Saturday 27 October 2012

ಅಂಗವೈಕಲ್ಯತೆ ಮರೆತು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಜೆಪ್ಪಿನಮೊಗೆರುವಿನ ಸುಭಾಶಿನಿ.

ಮಂಗಳೂರು: ಸಮಾಜದಲ್ಲಿ ದೈಹಿಕವಾಗಿ ಸುದೃಡವಾಗಿರುವವರು ಅಬ್ಬೆಪಾರಿಗಳಾಗಿ ತಿರುಗಾಡುವುದು ಸಾಮಾನ್ಯವೆನ್ನುವ ನಂಬಿಕೆ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ದೈಹಿಕವಾಗಿ ನ್ಯೂನ್ಯತೆ ಇದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ತನ್ನದೆ ವಿಶಿಷ್ಟ ವ್ಯಕ್ತಿತ್ವದಿಂದ ಗುರುತಿಸಿಕೊಂಡ ಜೆಪ್ಪಿನಮೊಗೆರುವಿನ ಸುಭಾಶಿನಿ.
ತಾಯಿಯ ಗರ್ಭದಿಂದ ಜನಿಸುವಾಗ ನಮ್ಮಂತೆ ಇದ್ದ ಸುಭಾಶಿನಿ ೬ ತಿಂಗಳು ಸಮೀಪಿಸುತ್ತಿದ್ದಾಗ ಕಾಣಿಸಿಕೊಂಡ ಮಿದುಳು-ಜ್ವರದಿಂದಾಗಿ ೧೩ ನೇ ವಯಸ್ಸಿನವರೆಗೆ ನಡೆದಾಡುವ ಸ್ಥಿತಿಯಿಲ್ಲದೆ ಹಾಸಿಗೆಯಲ್ಲಿಯೆ ಕಾಲ ಕಳೆಯಬೇಕಾಯಿತು. ನಂತರದ ದಿನದಲ್ಲಿ ನಿಧಾನವಾಗಿ ಕುಳಿತುಕೊಳ್ಳುವ ಮಾನಸಿಕ ಹಾಗೂ ದೈಹಿಕ ಶಕ್ತಿ ದೊರಕಿದಾಗ ತಾಯಿ ಚಂದ್ರಕಲಾ ಮಗಳನ್ನು ಎತ್ತಿಕೊಂಡು ಹೋಗಿ ಶಾಲೆಗೆ ಸೇರಿಸಿದರು. ದೈಹಿಕ ಸುದೃಢವಾಗಿರುವ ಇತರ ಮಕ್ಕಳು ಹೋಗುವ ಸರಕಾರಿ ಶಾಲೆಗೆ ೫ ತರಗತಿಯವರೆಗೆ ತಾಯಿಯೊಂದಿಗೆ ಹೋಗಿದ್ದರೂ, ಆ ಹೊತ್ತಿನಲ್ಲಿ ಸುಭಾಶಿನಿಗೆ ಬಲಗಾಲು ಹಾಗೂ ಬಲಗೈಯ ಸ್ವಾಧೀನವಿಲ್ಲದೆ ಹೇಳಿಕೊಟ್ಟ ಅಕ್ಷರ ಬರೆಯಲು ಹಾಗೂ ನಡೆದಾಡಲು ಕೂಡ ಆಗದ ಪರಿಸ್ಥಿತಿ. ದೇವರು ದೇಹದ ಎಲ್ಲಾ ಅಂಗ ಕೊಟ್ಟಿದ್ದರೂ ಬಲಗಾಲಿನ ಬಲವನ್ನೇ ಕಿತ್ತುಕೊಂಡಿದ್ದ. ಅಲ್ಲದೇ ಬಲಗೈ ಕೊಟ್ಟಿದ್ದರೂ ಪೆನ್ನು ಹಿಡಿಯುವಷ್ಟು ಶಕ್ತಿ ನೀಡದೆ ವಂಚಿಸಿದ್ದ.
ಸಮಾಜದಲ್ಲಿ ಇತರರು ಮಾತನಾಡುವುದನ್ನು ನೋಡಿ ತಾನೂ ಕೂಡ ಮಾತನಾಡಬೇಕು ಎನ್ನುವ ಆಸೆ ಚಿಗುರೊಡೆದು ಅಲ್ಪಸ್ವಲ್ಪ ಮಾತನಾಡುವಂತೆ ಮಾಡಿದೆ. ಹಿರಿಯರ ಪ್ರೋತ್ಸಾಹ, ಗುರುಗಳ ಸಹಕಾರ, ಚೇತನಾ ಸಂಸ್ಥೆಯ ಬೆಂಬಲ ಹಾಗೂ ಧರ್ಮಸ್ಥಳ ಸ್ವಸಹಾಯ ಸಂಘದ ನಿರಂತರ ನೆರವಿನಿಂದಾಗಿ ಸುಭಾಶಿನಿ ಇಂದು ಸಮಾಜದಲ್ಲಿ ವಿಶಿಷ್ಟ  ವ್ಯಕ್ತಿಯಾಗಿ ರೂಪುಗೊಂಡಿದ್ದಾಳೆ. ಜೀವನದಲ್ಲಿ ಬಂದ ಸವಾಲುಗಳಿಗೆ ತನ್ನಿಂದಾದ ಉತ್ತರ ನೀಡುತ್ತಿದ್ದಾಳೆ ಎಂದರೂ ತಪ್ಪಿಲ್ಲ.
೫ ನೇ ತರಗತಿಯವರೆಗೆ ಸರಕಾರಿ ಶಾಲೆಗೆ ಎತ್ತಿಕೊಂಡು ಹೋಗುತ್ತಿದ್ದ ತಾಯಿ ಚಂದ್ರಕಲಾಗೆ ಉಡುಪಿಯ ಆಶಾ ನಿಲಯ ಆಸರೆಯಾಯಿತು. ಮಗಳನ್ನು ೭ವರ್ಷಗಳ ಕಾಲ ಆಶಾ ನಿಲಯದಲ್ಲಿ ಬಿಟ್ಟು ನಂತರ ಮಂಗಳೂರಿನ ಸಂತ ಆಗ್ನೇಸ್ ವಿಶೇಷ ಶಾಲೆಯಲ್ಲಿ ೧೦ ವರ್ಷಗಳವರೆಗೆ ಶಿಕ್ಷಣ ಕೊಡಿಸಿದರು. ಕಳೆದ ೬ ವರ್ಷದಿಂದ ಸೇವಾಭಾರತಿಯ ವತಿಯಿಂದ ನಡೆಯುತ್ತಿರುವ ಚೇತನಾ ವಿಶೇಷ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದಾರೆ.
ಸುಭಾಶಿನಿಯ ವಿಶೇಷ:
೪೦ ವರ್ಷ ಪ್ರಾಯದ ಸುಭಾಶಿನಿ ವಿಧಿಯಾಟಕ್ಕೆ ಬಲಿಯಾಗಿ ಅಂಗವೈಕಲ್ಯ ಹೊಂದಿದ್ದು, ದೇಹದ ಆಕೃತಿಯಲ್ಲಿ ಸಾಮಾನ್ಯರಂತೆ ಇಲ್ಲದಿದ್ದರೂ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ಇಂದಿನ ಸಮಾಜದಲ್ಲಿ ಎರಡಕ್ಷರ ಕಲಿತು ಅಬ್ಬೆಪಾರಿಗಳಾಗಿ ತಿರುಗಾಡುತ್ತಿರುವ ಯುವಸಮೂಹಕ್ಕೆ ಮಾದರಿಯಾಗಿದ್ದಾರೆ. ಚಂದ್ರಕಲಾ ಅವರ ೩ ಮಕ್ಕಳಲ್ಲಿ ಕೊನೆಯವರಾದ ಸುಭಾಶಿನಿ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಉಲ್ಲಾನ್ ವಸ್ತುವಿನಿಂದ ಮಾಡಿರುವ ಮ್ಯಾಟ್, ಫಿನಾಯಿಲ್, ಸೋಪ್ ವಾಟರ್‌ತಯಾರಿ ಮತ್ತು ಬಟ್ಟೆಯ ಬ್ಯಾಗ್‌ಗಳಿಗೆ ನೂಲ್ ಹಾಕುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಮೆಡಿಕಲ್‌ಗಳಲ್ಲಿ ಮಾತ್ರೆಗಳನ್ನು ಹಾಕಲು ಬಳಸುವ ಪೇಪರ್ ಕವರ್‌ಗಳನ್ನು ಮಾಡುತ್ತಿರುವುದು ವಿಶೇಷವಾಗಿದೆ. ಧರ್ಮಸ್ಥಳ ಸ್ವ-ಸಹಾಯ ಸಂಘದ ಸದಸ್ಯೆಯಾಗಿರುವ ಇವರಿಗೆ ಇತರ ಸದಸ್ಯರು ಪೂರ್ಣ ಸಹಕಾರ ನೀಡುತ್ತಿದ್ದಾರೆ.
ದಿನಕ್ಕೆ ೫೦ಲೀಟರ್‌ಗಳವರೆಗೆ ಫಿನಾಯಿಲ್, ಸೋಪ್ ಆಯಿಲ್ ತಯಾರಿಸುವ ಮನಸ್ಸು ಇದ್ದರೂ, ಇದಕ್ಕೆ ಪೂರಕವಾಗುವ ಮಾರುಕಟ್ಟೆ ದೊರಕಿಲ್ಲ. ಮನೆಯ ಬಳಕೆಗೆ ಬೇಕಾಗುವಷ್ಟನ್ನು ಮಾತ್ರ ತಯಾರಿಸುತ್ತಿದ್ದಾರೆ. ದೈಹಿಕ ವೈಕಲ್ಯ ಲೋಕಮುಖಕ್ಕೆ ತೋರಗೊಡದೆ ತಾನು ನಿರ್ಮಾಣ ಮಾಡಿದ ವಸ್ತುವನ್ನು ಇತರ ಜನರಿಗೂ ತೋರ್ಪಡಿಸಬೇಕು ಎನ್ನುವ ಇಚ್ಚೆಯಿಂದ ಇತ್ತೀಚಿಗೆ ನಗರದ ಫಿಶರೀಸ್ ಕಾಲೇಜ್‌ನಲ್ಲಿ ನಡೆದ ರೈತ ಮಾಹಿತಿ ಶಿಬಿರದಲ್ಲಿ ಧರ್ಮಸ್ಥಳ ಸ್ವ-ಸಹಾಯ ಮಳಿಗೆಯಲ್ಲಿ ಫಿನಾಯಿಲ್, ಸೋಪ್ ಆಯಿಲ್ ಬಾಟಲ್‌ಗಳನ್ನು ಸ್ವತಃ ಕುಳಿತು ಮಾರಾಟಕ್ಕೆ ಇಟ್ಟಿದ್ದರೂ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ದೊರಕಿದೆ ಎನ್ನುವ ಅಳಲು ಸುಭಾಶಿನಿಯದಾಗಿದೆ.
ವಿಶೇಷ ಮಕ್ಕಳಿಗಾಗಿ ಸರಕಾರದಿಂದ ನೀಡುವ ರೂ.೧೦೦೦ದಿಂದ ಅವರ ಜೀವನ ಸಾಗುತ್ತಿದೆ. ಯಾವುದೇ ಸಂಘ ಸಂಸ್ಥೆಗಳಿಂದ ಅನುದಾನ ಇಲ್ಲಿಯವರೆಗೆ ದೊರಕಿಲ್ಲ. ಆದರೂ ಕೂಡ ಸಮಾಜದಲ್ಲಿ ಚೆನ್ನಾಗಿ ಬದುಕ ಬೇಕೆನ್ನುವ ಇಚ್ಚೆ ಇದೆ. ಅದಕ್ಕೆ ಸಾರ್ವಜನಿಕರ ಪ್ರೋತ್ಸಾಹದ ಅಗತ್ಯವಿದೆ. ಸುಭಾಶಿನಿಯ ಸಂಪರ್ಕ ಸಂಖ್ಯೆ-೯೪೪೯೧೩೧೪೮೬

ಬಾಕ್ಸ್:
೬ ತಿಂಗಳ ಮಗುವಾಗಿದ್ದಾಗ ಮೆದುಳು ಜ್ವರಕ್ಕೆ ತುತ್ತಾದ ಮಗಳಿಂದು ಅಂಗವೈಕಲ್ಯದಿಂದ ಬಳಲುವಂತಾಯಿತು. ಸಮಾಜದಲ್ಲಿ ಇತರ ಮಕ್ಕಳಂತೆ ಬದುಕಬೇಕೆನ್ನುವ ಛಲದಿಂದ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾ ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಸಮಾಜದ ಬಂಧುಗಳಿಂದ ಅವಳ ಚಟುವಟಿಕೆಗಳಿಗೆ ಪ್ರೋತ್ಸಾಹ ಅವಶ್ಯಕತೆಯಿದೆ. ಮಾತನಾಡುತ್ತಿದ್ದರೂ ಮೊದಲ ಬಾರಿಗೆ ಕೇಳಿದರೆ ಯಾರಿಗೂ ಅರ್ಥವಾಗುವುದಿಲ್ಲ. ದಿನನಿತ್ಯ ಕೇಳುತ್ತಿದ್ದರೆ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ಚಂದ್ರಕಲಾ-ಸುಭಾಶಿನಿ ತಾಯಿ.

No comments:

Post a Comment