Sunday, 28 October 2012



ಭಾರತ ಪರಿಕ್ರಮ ಯಾತ್ರೆಯ ರೂವಾರಿ ಸೀತಾರಾಮ ಕೆದಿಲಾಯರೊಂದಿಗೆ ಒಂದು ಕ್ಷಣ.

ಮಂಗಳೂರು: ಕಾಲ ಕೆಲವೊಂದು ಸಂದರ್ಭದಲ್ಲಿ ವಿಚಿತ್ರವಾಗಿದೆ ಅನಿಸುತ್ತದೆ? ಮಳೆಗಾಲದಲ್ಲಿ ಮಳೆ ಕಡಿಮೆಯಾಗಿದ್ದರೂ, ಚಳಿಗಾಲದಲ್ಲಿ ಮಾತ್ರ ಬೇಸಗೆಯಂಥ ಬಿಸಿಲು. ಆದರೂ ಕಳೆದೆರಡು ದಿನದಲ್ಲಿ ರಾಜ್ಯದ ಕೆಲವೊಂದು ಭಾಗದಲ್ಲಿ ವರುಣನ ಆಗಮನವಾಗಿದೆ. ಇದೇ ಸಂದರ್ಭದಲ್ಲಿ ಅಖಂಡ ಭಾರತದ ಕಲ್ಪನೆ ಹೊತ್ತ ದೇಶಭಕ್ತ ಸಂತನ ಆಗಮನ ರಾಜ್ಯ ಗಡಿಭಾಗದ ಕೇರಳದ ಕಾಸರಗೋಡಿನಲ್ಲಾಗಿದೆ. ೧೯೭೦ರಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಸೀತಾರಾಮ ಕೆದಿಲಾಯರು ಮೂಲತಃ ಪುತ್ತೂರಿನವರು. ದೇಹದ ಪ್ರತಿಯೊಂದು ಕಣದಲ್ಲಿಯೂ ದೇಶದ ಆಗುಹೋಗುಗಳ ಕುರಿತು ಚಿಂತಿಸುವ ಇವರು ಸ್ವಂತ ಕುಟುಂಬ, ಸ್ವ-ಪರಿಚಯ ಹೇಳಲೊಲ್ಲರು?
ಕನ್ಯಾಕುಮಾರಿಯಿಂದ ಆ.೯ರಂದು ಭಾರತ ಪರಿಕ್ರಮ ಯಾತ್ರೆ ಕೈಗೊಂಡ ಕೆದಿಲಾಯರು ಸತತ ೭೫ ದಿನಗಳನ್ನು ಪೂರೈಸಿದ್ದಾರೆ. ಬರಿಗಾಲಲ್ಲಿ ದೇಶ ಪರ್ಯಟನೆ ಹೊರಟು ದೇಶೀಯ ಜನರಲ್ಲಿ ಜಾಗೃತಿ ಭಾವ ಬಿತ್ತುತ್ತಿದ್ದಾರೆ. ವೈಜ್ಞಾನಿಕವಾಗಿ ಹಾಗೂ ವಾಹನಗಳ ಭರಾಟೆಯ ನಡುವೆಯೂ ಬರಿಗಾಲಲ್ಲಿ ಕನಿಷ್ಟ ೫ ವರ್ಷಗಳವರೆಗೆ ಪರಿಕ್ರಮ ಯಾತ್ರೆ ಕೈಗೊಳ್ಳುವುದು ಸಾಮಾನ್ಯ ಮಾತಲ್ಲ. ಈ ನಿಟ್ಟಿನಲ್ಲಿ ಕೆದಿಲಾಯರು ಅಸಾಧಾರಣ ವ್ಯಕ್ತಿಯಾಗಿ ಕಂಡು ಬರುತ್ತಾರೆ. ಅವರನ್ನು ಬಹಳ ಹತ್ತಿರದಿಂದ ಮಾತನಾಡಿಸಿದಾಗ ನನಗರಿವಾದದ್ದು...ಕೆದಿಲಾಯರು ಚಲಿಸುವ ಕೋಶ, ಶ್ರೇಷ್ಟ ರಾಜಕಾರಣಿ, ಉತ್ತಮ ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ, ವಾಗ್ಮಿ ಮತ್ತು ದೇಶಭಕ್ತ ಸಂತ. ಇದು ಅತಿಶಯೋಕ್ತಿಯಲ್ಲ. ಅವರೊಂದಿಗೆ ಮಾತಿಗಿಳಿದಾಗ ಜೀವಮಾನದ ಅನುಭವವನ್ನು ಎಳೆಎಳೆಯಾಗಿ ಬಿತ್ತರಿಸಿದ್ದು ಹೀಗೆ..ಇದು ದೇಶದಲ್ಲಿರುವ ಪ್ರತಿಯೋರ್ವ ಪ್ರಜೆಗೂ ಮಾರ್ಗದರ್ಶನವಾದೀತು ಎನ್ನುವ ಭಾವನೆಯೊಂದಿಗೆ....
ಪ್ರ: ಪರಿಕ್ರಮ ಯಾತ್ರೆಯ ಉದ್ದೇಶ
ಉ: ಉದರ ನಿಮಿತ್ತಂ ಬಹುಕೃತ ವೇಷಂ ಎನ್ನುವ ಮಾತಿನಂತೆ ನಗರ ಜೀವನಕ್ಕೆ ಮಾರು ಹೋದ ಯುವ ಮನಸ್ಸುಗಳು ಗ್ರಾಮ ತ್ಯಜಿಸಿ, ನಗರವಾಸಿಗಳಾಗುತ್ತಿದ್ದಾರೆ. ಒತ್ತಡದ ಜೀವನದ ಜಂಜಾಟದಲ್ಲಿ ಕಾಲಕಳೆಯುತ್ತಿರುವ ಯುವಮನಸ್ಸುಗಳು ಕೃಷಿಯೆಡೆಗೆ ತೆರಳುವಂತಾಗಬೇಕು. ಪ್ರಕೃತಿ ಸಹಜವಾದ ಬದುಕನ್ನು ಬಿಟ್ಟು ವಿಕೃತ ಸಹಜವಾದ ಜೀವನಕ್ಕೆ ಮಾರುಹೋಗುತ್ತಿದ್ದು, ಅದರಲ್ಲಿ ಆನಂದವಿದೆಯೆನ್ನುವ ಭ್ರಮೆಯಲ್ಲಿದ್ದಾರೆ. ನಾನೊಬ್ಬನೇ ಎನ್ನುವ ಅಂಶ ತ್ಯಜಿಸಿ, ಹಿಂದು ಧರ್ಮದ ಪರಿಕಲ್ಪನೆಯಾದ ವಿಶಾಲ ಕುಟುಂಬದ ದೃಷ್ಟಿ ಬೆಳೆಸಿಕೊಳ್ಳಬೇಕು. ವಿದೇಶಿ ಮಾನಸಿಕತೆಯ ಪರಿಭಾವವನ್ನು ತ್ಯಜಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕೃಷಿ ಪ್ರಧಾನವಾದ ದೇಶಿಯ ಸಂಸ್ಕೃತಿಯನ್ನು ಯುವಮನಸ್ಸುಗಳಲ್ಲಿ ಬಿತ್ತರಿಸುವ ಉದ್ದೇಶ ಯಾತ್ರೆಯದಾಗಿದೆ.
ಪ್ರ: ವೈಜ್ಞಾನಿಕ ಉಪಕರಣಗಳ ಧಾವಂತದಲ್ಲಿ ಇದು ಸಫಲವಾಗುವುದೇ?
ಉ: ವೈಜ್ಞಾನಿಕವಾಗಿ ಮುಂದುವರಿದಿಲ್ಲ. ಇಂದು ವಿನಾಶವನ್ನು ಅನುಕರಿಸುವ ಅಜ್ಞಾನದಲ್ಲಿದ್ದೇವೆ. ಉಪಭೋಗ ಮತ್ತು ಉಪಯೋಗ ಎನ್ನುವ ಎರಡು ಅಂಶಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿದೆ. ವೈಜ್ಞಾನಿಕ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ. ಉಪಭೋಗದ ಸಂಸ್ಕೃತಿಯಲ್ಲಿರುವುದು ವೈಜ್ಞಾನಿಕ ಬೆಳವಣಿಗೆಯೆ? ವಸ್ತುವನ್ನು ಬಳಸಿ, ಬಿಸಾಡುವ ಸಂಸ್ಕೃತಿ ವೈಜ್ಞಾನಿಕ ಪ್ರಗತಿಯಲ್ಲ. ಪೂರ್ವಜರು ೪೦ ವರ್ಷಗಳ ಕಾಲ ಬಳಸಿದ ಲೇಖನಿಯನ್ನು ಈಗಲೂ ಬಳಸುತ್ತಾರೆ. ಆದರೆ ನಾವು ಕೇವಲ ಅರ್ಧಗಂಟೆಗಳ ಕಾಲ ವಸ್ತುವನ್ನು ಬಳಸಿ ಅದನ್ನು ಬಿಸಾಡುತ್ತೇವೆ. ಇದು ಉಪಭೋಗದ ಸಂಸ್ಕೃತಿ. ಬದಲಾಗುತ್ತಿರುವ ಮನುಷ್ಯನ ಜೀವನ ಶೈಲಿ ಲಾಲಸೆಗಳನ್ನು ಬೆಳೆಸುತ್ತಾ ಹೋಗುತ್ತದೆ. ಇದರಿಂದ ವ್ಯಾಪಾರಿಗಳು ಅದರ ಲಾಭವನ್ನು ಪಡೆಯುತ್ತಾರೆ. ಮಾರುಕಟ್ಟೆಗೆ ಹೊಸ ವಸ್ತುಗಳು ಬಂದಾಗ ಹಳೆಯ ವಸ್ತುಗಳು ಬೇಡವೆನಿಸುತ್ತದೆ.(ಟಿವಿ ಬಂದ ಮೇಲೆ ಕ್ಯಾಸೆಟ್, ಟೇಪ್, ರೇಡಿಯೋ ಮಾಯವಾಗಿದೆ). ಇದು ಪ್ರಗತಿಯಲ್ಲ. ಕುಟುಂಬದ ಸದಸ್ಯರೆಲ್ಲರಲ್ಲೂ ಬಳಸುವ ದೃಷ್ಟಿಕೋನ ಬದಲಾಗಬೇಕಿದೆ. ಮನುಷ್ಯನ ಬೇಕು ಎನ್ನುವ ಧಾವಂತದ ನಾಗಾಲೋಟಕ್ಕೆ ಹಾಕಬೇಕು ಬಲವಂತದ ಬ್ರೇಕು. ಅದುವೇ ದೇಶದ ಪ್ರಗತಿಯ ಸಂಕೇತ.
ಪ್ರ: ಮನುಷ್ಯ ಬೆಳೆಯುತ್ತಿದ್ದಂತೆ ಸ್ವಾರ್ಥ ಹೆಚ್ಚಾಗುತ್ತಿದೆ ಇದು ನಿಜವೇ?
ಉ: ಮನುಷ್ಯನಿಗೆ ಆಸೆಯೆನ್ನುವುದು ಸಹಜ. ಅದು ಅತಿಯಾದರೆ ಸ್ವಾರ್ಥವಾಗುತ್ತದೆ. ಬೆಂಕಿಗೆ ತುಪ್ಪವನ್ನು ಸುರಿದಾಗ ಅದರ ಪ್ರಖರತೆ ಜಾಸ್ತಿಯಾಗುತ್ತದೆ. ತುಪ್ಪ ಸುರಿಯುವುದು ಕಡಿಮೆಯಾದಾಗ  ಬೆಂಕಿಯ ತೀವ್ರತೆ ಕಡಿಮೆಯಾಗುತ್ತದೆ. ಜೀವನ ಸಾಗರದಲ್ಲಿ ಆಸೆಯನ್ನು ತಡೆದಾಗ ಸ್ವಾರ್ಥ ಕಡಿಮೆಯಾಗುತ್ತದೆ.
ಪ್ರ: ಧರ್ಮದ ಮೇಲೆ ಆಕ್ರಮಣವಾಗಿದೆ ಎನ್ನುತ್ತಾರಲ್ಲ ಇದು ನಿಜವೇ?
ಉ: ಹಿಂದು ಧರ್ಮ ಸಬಲವಾಗಿದ್ದು, ಅದರ ಮೇಲೆ ಆಕ್ರಮಣವಾಗಿಲ್ಲ. ಹಿಂದು ಧರ್ಮದಲ್ಲಿರುವ ಜೀವನ ಕ್ರಮದ ಮೇಲೆ ಆಕ್ರಮಣವಾಗಿದೆ. ರೋಗಾಣುಗಳು ದೇಹದ ಮೇಲೆ ಆಕ್ರಮಣ ಮಾಡುವುದು ಅದರ ಸಹಜ ಸ್ವಭಾವ. ಜನಜೀವನ ದುರ್ಬಲವಾಗಿದ್ದಾಗ ರೋಗದ ಅಣುಗಳು ಜಾಸ್ತಿಯಾಗಿ ಅವು ತಮ್ಮ ಪ್ರಭಾವ ತೋರುತ್ತವೆ. ಹಿಂದು ಸಮಾಜ ದುರ್ಬಲವಾಗಿದ್ದಾಗ ರೋಗಾಣುಗಳಂತೆ ಅನ್ಯ ಮತಗಳು ಆಕ್ರಮಣಮಾಡಿರಬಹುದು. ಹಿಂದು ಧರ್ಮ ಶಕ್ತಿಯುತವಾದುದು. ಶಕ್ತಿ ಹಿಡಿದುಕೊಂಡರೆ ಸಬಲವಾಗಬಹುದು. ಆ ನಿಟ್ಟಿನಲ್ಲಿ ಹಿಂದು ಸಮಾಜ ಸಬಲವಾಗಬಹುದೇ ಎನ್ನುವ ಚಿಂತನೆ ಮಾಡಬೇಕಿದೆ.
ಪ್ರ: ದೇಶದ ಜನತೆಯ ಜೀವನಕ್ರಮದ ಬದಲಾವಣೆಗೆ ಆಂಗ್ಲಭಾಷೆಯ ಬಿಸಿ ತಟ್ಟಿದೆಯೇ?
ಉ: ದೇಶದಲ್ಲಿ ಯಾವುದೇ ಭಾಷೆಗೆ ವಿರೋಧವಿಲ್ಲ. ತಾಯಿ, ಮಾತೃಭಾಷೆಯ ಬಗ್ಗೆ ಅಭಿಮಾನವಿದ್ದಾಗ ಇತರ ಭಾಷೆಗಳು ಸೋದರ ಭಾಷೆಗಳಾಗುತ್ತದೆ. ಅನ್ಯ ಭಾಷೆಯ ಮೇಲೆ ಸೋದರ ಭಾವನೆ ಮೂಡಿದಾಗ ಅದು ಸುಸಂಸ್ಕೃತ ಸಮಾಜದ ಲಕ್ಷಣವಾಗುತ್ತದೆ. ಪ್ರತಿಯೊಂದು ಭಾಷೆಯ ಹಿಂದೆ ಸಂಸ್ಕೃತಿಯಿರುತ್ತದೆ. ಅದು ನಮ್ಮ ಜೀವನಕ್ಕೆ ಅಂಟಿಕೊಳ್ಳದೇ ಇರಬೇಕಾದ್ರೆ ತಾಯಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಹಲಸಿನ ಮೇಣ ಅಂಟುವುದು ಅದರ ಸ್ವಭಾವ..ಅದು ದೇಹಕ್ಕೆ ಅಂಟದೆ ಇರಬೇಕಾದ್ರೆ ಎಣ್ಣೆ ಹಚ್ಚಿಕೊಳ್ಳುವ ವಿವೇಕವಿರಬೇಕು.
ಪ್ರ: ಯಾತ್ರೆಯ ಸಂದರ್ಭ ಹಿಂದುಗಳು ಮಾತ್ರ ಬೆಂಬಲಿಸಿದ್ದಾರೋ? 
ಉ: ಅನ್ಯನ್ಯ ಮತಗಳು ಎನ್ನುವ ಶಬ್ದವನ್ನು ಬಳಸುತ್ತೇನೆ. ಬುದ್ದಿಯಿರುವವನಿಗೆ ಅಭಿಪ್ರಾಯವಿರುತ್ತದೆ. ಎಲ್ಲರ ಅಭಿಪ್ರಾಯವನ್ನು ಗೌರವಿಸುವ ಮನೋಧರ್ಮವಿದೆಯೋ ಅದುವೇ ಹಿಂದುತ್ವ. ಅಭಿಪ್ರಾಯದಲ್ಲಿ ತಿರಸ್ಕಾರವಿಲ್ಲ. ಗೌರವ ಭಾವನೆಯಿದೆ. ಇದನ್ನು ಎಲ್ಲರೂ ಆಲಂಗಿಸಿದ್ದಾರೆ. ಕನ್ಯಾಕುಮಾರಿಯಿಂದ ವಿವಿಧ ಅಭಿಪ್ರಾಯದ ಜನರು ಬಂದಿದ್ದು, ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಯಾತ್ರೆಯನ್ನು ಗೌರವಿಸಿ, ಮನ್ನಿಸಿ, ಆಶೀರ್ವದಿಸಿ, ಸ್ವಾಗತಿಸಿದ್ದಾರೆ.
ಪ್ರ: ಪ್ರಜಾಪ್ರಭುತ್ವದಲ್ಲಿ ಜಾತಿ-ತಾರತಮ್ಯ ತರವೇ?
ಉ: ಜಾತಿ ಎನ್ನುವುದು ಅಜ್ಞಾನ.. ಸೂರ್ಯ ಬೆಳಕು ನೀಡುವಾಗ, ಮರ ಹಣ್ಣನ್ನು ಬಿಡುವಾಗ, ನದಿ ಹರಿಯುವಾಗ ಎಲ್ಲಾ ಜೀವಿಗಳಿಗೂ ಉಪಯೋಗವಾಗಲಿ ಎನ್ನುವ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಅಂತೆಯೇ ಹಿಂದು ಜೀವನ ಎಲ್ಲರ ಹಿತವನ್ನು ಬಯಸಿ ಕೆಲಸ ಮಾಡುತ್ತದೆ. ಇದನ್ನು ಅರ್ಥ ಮಾಡಿಕೊಂಡವರು ವಿರೋಧ ಮಾಡುವುದಿಲ್ಲಾ. ಸಮಾಜದಲ್ಲಿ ಜಾತಿ ಎನ್ನುವ ಅಜ್ಞಾನದ ಪರದೆ ತೆಗೆಯುವ ಕಾರ್ಯವಾಗಬೇಕಿದೆ.
ಪ್ರ: ಮನುಷ್ಯ ವಿದ್ಯಾವಂತನಾಗುತ್ತಿದ್ದಂತೆ ಹಿಂಸಾಪ್ರವೃತ್ತಿ ಜಾಸ್ತಿಯಾಗುತ್ತಿದೆ ಎನ್ನುವುದು ನನ್ನ ಭಾವನೆ?
ಉ: ಹಿಂಸಾ ಮನೋಧರ್ಮವೆನ್ನುವುದು ಜನಸಂಖ್ಯಾತ್ಮಕವಾಗಿ ಎಲ್ಲಿ ಹೆಚ್ಚಿದೆಯೋ ಅಲ್ಲಿ ಹಿಂಸೆ ಜಾಸ್ತಿಯಾಗಿದೆ. ಅಸ್ಸಾಂ, ಕಾಶ್ಮೀರ, ಕೇರಳ, ಮಣಿಪುರ, ಪಾಕಿಸ್ತಾನ, ಬಾಂಗ್ಲಾ, ಇರಾಕ್, ಇರಾನ್ ದೇಶದಲ್ಲಿಯೂ ಹಿಂಸಾಪ್ರವೃತ್ತಿ ವಿಪರೀತವಾಗಿದೆ. ಕೇರಳದಲ್ಲಿ ಅನೇಕರು ಭಾರತವನ್ನು ನಿಜವಾದ ಸ್ವರ್ಗವೆಂದಿದ್ದಾರೆ. ಸಮತ್ವ ಇದ್ದಾಗ ಹಿಂಸೆಯನ್ನು ದೂರಿಕರಿಸಬಹುದು.  Inactive majority ಯಿದ್ದಲ್ಲಿ active minorityಯು  ಸಮಾಜದಲ್ಲಿ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿರುತ್ತದೆ.   Inactive majority ಯು active ಆಗಿ ಕಾರ್ಯಚರಿಸಿದಾಗ ಹಿಂಸಾ ಪ್ರವೃತ್ತಿಯನ್ನು ಖಂಡಿಸಬಹುದಾಗಿದೆ.
(ಬಾಯಾರು ರಜಾಕ್ ಯಾತ್ರೆಯ ಸಂದರ್ಭ ಖುರಾನ್‌ನಲ್ಲಿ ಗಲಾಟೆ, ಗದ್ದಲ, ಹಿಂಸೆಗೆ ಸಮ್ಮತಿಯಿಲ್ಲ. ಇಸ್ಲಾಂನ ಹೆಸರಿನಲ್ಲಿ ಮಸಿ ಬಳಿಯುವ ಕಾರ್ಯ ನಡೆಯುತ್ತಿದೆ )
ಪ್ರ: ಪ್ರಸ್ತುತ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆಯಲ್ಲವೇ?
ಉ: ರಾಜಕೀಯ ವ್ಯವಸ್ಥೆಯಲ್ಲಿ ಅವ್ಯವಸ್ಥೆಯಾಗಿದೆ. ಇಂತಹ ರಾಜಕೀಯ ವ್ಯವಸ್ಥೆಗೆ ನಿಷ್ಠಾವಂತರು ಹೋದರೂ ಅವ್ಯವಸ್ಥಿತ ರಾಜಕೀಯ ವ್ಯವಸ್ಥೆಯಲ್ಲಿ ಅವರಂತೆಯೆ ಆಗುತ್ತಾರೆ. ರಾಜಕೀಯದ ಬೇರನ್ನು ಸರಿ ಮಾಡಬೇಕಿದೆ. ಗಾಂಧೀಜಿ ಗೋಖಲೆಯವರನ್ನು ಬೇಟಿ ಮಾಡಿ ಮಾರ್ಗದರ್ಶನ ನೀಡಬೇಕು. ನಾನು ರಾಜಕೀಯಕ್ಕೆ ಹೊಸಬ ಎಂದಾಗ ಗೋಖಲೆ ರಾಜಕೀಯಕ್ಕೆ ಹೊಸಬರಾಗಿದ್ದರೂ, ಆಧ್ಯಾತ್ಮಿಕವಾಗಿ ಹಳಬರಿದ್ದಿರಾ. ರಾಜಕೀಯ ವ್ಯವಸ್ಥೆಯಲ್ಲಿ ಆಧ್ಯಾತ್ಮಿಕತೆ ಬೆಳೆಸಿ ಎಂದು ಹೇಳಿದ್ದರು. ಇದು ಇಂದಿನ ರಾಜಕೀಯ ನಾಯಕರಿಗೆ ಅನ್ವಯವಾಗಬೇಕಿದೆ.
stop politilism, criminalism, meterialism, comercialism and all political leaders ll start the spiritualism in the field. ರಾಜಕೀಯ ರಂಗ ಆಧ್ಯಾತ್ಮ ನಿಷ್ಠವಾದಾಗ ರಾಜಕೀಯ ಗೊಂದಲ ಪರಿಶುದ್ದವಾಗುತ್ತದೆ.
ರಾಮಾಯಣದಲ್ಲಿ ರಾಮ ಆಧ್ಯಾತ್ಮ ನಿಷ್ಟನಾಗಿ, ಸಮಚಿತ್ತತೆಯಿಂದ ವ್ಯವಹರಿಸಿದ್ದರಿಂದ ಕಿಂಚಿತ್ ವಿಕಾರ  ಉತ್ಪತ್ತಿಯಾಗಲಿಲ್ಲ. ಭರತನ ಪಟ್ಟಾಭಿಷೇಕವಾಗಬೇಕು ಎಂದಾಗ ಆತ ಆಧ್ಯಾತ್ಮ ಚಿಂತನೆಗೆ ವಿರೋಧ ಮಾಡಲಿಲ್ಲ. ಕುಟುಂಬದಲ್ಲಿ ರಾಜಕೀಯ ಗೊಂದಲವಿದ್ದರೂ ರಾಮ ಮತ್ತು ಭರತ ವ್ಯವಹಾರದಿಂದ ರಾಜಕೀಯದ ಆಧ್ಯಾತ್ಮಿಕತೆಯನ್ನು ಬಿತ್ತರಿಸಿದ್ದರು. ಚಿಂತನೆಗೆ ತಾತ್ವಿಕ ನೆಲೆಯನ್ನು ಕಲ್ಪಿಸಿದ್ದರಿಂದ ಗೊಂದಲ ಪರಿಹಾರವಾಗಿದೆ. ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಾನು ಹೋಗಿ ನಮ್ಮಲ್ಲಿ ಯಾರು ಆಗಬಹುದು ಎನ್ನುವ ಭಾವನೆ ಮೂಡಬೇಕು. ಪಾದುಕೆ ಹೊತ್ತು ಕೆಲಸ ಮಾಡುತ್ತೇನೆ ಎನ್ನುವ ಭರತನ ಚಿಂತನೆಗೆ ಪ್ರತಿಯೊರ್ವ ರಾಜಕಾರಣಿಯು ಒತ್ತು ನೀಡಿದರೆ ರಾಜವ್ಯವಸ್ಥೆ ಶುದ್ದಿಯಾಗುತ್ತದೆ. ನಾಯಕರು ಶುದ್ದಜೀವನ ನಡೆಸಿದಾಗ ಪ್ರಜೆಗಳು ಅದನ್ನು ಅನುಸರಿಸುತ್ತಾರೆ. ದೇಶದ ಅಭಿವೃದ್ದಿಯನ್ನು ಬಯಸಿ ಕಾರ್ಯ ನಿರ್ವಹಿಸಿದ್ದೆ ಆದರೆ ಅದರ ಫಲವನ್ನು ಕಾಣಬಹುದಾಗಿದೆ.
ಯಾತ್ರೆಯ ಸಂದರ್ಭ ಕೇರಳದಲ್ಲಿ ನೋಡಿದ ಧನಾತ್ಮಕ ಅಂಶಗಳು:
*ರಸ್ತೆಯಲ್ಲಿ ಬಿಕ್ಷುಕರಿಲ್ಲ. ಬಿಕ್ಷುಕರನ್ನು ನೋಡಿದರೆ ಅವರನ್ನು ಬಂಧಿಸಿ ಜೀವನಕ್ಕೊಂದು ವ್ಯವಸ್ಥೆ ಮಾಡುವ ಕಾನೂನು ಜಾರಿಯಲ್ಲಿದೆ.
*ಜೋಪಡಿ ಪಟ್ಟಿ (ಸ್ಲಮ್) ಇಲ್ಲದ ರಾಜ್ಯ(ಅಪವಾದಕ್ಕೆ ಒಂದೆರಡು ಹೊರತು ಪಡಿಸಿ).
*ವಿನಾಶದ ನಡುವೆಯೂ ಗ್ರಾಮ ಮತ್ತು ನಗರದಲ್ಲಿ ಹಸಿರು ಕೇರಳದ ಸೃಷ್ಟಿ.
*ದುರಭ್ಯಾಸದಿಂದ ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವುದಿಲ್ಲ.
*ರಾಜ್ಯದಲ್ಲಿ ವಿದೇಶಿ ಹೆಸರುಗಳನ್ನು ತೆಗೆದು ಸ್ವದೇಶಿ ಹೆಸರನ್ನು ರಚಿಸಿದ್ದಾರೆ.
*ದಾರಿಯುದ್ದಕ್ಕೂ ದೇವಸ್ಥಾನ, ಪ್ರಾರ್ಥನಾ ಮಂದಿರಗಳ ನಿರ್ಮಾಣ.
*ಭವನಗಳ ನಿರ್ಮಾಣದಲ್ಲಿಯೂ ಸ್ವದೇಶಿತನ.
ಋಣಾತ್ಮಕ ಅಂಶಗಳು:
*ವ್ಯಕ್ತಿಗತವಾಗಿ ವಿಪರೀತ ದುರ್ವ್ಯವಹಾರ, ಮನೆ-ರೋಗಯುಕ್ತವಾಗಿ ನಾಟಿ ವೈದ್ಯರು ಮಾಯವಾಗಿದ್ದಾರೆ.(ಯೋಗ ಮತ್ತು ಆರೋಗ್ಯ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಬೇಕು)
*ಕೃಷಿ ಭೂಮಿಯ ವಿನಾಶವಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು, ನೀರು, ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ( ೪ ಜಿಲ್ಲೆಯನ್ನು ಹೊರತು ಪಡಿಸಿ)
*ಅನ್ನದ ಕೃಷಿ ಕಡಿಮೆಯಾಗಿ ಹಣದ ಕೃಷಿ ಹೆಚ್ಚಾಗಿದೆ.
*ವಿದೇಶಿ ವಸ್ತುಗಳ ಬಳಕೆ ವಿಪರೀತ.


ದೇಶದಲ್ಲಿ ಅನ್ನದ ಕೃಷಿ ಜಾಸ್ತಿಯಾಗಬೇಕು. ಹಣವಿದ್ದರೆ ಅದನ್ನು ಹಂಚುವ ಮನಸ್ಸು ಬರುವುದಿಲ್ಲ. ಅನ್ನವನ್ನು ಹಂಚುವ ಮನಸ್ಸಾಗುತ್ತದೆ. ನಗರ ವಾಸದ ವ್ಯಾಮೋಹ ತ್ಯಜಿಸಿ ಗೋವು ಆದಾರಿತ ಕೃಷಿಯ ಗ್ರಾಮೀಣ ಬದುಕನ್ನು ರೂಪಿಸಿಕೊಳ್ಳಬೇಕು. ಕೇರಳದಲ್ಲಿರುವ ಧನಾತ್ಮಕ ಅಂಶಗಳನ್ನು ಎಲ್ಲಾ ರಾಜ್ಯಗಳಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತರಬೇಕು. ಭ್ರಾತೃತ್ವವನ್ನು ಬೆಸೆಯುವ ಜೀವನಶೈಲಿ ನಮ್ಮದಾಗಬೇಕು.
ಸೀತಾರಾಮ ಕೆದಿಲಾಯ-ಭಾರತ ಪರಿಕ್ರಮ ಯಾತ್ರೆಯ ರೂವಾರಿ.


No comments:

Post a Comment