Wednesday, 22 August 2012
ಶಾಂತ ಸ್ವಭಾವವಿದ್ದರೂ ಕಾರ್ಯದಲ್ಲಿ ಸಮುದ್ರದಂತೆ ಬೋರ್ಗರೆತ
ಕರಾವಳಿ ಕಣ್ಮಣಿಗಳ ಸಾಧನೆ ಜನಮಾನಸದಲ್ಲಿ ಅಜರಾಮರ
ಸಂಪದೋ ಮಹತಾಮೇವ ಮಹತಾಮೇವ ಚಾಪದಃ/
ವರ್ಧತೇ ಕ್ಷಿಯತೇ ಚಂದ್ರೋ ನ ತು ತಾರಾಗಣಃ ಕ್ವಚಿತ್//
ಹಿರಿಯರಿಗೆ ಸಂಪತ್ತು, ಹಿರಿಯರಿಗೆ ವಿಪತ್ತು! ಚಂದ್ರನಿಗೆ ವೃದ್ಧಿ ಹ್ರಾಸಗಳಿವೆ ಆದರೆ ತಾರೆಗಳಿಗಿಲ್ಲ...ಈ ಮಾತು ಕರಾವಳಿಯಲ್ಲಿ ಜನ್ಮ ತಾಳಿ ನಾಡಿನ ಜನತೆಯ ಪಾಲಿಗೆ ಅಮೂಲ್ಯ ಕೊಡುಗೆ ನೀಡಿದ ಮೂವರು ಕಣ್ಮಣಿಗಳ ಕುರಿತು ಎಂದಾಗ ಯಾರವರು? ಎನ್ನುವ ಪ್ರಶ್ನೆ ಸಹಜವೇ? ಕರಾವಳಿಯ ಜನತೆಗೆ ಡಿ.ವಿ.ಸದಾನಂದ ಗೌಡರು ರಾಜ್ಯದ ಮುಖ್ಯಮಂತ್ರಿಯಾದಾಗ ಸಂತೋಷವಾಗಿತ್ತು. ಕರಾವಳಿಯ ೨ ನೇ ಮುಖ್ಯಮಂತ್ರಿಯಾಗಿ ಅದರಲ್ಲೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಾಂಸದನಾಗಿ ರಾಜ್ಯದ ಮುಖ್ಯಮಂತ್ರಿಯಾದಾಗ ಜನತೆ ಮನದಲ್ಲಿ ನಿಷ್ಠಾವಂತ ನಾಯಕ ರಾಜ್ಯದ ಮುಖ್ಯಮಂತ್ರಿಯಾದರಲ್ಲ ಎನ್ನುವ ಸಂತೋಷದ ಆಶಾಗೋಪುರ ಹೆಚ್ಚು ದಿನ ಉಳಿಯಲಿಲ್ಲ. ಬಿಜೆಪಿಯಲ್ಲಿನ ಗೊಂದಲ, ಬಣ, ಜಾತಿ ರಾಜಕೀಯಕ್ಕೆ ನಿಷ್ಠಾವಂತ ಮುಖ್ಯಮಂತ್ರಿ ರಾಜೀನಾಮೆ ನೀಡುವಂತಾಯಿತು. ಅಲ್ಲದೇ ಕರಾವಳಿ ಶಾಸಕರು ಅಧಿಕಾರದಲ್ಲಿದ್ದಾಗ ಯಾಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತು ಆಡದೆ ಸುಮ್ಮನೆ ಕುಳಿತಿದ್ದರು. ಈ ರೀತಿ ಮೊದಲಲ್ಲ. ಒಬ್ಬ ನಾಯಕರಿಗೆ ಈ ರೀತಿಯಾದ ಅವಮಾನ ಆಗಿದ್ದರೆ ಕ್ಷಮಿಸಬಹುದು. ಆದರೆ ಪಕ್ಷ ಯಾವುದಾದರೇನು ಕರಾವಳಿಯಲ್ಲಿ ಹುಟ್ಟಿ ರಾಜಕೀಯ ರಂಗ ಹಾಗೂ ಸಾಮಾಜಿಕ ರಂಗದಲ್ಲಿ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಸೇರಿದಂತೆ ಮೂವರು ವ್ಯಕ್ತಗಳಿಗೆ ಅನ್ಯಾಯವಾಗಿರುವುದಕ್ಕೆ ಪ್ರಜ್ಞಾವಂತರು ಮಾತನಾಡದೆ ಮೌನವೃತ ತಾಳಿರುವುದಕ್ಕೆ ಕಾರಣವಾದರೂ ಯಾವುದು? ಕರಾವಳಿ ಬುದ್ದಿವಂತರ ನಾಡು ಎಂದು ಕರೆಸಿಕೊಂಡು ಅನೇಕ ಬುದ್ದಿಜೀವಿಗಳು, ಸಾಹಿತಿಗಳು ಇಲ್ಲಿ ಬದುಕಿದ್ದರೂ ಸಂಬಂಧಿಸದ ವಿಷಯಗಳಿಗೆ ಮಾತೆತ್ತುವ ಅತಿ ಬುದ್ದಿವಂತರಿಗೆ ಬಹಿರಂಗವಾಗಿ ನಾನು ಕೇಳುವ ಪ್ರಶ್ನೆ ಇದು. ನಿಷ್ಠಾವಂತರಾಗಿ ಕಾರ್ಯವೆಸಗುವ ಸಂದರ್ಭದಲ್ಲಿ ಅಪಮಾನ, ಅನ್ಯಾಯವಾದಾಗ ಮಾತನಾಡದೆ ಸುಮ್ಮನೆ ಕುಳಿತುಕೊಳ್ಳಲು ಕಾರಣವೇನು? ಒಳ್ಳೆಯ ಅಂಶದ ಕುರಿತು ಮಾತನಾಡುವ ಕರಾವಳಿಯ ಜನತೆ ಈ ರೀತಿಯಾಗಿ ಸಮಾಜಕ್ಕೆ ಒಳಿತನ್ನು ಮಾಡಿದವರ ಕುರಿತು ಮಾತನಾಡದೆ ತಮ್ಮ ಕಾರ್ಯದಲ್ಲಿ ಮಗ್ನರಾಗಿರುವುದನ್ನು ಬಿಟ್ಟು ಅವರು ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯವೈಖರಿಯ ಕುರಿತು ಮಾತನಾಡಿಯಾರೆ?
ವನದಲ್ಲಿ ಅನೇಕ ಪುಷ್ಪಗಳು ಹುಟ್ಟುತ್ತವೆ. ಅವುಗಳು ಅರಳಿ ಬಾಡಿ ಉದುರಿ ಹೋಗುತ್ತವೆ. ಇವುಗಳನ್ನು ಯಾರು ಗಮನಿಸುವುದಿಲ್ಲ. ಆದರೆ ಗಜೇಂದ್ರನು ಶ್ರೀಹರಿಯ ಪೂಜೆಗೆಂದು ಅರ್ಪಿಸಿದ ತಾವರೆಯೇ ಧನ್ಯವೆಂದು ಭಾವಿಸುತ್ತದೆ. ಅನೇಕ ದೇವಾಲಯಗಳ ತವರಾದ ಕರಾವಳಿಯು, ಪಶ್ಚಿಮ ಘಟ್ಟಗಳ ತಂಪಾದ ವಾತಾವರಣ, ಮಳೆ,ಗಾಳಿ, ಬಿಸಿಲು ಸರಿಯಾಗಿ ಕಾಲದಿಂದ ಕಾಲಕ್ಕೆ ಆಗುವಂತ ಈ ಪ್ರದೇಶದಲ್ಲಿ ಜನ್ಮ ತಾಳುವುದೇ ಪವಿತ್ರವೆಂದು ಭಾವಿಸುವುದು ತಪ್ಪಲ್ಲ. ಅಂತಹ ನಾಡಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಡಿ.ವಿ.ಸದಾನಂದ ಗೌಡ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಎಂ.ವೀರಪ್ಪ ಮೊಲಿ ಅವರ ಬಗ್ಗೆ ಹೆಮ್ಮೆಯಾಗಬೇಕು. ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಕೊಳಕು ಅಂಟಿಕೊಂಡಿದ್ದರೂ ಅದನ್ನು ಹೋಗಲಾಡಿಸಲು ಪ್ರಯತ್ನಿಸಿದರಲ್ಲ ಎನ್ನುವ ಸಂತೋಷ.
ರಾಜಕೀಯ ಕ್ಷೇತ್ರದಲ್ಲಿ ಕೊಳಕು ತುಂಬಿಕೊಂಡಿದ್ದಾಗಲೂ ಅದನ್ನು ನಂಬಿ ಜನಸೇವೆಯೇ ಜನಾರ್ಧನ ಸೇವೆ ಎನ್ನುವ ತತ್ವದಿಂದ ಯಾವುದೇ ಪಕ್ಷದಲ್ಲಿದ್ದರೂ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದ ಬಿಜೆಪಿಯ ಡಿ.ವಿ.ಸದಾನಂದ ಗೌಡ ಹಾಗೂ ಕಾಂಗ್ರೆಸ್‌ನ ಎಂ.ವೀರಪ್ಪ ಮೊಲಿ ಅವರುಗಳು ಜನ ಸಾಮಾನ್ಯರಿಗೂ ಅನುಕೂಲವಾಗುವಂತ ಕಾರ್ಯ ಮಾಡಿದರಲ್ಲ ಅದು ನಿಜವಾದ ಜನಸೇವೆ. ಜನಸೇವೆ ಕೇವಲ ಆಡಂಬರವಾಗಿರದೆ ಭ್ರಷ್ಟಾಚಾರದಿಂದ ತುಂಬಿದ್ದ ರಾಜಕೀಯ ಹಾಗೂ ಸಮಾಜದಲ್ಲಿನ ಧೂಳನ್ನು ಹೊಡೆದೊಡಿಸಲು ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡು ಭ್ರಷ್ಟಾಚಾರಿಗಳ ಹೆಡೆಮುಡಿ ಕಟ್ಟಿದರಲ್ಲ ನ್ಯಾಯಮೂರ್ತಿ ಸಂತೋಷ ಹೆಗ್ಡೆ. ಈ ಮೂವರ ಕುರಿತಂತೆ ಬುದ್ಧಿವಂತರ ನಾಡಿನ ಜನ ಯಾಕಾದರೂ ತೆಪ್ಪಗೆ ಕುಳಿತಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಈ ನಾಡಿನ ಜನತೆಗೆ ಸಮಾಜ ಒಳಿತಿಗೆ ಮಾಡುವ ಯಾವ ಕಾರ್ಯ ಕೂಡ ಹಿತವಾಗಿ ಕಾಣುವುದಿಲ್ಲವೇ? ತಾವು ಮಾತ್ರ ಕ್ಷೇಮವೆಂದು ತಿಳಿದು ತಮ್ಮಷ್ಟಕ್ಕೆ ತಾವು ಇದ್ದು ಬಿಡುವದೇ ಒಳ್ಳೆಯದೆನ್ನುವ ಭಾವನೆಯೇ ಎನ್ನುವ ಗೊಂದಲದ ಎಳೆ ನನ್ನನ್ನು ಕಾಡುತ್ತಿದೆ. ಇಲ್ಲವಾದರೆ ಡಿ.ವಿ.ಸದಾನಂದ ಗೌಡ, ಎಂ.ವೀರಪ್ಪ ಮೊಲಿ, ಸಂತೋಷ ಹೆಗ್ಡೆ ಅವರಿಗೆ ಅವಮಾನವಾದ ಕುರಿತು ಕರಾವಳಿಯ ಜನತೆ ಅವರಿಗೆ ಅನ್ಯಾಯವಾದಾಗ ಮಾತನಾಡದಿರುವುದು ಬೇಸರದ ಸಂಗತಿ. ನಾಡಿನ ಜನತೆಗೆ ಒಳಿತನ್ನು ಬಯಸಿ ಕೆಲಸ ನಿರ್ವಹಿಸಿದವರಿಗೆ ಅದ ಅನ್ಯಾಯಕ್ಕೆ ಮಾತನಾಡದ ಜನತೆ ಗಡಿನಾಡಿನಲ್ಲಿ ಸೈನಿಕ ನಮ್ಮ ಪ್ರಾಣ ರಕ್ಷಣೆಗಾಗಿ ತನ್ನ ಪ್ರಾಣ ಪಣವಾಗಿಡುತ್ತಾನಲ್ಲ ಆಗ ಕಣ್ಣಿರಿಡುತ್ತಾರೆಯೇ ಎನ್ನುವ ಅನುಮಾನ ಕಾಡುತ್ತದೆ. ಅನ್ಯಾಯ, ಅವಮಾನ, ಸ್ವಾಭಿಮಾನ ಕೆದಕುವ ಸಂದರ್ಭದಲ್ಲಿ ಪ್ರತಿಭಟಿಸದ ಕರಾವಳಿಯ ಜನತೆಗೆ ಬುದ್ದಿವಂತರೆನ್ನುವ ಹಣೆಪಟ್ಟಿ ಮಾತ್ರವೋ? ಅಥವಾ ಅವರಿಗೆ ಆದ ಅನ್ಯಾಯಕ್ಕೆ ಮಾತನಾಡದೇ ಇರುವ ಬಲಹೀನತೆಯೋ?
ಅನ್ಯಾಯವಾದಾಗ ಪ್ರತಿಭಟಿಸುವ ಗುಣವಿರಬೇಕು. ಪ್ರಯೋಜನವೇ ಇಲ್ಲದ ಪಕ್ಷದ ನಡುವಿನ ಹೇಳಿಕೆಗೆ ಪ್ರತಿಭಟಿಸುವ ಜನರು ಸಜ್ಜನರಿಗೆ ಅವಮಾನವಾದರೂ ಅವರಿಗೆ ಬೆಂಬಲ ಸೂಚಿಸಿದಾಗ ಮುಂದೆ ಹೆಚ್ಚಿನ ಸೇವೆಯನ್ನು ನಾವು ಅವರಿಂದ ನಿರೀಕ್ಷಿಬಹುದಲ್ಲವೇ? ಮಹಾಭಾರತದಲ್ಲಿ ಛಲದಂಕ ಮಲ್ಲ, ಕುರುಕುಲ ಸಾಮ್ರಾಟ ಸುಯೋಧನ ಎಲ್ಲರಿಗೂ ಮಾದರಿಯಾಗಬೇಕು. ಪರೀಕ್ಷರಂಗದಲ್ಲಿ ಸೂತಪುತ್ರ ಕರ್ಣನಿಗೆ ಅವಮಾನವಾದಾಗ ಅವನಿಗೆ ಧೈರ್ಯ ತುಂಬಿ ಅಂಗರಾಜ್ಯದ ಅಧಿಕಾರಿಯನ್ನಾಗಿ ಮಾಡಿ ಆತ್ಮೀಯ ಸ್ನೇಹಿತನನ್ನಾಗಿ ಮಾಡಿಕೊಂಡನು. ಇಲ್ಲಿ ಸುಯೋಧನನ ಸ್ವಾರ್ಥವಿದ್ದರೂ ಅವನು ಅನ್ಯಾಯವಾದಾಗ ಅವರಿಗೆ ರಕ್ಷಣೆ ನೀಡುವ ಗುಣವನ್ನು ಬೆಳೆಸಿಕೊಂಡಿದ್ದಾನಲ್ಲಾ. ಇಂತಹ ಗುಣ ಸಮಾಜಕ್ಕೆ ಮತ್ತು ಕುಟುಂಬಕ್ಕೆ ಒಳಿತಾಗುವಂತಿದ್ದರೆ ಸ್ವಾರ್ಥವಿದ್ದರೂ ತಪ್ಪಿಲ್ಲ ಎನ್ನುವ ಭಾವನೆ ನನ್ನದು. ಮೇಲಿನ ಮೂವರು ವ್ಯಕ್ತಿಗಳಿಗಾದ ಅನ್ಯಾಯಕ್ಕೆ ಅಪಮಾನಕ್ಕೆ ಸಮಾಜದ ಹಿತ ಬಯಸಿ ಸ್ವಾರ್ಥ ಬಯಸಿದರೆ ತಪ್ಪೆ ಇಲ್ಲ ಅಲ್ಲವೇ? ಆ ಮೂವರು ವ್ಯಕ್ತಿಗಳ ನಿಜವಾದ ಸಾದನೆ ನಿಮ್ಮ ಮುಂದಿರಿಸಿದಾಗ ಹೇಳಿದ ಮಾತಿಗೆ ಅರ್ಥವಿರುತ್ತದೆ.
ಎಂ.ವೀರಪ್ಪ ಮೊಲಿ:
೧೯೪೦ ಜನವರಿ ೧೨ ರಂದು ಜನಿಸಿದ ಮೊಲಿ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವುದು ಕರಾವಳಿಯ ಜನತೆಗೆ ಪಾಲಿಗೆ ಹೆಮ್ಮೆ. ೨೦೦೯ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸದರಾಗಿ ಉತ್ತಮ ಮತಗಳ ಅಂತರದಿಂದ ಆಯ್ಕೆಗೊಂಡು ಕೇಂದ್ರ ಮಂತ್ರಿಗಿರಿ ಅಲಂಕರಿಸಿದ್ದಾರೆ. ತುಳುನಾಡಿನ ಪ್ರಥಮ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡವರು. ೧೯೯೨ ನವೆಂಬರ್ ೧೯ ರಿಂದ ೧೯೯೪ ಡಿಸೆಂಬರ್ ೧೧ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ವಿದ್ಯಾರ್ಥಿಗಳ ಪಾಲಿಗೆ ಅನುಕೂಲವಾಗುವಂತ ಕಾರ್ಯ ಮಾಡಿರುವುದು ಪ್ರತಿಯೊರ್ವರ ನೆನಪಿನಂಗಳದಲ್ಲಿದೆ ಎನ್ನುವ ಭಾವನೆ ನನ್ನದು. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನ ಸಭೆಗೆ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ವ್ಯಕ್ತಿ. ಪ್ರಸ್ತುತ ಆಲ್ ಇಂಡಿಯನ್ ಕಾಂಗ್ರೆಸ್‌ನ ಆಂಧ್ರಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ. ಸೋನಿಯಾ ಗಾಂಧಿಯವರಿಗೆ ಆತ್ಮೀಯ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೀರಪ್ಪ ಮೊಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಮಾರ್ಪಾಡಿ ಗ್ರಾಮದಲ್ಲಿ ದೇವಾಡಿಗ ಸಮಾಜದಲ್ಲಿ ಜನ್ಮತಾಳಿದರು. ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಸರಕಾರಿ ಕಾಲೇಜು (ವಿಶ್ವವಿದ್ಯಾನಿಲಯ ಕಾಲೇಜು)ತಮ್ಮ ಬಿ.ಎ.ಶಿಕ್ಷಣ ಮುಗಿಸಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎಲ್ ಕಾನೂನು ಪದವಿಯನ್ನು ಪಡೆದರು. ರಾಜಕೀಯ ಕ್ಷೇತ್ರದಲ್ಲಿ ಪಳಗಿದ ಇವರಿಗೆ ಹಲವಾರು ಪದವಿಗಳು ಕೈಬೀಸಿ ಕರೆದವು. ಅದರಂತೆ ಆ ಪದವಿಗೆ ಚ್ಯುತಿಬಾರದಂತೆ ಕರ್ತವ್ಯ ನಿರ್ವಹಿಸಿ ಮದ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮನೆ ಮಾತಾಗಿದ್ದಾರೆ. ಕಾನೂನು ಪದವಿ ಪಡೆದ ಇವರು ಕಾರ್ಕಳ, ಹೈಕೋರ್ಟ್ ಬೆಂಗಳೂರು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ್ದಾರೆ. ಸಾಮಾಜಿಕವಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮ ಮಾಡಿದ ಇವರು ಲೇಖನಿಯನ್ನು ಹಿಡಿದು ಶ್ರೀ ರಾಮಾಯಣ ಮಹಾನ್ವೇಷಣಂ ಎನ್ನುವ ೫ ಸಂಚಿಕೆಗಳ ೪೨,೨೯೫ ಸಾಲಿನ ಕನ್ನಡ ಕೃತಿ ರಚಿಸಿದ್ದಾರೆ. ಇದು ಇಂದಿರಾ ಗಾಂಧಿ ನ್ಯಾಶನಲ್ ಸೆಂಟರ್ ಆಫ್ ಆರ್ಟ್ಸ್ ಹಿಂದಿ ಭಾಷೆಗೆ ತರ್ಜುಮೆ ಗೊಂಡಿರುವುದು ವಿಶೇಷ.
ಬಡ ವಿದ್ಯಾರ್ಥಿಗಳಿಗೆ ಗಗನ ಕುಸುಮವಾದ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣಕ್ಕೆ ಶ್ರೀಮಂತರ ಮಕ್ಕಳೇ ಹೋಗುತ್ತಿದ್ದರು. ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಹೇಳಿದಷ್ಟು ನೀಡಿ ಪ್ರತಿಷ್ಟೆಯ ಸಂಕೇತವಾಗಿ ಈ ಕ್ಷೇತ್ರದಲ್ಲಿಯೇ ಓದಲಿ ಎನ್ನುವ ಉದ್ದೇಶದಿಂದ ಮಕ್ಕಳನ್ನು ಕಲಿಸುತ್ತಿದ್ದರು. ವೀರಪ್ಪ ಮೊಲಿ ಅದಕ್ಕೆ ಮುಕ್ತಿ ಸಿಗಬೇಕು ಎನ್ನುವ ಉದ್ದೇಶದಿಂದ ಕಾಮನ್ ಎಂಟ್ರೆನ್ಸ್ ಟೆಸ್ಟ್ (ಸಿಇಟಿ)ಯನ್ನು ಜಾರಿಗೆ ತಂದರು. ಇದರಿಂದ ಪ್ರತಿಭೆಯಿಲ್ಲದಿದ್ದರೂ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದ ಶ್ರೀಮಂತ ವರ್ಗದ ಕ್ಷೇತ್ರಕ್ಕೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಈ ಕ್ಷೇತ್ರಕ್ಕೆ ಪ್ರವೇಶ ಮುಕ್ತವಾಯಿತು. ಇದರಿಂದ ಉತ್ತಮ ಕಾರ್ಯ ಮಾಡಿದ ಶ್ಲಾಘನೆಗೆ ಒಳಗಾದರು.
ನ್ಯಾಯಮೂರ್ತಿ ಸಂತೋಷ ಹೆಗ್ಡೆ:
೧೯೪೦ ಜೂ.೧೬ರಂದು ನಿಟ್ಟೆಯಲ್ಲಿ ಜನಿಸಿದ ಇವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನಿವೃತ್ತಿಗೊಂಡ ನಂತರ ರಾಜ್ಯದ ಲೋಕಾಯುಕ್ತರಾಗಿ ಆಯ್ಕೆಯಾಗಿ ರಾಜ್ಯದಲ್ಲಿ ಯಾರು ಮಾಡದ ಸಾಹಸವನ್ನು ಮಾಡಿದ್ದಾರೆ. ಜಸ್ಟೀಸ್ ಕೆಎಸ್ ಹೆಗ್ಡೆ, ಮೀನಾಕ್ಷಿ ಹೆಗ್ಡೆ ದಂಪತಿಗಳ ಆರು ಮಕ್ಕಳಲ್ಲಿ ಒಬ್ಬರಾಗಿ ಉಡುಪಿ ಜಿಲ್ಲೆಯ ನಿಟ್ಟೆಯಲ್ಲಿ ಬಂಟ ಕುಲದಲ್ಲಿ ಜನಿಸಿದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಬೆಂಗಳೂರು ಸೈಂಟ್ ಜೋಸೆಫ್ ಹಾಗೂ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು ೧೯೬೫ರಲ್ಲಿ ಬೆಂಗಳೂರು ಸರಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದರು.
ಈ ರೀತಿಯಾಗಿ ೧೯೬೬ರಲ್ಲಿ ವಕೀಲರಾಗಿ ದಾಖಲಾಗಿ ೧೯೮೪ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. ವೃತ್ತಿರಂಗದಲ್ಲಿ ವಿವಿಧ ಹುದ್ದೆಗಳನ್ನು ಸ್ವೀಕರಿಸಿದ ಹೆಗ್ಡೆ ಆ.೩, ೨೦೦೬ ರಂದು ರಾಜ್ಯದ ಲೋಕಾಯಕ್ತರಾಗಿ ನೇಮಕಗೊಂಡರು. ಸಂತೋಷ್ ಹೆಗ್ಡೆ ಲೋಕಾಯಕ್ತರಾಗಿ ನೇಮಕಗೊಂಡಾಗ ಉಡುಪಿಯ ಜನತೆ ಸಂತೋಷದಿಂದ ಬೀಗಿತ್ತು. ಜನತೆಯ ನಂಬಿಕೆ ಹುಸಿಗೊಳಿಸದೆ ರಾಜಕೀಯ ವಲಯದಲ್ಲಿ ಸಂಚಲನವನ್ನುಂಟು ಮಾಡಿದ ಕೀರ್ತಿ ಇವರದು. ಭ್ರಷ್ಟಾಚಾರ ವಿರೋಧಿ ಚಟುವಟಿಕೆ ಹಾಗೂ ಗಾಲಿ ಕರುಣಾಕರ ರೆಡ್ಡಿ , ಸೋಮಶೇಖರ ರೆಡ್ಡಿ ಮಾಲೀಕತ್ವದ ಬಳ್ಳಾರಿ ಗಣಿಗಳಲ್ಲಿ ನಡೆಯುತ್ತಿದ್ದ ಅಕ್ರಮ ವ್ಯವಸ್ಥೆಗಳನ್ನು ಬಹಿರಂಗಗೊಳಿಸಿದ ಕೀರ್ತಿ ಇವರದಾಗಿದೆ. ಕಾನೂನುಗಳನ್ನು ತಿರುಚಿ ಬಳ್ಳಾರಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯಲ್ಲಿ ನಡೆಯುತ್ತಿದ್ದ ವ್ಯವಸ್ಥಿತ ಭ್ರಷ್ಟಾಚಾರವನ್ನು ಬಯಲಿಗೆಳೆದರು. ಅರಣ್ಯ ಭೂಮಿಯ ಭೌಗೋಳಿಕ ಆಕ್ರಮಣ, ಕಬ್ಬಿಣದ ಅದಿರು, ಸರಕಾರಿ ಗಣಿಗಾರಿಕೆ ಘಟಕಗಳ ವ್ಯವಸ್ಥಿತ ಹಸಿವಿನಿಂದ ಮಾರುಕಟ್ಟೆ ಬೆಲೆಯಂತೆ ಗಣಿಗಾರಿಕೆಯಿಂದ ಬರಬೇಕಾದ ತೆರಿಗೆ ನೀಡುವಿಕೆಯಲ್ಲಿ ವ್ಯತ್ಯಾಸವಾಗಿದ್ದವು. ಅಲ್ಲದೆ ಬೆಂಗಳೂರು ಮಹಾನಗರ ಪಾಲಿಕೆ ಕಮಿಷನರ್ ತೆಗೆಯಲು ಮುಖ್ಯಮಂತ್ರಿಯವರ ಒತ್ತಾಯ ಇತರ ಚಟುವಟಿಕೆಗಳಿಂದ ಮನಸ್ಸಿಗೆ ಬೇಸರವಾದರೂ ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡದೆ ಇರುವುದರಿಂದ ಇವರಿಗೆ ಲೋಕಾಯುಕ್ತ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗಿಲ್ಲ. ಇದರಿಂದ ಬೇಸತ್ತು ಲೋಕಾಯುಕ್ತ ಹುದ್ದೆಗೆ ಜೂ.೨೩,೨೦೧೦ರಂದು ರಾಜೀನಾಮೆ ನೀಡಿದರು.
ಬೆಂಗಳೂರಿನ ಫ್ರೀಡಮ್ ಪಾರ್ಕ್‌ನಲ್ಲಿ ಇವರು ಅಣ್ಣಾ ಹಜಾರೆ ಪ್ರಾರಂಭಮಾಡಿದ ಲೋಕಪಾಲ ಮಸೂದೆಗಾಗಿ ಬೆಂಬಲ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ಸರಕಾರದ ಭ್ರಷ್ಟ ಆಡಳಿತ ಬೆಳಕಿಗೆ ತಂದರು.
ಡಿ.ವಿ.ಸದಾನಂದ ಗೌಡ:
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದಲ್ಲಿ ೧೯೫೩ರಲ್ಲಿ ವೆಂಕಪ್ಪ ಗೌಡ ಹಾಗೂ ಕಮಲಮ್ಮ ದಂಪತಿಗಳಿಗೆ ಜನಿಸಿದರು. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಬಿಎಸ್ಸಿ ಡಿಗ್ರಿ ಪಡೆದು ನಂತರದಲ್ಲಿ ಉಡುಪಿ ವೈಕುಂಠ ಬಾಳಿಕಾ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು. ಕಾಲೇಜಿನಲ್ಲಿ ಜನರಲ್ ಸೆಕ್ರೆಟರಿಯಾಗಿ ನಾಯಕತ್ವದ ಗುಣ ಬೆಳೆಸಿಕೊಂಡು ಎಬಿವಿಪಿಯಲ್ಲಿ ೧೯೭೬ ಜಿಲ್ಲಾ ಕಾರ್ಯದರ್ಶಿಯಾಗಿ ದುಡಿದಿದ್ದರು. ಇವರು ಪುತ್ತೂರು ಹಾಗೂ ಸುಳ್ಯದಲ್ಲಿ ಕಾನೂನು ಅಭ್ಯಾಸ ಮಾಡಿದ್ದರು. ಭಾರತೀಯ ಜನತಾ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸಿದ ಇವರು ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ೨೦೦೪ರಲ್ಲಿ ಲೋಕಸಭಾ ಸದಸ್ಯರಾಗಿ ವೀರಪ್ಪ ಮೊಲಿಯವರನ್ನು ಸೋಲಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇವರು ೧೫ ನೇ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ವಿಜಯಿಯಾದರು. ನಂತರದಲ್ಲಿ ಇವರಿಗೆ ಅವಕಾಶಗಳು ಕೈಬೀಸಿ ಕರೆಯುತ್ತಿತ್ತು ಎನ್ನುವುದಕ್ಕೆ ಡಿನೋಟಿಪಿಕೇಶನ್ ಹಗರಣದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಗಿ ಬಂದಾಗ ಅದೃಷ್ಟದಿಂದ ಇವರು ರಾಜ್ಯದ ೨೬ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕಿರೀಟ ಹೊತ್ತವನಿಗೆ ಕಿರುಕುಳ ತಪ್ಪಿದ್ದಲ್ಲ ಎನ್ನುವುದಕ್ಕೆ ಡಿವಿ ಅವರಿಗೆ ತಮ್ಮ ಪಕ್ಷದಿಂದಲೇ ಕಿರುಕುಳ ಪ್ರಾರಂಭವಾಯಿತು. ೨೦೧೨ ಜುಲೈ ೧೨ರಂದು ರಾಜೀನಾಮೆ ನೀಡಬೇಕಾಯಿತು. ತುಳುನಾಡಿನ ೨ ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಾಗರಿಕ ಸೇವಾ ಖಾತರಿ ಯೋಜನೆ ಸಕಾಲ ಜಾರಿಗೆ ತಂದು ಭ್ರಷ್ಟಾಚಾರ ನಿಯಂತ್ರಣಕ್ಕೆ ಹಾಗೂ ಸರಕಾರಿ ಅಧಿಕಾರಿಗಳಿಗೆ ಅಂಕುಶ ಪ್ರಾಯರಾದರು. ಬಡ ಜನತೆಗೆ ಸರಕಾರಿ ಕಚೇರಿಗಳಲ್ಲಿ ಆಗುವ ಕೆಲಸದ ವಿಳಂಭಕ್ಕೆ ಸೂಕ್ತ ಪರಿಹಾರ ಕಾಣಲು ಸಕಾಲದಿಂದಾಯಿತು.
ಕರಾವಳಿ ಭಾಗದಿಂದ ಹೋಗಿದ್ದ ವೀರಪ್ಪ ಮೊಲಿ, ಸಂತೋಷ ಹೆಗ್ಡೆ, ಡಿ.ವಿ.ಸದಾನಂದ ಗೌಡರು ಜನತೆಯ ಪಾಲಿಗೆ ಒಳಿತನ್ನೆ ಮಾಡಿದ್ದಾರೆ. ಜನತೆಯ ಮನದಂಗಳದಲ್ಲಿ ಪ್ರತ್ಯೇಕವಾದ ಸ್ಥಾನ ಪಡೆದಿರುವುದಂತೂ ಸತ್ಯ. ಸಹನೆಯುಳ್ಳ ತೇಜಸ್ವಿಗಳಲ್ಲಿ ತುಂಬ ಕಠಿಣತೆಯನ್ನು ತೋರಬಾರದು. ಚಂದನವನ್ನು ತುಂಬ ಉಜ್ಜಿದರೆ ಅದರಿಂದಲೂ ಬೆಂಕಿ ಏಳುತ್ತದೆ ಎನ್ನುವ ಸತ್ಯವನ್ನು ಅರಿತುಕೊಳ್ಳಬೇಕು.
ಮೂವರಲ್ಲೂ ಪ್ರತಿಭೆಯಿದ್ದು ಬುದ್ದಿವಂತಿಕೆಯಿಂದ ಕಾರ್ಯ ಮಾಡಿದ್ದರು. ಆದರೆ ಇಂದು ಅವರನ್ನು ನೆನಪಿಸಿಕೊಳ್ಳುವವರಿಲ್ಲವೇ? ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಭೆಯಿದ್ದು ಅವಕಾಶ ವಂಚಿತರಾಗುವ ಸಮಸ್ಯೆಯನ್ನು ನಿವಾರಿಸಿ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣಕ್ಕೆ ಅವಕಾಶ ಮಾಡಿದ್ದಾರೆ. ಭ್ರಷ್ಟಾಚಾರಿಗಳನ್ನು ಹಿಡಿದು ಸಮಾಜದಲ್ಲಿ ನಿರುಮ್ಮಳತೆಯಿಂದ ಸ್ವಲ್ಪ ಮಟ್ಟಿಗೆ ಅನುಕೂಲ ಮಾಡಿಕೊಟ್ಟಿದ್ದು ಸರಕಾರಿ ಕಚೇರಿಗಳಲ್ಲಿ ಆಮೆ ವೇಗ ಕಾಣುತ್ತಿದ್ದ ಕಡತಗಳು ಶೀಘ್ರಗತಿಯಲ್ಲಿ ವಿಲೇವಾರಿ ಕಾಣುವ ಭಾಗ್ಯ ಕನ್ನಡ ನಾಡಿನ ಜನತೆಗೆ ಒದಗಿಸಿದರಲ್ಲ...ಇವರು ತುಳುನಾಡಿನ ಹೆಮ್ಮೆಯ ಪ್ರತೀಕಗಳಲ್ಲವೇ ಇದಕ್ಕಿಂತ ಹೆಮ್ಮೆ ಬೇರೊಂದಿದೆಯೇ?ಸಮಾಜದಲ್ಲಿ ಉತ್ತಮ ಕೆಲಸ ಮಾಡಿದಾಗ ತೆಗಳದೆ ಅವರನ್ನು ಹೊಗಳಿದರೆ ಅವರು ಮಾಡಿದ ಕೆಲಸಕ್ಕೆ ಸಾರ್ಥಕತೆ ದೊರೆಯುತ್ತದೆ ಅಲ್ಲವೇ? ಉತ್ತಮರು ಹೊಗಳಿಕೆ ಬಯಸುವುದಿಲ್ಲ ಆದರೂ ಬುದ್ದಿವಂತ ನಾಡಿನ ಜನರೆಂದು ಕರೆಯಿಸಿಕೊಳ್ಳುವ ನಾವು ಅಷ್ಟು ಮಾಡದಿದ್ದರೆ ಮಾನವನಾಗಿ ಹುಟ್ಟಿ ಪ್ರಯೋಜನವಾದರೂ ಏನು ಅಲ್ಲವೇ? ಒಮ್ಮೆ ಮೂವರ ನೆನಪು ಮಾಡೋಣ.
Subscribe to:
Post Comments (Atom)
No comments:
Post a Comment