೮ ವರ್ಷಗಳಿಂದ ಹಾಸಿಗೆ ಹಿಡಿದ ಸದಾಶಿವ್
ಸಮಾಜದಿಂದ ಬೇಕು ನೆರವಿನ ಹಸ್ತ
ಮಂಗಳೂರು: ಮನುಷ್ಯನಿಗೆ ಕಷ್ಟ ಬರುವುದು ಸಹಜ. ಕಷ್ಟಗಳ ಸರಮಾಲೆ ಎದುರಾದಾಗ ಪಡುವ ನೋವಿನಿಂದ ಸುಧಾರಿಸಿಕೊಳ್ಳುವುದೆ ಕಷ್ಟಕರವಾಗಿರುವಾಗ ರಸ್ತೆ ಅಪಘಾತಕ್ಕೆ ಸಿಲುಕಿ ೮ ವರ್ಷಗಳಿಂದ ಸೊಂಟದ ಸ್ವಾಧೀನವನ್ನೆ ಕಳೆದುಕೊಂಡು ನಡೆದಾಡಲು ಸಾಧ್ಯವಿಲ್ಲದೆ ವೀಲ್‌ಚೇರ್‌ನ್ನು ಅವಲಂಬಿಸಿ ಕತ್ತಲೆಯಲ್ಲಿಯೇ, ಎದುರಾದ ನೋವುಗಳ ಸರಮಾಲೆಗೆ ಉತ್ತರಿಸುತ್ತಾ ಜೀವನ ಸಾಗಿಸುತ್ತಿದ್ದಾರೆ ಉರ್ವ ಮಾರಿಗುಡಿಯ ನಿವಾಸಿ ಕೆ. ಸದಾಶಿವ ಶೆಟ್ಟಿ. ಬೆಳೆಯುತ್ತಿರುವ ನಗರಿಯಲ್ಲಿ ದೈನಂದಿನ ಜೀವನ ನಿರ್ವಹಣೆ ಹಾಗೂ ಹೊಟ್ಟೆಪಾಡಿಗೆ ಹೆಣಗಾಡುವ ಜೊತೆಗೆ ಸಾವಿರಾರು ರೂಪಾಯನ್ನು ಮಾತ್ರೆಗಾಗಿ ಖರ್ಚು ಮಾಡುತ್ತಿದ್ದಾರೆ. ಜೀವನದಲ್ಲಿ ನೋವು ತುಂಬಿಕೊಂಡೇ ನಗುವನ್ನು ಬೀರುತ್ತಿದ್ದಾರೆ.
ಹುಟ್ಟೂರು ಬಿಟ್ಟು ನಗರ ಸೇರಿದ ಶೆಟ್ರು:
ಬೆಳ್ತಂಗಡಿ ಕನ್ನಡಿಕಟ್ಟೆಯವರಾದ ಸದಾಶಿವ್ ಐದೂವರೆ ವರ್ಷದಲ್ಲಿರುವಾಗಲೇ ತಂದೆ ಅಲ್ಲಿನ ಜಾಗ ಮಾರಿದ ಕಾರಣದಿಂದ ಕುಟುಂಬದವರೊಂದಿಗೆ ಉರ್ವ ಮಾರಿಗುಡಿ ಸಮೀಪದಲ್ಲಿ ಬಂದು ವಾಸವಾಗಿದ್ದಾರೆ. ಹೇಳಿಕೊಳ್ಳುವುದಕ್ಕೆ ಸ್ವಂತ ಮನೆ ಬಿಟ್ಟರೆ ಬೇರೆ ಯಾವ ಆಸ್ತಿಯೂ ಇವರಲ್ಲಿಲ್ಲ. ಕುಟುಂಬದ ಕಣ್ಮಣಿಯಾಗಿ ಇಳಿ ವಯಸ್ಸಿನಲ್ಲಿ ತಂದೆ ತಾಯಿಗೆ ರಕ್ಷಣೆಯಾಗಿರಬೇಕಿದ್ದ ಒಬ್ಬನೆ ಮಗ ತಂದೆಯ ಅಪಘಾತಕ್ಕಿಂತ ೬ ತಿಂಗಳು ಮೊದಲು ಲೇಡಿಹಿಲ್‌ನ ಕರಾವಳಿ ಉತ್ಸವ ಮೈದಾನ ಸಮೀಪ ನಡೆದ ಬೈಕ್ ಅಪಘಾತದಲ್ಲಿ ತೀರಿಕೊಂಡಿದ್ದನು. ಹೆಂಡತಿ ನಗರದಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ಕೂಲಿ ಕೆಲಸ ಮಾಡುತ್ತಾ, ಸದಾಶಿವರನ್ನು ಜತನದಿಂದ ನೋಡಿಕೊಳ್ಳುತ್ತಿದ್ದಾರೆ.
೫ ವರ್ಷ ಹಂಪನಕಟ್ಟೆಯಲ್ಲಿರುವ ಟೈಲರಿಂಗ್ ಶಾಫ್‌ನಲ್ಲಿ ದರ್ಜಿಯಾಗಿ ಕೆಲಸ ಮಾಡಿದ ಇವರು ಡ್ರೈವಿಂಗ್ ಕಲಿತು ಟೆಂಪೊ ರಿಕ್ಷಾ ಓಡಿಸುತ್ತಾ ಹೆಂಡತಿ ಮಗನೊಂದಿಗೆ ಸುಖಿಜೀವನ ನಡೆಸುತ್ತಿದ್ದರು. ಈ ಸಂತೋಷ ಹೆಚ್ಚು ಕಾಲವಿರಲಿಲ್ಲ. ೨೦೦೪ರ ಕರಾವಳಿ ಉತ್ಸವದ ಸಂದರ್ಭ ಸ್ನೇಹಿತನೊಂದಿಗೆ ಉತ್ಸವ ನೋಡಿ ಬರುತ್ತಿದ್ದಾಗ ಇವರ ಏಕಮಾತ್ರ ಪುತ್ರ ಬೈಕ್ ಅಪಘಾತದಲ್ಲಿ ಮೃತನಾಗಿದ್ದ. ಮಗ ಸತ್ತ ದುಃಖ ಮರೆಯದಿದ್ದರೂ ಜೀವನ ನಿರ್ವಹಣೆಗೆ ಚಾಲಕ ವೃತ್ತಿ ಮಾಡಲೇಬೇಕಾಗಿತ್ತು. ವಿಧಿಯಾಟವೇ ಬೇರೆಯಾಗಿದ್ದು ಜುಲೈ ೨೦೦೪ರ ಆ ದಿನದಂದು ವಿಧಿ ಇನ್ನೊಂದು ಹೊಡೆತ ನೀಡಿತ್ತು. ಉರ್ವ ಮಾರಿಗುಡಿಯ ದ್ವಾರದ ಬಳಿ ಟೆಂಪೋದ ಬ್ರೇಕ್‌ಫೇಲ್ ಆಗಿ ದುರಂತಕ್ಕೀಡಾಗಿ ಸೊಂಟದ ಕೆಳಭಾಗದ ಅಸ್ತಿತ್ವವನ್ನೇ ಕಳೆದುಕೊಂಡು ಗಾಲಿ ಕುರ್ಚಿಯನ್ನು ಅವಲಂಬಿಸಬೇಕಾಯಿತು. ರಿಕ್ಷಾ ಬಿದ್ದ ಪರಿಣಾಮದಿಂದ ಕಿಡ್ನಿ ವೈಫಲ್ಯ, ಸೊಂಟದ ಮೂಳೆ ಮುರಿದದ್ದರಿಂದ ದೇಹ ಭಾದೆಯನ್ನು ಪೈಪ್ ಮೂಲಕವೇ ಮಾಡಬೇಕಿದೆ. ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿರುವ ಇವರು ಹೆಂಡತಿಯ ಆದಾಯದಿಂದ ದಿನದೂಡುತ್ತಿದ್ದಾರೆ.
ಸಂಘಪರಿವಾರ ಸಹಕಾರ:
ತಿಂಗಳಿಗೆ ಆಸ್ಪತ್ರೆಯ ಖರ್ಚು ಹಾಗೂ ಮಾತ್ರೆಗಾಗಿಯೇ ೪ ರಿಂದ ೫ಸಾವಿರದವರೆಗೆ ವ್ಯಯವಾಗುತ್ತಿದ್ದು ಸರಕಾರದಿಂದ ದೊರಕುವ ಸಾವಿರ ರೂಪಾಯಿ ಯಾವುದಕ್ಕೂ ಸಾಲುತ್ತಿಲ್ಲ. ವಿಕಾಸ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಇವರ ಮನೆಗೆ ಬಂದು ವೈದ್ಯಕೀಯ ಚಿಕಿತ್ಸೆ ಹಾಗೂ ಸಲಹೆ ನೀಡುತ್ತಿದ್ದರು. ಉರ್ವ ಬಜರಂಗದಳ, ವಿಶ್ವಹಿಂದು ಪರಿಷತ್‌ನ ವತಿಯಿಂದ ತಿಂಗಳಿಗೆ ಸ್ವಲ್ಪ ಧನಸಹಾಯ ನೀಡುತ್ತಿದ್ದಾರೆ. ಮಾತಾ ಅಮೃತಾನಂದಮಯಿ ಟ್ರಸ್ಟ್‌ನಿಂದ ೩ ತಿಂಗಳಿಗೆ ೩೦೦ ರೂಗಳಂತೆ ವರ್ಷಕ್ಕೆ ೧೨೦೦ರೂಗಳನ್ನು ಪಡೆಯುತ್ತಿದ್ದಾರೆ. ಒಡಿಯೂರು ಸಂಸ್ಥೆಯಿಂದ ರೂ.೩೦೦೦ ಸಿಕ್ಕಿದ್ದು ಇವರ ಸಂಕಷ್ಟಕ್ಕೆ ಒಯಸಿಸ್ ಆದರೂ , ಜೀವನ ನಿರ್ವಹಣೆಯನ್ನು ಸಾಕಷ್ಟು ಕಷ್ಟದಲ್ಲಿಯೇ ಸಾಗಿಸಬೇಕಾಗಿದೆ.
ಗಂಡನ ಕಷ್ಟದಲ್ಲಿ ಭಾಗಿಯಾದ ದಿಟ್ಟ ಮಹಿಳೆ ಗೀತಕ್ಕ:
ಗೀತಾ ಶೆಟ್ಟಿ ಲೇಡಿಹಿಲ್‌ನಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ಸಣ್ಣಪುಟ್ಟ ಕಾರ್ಯ ನಿರ್ವಹಿಸುತ್ತಾ ತಿಂಗಳಿಗೆ ೧,೫೦೦ ಸಂಪಾದನೆ ಮಾಡಿ, ಸೊಂಟದ ಸ್ವಾಧೀನತೆ ಕಳೆದುಕೊಂಡ ಗಂಡನ ಸೇವೆಯಲ್ಲಿ ನಿರತರಾಗಿದ್ದಾರೆ. ವೈದ್ಯರು ಮನೆಗೆ ಬಂದು ತಿಂಗಳಿಗೊಮ್ಮೆ ಪೈಪ್ ಬದಲಿಸಿ ಹೋದರೆ ಅವರಿಗೆ ರೂ.೨೦೦ ಕೊಡುವುದಲ್ಲದೆ, ಟಿಟಿ ಇಂಜೆಕ್ಷನ್‌ಗೆ ೭೦ ರೂ.ನೀಡಬೇಕು. ಪುತ್ರನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಸೊಂಟದ ಸ್ವಾಧೀನತೆ ಕಳೆದುಕೊಂಡು ಹಾಸಿಗೆ ಹಿಡಿದಿರುವ ಗಂಡ ಇನ್ನೊಂದೆಡೆ. ಈ ರೀತಿ ಸಂಸಾರ ನಿರ್ವಹಣೆಗೆ ಪಡುತ್ತಿರುವ ಕಷ್ಟದಲ್ಲೂ ಎಲ್ಲರನ್ನೂ ನಗುಮುಖದಿಂದಲೇ ಸ್ವಾಗತಿಸುವವರು ಗೀತಕ್ಕ. ಸಮಾಜದಲ್ಲಿ ತಂದೆ-ತಾಯಿ, ಕಟ್ಟಿಕೊಂಡ ಹೆಂಡತಿಯನ್ನು ಆಶ್ರಮಗಳಿಗೆ ಸೇರಿಸುವ ನಗರಜೀವನದ ಜಂಜಾಟದಲ್ಲಿ ತನಗೆ ನೆರಳಾಗಬೇಕಿದ್ದ ಗಂಡನಿಗೆ ನೆರಳಾದ ದಿಟ್ಟ ಮಹಿಳೆ ಗೀತಕ್ಕ ಎಂದರೂ ತಪ್ಪಿಲ್ಲ.
ವೈದ್ಯರ ಖರ್ಚು ಹಾಗೂ ಮಾತ್ರೆಗಾಗಿ ಸಾವಿರಾರು ರೂಪಾಯಿ ವ್ಯಯಿಸುತ್ತಿರುವ ಇವರ ಕುಟುಂಬಕ್ಕೆ ಆರ್ಥಿಕ ಬೆಂಬಲ ಬೇಕಾಗಿರುವುದು ಸತ್ಯ. ಸಹೃದಯಿಗಳು ಉರ್ವ ಮಾರಿಗುಡಿ ಸಮೀಪ ಹೋಗಿ ಕೇಳಿದರೆ ಯಾರಾದರೂ ಅವರ ಮನೆ ತೋರಿಸುತ್ತಾರೆ.
ಹಿಂದೂ ಸಂಘಟನೆ ನಮ್ಮ ಕುಟುಂಬಕ್ಕೆ ಆಧಾರವಾಗಿದ್ದು ಹೊರತು ಪಡಿಸಿದರೆ ನಮ್ಮದೆ ಸಮುದಾಯ ಸಂಘಟನೆಯಿಂದ ಸಹಾಯ ದೊರಕಿದ್ದರೆ ಆಗುತ್ತಿತ್ತು ಎಂಬ ನಿರೀಕ್ಷೆಯಿತ್ತು. ಸರಕಾರದಿಂದ ಸಿಗುವ ಸಾವಿರ ರೂಪಾಯಿ ತಿಂಗಳ ಔಷಧಿಗೂ ಸಾಲುವುದಿಲ್ಲ. ಹೆಂಡತಿಗೆ ಆಸರೆಯಾಗಬೇಕಿದ್ದ ನಾನು ಅವಳ ಅನುಚರಣೆಯಲ್ಲಿ ಕಾಲ ಕಳೆಯುತ್ತಿದ್ದೇನೆ. ಮಗನನ್ನು ಕಳೆದುಕೊಂಡ ದುಃಖ ಮಾಸುವಾಗಲೆ ಈ ದುರ್ಘಟನೆಗೆ ಒಳಗಾಗಿ ಹಾಸಿಗೆ ಹಿಡಿದು ೮ ವರ್ಷ ೨ತಿಂಗಳು ಕಳೆದಿದೆ. ಸುಖಿಯಾಗಿರಬೇಕಿದ್ದ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಕೆ.ಸದಾಶಿವ ಶೆಟ್ಟಿ -
ಇವರಿಗೆ ನೀವು ನೆರವಾಗಲು ಬಯಸುವಿರಾ?ಸಂಪರ್ಕಿಸಬಹುದಾದ ಮೊಬೈಲ್‌ದೂರವಾಣಿ ಸಂಖ್ಯೆ ೯೯೮೦೪೬೨೨೬೩
No comments:
Post a Comment