Saturday, 27 October 2012


                                                                                   ಕೊಳಚೆ ನೀರಿನಿಂದಾವೃತವಾದ ಗುಜ್ಜರಕೆರೆ: ಮಳೆಗಾಲದಲ್ಲಿ ಜರಿದ ನಿರ್ಲಕ್ಷ್ಯದ ಕಾಮಗಾರಿ
ಮಂಗಳೂರು: ೧೮೦೦ ವರ್ಷದ ಇತಿಹಾಸವಿರುವ ಧಾರ್ಮಿಕ ಹಾಗೂ ಸಾಮಾಜಿಕ ಭಾವನೆಗೆ ಕಾರಣವಾಗಿರುವ ಪವಿತ್ರ ಗುಜ್ಜರಕೆರೆಯನ್ನು ಮುಂದಿನ ಜನಾಂಗಕ್ಕೆ ಉಳಿಸಬೇಕಾದ ಅವಶ್ಯಕತೆಯಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ೩.೪೩ಎಕ್ರೆ ವಿಸ್ತೀರ್ಣದಲ್ಲಿರುವ ಗುಜ್ಜರಕೆರೆ ಶಿಥಿಲಾವಸ್ಥೆಯಲ್ಲಿದೆ. ೨ ಕೋ.ರೂ ವೆಚ್ಚದಲ್ಲಿ ನವೀಕರಣಗೊಂಡ ಗುಜ್ಜರಕೆರೆಯ ಆವರಣ ಕುಸಿದಿದೆ.
ಮಂಗಳಾದೇವಿ ಸಮೀಪದಲ್ಲಿರುವ ಗುಜ್ಜರಕೆರೆಯು ಈಗ ಕಸಕಡ್ಡಿ, ಕೊಳಚೆನೀರು, ಹುಲ್ಲುಗಳಿಂದ ಕೂಡಿದೆ. ಮಾರ್ಗನ್ಸ್‌ಗೇಟ್, ಜಪ್ಪು ಮಾರ್ಕೆಟ್ ಹಾಗೂ ಇತರ ಪ್ರದೇಶಗಳಿಂದ ಹರಿದು ಬರುವ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೆ ಈ ಕೆರೆಯ ಆವರಣ ಗೋಡೆಯತ್ತ ನುಗ್ಗಿದ ಪರಿಣಾಮ ಒತ್ತಡ ತಾಳಲಾರದೆ ಗೋಡೆ ಕುಸಿದಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಸಭೆ, ಸಮಾರಂಭ ಎಂದು ಇದೇ ದಾರಿಯಲ್ಲಿ ತಿರುಗಾಡುತ್ತಿದ್ದರೂ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ.
ಕೆರೆಯ ಅಭಿವೃದ್ದಿ:
ಕೆರೆಯ ಅಭಿವೃದ್ಧಿಗೆಂದು ೨೦೦೮-೦೯ರಲ್ಲಿ ರೂ.೯೯.೫೦ ಲಕ್ಷ ಪ್ರಥಮ ಹಂತದ ಕಾಮಗಾರಿ ಮತ್ತು ೨೦೦೯-೧೦ರಲ್ಲಿ ೨ ನೇ ಹಂತದ ಕಾಮಗಾರಿಗಾಗಿ ರೂ. ೯೯.೫೦ ಲಕ್ಷ ಅನುದಾನ ದೊರಕಿತ್ತು. ಸ್ಥಳೀಯ ಶಾಸಕ ಎನ್.ಯೋಗೀಶ್ ಭಟ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಜೆ.ಪಾಲೆಮಾರ್ ಮುತುವರ್ಜಿ ವಹಿಸಿದ್ದರ ಪರಿಣಾಮ ಪಾಲಿಕೆ ವತಿಯಿಂದ ಕಾಮಗಾರಿ ಪ್ರಾರಂಭಗೊಂಡು, ಕೆರೆಯ ಸುತ್ತ ಆವರಣ ಗೋಡೆ ನಿರ್ಮಿಸಲಾಯಿತು. ಇಲ್ಲಿಯವರೆಗೆ ಕೆರೆಯ ಹೂಳೆತ್ತುವ ಕಾರ್ಯವಾಗಲಿಲ್ಲ.
ಕೆರೆಯ ನೀರು ಅಶುದ್ದ:
ಕೆರೆಯ ಪಕ್ಕದಲ್ಲಿ ಸುಮಾರು ೨೦೦ಕ್ಕೂ ಅಧಿಕ ಮನೆಗಳಿದ್ದು, ಕೆರೆಯ ಬದಿಯಲ್ಲಿ ಒಳಚರಂಡಿ ಹಾದು ಹೋಗಿದೆ. ಈ ಚರಂಡಿ ಬ್ಲಾಕ್ ಆದ ಸಮಯದಲ್ಲಿ ಒಳಚರಂಡಿಯನ್ನು ತೂತು ಮಾಡಿ ಈ ಕೆರೆಗೆ ಆ ಕೊಳಚೆ ನೀರನ್ನು ಬಿಟ್ಟಿದ್ದರು. ಅಲ್ಲದೆ ಇನ್ನೊಂದು ಮಾರ್ಗದಿಂದ ಚರಂಡಿಯ ಕೊಳಚೆ ನೀರು ಈ ದಿಕ್ಕಿನಲ್ಲಿಯೇ ಹರಿಯುತ್ತಿದ್ದು ಅದನ್ನು ಮೊದಲಿನ ಮಾರ್ಗಕ್ಕೆ ಜೋಡಿಸಲಾಗಿದೆ. ಮಳೆಗಾಲದ ನೀರು ಹಾದು ಹೋಗಲು ಪರ್‍ಯಾಯ ಚರಂಡಿಗಳು ಇಲ್ಲದಿರುವುದರಿಂದ ಹಾಗೂ ಸುತ್ತಲಿನ ಮನೆಯವರು ಮನೆಬಳಕೆಗೆ ಬಳಸಿದ ಕೊಳಚೆ ನೀರು ಈ ಕೆರೆಗೆ ಬಂದು ಬೀಳುವುದರಿಂದ ವೈಭವದಿಂದ ಮೆರೆಯುವ ಪವಿತ್ರವಾದ ಈ ಸ್ಥಳ ಅಶುದ್ದವಾಗಿದ್ದು ಮಾತ್ರವಲ್ಲದೆ ಇಂದು ಸೊಳ್ಳೆಗಳ ಉತ್ಫತ್ತಿಯ ತಾಣವಾಗಿದೆ.
ಹೂಳು ತೆಗೆಯದೆ, ಪಾಚಿ ಮತ್ತಿತರ ತ್ಯಾಜ್ಯ ವಸ್ತುಗಳು, ಗಲೀಜು ನೀರು ಈ ಪವಿತ್ರ ಕೆರೆಯಲ್ಲಿ ತುಂಬಿಕೊಂಡ ಪರಿಣಾಮ ದೇವಿಯ ಸ್ನಾನದ ಕೆರೆ ಈಗ ಅಶುದ್ದವಾಗಿದೆ. ಪಾಲಿಕೆಯ ವತಿಯಿಂದ ವರ್ಷಂಪ್ರತಿ ಮಲೇರಿಯಾ, ಡೆಂಗ್ಯೂ ನಿಯಂತ್ರಣಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದು, ಗುಜ್ಜರಕೆರೆಯಲ್ಲಿ ಈ ರೋಗ ಹರಡುವ ಅನೇಕ ಸೊಳ್ಳೆಗಳ ಆವಾಸ ಸ್ಥಾನವಾಗುತ್ತಿದೆ.
ಅಂತರ್ಜಲ ವೃದ್ಧಿಗೆ ಕೆರೆಗಳು ಪೂರಕ:
ನಗರದ ಸುತ್ತಲೂ ಇರುವ ಪುರಾತನ ಕೆರೆಗಳಾದ ಗುಜ್ಜರಕೆರೆ, ಎಮ್ಮೆಕೆರೆ, ಅರೆಕೆರೆ, ಓಣಿಕೆರೆ, ತಾವರೆಕೆರೆ, ಮೊಯ್ಲಿಕೆರೆ, ಕಾವೂರು ಕೆರೆ, ಪಡೀಲಿನ ಬೈರಾಡಿ ಎಲ್ಲಾ ಕೆರೆಗಳು ಮಂಗಳೂರಿನ ಕುಡಿಯುವ ಹಾಗೂ ಇತರೆ ದೈನಂದಿನ ಬಳಕೆಯ ನೀರಿನ ಕೊರತೆಯನ್ನು ನೀಗಿಸುತ್ತಿದ್ದು, ಇಂದು ಕೆಲವು ಕೆರೆಗಳು ಸಂಪೂರ್ಣ ಮುಚ್ಚಿದ್ದು, ಕೆಲವೊಂದು ತ್ಯಾಜ್ಯಗುಂಡಿಗಳಾಗಿ ಬದಲಾವಣೆಗೊಂಡಿದೆ. ಕೆರೆಗಳು ನೀರಿನ ಮೂಲ ಮಾತ್ರವಾಗಿರದೆ, ಮಾನವನ ಬದುಕಿನ ಮೂಲ ಸೆಲೆಯಾಗಿದ್ದವು. ಹೈಕೋರ್ಟ್ ರಾಜ್ಯದಲ್ಲಿರುವ ಜೀವಂತ ಕೆರೆಗಳನ್ನು ಸಂರಕ್ಷಣೆ ಮಾಡಬೇಕು ಎನ್ನುವ ಆದೇಶ ನೀಡಿದ್ದರೂ ಅದರ ಸಂರಕ್ಷಣೆಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಅಂಶ ತಿಳಿದುಕೊಳ್ಳಬಹುದಾಗಿದೆ. ಅಂತರ್ಜಲ ವೃದ್ಧಿಗೆ ಕೆರೆಗಳು ಪೂರಕವಾಗಿದ್ದು ಕೆರೆಗಳಿಲ್ಲದೆ ಇಂಗುಗುಂಡಿಗಳ ನಿರ್ಮಾಣ ಮಾಡಲಾಗುತ್ತಿದೆ.
ಕೆರೆಗಳ ವೃದ್ಧಿಗೆ ಹೈಕೋರ್ಟ್‌ನ ಆದೇಶ:
ರಾಜ್ಯದಲ್ಲಿರುವ ಕೆರೆಗಳನ್ನು ಕಂದಾಯ ಇಲಾಖೆಯ ಮೂಲಕ ಸರ್ವೇ ಮಾಡಿಸಿ, ಕೆರೆಗಳ ಸುತ್ತ ತಂತಿ ಬೇಲಿ ಹಾಕಿಸಬೇಕು. ಕೆರೆ ಕಟ್ಟೆಗಳಿಗೆ ಕಲುಷಿತ ನೀರು ತ್ಯಾಜ್ಯ ವಸ್ತುಗಳು ಮಿಶ್ರಣವಾಗದಂತೆ ನೋಡಿಕೊಳ್ಳಬೇಕು ಎನ್ನುವ ಆದೇಶ ನೀಡಿದೆ. ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಚಾಚು ತಪ್ಪದೆ ಪಾಲಿಸಲು ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಸಮನ್ವಯ ಕಾಯ್ದು ಕೊಳ್ಳುವ ಉಸ್ತುವಾರಿಯನ್ನು ನ್ಯಾಯಾಂಗ ಪ್ರಾಧಿಕಾರಕ್ಕೆ ವಹಿಸಿದೆ.
ಪವಿತ್ರ ಗುಜ್ಜರಕೆರೆ:
ದ.ಕ.ಜಿಲ್ಲೆಯಲ್ಲಿ ಕೃಷಿಗೆ ಪ್ರಾದಾನ್ಯತೆ ಇದ್ದು, ಕೃಷಿಯಲ್ಲಿ ನೀರಿನ ಮಹತ್ವ ಎಲ್ಲರಿಗೂ ತಿಳಿದಿದ್ದು, ಅದಕ್ಕೆ ಹಿರಿಯರು ಕೆರೆಗಳನ್ನು ನಿರ್ಮಿಸಿಕೊಂಡಿದ್ದರು. ಜೆಪ್ಪು ಮಾರ್ಕೆಟ್ ಸಮೀಪವಿರುವ ಗುಜ್ಜರಕೆರೆ ೩.೪೩ ಎಕ್ರೆ ವಿಸ್ತೀರ್ಣವಿದ್ದು ೪೦ ಅಡಿಗಳಷ್ಟು ಆಳವಾಗಿದೆ. ಈ ಕೆರೆಯ ನೀರು ೩೦೦ ಮನೆಗಳ ಕೃಷಿ ಕಾರ್ಯಕ್ಕೆ ಬಳಕೆಯಾಗುತ್ತಿತ್ತು. ನವರಾತ್ರಿ ಸಂದರ್ಭದಲ್ಲಿ ಗುಜ್ಜರಕೆರೆಯಲ್ಲಿ ಮಂಗಳಾದೇವಿ ಮತ್ತು ಹಳೆಕೋಟೆ ಮಾರಿಯಮ್ಮ ದೇವರನ್ನು ಶುದ್ಧಿಕರಿಸಲಾಗುತ್ತಿತ್ತು. ಹಳೆಕೋಟೆ ಮಾರಿಯಮ್ಮ ದೇವಿಯನ್ನು ಕೆರೆಯ ಪಕ್ಕದಲ್ಲಿರುವ ಮಾರಿಯಮ್ಮ ಕಟ್ಟೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ಕುಳ್ಳಿರಿಸಿ, ಶೃಂಗರಿಸಿದ ಆಭರಣಗಳನ್ನೆಲ್ಲಾ ತೆಗೆದು ಈ ಕೆರೆಯಲ್ಲಿ ಸ್ನಾನ ಮಾಡಿಸುತ್ತಿದ್ದರು. ಆದರೆ ಈಗ ಕೆರೆ ಕೊಳಚೆ ನೀರಿನಿಂದ ಆವೃತವಾಗಿದ್ದರಿಂದ ದೇವಿಯನ್ನು ನೇತ್ರಾವತಿ ಹೊಳೆಯಲ್ಲಿ ಸ್ನಾನ ಮಾಡಿಸಲಾಗುತ್ತಿದೆ.
ಸರಕಾರವು ಅಂತರ್ಜಲ ವೃದ್ದಿಗೆ ಇಂಗುಗುಂಡಿಗಳನ್ನು ನಿರ್ಮಾಣ ಮಾಡುತ್ತಿದೆ. ಹಿಂದೆ ನಗರದಲ್ಲಿ ಸಾಮಾನ್ಯ ಚಟುವಟಿಕೆಗಳಿಗೆ ಉಪಯೋಗಿಸಲು ಯೋಗ್ಯವಾದ ಕೆರೆಯ ನೀರು ಕಲುಷಿತಗೊಂಡಿರುವುದು ಮಾತ್ರವಲ್ಲ. ಈಗ ಸರಕಾರದ ಅನುದಾನ ಕಡೆಗಣಿಸಲಾಗುತ್ತಿದೆ. ಇದನ್ನು ರಕ್ಷಿಸಲು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯು ಅಭಿಯಾನವನ್ನು  ಹಮ್ಮಿಕೊಂಡಿದೆ. ಜನಪ್ರತಿನಿಧಿಗಳು ಪವಿತ್ರ ಕ್ಷೇತ್ರದ ರಕ್ಷಣೆಗೆ ಕಂಕಣಬದ್ದರಾಗಬೇಕಿದೆ.

ಬಾಕ್ಸ್:
ಸ್ಥಳೀಯ ಜನಪ್ರತಿನಿಧಿಯೊಂದಿಗೆ ಸಂದರ್ಶನಕ್ಕೆ ಸಮಯವನ್ನು ಅವರೆ ನಿಗದಿ ಮಾಡಿದ್ದರೂ ಪತ್ರಕರ್ತರೊಂದಿಗೆ ಈವಿಷಯದ ಚರ್ಚೆಗೆ ಅವಕಾಶ ನೀಡದಿರುವುದು ಅವರಿಗೆ ಈ ಕುರಿತು ಇರುವ ಜನಪರ ಕಾಳಜಿಯನ್ನು ತೋರಿಸುತ್ತದೆ. ಅಲ್ಲದೇ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ವಹಿಸಿಕೊಂಡ ಗುತ್ತಿಗೆದಾರರು ಕಳೆದ ಮೂರ್‍ನಾಲ್ಕು ದಿನಗಳಿಂದ ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಗುಜ್ಜರಕೆರೆಯ ಪಕ್ಕದಲ್ಲಿ ವಾಸವಾಗಿರುವ ಜನತೆಯ ಆಸೆ ಯಾವಾಗ ಫಲಿಸುವುದೋ ಕಾದು ನೋಡಬೇಕಿದೆ.

ಗುಜ್ಜರಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿದರೆ ಮಂಗಳೂರಿನ ಕೆಲವೊಂದು ಪ್ರದೇಶಕ್ಕೆ ನೀರು ಸರಬರಾಜು ಮಾಡಬಹುದು. ಕಾಮಗಾರಿ ಶಿಥಿಲವಾಗಿ ಜರಿದ ಪರಿಣಾಮ ಕೊಳಚೆ ಹಾಗೂ ಮಳೆಯ ನೀರು ಗುಜ್ಜರಕೆರೆ ಸೇರಿ ಅಪವಿತ್ರವಾಗಿದೆ. ಜನಪ್ರತಿನಿಧಿಗಳು ಈ ಕುರಿತು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು. ಇಲ್ಲಿ ವಾಸವಿರುವ ಪ್ರತಿಯೊರ್ವರಿಗೂ ನವರಾತ್ರಿಯ ಸಂದರ್ಭದಲ್ಲಿ ಗುಜ್ಜರಕೆರೆಯಲ್ಲಿ ನಡೆಯುತ್ತಿದ್ದ ಹಿಂದಿನ ಸವಿನೆನಪುಗಳು ಮರುಕಳಿಸುತ್ತದೆ.
ಪಿ.ನೇಮು ಕೊಟ್ಟಾರಿ-ಕಾರ್ಯದರ್ಶಿ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ

No comments:

Post a Comment