ರಾಜ್ಯದಲ್ಲಿಯೇ ಪ್ರಥಮ ಮಂಗಳೂರು ಪಶುಇಲಾಖೆ
ವೈದ್ಯರು ಅಸಹಕಾರ ಚಳುವಳಿಯಲ್ಲಿ ನಿರತರಾಗಿದ್ದರೂ ಜಾನುವಾರು ಗಣತಿಗೆ ಚಾಲನೆ
ಮಂಗಳೂರು: ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ರಾಜ್ಯದಲ್ಲಿರುವ ಪಶು ವೈದ್ಯಾಧಿಕಾರಿಗಳು ಮುಷ್ಕರ ಹಮ್ಮಿಕೊಂಡು ೫ ವರ್ಷಗಳಿಗೊಮ್ಮೆ ನಡೆಸಬೇಕಿರುವ ಜಾನುವಾರು ಗಣತಿ ವಿಳಂಭಗೊಂಡಿದೆ. ಆದರೂ ರಾಜ್ಯದಲ್ಲಿ ಪ್ರಥಮವಾಗಿ ಸೆ. ೬ರಂದು ಮೂಡಬಿದ್ರೆ ಮತ್ತು ೧೦ರಂದು ನಗರದಲ್ಲಿ ಗಣತಿದಾರರಿಗೆ ತರಬೇತಿ ನೀಡಿರುವುದು ಮಂಗಳೂರಿನ ಪಶು ಇಲಾಖೆಗೆ ಸಂದ ಗೌರವ. ಸರಕಾರದಿಂದ ಮುಷ್ಕರಕ್ಕೆ ಯಾವುದೇ ಪ್ರತಿಕ್ರಿಯೆ ಬಾರದೆ ಅನಿರ್ದಿಷ್ಟಾವಧಿಯವರೆಗೆ ಅಸಹಕಾರ ಚಳುವಳಿ ನಡೆಸಲು ತೀರ್ಮಾನಿಸಿದ್ದರೂ, ರಾಷ್ಟ್ರೀಯ ಕಾರ್ಯಕ್ರಮ ಹಾಗೂ ಪಶು ಇಲಾಖೆಯ ನೈತಿಕ ಜವಾಬ್ದಾರಿಯೆನ್ನುವ ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ಪಶುಇಲಾಖೆ ಗಣತಿ ಕಾರ್ಯಕ್ಕೆ ಚಾಲನೆ ನೀಡಿದೆ.
ಜಿಲ್ಲೆಯಲ್ಲಿರುವ ಪಶುವೈದ್ಯಾಧಿಕಾರಿಗಳು ರಾಜ್ಯದ ಇತರ ವೈದ್ಯರಂತೆ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಇಲಾಖೆಯ ಪುನರ್ರಚನೆ, ಮಂಗಳೂರು ಹಾಗೂ ಪುತ್ತೂರನ್ನು ಗಮನದಲ್ಲಿರಿಸಿ ಪಶುಗಳ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಲು ಪಾಲಿಕ್ಲಿನಿಕ್ ಸೌಲಭ್ಯ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಸರಕಾರದ ಮುಂದಿರಿಸಿದೆ. ಸರಕಾರ ಕೊಲದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡಿದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬೇಡಿಕೆಯನ್ನಿಡಲಾಗಿದೆ. ಆದರೂ ಮಷ್ಕರವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡು ಜಾನುವಾರು ಗಣತಿ ಕಾರ್ಯದಲ್ಲಿ ತೊಡಗಿ ಕೊಳ್ಳಲಿದ್ದಾರೆ. ಮಂಡ್ಯದಲ್ಲಿ ಇತ್ತೀಚಿಗೆ ೧೫ ದಿನಗಳ ಅಂತರದಲ್ಲಿ ಒಂದು ಕಡೆ ತರಬೇತಿ ನಡೆದಿರುವುದು ಹೊರತು ಪಡಿಸಿ ಬೇರೆ ಯಾವ ಜಿಲ್ಲೆಯಲ್ಲಿ ಪ್ರಾರಂಭವಾದ ಮಾಹಿತಿ ಇಲ್ಲಾ.
ದ.ಕ.ಜಿಲ್ಲೆಯಲ್ಲಿ ನಗರಭಾಗದಲ್ಲಿರುವ ೨,೦೪,೬೭೭ ಮನೆಗಳು ಹಾಗೂ ಗ್ರಾಮೀಣ ಭಾಗದಲ್ಲಿರುವ ೩೬೮ ಗ್ರಾಮಗಳ ೨,೨೨,೬೨೮ ಮನೆಗಳಲ್ಲಿರುವ ಜಾನುವಾರು, ಕುದುರೆ, ಕತ್ತೆ, ನಾಯಿ, ಮೊಲ, ಕುಕ್ಕುಟ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವ ಎಲ್ಲಾ ಸಾಕುಪ್ರಾಣಿಗಳು (ಬೆಕ್ಕನ್ನು ಹೊರತುಪಡಿಸಿ)ಮತ್ತು ಪಶುಸಂಗೋಪನಾ ವಲಯದಲ್ಲಿ ಉಪಯೋಗಿಸುವ ಉಪಕರಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ೧೯೧೯-೨೦ರಲ್ಲಿ ಪ್ರಾರಂಭವಾದ ಜಾನುವಾರು ಗಣತಿಯು ೫ ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಇದು ೧೯ ನೇ ಜಾನುವಾರು ಗಣತಿಯಾಗಿದೆ. ೧೮ ನೇ ಗಣತಿಯಲ್ಲಿ ಶೇ.೫೪ರಷ್ಟು ಕುಟುಂಬಗಳು ಪಶುಪಾಲನೆಯಲ್ಲಿ ತೊಡಗಿರುವುದು ಕಂಡುಬಂದಿದೆ. ೨೦೧೨ ರ ಸೆ.೧೫ರಂದು ಪ್ರಾರಂಭಗೊಂಡು ಅ.೧೫ರೊಳಗೆ ಪೂರ್ಣಗೊಳಿಸಿ, ಈ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಗಳ ಪರಿಶೀಲನೆ ಮತ್ತು ವ್ಯತ್ಯಾಸಗಳನ್ನು ಸರಿಪಡಿಸಬೇಕಿತ್ತು. ಆದರೆ ಪಶುವೈದ್ಯಾಧಿಕಾರಿಗಳ ಮುಷ್ಕರದಿಂದಾಗಿ ಗಣತಿ ಕಾರ್ಯ ವಿಳಂಭಗೊಂಡಿದೆ.
ಜಾನುವಾರು ಗಣತಿಯಲ್ಲಿ ಯಾರಿರುತ್ತಾರೆ?
ದ.ಕ.ಜಿಲ್ಲೆಯಲ್ಲಿ ೬೯ ಅಧಿಕಾರಿಗಳು ಹಾಗೂ ೫೫೭ ಎಣಿಕೆದಾರರು ಗಣತಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಪಾಲಿಕೆ ವ್ಯಾಪ್ತಿಯ ಅಧಿಕಾರಿಗಳು, ಪುರಸಭೆ ಅಥವಾ ಪಟ್ಟಣ ಪಂಚಾಯಿತಿಗಳು, ಪಶುಪಾಲನಾ , ಕೃಷಿ, ತೋಟಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ, ಕಂದಾಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಎಸ್‌ಕೆಡಿಆರ್‌ಡಿಪಿ ಸೇವಾ ನಿರತರು ಹಾಗೂ ನುರಿತ ವಿದ್ಯಾವಂತ ಯುವಕ-ಯುವತಿಯರು ಜಾನುವಾರು ಗಣತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ದ.ಕ.ಜಿಲ್ಲೆಯಲ್ಲಿ ತರಬೇತಿಯೊಂದಿಗೆ ಗಣತಿ ಕಾರ್ಯಕ್ಕೆ ಚಾಲನೆ:
೧೯ ನೇ ಅಖಿಲ ಭಾರತ ಜಾನುವಾರು ಗಣತಿ ಕಾರ್ಯಕ್ಕೆ ನೇಮಕಗೊಂಡ ಜಿಲ್ಲೆಯ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ವಿವಿಧ ತಾಲೂಕಿನಲ್ಲಿ ತರಬೇತಿ ನಡೆಯಲಿದೆ. ಮಂಗಳೂರು ಗ್ರಾಮಾಂತರ ಉಳ್ಳಾಲ ವಲಯದಲ್ಲಿ ಅ.೨೭ ರಂದು, ಬಂಟ್ವಾಳ ಹಾಗೂ ಸುಳ್ಯದಲ್ಲಿ ಅ.೩೦ ಮತ್ತು ಬೆಳ್ತಂಗಡಿ ಹಾಗೂ ಪುತ್ತೂರಿನಲ್ಲಿ ಅ.೩೧ರಂದು ತರಬೇತಿ ಆಯೋಜಿಸಲಾಗಿದೆ. ತರಬೇತಿ ನಡೆದ ಮಾರನೇಯ ದಿನವೇ ಆಯಾ ತಾಲೂಕಿನಲ್ಲಿ ಗಣತಿ ಕಾರ್ಯ ಪ್ರಾರಂಭವಾಗಲಿದೆ.
ಬಾಕ್ಸ್:
*೬೯ ಅಧಿಕಾರಿಗಳು, ೫೫೭ ಗಣತಿದಾರರು.
* ಗ್ರಾಮೀಣ ಪ್ರದೇಶದಲ್ಲಿ ೨,೨೨,೬೨೮ ಹಾಗೂ ನಗರದಲ್ಲಿ ೨,೦೪,೬೭೭ ಮನೆಗಳ ಜಾನುವಾರು ಗಣತಿ(೨೦೧೧ಜನಗಣತಿ)
*ಅಭಿವೃದ್ಧಿ ಕಾರ್ಯಕ್ಕೆ ಅನುಕೂಲವಾಗುವ ಎಲ್ಲಾ ಸಾಕುಪ್ರಾಣಿಗಳು (ಬೆಕ್ಕನ್ನು ಹೊರತುಪಡಿಸಿ)ಮತ್ತು ಉಪಕರಣಗಳು.
*ರಾಜ್ಯದಲ್ಲಿಯೇ ಪ್ರಥಮ ತರಬೇತಿ ಸೆ.೬ ಮತ್ತು ಸೆ.೧೦ (ಮಂಗಳೂರು ಪಶುಸಂಗೋಪನಾ ಇಲಾಖೆ
ಬಾಕ್ಸ್:
ಅಖಿಲ ಭಾರತ ಜಾನುವಾರು ಗಣತಿಗೆ ಜಿಲ್ಲೆಯಲ್ಲಿ ವೈದ್ಯರು ಮೂಲಭೂತ ಸೌಕರ್ಯಗಳಿಗಾಗಿ ಹಮ್ಮಿಕೊಂಡ ಮುಷ್ಕರದಿಂದ ವಿಳಂಭವಾಗಿದೆ. ವೈದ್ಯರು ಅಸಹಕಾರ ಚಳುವಳಿಯಲ್ಲಿ ನಿರತರಾಗಿದ್ದರೂ, ಜಿಲ್ಲೆಯ ವೈದರನ್ನು ಕರೆದು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ನೈತಿಕ ಜವಾಬ್ದಾರಿಯನ್ನು ಅರಿತು ಗಣತಿ ಕಾರ್ಯದಲ್ಲಿ ಭಾಗಿಯಾಗಲು ಸೂಚಿಸಲಾಗಿದೆ. ಎಲ್ಲಾ ವೈದಾಧಿಕಾರಿಗಳು ಸಹಕರಿಸಲಿದ್ದು, ತರಬೇತಿಯನ್ನು ಹಮ್ಮಿಕೊಂಡು ಗಣತಿ ಕಾರ್ಯ ಪ್ರಾರಂಭಿಸಲಾಗುವುದು.
ಡಾ.ಕೆ.ವಿ.ಹಲಗಪ್ಪ.-ಉಪನಿರ್ದೇಶಕರು ಪಶು ವೈದ್ಯಕೀಯ ಇಲಾಖೆ.
No comments:
Post a Comment