Friday 21 June 2013

ಇಲಾಖೆಯ ಬಗ್ಗೆ ಸಂಶಯ- ವಿದ್ಯಾರ್ಥಿಗಳಿಗೆ ನಿರಾಶೆ, ಆತಂಕ
ಪಿಯು ಮರುಮೌಲ್ಯಮಾಪನ : ೧೦,೭೨೯ ಪತ್ರಿಕೆಗಳು `ನೋ ಚೇಂಜಸ್'

ಮಂಗಳೂರು: ೨೦೧೨-೧೩ನೇ ಸಾಲಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯು ಪರೀಕ್ಷೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ೧೩,೩೪೩ ವಿದ್ಯಾರ್ಥಿಗಳ ಪೈಕಿ ೧೦,೭೨೯ಮಂದಿಯ  ಉತ್ತರ ಪತ್ರಿಕೆಗಳ ಅಂಕಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪ್ರಕಟಗೊಂಡಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿದೆ.
ವಿದ್ಯಾರ್ಥಿಗಳು ತಮ್ಮಲ್ಲಿರುವ ಆತ್ಮವಿಶ್ವಾಸ ಹಾಗೂ ಪೋಷಕರು ತಮ್ಮ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲಿನ ನಂಬಿಕೆಯಿಂದ ಪಡೆದ ಅಂಕಗಳ ಬಗ್ಗೆ ತೃಪ್ತಿಯಾಗದೆ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಾರಿ ಸಲ್ಲಿಸಿದ ಒಟ್ಟು ಅರ್ಜಿಗಳಲ್ಲಿ ಶೇ. ೮೦.೪೦ರಷ್ಟು ಉತ್ತರ ಪತ್ರಿಕೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎನ್ನುವ ವರದಿ ಬಿತ್ತರಗೊಂಡಿದೆ. ಈ ಮೂಲಕ  ೧೦,೭೨೯ ಮಂದಿಯ ಮರುಮೌಲ್ಯಮಾಪನಕ್ಕೆ ಕಟ್ಟಿದ ಹಣ ಮಾತ್ರ ಯಾವುದೇ ಅಂಕದ ಬದಲಾವಣೆಯಿಲ್ಲದೇ ವ್ಯರ್ಥಗೊಂಡಿದೆ.
ಮರುಮೌಲ್ಯಮಾಪನದಲ್ಲಿ  ಅಂಕಗಳು ಹೆಚ್ಚು ಅಥವಾ ಕಡಿಮೆಯಾಗಬಹುದು. ಆದರೆ ಬಹುತೇಕ ಮಂದಿಯ ಅಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು  ಮರುಮೌಲ್ಯಮಾಪನ ನಿಜವಾಗಿ ನಡೆದಿದೆಯೇ ಎಂಬ ಬಗ್ಗೆ ಸಂಶಯ ಮೂಡಿಸಿದೆ.
೨೦೧೨-೧೩ನೇ ಸಾಲಿನಲ್ಲಿ ಉತ್ತೀರ್ಣರಾದವರು:
ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯು  ಪರೀಕ್ಷೆಯಲ್ಲಿ ರಾಜ್ಯದಲ್ಲಿ ಒಟ್ಟು ೬,೧೧,೫೬೯ ವಿದ್ಯಾರ್ಥಿಗಳು ಕಲೆ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.  ೧,೬೭,೯೪೨ ಬಾಲಕರು ಹಾಗೂ ೧,೯೫,೧೧೫ ಬಾಲಕಿಯರ ಸಹಿತ ೬,೬೩,೦೫೭ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರು. ಫಲಿತಾಂಶದಲ್ಲಿ ತೃಪ್ತಿಯಿದ್ದರೂ ನಿರೀಕ್ಷೆಗಿಂತ ಕಡಿಮೆ ಅಂಕ ಗಳಿಕೆಯಾದ ಹಿನ್ನೆಲೆಯಲ್ಲಿ  ಹಾಗೂ ಅನುತ್ತೀರ್ಣರಾದವರು  ಹೆಚ್ಚಿನ ಗುರಿ ಸಾಧನೆಯ  ನಂಬಿಕೆಯಿಂದ ಮರುಮೌಲ್ಯಮಾಪನಕ್ಕೆ ಪೋಷಕರನ್ನು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಇದೀಗ ಮರುಮೌಲ್ಯಮಾಪನದ ಅವರ ಆಸೆಗೆ ತಣ್ಣೀರೆರಚಿದೆ.
ಇಲಾಖೆಯ ನಿಯಮ:
ಫಲಿತಾಂಶ ಪ್ರಕಟಗೊಂಡು ವಿದ್ಯಾರ್ಥಿಯು ಬಯಸಿದರೆ ಉತ್ತರ ಪತ್ರಿಕೆಯ ಫೋಟೊ ಪ್ರತಿ ಪಡೆಯಲು ರೂ.೪೨೦ಪಾವತಿ ಮಾಡಬಹುದಾಗಿತ್ತು. ಇದಕ್ಕೆ ಮೇ ೧೩ಕೊನೆಯ ದಿನಾಂಕವಾಗಿತ್ತು. ಪ್ರಶ್ನೆ ಪತ್ರಿಕೆಯೊಂದರ ಮರು ಮೌಲ್ಯಮಾಪನಕ್ಕೆ ರೂ.೧೦೫೦ ಹಾಗೂ ಅಂಕಗಳ ಮರು ಎಣಿಕೆಗೆ ರೂ.೨೮೦ಪ್ರತಿ ಪತ್ರಿಕೆಗೆ ನಿಗದಿಗೊಳಿಸಿದ್ದು, ಎರಡು ವಿಭಾಗಕ್ಕೂ ಮೇ ೨೦ಕೊನೆಯ ದಿನಾಂಕ ನಿಶ್ಚಿತವಾಗಿತ್ತು. ವಿದ್ಯಾರ್ಥಿಯು ಮರುಎಣಿಕೆಗೆ ಸಲ್ಲಿಸಿದ್ದ ಪತ್ರಿಕೆಯಲ್ಲಿ ಹಿಂದೆ ಗಳಿಸಿದ ಅಂಕಕ್ಕಿಂತ ೬ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡರೆ ಮಾತ್ರ ಪೂರ್ತಿ ಹಣ ವಾಪಾಸು ನೀಡಲಾಗುತ್ತಿತ್ತು. ತಪ್ಪಿದಲ್ಲಿ ಹಣ ಇಲಾಖೆ ಯ ಖಾತೆಗೆ ತುಂಬುತ್ತಿತ್ತು.
ಮರು ಮೌಲ್ಯಮಾಪನಕ್ಕೆ ಬಂದ ಅರ್ಜಿಗಳು:
ಈ ಬಾರಿ ೧೩,೩೪೩ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರತಿ ವಿದ್ಯಾರ್ಥಿಯು ರೂ.೧೦೫೦ ರಂತೆ ಇಲಾಖೆಗೆ ರೂ.೧,೪೦,೧೦,೧೫೦ ನ್ನು ಸಲ್ಲಿಸಿದ್ದಾರೆ. ಮರು ಎಣಿಕೆಗೆ ಸಲ್ಲಿಕೆಯಾದ ಅರ್ಜಿಗಳಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಬದಲಾವಣೆಯಾದ ಅಂಕಗಳು, ಅಂಕಗಳು ಬದಲಾದರೂ ಮಾನ್ಯತೆಯಿಲ್ಲದ ಹಾಗೂ ಯಾವುದೇ ಬದಲಾವಣೆಯಿಲ್ಲ ಎಂದು ಮೂರು ವಿಭಾಗದಲ್ಲಿ ಫಲಿತಾಂಶ ಪ್ರಕಟವಾಗಿದೆ. ಆದರೆ ಈ ಬಾರಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಒಟ್ಟು ೧೦,೭೨೯ ಉತ್ತರ ಪತ್ರಿಕೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಮೂಲಕ ೧,೧೨,೬೫,೪೫೦ ರೂ. ಇಲಾಖೆಯ ಬೊಕ್ಕಸಕ್ಕೆ ಸೇರ್ಪಡೆಯಾಗಿದೆ. ಅರ್ಜಿ ಸಲ್ಲಿಕೆಯಾದ ವಿದ್ಯಾರ್ಥಿಗಳಲ್ಲಿ ೧,೬೮೪ ವಿದ್ಯಾರ್ಥಿಗಳಿಗೆ ಹಿಂದೆ ಪಡೆದ ಅಂಕಗಳಿಗಿಂತ ಹೆಚ್ಚು ಹಾಗೂ ಕಡಿಮೆಯಾಗಿ ಪ್ರಸ್ತುತ ಅಂಕದಲ್ಲಿ ಬದಲಾವಣೆಯಾಗಿದೆ. ಅಲ್ಲದೇ ೯೩೦ ವಿದ್ಯಾರ್ಥಿಗಳಿಗೆ ಅಂಕದಲ್ಲಿ ಬದಲಾವಣೆಯಾದರೂ ಅದಕ್ಕೆ ಯಾವುದೇ ಮಾನ್ಯತೆ ಇಲ್ಲ. ೧೦,೭೨೯ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳ ಅಂಕದಲ್ಲಿ ಬದಲಾವಣೆಯಾದರೂ ಕನಿಷ್ಟ ೬ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಹಣ ಮರಳಿ ಸಿಗುತ್ತದೆ. ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಗಮನಿಸಿದರೆ ಬದಲಾವಣೆಯಾಗಿ ಮಾನ್ಯತೆ ಇಲ್ಲದ ಪಟ್ಟಿಯಲ್ಲಿ ೬ಕ್ಕಿಂತ ಕಡಿಮೆ ಅಂಕಗಳನ್ನು ಪಡೆದವರೆ ಹೆಚ್ಚಾಗಿದ್ದಾರೆ. ಇಲ್ಲಿಯೂ ಕೂಡ ಮೌಲ್ಯಮಾಪನಕ್ಕೆ ಕಟ್ಟಿದ ಹಣದ ವಾಪಸಾತಿ ಇಲ್ಲ . ಅಂಕಗಳಲ್ಲಿ ಬದಲಾವಣೆಯಾದ ಪಟ್ಟಿಯಲ್ಲಿಯೂ ಋಣಾತ್ಮಕ ಅಂಕಗಳು ಗೋಚರವಾಗುತ್ತಿದ್ದವು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿಯಮಗಳಿಂದ ವಿದ್ಯಾರ್ಥಿಗಳಿಂದ ನೇರ ಇಲಾಖೆಗೆ ಹಣ ಸಂಗ್ರಹವಾಗುತ್ತಿರುವುದರ ಕುರಿತು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳಿದರೂ ಮೌನಕ್ಕೆ ಶರಣಾಗಿದ್ದಾರೆ. ಅಲ್ಲಲ್ಲಿ ಕೆಲವೊಂದು ವಿದ್ಯಾರ್ಥಿಗಳು ಧ್ವನಿಯಿಲ್ಲದ ಧ್ವನಿಯಿಂದ ಪಿಸುಪಿಸು ಮಾತನಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಗೊಂದಲತೆಯನ್ನು ನಿವಾರಿಸಬೇಕು.

ಬಾಕ್ಸ್:
ಮೌಲ್ಯಮಾಪನದಲ್ಲಿ ಮಾಪಕರ ಗೊಂದಲಗಳಿಂದಾಗಿ ಅಂಕಗಳಲ್ಲಿ ಬದಲಾವಣೆಯಾದರೂ, ಮರುಮೌಲ್ಯಮಾಪನದ ಸಂದರ್ಭ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಇಲಾಖಾ ನಿಯಮದಂತೆ ಕ್ರಮ ಕೈಗೊಳ್ಳಬಹುದಾಗಿದ್ದರೂ ವಿದ್ಯಾರ್ಥಿಗಳಿಗೆ ಈ ಬಾರಿ ಅನ್ಯಾಯವಾಗಿದೆ. ಮರು ಮೌಲ್ಯಮಾಪನದಲ್ಲಿ ಹೆಚ್ಚು ಅಂಕ ಬಂದಾಗ ಮೊದಲ ಮೌಲ್ಯಮಾಪಕನಿಗೆ ಕೈಗೊಳ್ಳುವ ಕ್ರಮವನ್ನು ಸಡಿಲಗೊಳಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ. ಇಲಾಖೆಯಲ್ಲಿನ ಇಂತಹ ಭ್ರಷ್ಟತೆಯನ್ನು ತಡೆಗಟ್ಟಬೇಕು.
ರಮೇಶ್ ಕೆ. , ಅಭಾವಿಪ ರಾಜ್ಯ ಕಾರ್ಯದರ್ಶಿ.

ಪೋಷಕರು ಕಷ್ಟದಿಂದ ಹಣ ನೀಡಿದ್ದಾರೆ. ಇಲಾಖೆಯ ಫಲಿತಾಂಶಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪಿಯು ಶಿಕ್ಷಣ ಇಲಾಖೆಯ ಭ್ರಷ್ಟಾಚಾರವನ್ನು ತಡೆಗಟ್ಟಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಶ್ರಮಿಸಬೇಕು.

ಶಿವಕುಮಾರ್-
ಅಭಾವಿಪ, ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ.

No comments:

Post a Comment