Monday 3 September 2012


ಕಮಲದಂತೆ ಮೃದು, ಶಿಲೆಯಂತೆ ಕಠೋರ ಕಮಲಶಿಲೆಯಾಗಿ ಭಕ್ತರ ಮನದಲ್ಲಿ ನೆಲೆನಿಂತು ಇಷ್ಟಾರ್ಥವ ನೆರವೆರಿಸುವ ಬ್ರಾಹ್ಮೀ ದುರ್ಗಾಪರಮೇಶ್ವರಿ: 
 ಸಕಲರನ್ನು ಪಾಲಿಸುವ ಜಗನ್ಮಾತೆ ಶ್ರೀ ಬ್ರಾಹ್ಮೀ ದುರ್ಗೇಯ ಮಹಿಮೆ-ವಿಲಾಸಗಳನ್ನು ಸದ್ಬಕ್ತರಿಗೆ ತಲುಪಿಸುವ ಈ ಲೇಖನಕ್ಕೆ ಶ್ರೀ ದೇವಿಯ ಕೃಪೆ ಹಾಗೂ ಪ್ರೇರಣೆ ಕೂಡಿಕೊಂಡಾಗ ಪ್ರತಿಯೊರ್ವರಲ್ಲೂ ಸತ್ಯದ ಸಂಗತಿಯ ಅರಿವಾಗುತ್ತದೆ. ಹಾಗೆಯೇ ದೇವಿಯ ಬಗ್ಗೆ ಭಯ-ಭಕ್ತಿ ಭಾವಗಳು ಮೈಗೊಡಿಕೊಳ್ಳುತ್ತದೆ.
ಶ್ರೀ ಬ್ರಾಹ್ಮೀ ದುರ್ಗೆಯು ಕಮಲಶಿಲೆಯಲ್ಲಿ ಉದಿಸಿ ಶ್ರೀ ಬ್ರಾಹ್ಮೀ ದುರ್ಗೆಯಾಗಿ ಕುಬ್ಜಾ ನದಿ ತೀರದಲ್ಲಿ ನೆಲೆಸಿ ಆಶ್ರಯವನ್ನು ಬೇಡಿ ಬರುವ ಭಕ್ತರ ಪಾಲಿಗೆ ಭಗವತಿಯಾಗಿ, ಸರ್ವರನ್ನು ಪೊರೆಯುವ ಭಾಗ್ಯದಾಯಿನಿ ಆಗಿ ಇಲ್ಲಿನ ಜನರ ತನು-ಮನದಲ್ಲಿ ನೆಲೆಯಾಗಿ ನಿಂತಿದ್ದಾಳೆ.
ಶ್ರೀ ದೇವಿ ಬ್ರಾಹ್ಮೀ ದುರ್ಗೆಯು ಈ ಭಾಗದ ಜನರ ಮನೆದೇವತೆಯಾಗಿದ್ದಾಳೆ ಎಂದರೆ ತಪ್ಪಿಲ್ಲ. ಮಾತೆಯು ಈ ಸ್ಥಳದ ಜನರನ್ನು ಹೆತ್ತ-ತಾಯಿಯಂತೆ ಪೊರೆಯುತ್ತಾ ನೆಲೆಯಾಗಿದ್ದಾಳೆ. ದೇವಿಯು ಕೇವಲ ಪೊರೆಯುವ ಕಾರ್ಯವನ್ನಲ್ಲದೆ ಕಾರಣೀಕವಾಗಿಯೂ ಅನ್ನಪೂರ್ಣೇಶ್ವರಿ ಹಾಗೂ ಶಾಂತಿದಾಯಿನಿ ಆಗಿ ನಿಂತಿದ್ದಾಳೆ. ಜಗನ್ಮಾತೆ ಬ್ರಾಹ್ಮಿದುರ್ಗೆ ಇಲ್ಲಿನ ವನದುರ್ಗೆಯಾಗಿದ್ದಾಳೆ. ವನದ ಹಸಿರಿನಲ್ಲಿ ನೆಲೆಸಿದ ದೇವಿಯ ಕ್ಷೇತ್ರ ಸಂದರ್ಶಿಸುವ ಭಕ್ತರಿಗೆ ರುದ್ರ-ರಮಣೀಯ ಪ್ರಕೃತಿಯ ಸೊಬಗು ಕಣ್ಣಿಗೆ ಬಿದ್ದಾಗ ಮೈ ರೋಮಾಂಚನವಾಗುತ್ತದೆ. ಶ್ರೀ ದೇವಿಯನ್ನು, ಅವಳ ಅಲಂಕಾರ ಮತ್ತು ಮಹಾದೇವಿಯ ಮುಗ್ದ ಮಂದಸ್ಮಿತವಾದ ಮುದ್ದು ಮೊಗ ಎಷ್ಟು ಕಂಡರೂ ತೃಪ್ತಿಯೆ ಆಗಲಾರದಷ್ಟು ಅಮ್ಮನ ಮುಖಾರವಿಂದದಲ್ಲಿ ಅಷ್ಟೊಂದು ವರ್ಚಸ್ಸು ಹೊರ ಹೊಮ್ಮುತ್ತಿರುತ್ತದೆ.
ಕಮಲಶಿಲೆಯು ಉಡುಪಿ ಜಿಲ್ಲೆಯ ಕುಂದಾಪುರದಿಂದ ೩೫ ಕಿ.ಮೀ ದೂರದಲ್ಲಿದೆ. ಮಲೆನಾಡಿನ ಬೆಟ್ಟ ಗುಡ್ಡಗಳಿಂದ ಕೂಡಿದ ಹಸಿರು ಬನದ ಮಧ್ಯದಲ್ಲಿ ಸುಂದರ ದೇಗುಲವಿದೆ. ದೇವಳದ ಪಕ್ಕದಲ್ಲಿಯೇ ಕುಬ್ಜಾ  ನದಿಯು ಹರಿಯುತ್ತಿರುವುದರಿಂದ ವರ್ಷಕ್ಕೊಮ್ಮೆ  ನದಿ ಉಕ್ಕಿ ಹರಿದು ದೇಗುಲದ ಒಳಗೆ ಪ್ರವೇಶಿಸಿ ಅಮ್ಮನ ಮೂರ್ತಿಯನ್ನು ಪಾವನೆಯನ್ನಾಗಿಸುತ್ತಾಳೆ. ಕಮಲಶಿಲೆ ಪ್ರಸಿದ್ದವಾದ ಶ್ರೀ ಬ್ರಾಹ್ಮಿ ದುರ್ಗಾಪರೇಶ್ವರೀ ಎನ್ನುವ ನಾಮಾಂಕಿತದೊಂದಿಗೆ  ದೇವಿಯು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ರೂಪವನ್ನೊಳಗೊಂಡ ಲಿಂಗರೂಪಿಣಿಯಾಗಿದ್ದು ಪಾತಾಳದಿಂದ ಸ್ವಯಂ ಭೂಲಿಂಗವಾಗಿ ಉದ್ಭವಿಸಿದ್ದಾಳೆ.
ದೇವಳದ ಕುರಿತು:
೧೯೬೮ ರಲ್ಲಿ ಕುಬ್ಜಾ ನದಿಯಲ್ಲಿ ಪ್ರವಾಹವುಂಟಾಗಿ ದೇವಸ್ಥಾನದ ಗೋಡೆ ಕುಸಿದು ದೇವಸ್ಥಾನ ೨೦ ಅಡಿಯಷ್ಟು ನೀರಿನಲ್ಲಿ ಮುಳುಗಿತ್ತು. ೧೯೯೦ರಲ್ಲಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲಾಗಿ, ಹಲಸು ಮತ್ತು ಬೋಗಿ ಮರವನ್ನು ಉಪಯೋಗಿಸಲಾಗಿದೆ. ಮುಸಲ್ಮಾನ ರಾಜನಾದ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಇವರ ಕಾಲದಿಂದಲೂ ಸಲಾಮ್ ಪೂಜೆ ಎನ್ನುವ ವಿಶೇಷ ಪೂಜೆ ನಡೆಯುತ್ತಿದ್ದು ಅದು ಇಂದಿಗೂ ಸಹ ಸಾಯಂಕಾಲದ ವೇಳೆ ನಡೆಯುತ್ತಿದೆ. ವರದಾಪುರದ ಶ್ರೀ ಶ್ರೀಧರ ಸ್ವಾಮೀ ಮಹಾರಾಜ್ ೧೯೫೨ ರಲ್ಲಿ ನೀಡಿದ ಸೂಚನೆಯ ಮೇರೆಗೆ ಭಕ್ತಾದಿಗಳು (ಗಂಡಸರು) ಶರ್ಟು ಮತ್ತು ಬನಿಯನ್ ತೆಗೆದು ದೇವಸ್ಥಾನದ ಒಳಗಿನ ಆವರಣ ಪ್ರವೇಶಿಸಬೇಕು. ಹೆಂಗಸರು ಸೀರೆ ಅಥವಾ ಚೂಡಿದಾರ್ ಧರಿಸಿಯೇ ದೇವಸ್ಥಾನ ಪ್ರವೇಶಿಸಬೇಕು.
ಪುರಾಣ ಪರಿಚಯ:
ಶ್ರೀ ದೇವಿಯು ಕಮಲಶಿಲೆಯ ಕುಬ್ಜಾ ನದಿತೀರದಲ್ಲಿ ಬಂದು ನೆಲೆಸಿ ಬ್ರಾಹ್ಮಿ ದುರ್ಗೆಯಾದಳು ಎನ್ನುವುದನ್ನು ನಾವು ಪುರಾಣದಿಂದ ತಿಳಿಯಬಹುದು. ಶ್ರೀ ದೇವಿಯ ಉದ್ಬವ ಲಿಂಗವು ಕಮಲವನ್ನು ಹೋಲುವ ಹಾಗೂ ಅಷ್ಟೇ ನುಣುಪಾದ ಶಿಲೆಯಾದ್ದರಿಂದ ಕಮಲಶಿಲೆ ಎನ್ನುವ ನಾಮದಿಂದ ಖ್ಯಾತಿ ಪಡೆದಿದೆ. ಹೆಸರೆ ಸೂಚಿಸುವಂತೆ ಕಮಲವು ಮೃದುತ್ವವನ್ನು ಹಾಗೂ ಶಿಲೆಯು ಕಠಿಣತ್ವ ಪ್ರತೀಕ ಎಂದು ಅರ್ಥೈಸಿದರೂ ಇಲ್ಲಿ ಕಠಿಣ ಹಾಗೂ ಮೃದುತ್ವಗಳ ಐಕ್ಯತೆಯಿಂದಾಗಿ ಏಕತೆ ಮತ್ತು ಸಮಾನತೆಯನ್ನು ಬಿಂಬಿಸುತ್ತದೆ. ಕಮಲದಂತೆ ಮೃದುಭಾಷಿನಿಯಾಗಿ ಶಿಷ್ಟಪಾಲನೆಯಾಗಿಯೂ, ಶಿಲೆಯಂತೆ ಕಠೋರವಾಗಿ ದುಷ್ಟರ ನಿಗ್ರಹ ಕಾರ್ಯ ಮಾಡುವ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ಭಕ್ತರ ಮನದಲ್ಲಿ ನೆಲೆಯಾಗಿದ್ದಾಳೆ.
ಪ್ರಾಕೃತಿಕವಾಗಿ ವಿಶಿಷ್ಟ  ಸ್ಥಾನ ಪಡೆದು ಶ್ರೀ ದೇವಿಯು ಪೃಕೃತಿ ಪ್ರಿಯಳಾಗಿ ಈ ಸ್ಥಳದಲ್ಲಿ ಹುಟ್ಟಿ ಬಂದಿದ್ದಾಳೆ. ಸುತ್ತಲೂ ಅರಣ್ಯ ಪ್ರದೇಶದ ಮಧ್ಯದಲ್ಲಿ ಕುಬ್ಜಾನದಿ ಮತ್ತು ನಾಗತೀರ್ಥಗಳ ಸಂಗಮದಲ್ಲಿ ಪಾತಾಳದಲ್ಲಿ ಲಿಂಗರೂಪಿಯಾಗಿ ಹುಟ್ಟಿದ್ದಾಳೆ. ತಾಯಿ ಹುಟ್ಟಿದ್ದು ನೀರಿನಲ್ಲಿ,, ರೂಪ ಕಲ್ಲು, ಆಭರಣ ಮಣ್ಣು(ಮೃತ್ತಿಕೆ) ಅದ್ಭುತ ಶಕ್ತಿವಂತೆಯಾಗೆ ಲೋಕಮಾನ್ಯಳಾಗಿದ್ದಾಳೆ.
ಕಮಲಶಿಲೆಯ ವಿಶೇಷತೆ:
೧೫ ದಿನಗಳಿಗೊಮ್ಮೆ ಏಕಾದಶಿಯ ರಾತ್ರಿ ಹದಗೊಳಿಸಿದ ಕೆಂಪುಮಣ್ಣನ್ನು ಲಿಂಗಕ್ಕೆ ಲೇಪಿಸಲಾಗುತ್ತದೆ. ಇದೇ ಮೃತ್ತಿಕಾಷ್ಟಬಂದ. ಬೇರಾವುದೇ ರೀತಿಯ ಅಷ್ಟಬಂದ ಇರುವುದಿಲ್ಲ. ಏಕಾದಶಿಯಂದು ಆ ಮಣ್ಣನ್ನು ತೆಗೆದು ಚಿಕ್ಕ ಉಂಡೆಯಾಗಿ ಮಾಡಿ ಮೃತ್ತಿಕಾ ಪ್ರಸಾದ(ಮೂಲ) ವಾಗಿ ಕೊಡಲಾಗುತ್ತದೆ. ೧೫ ದಿನಗಳಿಂದ ಅಭಿಷೇಕ, ಅರ್ಚನೆ, ಪೂಜಾದಿಗಳು ನಡೆದು ನೀಡುವ ಈ ಪ್ರಸಾದವನ್ನು ತಮ್ಮ ಮನೆಗಳಲ್ಲಿ ತೀರ್ಥವಾಗಿ, ಗಂಧವಾಗಿ(ನೀರಿನಲ್ಲಿ ಕರಗಿಸಿ) ಉಪಯೋಗಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.
ಬ್ರಾಹ್ಮೀ ಶಕ್ತಿಯ ಸಂಕೇತ, ಭಕ್ತಿಯ ಉಗಮ ಪರಮೇಶ್ವರನ ಮಡದಿ ಆದಿಶಕ್ತಿ ಪರಮೇಶ್ವರೀಯಾಗಿ ಜಗತ್ತಿಗೆ ಬಂದ ದುರ್ಗೆ, ಕಷ್ಟಗಳನ್ನು ಪರಿಹರಿಸಿ ದುರ್ಗೆಯಾಗಿ, ಕ್ರೂರಾಕ್ಷನನ್ನು ವಧಿಸಿದ ಬ್ರಾಹ್ಮೀಣಿಯು ಇದೇ ಲಿಂಗದಲ್ಲಿ ಐಕ್ಯವಾಗಿ ಬ್ರಾಹ್ಮಿಯಾಗಿ, ಹೀಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀಯಾಗಿ ಕಮಲಶಿಲೆಯಲ್ಲಿ ನೆಲೆನಿಂತು, ಮುಂದೆ ಇದುವೇ ಜಗತ್ತಿನ ಏಕೈಕ ಬ್ರಾಹ್ಮೀ ಕ್ಷೇತ್ರವಾಗಿ ಮೂಡಿಬಂದಿದೆ.
ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ಕಮಲಶಿಲೆಯ ಮಹಿಮೆ ವರ್ಣಿಸಲಾಗಿದೆ. ಕುಬ್ಜಾ ತೀರದಲ್ಲಿ ಈಗ ದೇವಾಲಯವಿರುವ ಸ್ಥಳವು ಮಹಾ ತಪಸ್ವಿಗಳಾದ ರೈಕ್ವಮುನಿಗಳ ಆಶ್ರಮವಾಗಿತ್ತು. ಗೌರಿ ಶಕ್ತಿಯಿಂದ ಕೂಡಿದ ಬ್ರಾಹ್ಮೀಯು ಖರಾಸುರ, ರಟ್ಟಾಸುರರನ್ನು ವಧಿಸಿ ಕಮಲಶಿಲೆಗೆ ಬಂದ ರೈಕ್ವ ಮಹಾಮುನಿಗೆ ವರಪ್ರಸಾದ ನೀಡಿ ಶಿವನಾಜ್ಞೆಯಂತೆ ಅದೇ ಲಿಂಗದಲ್ಲಿ ಐಕ್ಯಳಾಗಿ ಬ್ರಾಹ್ಮಿ ದುರ್ಗಾಪರಮೇಶ್ವರೀ ಎನ್ನುವ ಅಭಿನಾಮದೇಯದಿಂದ ಭಕ್ತರ ಭಕ್ತಿಗೆ ಫಲಪ್ರದೆಯಾಗಿದ್ದಾಳೆ.
ಪುರಾಣದಲ್ಲಿ ಕೈಲಾಸದ ಶಿವ ಸಾನಿಧ್ಯದಲ್ಲಿ ಪಿಂಗಳೆ ಎಂಬ ನರ್ತಕಿಯು ಪ್ರತಿದಿನ ನರ್ತನ ಸೇವೆ ಮಾಡುತ್ತಿದ್ದಳು, ಒಂದು ದಿನ ಸಂಜೆ ಶಿವ-ಪಾರ್ವತಿಯರ ಸಮ್ಮುಖದಲ್ಲಿ ತನ್ನ ರೂಪ, ಮದದಿಂದ ಗರ್ಭಿತಳಾಗಿ ನರ್ತನ ಮಾಡುವುದಿಲ್ಲ ಎಂದಳು. ಆಗ ಕೋಪಗೊಂಡ ಪಾರ್ವತಿಯು ಆಕೆಗೆ ಅಂಕು-ಡೊಂಕಿನ ಗೂನುಬೆನ್ನಿನ ಕುಬ್ಜೆಯಾಗು ಎಂದು ಶಾಪ ನೀಡುತ್ತಾಳೆ. ಆದಿಶಕ್ತಿಯ ಶಾಪದಿಂದಾಗಿ ಪಿಂಗಳೆಯು ತತ್ ಕ್ಷಣವೆ ಕುಬ್ಜೆಯಾಗುತ್ತಾಳೆ. ತನ್ನ ತಪ್ಪಿನ ಅರಿವಾಗಿ ಆದಿಶಕ್ತಿಯಲ್ಲಿ ಪರಿ-ಪರಿಯಾಗಿ ವಿನಂತಿ ಮಾಡಿದಾಗ ಶಾಂತಳಾದ ಪಾರ್ವತಿಯು ಪಿಂಗಳಾ ನಾನು ಖರರಟ್ಟಾಸುರರ ವಧಾರ್ಥವಾಗಿ ಶ್ರಾವಣ ಕೃಷ್ಣನವಮಿ ಶುಕ್ರವಾರದಂದು ಮಹಾ ಪುಣ್ಯಕರವಾದ ರೈಕ್ವಶ್ರಾಮದಲ್ಲಿ ಪಾತಾಳದಿಂದ ಲಿಂಗರೂಪದಲ್ಲಿ ಶೋಭಿಸುತ್ತೇನೆ. ಅದು ಮುಂದೆ ದೊಡ್ಡ ಕ್ಷೇತ್ರ ಕಮಲಶಿಲೆಯಾಗಿ ಪ್ರಸಿದ್ಧಿಗೊಳ್ಳುತ್ತದೆ. ನೀನು ಆ ಸ್ಥಳಕ್ಕೆ ಹೋಗಿ ಸುಪಾರ್ಶ್ವ ಗುಹಾದ್ವಾರದಿಂದ ಹೊರಡುವ ನಾಗತೀರ್ಥದ ಬಳಿ ಆಶ್ರಯ ರಚಿಸಿಕೊಂಡು ತನ್ನ ಅನುಗ್ರಹಕ್ಕಾಗಿ ತಪಸ್ಸನ್ನು ಮಾಡುತ್ತಿರು ಎಂದು ಅಭಯವನ್ನಿಡುತ್ತಾಳೆ.
ಪಾವನ ಪುನೀತೆ ಕುಬ್ಜೆ:
ಭಕ್ತಾಧಿಗಳು ಈ ಪುಣ್ಯ ನದಿಯಲ್ಲಿ ಸ್ನಾನಮಾಡಿ ಶ್ರೀ ಬ್ರಾಹ್ಮಿದೇವಿಯನ್ನು ಆರಾಧಿಸಿ ಧನ್ಯರಾಗುತ್ತಾರೆ. ಕುಬ್ಜೆಯು ಪ್ರತಿ ಮಳೆಗಾಲದಲ್ಲಿ ಮಹಾದ್ವಾರದ ಮೂಲಕ ಒಳಪ್ರವೇಶಿಸಿ ಶ್ರೀ ದೇವಿಯ ಲಿಂಗಕ್ಕೆ ಸ್ವಯಂ ಸ್ನಾನ ಮಾಡಿಸುತ್ತಾಳೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಬಂದು ಅತ್ಯಂತ ಪುಣ್ಯಕರವಾದ ದೇವಿಗೆ ಸ್ನಾನ ಮಾಡಿಸಿದ ನೀರಿನಲ್ಲಿ ಮಿಂದು ಭಾವ ಪರವಶರಾಗುತ್ತದೆ.
ಗರುಡನ ಭಯದಿಂದ ಆದಿಶೇಷನು ಕಮಲಶಿಲೆಗೆ ಬಂದು ಸುಪಾರ್ಶ್ವ ಗುಹೆಯಲ್ಲಿ ಬ್ರಾಹ್ಮೀಯನ್ನು ಕುರಿತು ಕಠಿಣ ತಪಸ್ಸನ್ನು ಮಾಡುತ್ತಾನೆ. ತಪಕ್ಕೊಲಿದ ದೇವಿಯು ನೀನು ವಿಷ್ಣುವಿಗೆ ಹಾಸಿಗೆಯಾಗು ಉಳಿದ ಸರ್ಪಗಳು ನನ್ನ ಆಶ್ರಮದ ಗುಹೆಯಲ್ಲಿರಲಿ. ಗರುಡನಿಂದ ಭಯವಿಲ್ಲ ಎಂದು ಅಪ್ಪಣೆ ನೀಡುತ್ತಾಳೆ. ನಾಗರಾಜನ ತಪಸ್ಸಿನ ಫಲದಿಂದ ಹೊರಟ ತೀರ್ಥವು ನಾಗತೀರ್ಥವಾಗಿದ್ದು, ಅದರಲ್ಲಿ ಮಿಂದವರಿಗೆ ಸರ್ಪಬಾದೆ ನಿವಾರಣೆಯಾಗುತ್ತದೆ ಎನ್ನುವ ಪ್ರತೀತಿಯಿದೆ. ಇದಕ್ಕೆ ಸಾಕ್ಷಿಯಾಗಿ ದೇವಾಲಯದಲ್ಲಿ ಬೃಹತ್ ಹುತ್ತ ವೀಕ್ಷಿಸಬಹುದಾಗಿದೆ.
ಸುಪಾರ್ಶ್ವ ಗುಹೆ:
ಶ್ರೀ ದೇವಿಯ ವಾಹನ ವ್ಯಾಘ್ರ ಇಲ್ಲಿ ತಪ್ಪು-ಒಪ್ಪುಗಳಾದಲ್ಲಿ ತಾನೂ ತಾಯಿಯ ಆಜ್ಞಾಪಾಲಕನಂತೆ ಇಲ್ಲಿನ ಜನರಲ್ಲಿ ಅರಿವನ್ನು ಮೂಡಿಸುತ್ತದೆ ಎನ್ನುವುದನ್ನು ಇಲ್ಲಿನ ಜನರಿಂದ ತಿಳಿದು ಬರುತ್ತದೆ. ಹಿಂದೆ ಈ ಹುಲಿಯೆ ಮನೆ-ಮನೆಯ ಮುಂದೆ ಬಂದು ಕೂಗುವ ಮೂಲಕ ಶ್ರೀ ದೇವಿಯ ಉತ್ಸವ ಹಾಗೂ ಇನ್ನಿತರ ಕಾರ್ಯಗಳಿಗೆ ಆಮಂತ್ರಣ ನೀಡುತ್ತಿತ್ತು. ಸುಪಾರ್ಶ್ವ ಗುಹೆಯಲ್ಲಿ ಶ್ರೀ ದೇವಿಯ ಕಾಳಿ, ಲಕ್ಷ್ಮೀ ಮತ್ತು ಸರಸ್ವತಿಯರ ಲಿಂಗಗಳಿವೆ. ದೇವಿಯ ವಾಹನವಾದ ಹುಲಿಯು ಇಲ್ಲಿಯೇ ವಾಸವಾಗಿದೆ. ಈ ಗುಹೆಯು ಶ್ರೀ ಕ್ಷೇತ್ರದಿಂದ ೨ ಕಿ.ಮೀ ದೂರದ ಹಳ್ಳಿಹೊಳೆ ಮಾರ್ಗದಲ್ಲಿ ದುರ್ಗಮ ಅರಣ್ಯದ ಮಧ್ಯದಲ್ಲಿ ತಪಸ್ಸಿಗೆ, ಧ್ಯಾನಕ್ಕೆ ಯೋಗ್ಯವಾದ ಪ್ರಶಾಂತ ಸ್ಥಳದಲ್ಲಿ ಕಂಡು ಬರುತ್ತದೆ. ದೇವತೆಗಳಿಂದ ನಿರ್ಮಿಸಲ್ವಟ್ಟ ಗುಹೆಯನ್ನು ಹಿಂದೆ ಕೃತಯುಗದಲ್ಲಿ ಸುಪಾರ್ಶ್ವನೆಂಬ ರಾಜನು ರಾಜಕೀಯದಲ್ಲಿ ಜಿಗುಪ್ಸೆ ಹೊಂದಿ ತಪಸ್ಸಿಗೆ ಯೋಗ್ಯ ಸ್ಥಳ ಹುಡುಕುತ್ತಾ ಹೋಗಲು ಶಿವನ ಪ್ರೇರಣೆಯಂತೆ ಇಲ್ಲಿಗೆ ಬಂದು ಈ ಗುಹೆಯಲ್ಲಿ ತಪಸ್ಸಾಸಕ್ತನಾದ. ಆತನ ತಪಕ್ಕೆ ವಿಘ್ನ ಬಾರದಂತೆ ಶಿವನು ಭೈರವನಿಗೆ ಗುಹೆಯ ದ್ವಾರದಲ್ಲಿ ನಿಲ್ಲುವಂತೆ ಸೂಚಿಸುತ್ತಾನೆ. ಹೀಗೆ ರಾಜನು ಅಲ್ಲಿ ತಪಗೈದು ಮೋಕ್ಷ ಹೊಂದುತ್ತಾನೆ. ಮುಂದೆ ಆ ಗುಹೆಗೆ ಅವನ ಹೆಸರು ಅನ್ವರ್ಥವಾಗುತ್ತದೆ. ಗುಹೆಯ ದ್ವಾರದಲ್ಲಿ ಭೈರವನ ಮೂರ್ತಿಯನ್ನು ಈಗಲೂ ಕಾಣಬಹುದಾಗಿದೆ. ಮೆಟ್ಟಿಲಿಳಿದ ಕೂಡಲೆ ಅಕ್ಕ-ತಂಗಿಯರ ಜೋಡು ಕೆರೆ ಮತ್ತು ಮುಂದೆ ನಾಗಾಲಯ ಹಾಗೂ ನಾಗತೀರ್ಥ ಗೋಚರಿಸುತ್ತದೆ. ಈ ಕ್ಷೇತ್ರದಲ್ಲಿ ಜಾನುವಾರುಗಳಿಗೆ ರೋಗ-ರುಜಿನ ಬಂದಾಗ, ಬಂಜೆಯಾದಾಗ, ಇತರ ಕೌಟುಂಬಿಕ ತಾಪತ್ರಯಗಳಿಗೆ ಹರಕೆ ರೂಪದಲ್ಲಿ ಗೋವುಗಳನ್ನು ಶ್ರೀ ದೇವಿಗೆ ಬಿಡುತ್ತಾರೆ. ಇಂತಹ ಲಕ್ಷಾಂತರ ಗೋವುಗಳು ಭಕ್ತರ ಮನೆಯಲ್ಲಿದ್ದು ಹಾಲು, ತುಪ್ಪವನ್ನು ದೇವಿಗೆ ತಂದೊಪ್ಪಿಸುತ್ತಿರುವುದು ಶ್ರೀಕ್ಷೇತ್ರದ ವಿಶೇಷತೆಯಾಗಿದೆ. ಅದೇ ರೀತಿ ಶ್ರೀಕ್ಷೇತ್ರದಿಂದ ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರೀ ದಶವತಾರ ಯಕ್ಷಗಾನ ಮಂಡಳಿ ಕೂಡಾ ಇದ್ದು ತನ್ನ ಭಕ್ತರಿಂದ ಬೆಳಕಿನ ಸೇವೆಯನ್ನು ಪಡೆಯುತ್ತಿದ್ದಾಳೆ.
ಶ್ರೀ ವೇವಿಯ ಪರಿವಾರ ದೇವರಾಗಿ ಶ್ರೀ ವೀರಭದ್ರ, ಮಹಾಗಣಪತಿ, ಸುಬ್ರಹ್ಮಣ್ಯ, ಶಿವ, ವಿಷ್ಣು, ಆಂಜನೇಯ, ನವಗ್ರಹಗಳು ಇವೆ. ಹಿಂದೆ ವೀರಭದ್ರನ ತೀಕ್ಷ್ಣ ದೃಷ್ಟಿಯಿಂದ ವಾಯುವ್ಯ ಭಾಗದ ಮರದ ಬಾಗಿಲು ಉರಿದು ಹೋಗಿದ್ದು, ಆ ಕಾರಣದಿಂದ ಅಲ್ಲಿ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಯುತ್ತಿದೆ. ಶ್ರೀ ಕ್ಷೇತ್ರದಲ್ಲಿ ವಿಜಯಾಗಮ ಪದ್ದತಿಯಂತೆ ಪೂಜೆ-ಬಲಿಗಳು ನಡೆಯುತ್ತದೆ. ಪ್ರತಿ ದಿನ ಉಷಾಕಾಲ, ಪ್ರಾತಃಕಾಲ, ಮದ್ಯಾಹ್ನ, ಸಂಧ್ಯಾಕಾಲ, ರಾತ್ರಿ ಹೀಗೆ ಐದು ಪೂಜೆಗಳು ತ್ರಿಕಾಲ ಬಲಿಗಳು ನಡೆಯುತ್ತದೆ. ಬ್ರಾಹ್ಮೀ ಶಕ್ತಿ ಸ್ವರೂಪಿಣಿಯಾದ ತ್ರೀಮೂರ್ತಿಸ್ವರೂಪಿಣಿ ಶಕ್ತಿಯೂ ಆದ ದೇವಿಯನ್ನು ಕಂಡು ಪ್ರತಿಯೊರ್ವರೂ ಕೃತಾರ್ಥರಾಗಬೇಕು.
ದಾರಿಯ ವಿವರ : ಕುಂದಾಪುರದಿಂದ ೩೫ಕಿ.ಮೀ ದೂರದಲ್ಲಿರುವ ಶ್ರೀ ಕ್ಷೇತ್ರ ಕಮಲಶಿಲೆ ದೇವಾಲಯವಿದೆ. ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಸಿದ್ದಾಪುರದಿಂದ ೬ ಕಿ.ಮೀ ದೂರದಲ್ಲಿ ಅಮ್ಮನವರ ಸಾನ್ನಿಧ್ಯವಿದೆ.



No comments:

Post a Comment