ಶ್ರೀ ಕ್ಷೇತ್ರ ತಿರುಪತಿ-
ಮೂರು ಮುಕ್ಕಾಲು ಘಳಿಗೆಯಲ್ಲಿ ತಿಮ್ಮಪ್ಪನ ಮುತ್ತಿನ ಕಿರೀಟ ನೋಡಿದರೆ ಕಷ್ಟವೆಲ್ಲಾ ಪರಿಹಾರ..ಇಲ್ಲಿನ ಲಡ್ಡು ಬಹಳ ಫೆಮಸ್ಸು
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ವ್ಯಾಪ್ತಿಯ ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಬೆಟ್ಟಗಳ ತಪ್ಪಲಿನಲ್ಲಿದೆ ಈ ತಿರುಪತಿ. ಹೆಸರು ಕೇಳಿದಾಕ್ಷಣ ಧಾರ್ಮಿಕತೆ ಮನದುಂಬಿಕೊಳ್ಳುವ ಈ ಪ್ರದೇಶ ದೇಶದ ಸಾಂಸ್ಕೃತಿಕ ಶ್ರೀಮಂತ ನಗರಿಗಳಲ್ಲಿ ಒಂದಾಗಿದೆ. ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ತಿರುಪತಿಗೆ ನಿತ್ಯ ಸಾವಿರಾರು ಭಕ್ತರು ಮಾತ್ರವಲ್ಲ, ಪ್ರವಾಸಿಗರು ಆಗಮಿಸುತ್ತಾರೆ.
ತಿರುಪತಿ ಇಂದು ಜನಪ್ರಿಯತೆಯ ಉತ್ತುಂಗದಲ್ಲಿದೆ. ಇದರ ಹೆಸರೇ ಇಂದು ವಿಶ್ವಮಟ್ಟದಲ್ಲಿ ಆಂದ್ರಪ್ರದೇಶವನ್ನು ಗುರುತಿಸುವಂತೆ ಮಾಡಿದೆ ಎಂದರೂ ತಪ್ಪಾಗಲಾರದು. ವಿಶೇಷ ಎಂದರೆ ಈ ತಿರುಪತಿ ಶಬ್ದದ ನಿಜಾರ್ಥ ಇದುವರೆಗೂ ಸ್ಪಷ್ಟವಾಗಿಲ್ಲ. ಮಾಹಿತಿ ಪ್ರಕಾರ ತಿರು ಹಾಗೂ ಪತಿ ಎನ್ನುವ ಎರಡು ಶಬ್ದದ ಸಮ್ಮಿಲನ ಇದಾಗಿದೆ. ತಮಿಳು ಭಾಷೆಯಲ್ಲಿ ತಿರು ಎಂದರೆ ಗೌರವಾನ್ವಿತ ಎಂದಾಗುತ್ತದೆ. ಅದೇ ರೀತಿ ಪತಿ ಎಂದರೆ ಗಂಡ ಎಂದಾಗುತ್ತದೆ. ಈ ಎರಡೂ ಶಬ್ದದ ಒಟ್ಟಾರ್ಥ ಜವಾಬ್ದಾರಿಯುತ ಪತಿ/ಒಡೆಯ ಎಂದಾಗುತ್ತದೆ.
ತಿರುಪತಿ ದೇವಾಲಯ ತಿರುಮಲ ಪರ್ವತ ಶ್ರೇಣಿಗಳಲ್ಲಿದೆ. ಈ ಪರ್ವತ ಶ್ರೇಣಿಯು ನಗರ ಕೇಂದ್ರಕ್ಕೆ ಅತ್ಯಂತ ಹತ್ತಿರವಾಗಿದೆ. ತಿರುಮಲ ಪರ್ವತವು ವಿಶ್ವದ ಅತ್ಯಂತ ಹಿರಿಯ ಕಲ್ಲಿನ ಪರ್ವತಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಜನಪ್ರಿಯ ಈ ದೇವಾಲಯವನ್ನು ಯಾರು ಕಟ್ಟಿದ್ದಾರೆ ಎನ್ನುವ ಪುರಾವೆ ಇದುವರೆಗೆ ಸಿಕ್ಕಿಲ್ಲ. ಆದರೆ ಅನೇಕ ಆಡಳಿತಗಾರರು ರಾಜರು ದೇವಾಲಯದ ಜೀರ್ಣೋದ್ಧಾರ, ನವೀಕರಣ ಮಾಡಿದ್ದಾರೆ. ನಾಲ್ಕನೇ ಶತಮಾನದಿಂದಲೂ ಇದನ್ನು ನವೀಕರಿಸಿರುವ ಬಗ್ಗೆ ಮಾಹಿತಿ ಇದೆ. ೧೪-೧೫ ನೇ ಶತಮಾನದಲ್ಲಿ ಈ ದೇವಾಲಯವು ಮುಸ್ಲಿಮರ ದಾಖಲೆಯಲ್ಲಿ ನಮೂದಾಗಿದೆ. ಇದಲ್ಲದೆ ಬ್ರಿಟಿಷರು ಕೂಡಾ ಇದನ್ನು ರಕ್ಷಿಸಿಕೊಂಡು ಬಂದರು. ಇಂದು ವಿಶ್ವದ ಅತ್ಯಂತ ರಕ್ಷಣಾತ್ಮಕ ವಲಯಗಳಲ್ಲಿ ಬರುವ ದೇವಾಲಯಗಳಲ್ಲಿ ಇದು ಒಂದಾಗಿದೆ. ಮದ್ರಾಸ್ ವಿಧಾನಸಭೆಯಲ್ಲಿ ಇದಕ್ಕಾಗಿಯೇ ೧೯೩೩ರಲ್ಲಿ ಪ್ರತ್ಯೇಕ ಕಾನೂನು ರಚನೆಯಾಗಿತ್ತು. ದೇವಾಲಯದ ರಕ್ಷಣೆ, ನಿರ್ವಹಣೆ ಹೊಣೆಯನ್ನು ಪ್ರತ್ಯೇಕ ತಿರುಪತಿ, ತಿರುಮಲ ದೇವಾಸ್ಥಾನ ಸಮಿತಿ ರಚಿಸಿ ಅದರ ಅಧೀನಕ್ಕೆ ನೀಡಲಾಗಿದೆ. ಅಂದು ಮದ್ರಾಸ್ ಸರಕಾರ ಇದಕ್ಕಾಗಿಯೇ ಪ್ರತ್ಯೇಕ ಜಿಲ್ಲಾಧಿಕಾರಿಯನ್ನು ನೇಮಕ ಮಾಡಿ ಎಂದು ಆದೇಶ ಹೊರಡಿಸಿದೆ. ತಿರುಪತಿ ತಿರುಮಲ ದೇವಸ್ಥಾನ ವ್ಯಾಪ್ತಿಯು ಅದನ್ನು ನೋಡಿಕೊಳ್ಳುತ್ತಿರುವವರಿಗೆ ಮುಡಿಪಾಗಿದೆ. ಇದಕ್ಕೆ ಪ್ರತ್ಯೇಕ ಧಾರ್ಮಿಕ ಸಲಹಾ ಸಮಿತಿ ಇದ್ದು ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತದೆ. ತಿರುಪತಿ ಪಟ್ಟಣವು ಕೊಟ್ಟೂರಿಗೆ ಸಮೀಪವಾಗಿದೆ. ಇಂದು ಇದನ್ನು ಕೆಟಿ ರೋಡ್ ಅನ್ನಲಾಗುತ್ತದೆ. ನಂತರ ಇದು ಗೋವಿಂದ ರಾಜ ಸ್ವಾಮಿ ದೇವಾಲಯಕ್ಕೆ ಸ್ಥಳಾಂತರಗೊಂಡಿತು. ಅಂದು ಅದೇ ಸ್ಥಳ ನಿರೀಕ್ಷೆಗೂ ಮೀರಿದ ಅಗಾಧ ಬೆಳವಣಿಗೆ ಸಾಧಿಸಿದೆ. ಈ ನಗರವು ಹಬ್ಬ ಹಾಗೂ ಉತ್ಸವಗಳ ನಗರವಾಗಿ ಅಭಿವೃದ್ಧಿಗೊಂಡಿದೆ.
ಹಬ್ಬ ಹರಿದಿನಗಳ ನಗರ:
ತಿರುಪತಿ ದೇವಾಲಯ ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರ ಜನಪ್ರಿಯವಾಗಿಲ್ಲ. ಬದಲಾಗಿ ಇದೊಂದು ಶ್ರೀಮಂತ ಸಾಂಸ್ಕೃತಿಕ ಕೇಂದ್ರವೂ ಆಗಿದೆ. ಹಬ್ಬ ಹಾಗೂ ಹರಿದಿನಗಳಿಗೆ ಇದು ಅತ್ಯಂತ ಪ್ರಸಿದ್ದಿ ಹೊಂದಿದೆ. ಮೇ ತಿಂಗಳಲ್ಲಿ ಇಲ್ಲಿ ನಡೆಯುವ ಗಂಗಮ್ಮ ಜಾತ್ರೆ ಇದಕ್ಕೊಂದು ಉತ್ತಮ ಉದಾಹರಣೆ. ಭಕ್ತ ಸಮೂಹವು ನಿರೀಕ್ಷೆಗೂ ಮೀರಿದ ಉತ್ಸಾಹ, ಸಂಭ್ರಮ ಹಾಗೂ ಪಾಲ್ಗೊಳ್ಳುವಿಕೆ ಇಲ್ಲಿ ಕಾಣುತ್ತದೆ. ಇದು ಧಾರ್ಮಿಕ ಶಕ್ತಿ ಕೇಂದ್ರವಾಗಿ ಜನಪ್ರಿಯವಾಗಿದ್ದು, ಭಕ್ತರು ದೇವಾಲಯ ಆವರಣದಲ್ಲಿಯೇ ಸುತ್ತಾಡುತ್ತಾ, ಪ್ರದಕ್ಷಿಣೆ ಹಾಕಿ ಪ್ರಾರ್ಥಿಸುತ್ತಾರೆ. ಅತ್ಯಂತ ಶಕ್ತಿಶಾಲಿ ಧಾರ್ಮಿಕ ಕೇಂದ್ರ ಎನ್ನುವ ಭಾವನೆ ಇಲ್ಲಿನವರಿಗಿದೆ. ಕೇಶ ಮುಂಡನ ಮಾಡಿಸಿಕೊಂಡು ಮುಡಿಯನ್ನು ದೇವರಿಗೆ ಅರ್ಪಿಸಿ ಹಣೆಗೆ ಗಂಧದ ಲೇಪನವನ್ನು ಭಕ್ತರು ಇಟ್ಟುಕೊಳ್ಳುತ್ತಾರೆ. ಮಹಿಳೆಯರು ತಲೆಯ ಮೇಲೆ ಮಲ್ಲಿಗೆ ಹೂವಿನ ಮಾಲೆ ಸುತ್ತಿಕೊಂಡು ದೇವಾಲಯದ ಆವರಣದೊಳಗೆ ಪ್ರವೇಶಿಸುತ್ತಾರೆ. ಜಾತ್ರೆಯಲ್ಲಿ ಕೊನೆಯದಾಗಿ ದೇವಿಯ ಬೃಹತ್ ಮಣ್ಣಿನ ಮೂರ್ತಿಯನ್ನು ಒಡೆದು ಹಾಕಲಾಗುತ್ತದೆ. ಇಲ್ಲಿಗೆ ಸಮೀಪದ ಹಾಗೂ ದೂರದೂರಿನಿಂದ ಭಕ್ತರು ಇತ್ತ ಆಗಮಿಸುತ್ತಾರೆ. ತಿರುಪತಿಯ ಅತ್ಯಂತ ಜನಪ್ರಿಯ ಉತ್ಸವಗಳಲ್ಲಿ ಬ್ರಹ್ಮೋತ್ಸವಂ ಕೂಡ ಒಂದು. ಅತಿ ದೊಡ್ಡ ಆಚರಣೆ ಇದಾಗಿದೆ. ದೇವಾಲಯ ನಗರಿಯ ಇತರೆ ಆಚರಣೆಯಲ್ಲಿ ಪ್ರಮುಖವಾದುದು ವಿಜಯನಗರ ಉತ್ಸವ. ಇದನ್ನು ಚಂದ್ರಗಿರಿ ಕೋಟೆಯಲ್ಲಿ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ರಾಯಲ್ಸಿಮಾ ನೃತ್ಯ ಹಾಗೂ ಆಹಾರ ಉತ್ಸವ ಆಯೋಜನೆಯಾಗುತ್ತದೆ. ಅತಿ ಹೆಚ್ಚು ಸಂಖ್ಯೆಯ ಜನರನ್ನು ಇದು ಆಕರ್ಷಿಸುತ್ತದೆ.
ಪ್ರಮುಖ ಆಕರ್ಷಣೆಗಳು:
ಇಲ್ಲಿ ಧಾರ್ಮಿಕ ಕೇಂದ್ರಗಳು ಅಪಾರ ಸಂಖ್ಯೆಯಲ್ಲಿವೆ. ಶಕ್ತಿಶಾಲಿ ದೇವರುಗಳಿವೆ. ಮುಖ್ಯವಾದವೆಂದರೆ ತಿರುಪತಿ ದೇವಾಲಯ, ವರಾಹಸ್ವಾಮಿ ದೇವಾಲಯ, ವೆಂಕಟೇಶ್ವರ ಸ್ವಾಮಿ, ಪದ್ಮಾವತಿ, ಗೋವಿಂದರಾಜ, ಶ್ರೀನಿವಾಸ ಮಂಗಪುರಂ ಇತ್ಯಾದಿ. ಅನೇಕ ವಿಧದ ಪಕ್ಷ ಹಾಗೂ ಪ್ರಾಣಿಗಳ ಆವಾಸ ತಾಣವಾಗಿರುವ ಶ್ರೀ ವೆಂಕಟೇಶ್ವರ ಜೈವಿಕ ಪಾರ್ಕ್‌ಗೆ ಕೂಡ ಇಲ್ಲಿ ಭೇಟಿ ನೀಡಬಹುದಾದ ತಾಣಗಳಲ್ಲಿ ಒಂದಾಗಿದೆ. ಹಣ ನೀಡಿ ಪ್ರವೇಶ ಪಡೆಯುವ ತಾಣ ಕಲ್ಲಿನ ಉದ್ಯಾನ ಶಿಲಾತೋರಣಂ. ಇದು ಕೂಡಾ ನೋಡಲೇ ಬೇಕಾದ ಸ್ಥಳ. ಇನ್ನು ಇಷ್ಟಾದ ಮೇಲೆ ತಿರುಪತಿಗೆ ಭೇಟಿ ನೀಡಿ ಇಲ್ಲಿನ ಸಿಹಿ ಪೊಂಗಲ್(ಅನ್ನ)ಹಾಗೂ ಲಡ್ಡು(ಲಾಡು)ತಿನ್ನದೇ ತೆರಳಲು ಸಾಧ್ಯವೇ ಇಲ್ಲ. ಮರದ ಆಕರ್ಷಕ ಕೆತ್ತನೆಯುಳ್ಳ ಕರಕುಶಲ ವಸ್ತುಗಳನ್ನು ಕೊಳ್ಳದೇ ಹೋದರೆ ಇಲ್ಲಿಗೆ ಬಂದೂ ಬರದಂತೆ ಅನ್ನಿಸುತ್ತದೆ. ಅಷ್ಟು ಪ್ರಸಿದ್ದಿ ಇಲ್ಲಿನ ಕರಕುಶಲ ವಸ್ತುಗಳಿಗೆ. ಬಿಳಿ ಮರದ ಗೊಂಬೆಗಳು, ಕಲಾ ಮಕರಿ ಇತ್ಯಾದಿಗಳು ಇಲ್ಲಿ ಪ್ರಸಿದ್ದಿ. ತಂಜಾವೂಡು ಚಿನ್ನದ ಎಲೆ ಲೇಪನ ಹಾಗೂ ಚಂದನದ ಉಂಡೆ ಇಲ್ಲಿ ಅತ್ಯಂತ ಪ್ರಮುಖ.
ಚಾರಿತ್ರಿಕ ಹಿನ್ನೆಲೆ:
ಭೃಗುಮುನಿ ತ್ರಿವೇಣಿ ಸಂಗಮದಲ್ಲಿ ಸತ್ರಯಾಗವನ್ನು ಕೈಗೊಂಡ ಸಂದರ್ಭದಲ್ಲಿ ಆಗಮಿಸಿದ ನಾರದ ಮಹರ್ಷಿಗಳು ಯಾಕಾಗಿ ಯಾಗವನ್ನು ಮಾಡುತ್ತಿರಾ ಋಷಿವರ್ಯರೇ ಎಂದು ಪ್ರಶ್ನಿಸಿದಾಗ ಭೃಗುಮುನಿಗಳು ತ್ರಿಮೂರ್ತಿಗಳಿಗಾಗಿ ಹವಿಸ್ಸನ್ನು ಅರ್ಪಿಸಲು ಯಾಗವನ್ನು ಕೈಗೊಂಡಿರುವುದಾಗಿ ಹೇಳುತ್ತಾರೆ. ಆದರೆ ನಾರದ ಮಹರ್ಷಿಗಳು ಮೂರು ಮೂರ್ತಿಗಳು ನಿಮ್ಮ ಹವಿಸ್ಸನ್ನು ಸ್ವೀಕರಿಸುವ ಸ್ಥಿತಿಯಲ್ಲಿಲ್ಲ. ಅವರೆಲ್ಲಾ ನಿದ್ರಾಸ್ಥಿತಿಯಲ್ಲಿದ್ದಾರೆ ಎನ್ನುವ ಮಾತನ್ನು ಹೇಳಿದಾಗ ಪರೀಕ್ಷೆಗೆಂದು ತೆರಳುತ್ತಾರೆ ಭೃಗು ಮುನಿ.
ಪ್ರಾರಂಭದಲ್ಲಿ ಸತ್ಯಲೋಕಕ್ಕೆ ತೆರಳಿದಾಗ ಬ್ರಹ್ಮ ಆತನ ಮಡದಿ ಶಾರದೆಯೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದು, ಇವರನ್ನು ಮಾತನಾಡಿಸದೆ ಇದ್ದಾಗ ಕೋಪಗೊಂಡ ಮುನಿಗಳು ಭೂಲೋಕದಲ್ಲಿ ಪೂಜೆ ಇಲ್ಲದೇ ಹೋಗಲಿ ಎನ್ನುವ ಶಾಪ ನೀಡಿ ಅಲ್ಲಿಂದ ನೇರವಾಗಿ ಕೈಲಾಸಕ್ಕೆ ತೆರಳುತ್ತಾರೆ. ಕೈಲಾಸನಾಥ ಮಡದಿ ಪಾರ್ವತಿಯೊಂದಿಗೆ ತಾಂಡವ ನೃತ್ಯದಲ್ಲಿ ತೊಡಗಿದ್ದು, ಇವರನ್ನು ನಿರ್ಲಕ್ಷಿಸಿದ ಕಾರಣದಿಂದ ಕುಪಿತರಾಗಿ ಭೂಲೋಕದಲ್ಲಿ ಲಿಂಗಕ್ಕೆ ಪೂಜೆ ಸಲ್ಲಿಸುವಂತಾಗಲಿ ಎಂದು ಶಾಪ ನೀಡುತ್ತಾರೆ. ಅಲ್ಲಿಂದ ವೈಕುಂಠಕ್ಕೆ ತೆರಳುತ್ತಾರೆ. ಇತ್ತ ವೈಕುಂಠದಲ್ಲಿ ವಿಷ್ಣುವು ಲಕ್ಷ್ಮಿಯೊಂದಿಗೆ ಒಂದು ನಾಟಕವನ್ನು ಆಡುತ್ತೇನೆ. ಅದನ್ನು ನೀನು ನೋಡುತ್ತಿರು ಎಂದು ಮರೆಯಲ್ಲಿ ನೋಡುತ್ತಿರು ಎಂದು ನಿದ್ರೆ ಬಂದವನಂತೆ ನಟಿಸುತ್ತಾನೆ. ಭೃಗುಮುನಿ ವೈಕುಂಠಕ್ಕೆ ಬಂದಾಗ ನಿದ್ರೆ ಬಂದಂತೆ ನಟಿಸುತ್ತಿರುವ ವಿಷ್ಣುವನ್ನು ನೋಡಿ ಅವನನ್ನು ಎಚ್ಚರಿಸುವ ಸಲುವಾಗಿ ಆತನ ವೃಕ್ಷಸ್ಥಳಕ್ಕೆ ಕಾಲಿನಿಂದ ಒದೆಯುತ್ತಾನೆ. ನಂತರ ಭೃಗುಮುನಿಯ ಕಾಲಿನಲ್ಲಿರುವ ಶಕ್ತಿಯ ಕಣ್ಣನ್ನು ಪಡೆದು, ಆತನನ್ನು ಉಪಚರಿಸಿ ಅಲ್ಲಿಂದ ಬೀಳ್ಕೊಡುತ್ತಾನೆ. ಆದರೆ ಲಕ್ಷ್ಮೀ ಮಾತ್ರ ವಿಷ್ಣುವನ್ನು ತೊರೆದು ಅಲ್ಲಿಂದ ತೆರಳುತ್ತಾಳೆ. ವಿಷ್ಣುವು ಲಕ್ಷ್ಮೀಗೆ ವೃಕ್ಷಸ್ಥಳದಲ್ಲಿ ಜಾಗವನ್ನು ನೀಡಿದ್ದು, ತನ್ನದಾಗಿರುವ ಜಾಗಕ್ಕೆ ಅಪಮಾನವೆಸಗಿದ ಕಾರಣವನ್ನು ಮುಂದಿಟ್ಟು ವೈಕುಂಠವನ್ನು ಲಕ್ಷ್ಮೀದೇವಿ ತೊರೆದು ಕರವೀರ ಪುರದಲ್ಲಿ ನೆಲೆಯಾಗುತ್ತಾಳೆ. ಪ್ರಸ್ತುತ ಅದೇ ಸ್ಥಳ ಕೊಲ್ಲಾಪುರವಾಗಿದೆ. ಪತ್ನಿಯ ಅಗಲುವಿಕೆಯಿಂದ ನೊಂದ ವಿಷ್ಣುವು ಶ್ರೀನಿವಾಸ ಎನ್ನುವ ಹೆಸರಿನಲ್ಲಿ ಭೂಲೋಕವನ್ನೆಲ್ಲಾ ಸಂಚರಿಸಿ, ಲಕ್ಷ್ಮೀಯ ಇರವನ್ನು ತಿಳಿಯದೆ ಒಂದು ಹುತ್ತದಲ್ಲಿ ನೆಲೆಯಾಗುತ್ತಾನೆ.
ಈ ವಿಷಯವನ್ನು ತಿಳಿದ ಲಕ್ಷ್ಮೀದೇವಿಯು ಬ್ರಹ್ಮ ಮತ್ತು ಈಶ್ವರದಲ್ಲಿ ವಿಷಯವನ್ನು ತಿಳಿಸಿದಾಗ ಅವರಿಬ್ಬರು ದನ-ಕರುವಿನ ರೂಪ ಪಡೆದುಕೊಂಡು ಚೋಳರಾಜನಲ್ಲಿ ಆಶ್ರಯ ಪಡೆಯುತ್ತಾರೆ. ದನವನ್ನು ಕಾಯುತ್ತಿದ್ದ ಗೋಪಾಲಕರು ಒಂದು ದಿನ ದನವೊಂದು ಹುತ್ತಕ್ಕೆ ಹಾಲು ಸುರಿಸುವುದನ್ನು ಕಂಡು ದೊರೆಯಲ್ಲಿ ದೂರಿದಾಗ ಚೋಳರಾಜ ಕೊಡಲಿಯಿಂದ ದನವನ್ನು ಕಡಿಯಲು ಮುಂದಾದಾಗ ಕೊಡಲಿಯ ಪೆಟ್ಟು ಶ್ರೀನಿವಾಸ ಹಣೆಗೆ ತಾಗುತ್ತದೆ. ಇದರಿಂದ ಕ್ರೋಧಗೊಂಡ ಶ್ರೀನಿವಾಸ ಚೋಳರಾಜನಿಗೆ ಪಿಶಾಚಿಯಾಗು ಎಂದು ಶಾಪ ನೀಡುತ್ತಾನೆ. ಅರಿಯದೇ ಮಾಡಿದ ತಪ್ಪಿಗಾಗಿ ವಿಮೋಚನೆ ಕೇಳಿದಾಗ ಮುಂದೊಂದು ದಿನ ಒಂದು ಸ್ಥಳದಲ್ಲಿ ನೆಲೆಯಾಗಿ ನಿಂತಾಗ ತನಗೆ ಮುತ್ತಿನ ಕಿರೀಟ ನೀಡುತ್ತಾರೆ. ಅದನ್ನು ಮೂರು ಕ್ಷಣದೊಳಗೆ ನೋಡಿದರೆ ನಿನ್ನ ಶಾಪ ವಿಮೋಚನೆ ಎನ್ನುವ ಪರಿಹಾರ ನೀಡಿ, ಹಣೆಗಾದ ಗಾಯಕ್ಕೆ ಅತ್ತಿಹಾಲನ್ನು ಹುಡುಕುತ್ತಾ ಮುಂದುವರಿಯುತ್ತಾನೆ. ಹೀಗೆ ದಾರಿಯಲ್ಲಿ ಮುಂದುವರಿಯುವಾಗ ದಾರಿಯಲ್ಲಿ ವರಾಹಸ್ವಾಮಿ ಸಿಕ್ಕಿ ಪರಿಚಯ ಮಾಡಿಕೊಳ್ಳುತ್ತಾನೆ. ಶ್ರೀನಿವಾಸ ಎನ್ನುವ ಹೆಸರನ್ನು ಕೇಳಿದಾಗ ಬಕುಳಾದೇವಿ ಹೇಳಿದ ಹುಡುಗ ಈತನೇ ಇರಬೇಕೆನ್ನುವ ನೆಲೆಯಲ್ಲಿ ಆತನನ್ನು ಕರೆದುಕೊಂಡು ಆಶ್ರಮಕ್ಕೆ ತೆರಳುತ್ತಾನೆ. ಬಕುಳಾದೇವಿಯೇ ಶ್ರೀನಿವಾಸನ ತಾಯಿ ಎನ್ನುವುದು ಗೊತ್ತಾಗಿ ತಾಯಿ-ಮಗ ಒಂದಾಗುತ್ತಾರೆ. ಇದಕ್ಕೂ ಪೂರ್ವ ಹಿನ್ನೆಲೆಯಿದೆ. ಶ್ರೀಕೃಷ್ಣ ಪರಂದಾಮದಲ್ಲಿ ಶ್ರೀಕೃಷ್ಣ ಯಶೋಧೆಯಲ್ಲಿ ಅಮ್ಮಾ ನಿನಗೆ ಏನಾದರೂ ಆಸೆ ಇದ್ದರೆ ಹೇಳು? ಅದನ್ನು ನಾನು ನಡೆಸಿಕೊಡುತ್ತೇನೆ ಎಂದಾಗ ೧೬ಸಾವಿರಕ್ಕೂ ಅಧಿಕ ಮಂದಿ ಸ್ತ್ರೀಯರನ್ನು ವಿವಾಹವಾದರೂ ಕಲ್ಯಾಣವನ್ನು ನೋಡುವ ಭಾಗ್ಯ ನನ್ನ ಪಾಲಿಗೆ ಇಲ್ಲದಾಯಿತು. ನನ್ನ ಪಾಲಿಗೆ ಕಲ್ಯಾಣವನ್ನು ನೋಡುವ ಭಾಗ್ಯವನ್ನು ಯಾವಾಗ ಕರುಣಿಸಿತ್ತಿಯಾ ಎಂದು ಕೇಳಿದಾಗ ಶ್ರೀನಿವಾಸ ಎನ್ನುವ ರೂಪದಲ್ಲಿ ಭೂಲೋಕದಲ್ಲಿ ಜನ್ಮತಾಳಿದಾಗ ಕಲ್ಯಾಣವನ್ನು ನೋಡುವ ಭಾಗ್ಯ ಕರುಣಿಸುತ್ತೇನೆ ಎಂದು ಅಭಯವನ್ನಿತ್ತಿದ್ದನು.
ತಾಯಿ-ಮಗ ಒಂದಾಗಿದ್ದರೂ ಅವರನ್ನು ಚಿಂತೆಯೊಂದು ಕಾಡುತ್ತಿದ್ದು, ಉಳಿದುಕೊಳ್ಳಲು ಸ್ಥಳವಿರಲಿಲ್ಲ. ಅದಕ್ಕೆ ವರಾಹ ೧೦೦ಅಡಿ ಭೂಮಿಯನ್ನು ನೀಡುತ್ತಾನೆ. ಅಲ್ಲಿಯೇ ವಾಸವಾಗಿದ್ದರು. ಒಂದು ದಿನ ಶ್ರೀನಿವಾಸ ಭೇಟೆಗೆಂದು ತೆರಳಿದಾಗ ತೊಂಡ ದೇಶದ ರಾಜ ಆಕಾಶರಾಜನ ಮಗಳಾದ ಪದ್ಮಾವತಿಯನ್ನು ನೋಡಿ, ಮದುವೆಯಾಗುವಂತೆ ಭಿನ್ನವಿಸುತ್ತಾನೆ. ಲಕ್ಷ್ಮೀಯೇ ಪದ್ಮಾವತಿಯಾಗಿ ಜನ್ಮತಾಳಿದ್ದೂ, ಅವನೇ ತನ್ನ ರಮಣ ಎನ್ನುವುದಾಗಿ ತಿಳಿದಿರುವುದಿಲ್ಲ. ಮದುವೆಯ ಭಿನ್ನವಿಕೆಯನ್ನು ತಿರಸ್ಕರಿಸಿ ತೆರಳುವಾಗ ಶ್ರೀನಿವಾಸನು ಪದ್ಮಾವತಿಯ ಹಣೆಯ ಮೇಲೆ ಕೈಯಿಟ್ಟಾಗ ಆತನೇ ತನ್ನ ಪತಿ ಎನ್ನುವುದು ತಿಳಿಯುತ್ತದೆ. ಭೇಟೆಯಿಂದ ಮನೆಗೆ ಬಂದ ಶ್ರೀನಿವಾಸ ಚಿಂತೆಯಿಂದ ಮಲಗಿರುವುದನ್ನು ನೋಡಿ ತಾಯಿ ಪ್ರಶ್ನಿಸಿದಾಗ ಈ ವಿಷಯವನ್ನು ಪ್ರಸ್ತಾಪಿಸುತ್ತಾನೆ. ನಂತರ ತಾಯಿ ಆಕಾಶರಾಜನಲ್ಲಿ ಮದುವೆಯ ಪ್ರಸ್ತಾಪವಿಟ್ಟಾಗ ಆತ ಮದುವೆಗೆ ಮುಕ್ಕೊಟಿ ದೇವತೆಗಳು ಆಗಮಿಸಬೇಕು. ಅಲ್ಲದೇ ತ್ರಿಮೂರ್ತಿಗಳು ಉಪಸ್ಥಿತರಿದ್ದು, ಬ್ರಹ್ಮನ ಪುರೋಹಿತ್ಯ ನಡೆಯಬೇಕು. ಅಲ್ಲದೇ ಹೇರಳವಾದ ಧನಕನಕಗಳನ್ನು ನೀಡಬೇಕು ಎಂದಾಗ ಶ್ರೀನಿವಾಸ ಕುಬೇರನಲ್ಲಿ ಸಾಲ ಪಡೆದು ನಿಧಾನವಾಗಿ ತೀರಿಸಿದರಾಯಿತು ಎನ್ನುವ ಸಲಹೆ ನೀಡುತ್ತಾನೆ. ಈ ರೀತಿಯಾಗಿ ಪದ್ಮಾವತಿಯನ್ನು ಮದುವೆಯಾದ ಶ್ರೀನಿವಾಸ ತಿರುಮಲದಲ್ಲಿ ನೆಲೆಯಾಗಿ ನಿಲ್ಲುತ್ತಾನೆ. ಇದೇ ಸಂದರ್ಭದಲ್ಲಿ ತಿರುಪತಿಗೆ ಬಂದಾಗ ಮೊದಲು ವರಾಹ ಸ್ವಾಮಿಗೆ ಪೂಜೆ ನೀಡಬೇಕು. ಅಲ್ಲಿನ ಲಡ್ಡುಪ್ರಸಾದ ಮಹತ್ವದ್ದಾಗಿದೆ. ಅಲ್ಲದೇ ಇಲ್ಲಿಗೆ ಬರುವ ಭಕ್ತರು ಮೂರು ಮೂಕ್ಕಾಲು ಘಳಿಗೆಯಲ್ಲಿ ತಿರುಪತಿ ತಿಮ್ಮಪ್ಪನ ಮುತ್ತಿನ ಕಿರೀಟ ನೋಡುತ್ತಾರೋ ಅವರ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎನ್ನುವ ಅಭಯವನ್ನು ನೀಡುತ್ತಾನೆ.
ವಾತಾವರಣ ಮತ್ತು ಸಂಪರ್ಕ:
ತಿರುಪತಿಗೆ ಬರುವುದು ಅತ್ಯಂತ ಸುಲಭವಾಗಿದ್ದು, ಪ್ರಯಾಣ ಸಾಕಷ್ಟು ಆರಾಮದಾಯಕ. ರೇನಿಗುಂಟಾ ವಿಮಾನ ನಿಲ್ದಾಣ ತಿರುಪತಿಯಿಂದ ೧೫ ಕಿ.ಮೀ ದೂರದಲ್ಲಿದೆ. ದಿಲ್ಲಿ, ಹೈದರಾಬಾದ್, ಬೆಂಗಳೂರು, ಚೆನ್ನೈ ಮತ್ತಿತರ ಭಾಗಗಳಿಂದ ರೇನಿಗುಂಟಾಗೆ ನಿರಂತರ ವಿಮಾನ ಸಂಪರ್ಕವಿದೆ. ದೇಶದ ಎಲ್ಲಾ ನಗರಗಳಿಂದ ನೇರಸಂಪರ್ಕ ಹೊಂದಿರುವ ಉತ್ತಮ ರೈಲು ನಿಲ್ದಾಣ ತಿರುಪತಿಯಲ್ಲಿಯೇ ಇದೆ. ಖಾಸಗಿ ಸರಕಾರಿ ಬಸ್‌ಗಳಿಗಂತೂ ಕೊರತೆಯಿಲ್ಲ. ಚೆನ್ನೈ, ಬೆಂಗಳೂರು, ವೈಜಾಗ್, ಹೈದ್ರಾಬಾದ್‌ಗಳಿಂದ ಇಲ್ಲಿಗೆ ಸಂಪರ್ಕವಿದೆ. ನಗರದ ಒಳಗೆ ಸಂಚರಿಸುವುದು ಕೂಡ ಆರಾಮದಾಯಕವಾಗಿದ್ದು, ಕಾರು, ಬಸ್‌ಗಳು ಸಾಕಷ್ಟಿವೆ. ಒಂದು ದಿನದ ಬಾಡಿಗೆ ರೂಪದಲ್ಲಿ ನಗರ ಸುತ್ತಲೂ ಕಾರುಗಳು ಕೂಡ ಇಲ್ಲಿ ಸಿಗುತ್ತವೆ. ಸಾಮಾನ್ಯ ದರದಲ್ಲಿ ಇವು ಸಿಗುವುದು ವಿಶೇಷ. ಚಳಿಗಾಲದಲ್ಲಿ ಅಂದರೆ ಡಿಸೆಂಬರ್‌ನಿಂದ ಫೆಬ್ರವರಿ ನಡುವಿನ ಅವಧಿ ತಿರುಪತಿ ಭೇಟಿಗೆ ವರ್ಷದಲ್ಲೆ ಉತ್ತಮ ಕಾಲ. ಬೇಸಿಗೆಯಲ್ಲಿ ವಿಪರೀತ ಸೆಖೆ ಇರುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದೇ ಒಳಿತು. ಮಳೆಗಾಲದ ಸಂದರ್ಭದಲ್ಲಿ ಇಲ್ಲಿನ ಸೌಂದರ್ಯ ಒಂದಿಷ್ಟು ಹೆಚ್ಚಿಸುತ್ತದೆ. ತಿರುಪತಿ ನಗರವೇ ಧಾರ್ಮಿಕ ಆಚರಣೆ, ನಡತೆಗೆ ಹೆಸರಾದ ತಾಣ. ಇಲ್ಲಿಗೆ ಬರುವಾಗ ತರುವ ಹಾಗೂ ತರಬಾರದ ವಸ್ತುಗಳ ಬಗ್ಗೆ ಪ್ರವಾಸಿಗರು ತಿಳಿದಿದ್ದರೆ ಉತ್ತಮ. ಸೂಕ್ತ ಬಟ್ಟೆ ತೊಡುವುದು ಇಲ್ಲಿ ಮುಖ್ಯ. ಟೋಪಿ ಅಥವಾ ಹ್ಯಾಟ್‌ಗಳನ್ನು ತರದಿದ್ದರೆ ಉತ್ತಮ. ಜಡೆಗೆ ಹೂ ಮುಡಿಯುವಂತಿಲ್ಲ. ಏಕೆಂದರೆ ಹೂವು ದೇವರಿಗೆ ಮಾತ್ರ ಇಲ್ಲಿ ಮೀಸಲು. ಮಾಂಸ ಹಾಗೂ ಮದ್ಯ ಇಲ್ಲಿ ಸಮರ್ಪಕವಾಗಿ ಸಿಗುವುದಿಲ್ಲ. ಅಲ್ಲದೇ ಸೇವಿಸುವುದನ್ನು ನಿಷೇಧಿಸಲಾಗಿದೆ. ಕ್ಯಾಮರಾ, ಫೋನ್ ಇತ್ಯಾದಿ ವಸ್ತುವನ್ನು ದೇವಾಲಯದ ಆವರಣದಲ್ಲಿ ಬಳಸುವಂತಿಲ್ಲ. ತಿರುಪತಿ ಧಾರ್ಮಿಕ ಆಚರಣೆಗೆ ಮಾತ್ರ ಹೆಸರಾಗಿಲ್ಲ. ಬದಲಾಗಿ ಒಂದು ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿದೆ. ತನ್ನದೇ ಆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಬಿಂಬಿಸುತ್ತದೆ.
No comments:
Post a Comment