Thursday, 25 October 2012

ಕಾನೂನು ಉಲ್ಲಂಘನೆ: ಖಾಸಗಿ ಆಟೋಗಳಲ್ಲಿ
ಪ್ರಯಾಣಿಕರ ಸಾಗಾಟಕ್ಕೆ ಬೇಕಿದೆ ಕಡಿವಾಣ

*ಸಂದೇಶ ಶೆಟ್ಟಿ  ಆರ್ಡಿ
ಮಂಗಳೂರು: ಮನುಷ್ಯನ ದೈನಂದಿನ ಓಡಾಟಕ್ಕೆ ಆಟೋರಿಕ್ಷಾ ಅಗತ್ಯವಾಗಿದ್ದು, ಹಳದಿ ಪಟ್ಟಿಯ ಆಟೋಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ನಗರದಲ್ಲಿ ಪ್ರೈವೇಟ್ ಆಟೋಗಳ ಸಂಖ್ಯೆ ವಿಪರೀತವಾಗಿದೆ. ಸ್ವಂತ ಬಳಕೆಗೆಂದು ಸಾರಿಗೆ ಇಲಾಖೆಗೆ ವಿಶೇಷ ಅಫಿದಾವಿತ್ ನೀಡಿ ಲೈಸನ್ಸ್ ಪಡೆದುಕೊಂಡು ಇಂದು ಕಾನೂನಿನ ಕಣ್ಣಿಗೆ ಮಣ್ಣೆರಚಿ ಪ್ರಯಾಣಿಕರನ್ನು ಸಾಗಿಸುತ್ತಿದ್ದಾರೆ. ಖಾಸಗಿ ಆಟೋ ಚಾಲಕರು ಹೊಟ್ಟೆಪಾಡಿಗೆ ಈ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಕೊಂಡು ಸುಮ್ನಿದ್ದರೂ, ಖಾಸಗಿ ಆಟೋ ಪ್ರಯಾಣಿಕರಿಗೆ ಮಾತ್ರ ಯಾವ ಸುರಕ್ಷತೆ ಇಲ್ಲದಿರುವುದರ ಬಗ್ಗೆ ನಾಗರಿಕರು ಹಾಗೂ ಸಾರಿಗೆ ಇಲಾಖೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕಿದೆ.
ಮಂಗಳೂರು ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿರುವ ಬಂಟ್ವಾಳ, ವಿಟ್ಲ, ಮೂಡಬಿದ್ರೆ, ಉಳ್ಳಾಲ, ಸುರತ್ಕಲ್, ಮೂಲ್ಕಿ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಸುಮಾರು ೨೦೦ರಿಂದ ೩೦೦ ಖಾಸಗಿ ಆಟೋಗಳಾಗಿ ಪರಿವರ್ತನೆ ಆಗಿವೆ. ಅಫಿದಾವಿತ್ ನೀಡುವಾಗ ಮಾಲಕರಿಗೆ ಸೂಚನೆ ನೀಡಿದ್ದರೂ ಸ್ವ-ಉದ್ಯೋಗಕ್ಕೆ (ಬಾಡಿಗೆಗೆ) ಉಪಯೋಗಿಸದೆ ಸ್ವಂತ ಬಳಕೆಗೆ ಖಾಸಗಿ ಆಟೋ ಬಳಸಬೇಕು ಎಂದು ತಿಳಿಸಲಾಗಿದೆ. ಸ್ವ-ಉದ್ಯೋಗಕ್ಕಾಗಿಯೆ ಹಳದಿ ಪಟ್ಟಿ ಹೊಂದಿರುವ ಆಟೋರಿಕ್ಷಾ ಕಾರ್ಯ ನಿರ್ವಹಿಸುತ್ತಿವೆ. ಇಲಾಖೆ ವ್ಯಾಪ್ತಿಯಲ್ಲಿ ೧೯,೫೦೦ ಹಾಗೂ  ಮಂಗಳೂರು ತಾಲೂಕಿನಲ್ಲಿ ೫,೬೮೩ ಹಳದಿ ಪಟ್ಟಿಯ ಆಟೋಗಳಿವೆ. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ನಗರ ಭಾಗಕ್ಕೆ ವಲಯ-೧ಎಂದು ಗುರುತಿಸಿ ಇದು ನೀಲಿ ಪಟ್ಟಿ, ಬಿಳಿ ಸಂಖ್ಯೆ ಹೊಂದಿದ್ದು ಈಗ ೫,೬೩೩ ಆಟೋರಿಕ್ಷಾಗಳು ಕಾರ್ಯ ನಿರ್ವಹಿಸುತ್ತಿವೆ. ಗ್ರಾಮಾಂತರದಲ್ಲಿ ವಲಯ-೨ ಎಂದು ಗುರುತಿಸಲಾಗಿದ್ದು ಹಳದಿ ಪಟ್ಟಿ , ಕಪ್ಪು ಸಂಖ್ಯೆಯನ್ನು ಒಳಗೊಂಡಿದೆ. ಖಾಸಗಿ ರಿಕ್ಷಾಗಳು ಬಿಳಿಪಟ್ಟಿ ಹೊಂದಿದ್ದು ಅವುಗಳನ್ನು ಗುರುತಿಸಬಹುದಾಗಿದೆ.
ಖಾಸಗಿ ಆಟೋರಿಕ್ಷಾದಲ್ಲಿ ಪ್ರಯಾಣಿಸುವುದು ಕಾನೂನು ವಿರೋಧಿ:
ಹಳದಿ ಪಟ್ಟಿಯ ಆಟೋದ ಲೈಸನ್ಸ್ ಪಡೆದ ಮಾಲಕರು ಸ್ವಂತ ಉಪಯೋಗಕ್ಕೆ ವಿಶೇಷ ಅಫಿದಾವಿತ್ ಸಲ್ಲಿಸಿ (ಹೊಸ ಆಟೋ ಹೊರತು ಪಡಿಸಿ) ಖಾಸಗಿಯಾಗಿ ಮಾರ್ಪಾಟು ಮಾಡಿಕೊಂಡಿರುತ್ತಾರೆ. ಖಾಸಗಿ ಆಟೋದಲ್ಲಿ ಎಫ್‌ಸಿ, ಪರ್ಮಿಟ್, ಮೆಡಿಕ್ಲೈಮ್ ಯಾವುದು ಇರುವುದಿಲ್ಲ. ಕುಟುಂಬಿಕರನ್ನು ಹೊರತು ಪಡಿಸಿ ಇತರ ಪ್ರಯಾಣಿಕರು ಖಾಸಗಿ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅಪಘಾತವಾದರೆ ಸರಕಾರದಿಂದ ಯಾವುದೆ ಪರಿಹಾರ ದೊರಕುವುದಿಲ್ಲ. ಖಾಸಗಿ ವಾಹನದಲ್ಲಿ ಕೊಂಡೊಯ್ಯುವ ಸಾಹಸಕ್ಕೆ ಮನಮಾಡುವ ಮಾಲಕನಿಗೆ ರೂ.೨೦೦೦ ದಂಡ ನಿಗದಿ ಮಾಡಿದ್ದರೂ, ಕೇಸು ದಾಖಲಿಸಿ ಕೋರ್ಟ್‌ಗೆ ಹಾಕಲಾಗುತ್ತದೆ. ಆದರೂ ಕೂಡ ನಗರದ ಹೊರಭಾಗದಲ್ಲಿ ಕಾನೂನಿಗೆ ಮಣ್ಣೆರಚಿ (ಕಸಬ ಬೇಂಗ್ರೆ)ಪ್ರಯಾಣಿಕರನ್ನು ಸಾಗಿಸುವ ಅಂಶ ತಿಳಿದುಬಂದಿದೆ.
ಸರಕಾರದಿಂದ ಸಬ್ಸಿಡಿ:
೩೧ ಮಾರ್ಚ್ ೨೦೦೦ದೊಳಗೆ ನೋಂದಾವಣೆಗೊಂಡ ೨ಸ್ಟ್ರೋಕ್‌ನ ಆಟೋರಿಕ್ಷಾದ ಆರ್‌ಸಿ ಕ್ಯಾನ್ಸಲ್ ಮಾಡಿ ಅಥವಾ ಮಾರಾಟ ಮಾಡಿ ಹೊಸದಾಗಿ ಬಂದಿರುವ ೪ ಸ್ಟ್ರೋಕ್‌ನ ಎಲ್‌ಪಿಜಿಯುಕ್ತ ಆಟೋ ಖರೀದಿಸಿದಾಗ ಆ ಮಾಲಕರಿಗೆ ರೂ.೧೫,೦೦೦ ಸಬ್ಸಿಡಿ ನೀಡಲಾಗುತ್ತದೆ. ಪ್ರಾರಂಭದಲ್ಲಿ ಸಬ್ಸಿಡಿ ರೂ.೨೦೦೦ಇದ್ದು ೨೦೦೮-೦೯ರಿಂದ ರೂ.೧೫,೦೦೦ ಆಗಿದೆ. ಮಂಗಳೂರು ಇಲಾಖಾ ವ್ಯಾಪ್ತಿಯಲ್ಲಿ ೫೦೦ಕ್ಕೂ ಹೆಚ್ಚು ಹಳೆ ರಹದಾರಿ ಅಳವಡಿಸಿದ ಹೊಸ ಆಟೋರಿಕ್ಷಾಗಳು ಚಲಿಸುತ್ತಿವೆ. ಅಲ್ಲದೆ ೧೫ ವರ್ಷಕ್ಕೂ ಮೇಲ್ಪಟ್ಟ ಹಳೆ ಆಟೋವನ್ನು ಬದಲಾಯಿಸಬೇಕು ಎನ್ನುವ ನಿಯಮವಿರುವುದರಿಂದ ಹಳೆ ಆಟೋವನ್ನು ಖಾಸಗಿಯಾಗಿ ಬಳಸುತ್ತೇವೆ ಎನ್ನುವ ವಾದ ಮಾಡುವ ಮಾಲಕರು ಇದ್ದಾರೆ ಎನ್ನುವ ಮಾತು ಇಲಾಖಾ ವಲಯದಲ್ಲಿ ಕೇಳಿ ಬರುತ್ತಿದೆ. ಅದುವೆ ಈಗ ಕಾನೂನಿಗೆ ಮಾರಕವಾಗಿದೆ.
ಆಟೋಗಳಲ್ಲಿ ವಿಪರೀತ ಮಕ್ಕಳ ಸಾಗಾಟ:
ಶಾಲಾ ಮಕ್ಕಳನ್ನು ಕೊಂಡೊಯ್ಯುವ ಆಟೋ ಹಾಗೂ ಓಮ್ನಿಗಳಲ್ಲಿ ಅವುಗಳಲ್ಲಿರುವ ಸೀಟುಗಳ ವ್ಯವಸ್ಥೆಗೆ ತಕ್ಕಂತೆ ಮಕ್ಕಳನ್ನು ತುಂಬಿಸಿಕೊಳ್ಳಬೇಕು ಎನ್ನುವ ಕಾನೂನು ಇಲಾಖೆ ವತಿಯಿಂದ ನೀಡಲಾಗಿತ್ತು. ಆಟೋದಲ್ಲಿ ೬ ಹಾಗೂ ಓಮ್ನಿಯಲ್ಲಿ ಸೀಟುಗಳಿಗೆ ತಕ್ಕಂತೆ ಮಕ್ಕಳನ್ನು ಸಾಗಿಸಬೇಕು. ಮೊಬೈಲ್‌ನಲ್ಲಿ ಮಾತನಾಡುವುದು, ಕೆಟ್ಟ ಹಾಡುಗಳನ್ನು ಜೋರಾಗಿ ಪ್ರಸಾರಮಾಡುವುದರಿಂದ ಮುಗ್ದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವ ಅಂಶವನ್ನು ತಿಳಿಸಿದ್ದರೂ, ಇತ್ತೀಚಿನ ದಿನದಲ್ಲಿ ಕಾನೂನು ಉಲ್ಲಂಘಿಸಿ ಅತಿ ಹೆಚ್ಚಿನ ಮಕ್ಕಳನ್ನು ಕೊಂಡೊಯ್ಯುವುದು ಅಪಾಯಕ್ಕೆ ಕರೆ ನೀಡಿದಂತೆ ಅಲ್ಲವೆ ಎನ್ನುವ ಮಾತಿಗೆ ಸಾರಿಗೆ ಅಧಿಕಾರಿ ಈ ಕುರಿತಂತೆ ಜಿಲ್ಲೆಯ ೮ ಶಾಲೆಗಳಲ್ಲಿ ಮಕ್ಕಳ ಪೋಷಕರು, ಶಾಲಾ ಆಡಳಿತ ಮಂಡಳಿ, ಶಿಕ್ಷಣ, ಪೊಲೀಸ್, ಸಾರಿಗೆ ಇಲಾಖೆಗಳು ಮತ್ತು ವಾಹನ ಚಾಲಕ ಹಾಗೂ ಮಾಲಕರನ್ನು ಕರೆದು ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದರೂ ಕಾನೂನು ಉಲ್ಲಂಘಿಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಶೀಘ್ರದಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
ಹೊಸ ರೂಪದಲ್ಲಿ ನಗರಕ್ಕೆ ಬರುತ್ತಿದೆ ಪ್ರೀಪೇಡ್ ಆಟೋ ಸರ್ವಿಸ್:
ಸೆಂಟ್ರಲ್ ರೈಲ್ವೆ ಸ್ಟೇಷನ್, ಕಂಕನಾಡಿ, ಕೆಎಸ್‌ಆರ್‌ಟಿಸಿಯಲ್ಲಿ ಪ್ರೀಪೇಡ್ ಆಟೋ ಸರ್ವಿಸ್ ಬರುತ್ತಿದ್ದು, ಎರಡು ಕಡೆಯಿರುವ ಹಳೆ ಕೇಂದ್ರ ತೆಗೆದು ಹೊಸದಾಗಿ ರಚಿಸಲಾಗುವುದು. ಕಂಕನಾಡಿಯಲ್ಲಿ ಹೊಸದಾಗಿ ಪ್ರಾರಂಭಿಸಲಾಗುವುದು. ಈ ಕೇಂದ್ರದಲ್ಲಿ ಹ್ಯಾಂಡ್ ಕಂಪ್ಯೂಟರ್ ನೀಡಿ ವ್ಯವಸ್ಥಿತವಾಗಿ ನಿರ್ವಹಿಸುವುದರಿಂದ ಎಲ್ಲಾ ಮಾಹಿತಿ ದೊರಕಿ ಕಾನೂನಿನ ರಕ್ಷಣೆ ಸುಲಭವಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಶೆಲ್ಟರ್‌ನ್ನು ಈ ಕೇಂದ್ರದಲ್ಲಿ  ನಿರ್ಮಿಸಲಾಗುತ್ತದೆ.


ರಸ್ತೆ ಅಪಘಾತಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಆಟೋದಲ್ಲಿ ಹೆಚ್ಚಿನ ಪ್ರಯಾಣಿಕರು ಹಾಗೂ ಗೂಡ್ಸ್ ರಿಕ್ಷಾಗಳಲ್ಲಿ ಕಾರ್ಮಿಕರನ್ನು ಸಾಗಿಸುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಕಂಪೆನಿಯ ಮಾಲಕರೊಂದಿಗೆ ಈ ಕುರಿತು ಚರ್ಚಿಸಲಾಗುವುದು. ಖಾಸಗಿ ಆಟೋದಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನಿಗೆ ವಿರುದ್ಧ. ಇದರಿಂದ ಪ್ರಯಾಣಿಕರಿಗೆ ಯಾವುದೇ ಭದ್ರತೆಯಿರುವುದಿಲ್ಲ.
ಸಿ. ಮಲ್ಲಿಕಾರ್ಜುನ,
ಸಾರಿಗೆ ಅಧಿಕಾರಿ ಮಂಗಳೂರು ವಿಭಾಗ



No comments:

Post a Comment