಿಯ ದೌರ್ಜನ್ಯಕ್ಕೆ ಹಾಲಾಡಿಗಾದ ಅನ್ಯಾಯಕ್ಕೆ ಕರಾವಳಿಯ ಎಲ್ಲಾ ಬಂಟ ಸಮುದಾಯ ಸೇಡನ್ನು ತೀರಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಪ್ರತಿಯೆನ್ನುವಂತೆ ಸಿದ್ದರಾಮಯ್ಯವರ ಸಂಪುಟದಲ್ಲಿ ಕರಾವಳಿಯಿಂದ ಆರಿಸಿ ಹೋದ ೧೦ ಜನ ಕಾಂಗ್ರೆಸ್ ಶಾಸಕರಲ್ಲಿ ನಾಲ್ವರಿಗೆ ಮಂತ್ರಿಗಿರಿ. ಅವಿಭಜಿತ ದಕ್ಷಿಣ ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ದೊರಕುವುದರೊಂದಿಗೆ ೨೦ ವರ್ಷಗಳ ಬಳಿಕ ರಾಜ್ಯ ಸರಕಾರದಲ್ಲಿ ಕರಾವಳಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಆದರೆ ಖಾತೆ ಹಂಚಿಕೆಯಾಗುವಾಗ ಮಾತ್ರ ಪ್ರಾದೇಶಿಕ ಮಹತ್ವವನ್ನು ಸಿಎಂ ಮರೆತು ಬಿಟ್ಟಿದ್ದಾರೆಯೇ ಎನ್ನುವ ಸಂಶಯ ಮೂಡುತ್ತಿದೆ. ಕರಾವಳಿಯ ಬಂಟ್ವಾಳದ ಶಾಸಕ ಬಿ.ರಮಾನಾಥ ರೈ ಅವರಿಗೆ ಅರಣ್ಯ, ಜೈವಿಕ ಮತ್ತು ಪರಿಸರ ಖಾತೆ, ಉಳ್ಳಾಲ ಶಾಸಕ ಯು.ಟಿ.ಖಾದರ್‌ರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್‌ರಿಗೆ ಯುವಜನ ಸೇವೆ ಮತ್ತು ಮೀನುಗಾರಿಕೆ ಖಾತೆ, ಉಡುಪಿ ಕಾಪು ಶಾಸಕ ವಿನಯಕುಮಾರ್ ಸೊರಕೆಗೆ ನಗರಾಭಿವೃದ್ಧಿ ಖಾತೆಯನ್ನು ನೀಡಿದ್ದಾರೆ. ಕರಾವಳಿಗೆ ನಾಲ್ಕು ಸಚಿವ ಸ್ಥಾನ ದೊರಕಿದೆ ಎನ್ನುವಾಗ ಸಂತೋಷವಾಗಿದ್ದರೂ, ಖಾತೆ ಹಂಚಿಕೆಯಲ್ಲಿ ಅನ್ಯಾಯವಾಗಿದೆಯೇ ಎನ್ನುವ ಸಂಶಯದ ಎಳೆ ತಳಕಾಡುತ್ತದೆ.
ಹಿಂದೆ ರಾಜ್ಯದಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಕರಾವಳಿ ಭಾಗದ ಜನರಿಗೆ ಬಂದರು ಹಾಗೂ ಮೀನುಗಾರಿಕೆ ಖಾತೆ ಕಟ್ಟಿಟ್ಟ ಬುತ್ತಿಯಾಗಿತ್ತು. ಭೌಗೋಳಿಕ ದೃಷ್ಟಿಯಿಂದ ಉಡುಪಿ, ದಕ್ಷಿಣಕನ್ನಡ ಹಾಗೂ ಉತ್ತರಕನ್ನಡ ಜಿಲ್ಲೆಗಳಿಗೆ ಮೀಸಲು ಎನ್ನುವಷ್ಟರ ಮಟ್ಟಿಗೆ ನಿರ್ಧರಿತವಾಗಿರುತ್ತಿತ್ತು. ಕರಾವಳಿ ನಗರವೆಂದರೆ ಬಂದರು ನಗರಿ ಎನ್ನುವ ಪರ್‍ಯಾಯ ಹೆಸರು ಕೂಡ ಇದೆ. ಬಯಲು ಸೀಮೆಯ ಬಾಬುರಾವ್ ಚೆಂಚನಸೂರ್ ಅವರಿಗೆ ಜವಳಿ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರನ್ನಾಗಿಯೂ ಮತ್ತು ಮೂಡಬಿದ್ರೆಯ ಶಾಸಕ ಅಭಯಚಂದ್ರ ಜೈನ್ ಅವರನ್ನು ಯುವಜನ ಸೇವೆ ಮತ್ತು ಮೀನುಗಾರಿಕೆ ಖಾತೆ ಸಚಿವರನ್ನಾಗಿ ಆಯ್ಕೆ ಮಾಡಿದ್ದಾರೆ. ಎಂತಹ ವಿಪರ್‍ಯಾಸ ನೋಡಿ. ಸಿದ್ದು ಸಚಿವ ಸಂಪುಟದಲ್ಲಿ ಕಡಲು ಕಾಣದ ಬಯಲು ಸೀಮೆಗೆ ಬಂದರು ಖಾತೆ ನೀಡಲಾಗಿದೆ. ಪ್ರಾಣಿ ಹಿಂಸೆ ಮಾಡದೆ, ಮೀನನ್ನು ಮುಟ್ಟದವರ ಪಾಲಿಗೆ ಮೀನುಗಾರಿಕೆ ಖಾತೆಯ ಭಾಗ್ಯ ಒಲಿದುಬಂದಿದೆ. ಉ.ಕ. ಸೇರಿದಂತೆ ಕರಾವಳಿಯಿಂದ ೫ ಸಚಿವರು ಸಂಪುಟದಲ್ಲಿದ್ದರೂ, ಸಮುದ್ರ ತಟದಲ್ಲಿರುವ ಎರಡು ಕ್ಷೇತ್ರಗಳಿಗೆ ಸಚಿವ ಸ್ಥಾನ ಒಲಿದರೂ, ಬಂದರೂ ಖಾತೆ ದೂರ ಸರಿದಿರುವುದು ವಿಪರ್‍ಯಾಸ. ಇದು ಮಹತ್ವದ ಖಾತೆಯಾಗಿರುವುದರಿಂದ ಖಾತೆ ವಿಂಗಡನೆ ಸಮಯದಲ್ಲಿ ಮುಖ್ಯಮಂತ್ರಿಗಳು ನಾನಾ ಒತ್ತಡಗಳಿಗೆ ಮಣಿದಿರುವ ಸಾಧ್ಯತೆಗಳೇ ಜಾಸ್ತಿಯಿದ್ದಿರಬಹುದು.
ಕರಾವಳಿ ಭಾಗದ ಜನತೆಗೆ ನಾಲ್ವರು ಸಚಿವರನ್ನು ಕಾಣುವಂತಾಗಿದ್ದು, ೨೦ ವರ್ಷಗಳ ಬಳಿಕ ಬಂದ ಭಾಗ್ಯಎಂದರೂ ತಪ್ಪಿಲ್ಲ. ಇತ್ತೀಚಿನ ದಿನಗಳಲ್ಲಿ ಈ ಭಾಗದ ವಿಧಾನ ಪರಿಷತ್ ಸದಸ್ಯರೇ ಮಂತ್ರಿಗಿರಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಮಟ್ಟಿಗೆ ಇದು ಮಹತ್ವದ ಬೆಳವಣಿಗೆ. ೧೯೯೩-೯೪ರ ಅವಧಿಯಲ್ಲಿ ಕಾರ್ಕಳದವರೆ ಆದ ವೀರಪ್ಪ ಮೊಲಿ ಸಂಪುಟದಲ್ಲಿ ಮೊಲಿ ಸಹಿತ ಅಂದಿನ ದ.ಕ ಜಿಲ್ಲೆಯ ನಾಲ್ವರು ಚುನಾಯಿತ ವಿಧಾನಸಭೆಯ ಸದಸ್ಯರಿಗೆ ಪ್ರಾತಿನಿಧ್ಯ ದೊರಕಿತ್ತು. ಇದೀಗ ಎರಡು ದಶಕಗಳ ಬಳಿಕ ಅದೇ ಕಾಂಗ್ರೆಸ್ ಸರಕಾರ ಕರಾವಳಿಗೆ ಮರು ಮನ್ನಣೆ ನೀಡುತ್ತಿರುವುದು ಗಮನಾರ್ಹ ಸಂಗತಿ.
ಈ ಚುನಾವಣೆಯಲ್ಲಿ ೧೦ ಸ್ಥಾನ ಗಳಿಸಿಕೊಂಡಿದ್ದ ಕಾಂಗ್ರೆಸ್ ಈ ಪ್ರಾಂತ್ಯದಲ್ಲಿ ತನ್ನ ಸಾಮ್ರಾಜ್ಯ ಮರುಸ್ಥಾಪಿಸಲು ನೆರವಾದ ಕರಾವಳಿಗೆ ನೀಡಿದ ಭರ್ಜರಿ ಕೊಡುಗೆಯಾಗಿದೆ. ಅದರಲ್ಲಿ ದ.ಕ.ಜಿಲ್ಲೆಯಲ್ಲಿ ಚುನಾಯಿತ ೭ ಶಾಸಕರಲ್ಲಿ ಮೂವರಿಗೆ ಅದೃಷ್ಟ ಖುಲಾಯಿಸಿದೆ. ಮಂಗಳೂರು ತಾಲೂಕಿನ ನಾಲ್ವರು ಅಲ್ಪಸಂಖ್ಯಾತ ಶಾಸಕರಲ್ಲಿ ಇಬ್ಬರು ಸಚಿವರು. ಇವರೆಲ್ಲಾ ಹಳೆ ಕಾಂಗ್ರೆಸ್ ಪರಂಪರೆಯಿಂದ ಬಂದವರಾಗಿದ್ದು, ಕರಾವಳಿಯಲ್ಲಿ ಪಕ್ಷದ ಗ್ರಾಫ್ ಕುಸಿದಿದ್ದಾಗಲೂ ನಿಷ್ಠೆಯಲ್ಲಿ ಮಾತ್ರ ಅಚಲವಾಗಿದ್ದರು. ಕಾಂಗ್ರೆಸ್‌ನ ಈ ನಡೆಯ ಹಿಂದೆ ಕರಾವಳಿ ಬಗೆಗಿನ ಮಮಕಾರವೋ, ಮುರಿದು ಬಿದ್ದ ಗತಸಾಮ್ರಾಜ್ಯವನ್ನು ಮರು ಕಟ್ಟುವ ತಂತ್ರವೋ ಇರಬಹುದು. ಆದರೆ ಛಿದ್ರವಾದ ಭದ್ರಕೋಟೆಯನ್ನು ಮರು ಭದ್ರಪಡಿಸಿಕೊಳ್ಳಲು ಬಿಜೆಪಿಗೆ ಅವಕಾಶ ನಿರಾಕರಿಸುವ ಉದ್ದೇಶವಂತೂ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ತಪ್ಪು ಮಾಡುವುದು ಮಾನವನ ಸಹಜ ಗುಣ. ತಪ್ಪನ್ನು ತಿದ್ದಿಕೊಂಡು ಬಾಳ್ವೆ ನಡೆಸುವುದು ದೊಡ್ಡ ಗುಣ. ಆದರೆ ತಪ್ಪು ಮಾಡಿರುವುದಕ್ಕೆ ಕರಾವಳಿಯ ಜನತೆ ಸರಿಯಾದ ಪಾಠ ಕಲಿಸಿದ್ದಾರೆ. ಆದರೆ ಮಾಡಿಕೊಂಡ ತಪ್ಪುಗಳನ್ನು ತಿದ್ದಿಕೊಂಡು ಎದ್ದೇಳಲು ಬಿಜೆಪಿ ಅವಕಾಶ ಕೊಡದಂತೆ ಕರಾವಳಿ ಜನರ ಸಹಾನು ಭೂತಿಗಳಿಸುವುದು ಕಾಂಗ್ರೆಸ್‌ಗೆ ಇಲ್ಲಿ ಮುಖ್ಯವಾಗಿರುವ ಉದ್ದೇಶವಿರಬಹುದು. ಇದರ ಮೊದಲ ಹೆಜ್ಜೆಯಾಗಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಮಂಗಳೂರಿನ ನೈತಿಕ ಪೊಲೀಸ್ ದಾಳಿಗಳು ಮತ್ತು ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಗಳ ಕುರಿತಂತೆ ಕಡತಗಳನ್ನು ತರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗೃತವಾಗಿರುವ ಬಿಜೆಪಿ ತುರ್ತು ಸಭೆ ಕರೆದು ಸರಕಾರದ ಯಾವುದೇ ನಿಲುವು, ಕ್ರಮಗಳಿಗೂ ಹಿಂಸಾತ್ಮಕ ದಾರಿ ಹಿಡಿಯದೆ ಚಳುವಳಿ ಮಾರ್ಗ ಅನುಸರಿಸುವಂತೆ ತನ್ನ ಪರಿವಾರಕ್ಕೆ ಸೂಚನೆ ನೀಡತೊಡಗಿರುವುದು ಕರಾವಳಿಯಲ್ಲಿನ ಹೊಸ ಬೆಳವಣಿಗೆ.
೧೯೯೭ರಲ್ಲಿ ದ.ಕ.ದಿಂದ ಉಡುಪಿ ಜಿಲ್ಲೆ ಪ್ರತ್ಯೇಕಗೊಂಡ ಬಳಿಕ ಕರಾವಳಿಯ ಎರಡು ಜಿಲ್ಲೆಗಳ ಚುನಾಯಿತ ವಿಧಾನ ಸಭೆ ಸದಸ್ಯರಿಗೆ ಮಂತ್ರಿಗಿರಿ ಮನ್ನಣೆ ಒಲಿದದ್ದೆ ಕಡಿಮೆ. ೧೯೯೪ ರಲ್ಲಿ ಬಿಜೆಪಿ ಭರ್ಜರಿ ಜಯಬೇರಿ ಭಾರಿಸಿದ್ದರೂ, ಜನತಾದಳ ಗದ್ದುಗೆ ಹಿಡಿದ ಪರಿಣಾಮ ಸಂಪುಟದಲ್ಲಿ ಕರಾವಳಿಯ ಎಂಎಲ್‌ಎಗಳಿಗೆ ಶೂನ್ಯಸಂಪಾದನೆಯಾಗಿತ್ತು. ಆಗ ಜನತಾದಳದ ಶಾಸಕ ಬಿ.ಎ.ಮೊದಿನ್‌ಗೆ ಅವಕಾಶ ಸಿಕ್ಕಿತ್ತು. ೧೯೯೯-೨೦೦೪ ರಲ್ಲಿ ಕೃಷ್ಣ ಸಂಪುಟದಲ್ಲಿ ಬಂಟ್ವಾಳದ ಶಾಸಕ ರಮಾನಾಥ ರೈಗೆ ಸ್ಥಾನ ಸಿಕ್ಕಿದ್ದು, ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಮಂತ್ರಿ ಸ್ಥಾನದಲ್ಲಿ ಆಡಳಿತ ನಡೆಸಿದ ಅನುಭವವೂ ಇದೆ. ೨೦೦೪ರಲ್ಲಿ ಅವಿಭಜಿತ ಜಿಲ್ಲೆಯ ೧೫ ರಲ್ಲಿ ಕಾಂಗ್ರೆಸ್ ೧೧ ಸ್ಥಾನಗಳಿಸಿದ್ದರೂ, ಧರ್ಮಸಿಂಗ್ ಸಂಪುಟದಲ್ಲಿ ಕರಾವಳಿಗೆ ಬರಿ ಚಿಪ್ಪು ಮಾತ್ರ. ೨೦೦೬-೦೮ ರಲ್ಲಿ ಕುಮಾರಸ್ವಾಮಿ ಸಂಪುಟದಲ್ಲಿ ನಾಗಾರಾಜ ಶೆಟ್ಟಿಗೆ ೨೦ ತಿಂಗಳ ಅಧಿಕಾರ ಯೋಗ. ೨೦೦೮ ರಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಬಿಜೆಪಿ ೧೩ರಲ್ಲಿ ೮ ಸ್ಥಾನ ಗೆದ್ದರೂ ಯಡಿಯೂರಪ್ಪ ಸಂಪುಟದಲ್ಲಿ ಕರಾವಳಿ ಶಾಸಕರಿಗೆ ದಕ್ಕಿದ ಸ್ಥಾನ ಕೇವಲ ಒಂದು ಮಾತ್ರ. ಅದು ಕೃಷ್ಣ ಜೆ.ಪಾಲೆಮಾರ್ ಅವರು. ಅವರು ಸದನಲ್ಲಿ ನೀಲಿ ಚಿತ್ರ ನೋಡಿದ್ದರು ಎನ್ನುವ ಅಪಕೀರ್ತಿಗೆ ಗುರಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದನ್ನು ಬಿಟ್ಟರೆ ದಿ.ಡಾ.ವಿ.ಎಸ್.ಆಚಾರ್ಯ, ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಇವರೆಲ್ಲಾ ವಿಧಾನ ಪರಿಷತ್ ಸದಸ್ಯರು. ಶೆಟ್ಟರ್ ಸಂಪುಟ ರಚನೆಯಲ್ಲಿ ಕುಂದಾಪುರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಕೊನೆ ಕ್ಷಣದಲ್ಲಿ ಸಚಿವ ಸ್ಥಾನದಿಂದ ಅವಕಾಶ ವಂಚಿತರಾಗಿ, ಬಿಜೆಪಿಯ ಪ್ರಾಥಮಿಕ ಸದಸ್ಯತನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಅತ್ಯಧಿಕ ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ.
ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರ ಅಧಿಕಾರದಲ್ಲಿ ಕರಾವಳಿಯ ಪಾಲಿಗೆ ನಾಲ್ಕು ಸಚಿವ ಸ್ಥಾನ ಗಳಿಸಿಕೊಟ್ಟಿದ್ದಾರೆ. ಕರಾವಳಿಯ ಸಮಸ್ಯೆಗಳು ಅನೇಕವಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಎಂಡೋಸಲ್ಫಾನ ಪೀಡಿತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದು. ಕುಡಿಯುವ ನೀರಿನ ಸಮಸ್ಯೆ, ಅಕ್ರಮ ಮರಳುಗಾರಿಗೆ, ಅರಣ್ಯನಾಶ ಇತ್ಯಾದಿ. ನಾಲ್ವರು ಸಚಿವರುಗಳಿದ್ದು, ಕರಾವಳಿಯ ಜನತೆಯ ಸಮಸ್ಯೆಗಳನ್ನು ಆಲಿಸಿ, ಅದನ್ನು ಪರಾಮರ್ಶಿಸಿ ಅದನ್ನು ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಪಡಬೇಕಾದ ಅಗತ್ಯತೆಯಿದೆ. ಆಗಲೇ ಮತದಾರ ನಿಮ್ಮನ್ನು ಮತ್ತೊಮ್ಮೆ ಆರಿಸಿಕಳುಹಿಸುತ್ತಾನೇ ಎನ್ನುವುದರಲ್ಲಿ ಸಂಶಯವಿಲ್ಲ...
ಏನಂತಿರಾ...
No comments:
Post a Comment