Saturday 27 October 2012

ಗ್ಯಾಸ್ ಟ್ರಬಲ್‌ನಿಂದ ವಸತಿ ನಿಲಯದ ಸಂಜೆಯ ಉಪಾಹಾರಕ್ಕೆ ಬೀಳುವುದೇ ಕತ್ತರಿ?

ಮಂಗಳೂರು: ಕೇಂದ್ರ ಯುಪಿಎ ಸರಕಾರ ಪೆಟ್ರೋಲಿಯಂ ತೈಲೋತ್ಪನ್ನ ಹಾಗೂ ಜೀವನ ನಿರ್ವಹಣೆಗೆ ಅಗತ್ಯವಾದ ಮೂಲಭೂತ ವಸ್ತುಗಳ ಬೆಲೆಯೇರಿಕೆ ಮಾಡಿದ್ದು ಮದ್ಯಮ ವರ್ಗದ ಜನತೆಯ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರಿಂದ ಚೇತರಿಸಿಕೊಳ್ಳುವ ಮುಂಚೆಯೆ ಸರಕಾರದ ವತಿಯಿಂದ ಸಬ್ಸಿಡಿಯಲ್ಲಿ ವರ್ಷಕ್ಕೆ ಕೇವಲ ೬ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎನ್ನುವ ಆದೇಶ ಹೊರಡಿಸಿದೆ. ಕೇಂದ್ರ ಸರಕಾರದ ಈ ನೀತಿಯಿಂದಾಗಿ ಸರ್ವಶಿಕ್ಷಾ ಅಭಿಯಾನದ ಅಕ್ಷರ ದಾಸೋಹದಲ್ಲಿ ಹಾಗೂ ಸರಕಾರದಿಂದ ನಡೆಸಲ್ಪಡುವ ವಸತಿ ನಿಲಯಕ್ಕೆ ಮುಳುವಾಗಿ ಪರಿಣಮಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಮತ್ತು ಇತರ ವಸತಿ ನಿಲಯದಲ್ಲಿ ಈಗಾಗಲೆ ನೀಡುತ್ತಿರುವ ಮದ್ಯಾಹ್ನದ ಉಪಹಾರ ನಿಲ್ಲಿಸುವ ಕುರಿತು ಚರ್ಚಿಸಲಾಗುತ್ತಿದೆ. ಕೇಂದ್ರ ಸರಕಾರದ ವರ್ಷಕ್ಕೆ ಕೇವಲ ೬ ಸಿಲಿಂಡರ್ ಎನ್ನುವ ನೀತಿ ಹಾಸ್ಟೆಲ್ ವಿದ್ಯಾರ್ಥಿಗಳ ಪಾಲಿಗೆ ಒಂದು ಹೊತ್ತಿನ ಉಪಾಹಾರಕ್ಕೆ ಕುತ್ತು ತಂದಿದೆ.
ದ.ಕ.ಜಿಲ್ಲೆಯಲ್ಲಿ ೫೬ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಪ್ರಿ-ಮೆಟ್ರಿಕ್ ಹಾಗೂ ಕಾಲೇಜು ವಸತಿನಿಲಯದಲ್ಲಿ ೪,೩೭೫ ವಿದ್ಯಾರ್ಥಿಗಳು ಸೌಲಭ್ಯ ಪಡೆದಿದ್ದಾರೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಿಂದಲೂ ಜಿಲ್ಲೆಯಲ್ಲಿ ವಸತಿ ನಿಲಯಗಳು ಕಾರ್ಯಚರಿಸುತ್ತಿವೆ. ೪ ಮೊರಾರ್ಜಿ ದೇಸಾಯಿ ಹಾಸ್ಟೆಲ್‌ನಲ್ಲಿ ೧೦೦೦ ವಿದ್ಯಾರ್ಥಿಗಳು, ೧ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ೫೬೦ ವಿದ್ಯಾರ್ಥಿಗಳು ಹಾಗೂ ಅಲ್ಪಸಂಖ್ಯಾತ ೩ ವಸತಿ ನಿಲಯದಲ್ಲಿ ಸುಮಾರು ೨೦೦ವಿದ್ಯಾರ್ಥಿಗಳು ವಸತಿ ನಿಲಯದ ಸೌಲಭ್ಯ ಪಡೆಯುತ್ತಿದ್ದಾರೆ.
ಸರಕಾರದ ವತಿಯಿಂದ ವಸತಿ ನಿಲಯದಲ್ಲಿ ಉಳಿಯುವ ವಿದ್ಯಾರ್ಥಿಗೆ ೫ ರಿಂದ ೧೦ ನೇ ತರಗತಿಯವರೆಗೆ ರೂ.೭೫೦ ಹಾಗೂ ನಂತರದ ವಿದ್ಯಾರ್ಥಿಗಳಿಗೆ ರೂ.೮೫೦ರವರೆಗೆ ವೆಚ್ಚ ಮಾಡುತ್ತಿದೆ. ಈ ಮೊತ್ತದಲ್ಲಿಯೆ ಆಹಾರ, ವಸತಿ, ಗ್ಯಾಸ್ ಸೌಲಭ್ಯ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಬೇಕಿದೆ. ರಾಜ್ಯದ  ವಸತಿ ನಿಲಯದಲ್ಲಿ ನೀಡುತ್ತಿರುವ ಆಹಾರ ಸೌಲಭ್ಯ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರವಾದ ಮೀನು, ಮೊಟ್ಟೆ, ಕೋಳಿ ಇತ್ಯಾದಿ ಆಹಾರ ನೀಡಲಾಗುತ್ತಿದೆ. ಬೆಳಗ್ಗಿನ ಉಪಾಹಾರ, ಮದ್ಯಾಹ್ನದ ಊಟ, ಸಂಜೆಯ ಉಪಾಹಾರ ಮತ್ತು ರಾತ್ರಿ ಊಟ ನೀಡುತ್ತಿದೆ. ಕೇಂದ್ರ ಸರಕಾರ ವರ್ಷಕ್ಕೆ ನೀಡುತ್ತಿರುವ ೬ ಸಿಲಿಂಡರ್‌ನ ಬಿಸಿಯಲ್ಲಿಯೇ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೇಲ್ವಿಚಾರಕರು ಇನ್ನು ಮುಂದೆ ಸಂಜೆಯ ಉಪಾಹಾರ ಕಡಿತಗೊಳಿಸಲಿದ್ದೇವೆ ಎನ್ನುವ ಆಘಾತಕಾರಿ ಅಂಶವನ್ನು ಗಮನಕ್ಕೆ ತಂದಿದ್ದಾರೆ.
ಸರಕಾರದಿಂದ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಈಗಿರುವ ಮೊತ್ತದಂತೆ ಹಣ ವ್ಯಯ ಮಾಡಿದರೆ ಮುಂದಿನ ದಿನದಲ್ಲಿ ಗ್ಯಾಸ್ ಸಿಲಿಂಡರ್‌ನ ಕೊರತೆ ಕಂಡುಬರುತ್ತದೆ. ಕೇಂದ್ರದಿಂದ ಹೆಚ್ಚುವರಿ ಸಿಲಿಂಡರ್ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಆದರೂ ರಾಜ್ಯದ ಇತರ ಭಾಗಗಳಿಗೆ ಹೋಲಿಕೆ ಮಾಡಿದರೆ ಕರಾವಳಿಯಲ್ಲಿ ಗ್ಯಾಸ್‌ನ ಕೊರತೆ ಕಂಡುಬರುವುದು ಸಹಜ. ಇಲ್ಲಿರುವ ಹಾಸ್ಟೆಲ್‌ಗಳಲ್ಲಿ ಕುಚ್ಚಲು ಅಕ್ಕಿಯನ್ನು ಬಳಸುವುದರಿಂದ ಗ್ಯಾಸ್‌ನ ಅವಶ್ಯಕತೆ ಹೆಚ್ಚಾಗಿದೆ. ಅಕ್ಟೋಬರ್ ರಜಾ ಅವಧಿಯಾಗಿರುವುದರಿಂದ ವಸತಿ ನಿಲಯದಲ್ಲಿ ಈ ತಿಂಗಳು ಗ್ಯಾಸ್‌ನ ತೊಂದರೆ ಕಾಣಿಸಿಕೊಳ್ಳದಿದ್ದರೂ ಇದಕ್ಕೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ ಮುಂದಿನ ತಿಂಗಳು ಇದರ ಪರಿಣಾಮ ಕಾಣಿಸಿಕೊಳ್ಳುತ್ತದೆ ಎನ್ನುವ ಭೀತಿ ಇಲಾಖಾ ವಲಯದಲ್ಲಿದೆ. ವಿದ್ಯಾರ್ಥಿಗಳಲ್ಲಿ ಚರ್ಚಿಸಿರುವ ಅಂಶವನ್ನು ಅಧಿಕಾರಿಗಳಲ್ಲಿ ಕೇಳಿದರೆ ಸಂಜೆಯ ಉಪಾಹಾರವನ್ನು ಕಡಿತಗೊಳಿಸುವುದಿಲ್ಲ ಎನ್ನುವ ಉತ್ತರ ಬಂದಿದೆ.
ಕೇಂದ್ರ ಸರಕಾರದ ಗ್ಯಾಸ್‌ನ ನೀತಿಯಿಂದ ಎಲ್ಲಾ ವಲಯದ ಮೇಲೂ ಅದರ ಬಿಸಿ ತಟ್ಟಿದೆ ಎನ್ನುವುದರಲ್ಲಿ ಸಂಶಯವಿಲ್ಲಾ...ಇದಕ್ಕೆ ಶೀಘ್ರದಲ್ಲಿ ಪರಿಹಾರ ಕಾಣಬೇಕಾದ ಅಗತ್ಯವಿದೆ.

ಬಾಕ್ಸ್:
ಹಾಸ್ಟೆಲ್‌ಗಳಲ್ಲಿ ಈಗಿರುವ ಆಹಾರ ಪದ್ದತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಸಂಜೆ ಉಪಹಾರವನ್ನು ನಿಲ್ಲಿಸದೆ ಇದಕ್ಕೆ ಇಲಾಖಾ ವಲಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಅರುಣ್ ಪುರ್ಟಾಡೋ-ಸಮಾಜ ಕಲ್ಯಾಣ ಅಧಿಕಾರಿ ಮಂಗಳೂರು

No comments:

Post a Comment