Friday, 14 September 2012


೪೧ ವರ್ಷಗಳ ಕಾಲ ಸರಕಾರಿ ಸಂಸ್ಥೆಯಲ್ಲಿ ದುಡಿದರೂ ಅವರಿಗೆ ಸಿಗುತ್ತಿದ್ದ ಸಂಬಳ ತಿಂಗಳಿಗೆ ೧೫ರೂಪಾಯಿ...ಇದು ಉಡುಪಿಯ ಅಕ್ಕು,ಲೀಲಾರ ಸ್ಥಿತಿ
AKKU
LEELA
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ಪುರಂದರದಾಸರು ಹೇಳಿರುವುದು ನಿಜ. ಪ್ರಪಂಚ ನೋಡಿದ ಮೇಲೆ ಇದು ಯಾವ ಮಟ್ಟದಲ್ಲಿ ನಿಜವೆನ್ನುವುದು ಅರ್ಥವಾಗದೆ ಇರುವ ಸ್ಥಿತಿ ವಿಶಾಲ ಹೃದಯವಂತಿಕೆಯುಳ್ಳವರದಾಗಿದೆ. ದಿನದಿಂದ ದಿನಕ್ಕೆ ಅವ್ಯವಹಾರಗಳು ವಿಪರೀತವಾಗುತ್ತಿವೆ. ಶ್ರೀಮಂತರು ಸಿರಿವಂತರಾಗುತ್ತಲೆ ಇದ್ದಾರೆ. ಬಡವರು ದಿನದಿಂದ ದಿನಕ್ಕೆ ಬಡವರಾಗುತ್ತಲೆ ಇದ್ದಾರೆ. ಓದುಗ ಮಿತ್ರರೇ ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಜೀವನದ ಜಂಜಾಟಗಳನ್ನು ಬದಿಗಿರಿಸಿ ದೀರ್ಘ ಉಸಿರಿನೊಂದಿಗೆ ಶಾಂತಚಿತ್ತರಾಗಿ ಆಲೋಚನೆ ಮಾಡಿ...ನಾವು ಯಾರನ್ನು ಬಡವರೆಂದು ಕರೆಯುತ್ತೇವೆ. ಸಂತೋಷದಿಂದ ಜೀವನ ನಿರ್ವಹಿಸಲು ಕಷ್ಟಪಡುವಂತ ಅಂದರೆ ಸುತ್ತಲು ಬಟ್ಟೆ, ಹೊಟ್ಟೆ ತುಂಬ ಊಟ ಮಾಡಲು ಆಹಾರ ಸಿಗದಿರುವವರನ್ನು ಬಡವರೆಂದು ಕರೆಯುತ್ತೇವೆ ಅಲ್ಲವೇ? ನೀವು ಆಲೋಚನೆ ಮಾಡಬೇಕಿರುವುದು ಇಷ್ಟೇ..
ಬಡವರು ಬಡವರಾಗುತ್ತಲೇ ಇದ್ದಾರೆ ಎನ್ನುವ ಮಾತಿನಲ್ಲಿ ಆತ ಅದೇ ರೀತಿ ಮುಂದುವರಿದರೆ ಬಡತನದಲ್ಲಿಯೇ ಆತನ ಸ್ಥಿತಿ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಕಲ್ಪಿಸಿಕೊಂಡಾಗ ಎದೆ ಜುಂ ಎನ್ನುತ್ತದೆ. ಒಬ್ಬನ ಜೀವನ ನಿರ್ವಹಣೆಯಾದರೆ ಹೇಗೊ ಸಾಗುತ್ತದೆ ಎಂದು ತಿಳಿಯಬಹುದಾದರೂ ಆತನನ್ನು ನಂಬಿಕೊಂಡು ಒಂದು ಕುಟುಂಬವಿದೆಯೆಂದಾದರೆ ಬೆಲೆ ಏರಿಕೆಯ ಕಾಲಘಟ್ಟದಲ್ಲಿ ಯಾವ ರೀತಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ ಅಬ್ಬಾ...!ಕಲ್ಪನೆಗೂ ನಿಲುಕದ ಸ್ಥಿತಿ ತಾನೇ?
ಆಶ್ಚರ್ಯ ಪಡಲೇಬೇಕು... ಆದರೂ ನಮ್ಮ ಕಲ್ಪನೆಗೂ ಮೀರಿದ ವ್ಯಕ್ತಿಗಳಿಬ್ಬರೂ ಕಳೆದ ೪೧ ವರ್ಷಗಳಿಂದ ತಿಂಗಳ ಮೂಲವೇತನ ರೂ.೧೫ಕ್ಕೆ ಕೆಲಸ ಮಾಡಿ ಸಂಸಾರ ಸಾಗಿಸುತ್ತಿದ್ದಾರೆ ಎಂದಾಗ ಇದು ಯಾವುದೋ ಸಿನಿಮೀಯ ಕಥೆ ಅನ್ನಿಸಬಹುದು? ೧೯೭೧ರಿಂದ ಸರಕಾರಿ ಸಂಸ್ಥೆಯಲ್ಲಿ ಸ್ವೀಪರ್ ಮತ್ತು ಸ್ಕ್ಯಾವೆಂಜರ್(ಜಾಡಮಾಲಿ) ಆಗಿ ಕಾರ್ಯ ನಿರ್ವಹಿಸುತ್ತಿರುವ ಉಡುಪಿಯ ಅಕ್ಕು ಮತ್ತು ಲೀಲಾ ಅವರು ವೇತನದ ದುಃಖದ ಕಣ್ಣೀರ ಕಥೆಯಾಗಿದೆ. ಕೆಲಸ ಕಾಯಂಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಇವರಿಗೆ ಇತರ ಕಾರ್ಮಿಕರಿಗೆ ನೀಡುತ್ತಿದ್ದ ವೇತನ ನೀಡಬೇಕೆಂದು ೨೦೧೦ರ  ಜನವರಿಯಲ್ಲಿ ಆದೇಶ ನೀಡಿದ್ದರೂ, ನ್ಯಾಯಯುತವಾಗಿ ಸಿಗಬೇಕಾಗಿದ್ದ ವೇತನ ಸಿಗದೆ ಅದೇ ದುಃಖದಲ್ಲಿಂದು ಕಾಲ ಕಳೆಯುತ್ತಿದ್ದಾರೆ.
ಉಡುಪಿಯ ಸರಕಾರಿ ಮಕ್ಕಳ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಅಕ್ಕು ಸ್ವೀಪರ್ ಆಗಿಯೂ ಹಾಗೂ ಲೀಲಾ ಸ್ಕ್ಯಾವೆಂಜರ್ ಆಗಿ ೧೯೭೧ರ ಜುಲೈ ತಿಂಗಳಲ್ಲಿ ೧೫ ದಿನಗಳ ಅಂತರದಲ್ಲಿ ಸೇರ್ಪಡೆಗೊಂಡಿದ್ದರು. ತಾತ್ಕಾಲಿಕ ನೆಲೆಯಲ್ಲಿ ಸೇವೆಗೆ ನಿಯುಕ್ತರಾದ ಇವರಿಗೆ ದೊರೆಯುತ್ತಿದ್ದ ಮೂಲವೇತನ ತಿಂಗಳಿಗೆ ರೂ. ೧೫ ಮಾತ್ರ. ಸರಕಾರಿ ಸಂಸ್ಥೆಯಲ್ಲಿ ಸಾವಿರಾರು ರೂಪಾಯಿ ಸಂಬಳವೆಣಿಸುವ ಅಧಿಕಾರಿಗಳ ಮದ್ಯದಲ್ಲಿ ಇವರಿಗೆ ಸಿಗುವುದು ತಿಂಗಳಿಗೆ ೧೫ ರೂಪಾಯಿ ಎಂದಾಗ ನಾವು ಯಾವ ಕಾಲದಲ್ಲಿವೆ ಇದು ನಿಜವೇ ಎನ್ನುವ ಸಂಶಯ ಮೂಡುತ್ತದೆ. ಮಾನವನಿಗೆ ಸಂಶಯ ಬರುವುದು ಸಹಜವಾದರೂ ಇದು ಸತ್ಯ.
೨೭ ವರ್ಷಗಳ ಕಾಲ ಈ ಸಂಬಳದಲ್ಲಿ ಕಾರ್ಯ ನಿರ್ವಹಿಸಿದ್ದರೂ ಇವರನ್ನು ಖಾಯಂ ಗೊಳಿಸದೆ ಇಂದಲ್ಲ ನಾಳೆ ಕೆಲಸ ಖಾಯಂ ಆಗುತ್ತದೆ ಎನ್ನುವ ಅಧಿಕಾರಿಗಳ ಉತ್ತರ ಕೇಳಿದ ಬಡಪಾಯಿ ಜೀವಗಳು ಆ ಮಾತುಗಳನ್ನು ನಂಬಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಅವರ ಕೆಲಸ ಖಾಯಂ ಆಗುವುದಿರಲಿ ಕೆಲವು ವರ್ಷಗಳಿಂದಿಚೆಗೆ ತಿಂಗಳಿಗೆ ನೀಡುತ್ತಿದ್ದ ವೇತನವನ್ನು ಕೂಡ ನಿಲ್ಲಿಸಿದ್ದಾರೆ ಎಂದಾಗ ಸರಕಾರದ ಕಾಳಜಿ ಯಾವ ಮಟ್ಟದ್ದಾಗಿದೆ ಎನ್ನುವುದು ತಿಳಿಯುವುದಕ್ಕೆ ಸಾಧ್ಯ? ಇದು ೧೯೭೧ರಿಂದ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಆಡಳಿತ ಪಕ್ಷದ ವೈಫಲ್ಯವನ್ನು ತೋರಿಸುತ್ತದೆ. ಅಧಿಕಾರ ವಹಿಸಿಕೊಂಡವರು ಇವರ ಮನವಿಗೆ ಸ್ಪಂದಿಸಿದ್ದರೆ ಇವರು ಸರಕಾರದ ಅಧಿಕಾರಿಗಳಾಗಿ ಅಕ್ಕು ಇಂದು ನಿವೃತ್ತಿ ಪಡೆಯುತ್ತಿದ್ದರು.ಲೀಲಾ ಮುಂದಿನ ವರ್ಷ ವಿಶ್ರಾಂತ ಜೀವನಕ್ಕೆ ಕಾಲಿಡುತ್ತಿದ್ದರು.
ಶಿಕ್ಷಣ ಕ್ಷೇತ್ರವೆನ್ನುವುದು ದೇಗುಲಕ್ಕೆ ಸಮಾನ ಎಂದು ತಿಳಿದುಕೊಂಡಿದ್ದೇವೆ. ಆ ದೇಗುಲಕ್ಕೆ ಬರುವ ಭಕ್ತಾಧಿಗಳಿಗೆ ಸುಂದರ ವಾತಾವರಣದ ಸೃಷ್ಟಿ ಮಾಡುವ ಇಬ್ಬರು ವ್ಯಕ್ತಿಗಳ ಮೇಲೆ ಭಗವಂತ ಮಾತ್ರ ನಿಷ್ಠುರಿಯಾಗಿದ್ದಾನೆ. ಕೆಲಸ ಕಾಯಂಗೊಳಿಸಲು ಇವರು ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದಾಗಲೂ ಅವರಿಂದ ಒಂದೆ ಉತ್ತರ. ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತೇವೆ. ಜನಪ್ರತಿನಿಧಿಗಳಿಂದ ಯಾವುದೇ ನ್ಯಾಯ ಸಿಗದ ಕಾರಣ ಇವರು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು. ಯಾವಾಗ ಇವರು ನ್ಯಾಯಾಲಯದ ಮೊರೆ ಹೊದರೋ ಅಂದಿನಿಂದ ಇವರಿಗೆ ಪಂಕ್ತಿಯಲ್ಲಿ ಪರಿಭೇದವೆನ್ನುವಂತೆ ಪ್ರತ್ಯೇಕ ಪುಸ್ತಕದಲ್ಲಿ ಇವರಿಬ್ಬರ ಸಹಿ ಹಾಕಿಸಲಾಗುತ್ತಿತ್ತು. ಕರ್ನಾಟಕ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯುನಲ್ ತೀರ್ಪಿನಂತೆ ಅವರನ್ನು ೨೦೦೩ರಲ್ಲಿಯೇ ಖಾಯಂ ಆಗಿ ನೇಮಕಾತಿ ಮಾಡಬೇಕಾಗಿತ್ತು. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದಾಗಿ ಸುಪ್ರಿಂ ಕೋರ್ಟ್‌ಗೆ ಮೊರೆಹೋಗಬೇಕಾದ ಅನಿವಾರ್ಯತೆ.
ಕರ್ನಾಟಕ ರಾಜ್ಯದ ದುರ್ದೈವವೆಂದರೆ ಇದೇ ತಾನೇ? ರಾಜ್ಯದ ಉಚ್ಚನ್ಯಾಯಾಲಯಕ್ಕೆ ಮಾನ್ಯತೆ ನೀಡದ ಸರಕಾರದ ವಿರುದ್ದ ಕೇವಲ ೧೫ ರೂ.ಸಂಬಳಕ್ಕಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಬೇಕಾಯಿತು. ಕೆಲಸ ಕಾಯಂಗಾಗಿ ಬೆಂಗಳೂರಿನ ವಕೀಲರನ್ನು ದಿನನಿತ್ಯ ವಾದಕ್ಕಾಗಿ ಸುಪ್ರಿಂ ಕೋರ್ಟ್‌ಗೆ ವಿಮಾನದಲ್ಲಿ ಕಳುಹಿಸುವ ವ್ಯವಸ್ಥೆ  ಮಾಡಲಾಯಿತು. ವಿಮಾನದ ವೆಚ್ಚವನ್ನು ಸಂಘ ಸಂಸ್ಥೆ ವಹಿಸಿಕೊಂಡವು. ೨೦೧೦ರಲ್ಲಿ ಕೋರ್ಟ್ ಇವರ ಪರವಾಗಿಯೇ ತೀರ್ಪು ನೀಡಿದ್ದು ಮಾತ್ರವಲ್ಲ ಸರಕಾರಿ ಕಾರ್ಮಿಕರಿಗೆ ಕೊಡುವಷ್ಟೆ ಸಂಬಳ ನೀಡಬೇಕು. ಬಾಕಿಯಿರುವ ಸಂಬಳವನ್ನು  ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶ ನೀಡಿ ವರ್ಷ ಎರಡಾದರೂ ಇಲ್ಲಿಯವರೆಗೆ ಬಿಡಿಗಾಸು ಅವರ ಕೈ ಸೇರಿಲ್ಲ ಎಂದಾಗ ನಮ್ಮ ರಾಜ್ಯದ ನ್ಯಾಯದ ಸ್ಥಿತಿ ಯಾವ ರೀತಿಯಾಗಿದೆ. ಸುಪ್ರಿಂ ಕೋರ್ಟ್‌ನ ಆದೇಶಕ್ಕೂ ಮಾನ್ಯತೆ ನೀಡದ ರಾಜ್ಯ ಸರಕಾರ ಸಾಮಾನ್ಯ ಜನತೆಗೆ ನ್ಯಾಯ ಒದಗಿಸುವಲ್ಲಿ ಇರುವ ಕಾಳಜಿಯನ್ನು ತೋರ್ಪಡಿಸುತ್ತದೆ ಅಲ್ಲವೇ?
ಸಾಮಾನ್ಯ ಅಂದಾಜಿನ ಪ್ರಕಾರ ಅವರಿಬ್ಬರಿಗೂ ರೂ.೨೭ ಲಕ್ಷ ವೇತನ ಸಿಗಬೇಕಿದೆ. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರಿಗೆ ತಿಂಗಳ ವೇತನ ಹೇಗೆ ನೀಡುತ್ತಿರಿ ಎಂದು ಪ್ರಶ್ನಿಸಿದಾಗ ಕಂಟೆಂಜೆನ್ಸಿ ಫಂಡ್‌ನಲ್ಲಿ ನೀಡಲಾಗುತ್ತದೆ. ಆ ಪಟ್ಟಿಯಲ್ಲಿ ಚಾಕ್‌ಪಿಸ್, ಡಸ್ಟರ್, ಅಕ್ಕು, ಲೀಲಾ ಹೀಗೆ ಸಾಗುತ್ತದೆ. ಖಾಸಗಿ ಕಂಪೆನಿ ಹಾಗೂ ಹೋಟೆಲು ನೌಕರರಿಗೆ ಕನಿಷ್ಟ ಕೂಲಿ ನಿರ್ಧರಿಸುವ ಸರಕಾರ ಅವರದೇ ಭಾಗವಾಗಿರುವ ವಿದ್ಯಾಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ  ಇವರಿಗೆ  ಮಾತ್ರ ತಿಂಗಳಿಗೆ ರೂ. ೧೫ ನೀಡುತ್ತಿರುವುದು ನ್ಯಾಯೋಚಿತವೇ? ಮಹಿಳಾ ಹಕ್ಕು, ಮಹಿಳಾ ದೌರ್ಜನ್ಯಗಳಾಗುತ್ತಿವೆ ಎಂದು ಸಾರುವ ರಾಜ್ಯ ಹಾಗೂ ಕೇಂದ್ರ ಮಹಿಳಾ ಆಯೋಗಕ್ಕೆ ಅಕ್ಕು ಮತ್ತು ಲೀಲಾರ ಕಣ್ಣೀರ ಮರ್ಮ ಅರ್ಥವಾಗದೇ ಹೋಯಿತೆ?
ಪ್ರಾರಂಭದಲ್ಲಿ ಇತರ ನೌಕರರಂತೆ ಹಾಜರಾತಿ ಪುಸ್ತಕದಲ್ಲಿಯೆ ಸಹಿ ಹಾಕುತ್ತಿದ್ದು ನ್ಯಾಯಕ್ಕಾಗಿ ಹೋರಾಟ ಮಾಡಿದ ದಿನದಿಂದ ಪ್ರತ್ಯೇಕ ಪುಸ್ತಕದಲ್ಲಿ ಸಹಿ ಹಾಕಿಸುತ್ತಿದ್ದರು. ಭಾನುವಾರವೂ ಸೇರಿ ವರ್ಷದ ಎಲ್ಲಾ ದಿನವೂ ದಿನಕ್ಕೆ ೩ ಬಾರಿ ಸ್ವಚ್ಚತೆ ಮಾಡುತ್ತಿದ್ದೇವು. ಸಂಸಾರ ನಿರ್ವಹಣೆಗೆ ಶಿಕ್ಷಕಿಯರ ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದು ಅವರು ತಿಂಗಳಿಗೆ ನೀಡುತ್ತಿದ್ದ ಹಣದಿಂದ ಬದುಕುತ್ತಿದ್ದೆವು. ಕುಟುಂಬದಲ್ಲಿ ಅಸ್ತಮಾ ಪೀಡಿತ ಗಂಡ ಹಾಗೂ ೩ ಹೆಣ್ಣು ಮತ್ತು ೨ ಗಂಡು ಮಕ್ಕಳಿದ್ದಾರೆ ಎನ್ನುವುದು ಸ್ವೀಪರ್ ಆಗಿ ಕಾರ್ಯ ನಿರ್ವಹಿಸಿದ ಅಕ್ಕು ಅವರ ಮನದಾಳದ ಮಾತು.
ಸ್ಕ್ಯಾವೆಂಜರ್(ಜಾಡಮಾಲಿ) ಲೀಲಾ ಅವರು ಉಡುಪಿಗೆ ಬರುವ ಜನಪ್ರತಿನಿಧಿಗಳಿಗೆ  ಮನವಿ ನೀಡಿದರೂ ಪರಿಹಾರ ಕಾಣಲಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಗೆ ಬಂದಾಗ ಮನವಿ ನೀಡಿದಾಗ ನಿಮ್ಮಂತೆ ಕೆಲಸ ಮಾಡುವವರು ರಾಜ್ಯದಲ್ಲಿ ಸುಮಾರು ೭೫ಸಾವಿರ ಮಂದಿಯಿದ್ದಾರೆ. ನಿಮ್ಮನ್ನು ಖಾಯಂ ಮಾಡಿದರೆ ಅವರನ್ನೆಲ್ಲಾ ಖಾಯಂಗೊಳಿಸಬೇಕಾದೀತು ಎಂದಾಗ ಅವರ ಸ್ವರ ಗದ್ಗದಿತವಾಯಿತು.
ಕರಾವಳಿಯಲ್ಲಿ ಇವರ ಕೇಸ್ ಹೈಕೋರ್ಟ್‌ನಲ್ಲಿದ್ದ ಸಂದರ್ಭ ಪೇಪರ್‌ನಲ್ಲಿ ಪ್ರಕಟವಾದ ಲೇಖನ  ನೋಡಿದ ಬಲ್ಮಠ ಕಾಲೇಜಿನ ಎಲಿಜಾ ಡಿಸೋಜಾ, ಮಲ್ಪೆ ಜೂನಿಯರ್ ಕಾಲೇಜಿನ ಪದ್ಮ ಅವರುಗಳು ನಾವೂ ಕೂಡ ತಿಂಗಳಿಗೆ ೧೫ ರೂಪಾಯಿಯಂತೆ ಕೆಲಸ ಮಾಡುತ್ತಿದ್ದೇವೆ. ನಮಗೂ ಕೂಡ ನ್ಯಾಯ ಒದಗಿಸಿಕೊಡಿ ಎಂದು ಸಾಮಾಜಿಕ ಕಾರ್ಯಕರ್ತ ಡಾ.ರವೀಂದ್ರನಾಥ್ ಶಾನುಬೋಗ್ ಅವರನ್ನು ಕೇಳಿಕೊಂಡಿರುವುದನ್ನು ನೆನಪಿಸಿಕೊಳ್ಳುತ್ತಾರೆ. ೪೧ ವರ್ಷಗಳ ಕಾಲ ಶಿಕ್ಷಕರನ್ನು ತಯಾರಿಸುವ ಶಿಕ್ಷಣ ಸಂಸ್ಥೆಯ ಕಸ ಗುಡಿಸಿದ ಹಾಗೂ  ಪಾಯಿಖಾನೆ ತೊಳೆದ ಈ ನತದೃಷ್ಟರಿಗೆ ಮಾತ್ರ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ನ್ಯಾಯ ಒದಗಿಸಲೇ ಇಲ್ಲಾ.....
ಅದೇ ರೀತಿ ನ್ಯಾಯಾಲಯದಲ್ಲಿ ಅದೆಷ್ಟೋ ಕಡತಗಳು ದೂಳು ಹಿಡಿದು ಬಿದ್ದಿವೆ. ಕರಾವಳಿಯ ಹೆಮ್ಮೆಯ ಕ್ರೀಡಾ ಪಟುವಾಗಿದ್ದ ಅಂಪಾರಿನ ಪ್ರಥ್ವಿಯ ಕುರಿತು ನಮ್ಮ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದೆವು. ಸೆ.೨೭ಕ್ಕೆ ಪ್ರಥ್ವಿಯ ಕೊಲೆಯಾಗಿ ಒಂದು ವರ್ಷ ವಾಗುತ್ತಿದೆ. ಆದರೆ ಆ ಆತ್ಮಕ್ಕೆ ಹಾಗೂ ಅವರ ಮನೆಯವರಿಗೆ  ನ್ಯಾಯ ಸಿಗಲೇ ಇಲ್ಲಾ? ಅದೆಷ್ಟೊ ಜನರು ಸಮಾಜದಲ್ಲಿ ನ್ಯಾಯ ಸಿಗದೆ ಒದ್ದಾಡುತ್ತಿದ್ದಾರೆ.



No comments:

Post a Comment