Wednesday, 5 September 2012


ಬೇದಭಾವ ತಾಂಡವವಾಡುತ್ತಿದ್ದ ಸಮಾಜದಲ್ಲಿ ಸಮಾನತೆಯ ತತ್ವ ಸಾರಿದ ಬ್ರಹ್ಮಶ್ರೀ ನಾರಾಯಣ ಗುರು
ಬ್ರಿಟಿಷರ್ ಆಳ್ವಿಕೆಯಲ್ಲಿ ಬೇಸತ್ತ ಜನರು ಬದುಕುವುದು ಕಷ್ಟಕರವಾಗಿದ್ದರೂ ದೇಶಿಯ ಜನರಲ್ಲಿ ಸಾಮಾನ್ಯವಾಗಿ ಕಂಡು ಬಂದ ಮೇಲು-ಕೀಳು ಎನ್ನುವ ತಾರತಮ್ಯದಿಂದ ಮಾನಸಿಕ ಆಘಾತವಾಗಿ ಸುಧಾರಿಸುವುದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿನ ಅಸಮಾನತೆ  ಹೋಗಲಾಡಿಸಲು ಆಗಸ್ಟ್ ೨೦, ೧೮೫೫ರಲ್ಲಿ  ಕೇರಳದ ತಿರುವನಂತಪುರದ ಅತ್ಯಂತ ಹಿಂದುಳಿದ ವರ್ಗದಲ್ಲಿ ಜನಿಸಿದ ನಾರಾಯಣ ಗುರುಗಳು ಕ್ರಾಂತಿಯನ್ನೆ ಮಾಡಿದರು. ಹಿಂದುಳಿದ ವರ್ಗದಲ್ಲಿ ಜನಿಸಿದ ಇವರಿಗೆ ಸಮಾಜದಲ್ಲಿ ಮೇಲ್ವರ್ಗದವರಿಂದ ಆದ ಅವಮಾನಕ್ಕೆ ತಮಗೂ ಕೂಡ ಸಮಾಜದಲ್ಲಿ ಬದುಕುವ ಹಕ್ಕಿದೆ. ಅದನ್ನು ಅವರು ಕಸಿದುಕೊಳ್ಳುತ್ತಿದ್ದಾರೆ ಎನ್ನುವ ವಿಷಯ ಮನಗಂಡು ನಡೆಸಿದ ಕ್ರಾಂತಿಯಿಂದ ಸಮಾಜದಲ್ಲಿ ಗುರುತಿಸಿಕೊಂಡು ದೀನರಿಗೆ ಸಿಗಬೇಕಾದ ಮಾನ್ಯತೆ ದೊರಕಿಸಿಕೊಟ್ಟಿದ್ದಾರೆ.
ತನ್ನ ಜೀವನದುದ್ದಕ್ಕೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸದಾ ಪ್ರಾತಃಸ್ಮರಣೀಯರು. ಮನುಕುಲದ ಉದ್ಧಾರಕ್ಕಾಗಿ ಅವಿರತ ಶ್ರಮಿಸಿದ ಅವರ ಆದರ್ಶ ಸದಾ ಪ್ರಸ್ತುತವಾಗಿದೆ. ವರ್ಗ ಸಂಘರ್ಷ ಅತಿಯಾಗಿದ್ದ ಕಾಲದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸಿದ ನಾರಾಯಣ ಗುರುಗಳು ಸಮಾನತೆಗಾಗಿ ಧ್ವನಿ ಎತ್ತಿದವರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಕೂಡ ದೇವರನ್ನು ಪೂಜಿಸಬಹುದು. ಪ್ರತಿಯೊಬ್ಬರ ಹೃದಯ ಮಂದಿರದಲ್ಲಿ ದೇವರಿದ್ದಾನೆ ಎನ್ನುವ ಅಂಶ ಜನತೆಗೆ ಸಾರಿ ಹೇಳಿದ ಮಹಾನ್ ಗುರುಗಳಾಗಿದ್ದರು. ಸಾಮಾಜಿಕ ಸಮಾನತೆ, ಶಿಕ್ಷಣದ ಮೂಲಕ ಸಮಾಜ ಪರಿವರ್ತನೆಯಲ್ಲಿ ತನ್ನ ಜೀವನವನ್ನು ಅರ್ಪಿಸಿಕೊಂಡಿದ್ದರು.
ದೇಶದಲ್ಲಿ ೧೫೦೦ ವರ್ಷಗಳಿಂದಲೂ ಸಾಮಾಜಿಕ ಸಮಾನತೆಗಾಗಿ ಹೋರಾಟ ನಡೆಯುತ್ತಿದ್ದು ಅದು ಈಗಲೂ ಮುಂದುವರಿದಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆಗಾಗಿ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮವೇ ಇಂದು ಸಮಾಜದಲ್ಲಿ ಹಲವು ಬದಲಾವಣೆಗಳಾಗಿವೆ.
ಪ್ರತಿಯೊಬ್ಬರ ಜೀವನ ಸಾಗರದಲ್ಲಿ ಸಂಘಟನೆ ಅತ್ಯಗತ್ಯ. ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ತೊಲಗಿಸಲು ಉತ್ತಮ ಸಂಘಟನೆ ಕ್ರಾಂತಿಕಾರಿ ಶಕ್ತಿಯಾಗಲಿದೆ. ಸಮಾಜದಲ್ಲಿನ ಅಸಮಾನತೆ ಹೊಡೆದೊಡಿಸಿ ಹಿಂದುಳಿದ ವರ್ಗಕ್ಕೂ ಮಾನವೀಯ ನೆಲೆಯಲ್ಲಿ ಉತ್ತಮ ಸ್ಥಾನಮಾನ ಕಲ್ಪಿಸಿದ್ದಾರೆ. ಜಾತಿ, ಗಡಿ, ಭಾಷೆ, ಸಾಂವಿಧಾನಿಕ ವಿಷಯಗಳು ಪ್ರಸ್ತಾಪವಾದಾಗ ನಾರಾಯಣ ಗುರುಗಳ ಸಂದೇಶ ಮನುಕುಲಕ್ಕೆ ಅವಶ್ಯಕವಾಗಿದೆ. ಪ್ರತಿಯೊರ್ವರಲ್ಲೂ ಪ್ರೀತಿ, ವಿಶ್ವಾಸದಿಂದ ವ್ಯವಹರಿಸಿದಾಗ ಸಮಾಜದಲ್ಲಿ ನಿರ್ಮಾಣವಾಗುವ ಗೊಂದಲಗಳಿಗೆ ಸೂಕ್ತ ಪರಿಹಾರ ಸಿಗುತ್ತದೆ. ಶಿಕ್ಷಣದ ಮೂಲಕ ಜಾಗೃತಿ ಹೊಂದಿ, ಸಮಾನತೆಯ ತತ್ವವನ್ನು ಪ್ರತಿಯೊರ್ವರ ಮನದಲ್ಲಿ ಮೂಡಿಸಿದಾಗ ಗುರುಗಳು ಸಾರಿದ ತತ್ವ ಪ್ರಸ್ತುತ ಸಮಾಜದಲ್ಲಿ ಮಹತ್ವ ಪಡೆಯುತ್ತದೆ.
ಸಾಮಾಜಿಕ ನ್ಯಾಯ ಸಂವಿಧಾನದ ಮೂಲಕ ನಮ್ಮ ಪಾಲಿಗೆ ಒದಗಿದ್ದರೂ ಹಿಂದಿನ ಕಾಲದಲ್ಲಿ ಅದು ಭಾಷೆ, ಪ್ರಕಟನೆಯ ಮೂಲಕ ಪ್ರಕಟವಾಗದೆ ಅನೇಕರು ಕಾಲನ ಗರ್ಭದಲ್ಲಿ ಲೀನವಾಗಿರುವುದು ಕಂಡುಬರುತ್ತದೆ. ನಾರಾಯಣ ಗುರುಗಳು ಎಂಟು ವರ್ಷದ ಬಾಲಕನಾಗಿದ್ದಾಗ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಸಮಾಜದಲ್ಲಿ ಬೆರೆಯಲು ಅವಕಾಶವಿಲ್ಲದಿರುವ ಕಾಲಘಟ್ಟದಲ್ಲಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದು ಸಮಾನತೆಯಿಂದ ಬದುಕಲು ಪ್ರಯತ್ನಿಸಿದ್ದರು. ಮೇಲು-ಕೀಳು ಎನ್ನುವ ವರ್ಗ ಸಂಘರ್ಷದಲ್ಲಿ ಕೆಳವರ್ಗದ ಜನತೆಯ ನೆರಳು ಕೂಡ ಸುಳಿಯಬಾರದು ಎನ್ನುವ ಮೇಲ್ವರ್ಗದ ದರ್ಪಕ್ಕೆ ಅದು ಮಾನವ ಸೃಷ್ಟಿಸಿದ ಅಂಶ ಎನ್ನುವುದನ್ನು ಪ್ರತಿಯೊರ್ವರ ಮನಸ್ಸಿನಲ್ಲಿ ನಾಟುವಂತೆ ಮಾಡಿದ ಕೀರ್ತಿ ಗುರುಗಳಾದಾಗಿದೆ.
ಗಾಂಧೀಜಿಯವರು ನಾರಾಯಣ ಗುರುಗಳ ಆಶ್ರಮ ದರ್ಶನ ಮಾಡಿದ ನಂತರದಲ್ಲಿ ಅವರು ಆಧುನಿಕ ಬ್ರಹ್ಮ ಎಂದು ಉಲ್ಲೇಖ ಮಾಡಿದ್ದರು. ಗುರುಗಳು ಸೃಷ್ಟಿಸಿದ ಜೀವಿಗಳಲ್ಲಿ ಸಮಾನತೆಯ ಸಂದೇಶ ಬಿತ್ತಿ ಜನರಲ್ಲಿ ಬಾಂಧವ್ಯ ಬೆಸೆಯಲು ಸಹಾಯಕವಾಗುವ ಅಂಶಗಳನ್ನು ಬಿತ್ತರಿಸಿದ್ದಾರೆ. ಫಲವತ್ತಾದ ಭೂಮಿಯಲ್ಲಿ ಬಿತ್ತುವ ಬೀಜದ ಮೇಲೆ ಅದರ ಫಲವನ್ನು ನಾವು ನಿರೀಕ್ಷೆ ಮಾಡಬಹುದು. ಅಂತೆಯೇ ನಿಷ್ಕಲ್ಮಶ ಮನದಲ್ಲಿ ಯಾವ ಅಂಶವನ್ನು ಬಿತ್ತರಿಸುತ್ತೇವೆಯೋ ಅದು ಶಾಶ್ವತವಾಗಿರುವುದರೊಂದಿಗೆ ಬೆಳೆಯುತ್ತಿರುವ ಮೊಗ್ಗುಗಳಿಗೆ ಆದರ್ಶವಾಗುತ್ತದೆ. ಉತ್ತಮ ಅಂಶಗಳನ್ನು ಬಿತ್ತರಿಸಲು ಗುರುಗಳಲ್ಲಿರುವ ಅಚಲ ನಿರ್ಧಾರ, ಬದ್ದತೆಯ ಮೂಲಗುಣ ಇಂದು ಮನುಕುಲ ಮೆಲುಕು ಹಾಕುತ್ತಿದೆ. ನಾರಾಯಣ ಗುರುಗಳಲ್ಲಿ ತುಂಟ ಹುಡುಗನೊರ್ವ ದೇವರೆಲ್ಲಿದ್ದಾನೆ ಎಂದು ಪ್ರಶ್ನಿಸಿದಾಗ ನಿನ್ನಲ್ಲಿಯೂ ದೇವರಿದ್ದಾನೆ. ಹಾಗಾದರೆ ಅವನನ್ನು ತೋರಿಸಿಕೊಡಿ ಎಂದಾಗ ನಾಳೆ ನಿನಗೆ ದೇವರ ದರ್ಶನ ಮಾಡಿಸುತ್ತೇನೆ ಎನ್ನುವ ಗುರುಗಳ ಮಾತುಗಳನ್ನು ಕೇಳಿದ ಹುಡುಗನಿಗೆ ರಾತ್ರಿಯೆಲ್ಲಾ ನಿದ್ರೆಯೇ ಹತ್ತದೆ ಬೆಳಗಾದ ಕೂಡಲೇ ದೇವರನ್ನು ಕಾಣಲು ಗುರುಗಳಲ್ಲಿಗೆ ಓಡಿ ಬರುತ್ತಾನೆ. ಬಂದ ಹುಡುಗನಿಗೆ ಒಂದು ರೂಮ್‌ನ್ನು ತೋರಿಸಿ ಅಲ್ಲಿ ಹೋಗಿ ನೋಡು ದೇವರ ದರ್ಶನವಾಗುತ್ತದೆ ಎಂದಾಗ ಹುಡುಗ ಹೋಗಿ ನೋಡಿಕೊಂಡು ಪುನಃ ಬಂದು ದೇವರನ್ನು ನೋಡಿದ ಸಂತೋಷದಲ್ಲಿರುತ್ತಾನೆ. ಆದರೆ ನಾರಾಯಣ ಗುರುಗಳ ಆ ರೂಂನಲ್ಲಿ ದೊಡ್ಡ ಕನ್ನಡಿಯನ್ನು ಅಂಟಿಸಿದ್ದು ಅದರಲ್ಲಿ ತನ್ನ ಪ್ರತಿಬಿಂಬ ನೋಡಿದ ಹುಡುಗ ತನ್ನಲ್ಲಿಯೂ ದೇವರಿದ್ದಾನೆ ಎನ್ನುವ ಅಂಶವನ್ನು ಅರ್ಥೈಸಿಕೊಂಡಿದ್ದನು. ಈ ರೀತಿಯಾಗಿ ತುಂಟ ಹುಡುಗನಿಗೆ ದರ್ಪಣದ ಮೂಲಕ ಪ್ರತಿಯೊರ್ವರ ಹೃದಯದಲ್ಲಿಯೂ ದೇವರಿದ್ದಾನೆ ಎನ್ನುವ ಅಂಶ ಬೋಧಿಸಿದ್ದರು. ಪ್ರತಿಯೊರ್ವರು ತನ್ನ ಅಂತರಾತ್ಮವನ್ನು ಪ್ರಶ್ನಿಸಿಕೊಂಡಾಗ ಸಮಾಜದಲ್ಲಿರುವ ತಾರತಮ್ಯ ಹೋಗಲಾಡಿಸಬಹುದು. ಇದಕ್ಕೆ ಏನಂತಿರಾ....?
ಬಾಕ್ಸ್:
ಸಂಘಟನೆಯ ಮೂಲಕ ಕ್ರಾಂತಿ ಹಾಗೂ ಶಿಕ್ಷಣದ ಮೂಲಕ ಜಾಗೃತಿ ಎನ್ನುವ ಅಂಶ ಸಾರಿದ್ದರು. ಸಮಾಜದ ಕಟ್ಟಕಡೆಯ ಮನುಷ್ಯ ಮುಖ್ಯವಾಹಿನಿಗೆ ಬರಬೇಕು. ಆರ್ಥಿಕ ಶಕ್ತಿಯಿದ್ದವರು ಪ್ರತಿಭೆ ಇರುವ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಉತ್ತಮ ಶಿಕ್ಷಣವನ್ನು ನೀಡಿದಾಗ ಕ್ರಾಂತಿಕಾರಿ ಬದಲಾವಣೆ ಸಾಧ್ಯ.
ಕೋಟ ಶ್ರೀನಿವಾಸ ಪೂಜಾರಿ-ಮುಜರಾಯಿ, ಬಂದರು, ಒಳನಾಡು ಜಲಸಾರಿಗೆ ಸಚಿವ.

No comments:

Post a Comment